Wednesday, January 31, 2024

ನೀರ ಮೇಲಿನ ಗುಳ್ಳೆ

 

ಅಲ್ಲಿ ಚುಕ್ಕೆಯಿದೆ ಎಂದರೂ ಜಗಳ

ನೀರ ಗುಳ್ಳೆ ನಿಜವಲ್ಲವೆಂದರೂ ಜಗಳ

ಪ್ರತಿಯೊಬ್ಬರ ಅನುಭವ ಬೇರೆಬೇರೆ

ಎಂಬ ವ್ಯತ್ಯಾವಿಲ್ಲದೇ, ಕಚ್ಚಾಟ, ಕಳವಳ


ಮುಖವಾಡ ತೊಟ್ಟರೆ ಮುಖವನ್ನು 

ಮರೆಮಾಚಬಹುದು ಮನಸನ್ನಲ್ಲ

ಮನಸ್ಸಿಲ್ಲದೇ ಒಪ್ಪಿದರದು ನೈಜವಲ್ಲ

ನಿಜವಲ್ಲದ ವ್ಯವಹಾರದ ಅಗತ್ಯವಿಲ್ಲ


ಎದುರಿನವರು ಕನ್ನಡಿಯಲ್ಲ, ಬಿಂಬ ನಮ್ಮದಲ್ಲ 

ಈ ಸತ್ಯ ಮರೆತು, ತಿಳಿಸುವ ಯತ್ನ ಸರಿಯಲ್ಲ

ಸ್ವತಃ ಅರಿವಾದರೆ ಎಲ್ಲವೂ ಅರ್ಥವಾಗುತ್ತದೆ

ಒತ್ತಾಯದ ಬೂದಿ ಮುಚ್ಚಿಟ್ಟರೆ ಕೆಂಡ ಕುದಿಯುತ್ತದೆ 


ತಾಳ್ಮೆ ತಪ್ಪಿದಾಗ ಬೂದಿ ಹಾರಿ ಹೋಗುತ್ತದೆ

ಮುಚ್ಚಿಟ್ಟ ಕೆಂಡ ಮೇಲೆದ್ದು ಉರಿ ಉಗುಳುತ್ತದೆ

ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಸುಡುತ್ತದೆ

ಒಳಗೂ ಹೊರಗೂ ಅಸಾಧ್ಯ ನೋವು ತುಂಬುತ್ತದೆ


ಪೊಳ್ಳು ಅಹಂಭಾವ ಬಿಟ್ಟು ನಮ್ಮನ್ನು 

ನಾವೇ ತಕ್ಕಡಿಯಲ್ಲಿ ತೂಗಿಕೊಂಡರೆ

ಇನ್ನೊಬ್ಬರ ಭಾವನೆ ಅರಿವಿಗೆ ಬರುತ್ತದೆ

ದಹನದ ಬದಲು ಸುಖ ಸಹನೆಯಿರುತ್ತದೆ


ಸ್ವಲ್ಪ ಎಚ್ಚರದಿಂದಿದ್ದು ಭಾವನೆಗೆ

ಅಂಕುಶವಿಟ್ಟಿದ್ದಿದ್ದರೆ ಎಂಬ ಪರಿತಾಪ

ಯಾಕಾಗಿ ಈ ಕೋಪ, ಅಸಹ್ಯ ರೂಪ,

ಆಮೇಲೆ ಸುಮ್ಮನೇ ಪಶ್ಚಾತ್ತಾಪ


Sunday, January 28, 2024

ಅಷ್ಟು-ಇಷ್ಟು


ಗತ್ತು ಗೈರತ್ತು ಹೇರೆತ್ತು ಹೊರುವಷ್ಟು

ಕಷ್ಟ ಕೈಯಲ್ಲಿ ದೃಷ್ಟಿಯೇ ಬಿರಿವಷ್ಟು

ನಷ್ಟ ನಲುವತ್ತು ಎಂದಿಗೂ ಮುಗಿಯದಷ್ಟು  

ದೊರೆಯುವುದೆಲ್ಲರಿಗು ಹಣೆಯಲ್ಲಿ ಬರೆದಷ್ಟು

ನೆಮ್ಮದಿಲಿ ಬದುಕಬೇಕು ಆಯುಸ್ಸು ದೊರೆತಷ್ಟು


ಪಡೆದುದರ ಕೊಡುತ್ತಿರು ಅಷ್ಟು-ಇಷ್ಟು

ಕೆಲಸಕಾರ್ಯಗಳ ಮಾಡು ಕಷ್ಟಪಟ್ಟು

ಸೇವೆಗಳಲ್ಲಿ ತೊಡಗಿಕೊ ಇಷ್ಟಪಟ್ಟು

ಅರಿತುದರ ಹಂಚಿಕೊ ಸಾಧ್ಯವಾದಷ್ಟು

ಸನ್ಮಾರ್ಗದಲ್ಲಿ ನಡೆಯಬೇಕು ಆದಷ್ಟು


ಪರರಿಗೆ ಕೇಡು ಬಗೆವವರು

ಇದ್ದರೆಷ್ಟು ಬಿಟ್ಟರೆಷ್ಟು 

ದಯೆ ದಾಕ್ಷಣ್ಯವಿದ್ದರೆ ಸಾಕಷ್ಟು

ಸಿಗುವುದೆಲ್ಲವೂ ಬೇಕಾದಷ್ಟು

ತಿಳಿದುಕೊಳ್ಳಬೇಕು ಇದನೆಲ್ಲ ಬಹಳಷ್ಟು

Friday, January 26, 2024

ಸ್ವಚ್ಛಂದ - ಹಸಿರು

 

ಚಿತ್ರ: ಪಿಂಟರೆಸ್ಟ್


ಬಾನಲ್ಲಿ ಹಾರುತಿಹ ಹಕ್ಕಿಗಳ ಪುಕ್ಕಗಳಲ್ಲಿ

ಸ್ವಾತಂತ್ರ್ಯದ ಸಂಭ್ರಮ, ಸಂತೋಷ,

ತುಂಬಿ ಹರಿವುದು ಅಗಾಧ ವಿಶ್ವಾಸ


ಗೂಡಲ್ಲಿ ಬಂಧಿಯಾದ ಹಕ್ಕಿಗಳ ತನುಮನದಲ್ಲಿ

ಜಡ ತುಂಬಿದ, ಭಯ, ಅವಿಶ್ವಾಸ,

ಹೊರ ಬೀಳುವುದು ನೋವು ನಿಟ್ಟುಸಿರ ನಿಶ್ವಾಸ


ಕಾಡಲ್ಲಿ ಓಡಾಡುವ ಮೃಗಗಳಿಗೆ

ಊಟಕ್ಕೆ ಉಂಟು ಆಹಾರದ ಸರಪಳಿ

ಮೃಗಾಲಯದಲ್ಲಿ ಬಂಧಿಯಾದ ಮೃಗಗಳಿಗೆ

ಕತ್ತು, ಕಾಲಿಗೆ ಬಿಗಿದ ಗಂಟು ಸರಪಳಿ


ಬಂಧನದಲ್ಲಿ ಯಾವುದೇ ಗಂಧವಿಲ್ಲ

ಗಂಧವಿಲ್ಲದಿರೆ ಅಂದ-ಚಂದವಿಲ್ಲ 

ಅವುಗಳ ಅಂದ ಚಂದಗಳ ಕಿತ್ತುಕೊಂಡರೆ 

ಯಾರಿಗೂ, ಎಂದಿಗೂ ಉಳಿಗಾಲವಿಲ್ಲ


ಬಂಧಿಸಿಡಬೇಡಿ ಸ್ವಚ್ಛಂದ ಜೀವಿಗಳ

ಚಿವುಟದಿರಿ ಅಸಹಾಯ ಪ್ರಾಣಗಳ

ಹಿಸುಕದಿರಿ ಅವುಗಳ ಉಸಿರನ್ನು

ಬೆಳೆಸೋಣ ನಮ್ಮೊಳಗಿನ ಹಸಿರನ್ನು

Saturday, January 20, 2024

ಅವಳಾಡಿದ ಮಾತುಗಳು

 

ಇದ್ದಕ್ಕಿದ್ದಂತೆ ಎದ್ದು ಬಂದು

ಎದುರು-ಬದುರಾಗಿ ನಿಂದು

ಕಣ್ಣಲ್ಲಿ ಕಣ್ಣಿಟ್ಟು ದೃಷ್ಟಿ ನೆಟ್ಟು

ಕಣ್ಣೀರ ಹರಿಯಲು ಬಿಟ್ಟು


ಅಸಹನೆಯ ಬದಿಗಿಟ್ಟು

ಭಾವನೆಗಳ ಕಟ್ಟಿಟ್ಟು

ಬಯಕೆಗಳ ಬಚ್ಚಿಟ್ಟು

ಕೈಗಳನು ನನ್ನ ಹೆಗಲ ಮೇಲಿಟ್ಟು


ಅಂದು ಅವಳಾಡಿದ ಮಾತುಗಳು

ಅನುರಣಿಸುತ್ತಿವೆ ಕಿವಿಯಲ್ಲಿ 

ತೊಳಲಾಡುತ್ತಿವೆ ಮನದಲ್ಲಿ

ಕೇಳುತ್ತಿವೆ ಹೃದಯದ ಬಡಿತದಲ್ಲಿ


ಕಾಣುತ್ತಿವೆ ಕನಸಿನಲ್ಲಿ, 

ಹೊಡೆಯುತ್ತಿವೆ ಗೊಂದಲದಲ್ಲಿ

ಜೊತೆಯಾಗಿವೆ ಪ್ರತೀ ಹೆಜ್ಜೆಯಲ್ಲಿ

ಅಚ್ಚಾಗಿದೆ ಅಸ್ಥಿ ಮಜ್ಜೆಯಲ್ಲಿ

Sunday, January 14, 2024

ಎಳ್ಳು - ಬೆಲ್ಲ


ಚಿತ್ರ: ಗೂಗ್‌ಲ್‌ನಿಂದ


ಪುಷ್ಯ ಮಾಸ ಶುಕ್ಲ ಪಕ್ಷ ಉತ್ತರಾಯಣ,

ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣ

ಋತುಗಳ ಬದಲಾವಣೆಯ ಆರಂಭವಿದು

ರೈತರಿಗೆ ಬಹು ದೊಡ್ಡ ಸಮಾರಂಭವಿದು


ಪೈರ ತೆಗೆಯುವ ಶುಭ ಮುಹೂರ್ತ,

ಮನೆಮನೆಯಲ್ಲೂ ಸಮೃದ್ಧಿಯ ಸಂಕೇತ

ಸಂತಸದಲ್ಲಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿ,

ಮನೆ-ಮನಗಳಲ್ಲಿ ಸಿಹಿ ಸವಿ ಹುಗ್ಗಿ


ಇಂದು ಸಂಕ್ರಾಂತಿ, ತೊಡೆವುದೆಲ್ಲಾ ಭ್ರಾಂತಿ

ಹೊಳೆಯುವುದು ಹೊಸ ಸೂರ್ಯ ಕಾಂತಿ

ಹೊಸತನ ಹೊಸಮನದೊಂದಿಗೆ ಶಾಂತಿ,

ತರುವುದು ದುಃಖ ದುಮ್ಮಾನಗಳಿಗೆ ವಿಶ್ರಾಂತಿ


ಬನ್ನಿ, ತಿನ್ನಿ, ಸಂಕ್ರಾಂತಿಯ ಎಳ್ಳು-ಬೆಲ್ಲ 

ಸಿಹಿ ತಿಂದ ಬಾಯಿಯಲ್ಲಿ ಕಹಿಯು ಸಲ್ಲ

ಮುಂದಿರುವುದು ನಮಗೆ ಒಳಿತೇ ಎಲ್ಲಾ 

ಕೆಡುಕಿಗಂತೂ ಇಲ್ಲಿ ಜಾಗವೇ ಇಲ್ಲ


ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ

- ಪೂ.

೧೫-೦೧-೨೦೨೪

Monday, January 08, 2024

ಮನಸ್ತಾಪ

 

ದೊಡ್ಡವರು ದೊಡ್ಡವರಾಗದಿದ್ದರೆ

ಚಿಕ್ಕವರು ದೊಡ್ಡವರಾಗ ಬೇಕಾಗುತ್ತದೆ

ಆದರೆ ಚಿಕ್ಕವರು ದೊಡ್ಡವರಾದರೆ,

ದೊಡ್ಡವರ ಅಹಂಭಾವಕ್ಕೆ ಪೆಟ್ಟಾಗುತ್ತದೆ 


ಅಹಂ ಇದ್ದಲ್ಲಿ ಮನವು ಕುರುಡಾಗುತ್ತದೆ

ಮನವು ಕುರುಡಾದಾಗ ಬುದ್ಧಿ ಕೈಕೊಡುತ್ತದೆ

ಮಾತಿಗೆ ಮಾತು ಸೇರಿ ಎಲ್ಲವೂ ಕಹಿಯೆನಿಸುತ್ತದೆ

ಕಹಿಯೇರಿದಂತೇ, ಹೇಳುವುದೆಲ್ಲಾ ವಕ್ರ ಎನಿಸುತ್ತದೆ


ಹೇಳುವುದನೆಲ್ಲ ವಕ್ರವಾಗಿ ಸ್ವೀಕರಿಸಿದರೆ

ಮನಸಿಗೆ ನೋವಾಗುತ್ತದೆ, ನೋವಾದ

ಮನಸಿಗೆ ಮೌನವೇ ಪ್ರಿಯವೆನಿಸುತ್ತದೆ

ಮೌನಕ್ಕೆ ಶರಣಾದರೆ ಮನಗಳು ದೂರವಾಗುತ್ತವೆ


ನಮ್ಮನ್ನು ನಾವು ಒರೆಗಿಟ್ಟರೆ ನಮ್ಮ ತಪ್ಪು

ತಿಳಿಯುತ್ತದೆ, ತಿಳಿದ ಮೇಲೆ ತಿದ್ದಿಕೊಂಡರೆ 

ಜೀವನವು ಹೊಳೆಯುತ್ತದೆ, ಇದು ಅರ್ಥವಾಗದಿದ್ದರೆ, 

ಅವರವರ ಪಾಲಿನ ಮನಸ್ತಾಪ ಅಲ್ಲಲ್ಲೇ ಉಳಿಯುತ್ತದೆ

Tuesday, January 02, 2024

ನೀನ್ಯಾರೋ - ನಾನ್ಯಾರೋ


ನಾನು ಮಗುವಾಗಿದ್ದಾಗ, 

ನೀನು ಯಾರೆಂದೇ ತಿಳಿದಿರಲಿಲ್ಲ

ನೀನೂ ಕೈಕಾಲಾಡಿಸಿ ಕಿಲಕಿಲ

ನಗುತ್ತಿದ್ದೆ, ನಾನೂ ನಗುತ್ತಿದ್ದೆ


ಬಾಲ್ಯದಲ್ಲಿ ನಿನ್ನ ನೋಡಿ, 

ನಿನ್ನ  ಹೊಗಳುವುದ ಕೇಳಿ,

ನಾನು ಹೊಟ್ಟೆಕಿಚ್ಚು ಪಡುತ್ತಿದ್ದೆ

ಉರಿಯನ್ನು ಅಮ್ಮನಿಗೆ ಮುಟ್ಟಿಸುತ್ತಿದ್ದೆ


ತಾರುಣ್ಯದ ಹೊಸ್ತಿಲಲ್ಲಿ, ನಿನ್ನ ನೋಡಿ

ಕೀಳರಿಮೆ ಅನುಭವಿಸುತ್ತಿದ್ದೆ

ನೀನು ಹತ್ತಿರ ಬಂದರೂ ನಾನು

ದೂರವೇ ಉಳಿಯುತ್ತಿದ್ದೆ


ಯೌವನದಲ್ಲಿ, ನಿನ್ನ ನೋಡಿ

ನಾನು ಆಶ್ಚರ್ಯ ಪಡುತ್ತಿದ್ದೆ 

ನೀನು ನನ್ನಂತೆಯೇ ನಾನು 

ನಿನ್ನಂತೆಯೇ, ಅಂದುಕೊಳ್ಳುತ್ತಿದ್ದೆ


ಮಧ್ಯವಯಸ್ಸಿನಲ್ಲಿ, ನಿನ್ನ ನೋಡಿ

ನಿನ್ನ ಬಗ್ಗೆ ಕೇಳಿ, ಖುಷಿ ಪಡುತ್ತಿದ್ದೆ

ನಾನು ನಿನ್ನಿಂದ ಕಲಿತೆ ನೀನು

ನನ್ನಿಂದ ಕಲಿತೆ ಎಂದು ಹೆಮ್ಮೆ ಪಡುತ್ತಿದ್ದೆ


ವೃದ್ಧಾಪ್ಯದಲ್ಲಿ, ನಿನ್ನ ನೋಡಿ

ಎಷ್ಟು ಚಂದ ಈ ಸ್ನೇಹ

ಎಷ್ಟು ಸುಂದರ ಈ ಬದುಕು

ಎಂದು ಆನಂದದಿಂದ ಇರುತ್ತಿದ್ದೆ


ನಾಳೆ ಉಸಿರು ನಿಂತ ಮೇಲೆ

ನೀನ್ಯಾರೋ, ನಾನ್ಯಾರೋ 

ಹೊರುವವರು ಯಾರೋ

ಕಳುಹಿಸಿ ಕೊಡುವವರು ಯಾರೋ