Wednesday, November 29, 2006

ಏನೇನ್ ಕಂಡಿ

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ !

ಆಫೀಸ್‍ನಿಂದ ಸಂಜೆ ಏಳು ಘಂಟೆಗೆ ಹೊರಟು, ೭.೪೫ ಕ್ಕೆ ಮನೆ ತಲುಪಿ, ಗಡಿಬಿಡಿಯಲ್ಲಿ ಹೊರಡುತ್ತಿರುವಾಗ ಬಂತು ಎಸ್‍ಎಮೆಸ್ `ಬಾಲರಾಜ್ ಬರೋಲ್ವಂತೆ'. ಓಓಓಓ!!! ಛೇಏಏಏ !!!! ಅಂದುಕೊಂಡು, ಹಾಗೂ ಹೀಗೂ ೮.೪೫ ಕ್ಕೆ ಮನೆ ಬಿಟ್ಟು, ಬಸ್ಸಿಗಾಗಿ ಕಾದು ೯ ಘಂಟೆಗೆ ಬಂದ ಮೆಜೆಸ್ಟಿಕ್ ಬಸ್ಸಲ್ಲಿ ಸವಾರಿ ಹೊರಟೆ.

೯.೩೦ ಕ್ಕೆ, ಕೆ.ಎಸ್.ಆರ್.ಟಿ.ಸಿ ವಿಚಾರಣಾ ಕಿಟಕಿ ಹತ್ತಿರ ಬಂದಾಗ ಡೀನ್ ಆಗಲೇ ಬಂದು ಕಾಯುತ್ತಿದ್ದ, ಅರುಣ್ ಇನ್ನೇನು ಬರುತ್ತಾನೆ ಎಂಬ ಸುದ್ದಿ ಸಿಕ್ಕಿತು. ಅರುಣ್ ಬಂದ ಮೇಲೆ ನೇರಂಬಳ್ಳಿ ಹೋಟೇಲ್‍ನವರು ಕೊಟ್ಟ ಊಟ ಮಾಡಿ, ಅರುಣ ಕಾಲುಚೀಲ ಕೊಂಡ ಮೇಲೆ ಬಂದು ೧೦.೩೦ ಕ್ಕೆ ಬಸ್ಸೇರಿದೆವು. ವೇಗದೂತ ಬಸ್ಸು, ಯಮದೂತನಂತೆ ಓಡಿತು.

ಬೆಳಗ್ಗೆ ೩.೪೫ - ೪.೦೦ ಕ್ಕೆ ತರಿಕೆರೆಯಲ್ಲಿಳಿದು ಅಲ್ಲಿಯ ಬಸ್‍ಸ್ಟಾಂಡ್‍ಗೆ ಬಂದು ಅಲ್ಲಿ ಮಲಗಿದ್ದ ಇಬ್ಬರು ಡ್ರೈವರ್‍‍ಗಳನ್ನು ನೋಡಿ ನಾವೂ ಕಟ್ಟೆಯ ಮೇಲೆ ಮಲಗಿಕೊಂಡೆವು. ೬.೦೦ ಘಂಟೆಗೆ ಪುನಹ, ನಾವು ಮೊದಲೇ ಬಸ್ಸಿಳಿದ ಜಾಗಕ್ಕೆ ಬಂದು, ಕೆಮ್ಮಣ್ಣುಗುಂಡಿ ಬಸ್ಸು ಬರಲು ಕಾದು, ನಡುವೆ ಕಾಫಿಯೂ ಕುಡಿದು, ಬಸ್ಸು ಬಂದಾಗ ಹತ್ತಿ ಜೈ ಎಂದೆವು. ೮ ಘಂಟೆ ಸುಮಾರಿಗೆ ನಮ್ಮನ್ನು `ಬಳಗಾರ' ದಲ್ಲಿ ಉದುರಿಸಿ ಬಸ್ಸು ಮುಂದೆ ಹೋಯಿತು. ನಮಗಾಗೇ ಕಾಯುತ್ತಿದ್ದಂತೆ ಜೀಪ್ ಡ್ರೈವರೊಬ್ಬ ಬಂದು ಕೆಮ್ಮಣ್ಣುಗುಂಡಿಗೆ ೧೭೫ ರೂಪಾಯಿ ಬನ್ನಿ ಎಂದ. ಹಾಗೂ ಹೀಗೂ, ಚರ್ಚಿಸಿ ಸ್ವಲ್ಪ ಕಡಿಮೆಗೆ ಆತನನ್ನು ಒಪ್ಪಿಸಿ ಕೆಮ್ಮಣ್ಣುಗುಂಡಿ ಗೇಟ್ ತನಕ ಬಂದು, ಟಿಕೆಟ್ ಪಡೆದು ಮುಂದಡಿಯಿಟ್ಟೆವು. ತೋಟಗಾರಿಕೆ ಇಲಾಖೆಯ ಪ್ರವಾಸಿಗರ ಕೋಣೆಯಲ್ಲಿ ಒಂದು ಕೋಣೆ ಬಾಡಿಗೆಗೆ ಪಡೆದು `ಸಾ ಪಾ ಸಾ' ಹೇಳಿ ನಂತರ ಅಲ್ಲೇ ಪಕ್ಕದಲ್ಲಿ ಇರುವ ಹೋಟೇಲ್‍ಗೆ ಬಂದು ಚಿತ್ರಾನ್ನ ತಿಂದೆವು. ಆಗಾಗಲೇ ಇಬ್ಬರು - ಮೂವರು ಜೀಪ್ ಡ್ರೈವರ್‍ಸ್ ಹೆಬ್ಬೆ ಜಲಪಾತಕ್ಕೆ ನಮಗೆ ಜೀಪ್‍ನಲ್ಲೇ ಹೋಗಿ ಬರಲು ಆಹ್ವಾನ ನೀಡಿದ್ದರು. ಒಬ್ಬ ೮೦೦ ರೂ, ಇನ್ನೊಬ್ಬ ೫೫೦ ಮತ್ತೊಬ್ಬ ೫೦೦ ಹೇಳಿ, ಬೇರೆ ಯಾರಾದರೂ ಇದ್ದರೆ ನೀವುಗಳು ವೆಚ್ಚವನ್ನು ಹಂಚಿಕೊಳ್ಳಬಹುದು ಎಂಬ ಉಚಿತ ಸಲಹೆಯನ್ನೂ ಕೊಟ್ಟರು. ನಾವು ಬಡವಾ ನೀ ಮಡಿಗಿದಂಗಿರು ಅಂತ ಅವರಿಗೆ ನಮಸ್ಕಾರ ಹೇಳಿದೆವು. ಹೊರಟಾಗ ಮೂರು ನಾಯಿಗಳು ನಮ್ಮನ್ನು `ಗಿರಿ ಹೋಟೇಲ್' (ಪುಟ್ಟ ಕಾಕಾ ಹೊಟೇಲ್ ಥರದ್ದು) ಪಕ್ಕ ತಂದು ಬಿಟ್ಟು ಕಾಣೆಯಾದವು. ಅಲ್ಲಿ ಹೋಟೇಲ್‍ನಲ್ಲಿ ಮಧ್ಯಾಹ್ನ ಊಟಕ್ಕಾಗಿ ಪುಳಿಯೋಗರೆ ಕಟ್ಟಿಸಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು `ಜಲಪಾತಕ್ಕೆ ಹೋಗುವಿರಾ, ಜೀಪಲ್ಲಿ ಹೋಗುತ್ತೀರಾ' ಎಂದಾಗ ಮತ್ತೆ... ಇದ್ಯಾವ ಗ್ರಹಚಾರ ಎಂದು ಹೌದು, ಇಲ್ಲ ಎಂದೆವು. ಹಾಗಾದರೆ ಯಾಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೀರಾ? ಬನ್ನಿ ಒಳದಾರಿ (ಕಾಲು ದಾರಿ) ತೋರಿಸುತ್ತೇನೆ ಎಂದು ನಮ್ಮನ್ನು ಜಲಪಾತದ ರಸ್ತೆಯ ವಿರುದ್ಧ ದಿಕ್ಕಿಗೆ ಕರೆದೊಯ್ದ. (ಬೆಂಗಳೂರಿನಲ್ಲಾದರೆ ಆತನ ಬಗ್ಗೆ ಸಂಶಯ ಪಟ್ಟುಕೊಂಡು ಏನು ಮಾಡುತ್ತಿದ್ದೆವೋ, ಇಲ್ಲಂತೂ ಪುಂಗಿಯ ನಾದಕ್ಕೆ ಮನಸೋತಂತೆ, ಕಿಂದರಿ ಜೋಗಿಯ ಕೊಳಲಿಗೆ ಮರುಳಾದಂತೆ ಆತನ ಹಿಂದೇ ಹೋದೆವು). ಆ ವ್ಯಕ್ತಿಯ ಹೆಸರು `ದೇವಣ್ಣ' ಎಂದು ತಿಳಿಯಿತು. ಹೊರಡುತ್ತಿರುವಾಗ ಒಂದು ನಾಯಿ ಹೊಟೇಲ್ ಪಕ್ಕದಿಂದ ನಮ್ಮ ಜೊತೆಗೆ ಬಂತು. (ದೇವಣ್ಣ ಭರವಸೆ ಕೊಟ್ಟಂತೆ ಆ ನಾಯಿ ನಮ್ಮ ಚಾರಣ ಸುರುವಾದಲ್ಲಿಂದ ನಾವು ಪುನಹ ಗೂಡು ಸೇರುವವರೆಗೆ ನಮ್ಮ ಜೊತೆಗೇ ಇತ್ತು).

ಮುಖ್ಯರಸ್ತೆಯಿಂದ ಕೆಳಗಿಳಿದು ಒಂದು ಹಳ್ಳದವರೆಗೆ ನಮ್ಮ ಜೊತೆ ಬಂದ ದೇವಣ್ಣ, ನಾಯಿ ನಮ್ಮ ಜೊತೆಗೇ ಇರುವುದು ಎನ್ನುವ ಧೈರ್ಯ ಕೊಟ್ಟು ಹೊರಟೇಬಿಟ್ಟ. ನಾವೂ ಮುಂದುವರಿದೆವು. ಮುಂದೆ ಹೋದಂತೇ ನಾವು ರಸ್ತೆಯಲ್ಲೇ ಹೋಗುತ್ತಿದ್ದರೆ ಕಳೆದುಕೊಳ್ಳುತ್ತಿದ್ದುದೇನೆಂದು ಮನವರಿಕೆಯಾಗತೊಡಗಿತು. ಗಿಡಮರಗಳ ಮಧ್ಯೆ, ಹಳ್ಳಕೊಳ್ಳಗಳ ಮಧ್ಯೆ ಹೋಗುವ ಅನುಭವಕ್ಕೂ ಕುದುರೆಯಂತೆ ಒಂದೇ ರಸ್ತೆಯಲ್ಲಿ ಹೋಗುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಜಕ್ಕೂ ದೇವಣ್ಣ ದೇವರಂತೆ ಬಂದು ನಮಗೆ ದಾರಿ ತೋರಿದ !

ನಾಯಿ ನಾಯಿ ಅನ್ನುವ ಬದಲು ಒಂದು ಹೆಸರು ಕೊಡುವ ಎಂದು ನಾನಂತೂ ಕೆಮ್ಮಣ್ಣುಗುಂಡಿಯದಲ್ಲವೇ, ಎಂದು ಮನಸ್ಸಿಗೆ ಬಂದಂತೆ, `ಕೆಮ್ಮಿ' ಎಂದು ಕರೆದೆ, ಅದಕ್ಕೆ ಇಷ್ಟವಾಗಲಿಲ್ಲ ಎಂದನಿಸಿ, ನನಗೆ ಕೆಮ್ಮು ಬರುವಂತಾಯಿತು. ಕೊನೆಗೆ ಅರುಣ `ರಾಣಿ' ಎಂದು ಕರೆದಾಗ ಇದೇ ಸರಿ ಎನ್ನಿಸಿತು.

ರಾಣಿ, ನಿಜವಾಗಿಯೂ ಅದು ರಾಣಿಯೇ. ನಮಗೆ ದಾರಿ ತೋರಿಸುವಂತೆ ಮುಂದೆ ನಡೆಯುತ್ತಿತ್ತು, ನಾವೇನಾದರೂ ನಿಂತರೆ ಅದೂ ನಿಲ್ಲುತ್ತಿತ್ತು.

ಕಾಲುದಾರಿ ಮುಗಿದು, ಮತ್ತೆ ರಸ್ತೆಗೆ ಬಂದೆವು. ಆದರೆ ಒಂದು ಸಲ ಮದ್ಯ ಕುಡಿದು ಅಮಲಿನ ರುಚಿ ಹಿಡಿದವರು ಪುನಹ ಅದಕ್ಕಾಗಿ ಹಾತೊರೆಯುವಂತೆ ಇನ್ನೆಲ್ಲಾದರೂ ಕಾಲುದಾರಿ ಇದೆಯೇ ಎಂದು ಯೋಚಿಸುತ್ತಾ ನಡೆವಾಗ ಒಂದು ಮನುಷ್ಯ ಜೀವಿ ಮೇಲೆ ಗುಡ್ಡದಿಂದ ಧುಡುಂ ಎಂದು ಧುಮುಕಿತು. ನಾವು ಅದು ಯಾರು ಏನು ಎಂದು ನೋಡುವ ಬದಲು, ಜಲಪಾತಕ್ಕೆ ಹೋಗಲು ಇನ್ನೆಲ್ಲಾದರೂ ಕಾಲುದಾರಿ ಇದೆಯೇ ಎಂದು ಕೇಳಿದೆವು. ಇದೆ ಬನ್ನಿ ತೋರಿಸುತ್ತೇನೆಂದು ಹೇಳಿದ ವ್ಯಕ್ತಿ ಭರ್ರ್ರ್ರ್ ಎಂದು ಹೋದ ವೇಗಕ್ಕೆ ನಾನಂತೂ ಸ್ವಲ್ಪ ದೂರ ದಢ ದಢ ಎಂದು ಓಡಲೇ ಬೇಕಾಯಿತು. ಆದರೂ ಸ್ವಲ್ಪ ಹೊತ್ತಿಗೆಲ್ಲ ಆ ವ್ಯಕ್ತಿ ಕಾಣೆ, ನೋಡಿದರೆ ನಮ್ಮ `ರಾಣಿಯೂ' ಆತನೊಂದಿಗೇ ಓಟ. ಛೇ ಇದು ನಿಜವಾಗಿಯೂ ನಾಯಿಯೇ... ನಮ್ಮನ್ನು ಬಿಟ್ಟೇ ಹೋಯ್ತು ಎಂದೆಲ್ಲಾ ಅಂದುಕೊಂಡು ಸ್ವಲ್ಪ ಮುಂದೆ ಬಂದರೆ, ಪಾಪ ರಾಣಿ ನಮಗಾಗಿ ಕಾಯುತ್ತಾ ನಿಂತಿತ್ತು. ಆತ ಅಲ್ಲೇ ಇನ್ನೊಂದು ಗುಡ್ಡದಲ್ಲಿ ನಿಂತು ಒಬ್ಬನೇ ಮಾತಾಡಿಕೊಳ್ಳುತ್ತಿದ್ದ. ಆಗ ಗೊತ್ತಾಯಿತು ಆತ ಟೆಲಿಫೋನ್ ಲೈನ್ ಮ್ಯಾನ್, ಫೋನಲ್ಲಿ ಮಾತಾಡುತ್ತಿದ್ದಾನೆ ಅಂತ. ನಮ್ಮ ರಾಣಿ ನಿಂತಿದ್ದ ಜಾಗವೇ ಇನ್ನೊಂದು ಕಾಲುದಾರಿಯ ಪ್ರಾರಂಭ. ಆತ ಕೂಗಿ ಹೇಳಿದ `ಇದೇ ದಾರಿಯಲ್ಲಿ ಮುಂದೆ ಹೋಗಿ' ಎಂದು. ಆತನನ್ನು ಆತನ ಪಾಡಿಗೆ ಬಿಟ್ಟು ರಾಣಿಯೊಂದಿಗೆ ಹೊರಟು, ಮುಂದೆ ನೋಡಿದರೆ!!!!!

ಸ್ವರ್ಗ ಎಂಬುದು ಭೂಮಿಯಲ್ಲೇ ಇದೆ, ನಮ್ಮ ಕಣ್ಣು ಮನಸ್ಸುಗಳಲ್ಲಿದೆ ಎಂಬ ಮಾತು ನಿಜ ಎನ್ನಿಸಿತು. ಅಧ್ಭುತವಾದ ದೃಶ್ಯವದು. ಮಳೆಗಾಲದ ವಾತಾವರಣ, ಸುತ್ತಲೂ ಹಸಿರೇ ಹಸಿರು, ಮುಂದೆ ದೂರದಲ್ಲಿ ಬೆಟ್ಟಗಳ ಸಾಲು ನೀಲಿಯಾಗಿ, ಅಕ್ಕ ಪಕ್ಕ ಹಸಿರಾಗಿ... ಆಹಾ.....!!!! ಎಂಥಾ ಸುಂದರ ಹಾಗೂ ರಮ್ಯ ನೋಟವದು. `ಸ್ವರ್ಗದಿಂದ' ಇಳಿದು ಮುಂದೆ ಬಂದಾಗ ರಸ್ತೆ ಸಿಕ್ಕಿದರೂ ಅಲ್ಲಿ ರಸ್ತೆಯಿದೆ ಎಂದು ಗೆರೆ ಹಾಕಿ ಹೇಳಬೇಕಿತ್ತು. ಆಗ ತಿಳಿಯಿತು ನಮಗೆ, ಯಾಕೆ ಜೀಪ್‍ನವರು ಅಷ್ಟು ಇಷ್ಟು ಎಂದು ಹೇಳುತ್ತಾರೆಂದು. ಮುಂದೆ ಹೋಗುತ್ತಾ, ಸಿಕ್ಕಿದ ಮತ್ತೊಬ್ಬ ವ್ಯಕ್ತಿಯನ್ನು ಮರ್ಯಾದೆ ಬಿಟ್ಟ ವ್ಯಸನಿಗಳಂತೆ ಕೇಳಿದೆವು `ಇನ್ಯಾವುದಾದರೂ ಕಾಲುಹಾದಿ ಇದ್ಯೇನ್ರೀ ಜಲಪಾತಕ್ಕೆ...' ಆತ `ಇಲ್ಲ, ಇನ್ನು ಮೂರು ಕಿ.ಮೀ ರಸ್ತೆಯಲ್ಲೇ ಹೋದರೆ ಜಲಪಾತ ಸಿಗುತ್ತದೆ' ಎಂದ. ಸರಿ ಎಂದು ನಡೆದಾಗ ರಾಣಿಗಿನ್ನೂ ಅಮಲು ಬಿಟ್ಟಿರಲಿಲ್ಲ, ಕಾಲುದಾರಿ ಹುಡುಕಲು ನಡೆದಿತ್ತು. ನಾವು ಕೂಗಿ ಕರೆದು ರಸ್ತೆಯಲ್ಲೇ ನಡೆಸಿದೆವು.

ನಡೆದು ನಡೆದು ಹೋದಂತೆ ನೀರು ಬೀಳುವ ಶಬ್ಧ ಕೇಳಿದಂತೆ, ಇದೇ ಇರಬಹುದೇ ಇದೇ ಇರಬಹುದೇ ಎಂದು ಚರ್ಚಿಸುತ್ತಾ ಹೋದಾಗ ರಸ್ತೆ ಕವಲೊಡೆದು ಬಲದಲ್ಲಿ ಒಂದು ಗೇಟ್, ಎಡದಲ್ಲಿ ಇನ್ನೊಂದು ರಸ್ತೆ. ಎಡದಲ್ಲಿ ನಡೆದು ಮುಂದೆ ಹೋದಂತೆ ದೂರ, ಬೆಟ್ಟದಲ್ಲಿ ಯಾರೋ ನಿಂತು ಬೆಳ್ಳಗಿನ ಶಾಲನ್ನು ಅಲುಗಾಡಿಸುತ್ತಿರುವುದು ಕಾಣಿಸಿತು. ಯಾರಿರಬಹುದು ಎಂದು ಕುತೂಹಲ ಪಟ್ಟುಕೊಂಡು ಹೋಗುತ್ತಿರುವಾಗ ನಮಗೆ ಜ್ನಾನೋದಯವಾಯಿತು..... ಓ...... ಇದೇ ಹೆಬ್ಬೆ ಫಾಲ್ಸ್!!!!!

ಆ... ಓ.. ಎಂದು ಕಿರುಚುತ್ತಾ (ನಿಶ್ಯಬ್ಧವಾಗಿ) ಚುರುಕಾದೆವು. ಅರುಣನ ಪ್ರಕಾರ ಜಲಪಾತ ಅಷ್ಟು ಶಬ್ಧ ಮಾಡುತ್ತಿರಲಿಲ್ಲ..... ನಡೆದೆವು ನಡೆದೆವು... ಅಷ್ಟರಲ್ಲಿ ಒಂದು ಚಿಕ್ಕ ಗೇಟ್ ಕಾಣಿಸಿ, `ಓ ದಾರಿ ತಪ್ಪಿ ಯಾವುದೋ ಎಸ್ಟೇಟ್ ಮನೆಗೆ ಬಂದೆವೇನೋ' ಎಂದು ಅರೆಕ್ಷಣ ಯೋಚಿಸಿದರೂ ನಮಗೆ ಸೆಕ್ಯುರಿಟಿಯವರು ಇಬ್ಬರು ಕಾಣಿಸಿದಾಗ ಸಮಾಧಾನವಾಯ್ತು. ಗೇಟ್ ಹತ್ತಿರ ಕೇಳಿದೆವು `ಹೆಬ್ಬೆ ಫಾಲ್ಸ್' ಎಂದು. ಅವರು ತಲೆಯಾಡಿಸಿ, `ರುಕೋ' ಅಂದಾಗ ಆಶ್ಚರ್ಯವಾಯಿತು. ನಮ್ಮ ರಾಣಿಯಂತೂ ಅಷ್ಟು ಹೊತ್ತು ಸೌಮ್ಯವಾಗಿದ್ದಿದ್ದು ಗುರ್ ಗುರ್ ಎನ್ನತೊಡಗಿದಾಗ ನೋಡಿದರೆ ಅಲ್ಲೊಂದು ಕಪ್ಪು ನಾಯಿ! ಹೇಗೋ ಎರಡೂ ಜಗಳಾಡದಂತೆ, ದೂರ ಕರೆದುಕೊಂಡು ಹೊರಡುವ ಮೊದಲು ಸೆಕ್ಯುರಿಟಿಯವರು ನಮ್ಮಲ್ಲಿದ್ದ ಒಂದೇ ಒಂದು ಬ್ಯಾಗನ್ನೂ ಪರೀಕ್ಷಿಸಿ `ಡ್ರಿಂಕ್ಸ್ ತೋ ನಹೀ ಹೇನಾ' ಅಂದಾಗ ನಾವೇನು ಕಮ್ಮಿ ಎಂದು `ಹಂ ತೋ ಡ್ರಿಂಕ್ಸ್ ಕರ್ತೇಹೀ ನಹೀ' ಎಂದು ಭಾಷಾ ಪಾಂಡಿತ್ಯ ಮೆರೆದೆವು (ಕನ್ನಡಿಗರು ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ ಅನ್ನುವುದನ್ನು ಪ್ರತಿಪಾದಿಸಿದೆವು).

ಮುಂದೆ ಹೋದಾಗ ಒಂದು ಹಳ್ಳ. ಪ್ರಾರಂಭದಲ್ಲಿ ಜಾಗ್ರತೆಯಾಗಿ, ಹಾಕಿಕೊಂಡಿರುವ ಶೂಸ್ ಒದ್ದೆಯಾಗದಂತೆ ಹೊರಟರೂ ನೀರಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆಮೇಲೆ ನಾನೂ ಅರುಣನೂ ರಾಜಾರೋಷವಾಗಿ ಶೂ ಹಾಕಿಕೊಂದೇ ನೀರಿಗಿಳಿದರೆ ಡೀನ್ ಬುದ್ಧಿ ಉಪಯೋಗಿಸಿ, ಶೂಸ್ ಬಿಚ್ಚಿ ನಿಧಾನ ನಡೆದು ಬಂದ, ಜೊತೆಗೆ ಅವನಿಗೆ ರಾಣಿಯ ಚಿಂತೆ. ಅದು ಅತಿ ಜಾಗ್ರತೆಯಾಗಿ ಕಲ್ಲಿಂದ ಕಲ್ಲಿಗೆ ಕಾಲಿಡುತ್ತಾ, ಮುಂದೆ ಕಲ್ಲಿಲ್ಲ ಎಂದಾಗ ಹಿಂದೆ ಹೋಗಲು ನೋಡುತ್ತಾ ಇತ್ತು. ಈ ಮಹಾಶಯ ಅದನ್ನು ಎತ್ತಿಕೊಂಡು ಬರುವ ಪ್ರಯತ್ನವನ್ನೂ ಮಾಡಿದ. `ಇಲ್ಲ ಅದೇ ಬರುತ್ತದೆ' ಎಂದರೂ ಅವನಿಗೆ ಸಮಾಧಾನವಾಗಲಿಲ್ಲ, ಅಸಮಾಧಾನದಿಂದಲೇ ಇತ್ತಕಡೆ ಬಂದಾಗ ರಾಣಿ ತಾನು ಈಜು ಚಾಂಪಿಯನ್ ಅನ್ನುವಂತೆ ಈಜಿಕೊಂಡು ಬಂತು. (ಅದು ನಮ್ಮ ಕ್ಯಾಮರಾದಲ್ಲಿ ದಾಖಲಾಗಿದೆ). ಎರಡು ಹೆಜ್ಜೆ ಮುಂದೆ ಬಂದಾಗ ಮತ್ತೊಮ್ಮೆ ಹಳ್ಳ ದಾಟಬೇಕಾಯ್ತು, ಈಗಂತೂ ಖುಶಿಯಲ್ಲಿ ಕುಣಿದಾಡಿಕೊಂಡು ಹೋದೆವು. (ಒಂದೇ ಹಳ್ಳ, ತಿರುಗಿ ತಿರುಗಿ ಬರುವಾಗ ನಾವು ಮೂರು ಕಡೆ ಅದನ್ನು ದಾಟಬೇಕಾಗುತ್ತದೆ). ಒಂದು ಸುತ್ತು ಮುಂದೆ ಹೋದಾಗ ಮತ್ತೊಂದು ಹಳ್ಳ ! ಅಷ್ಟರಲ್ಲಾಗಲೇ ಜಲಪಾತ ನಮ್ಮ ಕಣ್ಣೆದುರು ಬಿಚ್ಚಿಕೊಂಡು, ಮುಚ್ಚಿಕೊಂಡು ನಲಿದಾಡುತ್ತಿತ್ತು.

ಹೆಬ್ಬೆ! ಅಧ್ಭುತ, ಅತ್ಯಧ್ಭುತ, ಜೋಗ ಜಲಪಾತ ನೋಡಿದಾಗಲೂ ನನಗೆ ಇಲ್ಲಿ ಆದ ಧನ್ಯತಾ ಭಾವ ಉಂಟಾಗಿರಲಿಲ್ಲ. ನಿಜವಾಗಿಯೂ ಸೃಷ್ಟಿ ಎಷ್ಟು ನಿಗೂಢ ಮತ್ತು ಅಧ್ಭುತ. ಆ ಪ್ರಕೃತಿ ತಾಯಿಯೆದುರು ನಾವೇನೂ ಅಲ್ಲ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬೀಳುತ್ತಾ ಅಲ್ಲಿಂದ ಕೆಳ ಜಾರುತ್ತಾ, ಗಾಳಿಯೊಂದಿಗೆ ತೂರಾಡುತ್ತಾ, ನೀರ ಸಿಂಚನಗೈಯ್ಯುತ್ತಾ..... ಅದೂ ರಾಜ ಗಾಂಭೀರ್ಯದಿಂದ. ನಂತರ ಪ್ರಶಾಂತವಾಗಿ ಹರಿಯುತ್ತದೆ ಹೆಬ್ಬೆ ! (ನದಿಯ ಹೆಸರು ಗೊತ್ತಿಲ್ಲ). ಅಮ್ಮನ ಸೆರಗಿನಡಿಯಲ್ಲಿ ಅವಿತುಕೊಳ್ಳ ಬಯಸುವ ಮಕ್ಕಳಂತೆ ಜಲಪಾತದ ಸೆರಗಿನ ತನಕ ಹೋಗಲಿಚ್ಛಿಸಿದೆವು. ಅಷ್ಟೆಲ್ಲಾ ನೀರು ಬೀಳುತ್ತಿದ್ದರೂ ಜಲಪಾತ ರೌದ್ರವಾಗಿರಲಿಲ್ಲ, ನಿಜಕ್ಕೂ ತಾಯಿಯಂತೆ ಸಮಾಧಾನಿಯಾಗಿತ್ತು. ನಮ್ಮನ್ನು ತನ್ನ ಕಾಲ ಬುಡದವರೆಗೂ ಸ್ವಾಗತಿಸಿ, ಪನ್ನೀರ (ತಣ್ಣೀರ) ಸಿಂಪಡಿಸಿ ಸತ್ಕರಿಸಿತು. ಅಲ್ಲಿಂದ ಹೊರಡುವ ಮನಸ್ಸೇ ಇಲ್ಲ ನಮಗೆ. ಆದರೂ.... ರಜೆ ಮುಗಿದು ದೂರದ ಊರಿನ ಶಾಲೆಗೆ ಹೋಗುವ ಮಕ್ಕಳಂತೆ ತಿರುತಿರುಗಿ ಆಕೆಯನ್ನೇ ನೋಡುತ್ತಾ (ಕಣ್ಣಲ್ಲಿ ನೀರೊಂದು ತುಂಬಿರಲಿಲ್ಲ ಅಷ್ಟೆ) ಹೊರಟೆವು.

ಹಳ್ಳದ ಪಕ್ಕ ಕುಳಿತುಕೊಂಡು ಪಟ್ಟಾಗಿ ಪುಳಿಯೋಗರೆ ಚಕ್ಕುಲಿ, ಬಿಸ್ಕಿತ್ - ರಾಣಿಗೂ ಕೊಟ್ಟು, ನಾವೂ ತಿಂದು, ಅಲ್ಲೇ ಹಳ್ಳದಿಂದ ನೀರು ಕುಡಿದು ವಾಪಾಸ್ ಹೊರಟೆವು. ಹೋಗುವಾಗಲೂ ಬರುವಾಗಲೂ ರಕ್ತಬೀಜಾಸುರ ಜಿಗಣೆ ನಮ್ಮನ್ನು ಮುತ್ತಿಕ್ಕುತ್ತಿತ್ತು. ದಾರಿಯಲ್ಲಿ, ಆಹಾ.... ಎಂಥಾ ಸುಂದರ ಚಿಟ್ಟೆ, ಓಹೋ ಎಷ್ಟು ಚೆಂದದ ಹೂವು ಅಂದುಕೊಳ್ಳುತ್ತಾ ವಾಪಾಸ್ ಹೊರಟೆವು. ಬರುತ್ತಾ ಪುನಹ ಒಳದಾರಿಗಳಲ್ಲೇ ಬಂದೆವು.

`ಗಿರಿ ಹೋಟೇಲ್' ಬಳಿ ಬಂದಾಗ ಘಂಟೆ ೪.೦೦ ಆಗಿತ್ತು. ಪುನಹ ರಾಣಿಗೆ ಪುಳಿಯೋಗರೆ ಕೊಡಿಸಿದೆವು. ದೇವಣ್ಣ ಅಲ್ಲಿ ಸಿಕ್ಕಿದಾಗ ಧನ್ಯವಾದಗಳನ್ನರ್ಪಿಸಿ (ಹೃದಯದಿಂದ), `ನಮ್ಮ ಹೋಟೆಲ್‍'ಗೆ ಬಂದು ಬಿಸಿ ಬಿಸಿ ಊಟ ಮಾಡಿದೆವು. ನಂತರ ಪುನಹ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ (ಪೂರ್ತಿ ಒದ್ದೆಯಾಗಿತ್ತು) `ಝೆಡ್ ಪಾಯಿಂಟ್' ಹಾಗೂ ಶಾಂತಿ ಫಾಲ್ಸ್‍ಗೆ ಹೊರಟೆವು. ರಾಣಿ ತನ್ನ ಬದಲು ಇನ್ನೊಂದು `ಹುಡುಗಿ' ಯನ್ನು ಕಳಿಸಿತ್ತು ಜೊತೆಗೆ. ಅದಕ್ಕೆ `ಗೋಣಿ' ಎಂದು ಹೆಸರಿಟ್ಟೆವು. ಗೋಣಿ ರಾಣಿಯಂತಲ್ಲ, ಪುಕ್ಕಲು ಸ್ವಭಾವ ಹಾಗೂ ಇನ್ನೂ ಹುಡುಗಿಯಾಟಿಕೆ. ನನ್ನ ಪಕ್ಕದಲ್ಲೆ ಸುಳಿದಾಡುತ್ತಾ ಕೆಸರು ನೀರು ಸಿಡಿಸುತ್ತಾ, ನನ್ನ ಕಾಲಿಗಡ್ಡ ಬರುತ್ತಾ ನನ್ನಿಂದ ಬೈಯ್ಯಿಸಿಕೊಂಡಿತು. ಕೋತಿಗಳಿಗೆ ಹೆದರಿ ನಮ್ಮ ಪಕ್ಕದಲ್ಲೇ ಅಮರಿಕೊಂಡರೂ, ಪಾಪ ಝೆಡ್ ಪಾಯಿಂಟ್‍ವರೆಗೂ ಬಂತು.

ಶಾಂತಿ ಫಾಲ್ಸ್ ಮೊದಲು ಸಿಗುತ್ತದೆ. ನಂತರ ಝೆಡ್ ಪಾಯಿಂಟ್. ದಾರಿ ಝೆಡ್ ಆಕಾರದಲ್ಲಿ ಕೊರೆದಿರುವುದರಿಂದ ಬಹುಶಃ ಈ ವ್ಯೂ ಪಾಯಿಂಟ್‍ಗೆ ಝೆಡ್ ಪಾಯಿಂಟ್ ಎಂದು ಹೆಸರಿಸಿರಬೇಕು.

ವಾವ್!!!! ಇದೂ ಅಷ್ಟೇ. ನಿಜಕ್ಕೂ ಅದ್ಭುತ. ಸುತ್ತಲೂ ತಿಳಿ ಹಸಿರು ಕೋಟ್ ಹಾಕಿ ನಿಂತಿರುವ ಬೆಟ್ಟ, ಕೆಳಗೆ ದಟ್ಟ ಹಸಿರು ಹಾಸು ಹೊದ್ದು ಮಲಗಿದ ಕಾಡು. ಸುಂದರ, ಅತಿ ಸುಂದರ. ದಾರಿಯುದ್ದಕ್ಕೂ ಇದ್ದ ಗಿಡಗಳು ತಾವು ಸಂಗ್ರಹಿಸಿದ ಮಳೆ ನೀರಿನಿಂದ ಕಾಲುಗಳನ್ನು ತೊಳೆಸಿಯೇ ಮೇಲೆ ಬಿಡುತ್ತಿದ್ದುವು. ನಾವು ಅಲ್ಲಿ ತಲುಪಿದಾಗ ನಮಗೆ ಸಮಯಾವಕಾಶ ಬಹಳ ಕಡಿಮೆಯಿತ್ತು ಬೇಗ ಪುನಹ ರಸ್ತೆ ಸೇರದಿದ್ದರೆ, ಝೆಡ್ ಪಾಯಿಂಟ್‍ನಿಂದ ನೇರವಾಗಿ ಝೀರೋ ಪಾಯಿಂಟ್‍ಗೆ ಬೀಳುವ ಸಂಭವವಿತ್ತು. ಅಷ್ಟು ಕಡಿದಾದ ದಾರಿ. ಮನಸ್ಸಿಲ್ಲದ ಮನಸ್ಸಿನಿಂದ ತಿರುಗಿ ಬಂದು ರೂಮಿಗೆ ಹೋಗಿ ತಣ್ಣೀರಲ್ಲಿ ಸ್ನಾನ ಮಾಡಿ ರಾತ್ರೆ ಊಟ ಮಾಡಿ ಮಲಗಲು ಬಂದಾಗ ಕಿಟಕಿಯಲ್ಲಿ ಒಂದು ಅತಿಥಿ ನಮ್ಮದೇ ದಾರಿ ಕಾಯುತ್ತಿತ್ತು. ಕಾಟೇಜ್‍ನ ರಾಮೇ‍ಗೌಡರಿಗೆ ಹೋಗಿ ಹೇಳಿದಾಗ ಆತ ಬಂದು ಆ ಅತಿಥಿಯನ್ನು ಈಚೆ ಕರೆದು ಕೋಲಿನಿಂದ ಹೊಡೆದು ಕೊಂದೇ ಹಾಕಿದಾಗ, ನಮ್ಮ ಅರುಣನ ಸಂಕಟ ಹೇಳತೀರದ್ದು. `ಛೇ ಅನ್ಯಾಯವಾಗಿ ಒಂದು ಜೀವ ಹೋಗಲು ಕಾರಣನಾದೆನಲ್ಲಾ' ಎಂದು ಅಲವತ್ತುಕೊಂಡ ಪಾಪ. (ಹೂಂ. ಹೌದು ಆ ಅತಿಥಿ ಹಾವು !) ಅಂತೆಯೇ ರಾಮೇಗೌಡ, ರಾಣಿಯನ್ನೂ ಹೊಡೆದು ಕಾಟೇಜಿನೊಳಗಿಂದ ಹೊರಹಾಕಿದಾಗ ನಮಗೂ ಅಯ್ಯೋ ಪಾಪ ಅನ್ನಿಸಿತು.

ಬೆಳಗ್ಗೆ ೭.೦೦ ಘಂಟೆಗೆ `ರಾಜ ಭವನ' ದ ಕಡೆ ಹೋಗುವಾಗ, ರಾಣಿ ಬರದೆ, ತನ್ನ ಪ್ರತಿನಿಧಿ `ವಾಣಿ' ಯನ್ನು ಕಳುಹಿಸಿತು. (ಆದರೆ ವಾಣಿ ಮೇಲಿನ ತನಕ ಬರದೆ, ನಾವು ಕೆಳ ಬಂದ ಮೇಲೆ ರೂಮ್ ಬಳಿ ಬಂದು ನಂತರ ಬಸ್‍ಸ್ಟಾಪ್‍ನಲ್ಲಿ ಬೀಳ್ಕೊಟ್ಟಿತು). ವಾಣಿ ಅಂದರೆ, ಬೆಳ್ಳಗಿನ ಬೆಡಗಿ ಈಕೆ.

ರಾಜಭವನದಿಂದ ಸುತ್ತಲೂ ನೋಡಿದರೆ ಬಹಳ ಸುಂದರವಾದ ದೃಶ್ಯ. ಇಲ್ಲಿಂದಲೂ ಝೆಡ್ ಪಾಯಿಂಟ್ ಕಾಣಿಸುತ್ತದೆ. ನಮಗೆ ಅನ್ನಿಸಿತು, ಮೊದಲೇ ಪ್ಲಾನ್ ಮಾಡಿದ್ದಿದ್ದರೆ ಬೆಳಗಿನ ಹೊತ್ತು ಕೂಡ ಝೆಡ್ ಪಾಯಿಂಟ್‍ಗೆ ಹೋಗಿ ಆ ಸುಂದರ, ಅತ್ಯಧ್ಭುತ ದೃಶ್ಯ - ಸೂರ್ಯೋದಯ ನೋಡಬಹುದಿತ್ತು ಎಂದು. ಆದರೇನು ಮಾಡುವುದು? ಯಾವಾಗಲೂ ಕೆಟ್ಟ ಮೇಲೇ ಬುದ್ಧಿ ಬರುವುದಲ್ಲವೇ?

೮.೩೦ ಕ್ಕೆ ಕೆಳ ಬಂದು ಪ್ಯಾಕಿಂಗ್ ಮುಗಿಸಿ, ಪುನಹ `ನಮ್ಮ ಹೋಟೇಲ್‍'ಗೆ ಬಂದು ಅವಲಕ್ಕಿ ಉಪ್ಪಿಟ್ಟು ತಿಂದು ೧೦.೩೦ ಕ್ಕೆ ಬರುವ ಬಸ್ಸಿಗೆ ಲಗುಬುಗೆಯಿಂದ ಹೊರಟೆವು. ಆದರೆ ಎಷ್ಟು ಹೊತ್ತು ಕಾದರೂ ಬಾರದ ಬಸ್ಸು ನಮಗೆ ಕೈಯ್ಯೇನು ! ಕಾಲೇ ಕೊಟ್ಟಿತು. ನಂತರ ಬೇರೆ ಮೂರು ಜನ ಪ್ರವಾಸಿಗಳೊಂದಿಗೆ ಸೇರಿ ಒಂದು ಜೀಪಿನಲ್ಲಿ `ಬಳಗಾರ' ಕ್ಕೆ ಬಂದು ಇನ್ನೂ ಖಚಿತವಾಗದ ರೈಲು ಪ್ರಯಾಣವನ್ನು ನಮ್ಮ ಮಿತ್ರ ರೈಲ್ವೇ ಪ್ರಕಾಶ್ ಅವರಿಂದ ದೂರವಾಣಿಯ ಮೂಲಕ ತಿಳಿದುಕೊಂಡೆವು. (ಪ್ರಕಾಶ್‍ರವರ ಸಹಾಯವನ್ನು ಯಾವತ್ತಿಗೂ ನೆನೆಸಿಕೊಳ್ಳಬೇಕು). ಇಲ್ಲಿ ತರಿಕೆರೆ ಬಸ್ಸಿಗಾಗಿ ಕಾಯುತ್ತಿರುವಾಗ ಹಿಂತಿರುಗಿ ನೋಡಿದೆ. ಆಗ ಕಾಣಿಸಿತು ದೂರದ ಕಾಡಲ್ಲಿ ಒಂದು ಜಲಪಾತ, ಅದೇ `ಕಲ್ಲತ್ತಿ ಫಾಲ್ಸ್' ಎಂದು ತಿಳಿಯಿತು. ಇದು ಬಹಳ ಎತ್ತರದಿಂದ ಎರಡು ಹಂತಗಳಲ್ಲಿ ಬೀಳುತ್ತದೆ. ಹೆಬ್ಬೆಯಷ್ಟು ನೀರು ಇದ್ದಂತೆ ಕಾಣಿಸಲಿಲ್ಲ. (ನಾವು ನೋಡಿದಲ್ಲಿಂದ ಫಾಲ್ಸ್ ಸುಮಾರು ೧೫ ಕಿಲೋಮೀಟರ್ ದೂರದಲ್ಲಿತ್ತು).

ತರಿಕೆರೆಯಿಂದ ಶಿವಮೊಗ್ಗಕ್ಕೆ ಬಂದು ಹೋಟೇಲ್ ಅಶೋಕದಲ್ಲಿ ಊಟ ಆಗಿ, ರೂಮ್ ಬುಕ್ ಮಾಡಿ, ರೈಲ್ವೇ ಸ್ಟೇಶನ್‍ಗೆ, ಕೊನೆಯದಾಗಿ ಟಿಕೆಟ್‍ನ ಬಗ್ಗೆ ಅನುಮಾನ ಪರಿಹರಿಸಿಕೊಂಡು ಬರಲು ಹೋದೆವು. ನಮ್ಮ ಇನ್ನೊಬ್ಬ ಮಿತ್ರ ಶೇಖರ್ ಅಲ್ಲಿಗೇ ಬಂದು ನಮ್ಮನ್ನು ಕರೆದುಕೊಂಡು ಗಾಜನೂರಿನ `ತುಂಗಾ ಅಣೆಕಟ್ಟು'ಗೆ ಕರೆದೊಯ್ದರು. ಸುಂದರವಾಗಿತ್ತು, ಆದರಿನ್ನೂ ಹೊಸ ಅಣೆಕಟ್ಟು ಪೂರ್ತಿಯಾಗಿರಲಿಲ್ಲ. ಒಂದು ದೇವಸ್ಥಾನದ ಗೋಪುರದ ತುದಿ, ಹಳೆ ಅಣೆಕಟ್ಟಿನೊಳಗೆ ನೀರಲ್ಲಿ ಕಾಣಿಸುತ್ತಿತ್ತು.

ಅಲ್ಲಿಂದ ಪುನಹ ರೂಮಿಗೆ ಬಂದು ಸ್ವಲ್ಪ ಹೊತ್ತು ಮಾತಾಡಿ ಶೇಖರ್ ಹೊರಟಾಗ ಅವರನ್ನು ಬೀಳ್ಕೊಟ್ಟು ನಾವು ಮಾತಾಡುತ್ತಾ ಕಾಲ ಕಳೆದೆವು. ೮.೩೦ ಗೆ ಕೆಳಗೆ ಹೋಟೇಲ್‍ಗೆ ಬಂದು ಊಟ ಮಾಡಿ ೯.೦೦ ಕ್ಕೆ ರೂಮ್ ಖಾಲಿ ಮಾಡಿ ರೈಲು ನಿಲ್ದಾಣಕ್ಕೆ ಹೋದೆವು. ೧೦.೦೦ ಕ್ಕೆ ರೈಲು ಕೂಊಊ ಎಂದಿತು.

ಬೆಳಗ್ಗೆ ೫.೦೦ ಕ್ಕೆ ಬೆಂಗಳೂರು ತಲುಪಿ ಸಿಟಿಬಸ್ಸಲ್ಲಿ ಬಂದು ಮನೆ ತಲುಪಿದಾಗ ಒಂದು ಅಪೂರ್ವವಾದ ಅನುಭವ ಮೈ ಮನದಲ್ಲಿ ಹರಿದಿತ್ತು.

3 comments:

Manjunatha Kollegala said...

ಸುಂದರವಾದ ಕಥನ. ನಾನೂ ನಿಮ್ಮೊಂದಿಗೆ ಪ್ರವಾಸಕ್ಕೆ ಬಂದಿದ್ದೆ ಎನ್ನಿಸಿತು.

ರಾಜೇಶ್ ನಾಯ್ಕ said...

ಅನ್ನಪೂರ್ಣ,

ಸುಮಾರು ೧೫ ದಿನಗಳ ಹಿಂದೆ ನಿಮ್ಮ ಈ ಪ್ರವಾಸ ಕಥನವನ್ನು ನೋಟ್ ಮಾಡಿಟ್ಟುಕೊಂಡಿದ್ದರೂ, ಓದಲು ಆದದ್ದು ಈಗ. ಹೆಬ್ಬೆಯ ವಿವರಣೆ ಚೆನ್ನಾಗಿದೆ. ದೂರದಲ್ಲಿ ಯಾರೋ ಬಿಳಿ ಶಾಲು ಅಲುಗಾಡಿಸಿದಂತೆ ಎಂದು ಬರೆದದ್ದು ಸೊಗಸಾಗಿದೆ.

Annapoorna Daithota said...

ಧನ್ಯವಾದಗಳು ಮಂಜು ಹಾಗೂ ರಾಜೇಶ್ ನಾಯ್ಕರಿಗೆ....