Thursday, July 30, 2009

ಬದುಕು

ಒಂದು ಹಾವಿನ ಸ್ನೇಹ ಮಾಡಿದೆ,
ಸಮಯವಲ್ಲದ ಸಮಯದಲ್ಲಿ ನನಗದು ಕಚ್ಚಿತು
ಈಗ ಮತ್ತೆ ಮನೆಯ ಸುತ್ತಮುತ್ತ ಹರಿದಾಡುತ್ತಿದೆ.

ಒಂದು ಬೆಕ್ಕಿನ ಸ್ನೇಹ ಮಾಡಿದೆ,
ಬೇಸರ ಬಂದಾಗ ಎದ್ದು ಹೋಯಿತು
ಈಗ ಮತ್ತೆ ಮನೆಯ ಕಿಟಕಿಯಲ್ಲಿ ಕುಳಿತು ಮಿಯಾವ್ ಅನ್ನುತ್ತಿದೆ.

ಒಂದು ಹಸುವಿನ ಸ್ನೇಹ ಮಾಡಿದೆ
ಒಮ್ಮೆ ಪ್ರೀತಿಯಿಂದ ತಡವಿದಾಗ ತಿವಿಯಿತು
ಈಗ ಮತ್ತೆ ಮನೆ ಮುಂದೆ ಬಂದು ಅಂಬಾ ಎನ್ನುತ್ತಿದೆ

ಒಂದು ಗೋಸುಂಬೆಯ ಸ್ನೇಹ ಮಾಡಿದೆ
ಒಂದು ದಿನ, ಮಾತಾಡುತ್ತಿದ್ದಂತೆ ಬಣ್ಣ ಬದಲಿಸಿತು
ಈಗ ಮತ್ತೆ ಮನೆಯೆದುರಿನ ಮರದಲ್ಲಿ ಅದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ

ನಾನೂ ಮತ್ತೆ ಮಾತಾಡುತ್ತಿದ್ದೇನೆ, ಪ್ರೀತಿ ತೋರುತ್ತಿದ್ದೇನೆ
ಸ್ನೇಹ ಹಸ್ತ ತೆರೆದೇ ಇದ್ದೇನೆ, ಬದುಕುದ್ದಕ್ಕೂ ಹೀಗೇ ಇರುತ್ತೇನೆ,
ಯಾಕೆಂದರೆ ದ್ವೇಷ ನಿಮಿಷ, ಪ್ರೀತಿ ಹರುಷ, ಸ್ನೇಹ ವರುಷ

Sunday, March 22, 2009

ಅಣ್ಣ - ತಂಗಿ















ಪುಟ್ಟ ತಂಗಿ, ಒಬ್ಬ ಪುಟ್ಟ ಅಣ್ಣ

ಮನೆಯಲ್ಲಿ ಮರದ ಕೆಲಸ (ಕಾರ್ಪೆಂಟರಿ) ನಡೆಯುತ್ತಿದೆ.

ಆಟವಾಡುತ್ತಾ, ಆಡುತ್ತಾ, ಕೈಗೆತ್ತಿಕೊಂಡ ‘ಮರಳು ಕಾಗದ’ (ಸಾಂಡ್ ಪೇಪರ್) ನೋಡಿ, ಏನನ್ನಿಸಿತೋ,
ಬಗ್ಗಿ ಏನನ್ನೋ ಹೆಕ್ಕುತ್ತಿದ್ದ ಪುಟ್ಟ ತಂಗಿಯ ಬೆತ್ತಲೆ ಬೆನ್ನಿನ ಮೇಲೆ ಒರೆದ.
ತಂಗಿಯ ಅಳು ತಾರಕಕ್ಕೇರಿದಾಗ ಬಂದ ಅಪ್ಪ, ವಿಷಯ ತಿಳಿದು, ರಕ್ತ ಬರುತ್ತಿರುವ ಬೆನ್ನನ್ನು ನೋಡಿ,
ತಾನು ತಂಗಿಗೆ ಮಾಡಿರುವುದೇನೆಂದು ತಿಳಿಯಲು ಹುಡುಗನ ಪುಟ್ಟ ಕೈಗೆ ಮೆತ್ತಗೆ ‘ಮರಳು ಕಾಗದ’ ಉಜ್ಜಿ,
ಆ ತಪ್ಪಿಗೆ ಹಾಗೂ ಮಗನ ನೋವಿಗೆ, ಮನದಲ್ಲಿ ದುಗುಡ ತುಂಬಿಕೊಂಡು ತನ್ನ ಕೈಗೂ ಗಸಗಸ ತಿಕ್ಕಿಕೊಂಡ.
ಇಷ್ಟರಲ್ಲೇ ಅಲ್ಲಿಗೆ ಬಂದ ಅಮ್ಮ ಎಲ್ಲವನ್ನೂ ನೋಡಿ, ಕಣ್ಣಲ್ಲಿ ನೀರು ತುಂಬಿಕೊಂಡು, ಜೇನು ತಂದು ಮೂವರಿಗೂ ಹಚ್ಚುತ್ತಾಳೆ.

ಈಗ ಮತ್ತೆ ಪುಟ್ಟ ಹುಡುಗಿಯ ಕಣ್ಣಲ್ಲಿ ನೀರು, ಬಾಯಲ್ಲಿ ವಾಲಗ.

ಕೈಗೆ ಹಚ್ಚಿದ ಜೇನನ್ನು ಅಣ್ಣ ನೆಕ್ಕುತ್ತಿದ್ದಾನೆ, ನನಗೆ ಬೆನ್ನಿಗೆ ಹಚ್ಚಿದೀರಲ್ಲಾ, ನಾನು ಹೇಗೆ ನೆಕ್ಕಲಿ ?! ವಾss..... !