Friday, October 24, 2014

ಮಕ್ಕಳು











ಮಕ್ಕಳು - ಮಲ್ಲಿಗೆ

ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ
ತಮ್ಮ ಅರಿವಿಗೂ ಮೀರಿ ಮಧುರವಾಗಿರುತ್ತಾರೆ
ಊಹೆಗೂ ಮೀರಿದ ಅರಿವುಳ್ಳವರಾಗಿರುತ್ತಾರೆ

ಬಾಯಾರಿದವರಿಗೆ ಪ್ರೀತಿ ಹಂಚುವ ಝರಿಯಾಗಿರುತ್ತಾರೆ
ದಣಿದವರಿಗೆ ದಯೆ ತೋರುವ ದೈವವಾಗಿರುತ್ತಾರೆ
ಮಣಿದವರಿಗೆ ಮಮತೆ ನೀಡುವ ಕೊಡವಾಗಿರುತ್ತಾರೆ
ಕಲಿತಿರದ ಪಾಠಗಳ ಕಲಿಸುವ ಗುರುವಾಗಿರುತ್ತಾರೆ

ಆಟಪಾಟಗಳ ವಿಸ್ಮಯದಲ್ಲಿ ಮುಳುಗೇಳುತ್ತಿರುತ್ತಾರೆ,
ಮಾತು, ಮೌನಗಳ ಬಂಗಾರವಾಗಿರುತ್ತಾರೆ
ಮುಗ್ಧತೆಯಿಂದಲೇ ಕಲ್ಮಶ ತೊಳೆವ ಕೊಳವಾಗಿರುತ್ತಾರೆ
ಭಯವಿಲ್ಲದೇ ವ್ಯವಹರಿಸುವ ದನಿಯಾಗಿರುತ್ತಾರೆ

ಕೆಲವೊಮ್ಮೆ ಜವಾಬ್ದಾರಿಗೆ ಹೆಗಲಾಗುತ್ತಾರೆ
ಕತ್ತಲಲ್ಲಿ ನರಳುವವರಿಗೆ ಹಗಲಾಗುತ್ತಾರೆ
ಬಗಲಲ್ಲೇ ಇದ್ದು ಸಮಾಧಾನ ಹೇಳುತ್ತಾರೆ
ತಮ್ಮ ಮೇಲೆ ದೌರ್ಜನ್ಯ ನಡೆದರೂ ಮರೆತು ಬಿಡುತ್ತಾರೆ

ಮಕ್ಕಳೇ ಹಾಗೆ, ನೆನೆದರೆ ಮನದಲ್ಲಿ ಮಲ್ಲಿಗೆ ಹರಡುತ್ತಾರೆ
ಪರಿಮಳವು ನಮ್ಮೊಳಗೆ ಪಸರಿಸುವಂತೆ ಮಾಡುತ್ತಾರೆ

Thursday, October 23, 2014

ಬಲೆ



ಚಿತ್ರ : ಪಾರ್ಥ್ ಕಪೂರ್


ಚಿಂತೆಯಿಲ್ಲದ ಚಿಟ್ಟೆಯೊಂದು ಅತ್ತಿತ್ತ ಸುತ್ತುತ್ತ, 
ಅದನಿದನು ನೋಡುತ್ತ ಹಾರುತ್ತಲಿತ್ತು
ಗಮನಿಸಿದ ಜೇಡವೊಂದು ಸದ್ದಿಲ್ಲದೇ 
ಬಲೆ ನೇಯ್ದು ಬಳಿಯಲ್ಲೇ ಕಾಯುತ್ತಲಿತ್ತು

ಬಳುಕುತ್ತ ಬಂದ ಚಿಟ್ಟೆ ಬಲೆಯೆಂದು 
ಅರಿವಾಗುವ ಮೊದಲೇ ಸಿಕ್ಕಿಬಿತ್ತು
ಅಂಟಿನ ಬಲೆಯ ಗಂಟಿನಿಂದ 
ಬಿಡಿಸಿಕೊಳ್ಳಲು ಒದ್ದಾಡುತ್ತಲಿತ್ತು

ಗೆಲುವಿಗಡ್ಡವಾಗಿ ಜೇಡ ಮಹಾಶಯನ 
ಕಣ್ಗಾವಲು ಬಲವಾಗೇ ಇತ್ತು
ಬಲೆಯ ಸಿಕ್ಕಿನಲ್ಲಿ ಸಿಕ್ಕು ಬಿಡಿಸಿಕೊಳ್ಳಲಾರದ ಚಿಟ್ಟೆ ಬಸವಳಿಯತೊಡಗಿತ್ತು

ಸಮಯ ಕಾದು ಬಳಿ ಬಂದ ಜೇಡ 
ಚಿಟ್ಟೆಯನ್ನು ಇಂಚಿಂಚಾಗಿ ಕಬಳಿಸಿ
ಸಂಚಿನ ಬಲೆ ನೇಯ್ದು 
ಇನ್ನೊಂದು ಚಿಟ್ಟೆಯನ್ನು ಕಾಯುತ್ತಲಿತ್ತು

Wednesday, October 22, 2014

ಬೆಳಕು



ಬೆಳಕಿನ ಹಬ್ಬದ ಬೆಳಗಿನೊಂದಿಗೆ ಭರವಸೆಯ ಬೆಳಗಿರಲಿ,
ಬದುಕಲ್ಲಿ ಸದಾ ಬೆಳದಿಂಗಳಂಥ ಬೆಳಕು ತುಂಬಿರಲಿ.

ಭಾವನೆಗಳ ಬೆನ್ನಲ್ಲೇ ಬದುಕುವ ಛಲವಿರಲಿ,
ಬಾಳುದ್ದಕ್ಕೂ ಬರಿದಾಗದ ಮಾನವೀಯತೆಯ ಬಂಗಾರವಿರಲಿ.

ಬವಣೆಗಳ ಭಾಂಡಾರ ಸಂಪೂರ್ಣ ಖಾಲಿಯಾಗಲಿ,
ಅಲ್ಲಿ ಸಂತೋಷ ಸಮೃದ್ಧಿಯ ಸಂಭ್ರಮ ತುಂಬಿರಲಿ.

Sunday, October 05, 2014

ಭ್ರಮೆ



ಎಷ್ಟೊಂದು ಸಲ ನಮಗರಿವಿಲ್ಲದೇ ಏನೇನೋ
ಭಾವನೆಗಳನ್ನು ಬೆಳೆಸಿಕೊಂಡಿರುತ್ತೇವೆ, ಅಥವಾ
ಅರಿಯದೆಯೇ ಭ್ರಮೆಯ ಹಳ್ಳಕ್ಕೆ ಬೀಳುತ್ತೇವೆ
ಅಪಾತ್ರವಾಗಬಹುದೆಂಬ ಅರಿವಿಲ್ಲದೇ
ಯಾವ್ಯಾವುದೋ ಸ್ಥಾನಗಳನ್ನು ನೀಡಿರುತ್ತೇವೆ

ಮಳೆ ಹನಿದು ನೆರೆ ಬಂದು ಗುಡುಗು ಸಿಡಿಲು ಹೊಡೆದರೂ
ನಮ್ಮ ಗ್ರಹಿಕೆ ತಪ್ಪೆಂದು ಒಪ್ಪಲಾಗುವುದಿಲ್ಲ,
ಮನಸಿನ ಮಾತುಗಳನ್ನು ಕೇಳುವುದೇ ಇಲ್ಲ
ಕತ್ತಲು ಹರಿದು ಬೆಳಕಿನೊಂದಿಗೆ ಸತ್ಯ ಕಣ್ಣಿಗೆ ರಾಚಿದರೂ
ಭ್ರಮೆಯ ಬಿಗಿ ಹಿಡಿತದಿಂದ ಹೊರಬರಲು ಸಾಧ್ಯವಾಗುವುದಿಲ್ಲ

ಭ್ರಮೆಯನ್ನು ಭ್ರಮೆಯೆಂದು ಒಪ್ಪಲು ತಯಾರಿರುವುದಿಲ್ಲ,
ಬೆಳೆಸಿಕೊಂಡ ಭಾವನೆಗಳಿಂದ ಕಳಚಿಕೊಳ್ಳಲು ಆಗುವುದಿಲ್ಲ
ಭ್ರಮೆಯ ಆಟೋಟಕ್ಕೆ ಹೊಂದಿಕೊಳ್ಳಲಾಗುವುದಿಲ್ಲ
ಭ್ರಮೆಯ ಭ್ರಮೆ ಬಿಡದೆ ನೆಮ್ಮದಿಯೆಂದಿಗೂ ಇಲ್ಲ
ಹಾಗಾಗಿ, ಭ್ರಮೆಯಲ್ಲೇ ಬದುಕುವುದೂ ಜೀವನವಲ್ಲ

Thursday, October 02, 2014

ಕಾನನದ ಕಾನೂನು

ಚಿಗರೆ - ಚಿರತೆ
Photo: Google.co.in

ಬಿಳಿಯದೆಲ್ಲ ಹಾಲಲ್ಲವೆನ್ನುವರಿವಿಲ್ಲದ, 
ಲೋಕವನರಿಯದ, ಚಿಗರೆ
ಚಂಗನೆ ನೆಗೆದು ಕುಪ್ಪಳಿಸಿತು, 
ಹಸಿರು ಕಂಡು ಕುಣಿಯಿತು

ಕದಲಿಕೆ ಕಂಡು ಕುತೂಹಲಿಸಿತು, 
ಎಲ್ಲರೂ ತನ್ನವರೆಂದು ಭ್ರಮಿಸಿತು
ಹೊಂಚು ಹಾಕುತ್ತಿದ್ದ ಚಿರತೆ ಚಕ್ಕನೆ ನೆಗೆಯಿತು, 
ಚಿಗರೆಯ ಕತ್ತನ್ನು ಹಿಡಿಯಿತು

ಚಿಗರೆ ಕೀರಲುಗುಟ್ಟಿತು, 
ಕಣ್ಣೀರು ಸುರಿಯಿತು, ರಕ್ತ ಹರಿಯಿತು
ಚಿರತೆಯ ಪಟ್ಟು ಬಲವಾಯಿತು, 
ಚಿಗರೆ ಪ್ರಾಣವ ಬಿಟ್ಟಿತು

ಚಿರತೆಯು ಬಲಿ ಬೇಡುವ ಜೀವಿ, 
ಚಿಗರೆ ಬಲಿ ಬೀಳುವ ಜೀವಿ
ಇಲ್ಲಿ ಚಿರತೆಯ ತಪ್ಪಿಲ್ಲ, ಚಿಗರೆಗೆ ಬದುಕಿಲ್ಲ,
ಕಾನನದ ಕಾನೂನು ಮೀರಲು ಸಾಧ್ಯವಿಲ್ಲ !