Saturday, July 25, 2026

ಆಗುವುದಿಲ್ಲವೇಕೆ

 

ನನಗೆ ಆಗುವುದಿಲ್ಲ, ಆಗುವುದಿಲ್ಲ, ಆಗುವುದಿಲ್ಲ! ಅದಾಗುವುದಿಲ್ಲ ಇದಾಗುವುದಿಲ್ಲ. ಹಾಗೆ ಆಗುವುದಿಲ್ಲ ಹೀಗೆ ಆಗುವುದಿಲ್ಲ. ಅಲ್ಲಿ ಆಗುವುದಿಲ್ಲ ಇಲ್ಲಿ ಆಗುವುದಿಲ್ಲ. ಅವರಾಗುವುದಿಲ್ಲ ಇವರಾಗುವುದಿಲ್ಲ. ಹೀಗೆ ಹೇಳುವುದರಲ್ಲಿ ಅಥವ ಯಾವುದೇ ಜವಾಬ್ದಾರಿಯನ್ನು ತೆಗೆದುಕೊಳ್ಳದೇ ಆದನ್ನು ಇನ್ನೊಬ್ಬರ ಹೆಗಲ ಮೇಲೆ ಹಾಕುವುದರಲ್ಲಿ ತೋರುವ ಬುದ್ಧಿವಂತಿಕೆ ಹಾಗೂ ಸಾಧನೆಯನ್ನು, ಅದಕ್ಕಾಗಿ ವ್ಯಯಿಸುವ ಶಕ್ತಿಯನ್ನು, ಸಕಾರಾತ್ಮಕಕ್ಕೆ ತೋರಿಸಿದರೆ? ವ್ಯಯಿಸಿದರೆ? ಯಾಕೆ ಆಗದಿರುವುದಿಲ್ಲ? ಅದು ಹೇಗೆ ಆಗದಿರುವುದಿಲ್ಲ?

ಒಪ್ಪಬಹುದು, ಎಲ್ಲರಿಗೂ ಎಲ್ಲವನ್ನೂ ಮಾಡಲು ಸಾಧ್ಯವಿಲ್ಲ,. ಆದರೆ, ಆತ್ಮಾಭಿವೃದ್ಧಿ ಎಂಬುದು ನಮ್ಮ ಹಿಡಿತ ಹಾಗೂ ಇಚ್ಛೆಯಲ್ಲಿ ಇರಬೇಕಾದುದು. ಎಲ್ಲರೂ ಎಲ್ಲವನ್ನೂ ಮಾಡಬೇಕು ಎಂಬ ಅಗತ್ಯವಾದರೂ ಎಲ್ಲಿದೆ? ನಮ್ಮನ್ನು ನಾವು, ನಮಗಾಗಿ, ಹೇಗೆ ಸರಿ ಮಾಡಿಕೊಂಡು ಅಭ್ಯುದಯದತ್ತ ಹೆಜ್ಜೆ ಇಡಬಹುದು ಎಂಬುದು ಮುಖ್ಯ.  ದೌರ್ಬಲ್ಯವನ್ನು ಎತ್ತಿ ತೋರಿಸಿ ನುಣುಚಿಕೊಳ್ಳದೇ, ಪ್ರಯತ್ನಪಟ್ಟು ಕಡ್ಡಿಯನ್ನಷ್ಟೇ ಎತ್ತಿ ಇಟ್ಟರೂ ಅದರ ಬೆಲೆಯೇ ಬೇರೆ.  ಅದು ನಮಗಾಗಿ, ನಮ್ಮ ವ್ಯಕ್ತಿತ್ವ ವಿಕಸನಕ್ಕಾಗಿ ನಾವು ಮಾಡಬೇಕಾದ್ದು, ಬೇರೆಯವರಿಗಾಗಿ ಅಲ್ಲ. ಕೈಕಾಲುಗಳಿಲ್ಲದವರು ಕೂಡಾ ಅವರವರ ಕೆಲಸ ಮಾಡಿಕೊಳ್ಳುತ್ತಾರೆಂದಾದರೆ, ಕಣ್ಣಿಲ್ಲದವರು ಕೂಡಾ ಸ್ವಾವಲಂಬಿಗಳಾಗಿದ್ದಾರೆ ಎಂದಾದರೆ, ಎಲ್ಲವೂ ಸುಸ್ಥಿಯಲ್ಲಿರುವವರು, ಕೇವಲ ಕೆಲವು ಸಾಮಾನ್ಯ ಜಾಡ್ಯವಷ್ಟೇ, ಮಾನವ ಸಹಜವಾದ ಚಿಕ್ಕಪುಟ್ಟ ತೊಂದರೆಗಳಷ್ಟೇ ಇರುವವರು ಆಗುವುದಿಲ್ಲ ಎನ್ನುತ್ತಾ ಕೂತರೆ ಅದು ನಮ್ಮನ್ನು ನಾವು ಅಧಃಪತನದತ್ತ ತಳ್ಳಿಕೊಂಡಂತಲ್ಲವೇ?

ತುಂಬಿಟ್ಟ ಪಾತ್ರೆಯ ಹಳೆಯ, ಹಳಸಿದ, ಕೊಳೆತ, ಕುದಿದ, ಹೊಲಸನ್ನು ಚೆಲ್ಲಿದರಷ್ಟೇ ಹೊಸದನ್ನು ತುಂಬಿಸಬಹುದು.  ತುಂಬಿರುವ ದೊಡ್ಡ ಪಾತ್ರೆಯಲ್ಲಿ ಇರುವುದನ್ನು ಹೊರ ಚೆಲ್ಲಿ ಖಾಲಿ ಮಾಡುವುದೂ ಸುಲಭವಲ್ಲ. ಬಹುಕಾಲದಿಂದ ಕಾಪಿಟ್ಟ ಬೃಹತ್ ಸಂಗ್ರಹವನ್ನು ಹೊರ ಚೆಲ್ಲಲು ನಮಗೆ ಇರುವುದು ಪುಟ್ಟ ಚಮಚ. ಹಾಗಾಗಿ ದಿನ ನಿತ್ಯ ಒಂದಷ್ಟು ಚೆಲ್ಲುತ್ತಾ ಹೋಗಬೇಕು, ಚೆಲ್ಲಿದಾಗ ಪಾತ್ರೆಯಲ್ಲಿ ತೆರೆದುಕೊಳ್ಳುವ ಜಾಗಕ್ಕೆ ಮತ್ತೆ ಹೊಲಸು ತುಂಬದಂತೆ ನೋಡಿಕೊಳ್ಳಬೇಕು. ಪ್ರಯತ್ನ ಪಡಬೇಕು, ಎಲ್ಲವನ್ನೂ ಇನ್ನೊಬ್ಬರು ಮಾಡಬೇಕೆಂದು ನಿರೀಕ್ಷಿಸುತ್ತಿರಬಾರದು.  ನಮ್ಮ ಪ್ರಯತ್ನಕ್ಕೆ ಫಲದ ಅಪೇಕ್ಷೆ ಇರಬಾರದು. ನಾವು ಯಾವುದರ ಬೆನ್ನು ಬೀಳುತ್ತೇವೋ ಅದು ನಮಗೆ ಸಿಗುವುದಿಲ್ಲ ಯಾಕೆಂದರೆ ನಮ್ಮ ಗಮನ ಅದರಲ್ಲಿರುತ್ತದೆ ಆಗ ಪ್ರಯತ್ನ ಕುಂಟುತ್ತದೆ. ನಮ್ಮ ಪ್ರಯತ್ನ ನಾವು ನಿಷ್ಠೆಯಿಂದ ಮಾಡುತ್ತಿದ್ದರೆ ತುಂಬಿಟ್ಟ ಪಾತ್ರೆ ಖಾಲಿಯಾಗಿ ಹೊಸದು ತುಂಬಿರುವುದು ನಿಧಾನವಾಗಿ ನಮ್ಮ ಅರಿವಿಗೆ ಬರುತ್ತದೆ. ಹೌದು, ಅದಕ್ಕೆ ಸಮಯ ಬೇಕಾಗುತ್ತದೆ. ಯಾಕೆಂದರೆ ನಮಗೆ ವಯಸ್ಸಾದ ಹಾಗೆಯೇ ಅದಕ್ಕೂ ವಯಸ್ಸಾಗಿರುತ್ತದೆ. ನಮ್ಮ ಕ್ಷೇಮಕ್ಕೆ ನಾವೇ ಹೊಣೆ, ಇನ್ನೊಬ್ಬರಲ್ಲ.  ಯಾವುದೂ ಸುಲಭವಲ್ಲ. ಎಲ್ಲವೂ ಸುಲಭದಲ್ಲಿ ಆಗುವುದಾದರೆ ಎಲ್ಲೆಲ್ಲೂ ಸಾಧಕರೇ ಇರುತ್ತಿದ್ದರು.  

ನಾಯಿಗೆ ಕೂಡಾ, ಅದರ ನಿತ್ಯದ ಜಾಗ ಬದಲಿಸಿದರೆ ಕಿರಿಕಿರಿಯಾಗುತ್ತದೆ. ನಮಗೂ ಹಾಗೆ, ಪಾತ್ರೆ ಖಾಲಿ ಮಾಡುವ ಪ್ರಕ್ರಿಯೆಯಲ್ಲಿ ನಮ್ಮ ನಿತ್ಯದ, ನಾವು ಬೆಳೆಸಿಕೊಂಡಿರುವ ಪೊಳ್ಳುತನ, ಭ್ರಮೆ, ಸುಖವನ್ನು ದೂರವಿಡಬೇಕಾಗುತ್ತದೆ. ಆರಾಮ ವಲಯವನ್ನು ಬಿಟ್ಟು ಹೆಜ್ಜೆಯಿಡುವಾಗ, ನಮ್ಮ ಮನಸು ಕಿರಿಕಿರಿ ಅನುಭವಿಸುತ್ತದೆ.  ದುಃಖವಾಗುತ್ತದೆ, ಅಳು ಬರುತ್ತದೆ, ಸಿಟ್ಟು ಬರುತ್ತದೆ, ಭಯ ಆಗುತ್ತದೆ, ಆತಂಕವೆನಿಸುತ್ತದೆ. ನನ್ನಿಂದಾಗುವುದಿಲ್ಲ ಎಂದೇ ನಮ್ಮ ಮನಸು ಸಾರಿ ಹೇಳುತ್ತದೆ, ಆದರೂ ಅದನ್ನು ಮೆಟ್ಟಿ ನಿಲ್ಲುತ್ತೇನೆ ಎಂಬ ನಿರ್ಧಾರ ಮಾಡಿದರೆ ಅದು ಬಾಲ ಮುದುರಿಕೊಳ್ಳುತ್ತದೆ.  ಬಹುಕಾಲದ ಸಂಚಯವನ್ನು ತೆರವುಗೊಳಿಸುವುದು ಕೂಡಾ,  ಹಲವು ವರ್ಷಗಳ ಮಸಿ ಹಿಡಿದ ಪಾತ್ರೆ ತೊಳೆಯುವಂತೆಯೇ, ಒಂದೆರಡು ದಿನದಲ್ಲಿ ಹೋಗುವುದಿಲ್ಲ ಅಥವ ಖಾಲಿಯಾಗುವುದಿಲ್ಲ. ಶ್ರದ್ಧೆಯಿಂದ ಪುನರಪಿ ಪ್ರಯತ್ನ ಪಡಬೇಕಾಗುತ್ತದೆ. 

ಎಲ್ಲದಕ್ಕೂ ಸಮಯ, ತಾಳ್ಮೆ ಬೇಕು.  ನನಗೆ ಹೀಗೆಯೇ, ನನಗೆ ಹಾಗೆಯೇ, ನಾನು ಹೀಗೆಯೇ, ನಾನು ಹಾಗೆಯೇ ಎಂದು ಹೇಳಿಕೊಳ್ಳುವ ಬದಲು ನಾನು ಹೇಗೆ, ನನಗೆ ಹೇಗೆ,  ಎಂದು ಆತ್ಮಾವಲೋಕನ ಮಾಡಿಕೊಂಡರೆ ನಾನು ಏನು ಮಾಡಬೇಕು ಎಂಬ ದಾರಿ ಅದಾಗೇ ತೋರುತ್ತದೆ. ನಾನು ಅದರಲ್ಲಿ ನಡೆಯಬೇಕು ಎಂದುಕೊಂಡರೆ ನಡೆಯುವ ಮನಸ್ಸಾಗುತ್ತದೆ, ನಡೆಯುತ್ತೇವೆ. ಹಾಗೆ ಮಾಡಲು ವಯಸ್ಸಿನ ನೆಪ ಬೇಕಾಗುವುದಿಲ್ಲ.  ಎಲ್ಲವೂ ನಮ್ಮ ಮನಸಲ್ಲಿರುತ್ತದೆ, ಕೈಯಲ್ಲಿರುತ್ತದೆ. ಇಲ್ಲವಾದಲ್ಲಿ ನಾವು ತೋಡಿಕೊಂಡ ಹಳ್ಳಕ್ಕೆ ಬಿದ್ದು ಅಲ್ಲೇ ಉಳಿಯುತ್ತೇವೆ. ಗೂಟ ಹಾಕಿಕೊಂಡು ಕೂತೆಡೆಯಲ್ಲೇ ಕಲ್ಲಾಗುತ್ತೇವೆ.

ನಾವು ಪಾತ್ರೆಯ ಮುಚ್ಚಳವನ್ನೂ ತೆರೆಯಲು ಸಿದ್ಧವಿಲ್ಲವೆಂದಾಗ ಯಾರು ಎಷ್ಟು ಹೇಳಿದರೂ, ಪ್ರಯತ್ನಿಸಿದರೂ  ಅದು ಒಳಗೆ ಸೇರುವುದೇ ಇಲ್ಲ. ನಮ್ಮ ಏಳುಬೀಳು ನಮ್ಮದೇ ಕೈಯಲ್ಲಿ, ಮನಸಿನಲ್ಲಿ ಇರುತ್ತದೆ ಹೊರತು ಬೇರೆಯವರಲ್ಲಿಲ್ಲ. ಎಲ್ಲರಿಗೂ ಎಲ್ಲಾ ಸಮಸ್ಯೆಗಳೂ ಇರುತ್ತವೆ. ನಮಗೆ ಮಾತ್ರವಲ್ಲ.  ಆದ್ದರಿಂದ ಎಲ್ಲರಂತೆಯೇ ನಾವೂ. ಅದರಂತೆಯೇ, ನಮ್ಮ ಜವಾಬ್ದಾರಿ ನಮ್ಮದು.  ದೋಸೆಯನ್ನು ಸೌಟು ಹಾಕಿ ಒಂದೆಡೆಯಿಂದ ಎಬ್ಬಿಸಿಕೊಂಡು ಮಗುಚಿ ಹಾಕದಿದ್ದರೆ ಸುಟ್ಟು ಹೋಗುತ್ತದೆ. ಒಲೆ ಮೇಲೆ ಪಾತ್ರೆಯಲ್ಲಿರುವ ಪದಾರ್ಥವನ್ನು ಆಗಾಗ ತಳದಿಂದ ಕದಡದಿದ್ದರೆ ಅಡಿ ಹಿಡಿಯುತ್ತದೆ. ನಾವೂ ಅಷ್ಟೇ, ಮಾಡಲೇ ಬೇಕಾದುದನ್ನು ಮಾಡದಿದ್ದರೆ, ಸಬೂಬು ಹೇಳಿಕೊಂಡು, ಪ್ರತಿಯೊಂದಕ್ಕೂ ಕಾರಣಗಳನ್ನು ನೀಡುತ್ತಾ ಹೋದರೆ ಒಳಗೆಯೇ ಕರಕಲಾಗುತ್ತೇವೆ, ಕಾಲಾನಂತರ ಪುಡಿಪುಡಿ ಆಗುತ್ತೇವೆ. ಒಳಗೇ ತಳ ಹಿಡಿಯುತ್ತೇವೆ, ತುಕ್ಕು ಹಿಡಿದು ಯಾವುದೇ ಪ್ರಯೋಜನಕ್ಕೂ ಬಾರದಂತಾಗುತ್ತೇವೆ.

ಕೇವಲ ಇನ್ನೊಬ್ಬರನ್ನು ಹೊಗಳಿಕೊಂಡು, ಅವರ ಬಗ್ಗೆ ಹೇಳಿಕೊಂಡಿರುವುದನ್ನು ಬಿಟ್ಟು, ನಮ್ಮನ್ನು ನಾವು ನೋಡಿಕೊಳ್ಳಬೇಕು.  ಅವರು ಮಾಡುತ್ತಾರೆ ಎಂದಾದರೆ ನಮಗೂ ಮಾಡಲು ಸಾಧ್ಯವಿದೆ ಆದರೆ ನಾವು ಪ್ರಯತ್ನಿಸುತ್ತಿರುವುದಿಲ್ಲ, ಮಾಡುತ್ತಿರುವುದಿಲ್ಲ ಎಂಬುದನ್ನು ಅರಿತುಕೊಳ್ಳಬೇಕು. ಬೇರೆಯವರು ಎಷ್ಟು ಮಾಡಿದ್ದಾರೋ ಅಷ್ಟೇ ನಾವು ಮಾಡಬೇಕು ಎಂದೇನಿಲ್ಲ. ನಮಗೆ ಸಾಧ್ಯವಾದಷ್ಟು, ಅಗತ್ಯವಿದ್ದಷ್ಟು ನಾವು ಮಾಡುತ್ತಿದ್ದರೆ ಸಾಕು. ನಮ್ಮನ್ನು ಇನ್ನೂಬ್ಬರಿಗೆ ಹೋಲಿಸಿಕೊಳ್ಳುವ ಅಗತ್ಯವಿಲ್ಲ, ನಮಗೆ ಯಾರೂ ಸ್ಪರ್ಧಿಗಳಲ್ಲ. ಅವರವರ ಪ್ರಯತ್ನ ಮತ್ತು ಫಲ ಅವರವರಿಗೆ. ಎಲ್ಲರ ಪಯತ್ನ, ಶ್ರಮ ಒಂದೇ ಅಲ್ಲ, ಅವರವರ ಶಕ್ತಿ ಅವರವರಿಗೆ.  ಅಷ್ಟಕ್ಕೂ, ಸರಿಯಾಗಿ ಅರಿತರೆ, ಇಂಥ ವಿಷಯದಲ್ಲಿ ನಮಗೆ ಸ್ಪರ್ಧಾ ಮನೋಭಾವ ಬರುವುದೇ ಇಲ್ಲ. ನಮ್ಮೊಳಗಿನ ಮಾತುಗಳು ನಮ್ಮ ಪ್ರಯತ್ನಕ್ಕೆ ಇಂಬು ನೀಡುತ್ತವೆ, ದಾರಿಯುದ್ದಕ್ಕೂ ಜೊತೆಯಾಗುತ್ತವೆ. ಆದರೆ, ಇನ್ನೊಬ್ಬರು ನಮಗಾಗಿ ಮಾಡಬೇಕು, ನಾನು ಕಷ್ಟಪಡಲಾರೆ ಎಂಬ ಧೋರಣೆಯಿದ್ದರೆ ಅರಿವಿನ ಮೇಲೆ ಮುಚ್ಚಳ ಮುಚ್ಚಿಟ್ಟಂತೆಯೇ. ಪ್ರಯತ್ನ ದೂರದ ಮಾತಾಗುತ್ತದೆ.

ಎಲ್ಲದರಲ್ಲಿಯೂ ನನ್ನದೇ ಛಾಪಿರಬೇಕು ಎಂಬ ಹಪಾಹಪಿ ಯಾಕೆ? ಎಲ್ಲಾ ಕಡೆ ನಮ್ಮ ಸಲಹೆ ಬೇಕಾಗಿರುವುದಿಲ್ಲ, ಎಲ್ಲಾ ವಿಷಯಗಳಲ್ಲಿ ನಮಗೆ ಪಾಂಡಿತ್ಯವಿರಬೇಕು ಎಂದೇನಿಲ್ಲ. ನಾವು ಹೇಳಿದ್ದು ಎಲ್ಲವೂ ಸರಿಯಾಗಿಯೇ ಇರಬೇಕೆಂದೇನಿಲ್ಲ. ನಮ್ಮ ತಪ್ಪಿದ್ದರೆ ಕ್ಷಮೆ ಕೇಳುವುದರಲ್ಲಿ ಅವಮಾನವಿಲ್ಲ.  ಯಾರೂ ಯಾರಿಗಿಂತಲೂ ಮೇಲಲ್ಲ, ಕೀಳೂ ಅಲ್ಲ. ಯಾರೂ ತ್ರಿಕಾಲ ಜ್ಞಾನಿಗಳಲ್ಲ ಅಥವ ಅಜ್ಞಾನಿಗಳಲ್ಲ. ಎಷ್ಟೊಂದು ಬಾರಿ ನಾವು ಹೇಳುವುದು ನಡೆಯದಿರಬಹುದು, ನಮ್ಮ ಮಾತಿಗೆ ಬೆಲೆ ಸಿಕ್ಕದೇ ಇರಬಹುದು. ಅದರಲ್ಲೇನಿದೆ? ನಾವೇ ಸರಿ ಅಥವಾ ನಾವು ಯಾವಾಗಲೂ ಸರಿ ಎಂಬ ಶಾಸನವೇನೂ ಇಲ್ಲವಲ್ಲ.  ನಮ್ಮ ಪೊಳ್ಳುತನದಿಂದ ಅವಮಾನವಾದರೆ ಆತಂಕಗೊಳ್ಳದೆ, ಕಸಿವಿಸಿ ಪಡದೇ, ಸಿಟ್ಟು ಮಾಡಿಕೊಳ್ಳದೇ, ಆ ಪ್ರಸಂಗದಲ್ಲಿ ಇನ್ನಷ್ಟು ವಿವರಣೆ ಕೂಡ ಹೊರಟು ಗೋಜಲು, ನಗೆ ಪಾಟಲಿಗೆ ಅವಕಾಶವಾಗದಂತೆ ಅದನ್ನು ನುಂಗಲು ಕಲಿಯಬೇಕು. ಆಗಷ್ಟೇ ನಮ್ಮ ಅಹಂ ತಗ್ಗುತ್ತದೆ.  ಅಹಂ ತಗ್ಗಿದಾಗ ನಮ್ಮಚಮಚದ ಗಾತ್ರ ಹಿಗ್ಗುತ್ತದೆ, ಪಾತ್ರೆ ಖಾಲಿಯಾಗುವ ವೇಗ ಹೆಚ್ಚುತ್ತದೆ.

ಎಚ್ಚೆತ್ತುಕೊಳ್ಳದಿದ್ದರೆ ಸಮಯ ಮೀರುತ್ತದೆ. ಸಮಯ ಮೀರಿದ ಮೇಲೆ ಪಶ್ಚಾತ್ತಾಪ ಪಟ್ಟರೂ ಪ್ರಯೋಜನವಿರುವುದಿಲ್ಲ.  ಇನ್ನೊಬ್ಬರು ಬೆರಳು ತೋರಿಸುವವರೆಗೆ ಕಾಯುವ ಬದಲು ಇಂದೇ ಎಚ್ಚೆತ್ತುಕೊಂಡರೆ ನಮ್ಮ ಆತ್ಮವಿಶ್ವಾಸವೆಂಬ ಸಿಹಿಯೊಂದಿಗೆ ಸ್ವರ್ಗವನ್ನು ನಮ್ಮದಾಗಿಸಬಹುದು. ಇಲ್ಲವಾದಲ್ಲಿ ನಮ್ಮೊಳಗಿನ ಕೊಳೆಯೊಳಗೆ ಕೊಳೆತು ನರಕದಲ್ಲಿ ಮುಳುಗ ಬೇಕಾಗಬಹುದು. ಎಷ್ಟು ಮಾತ್ರಕ್ಕೂ ನಾನು ಹೀಗೆಯೇ, ಬದಲಾಗುವುದಿಲ್ಲ ಎಂಬ ಅಹಂ ಹೊತ್ತುಕೊಂಡೇ ಇದ್ದರೆ ಬಂದದ್ದನ್ನು ಬಾಯಿ ಮುಚ್ಚಿಕೊಂಡು ಅನುಭವಿಸಬೇಕು. ಅದು ನಮ್ಮದೇ ಆಗಿರಬೇಕು. ಬೇರೆಯವರ ಮೇಲೆ ಅದರ ಭಾರವನ್ನು ಹೊರಿಸಬಾರದು.

ನಾನು ಗುಂಡಿಯಿಂದ ಏಳುತ್ತೇನೆ ಎಂದು ನಾವು ನಿರ್ಧರಿಸಿದ ತಕ್ಷಣ ಯಾರೂ ಏಣಿ ತಂದಿಡುವುದಿಲ್ಲ, ಕೈ ಹಿಡಿದು ಎಬ್ಬಿಸುವುದಿಲ್ಲ. ಹೇಗಾದರೂ ಮಾಡಿ ನಾವೇ ಮೇಲೇರಬೇಕಾಗುತ್ತದೆ. ಅಲ್ಲಿಯವರೆಗೆ, ಎದುರಾಗುವ ನಮ್ಮದೇ ಮನಸಿನ ಸವಾಲುಗಳನ್ನು, ಅಡ್ಡಿಗಳನ್ನು, ಆಲಸ್ಯವನ್ನು, ಜ್ಞಾನ ಮತ್ತು ಬುದ್ಧಿಯ ಬಳ್ಳಿಯಿಂದ ಕಟ್ಟಿಹಾಕಿ ಅದರ ಸಹಾಯದಿಂದ ಮೇಲೇರಲು ಪ್ರಯತ್ನಿಸಬೇಕು. ಕಾಟಾಚಾರಕ್ಕೆ ಒಂದೆರಡು ಬಾರಿ ಪ್ರಯತ್ನಿಸಿದ ಶಾಸ್ತ್ರ ಮಾಡಿ ಕೈ ಚೆಲ್ಲಬಾರದು.  ಆರಂಭದಲ್ಲಿ  ಹಿಂಸೆಯೆನಿಸುತ್ತದೆ, ಅಲ್ಲಿ ಇಲ್ಲಿ ತರಚು ಗಾಯಗಳಾಗುತ್ತವೆ. ಧೃತಿಗೆಡಬಾರದು, ನಕಾರಾತ್ಮಕ ಚಿಂತನೆಯ ಕೈಗೆ ಬುದ್ಧಿ ಕೊಡಬಾರದು. ಎಲ್ಲದಕ್ಕಿಂತ ಹೆಚ್ಚು, ಆಗಲಿಲ್ಲ, ಆಗುವುದಿಲ್ಲ ಎಂಬುದನ್ನು ಗಮನಿಸಲೂ ಬಾರದು. ಪ್ರಯತ್ನವಷ್ಟೇ ನನ್ನದು ಎಂಬ ಒಂದೇ ಹಠ ಇದ್ದರೆ, ಹಲವಾರು ಪ್ರಯತ್ನಗಳಾದ ಮೇಲೆ ಶುಭ ಫಲ ದೊರೆಯುತ್ತದೆ. ಆಗುವುದಿಲ್ಲ ಎಂಬುದನ್ನು ತುಳಿದರೆ ಅದೇ ನಾವು ಇರುವ ಕೂಪಕ್ಕೆ ಮೆಟ್ಟಿಲುಗಳಾಗಿ, ಮೇಲೆ ಹತ್ತಲು ಶಕ್ತಿ ಕೊಡುತ್ತದೆ.  ಹೆಜ್ಜೆ ಹೆಜ್ಜೆಗೂ ಆತ್ಮ ಸಂತೋಷ ದಾರಿ ದೀಪವಾಗಿರುತ್ತದೆ. 

ಮೊದಲ ಹೆಜ್ಜೆಯಿಡುವುದು ಅತ್ಯಗತ್ಯ, ಆದರೆ ಇಟ್ಟ ತಕ್ಷಣ ಪವಾಡವಾಗುವುದಿಲ್ಲ. ಕೋಟಿ ಮೆಟ್ಟಿಲುಗಳನ್ನು ಹತ್ತಬೇಕಾದರೂ ಮೊದಲ ಮೆಟ್ಟಿಲಿನಿಂದಲೇ ಆರಂಭಿಸಬೇಕಾಗುತ್ತದೆ. ಮೊದಲ ಹೆಜ್ಜೆಯಿಟ್ಟ ಮೇಲೆ ಕೊನೆಯ ಹೆಜ್ಜೆಯವರೆಗೆ ಇರುವ ದೂರವನ್ನು ಲೆಕ್ಕ ಹಾಕಿಕೊಂಡು ಉತ್ಸಾಹ ಕಳೆದುಕೊಳ್ಳ ಬಾರದು. ಬದಲಾಗಿ, ಹತ್ತಿರುವ ದೂರವನ್ನು ಗಮನಿಸಿಕೊಂಡು ನಮ್ಮ ಪಯತ್ನ, ಸಾಧನೆಯನ್ನು ನಮ್ಮೊಳಗೇ ಪ್ರಶಂಸಿಸುತ್ತಾ ಆ ಮೂಲಕ ಪ್ರೇರಣೆ ಹೆಚ್ಚಿಸಿಕೊಳ್ಳುತ್ತಾ ಮುಂದುವರಿಯಬೇಕು. ಈ ಘಟ್ಟದಲ್ಲಿ ಬೇರೆಯವರಿಂದ ಯಾವುದೇ ರೀತಿಯ ನಿರೀಕ್ಷೆ ಮಾಡಬಾರದು. ಇದು ನಮಗಾಗಿ ನಾವು ಮಾಡುವ ಯಜ್ಞ, ತಪಸ್ಸು. ನಮ್ಮ ಪಟ್ಟು ಬಿಡದ ಪ್ರಯತ್ನವೇ ಈ ಯಜ್ಞಕ್ಕೆ ಹವಿಸ್ಸು.  ತಪಸ್ಸು ಫಲಿಸಿ ದೊರೆಯುವ ಶುಭಫಲವೇ ಆತ್ಮ ಸಂತೋಷ. ಆತ್ಮಸಂತೃಪ್ತಿಯಿಂದ ಆತ್ಮಾಭಿವೃದ್ಧಿ, ತನ್ಮೂಲಕ ಆತ್ಮವಿಶ್ವಾಸದ ಹೆಚ್ಚಳ.

ಆಗುತ್ತದೆ, ಖಂಡಿತಾ ಆಗುತ್ತದೆ. ಆಗಿದೆ. ಪ್ರಯತ್ನ ಪಡುತ್ತೇನೆ. ನನ್ನ ಮಟ್ಟಿಗೆ ನಾನು ನನಗಾಗಿ ಸಾಧನೆ ಮಾಡುತ್ತೇನೆ ಎಂಬ ಧ್ಯೇಯವಿದ್ದರೆ, ಎಲ್ಲರನ್ನೂ, ಎಲ್ಲವನ್ನೂ ಒಳಗೂಡಿಸಿಕೊಂಡು ನೆಮ್ಮದಿ, ಸಂತೋಷ, ಆತ್ಮತೃಪ್ತಿ ಪಡೆಯಬಹುದು.

ಗಮನಕ್ಕಾಗಿ: ನಾನು ಪರಿಪೂರ್ಣಳಲ್ಲ, ಹಲವು ವರ್ಷಗಳಿಂದ ಪ್ರಯತ್ನ ಪಡುತ್ತಾ, ಇದನ್ನು ಅರ್ಥ ಮಾಡಿಕೊಂಡು, ಪ್ರಯತ್ನ ಮುಂದುವರಿಸುವ ಮಟ್ಟವನ್ನಷ್ಟೇ ತಲುಪಿದ್ದೇನೆ. ಇನ್ನೂ ಬಹುದೂರ ನಡೆಯುವುದಿದೆ. ಈಗ ಸಂತೋಷ, ನೆಮ್ಮದಿಯೊಂದಿಗೆ ನಡೆಯುವಷ್ಟು ಗಳಿಸಿರುವುದು ನನ್ನ ಆತ್ಮಸ್ಥೈರ್ಯ ಹೆಚ್ಚಿಸುವ ಅಂಕವಾಗಿದೆ. 

Thursday, July 02, 2026

ಇಂದಿನದು ಇಂದಿಗೆ

ಇಂದಿನದು ಇಂದಿಗೆ ಕಳೆಯಿತು

ನಾಳೆಯದು ನಾಳೆಗೆ ಬೆಳೆಯಿತು 

ಮುಂದಿನದು ಮುಂದಕೆಳೆಯಿತು 

ಹಿಂದಿನದು ಹಿಂದೆ ಉಳಿಯಿತು


ನೇಸರನ ತಿರುಗಾಟ ತಿರುಗಿತು 

ಬುವಿಯಲ್ಲಿ ಬಿಸಿಲು ತಣಿಯಿತು 

ಬಾನಲ್ಲಿ ಬೆಳದಿಂಗಳು ಕಾಲಿಟ್ಟಿತು 

ಮಿನುಗು ನಕ್ಷತ್ರ ನಕ್ಕು ನಲಿಯಿತು 


ಇರುಳು ಕಳೆದು ಬೆಳಕು ಬೆಳಗಿತು 

ಮುಗಿಲಮಲ್ಲಿಗೆ ಮುಗುಳು ಬಿರಿಯಿತು 

ಜಲಧಿಯಲ್ಲಿ ಜಲಜೆ ಸಂಸಾರ ಅರಳಿತು 

ಜಗದಲ್ಲಿ ಜಗನ್ನಾಥನ ದಯೆ ಹರಡಿತು 


ಹೊಸಿಲಲ್ಲಿ ಹೊಸ ರಂಗೋಲಿ ರೂಪು ತಳೆಯಿತು 

ಮೃದು ಬಿಸಿಲಲ್ಲಿ ಮುಂಜಾನೆ ರಾಗ ರಂಜಿಸಿತು 

ಹಸಿದ ಹೊಟ್ಟೆಗೆ ಬಿಸಿಬಿಸಿ ಹಿಟ್ಟು ದೊರೆಯಿತು

ಕಸಿಯಲಾರದ ಕಳೆಯ ಸಂತೋಷ ಹೊಳೆಯಿತು 

Thursday, June 11, 2026

ಗೂಡುದೀಪ

 

ಗೂಡುದೀಪಗಳ ಬೆಳಕಿನಲ್ಲಿ

ಹೊಳೆವ ಮೊಗಗಳಲಿ ಸಂತಸ

ಮಕ್ಕಳ ಓಡಾಟದ ಕಲರವದಲ್ಲಿ 

ಮುದುಡಿಕೊಂಡಿದೆ ಹಳೆ ಆಲಸ 


ಗೂಡಿನೊಳಗಿಂದ ಇಣುಕಿದ ಮರಿಹಕ್ಕಿ

ಬೆಳಕಿನ ಚಮಕಿನ ಸೆಳೆತಕ್ಕೆ ಸಿಕ್ಕಿ

ಉಲ್ಲಾಸ ಉತ್ಸಾಹ ಉಕ್ಕಿ ಉಕ್ಕಿ

ಗುಟುಕು ತಿಂದಿತು ಕುಕ್ಕಿ ಕುಕ್ಕಿ


ಗೂಡ ಮುಂದಿನ ಗೂನು ನಾಯಿ

ಜೋರಾಗಿ ಆಕಳಿಸಿ ಕಳೆದು ಬಾಯಿ

ಬಂದಿಲ್ಲವಲ್ಲ ಇನ್ನೂ ಬೂತಾಯಿ

ಎಳೆಯುತಿದೆ ನಿದ್ರೆಯ ಹಾಯಿ


ಗೂಡಿನಿಂದ ಹೊರಟ ಇರುವೆ ಸಾಲು

ಸುತ್ತುವರಿಯಿತು ದೀಪದ ಕಾಲು

ಬೆಳಕ ಬೆಳ್ಳಿಯ ಬಳ್ಳಿ ಇರುಳು

ಸವರಿತು ಇರುವೆಗಳ ಸರ್ಪ ಕಾವಲು

Saturday, May 09, 2026

ಬೈಕ್ ವ್ಹಿಲಿಂಗ್ (Bike Wheeling)

ಎಂತು ಏಕೆ ಗೊತ್ತಿಲ್ಲ ಯಾರಿದು ಏನೆಂದು ತಿಳಿಯುತ್ತಿಲ್ಲ 

ಹುಡುಗನೊಬ್ಬನಿಲ್ಲಿ  ಪರಿವೇ ಇಲ್ಲದೆ ತಣ್ಣಗೆ ಮಲಗಿರುವನಲ್ಲ 

ಎದುರು ಬರುತ್ತಿದ್ದ ಕಾರಿನ ಚಾಲಕ ಇವನುಳಿಸಲು ಕಂಬಕ್ಕೆ ಗುದ್ದಿ

ಅದರಲ್ಲಿದ್ದ ಹಿರಿಜೀವ ಗಾಬರಿಯಲ್ಲಿ ಇಹ ತೊರೆಯಿತಲ್ಲ


ಅಪ್ಪ-ಅಮ್ಮ, ವೃದ್ಧ ಮಡದಿ, ಮಕ್ಕಳು ಸಂಕಟದಿ ಅಳುತಿಹರು 

ದಿಗ್ಭ್ರಾಂತರಾಗಿದ್ದರೂ ಆರಕ್ಷಕರಿಲ್ಲಿ ಕರ್ತವ್ಯ ನಿರತರಾಗಿಹರು 

ಸೇರಿದ ಜನ ಹೆತ್ತವರನ್ನು ಅನಗತ್ಯ ಮಾತಲ್ಲೇ ಚುಚ್ಚುತಿಹರು 

ಬೇಡದಿದ್ದರೂ ಮಿತಿಮೀರಿ ಮಿಶ್ರ ಪ್ರತಿಕ್ರಿಯೆ ನೀಡುತಿಹರು 


ಬಾಳಿ ಬದುಕಬೇಕಿದ್ದ ಕುಡಿ ಬೇಜವಾಬ್ದಾರಿಯಿಂದ ಕಮರಿತು 

ಬಾಳ ಸಂಜೆಯಲಿದ್ದ ಮರ ಮುದುಡಿ ಕುಸಿದು ಮೌನವಾಯಿತು 

ಅಪ್ಪ-ಅಮ್ಮ, ಮನೆಮಂದಿ ಜೀವನಪರ್ಯಂತ ದುಃಖವುಣಬೇಕು 

ಹೆತ್ತ ತಪ್ಪಿಗೆಂಬಂತೆ, ತಪ್ಪಿಲ್ಲದೆಯೂ, ಕರ್ಮಫಲ ಅನುಭವಿಸಬೇಕು 

Tuesday, April 14, 2026

ವಿಷು


ಸೂರ್ಯನ ಮೇಷರಾಶಿ ಪ್ರವೇಶ 

ಪ್ರಕೃತಿ ತೊಟ್ಟಿದೆ ಕೊಂದೆಹೂ ವೇಷ 

ಮನೆಮನೆಯಲ್ಲಿ ಕಣಿಯ ವಿಶೇಷ 

ವಿಷುವಿನ ಹೊಸ ಹುರುಪು, ಹರುಷ 


ಎಲ್ಲರಿಗೂ ಶುಭಾಶಯ 

-ಪೂ. 15-03-2026

Thursday, March 26, 2026

ಶಾಶ್ವತವಲ್ಲ

 

ಉರುಳುವ ಚಕ್ರ ಉರುಳುತ್ತದೆ

ಭಾರ ಬಿದ್ದಲ್ಲಿ ಕುಗ್ಗುತ್ತದೆ 

ಪುನಃ ತಿರುಗಿದಾಗ ಹಿಗ್ಗುತ್ತದೆ 


ಮರದಲ್ಲಿ ಹಣ್ಣು ತುಂಬಿ ತುಳುಕುತ್ತದೆ 

ಅತಿಯಾದಾಗ ಬಾಗುತ್ತದೆ 

ತೂಕ ಕಳೆದಾಗ ತಲೆ ಎತ್ತುತ್ತದೆ 


ಮಳೆಗೆ ಹೊಳೆ ಉಕ್ಕಿ ಹರಿಯುತ್ತದೆ 

ಇಳೆಯ ಬೆಳೆಯನ್ನು ಕೊಚ್ಚಿ ಸೆಳೆಯುತ್ತದೆ 

ಅಬ್ಬರ ನಿಂತಾಗ ಪ್ರಶಾಂತವಾಗುತ್ತದೆ 


ಬದುಕು ಕಷ್ಟಗಳನ್ನು ಕೊಡುತ್ತದೆ 

ತಡೆಯಲಾರದಂತೆ ಕಂಗೆಡಿಸುತ್ತದೆ 

ಸಮಯ ಕಳೆದಾಗ ಸುಖ ನೀಡುತ್ತದೆ 

Wednesday, March 04, 2026

ವೈರುಧ್ಯ

 

ಕೊಟ್ಟಾಗ ಕೈಲಾಸಕ್ಕೇರುತ್ತೆ

ಕೊಡದಿದ್ದಾಗ ಪಾತಾಳಕ್ಕಿಳಿಯುತ್ತೆ

ಬೇಡಿದಾಗ ಬೆಟ್ಟ ಹತ್ತುತ್ತೆ

ಅಸಡ್ಡೆ ಮಾಡಿದಾಗ ಪಟ್ಟ ನೀಡುತ್ತೆ


ಪ್ರಯತ್ನ ಪಟ್ಟಾಗ ದೂರ ಸರಿಯುತ್ತೆ

ನಿರ್ಲಕ್ಷಿಸಿದಾಗ ಹತ್ತಿರ ಬರುತ್ತೆ

ಕಾದಾಗ ಬಾರದೇ ಇರುತ್ತೆ 

ಕಾಯದಿದ್ದರೆ ಕಾಲ ಬಳಿ ಬೀಳುತ್ತೆ


ಹಿಂಬಾಲಿಸಿ ಹೋದರೆ ತಪ್ಪಿ ಹೋಗುತ್ತೆ

ಗಮನ ಕೊಡದಿದ್ದರೆ ತಾನಾಗೇ ಸಿಗುತ್ತೆ

ಆಸೆ ಪಟ್ಟರೆ ನಿರಾಸೆ ಆಗುತ್ತೆ

ನಿರೀಕ್ಷೆ ಮಾಡದಿದ್ದರೆ ಕೈಗೆಟಕುತ್ತೆ

Thursday, February 26, 2026

ಅಮ್ಮ

 

ನೀನು ಹೋದ ಮೇಲೆ ಮತ್ತೆ 

ಬಂದು ನನ್ನ ಗಂಟಲಲ್ಲೇ ಕುಳಿತಿದ್ದೆ

ಮಾತಾಡಲು ಬಾಯಿ ತೆರೆದರೆ 

ಕಣ್ಣೀರು ತರಿಸುತ್ತಿದ್ದೆ 


ಅಡುಗೆಮನೆಯಲ್ಲಿ ಪಾತ್ರೆ ಲೋಟಗಳಲ್ಲಿ 

ಎಲ್ಲೆಲ್ಲೂ ಸದಾ ಕಾಣಿಸಿಕೊಳ್ಳುತ್ತಿದ್ದೆ 

ಏನಾದರೂ ತಿನ್ನ ಹೊರಟರೆ ಗಂಟಲುಬ್ಬಿಸಿ 

ಅಗುಳಗುಳಿಗೂ ನೀರು ಕುಡಿಸುತ್ತಿದ್ದೆ 


ಕಛೇರಿಯಲ್ಲಿದ್ದಾಗ ಆಗಾಗ ಕೈಯಲ್ಲಿ  

ಫೋನ್ ಹಿಡಿಯುವಂತೆ ಮಾಡುತ್ತಿದ್ದೆ 

ವಾಸ್ತವ ನೆನಪಾಗಿ ಫೋನ್ ಬದಿಗಿಟ್ಟು 

ಬಿಕ್ಕಿಬಿಕ್ಕಿ ಅಳುವಂತೆ ಮಾಡುತ್ತಿದ್ದೆ 


ದಾರಿಯಲ್ಲಿ ಸಿಗುತ್ತಿದ್ದ ಆಂಬುಲೆನ್ಸ್ ಗಳ 

ಒಳಗೆ ಕುಳಿತು ಗಾಬರಿ ಹುಟ್ಟಿಸುತ್ತಿದ್ದೆ 

ಒಂದೇ ಉಸಿರಲ್ಲಿ ವಾಹನ ಚಾಲನೆ 

ಮಾಡುವಂತೆ ಮಾಡುತ್ತಿದ್ದೆ 


ಕೆಲ ವರ್ಷಗಳು ಕಳೆದ ಮೇಲೆ 

ಗಂಟಲಿಂದ ಮೆದುಳಿಗೇರಿದೆ 

ಹುಟ್ಟು ಸಾವು ನೋವುಗಳನ್ನು 

ವಿಶ್ಲೇಷಿಸಿ ತಿಳಿಯುವಂತೆ ಮಾಡಿದೆ 


ಅದಾದ ಮೇಲೆ ಕೆಳಗಿಳಿದು ನೀನು 

ನನ್ನ ಹೃದಯದೊಳಗೆ ಕುಳಿತೆ 

ಹೆಜ್ಜೆಹೆಜ್ಜೆಗೂ ಜೊತೆಗೆ ನಡೆಯುತ್ತಾ 

ದಾರಿ ತೋರಿಸುತ್ತಾ ಉಳಿದೆ

Saturday, February 14, 2026

ತುಂತುರು

 

ತುಂತುರಿನ ತೇರಿನಲ್ಲಿ

ಕಂಪನದ ಭೇರಿಯಲ್ಲಿ

ಮಂಪರನು ತೊಡೆದು 

ಸೊಂಪಾಗಿ ನಲಿಯಿತು


ಚುಮುಚುಮು ಚಳಿಯಲ್ಲಿ

ಜುಮುಜುಮು ಮುದದಲ್ಲಿ

ಘಮಘಮ ಮಿಂದು ಮಿನುಗಿ

ಫಳಫಳ ಹೊಳೆಯಿತು


ಸ್ವಾತಂತ್ರ್ಯದ ಕೆಚ್ಚಿನಲಿ

ಅಭ್ಯುದಯದ ಹುಚ್ಚಿನಲಿ 

ಬಾಂಧವ್ಯದ ಅಚ್ಚಿನಲಿ 

ನೆಚ್ಚಿ ಮೆಚ್ಚಿ ಕುಣಿಯಿತು


ಮೌನದ ಮರೆಯಲ್ಲಿ

ಸತ್ಯದ ಒರೆಯಲ್ಲಿ

ನಾಚಿಕೆಯ ಕಣ್ಣಿನಲ್ಲಿ 

ಪ್ರೀತಿ ಹೃದಯದಲ್ಲಿ ಮೆರೆಯಿತು

Saturday, February 07, 2026

ಶ್ರೀಮಾತೆ

 

ಮಾತೆಯ ಮೈ ಮೇಲೆ ಮಣಭಾರ ಚಿನ್ನ 

ಕೇಳುತಿರುವಳು, ಯಾಕೆ ಎಳೆಯುವಿರಿ 

ಮೋಹ ಜಾಲಕ್ಕೆ ಎನ್ನ 


ಇವೆಲ್ಲಾ ಕೇವಲ ನಿಮಗೇ ಚೆನ್ನ 

ನಾನಿದಕೆಲ್ಲ ಅತೀತಳಲ್ಲವೇ

ಅರ್ಥ ಮಾಡಿಕೊಳ್ಳಿ ನನ್ನ 


ನನಗೆ ಬೇಡ ಈ ಸ್ವರ್ಣ, ಅದರ ಬಣ್ಣ 

ನೀವೆನ್ನ ಮಕ್ಕಳು ಇದನಿಟ್ಟುಕೊಳ್ಳಿ

ನಾನೆಡುವೆ ನಿಮ್ಮ ಕಡೆಗೆ ನನ್ನ ಕಣ್ಣ 


ನಡೆದರೆ ಸನ್ಮಾರ್ಗದಲ್ಲಿ ಸಂಪನ್ನ

ತೊಡೆಯುವೆ ಕಷ್ಟ ಕಂಟಕಗಳನ್ನ

ನೀಡುವೆ ಸದಾ ಸೌಭಾಗ್ಯವನ್ನ


ಭಕ್ತಿಯ ಎಣ್ಣೆಯಿಂದ ಉರಿಸಿ

ಅಧ್ಯಾತ್ಮ ಜ್ಞಾನ ದೀಪವನ್ನ 

ಹರಸಿ ಕಾಯುವೆ ನಾ ಸರ್ವರನ್ನ