Thursday, July 30, 2009

ಬದುಕು

ಒಂದು ಹಾವಿನ ಸ್ನೇಹ ಮಾಡಿದೆ,
ಸಮಯವಲ್ಲದ ಸಮಯದಲ್ಲಿ ನನಗದು ಕಚ್ಚಿತು
ಈಗ ಮತ್ತೆ ಮನೆಯ ಸುತ್ತಮುತ್ತ ಹರಿದಾಡುತ್ತಿದೆ.

ಒಂದು ಬೆಕ್ಕಿನ ಸ್ನೇಹ ಮಾಡಿದೆ,
ಬೇಸರ ಬಂದಾಗ ಎದ್ದು ಹೋಯಿತು
ಈಗ ಮತ್ತೆ ಮನೆಯ ಕಿಟಕಿಯಲ್ಲಿ ಕುಳಿತು ಮಿಯಾವ್ ಅನ್ನುತ್ತಿದೆ.

ಒಂದು ಹಸುವಿನ ಸ್ನೇಹ ಮಾಡಿದೆ
ಒಮ್ಮೆ ಪ್ರೀತಿಯಿಂದ ತಡವಿದಾಗ ತಿವಿಯಿತು
ಈಗ ಮತ್ತೆ ಮನೆ ಮುಂದೆ ಬಂದು ಅಂಬಾ ಎನ್ನುತ್ತಿದೆ

ಒಂದು ಗೋಸುಂಬೆಯ ಸ್ನೇಹ ಮಾಡಿದೆ
ಒಂದು ದಿನ, ಮಾತಾಡುತ್ತಿದ್ದಂತೆ ಬಣ್ಣ ಬದಲಿಸಿತು
ಈಗ ಮತ್ತೆ ಮನೆಯೆದುರಿನ ಮರದಲ್ಲಿ ಅದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ

ನಾನೂ ಮತ್ತೆ ಮಾತಾಡುತ್ತಿದ್ದೇನೆ, ಪ್ರೀತಿ ತೋರುತ್ತಿದ್ದೇನೆ
ಸ್ನೇಹ ಹಸ್ತ ತೆರೆದೇ ಇದ್ದೇನೆ, ಬದುಕುದ್ದಕ್ಕೂ ಹೀಗೇ ಇರುತ್ತೇನೆ,
ಯಾಕೆಂದರೆ ದ್ವೇಷ ನಿಮಿಷ, ಪ್ರೀತಿ ಹರುಷ, ಸ್ನೇಹ ವರುಷ