Saturday, December 02, 2006

ಈಕೆ

ಈಕೆ...
ಎಲ್ಲರೊಡನೆ ಬಾಯ್ತುಂಬ ಮಾತಾಡುತ್ತಾಳೆ
ನಗುತ್ತಾಳೆ, ನಲಿಯುತ್ತಾಳೆ
ನನ್ನೊಡನೆ ಬಾಯ್‍ಬಿಟ್ಟು ಮಾತಾಡುವುದಿಲ್ಲ, ಆದರೆ
ಕಣ್ಣಲ್ಲೇ ತಡವುತ್ತಾಳೆ, ಹೃದಯದಿಂದ ಸೋಕುತ್ತಾಳೆ
ಒಂದೇ ಒಂದು ಸ್ಪರ್ಶದಿಂದ ಮನದುಂಬಿಸುತ್ತಾಳೆ

ಈಕೆ...
ಎಲ್ಲರನ್ನೂ ಪ್ರೀತಿಯಿಂದ ಕರೆಯುತ್ತಾಳೆ
ಒರಲುತ್ತಾಳೆ, ಮೆರೆಯುತ್ತಾಳೆ
ನನ್ನನ್ನು ಕರೆಯುವುದಿಲ್ಲ ಆದರೆ
ಕೈ ಹಿಡಿದು ನಡೆಸುತ್ತಾಳೆ, ನಡೆಯುತ್ತಾಳೆ
ಕಣ್ಣೀರ ತೊಡೆಯುತ್ತಾಳೆ

ಈಕೆ...
ಎಲ್ಲರಿಗೂ ಬೇಕಾದವಳು
ಎಲ್ಲರೊಡನೆ ಬೆರೆಯುವಳು, ಮೊರೆಯುವಳು
ನನ್ನನ್ನು ಪೊರೆಯುವಳು, ಹೂವಂತೆ ಅರಳುವಳು,
ಪುಟದಂತೆ ತೆರೆಯುವಳು, ಬಾಳ ಕವಿತೆಗಳ ಬರೆಯುವಳು
ಈಕೆ... ನನ್ನವಳು, ಎಂದೆಂದಿಗೂ ನನ್ನೊಂದಿಗೊಂದಾಗಿರುವವಳು

Wednesday, November 29, 2006

ಏನೇನ್ ಕಂಡಿ

ಮಾನವನಾಗಿ ಹುಟ್ಟಿದ್ ಮೇಲೆ ಏನೇನ್ ಕಂಡಿ, ಸಾಯೋದ್ರೊಳಗೆ ಒಮ್ಮೆ ನೋಡು ಕೆಮ್ಮಣ್ ಗುಂಡಿ !

ಆಫೀಸ್‍ನಿಂದ ಸಂಜೆ ಏಳು ಘಂಟೆಗೆ ಹೊರಟು, ೭.೪೫ ಕ್ಕೆ ಮನೆ ತಲುಪಿ, ಗಡಿಬಿಡಿಯಲ್ಲಿ ಹೊರಡುತ್ತಿರುವಾಗ ಬಂತು ಎಸ್‍ಎಮೆಸ್ `ಬಾಲರಾಜ್ ಬರೋಲ್ವಂತೆ'. ಓಓಓಓ!!! ಛೇಏಏಏ !!!! ಅಂದುಕೊಂಡು, ಹಾಗೂ ಹೀಗೂ ೮.೪೫ ಕ್ಕೆ ಮನೆ ಬಿಟ್ಟು, ಬಸ್ಸಿಗಾಗಿ ಕಾದು ೯ ಘಂಟೆಗೆ ಬಂದ ಮೆಜೆಸ್ಟಿಕ್ ಬಸ್ಸಲ್ಲಿ ಸವಾರಿ ಹೊರಟೆ.

೯.೩೦ ಕ್ಕೆ, ಕೆ.ಎಸ್.ಆರ್.ಟಿ.ಸಿ ವಿಚಾರಣಾ ಕಿಟಕಿ ಹತ್ತಿರ ಬಂದಾಗ ಡೀನ್ ಆಗಲೇ ಬಂದು ಕಾಯುತ್ತಿದ್ದ, ಅರುಣ್ ಇನ್ನೇನು ಬರುತ್ತಾನೆ ಎಂಬ ಸುದ್ದಿ ಸಿಕ್ಕಿತು. ಅರುಣ್ ಬಂದ ಮೇಲೆ ನೇರಂಬಳ್ಳಿ ಹೋಟೇಲ್‍ನವರು ಕೊಟ್ಟ ಊಟ ಮಾಡಿ, ಅರುಣ ಕಾಲುಚೀಲ ಕೊಂಡ ಮೇಲೆ ಬಂದು ೧೦.೩೦ ಕ್ಕೆ ಬಸ್ಸೇರಿದೆವು. ವೇಗದೂತ ಬಸ್ಸು, ಯಮದೂತನಂತೆ ಓಡಿತು.

ಬೆಳಗ್ಗೆ ೩.೪೫ - ೪.೦೦ ಕ್ಕೆ ತರಿಕೆರೆಯಲ್ಲಿಳಿದು ಅಲ್ಲಿಯ ಬಸ್‍ಸ್ಟಾಂಡ್‍ಗೆ ಬಂದು ಅಲ್ಲಿ ಮಲಗಿದ್ದ ಇಬ್ಬರು ಡ್ರೈವರ್‍‍ಗಳನ್ನು ನೋಡಿ ನಾವೂ ಕಟ್ಟೆಯ ಮೇಲೆ ಮಲಗಿಕೊಂಡೆವು. ೬.೦೦ ಘಂಟೆಗೆ ಪುನಹ, ನಾವು ಮೊದಲೇ ಬಸ್ಸಿಳಿದ ಜಾಗಕ್ಕೆ ಬಂದು, ಕೆಮ್ಮಣ್ಣುಗುಂಡಿ ಬಸ್ಸು ಬರಲು ಕಾದು, ನಡುವೆ ಕಾಫಿಯೂ ಕುಡಿದು, ಬಸ್ಸು ಬಂದಾಗ ಹತ್ತಿ ಜೈ ಎಂದೆವು. ೮ ಘಂಟೆ ಸುಮಾರಿಗೆ ನಮ್ಮನ್ನು `ಬಳಗಾರ' ದಲ್ಲಿ ಉದುರಿಸಿ ಬಸ್ಸು ಮುಂದೆ ಹೋಯಿತು. ನಮಗಾಗೇ ಕಾಯುತ್ತಿದ್ದಂತೆ ಜೀಪ್ ಡ್ರೈವರೊಬ್ಬ ಬಂದು ಕೆಮ್ಮಣ್ಣುಗುಂಡಿಗೆ ೧೭೫ ರೂಪಾಯಿ ಬನ್ನಿ ಎಂದ. ಹಾಗೂ ಹೀಗೂ, ಚರ್ಚಿಸಿ ಸ್ವಲ್ಪ ಕಡಿಮೆಗೆ ಆತನನ್ನು ಒಪ್ಪಿಸಿ ಕೆಮ್ಮಣ್ಣುಗುಂಡಿ ಗೇಟ್ ತನಕ ಬಂದು, ಟಿಕೆಟ್ ಪಡೆದು ಮುಂದಡಿಯಿಟ್ಟೆವು. ತೋಟಗಾರಿಕೆ ಇಲಾಖೆಯ ಪ್ರವಾಸಿಗರ ಕೋಣೆಯಲ್ಲಿ ಒಂದು ಕೋಣೆ ಬಾಡಿಗೆಗೆ ಪಡೆದು `ಸಾ ಪಾ ಸಾ' ಹೇಳಿ ನಂತರ ಅಲ್ಲೇ ಪಕ್ಕದಲ್ಲಿ ಇರುವ ಹೋಟೇಲ್‍ಗೆ ಬಂದು ಚಿತ್ರಾನ್ನ ತಿಂದೆವು. ಆಗಾಗಲೇ ಇಬ್ಬರು - ಮೂವರು ಜೀಪ್ ಡ್ರೈವರ್‍ಸ್ ಹೆಬ್ಬೆ ಜಲಪಾತಕ್ಕೆ ನಮಗೆ ಜೀಪ್‍ನಲ್ಲೇ ಹೋಗಿ ಬರಲು ಆಹ್ವಾನ ನೀಡಿದ್ದರು. ಒಬ್ಬ ೮೦೦ ರೂ, ಇನ್ನೊಬ್ಬ ೫೫೦ ಮತ್ತೊಬ್ಬ ೫೦೦ ಹೇಳಿ, ಬೇರೆ ಯಾರಾದರೂ ಇದ್ದರೆ ನೀವುಗಳು ವೆಚ್ಚವನ್ನು ಹಂಚಿಕೊಳ್ಳಬಹುದು ಎಂಬ ಉಚಿತ ಸಲಹೆಯನ್ನೂ ಕೊಟ್ಟರು. ನಾವು ಬಡವಾ ನೀ ಮಡಿಗಿದಂಗಿರು ಅಂತ ಅವರಿಗೆ ನಮಸ್ಕಾರ ಹೇಳಿದೆವು. ಹೊರಟಾಗ ಮೂರು ನಾಯಿಗಳು ನಮ್ಮನ್ನು `ಗಿರಿ ಹೋಟೇಲ್' (ಪುಟ್ಟ ಕಾಕಾ ಹೊಟೇಲ್ ಥರದ್ದು) ಪಕ್ಕ ತಂದು ಬಿಟ್ಟು ಕಾಣೆಯಾದವು. ಅಲ್ಲಿ ಹೋಟೇಲ್‍ನಲ್ಲಿ ಮಧ್ಯಾಹ್ನ ಊಟಕ್ಕಾಗಿ ಪುಳಿಯೋಗರೆ ಕಟ್ಟಿಸಿಕೊಂಡು ಇನ್ನೇನು ಹೊರಡಬೇಕು ಎನ್ನುವಷ್ಟರಲ್ಲಿ ಒಬ್ಬ ವ್ಯಕ್ತಿ ಬಂದು `ಜಲಪಾತಕ್ಕೆ ಹೋಗುವಿರಾ, ಜೀಪಲ್ಲಿ ಹೋಗುತ್ತೀರಾ' ಎಂದಾಗ ಮತ್ತೆ... ಇದ್ಯಾವ ಗ್ರಹಚಾರ ಎಂದು ಹೌದು, ಇಲ್ಲ ಎಂದೆವು. ಹಾಗಾದರೆ ಯಾಕೆ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತೀರಾ? ಬನ್ನಿ ಒಳದಾರಿ (ಕಾಲು ದಾರಿ) ತೋರಿಸುತ್ತೇನೆ ಎಂದು ನಮ್ಮನ್ನು ಜಲಪಾತದ ರಸ್ತೆಯ ವಿರುದ್ಧ ದಿಕ್ಕಿಗೆ ಕರೆದೊಯ್ದ. (ಬೆಂಗಳೂರಿನಲ್ಲಾದರೆ ಆತನ ಬಗ್ಗೆ ಸಂಶಯ ಪಟ್ಟುಕೊಂಡು ಏನು ಮಾಡುತ್ತಿದ್ದೆವೋ, ಇಲ್ಲಂತೂ ಪುಂಗಿಯ ನಾದಕ್ಕೆ ಮನಸೋತಂತೆ, ಕಿಂದರಿ ಜೋಗಿಯ ಕೊಳಲಿಗೆ ಮರುಳಾದಂತೆ ಆತನ ಹಿಂದೇ ಹೋದೆವು). ಆ ವ್ಯಕ್ತಿಯ ಹೆಸರು `ದೇವಣ್ಣ' ಎಂದು ತಿಳಿಯಿತು. ಹೊರಡುತ್ತಿರುವಾಗ ಒಂದು ನಾಯಿ ಹೊಟೇಲ್ ಪಕ್ಕದಿಂದ ನಮ್ಮ ಜೊತೆಗೆ ಬಂತು. (ದೇವಣ್ಣ ಭರವಸೆ ಕೊಟ್ಟಂತೆ ಆ ನಾಯಿ ನಮ್ಮ ಚಾರಣ ಸುರುವಾದಲ್ಲಿಂದ ನಾವು ಪುನಹ ಗೂಡು ಸೇರುವವರೆಗೆ ನಮ್ಮ ಜೊತೆಗೇ ಇತ್ತು).

ಮುಖ್ಯರಸ್ತೆಯಿಂದ ಕೆಳಗಿಳಿದು ಒಂದು ಹಳ್ಳದವರೆಗೆ ನಮ್ಮ ಜೊತೆ ಬಂದ ದೇವಣ್ಣ, ನಾಯಿ ನಮ್ಮ ಜೊತೆಗೇ ಇರುವುದು ಎನ್ನುವ ಧೈರ್ಯ ಕೊಟ್ಟು ಹೊರಟೇಬಿಟ್ಟ. ನಾವೂ ಮುಂದುವರಿದೆವು. ಮುಂದೆ ಹೋದಂತೇ ನಾವು ರಸ್ತೆಯಲ್ಲೇ ಹೋಗುತ್ತಿದ್ದರೆ ಕಳೆದುಕೊಳ್ಳುತ್ತಿದ್ದುದೇನೆಂದು ಮನವರಿಕೆಯಾಗತೊಡಗಿತು. ಗಿಡಮರಗಳ ಮಧ್ಯೆ, ಹಳ್ಳಕೊಳ್ಳಗಳ ಮಧ್ಯೆ ಹೋಗುವ ಅನುಭವಕ್ಕೂ ಕುದುರೆಯಂತೆ ಒಂದೇ ರಸ್ತೆಯಲ್ಲಿ ಹೋಗುವುದಕ್ಕೂ ಬಹಳ ವ್ಯತ್ಯಾಸವಿದೆ. ನಿಜಕ್ಕೂ ದೇವಣ್ಣ ದೇವರಂತೆ ಬಂದು ನಮಗೆ ದಾರಿ ತೋರಿದ !

ನಾಯಿ ನಾಯಿ ಅನ್ನುವ ಬದಲು ಒಂದು ಹೆಸರು ಕೊಡುವ ಎಂದು ನಾನಂತೂ ಕೆಮ್ಮಣ್ಣುಗುಂಡಿಯದಲ್ಲವೇ, ಎಂದು ಮನಸ್ಸಿಗೆ ಬಂದಂತೆ, `ಕೆಮ್ಮಿ' ಎಂದು ಕರೆದೆ, ಅದಕ್ಕೆ ಇಷ್ಟವಾಗಲಿಲ್ಲ ಎಂದನಿಸಿ, ನನಗೆ ಕೆಮ್ಮು ಬರುವಂತಾಯಿತು. ಕೊನೆಗೆ ಅರುಣ `ರಾಣಿ' ಎಂದು ಕರೆದಾಗ ಇದೇ ಸರಿ ಎನ್ನಿಸಿತು.

ರಾಣಿ, ನಿಜವಾಗಿಯೂ ಅದು ರಾಣಿಯೇ. ನಮಗೆ ದಾರಿ ತೋರಿಸುವಂತೆ ಮುಂದೆ ನಡೆಯುತ್ತಿತ್ತು, ನಾವೇನಾದರೂ ನಿಂತರೆ ಅದೂ ನಿಲ್ಲುತ್ತಿತ್ತು.

ಕಾಲುದಾರಿ ಮುಗಿದು, ಮತ್ತೆ ರಸ್ತೆಗೆ ಬಂದೆವು. ಆದರೆ ಒಂದು ಸಲ ಮದ್ಯ ಕುಡಿದು ಅಮಲಿನ ರುಚಿ ಹಿಡಿದವರು ಪುನಹ ಅದಕ್ಕಾಗಿ ಹಾತೊರೆಯುವಂತೆ ಇನ್ನೆಲ್ಲಾದರೂ ಕಾಲುದಾರಿ ಇದೆಯೇ ಎಂದು ಯೋಚಿಸುತ್ತಾ ನಡೆವಾಗ ಒಂದು ಮನುಷ್ಯ ಜೀವಿ ಮೇಲೆ ಗುಡ್ಡದಿಂದ ಧುಡುಂ ಎಂದು ಧುಮುಕಿತು. ನಾವು ಅದು ಯಾರು ಏನು ಎಂದು ನೋಡುವ ಬದಲು, ಜಲಪಾತಕ್ಕೆ ಹೋಗಲು ಇನ್ನೆಲ್ಲಾದರೂ ಕಾಲುದಾರಿ ಇದೆಯೇ ಎಂದು ಕೇಳಿದೆವು. ಇದೆ ಬನ್ನಿ ತೋರಿಸುತ್ತೇನೆಂದು ಹೇಳಿದ ವ್ಯಕ್ತಿ ಭರ್ರ್ರ್ರ್ ಎಂದು ಹೋದ ವೇಗಕ್ಕೆ ನಾನಂತೂ ಸ್ವಲ್ಪ ದೂರ ದಢ ದಢ ಎಂದು ಓಡಲೇ ಬೇಕಾಯಿತು. ಆದರೂ ಸ್ವಲ್ಪ ಹೊತ್ತಿಗೆಲ್ಲ ಆ ವ್ಯಕ್ತಿ ಕಾಣೆ, ನೋಡಿದರೆ ನಮ್ಮ `ರಾಣಿಯೂ' ಆತನೊಂದಿಗೇ ಓಟ. ಛೇ ಇದು ನಿಜವಾಗಿಯೂ ನಾಯಿಯೇ... ನಮ್ಮನ್ನು ಬಿಟ್ಟೇ ಹೋಯ್ತು ಎಂದೆಲ್ಲಾ ಅಂದುಕೊಂಡು ಸ್ವಲ್ಪ ಮುಂದೆ ಬಂದರೆ, ಪಾಪ ರಾಣಿ ನಮಗಾಗಿ ಕಾಯುತ್ತಾ ನಿಂತಿತ್ತು. ಆತ ಅಲ್ಲೇ ಇನ್ನೊಂದು ಗುಡ್ಡದಲ್ಲಿ ನಿಂತು ಒಬ್ಬನೇ ಮಾತಾಡಿಕೊಳ್ಳುತ್ತಿದ್ದ. ಆಗ ಗೊತ್ತಾಯಿತು ಆತ ಟೆಲಿಫೋನ್ ಲೈನ್ ಮ್ಯಾನ್, ಫೋನಲ್ಲಿ ಮಾತಾಡುತ್ತಿದ್ದಾನೆ ಅಂತ. ನಮ್ಮ ರಾಣಿ ನಿಂತಿದ್ದ ಜಾಗವೇ ಇನ್ನೊಂದು ಕಾಲುದಾರಿಯ ಪ್ರಾರಂಭ. ಆತ ಕೂಗಿ ಹೇಳಿದ `ಇದೇ ದಾರಿಯಲ್ಲಿ ಮುಂದೆ ಹೋಗಿ' ಎಂದು. ಆತನನ್ನು ಆತನ ಪಾಡಿಗೆ ಬಿಟ್ಟು ರಾಣಿಯೊಂದಿಗೆ ಹೊರಟು, ಮುಂದೆ ನೋಡಿದರೆ!!!!!

ಸ್ವರ್ಗ ಎಂಬುದು ಭೂಮಿಯಲ್ಲೇ ಇದೆ, ನಮ್ಮ ಕಣ್ಣು ಮನಸ್ಸುಗಳಲ್ಲಿದೆ ಎಂಬ ಮಾತು ನಿಜ ಎನ್ನಿಸಿತು. ಅಧ್ಭುತವಾದ ದೃಶ್ಯವದು. ಮಳೆಗಾಲದ ವಾತಾವರಣ, ಸುತ್ತಲೂ ಹಸಿರೇ ಹಸಿರು, ಮುಂದೆ ದೂರದಲ್ಲಿ ಬೆಟ್ಟಗಳ ಸಾಲು ನೀಲಿಯಾಗಿ, ಅಕ್ಕ ಪಕ್ಕ ಹಸಿರಾಗಿ... ಆಹಾ.....!!!! ಎಂಥಾ ಸುಂದರ ಹಾಗೂ ರಮ್ಯ ನೋಟವದು. `ಸ್ವರ್ಗದಿಂದ' ಇಳಿದು ಮುಂದೆ ಬಂದಾಗ ರಸ್ತೆ ಸಿಕ್ಕಿದರೂ ಅಲ್ಲಿ ರಸ್ತೆಯಿದೆ ಎಂದು ಗೆರೆ ಹಾಕಿ ಹೇಳಬೇಕಿತ್ತು. ಆಗ ತಿಳಿಯಿತು ನಮಗೆ, ಯಾಕೆ ಜೀಪ್‍ನವರು ಅಷ್ಟು ಇಷ್ಟು ಎಂದು ಹೇಳುತ್ತಾರೆಂದು. ಮುಂದೆ ಹೋಗುತ್ತಾ, ಸಿಕ್ಕಿದ ಮತ್ತೊಬ್ಬ ವ್ಯಕ್ತಿಯನ್ನು ಮರ್ಯಾದೆ ಬಿಟ್ಟ ವ್ಯಸನಿಗಳಂತೆ ಕೇಳಿದೆವು `ಇನ್ಯಾವುದಾದರೂ ಕಾಲುಹಾದಿ ಇದ್ಯೇನ್ರೀ ಜಲಪಾತಕ್ಕೆ...' ಆತ `ಇಲ್ಲ, ಇನ್ನು ಮೂರು ಕಿ.ಮೀ ರಸ್ತೆಯಲ್ಲೇ ಹೋದರೆ ಜಲಪಾತ ಸಿಗುತ್ತದೆ' ಎಂದ. ಸರಿ ಎಂದು ನಡೆದಾಗ ರಾಣಿಗಿನ್ನೂ ಅಮಲು ಬಿಟ್ಟಿರಲಿಲ್ಲ, ಕಾಲುದಾರಿ ಹುಡುಕಲು ನಡೆದಿತ್ತು. ನಾವು ಕೂಗಿ ಕರೆದು ರಸ್ತೆಯಲ್ಲೇ ನಡೆಸಿದೆವು.

ನಡೆದು ನಡೆದು ಹೋದಂತೆ ನೀರು ಬೀಳುವ ಶಬ್ಧ ಕೇಳಿದಂತೆ, ಇದೇ ಇರಬಹುದೇ ಇದೇ ಇರಬಹುದೇ ಎಂದು ಚರ್ಚಿಸುತ್ತಾ ಹೋದಾಗ ರಸ್ತೆ ಕವಲೊಡೆದು ಬಲದಲ್ಲಿ ಒಂದು ಗೇಟ್, ಎಡದಲ್ಲಿ ಇನ್ನೊಂದು ರಸ್ತೆ. ಎಡದಲ್ಲಿ ನಡೆದು ಮುಂದೆ ಹೋದಂತೆ ದೂರ, ಬೆಟ್ಟದಲ್ಲಿ ಯಾರೋ ನಿಂತು ಬೆಳ್ಳಗಿನ ಶಾಲನ್ನು ಅಲುಗಾಡಿಸುತ್ತಿರುವುದು ಕಾಣಿಸಿತು. ಯಾರಿರಬಹುದು ಎಂದು ಕುತೂಹಲ ಪಟ್ಟುಕೊಂಡು ಹೋಗುತ್ತಿರುವಾಗ ನಮಗೆ ಜ್ನಾನೋದಯವಾಯಿತು..... ಓ...... ಇದೇ ಹೆಬ್ಬೆ ಫಾಲ್ಸ್!!!!!

ಆ... ಓ.. ಎಂದು ಕಿರುಚುತ್ತಾ (ನಿಶ್ಯಬ್ಧವಾಗಿ) ಚುರುಕಾದೆವು. ಅರುಣನ ಪ್ರಕಾರ ಜಲಪಾತ ಅಷ್ಟು ಶಬ್ಧ ಮಾಡುತ್ತಿರಲಿಲ್ಲ..... ನಡೆದೆವು ನಡೆದೆವು... ಅಷ್ಟರಲ್ಲಿ ಒಂದು ಚಿಕ್ಕ ಗೇಟ್ ಕಾಣಿಸಿ, `ಓ ದಾರಿ ತಪ್ಪಿ ಯಾವುದೋ ಎಸ್ಟೇಟ್ ಮನೆಗೆ ಬಂದೆವೇನೋ' ಎಂದು ಅರೆಕ್ಷಣ ಯೋಚಿಸಿದರೂ ನಮಗೆ ಸೆಕ್ಯುರಿಟಿಯವರು ಇಬ್ಬರು ಕಾಣಿಸಿದಾಗ ಸಮಾಧಾನವಾಯ್ತು. ಗೇಟ್ ಹತ್ತಿರ ಕೇಳಿದೆವು `ಹೆಬ್ಬೆ ಫಾಲ್ಸ್' ಎಂದು. ಅವರು ತಲೆಯಾಡಿಸಿ, `ರುಕೋ' ಅಂದಾಗ ಆಶ್ಚರ್ಯವಾಯಿತು. ನಮ್ಮ ರಾಣಿಯಂತೂ ಅಷ್ಟು ಹೊತ್ತು ಸೌಮ್ಯವಾಗಿದ್ದಿದ್ದು ಗುರ್ ಗುರ್ ಎನ್ನತೊಡಗಿದಾಗ ನೋಡಿದರೆ ಅಲ್ಲೊಂದು ಕಪ್ಪು ನಾಯಿ! ಹೇಗೋ ಎರಡೂ ಜಗಳಾಡದಂತೆ, ದೂರ ಕರೆದುಕೊಂಡು ಹೊರಡುವ ಮೊದಲು ಸೆಕ್ಯುರಿಟಿಯವರು ನಮ್ಮಲ್ಲಿದ್ದ ಒಂದೇ ಒಂದು ಬ್ಯಾಗನ್ನೂ ಪರೀಕ್ಷಿಸಿ `ಡ್ರಿಂಕ್ಸ್ ತೋ ನಹೀ ಹೇನಾ' ಅಂದಾಗ ನಾವೇನು ಕಮ್ಮಿ ಎಂದು `ಹಂ ತೋ ಡ್ರಿಂಕ್ಸ್ ಕರ್ತೇಹೀ ನಹೀ' ಎಂದು ಭಾಷಾ ಪಾಂಡಿತ್ಯ ಮೆರೆದೆವು (ಕನ್ನಡಿಗರು ಕನ್ನಡ ಬಿಟ್ಟು ಬೇರೆಲ್ಲಾ ಭಾಷೆ ಮಾತಾಡುತ್ತಾರೆ ಅನ್ನುವುದನ್ನು ಪ್ರತಿಪಾದಿಸಿದೆವು).

ಮುಂದೆ ಹೋದಾಗ ಒಂದು ಹಳ್ಳ. ಪ್ರಾರಂಭದಲ್ಲಿ ಜಾಗ್ರತೆಯಾಗಿ, ಹಾಕಿಕೊಂಡಿರುವ ಶೂಸ್ ಒದ್ದೆಯಾಗದಂತೆ ಹೊರಟರೂ ನೀರಿನಿಂದ ತಪ್ಪಿಸಿಕೊಳ್ಳಲಾಗಲಿಲ್ಲ. ಆಮೇಲೆ ನಾನೂ ಅರುಣನೂ ರಾಜಾರೋಷವಾಗಿ ಶೂ ಹಾಕಿಕೊಂದೇ ನೀರಿಗಿಳಿದರೆ ಡೀನ್ ಬುದ್ಧಿ ಉಪಯೋಗಿಸಿ, ಶೂಸ್ ಬಿಚ್ಚಿ ನಿಧಾನ ನಡೆದು ಬಂದ, ಜೊತೆಗೆ ಅವನಿಗೆ ರಾಣಿಯ ಚಿಂತೆ. ಅದು ಅತಿ ಜಾಗ್ರತೆಯಾಗಿ ಕಲ್ಲಿಂದ ಕಲ್ಲಿಗೆ ಕಾಲಿಡುತ್ತಾ, ಮುಂದೆ ಕಲ್ಲಿಲ್ಲ ಎಂದಾಗ ಹಿಂದೆ ಹೋಗಲು ನೋಡುತ್ತಾ ಇತ್ತು. ಈ ಮಹಾಶಯ ಅದನ್ನು ಎತ್ತಿಕೊಂಡು ಬರುವ ಪ್ರಯತ್ನವನ್ನೂ ಮಾಡಿದ. `ಇಲ್ಲ ಅದೇ ಬರುತ್ತದೆ' ಎಂದರೂ ಅವನಿಗೆ ಸಮಾಧಾನವಾಗಲಿಲ್ಲ, ಅಸಮಾಧಾನದಿಂದಲೇ ಇತ್ತಕಡೆ ಬಂದಾಗ ರಾಣಿ ತಾನು ಈಜು ಚಾಂಪಿಯನ್ ಅನ್ನುವಂತೆ ಈಜಿಕೊಂಡು ಬಂತು. (ಅದು ನಮ್ಮ ಕ್ಯಾಮರಾದಲ್ಲಿ ದಾಖಲಾಗಿದೆ). ಎರಡು ಹೆಜ್ಜೆ ಮುಂದೆ ಬಂದಾಗ ಮತ್ತೊಮ್ಮೆ ಹಳ್ಳ ದಾಟಬೇಕಾಯ್ತು, ಈಗಂತೂ ಖುಶಿಯಲ್ಲಿ ಕುಣಿದಾಡಿಕೊಂಡು ಹೋದೆವು. (ಒಂದೇ ಹಳ್ಳ, ತಿರುಗಿ ತಿರುಗಿ ಬರುವಾಗ ನಾವು ಮೂರು ಕಡೆ ಅದನ್ನು ದಾಟಬೇಕಾಗುತ್ತದೆ). ಒಂದು ಸುತ್ತು ಮುಂದೆ ಹೋದಾಗ ಮತ್ತೊಂದು ಹಳ್ಳ ! ಅಷ್ಟರಲ್ಲಾಗಲೇ ಜಲಪಾತ ನಮ್ಮ ಕಣ್ಣೆದುರು ಬಿಚ್ಚಿಕೊಂಡು, ಮುಚ್ಚಿಕೊಂಡು ನಲಿದಾಡುತ್ತಿತ್ತು.

ಹೆಬ್ಬೆ! ಅಧ್ಭುತ, ಅತ್ಯಧ್ಭುತ, ಜೋಗ ಜಲಪಾತ ನೋಡಿದಾಗಲೂ ನನಗೆ ಇಲ್ಲಿ ಆದ ಧನ್ಯತಾ ಭಾವ ಉಂಟಾಗಿರಲಿಲ್ಲ. ನಿಜವಾಗಿಯೂ ಸೃಷ್ಟಿ ಎಷ್ಟು ನಿಗೂಢ ಮತ್ತು ಅಧ್ಭುತ. ಆ ಪ್ರಕೃತಿ ತಾಯಿಯೆದುರು ನಾವೇನೂ ಅಲ್ಲ. ಒಂದು ಹಂತದಿಂದ ಇನ್ನೊಂದು ಹಂತಕ್ಕೆ ಬೀಳುತ್ತಾ ಅಲ್ಲಿಂದ ಕೆಳ ಜಾರುತ್ತಾ, ಗಾಳಿಯೊಂದಿಗೆ ತೂರಾಡುತ್ತಾ, ನೀರ ಸಿಂಚನಗೈಯ್ಯುತ್ತಾ..... ಅದೂ ರಾಜ ಗಾಂಭೀರ್ಯದಿಂದ. ನಂತರ ಪ್ರಶಾಂತವಾಗಿ ಹರಿಯುತ್ತದೆ ಹೆಬ್ಬೆ ! (ನದಿಯ ಹೆಸರು ಗೊತ್ತಿಲ್ಲ). ಅಮ್ಮನ ಸೆರಗಿನಡಿಯಲ್ಲಿ ಅವಿತುಕೊಳ್ಳ ಬಯಸುವ ಮಕ್ಕಳಂತೆ ಜಲಪಾತದ ಸೆರಗಿನ ತನಕ ಹೋಗಲಿಚ್ಛಿಸಿದೆವು. ಅಷ್ಟೆಲ್ಲಾ ನೀರು ಬೀಳುತ್ತಿದ್ದರೂ ಜಲಪಾತ ರೌದ್ರವಾಗಿರಲಿಲ್ಲ, ನಿಜಕ್ಕೂ ತಾಯಿಯಂತೆ ಸಮಾಧಾನಿಯಾಗಿತ್ತು. ನಮ್ಮನ್ನು ತನ್ನ ಕಾಲ ಬುಡದವರೆಗೂ ಸ್ವಾಗತಿಸಿ, ಪನ್ನೀರ (ತಣ್ಣೀರ) ಸಿಂಪಡಿಸಿ ಸತ್ಕರಿಸಿತು. ಅಲ್ಲಿಂದ ಹೊರಡುವ ಮನಸ್ಸೇ ಇಲ್ಲ ನಮಗೆ. ಆದರೂ.... ರಜೆ ಮುಗಿದು ದೂರದ ಊರಿನ ಶಾಲೆಗೆ ಹೋಗುವ ಮಕ್ಕಳಂತೆ ತಿರುತಿರುಗಿ ಆಕೆಯನ್ನೇ ನೋಡುತ್ತಾ (ಕಣ್ಣಲ್ಲಿ ನೀರೊಂದು ತುಂಬಿರಲಿಲ್ಲ ಅಷ್ಟೆ) ಹೊರಟೆವು.

ಹಳ್ಳದ ಪಕ್ಕ ಕುಳಿತುಕೊಂಡು ಪಟ್ಟಾಗಿ ಪುಳಿಯೋಗರೆ ಚಕ್ಕುಲಿ, ಬಿಸ್ಕಿತ್ - ರಾಣಿಗೂ ಕೊಟ್ಟು, ನಾವೂ ತಿಂದು, ಅಲ್ಲೇ ಹಳ್ಳದಿಂದ ನೀರು ಕುಡಿದು ವಾಪಾಸ್ ಹೊರಟೆವು. ಹೋಗುವಾಗಲೂ ಬರುವಾಗಲೂ ರಕ್ತಬೀಜಾಸುರ ಜಿಗಣೆ ನಮ್ಮನ್ನು ಮುತ್ತಿಕ್ಕುತ್ತಿತ್ತು. ದಾರಿಯಲ್ಲಿ, ಆಹಾ.... ಎಂಥಾ ಸುಂದರ ಚಿಟ್ಟೆ, ಓಹೋ ಎಷ್ಟು ಚೆಂದದ ಹೂವು ಅಂದುಕೊಳ್ಳುತ್ತಾ ವಾಪಾಸ್ ಹೊರಟೆವು. ಬರುತ್ತಾ ಪುನಹ ಒಳದಾರಿಗಳಲ್ಲೇ ಬಂದೆವು.

`ಗಿರಿ ಹೋಟೇಲ್' ಬಳಿ ಬಂದಾಗ ಘಂಟೆ ೪.೦೦ ಆಗಿತ್ತು. ಪುನಹ ರಾಣಿಗೆ ಪುಳಿಯೋಗರೆ ಕೊಡಿಸಿದೆವು. ದೇವಣ್ಣ ಅಲ್ಲಿ ಸಿಕ್ಕಿದಾಗ ಧನ್ಯವಾದಗಳನ್ನರ್ಪಿಸಿ (ಹೃದಯದಿಂದ), `ನಮ್ಮ ಹೋಟೆಲ್‍'ಗೆ ಬಂದು ಬಿಸಿ ಬಿಸಿ ಊಟ ಮಾಡಿದೆವು. ನಂತರ ಪುನಹ ರೂಮಿಗೆ ಹೋಗಿ ಬಟ್ಟೆ ಬದಲಾಯಿಸಿ (ಪೂರ್ತಿ ಒದ್ದೆಯಾಗಿತ್ತು) `ಝೆಡ್ ಪಾಯಿಂಟ್' ಹಾಗೂ ಶಾಂತಿ ಫಾಲ್ಸ್‍ಗೆ ಹೊರಟೆವು. ರಾಣಿ ತನ್ನ ಬದಲು ಇನ್ನೊಂದು `ಹುಡುಗಿ' ಯನ್ನು ಕಳಿಸಿತ್ತು ಜೊತೆಗೆ. ಅದಕ್ಕೆ `ಗೋಣಿ' ಎಂದು ಹೆಸರಿಟ್ಟೆವು. ಗೋಣಿ ರಾಣಿಯಂತಲ್ಲ, ಪುಕ್ಕಲು ಸ್ವಭಾವ ಹಾಗೂ ಇನ್ನೂ ಹುಡುಗಿಯಾಟಿಕೆ. ನನ್ನ ಪಕ್ಕದಲ್ಲೆ ಸುಳಿದಾಡುತ್ತಾ ಕೆಸರು ನೀರು ಸಿಡಿಸುತ್ತಾ, ನನ್ನ ಕಾಲಿಗಡ್ಡ ಬರುತ್ತಾ ನನ್ನಿಂದ ಬೈಯ್ಯಿಸಿಕೊಂಡಿತು. ಕೋತಿಗಳಿಗೆ ಹೆದರಿ ನಮ್ಮ ಪಕ್ಕದಲ್ಲೇ ಅಮರಿಕೊಂಡರೂ, ಪಾಪ ಝೆಡ್ ಪಾಯಿಂಟ್‍ವರೆಗೂ ಬಂತು.

ಶಾಂತಿ ಫಾಲ್ಸ್ ಮೊದಲು ಸಿಗುತ್ತದೆ. ನಂತರ ಝೆಡ್ ಪಾಯಿಂಟ್. ದಾರಿ ಝೆಡ್ ಆಕಾರದಲ್ಲಿ ಕೊರೆದಿರುವುದರಿಂದ ಬಹುಶಃ ಈ ವ್ಯೂ ಪಾಯಿಂಟ್‍ಗೆ ಝೆಡ್ ಪಾಯಿಂಟ್ ಎಂದು ಹೆಸರಿಸಿರಬೇಕು.

ವಾವ್!!!! ಇದೂ ಅಷ್ಟೇ. ನಿಜಕ್ಕೂ ಅದ್ಭುತ. ಸುತ್ತಲೂ ತಿಳಿ ಹಸಿರು ಕೋಟ್ ಹಾಕಿ ನಿಂತಿರುವ ಬೆಟ್ಟ, ಕೆಳಗೆ ದಟ್ಟ ಹಸಿರು ಹಾಸು ಹೊದ್ದು ಮಲಗಿದ ಕಾಡು. ಸುಂದರ, ಅತಿ ಸುಂದರ. ದಾರಿಯುದ್ದಕ್ಕೂ ಇದ್ದ ಗಿಡಗಳು ತಾವು ಸಂಗ್ರಹಿಸಿದ ಮಳೆ ನೀರಿನಿಂದ ಕಾಲುಗಳನ್ನು ತೊಳೆಸಿಯೇ ಮೇಲೆ ಬಿಡುತ್ತಿದ್ದುವು. ನಾವು ಅಲ್ಲಿ ತಲುಪಿದಾಗ ನಮಗೆ ಸಮಯಾವಕಾಶ ಬಹಳ ಕಡಿಮೆಯಿತ್ತು ಬೇಗ ಪುನಹ ರಸ್ತೆ ಸೇರದಿದ್ದರೆ, ಝೆಡ್ ಪಾಯಿಂಟ್‍ನಿಂದ ನೇರವಾಗಿ ಝೀರೋ ಪಾಯಿಂಟ್‍ಗೆ ಬೀಳುವ ಸಂಭವವಿತ್ತು. ಅಷ್ಟು ಕಡಿದಾದ ದಾರಿ. ಮನಸ್ಸಿಲ್ಲದ ಮನಸ್ಸಿನಿಂದ ತಿರುಗಿ ಬಂದು ರೂಮಿಗೆ ಹೋಗಿ ತಣ್ಣೀರಲ್ಲಿ ಸ್ನಾನ ಮಾಡಿ ರಾತ್ರೆ ಊಟ ಮಾಡಿ ಮಲಗಲು ಬಂದಾಗ ಕಿಟಕಿಯಲ್ಲಿ ಒಂದು ಅತಿಥಿ ನಮ್ಮದೇ ದಾರಿ ಕಾಯುತ್ತಿತ್ತು. ಕಾಟೇಜ್‍ನ ರಾಮೇ‍ಗೌಡರಿಗೆ ಹೋಗಿ ಹೇಳಿದಾಗ ಆತ ಬಂದು ಆ ಅತಿಥಿಯನ್ನು ಈಚೆ ಕರೆದು ಕೋಲಿನಿಂದ ಹೊಡೆದು ಕೊಂದೇ ಹಾಕಿದಾಗ, ನಮ್ಮ ಅರುಣನ ಸಂಕಟ ಹೇಳತೀರದ್ದು. `ಛೇ ಅನ್ಯಾಯವಾಗಿ ಒಂದು ಜೀವ ಹೋಗಲು ಕಾರಣನಾದೆನಲ್ಲಾ' ಎಂದು ಅಲವತ್ತುಕೊಂಡ ಪಾಪ. (ಹೂಂ. ಹೌದು ಆ ಅತಿಥಿ ಹಾವು !) ಅಂತೆಯೇ ರಾಮೇಗೌಡ, ರಾಣಿಯನ್ನೂ ಹೊಡೆದು ಕಾಟೇಜಿನೊಳಗಿಂದ ಹೊರಹಾಕಿದಾಗ ನಮಗೂ ಅಯ್ಯೋ ಪಾಪ ಅನ್ನಿಸಿತು.

ಬೆಳಗ್ಗೆ ೭.೦೦ ಘಂಟೆಗೆ `ರಾಜ ಭವನ' ದ ಕಡೆ ಹೋಗುವಾಗ, ರಾಣಿ ಬರದೆ, ತನ್ನ ಪ್ರತಿನಿಧಿ `ವಾಣಿ' ಯನ್ನು ಕಳುಹಿಸಿತು. (ಆದರೆ ವಾಣಿ ಮೇಲಿನ ತನಕ ಬರದೆ, ನಾವು ಕೆಳ ಬಂದ ಮೇಲೆ ರೂಮ್ ಬಳಿ ಬಂದು ನಂತರ ಬಸ್‍ಸ್ಟಾಪ್‍ನಲ್ಲಿ ಬೀಳ್ಕೊಟ್ಟಿತು). ವಾಣಿ ಅಂದರೆ, ಬೆಳ್ಳಗಿನ ಬೆಡಗಿ ಈಕೆ.

ರಾಜಭವನದಿಂದ ಸುತ್ತಲೂ ನೋಡಿದರೆ ಬಹಳ ಸುಂದರವಾದ ದೃಶ್ಯ. ಇಲ್ಲಿಂದಲೂ ಝೆಡ್ ಪಾಯಿಂಟ್ ಕಾಣಿಸುತ್ತದೆ. ನಮಗೆ ಅನ್ನಿಸಿತು, ಮೊದಲೇ ಪ್ಲಾನ್ ಮಾಡಿದ್ದಿದ್ದರೆ ಬೆಳಗಿನ ಹೊತ್ತು ಕೂಡ ಝೆಡ್ ಪಾಯಿಂಟ್‍ಗೆ ಹೋಗಿ ಆ ಸುಂದರ, ಅತ್ಯಧ್ಭುತ ದೃಶ್ಯ - ಸೂರ್ಯೋದಯ ನೋಡಬಹುದಿತ್ತು ಎಂದು. ಆದರೇನು ಮಾಡುವುದು? ಯಾವಾಗಲೂ ಕೆಟ್ಟ ಮೇಲೇ ಬುದ್ಧಿ ಬರುವುದಲ್ಲವೇ?

೮.೩೦ ಕ್ಕೆ ಕೆಳ ಬಂದು ಪ್ಯಾಕಿಂಗ್ ಮುಗಿಸಿ, ಪುನಹ `ನಮ್ಮ ಹೋಟೇಲ್‍'ಗೆ ಬಂದು ಅವಲಕ್ಕಿ ಉಪ್ಪಿಟ್ಟು ತಿಂದು ೧೦.೩೦ ಕ್ಕೆ ಬರುವ ಬಸ್ಸಿಗೆ ಲಗುಬುಗೆಯಿಂದ ಹೊರಟೆವು. ಆದರೆ ಎಷ್ಟು ಹೊತ್ತು ಕಾದರೂ ಬಾರದ ಬಸ್ಸು ನಮಗೆ ಕೈಯ್ಯೇನು ! ಕಾಲೇ ಕೊಟ್ಟಿತು. ನಂತರ ಬೇರೆ ಮೂರು ಜನ ಪ್ರವಾಸಿಗಳೊಂದಿಗೆ ಸೇರಿ ಒಂದು ಜೀಪಿನಲ್ಲಿ `ಬಳಗಾರ' ಕ್ಕೆ ಬಂದು ಇನ್ನೂ ಖಚಿತವಾಗದ ರೈಲು ಪ್ರಯಾಣವನ್ನು ನಮ್ಮ ಮಿತ್ರ ರೈಲ್ವೇ ಪ್ರಕಾಶ್ ಅವರಿಂದ ದೂರವಾಣಿಯ ಮೂಲಕ ತಿಳಿದುಕೊಂಡೆವು. (ಪ್ರಕಾಶ್‍ರವರ ಸಹಾಯವನ್ನು ಯಾವತ್ತಿಗೂ ನೆನೆಸಿಕೊಳ್ಳಬೇಕು). ಇಲ್ಲಿ ತರಿಕೆರೆ ಬಸ್ಸಿಗಾಗಿ ಕಾಯುತ್ತಿರುವಾಗ ಹಿಂತಿರುಗಿ ನೋಡಿದೆ. ಆಗ ಕಾಣಿಸಿತು ದೂರದ ಕಾಡಲ್ಲಿ ಒಂದು ಜಲಪಾತ, ಅದೇ `ಕಲ್ಲತ್ತಿ ಫಾಲ್ಸ್' ಎಂದು ತಿಳಿಯಿತು. ಇದು ಬಹಳ ಎತ್ತರದಿಂದ ಎರಡು ಹಂತಗಳಲ್ಲಿ ಬೀಳುತ್ತದೆ. ಹೆಬ್ಬೆಯಷ್ಟು ನೀರು ಇದ್ದಂತೆ ಕಾಣಿಸಲಿಲ್ಲ. (ನಾವು ನೋಡಿದಲ್ಲಿಂದ ಫಾಲ್ಸ್ ಸುಮಾರು ೧೫ ಕಿಲೋಮೀಟರ್ ದೂರದಲ್ಲಿತ್ತು).

ತರಿಕೆರೆಯಿಂದ ಶಿವಮೊಗ್ಗಕ್ಕೆ ಬಂದು ಹೋಟೇಲ್ ಅಶೋಕದಲ್ಲಿ ಊಟ ಆಗಿ, ರೂಮ್ ಬುಕ್ ಮಾಡಿ, ರೈಲ್ವೇ ಸ್ಟೇಶನ್‍ಗೆ, ಕೊನೆಯದಾಗಿ ಟಿಕೆಟ್‍ನ ಬಗ್ಗೆ ಅನುಮಾನ ಪರಿಹರಿಸಿಕೊಂಡು ಬರಲು ಹೋದೆವು. ನಮ್ಮ ಇನ್ನೊಬ್ಬ ಮಿತ್ರ ಶೇಖರ್ ಅಲ್ಲಿಗೇ ಬಂದು ನಮ್ಮನ್ನು ಕರೆದುಕೊಂಡು ಗಾಜನೂರಿನ `ತುಂಗಾ ಅಣೆಕಟ್ಟು'ಗೆ ಕರೆದೊಯ್ದರು. ಸುಂದರವಾಗಿತ್ತು, ಆದರಿನ್ನೂ ಹೊಸ ಅಣೆಕಟ್ಟು ಪೂರ್ತಿಯಾಗಿರಲಿಲ್ಲ. ಒಂದು ದೇವಸ್ಥಾನದ ಗೋಪುರದ ತುದಿ, ಹಳೆ ಅಣೆಕಟ್ಟಿನೊಳಗೆ ನೀರಲ್ಲಿ ಕಾಣಿಸುತ್ತಿತ್ತು.

ಅಲ್ಲಿಂದ ಪುನಹ ರೂಮಿಗೆ ಬಂದು ಸ್ವಲ್ಪ ಹೊತ್ತು ಮಾತಾಡಿ ಶೇಖರ್ ಹೊರಟಾಗ ಅವರನ್ನು ಬೀಳ್ಕೊಟ್ಟು ನಾವು ಮಾತಾಡುತ್ತಾ ಕಾಲ ಕಳೆದೆವು. ೮.೩೦ ಗೆ ಕೆಳಗೆ ಹೋಟೇಲ್‍ಗೆ ಬಂದು ಊಟ ಮಾಡಿ ೯.೦೦ ಕ್ಕೆ ರೂಮ್ ಖಾಲಿ ಮಾಡಿ ರೈಲು ನಿಲ್ದಾಣಕ್ಕೆ ಹೋದೆವು. ೧೦.೦೦ ಕ್ಕೆ ರೈಲು ಕೂಊಊ ಎಂದಿತು.

ಬೆಳಗ್ಗೆ ೫.೦೦ ಕ್ಕೆ ಬೆಂಗಳೂರು ತಲುಪಿ ಸಿಟಿಬಸ್ಸಲ್ಲಿ ಬಂದು ಮನೆ ತಲುಪಿದಾಗ ಒಂದು ಅಪೂರ್ವವಾದ ಅನುಭವ ಮೈ ಮನದಲ್ಲಿ ಹರಿದಿತ್ತು.

Friday, November 17, 2006

ಹೃದಯದಂಗಳದ ಹೂವು



ನನ್ನೆದೆಯಲ್ಲರಳಿದೆ ಒಂದು ಮುದ್ದಾದ ಹೂವು
ಧಾರೆ ಎರೆದಿದೆ ನನಗದರ ಸಂಪೂರ್ಣ ಒಲವು
ಅಗಾಧವಾಗಿದೆ ಆತನ ಪ್ರೀತಿಯ ಪೂರ
ಸವಿದಷ್ಟೂ ಮುಗಿಯದಿದರ ಮಧುರ

ನಾನತ್ತರೆ ಆತ ನರಳುತ್ತಾನೆ
ನಾ ನಕ್ಕರೆ ಅರಳುತ್ತಾನೆ
ನನಗೆ ಕೇಡಾದರೆ ಆತ ಕೆರಳುತ್ತಾನೆ
ನನಗೆ ನೋವಾದರೆ ತೊಳಲುತ್ತಾನೆ

ನಾ ಮುನಿದರೆ ಮುದ್ದಾಗಿ ನಗುತ್ತಾನೆ
ನನ್ನಾಸೆಗಳ ಪೂರೈಸಿ ನಲಿಯುತ್ತಾನೆ
ಬದುಕಿನಲಿ ಬಣ್ಣಗಳ ತುಂಬುತ್ತಾನೆ
ನನ್ನ ಗುರಿ ಮುಟ್ಟಿಸಲು ಗರಿಗೆದರುತ್ತಾನೆ

ನನ್ನೇಳಿಗೆ ನೋಡಿ ಪುಟ್ಟ ಮಗುವಿನಂತೆ ಹರ್ಷಿಸುತ್ತಾನೆ...
ತನ್ನ ತಾ ಸವೆಸಿ ನನ್ನ ಬದುಕಿಗೊಂದು ಅರ್ಥ ನೀಡುತ್ತಾನೆ.

ನನ್ನೆದೆಯಲ್ಲರಳಿದ ಸುಂದರವಾದ ಹೂವು ಇವನು
ಪಸರಿಸಿದ ನನ್ನ ಮೈಮನಗಳಲಿ ಪ್ರೀತಿಯ ಪರಿಮಳವನು

ನಾ ಬಯಸಿದ್ದೆ ಇಂಥದೊಂದು ಪವಿತ್ರ ಪ್ರೇಮವನು
ಕೊನೆಗೂ ನಾ ಗಳಿಸಿದೆ ಅಂಥದೊಂದು ವರವನು

Monday, November 13, 2006

ಬೆಂಗಳೂರಿನಿಂದ ಬಂಡೀಪುರಕ್ಕೆ



ರಾತ್ರೆ ೮ ಘಂಟೆಗೆ ತ್ರಿಶೂರ್ ಬಸ್ಸಲ್ಲಿ ಕೂತ ಅದಿತ್, ಡೀನ್, ರಾಜೇಶ್ ಹಾಗೂ ನಾನು ನಿರ್ವಾಹಕನ ಬೈಗುಳ ತಿನ್ನುತ್ತಾ, ಇನ್ನೂ ತಲುಪದ ಹಿಮಾನಿಗಾಗಿ ಕಾಯುತ್ತಾ........

೮.೧೫...... ಸರಿ, ಹಿಮಾನಿ ಬಂದ್ಲು, ಬಸ್ ಹೊರಡ್ತು, ವಾವ್!!!!

ಮೈಸೂರು - ನಂಜನಗೂಡು - ಗುಂಡ್ಲುಪೇಟೆ. (೨೦೦ ಕಿ.ಮೀ.), ರಾತ್ರೆ ೧೨.೧೫, ಬಸ್ಸಿಳಿದು, ಕ್ಯಾಪ್ ಬಸ್ಸಲ್ಲೇ ಮರೆತ ರಾಜೇಶ್‍ನ ಪ್ರಲಾಪ ಕೇಳುತ್ತಾ, ಗುಂಡ್ಲುಪೇಟೆಯಿಂದ ಟ್ರಕ್ ಅಥವಾ ಬಸ್ಸು ಹತ್ತಿ ಬಂಡಿಪುರಕ್ಕೆ ಹೋಗೋಣ ಎಂದು ಮುಂದೆ ಸರ್ಕಲ್ ಹತ್ರ ಬಂದೆವು. ಅಲ್ಲಿ ಕೆಲವರು ಈ ರಾತ್ರಿಯಲ್ಲಿ ಟ್ರಕ್‍ನಲ್ಲಿ ಹೋಗುವುದು ಅಪಾಯ, ಬಸ್ಸೂ ಈಗ ಇಲ್ಲ, ಎರಡು ಘಂಟೆ ಮೇಲೆ ಎಂದಾಗ ಪುನಹ ತಿರುಗಿ ವಸತಿ ಹುಡುಕುತ್ತಾ ಬಂದು `ತ್ರಿಶೂಲ್ ಲಾಡ್ಜ್' ನಲ್ಲಿ ರೂಮ್ ಮಾಡಿ ಮಲಗಿದ್ದಾಯ್ತು. ಬೆಳಗ್ಗೆ ೫ ಘಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ರೂಮ್ ಬಾಡಿಗೆ ಚುಕ್ತಾ ಮಾಡಿ ಗುಂಡ್ಲುಪೇಟೆ ಸರ್ಕಲ್ - ಅಂದ್ರೆ ಊಟಿ, ಕ್ಯಾಲಿಕಟ್ ಜಂಕ್ಷನ್‍ಗೆ ಬಂದು ಬಸ್ಸಿಗಾಗಿ ಕಾದು, ೬.೩೦ ಗೆ ತಮಿಳುನಾಡು ಬಸ್ಸು ಬಂತು. `ಹಂಗಳ' ದಾಟಿದ ಮೇಲೆ ಒಂದು ಕಮಾನು ಕಂಡಿತು, ಅದೇ ಹಿಮವದ್‍ಗೋಪಾಲ ಸ್ವಾಮಿ ಬೆಟ್ಟಕ್ಕೆ ದಾರಿ.

ಬಂಡಿಪುರ ತಲುಪಿ ಅಲ್ಲಿ ವೈಲ್ಡ್ ಲೈಫ್ ಸಾಂಕ್ಚುರಿ ರಿಸೆಪ್ಯನ್‍ನಲ್ಲಿ ರಾಜೇಶ್ ಏನೋ ಮಾತಾಡಿದ್ರು. ನಂತರ ಸೆಬಾಸ್ಟಿಯನ್ ಕ್ಯಾಂಟೀನ್‍ಗೆ ಬಂದು, ಉಪ್ಪಿಟ್ಟು ತಯಾರು ಮಾಡಿಸಿ ತಿಂದು, ೯.೦೦ ಘಂಟೆಗೆ ಟ್ರೆಕ್ ಮಾಡಲು ಪರವಾನಿಗೆ ಪಡೆದು, ದುಡ್ಡು ಕಟ್ಟಿ (ಎರಡು ದಿನ ಟ್ರೆಕ್, ಗೈಡ್ ಚಾರ್ಜ್, ಆನ್ಟಿ ಪೋಚರ್ ಕ್ಯಾಂಪ್ ಸ್ಟೇ ಮುಂತಾದುವಕ್ಕೆ). ೯.೩೦ ಕ್ಕೆ ನಮ್ಮ ಚಾರಣ ಸುರು. ಕಾಡು ದಾರಿಯಲ್ಲಿ, ಮಂಜುನಾಥ್ (ಗೈಡ್) ನೇತೃತ್ವದಲ್ಲಿ ನಡೆಯಲಾರಂಭಿಸಿದೆವು. ಜಿಂಕೆಗಳು ನಮ್ಮನ್ನು ಕಂಡು ನಾಗಲೋಟದಲ್ಲಿ ಓಡುತ್ತಿದ್ದುವು, ಕೆರೆ ಪಕ್ಕದಲ್ಲಿ ಹುಲಿಯ ಹೆಜ್ಜೆಗಳನ್ನು ನೋಡಿ ಉದ್ವೇಗಗೊಂಡೆವು. ಹಾಗೇ ಮುಂದೆ ನಡೆಯುತ್ತಾ, ೩.೫೦ ಕಿ.ಮೀ ಆದ ಮೇಲೆ ಮೂಲಾಪುರ ಬೆಟ್ಟ.

ಹೇ!!!!!! ಕಾಡು ಕೋಣ!!! ಅಬ್ಬಾ ಅದೇನು ಗಾತ್ರ ಅದರದು, ಅದೇನು ಗಾಂಭೀರ್ಯ, ನಾವು ಬಂದುದು ಕಿರಿಕಿರಿಯಾದಂತೆನಿಸಿ, ತನ್ನ ಆರಾಮದ ಮೆಲುಕನ್ನು ಬಿಟ್ಟೆದ್ದು, ನಮ್ಮತ್ತ ತಿರು ತಿರುಗಿ ನೋಡುತ್ತಾ ಸಂಶಯದ ದೃಷ್ಟಿ ಬೀರುತ್ತ ಮುಂದುವರಿದ ಮೇಲೆ, ನಾವು ಮುಂದುವರಿದೆವು. ಬೆಟ್ಟ ಇಳಿದು, `ಮೋಯರ್ ಗೊರ್ಜ್ ವ್ಯೂ' ತಲುಪಿದೆವು ಮಧ್ಯಾ‍ಹ್ನ ಎರಡು ಘಂಟೆಗೆ (೮.೪೦ ಕಿಮೀ.). ನಮ್ಮ ಕಾರ್ಯಕ್ರಮ ಪಟ್ಟಿಯಲ್ಲಿ ಮೋಯರ್ ನದಿಗಿಳಿದು ಪುನಹ ಮೇಲೆ ಹತ್ತುವುದಿತ್ತು ಆದರೆ ಸಮಯದ ಅಭಾವದಿಂದ, ಬರೀ ವ್ಯೂ ಪಾಯಿಂಟ್‍ನಲ್ಲಿ ನಿಂತು ನೋಡಿದೆವು. ಸುಂದರವಾಗಿತ್ತು ಆ ನೋಟ. ಸೆಬಾಸ್ಟಿಯನ್ ಕಟ್ಟಿ ಕೊಟ್ಟ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ, ಕೂತು, ಆಯಾಸ ಪರಿಹರಿಸಿಕೊಂಡು (೩.೧೫) ಪುನಹ ನಡೆಯಲಾರಂಭಿಸಿ, ಮುಂದುವರಿದಂತೆ, ಕ್ಯಾಂಪ್ ಹತ್ತಿರ ನಾಲ್ಕು ಆನೆಗಳನ್ನು ನೋಡಿದೆವು. ಬಂಧನದಲ್ಲಿರುವ ಪ್ರಾಣಿಗಳನ್ನು ನೋಡುವುದಕ್ಕೂ, ಸ್ವಚ್ಛಂದವಾಗಿರುವ ಪ್ರಾಣಿಗಳನ್ನು ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ.

೪.೩೦ ಕ್ಕೆ `ವಳಕಲ್ಲರೆ' ಆನ್ಟಿ ಪೋಚರ್ ಕ್ಯಾಂಪ್. (ಒಂದು ಶೆಡ್ಡ್ ಇದ್ದು, ಸುತ್ತ ಸುಂದರವಾದ ಹೂದೋಟ, ಪಪಾಯ ಗಿಡಗಳು, ಒಂದು ಬೋರ್‍ವೆಲ್, ಸುತ್ತಲೂ ಆನೆ ಬರದಂತೆ ಟ್ರೆಂಚ್. ಸ್ವಲ್ಪ ದೂರದಲ್ಲಿ ಒಂದು ನೀರಿನ ಹೊಂಡವಿದೆ). ಅರಣ್ಯ ಇಲಾಖೆಯಿಂದ ಯಾರಾದರೂ ವಾರವಿಡೀ ಇಲ್ಲಿರುತ್ತಾರೆ, ಪ್ರಾಣಿಗಳ ಸಂರಕ್ಷಣೆಗೆ.

ನಮ್ಮಂತೆಯೇ ಚಾರಣ ಬಂದ, ಆದರೆ ಒಂಭತ್ತನೇ ಸಲ ಬರುತ್ತಿರುವ ಶ್ರೀ ಪ್ರಾಣೇಶ್ ರಾವ್, ಬೆಂಗಳೂರು ಮತ್ತು ಶ್ರೀ ನರಸಿಂಹ, ಮೈಸೂರು ಇವರನ್ನು ಇಲ್ಲಿ ಭೇಟಿ ಮಾಡಿದೆವು. ನಮ್ಮಂತೆಯೇ ಪ್ರಾಣಿಗಳ ಬಗ್ಗೆ, ಕಾಡಿನ ಬಗ್ಗೆ ತುಂಬಾ ಕುತೂಹಲ, ಅಭಿರುಚಿ ಇರುವವರು. ಒಂದು ರಾತ್ರೆ ಎಲ್ಲರೂ ನಕ್ಷತ್ರ ವೀಕ್ಷಣೆ, ಪ್ರಾಣಿ ವೀಕ್ಷಣೆ ಮಾಡುತ್ತಾ (೧೦.೩೦ ರವರೆಗೆ), ನಂತರ ನಿದ್ರಾದೇವಿ ಜೊತೆ ಗುದ್ದಾಟ.... ಮರುದಿನ ಬೆಳಗ್ಗೆ ೬.೦೦ ಘಂಟೆಗೆ ಎದ್ದು, ಯಾವುದಾದರೂ ಪ್ರಾಣಿ ಕಾಣಿಸುತ್ತಿದೆಯೇ (ಭಯ, ಕುತೂಹಲದಿಂದ) ಎಂದು ನೋಡುತ್ತಾ ನಿತ್ಯ ಕರ್ಮಗಳನ್ನು ಮುಗಿಸಿಕೊಂಡೆವು. ಬೇಗನೆ ಹೊರಟ ಪ್ರಾಣೇಶ್ ಮತ್ತು ಸಿಂಹ ಅವರಿಗೆ ವಿದಾಯ ಹೇಳಿ, ತಿಂಡಿ ತಿಂದು, ನೀರಿಲ್ಲದೆ ಒಣಗಿದ್ದ `ರೋಲಿಂಗ್ ರಾಕ್' ಜಲಪಾತದ ಜಾಗ ನೋಡಿಕೊಂಡು (೩.೩೦ ಕಿ.ಮೀ), ಲಂಗೂರ್ ಗಳಿಗೆ ಟಾಟಾ ಮಾಡಿಕೊಂಡು, ಮನಸ್ಸಿಲ್ಲದ ಮನಸ್ಸಿನಿಂದ ನಾಗರಿಕತೆಯತ್ತ ಕಾಲೆಳೆದೆವು.

ಅದೋ ಟಾರ್ ರೋಡ್! ನಗರದಲ್ಲಿ ಕಾಣಸಿಗುವ ಕೋತಿಗಳೂ ಕಾಣತೊಡಗಿದುವು. ಛೇ ನಾವು ಮಾರ್ಗ ತಲುಪೇ ಬಿಟ್ಟೆವೇ ಎನ್ನುವ ಕಳವಳ, ನೋವು. ಸರಿ, ಅಲ್ಲೂ ಸ್ವಲ್ಪ ಹೊತ್ತು ಕೂತು, ನಂತರ ಕೆಕ್ಕನಹಳ್ಳ ಚೆಕ್ ಪೋಸ್ಟ್ (ಕರ್ನಾಟಕ - ತಮಿಳುನಾಡು ಗಡಿ) ಹತ್ತಿರ ಬಂದೆವು. ಇನ್ನೇನು, ತಮಿಳುನಾಡಿನೊಳಗೆ ಕಾಲಿಟ್ಟು ವಾಪಾಸಾಗೋಣ ಎಂದು ಹೊರಟಾಗ, ಟ್ರಕ್ ಬಂತು, ಅದರೊಳಗೇರಿ ಮತ್ತೆ ಬಂಡಿಪುರ (೭ - ೮ .೦೦ ಕಿಮೀ) `ರಿಸೆಪ್ಯನ್' ಗೆ ಬಂದು, ಸೆಬಾಸ್ಟಿಯನ್ ಕೈಯ ಅಧ್ಭುತವಾದ ಊಟ ಮುಗಿಸಿ, ಇನ್ನೊಂದು ಚಾರಣದ ಗುಂಪಿಗಾಗಿ ಕಾಯಲಿರುವ ರಾಜೇಶ್‌ನ ಅಲ್ಲೇ ಬಿಟ್ಟು, ತಮಿಳುನಾಡು ಬಸ್ಸೇರಿ, ಮೈಸೂರು.... ನಂತರ ರಾಜಹಂಸವೇರಿ ತಿರುಗಿ ಬೆಂಗಳೂರು.

ಇಲ್ಲಿಗೀ ಕಥೆ ಮುಗಿಯಿತು.......

Monday, October 09, 2006

ಹೀಗೊಂದು ಭಾನುವಾರ


೦೧/೦೮/೦೪.

ಬೆಳಗ್ಗೆ ೭.೦೦ ಘಂಟೆಗೆ, ಡೀನ್, ಮಯೂರ್, ಬಾಲ್‍ರಾಜ್ ಶಾಂತಲಾ ಸಿಲ್ಕ್ ಹೌಸ್ ಹತ್ತಿರ ಭೇಟಿಯಾಗಿ, ಶಿವೂಗೆ ಕಾಯುತ್ತಾ, ೭.೨೦ಕ್ಕೆ ಬಂದ ಲೇಟ್ ಲತೀಫ್ ಜೊತೆ ಹೊರಟು, ಮೈಸೂರ್ ರಸ್ತೆಯಲ್ಲಿ ಕಾಯುತ್ತಿದ್ದ ನನ್ನನ್ನೂ ಕಾರಲ್ಲಿ ತುಂಬಿಕೊಂಡು - ರಾಮನಗರದ ಕಡೆ ಧಾವಿಸಿದೆವು.

ಕಾಮತ್ ಲೋಕರುಚಿಯಲ್ಲಿ ರುಚಿಯಾದ ಕೊಟ್ಟೆ ಇಡ್ಲಿ, ಮಸಾಲೆದೋಸೆ, ಖಾಲಿ ದೋಸೆ - ಖಾಲಿ ಮಾಡಿ, ಕಾಫಿ ಕುಡಿದು, ಮತ್ತೆ ರಾಮನಗರದತ್ತ ಅರ್ಧ ಕಿಲೋಮೀಟರ್ ಬಂದು ಕನಕಪುರ ಕಡೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿದೆವು. ಮೊದಲು ಕೆ.ಪಿ.ದೊಡ್ಡಿ, ನಂತರ ಕೈಲಾಂಚ. ಅಲ್ಲಿಂದ ಹೊಳೆ ದಾಟಿ ಹೋಗುವ ಮಾರ್ಗದಲ್ಲಿ ಕಾರು ಹೋಗುವುದು ಕಷ್ಟ ಎಂದು ಸುಮಾರು ೩ ಕಿ.ಮೀ. ಸುತ್ತು ಹಾಕಿ ಬೆಟ್ಟದ ತಳದಲ್ಲಿರುವ ಊರು ತಲುಪಿದೆವು. ಬೆಟ್ಟಕ್ಕೆ ಮಾರ್ಗವಿದೆ, ಆದರೆ ಭೂ ಕುಸಿತದಿಂದ ಬಂಡೆಗಳು ಬಿದ್ದು ಅಡಚಣೆ ಉಂಟಾಗಿದೆ. ಸ್ವಲ್ಪ ದೂರ ಕಾರ್ ಕೊಂಡೊಯ್ದ ಮಯೂರ್ ಒಂದು ಕಡೆ ನಿಲ್ಲಿಸಿ ನಂತರ ಎಲ್ಲರೂ ಜೊತೆಗೆ ಬೆಟ್ಟ ಏರಿಲಾರಂಭಿಸಿದೆವು. ನಂದಿಯ ಒಂದು ಬೃಹತ್ ವಿಗ್ರಹದ ಪಕ್ಕ ನಿಂತುಕೊಂಡು ಫೋಟೋ ಹೊಡೆದು, ಪ್ರಕೃತಿ ಸೌಂದರ್ಯ ನೋಡುತ್ತಾ ಕುಳಿತು ಪುನಹ ಏರಲಾರಂಭಿಸಿದೆವು. ನಿಜಕ್ಕೂ ಚಮತ್ಕಾರವೆನಿಸುವಂತೆ ಬಂಡೆಗಳ ನಡುವೆ ಗುಹೆಯಂಥಾ ಜಾಗದಲ್ಲಿ ನುಸುಳಿ ಕತ್ತಲಲ್ಲಿ ತಡಕಾಡುತ್ತಾ, ಮುಂದೆ ಕಾಣುವ ಸೂರ್ಯನ ಕಿರಣಗಳನ್ನು ನೋಡಿ ದಾರಿಯ ಗುರುತು ಹಿಡಿದು (ಬಹಳ ಕಷ್ಟವೇನಿಲ್ಲ) ಹೊರ ಬಂದು, ಪುನಹ ಕಡಿದಾದ ಜಾಗದಲ್ಲಿ ಹೌದೋ ಅಲ್ಲವೋ ಎಂಬಂತಿರುವ ಮೆಟ್ಟಲೇರಿ, ಆಂಜನೇಯನ ಗುಡಿ ಬಳಸಿ ಮತ್ತೂ ಮೇಲೇರಿದೆವು. ಮೇಲ್ಗಡೆ ಒಂದು ಮಂಟಪ ಮತ್ತು ದೇವರಿಲ್ಲದ ಗುಡಿ (ಇನ್ನೂ ಅಭಿವೃದ್ಧಿಯಲ್ಲಿದೆ). ಅಲ್ಲೊಂದು ಪುಟ್ಟ ಕೆರೆ ಇದೆ, ಗಾಳಿಗೆ ಪಾಚಿಯೆಲ್ಲಾ ಒಂದೇ ಕಡೆ ಸೇರಿ ನೋಡಲು ಬಹಳ ಸುಂದರವಾಗಿತ್ತು.

ಬಾಲ್‍ರಾಜ್ ಬೆಳಗಿನಿಂದ ಬೆದರಿಸುತ್ತಿದ್ದ ಕ್ಷಣ ಬಂದೇ ಬಿಟ್ಟಿತು. ರಾಪ್ಲಿಂಗ್ ಮಾಡುವುದು ಮೊದಲಲ್ಲದಿದ್ದರೂ, `ಸ್ಟಾಮಕ್ ರಾಪ್ಲಿಂಗ್' ಮೊದಲನೆ ಅನುಭವ. ಮಾಮೂಲು ರಾಪ್ಲಿಂಗ್‍ನಲ್ಲಿ ಭೂಮಿಗೆ ಬೆನ್ನು ಮಾಡಿಕೊಂಡು ಬಂಡೆ ಇಳಿದರೆ, ಸ್ಟಾಮಕ್ ರಾಪ್ಲಿಂಗ್‍ನಲ್ಲಿ ಭೂಮಿಗೆ ಮುಖ ಮಾಡಿ, ಅಂದರೆ, ಹೊಟ್ಟೆಗೆ ಹಗ್ಗ ಕಟ್ಟಿಕೊಂಡು, ನೆಲದ ಮೇಲೆ ನಡೆಯುವಂತೆ ಬಂಡೆ ಇಳಿಯಬೇಕು. ನನ್ನಿಂದ ಸಾಧ್ಯವೇ ಎನಿಸುತ್ತಿದ್ದುದು ಮಾಡುತ್ತಿರುವಾಗ ಇಷ್ಟೇನಾ ಎನ್ನಿಸಿತು. ಎಲ್ಲರೂ ರಾಪ್ಲಿಂಗ್ ಮಾಡಿದ ನಂತರ ಅಲ್ಲಿಂದ ಹೊರಟು ಇಳಿದು ಕಾರಿಗೆ ಬಂದು, ಹಳ್ಳಿಯಲ್ಲಿ ರೇಷ್ಮೆ ಗೂಡು ನೋಡಿ, ಪುನಹ ಕಾಮತ್ ಲೋಕರುಚಿಗೆ ಬಂದೆವು. ಅಲ್ಲಿ ಜೋಳದ ರೊಟ್ಟಿ, ಎಣ್ಣೆಗಾಯಿ ತಿಂದಿದ್ದೇ ತಿಂದಿದ್ದು. ಅನ್ನ ಸಾಂಬಾರ್ ಉಂಡಿದ್ದೇ ಉಂಡಿದ್ದು !!

ಗಣೇಶಾ ನಿನ್ನ ಮಹಿಮೆ ಅಪಾರ, ನಿನ್ನ ಮೂರ್ತಿಗಳದು ವಿಚಿತ್ರ ವ್ಯಾಪಾರ. ಒಬ್ಬ ಇಪ್ಪತ್ತೈದು ಹೇಳಿದರೆ ಇನ್ನೊಬ್ಬ ಹದಿನೈದು ಹೇಳಿ ಹತ್ತಕ್ಕೆ ಕೊಡುವ ವ್ಯವಹಾರ!! ಜಾನಪದ ಲೋಕ, ಲೋಕರುಚಿ ದ್ವಾರದಲ್ಲಿ ಮಾರುತ್ತಿದ್ದ ಮಣ್ಣಿನ ದೊಡ್ಡ / ಪುಟ್ಟ ಮೂರ್ತಿಗಳು (ಸಂಗೀತ ಕಛೇರಿ ಮಾಡುವ ಗಣೇಶ, ಡ್ಯಾನ್ಸ್ ಮಾಡುವ ಗಣೇಶ, ಇಲಿ ಮೇಲೇರಿ ಟ್ರೆಕ್ಕಿಂಗ್ ಹೊರಟಿರುವ ಗಣೇಶ ಮುಂತಾದುವು) ತುಂಬಾ ಮುದ್ದೆನಿಸಿದುವು. ಅಂತೆಯೇ ಬೇಕಾದುದನ್ನು ಖರೀದಿಸಿ, ಹೊರಟು ರಾಮಗಿರಿ ಬೆಟ್ಟದ ತಪ್ಪಲಿಗೆ ಬಂದೆವು.

ಅಹಹಾ! ಮಕ್ಕಳಂತೆ ಬಂಡೆ ಮೇಲೆ ಜುರ್‍ರ್‍ ಎಂದು ಜಾರುತ್ತಾ ಜಾರುಬಂಡೆ ಆಟ ಆಡಿದೆವು.

ಬಾಲ್‍ರಾಜ್ ನಮ್ಮನ್ನು ಒಂದು ರೀತಿ `ಮಡಿ' ಮಾಡಲೇ ಬೇಕು ಎಂದು ನಿರ್ಧರಿಸಿದ ಕಾರಣ ಯಾರೂ `ಟ್ರಸ್ಟ್ ಫಾಲ್' ನ ಅನುಭವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. `ನಾಲ್ಕು ಜನ, ಇಬ್ಬರಾದ ಮೇಲೆ ಇಬ್ಬರಂತೆ, ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ನಿಂತರೆ, ಆ ಎತ್ತರದಿಂದ ಸ್ವಲ್ಪ ಮೇಲೆ ಇನ್ನೊಬ್ಬ ನೇರವಾಗಿ ನಿಂತುಕೊಂಡು ಕಾಲುಗಳನ್ನು ಮಡಚದೆ, ಹಿಂದಕ್ಕೆ ಬೀಳಬೇಕು, ಇದು `ಫಾಲ್'. ಕೆಳಗೆ ನಿಂತಿರುವ ನಾಲ್ವರು ಆತನನ್ನು ಕೈಗಳ ಉಯ್ಯಲೆಯಲ್ಲಿ ಹಿಡಿದು ನೆಲಕ್ಕೆ ಬೀಳದಂತೆ ನೋಡಿಕೊಳ್ಳುತ್ತಾರೆ. ಇದೇ `ಟ್ರಸ್ಟ್'. ನಮ್ಮ ಜೊತೆಗಿರುವವರ ಮೇಲಿರುವ ನಂಬಿಕೆಯೇ ನಮಗೆ ಹಿಂದೆ ಬೀಳಲು ಕೊಡುವ ಧೈರ್ಯ'. (ಒಮ್ಮೆ ಸ್ವಲ್ಪ ಎತ್ತರದಲ್ಲಿ ನಿಂತುಕೊಂಡು, ನೆಲದಲ್ಲಿ ಹಾಸಿಗೆ ಹಾಸಿ, ನೇರವಾಗಿ ನಿಂತು ಹಿಂದೆ ಬೀಳಲು ಪ್ರಯತ್ನಿಸಿ, ಅಷ್ಟು ಸುಲಭವಿಲ್ಲ; ನಮ್ಮ ಅರಿವು ಅಷ್ಟು ಸುಲಭವಾಗಿ ನಮ್ಮನ್ನು ಬೀಳಲು ಬಿಡುವುದಿಲ್ಲ...)

ಸುಮಾರು ೨೫೦ - ೩೦೦ ಮೆಟ್ಟಿಲುಗಳನ್ನೇರಿ ಪಟ್ಟಾಭಿರಾಮ ದೇವರ ದೇವಸ್ಥಾನಕ್ಕೆ ಬಂದೆವು. ಪಕ್ಕದಲ್ಲಿ ಒಂದು ಸುಂದರವಾದ ಕೊಳ ಇದೆ. ಅದು ಒಂದು ನದಿಯ ಉಗಮ ಸ್ಥಾನ ಎಂದೂ ಹೇಳುತ್ತಾರೆ.

ಓ! ಬಾಲ್‍ರಾಜ್ ನಮ್ಮನ್ನು ಬಿಡುವಂತೆ ಕಾಣುತ್ತಿಲ್ಲ. ಮರಕ್ಕೆ ಹಗ್ಗ ಸುತ್ತಿ ಒಂದು ತುದಿಯನ್ನು ತನ್ನ ಕೈಲಿ ಹಿಡಿದು ಇನ್ನೊಂದು ತುದಿಯನ್ನು ನಮ್ಮ ಸೊಂಟಕ್ಕೆ ಕಟ್ಟಿ ಸುಮಾರು ೮ / ೧೦ ಅಡಿ ಮೇಲೇರಿಸಿ, ಕೆಳ ಹಾರು ಎಂದರು. ಜೊತೆಗೆ ಹಗ್ಗವನ್ನು ಕೈಯಲ್ಲಿ ಹಿಡಿಯಬಾರದೆನ್ನುವ ಬೆದರಿಕೆ ಬೇರೆ! ಮೇಲಿಂದ ಕೆಳ ಹಾರಿದಾಗ ಅದು ಹೇಗೋ ಕೈಗಳು ಹಗ್ಗವನ್ನು ಹಿಡಿದರೂ, ಆಗುವ ಅನುಭವ ನಿಜಕ್ಕೂ ಅದ್ಭುತ! ರೋಮಾಂಚಕ!

ಸರಿ, ಕತ್ತಲಾಯಿತು ಇನ್ನೇನು, ಪುನಹ ಮೆಟ್ಟಿಲುಗಳನ್ನಿಳಿದು ಕಾರು ನಿಲ್ಲಿಸಿದ್ದಕ್ಕೆ `ಪಾರ್ಕಿಂಗ್ ಫೀಸ್' ಕೊಟ್ಟು ಮತ್ತೆ ಬೆಂಗಳೂರಿಗೆ ಹೊರಟೆವು......

Saturday, October 07, 2006

ಏನಿದೇನಿದೇನು

ಏನಿದೇನಿದೇನು! ಚಿತ್ತಾರ ಭೂಮಿ ಬಾನು!

೧೬.೦೭.೦೪ - ೧೯/೦೭/೦೪.
ಚಿಕ್ಕಮಗಳೂರು ಬಸ್ ಸ್ಟಾಂಡ್‍ನಲ್ಲಿ ಇಳಿದು ಅಲ್ಲೇ ಎಲ್ಲರೂ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು, ನಂತರ ೬.೦೦ ಘಂಟೆಗೆ ದಾವಣಗೆರೆಗೆ ಹೋಗುವ ಪ್ರೈವೇಟ್ ಬಸ್ ಹತ್ತಿ ಕೈಮರ ಎಂಬಲ್ಲಿ ಇಳಿದೆವು. ನಂತರ ಸ್ವಲ್ಪ ಮುಂದೆ ಹೋಗಿ, ನಿರ್ವಾಣೇಶ್ವರ ಮಠಕ್ಕೆ ಹೋಗಿ, ಅಲ್ಲಿಯ ಸೌಕರ್ಯಗಳೊಂದಿಗೆ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಯಾರು (ಅವಲಕ್ಕಿ) ಮಾಡಿ, ತಿಂದು, ದೇವಸ್ಥಾನದೊಳ ಹೋಗಿ ಕೈ ಮುಗಿದು ಅಲ್ಲಿಂದ ೯.೦೦ ಘಂಟೆಗೆ ಹೊರಟೆವು. ಪುನಹ, ಕೈಮರ ನಿಲ್ದಾಣಕ್ಕೆ ಬಂದು ಕಾದು, ಬಸ್ ಬರುವುದು ಇನ್ನೂ ನಿಧಾನ ಎಂದು ನಡೆಯಲಾರಂಭಿಸಿ, ಸಾಮಾನ್ಯ ೨ ಕಿ.ಮೀ ನಡೆದು, ದಾರಿಯಲ್ಲಿ ಒಂದು ಲಾರಿಯವನಲ್ಲಿ ರಿಕ್ವೆಸ್ಟ್ ಮಾಡಿ, `ಸರ್ಪದಾರಿ' ಗೆ ಬಂದೆವು. ನಂತರ ನಿಜವಾದ ಚಾರಣ (ಬೆಟ್ಟಕ್ಕೆ) ಸುರು. ಕೆಲವರು ನಿಧಾನಕೆ (ನನ್ನನ್ನೂ ಸೇರಿ) ಕೆಲವರು ವೇಗವಾಗಿ ಹತ್ತಲಾರಂಭಿಸಿ, ಸುಮಾರು ೨ ರಿಂದ ೨.೩೦ ಘಂಟೆ ಸಮಯ ತೆಗೆದುಕೊಂಡು, ನಡುವೆ ಪ್ರಕೃತಿ ಸೌಂದರ್ಯ, ವೈಚಿತ್ರ್ಯ ಸವಿಯುತ್ತಾ, ದಾರಿಯಲ್ಲಿ ನನ್ನ ಬ್ಯಾಗ್ ಬೆಲ್ಟ್ ತುಂಡಾಗಿ, ಹೊಲಿದು, ಮುಳ್ಳಯ್ಯನ ಗಿರಿ ತಲುಪಿದೆವು. ಮಳೆ ಇಲ್ಲದಿದ್ದರೂ ವಾತಾವರಣ ತಂಪಾಗಿ, ಬಿಸಿಲು ಇರಲಿಲ್ಲವಾದುದರಿಂದ ನೀರಿನ ಆವಶ್ಯಕತೆ ಅಷ್ಟಾಗಿ ಬರಲಿಲ್ಲ.

ಬೆಟ್ಟಕ್ಕೆ ಹತ್ತುವಾಗ ದಾರಿಯಲ್ಲಿ ಒಂದು ಗುಹೆಯು `ಕಲಾಕೃತಿಯಲ್ಲಿ ನನ್ನ ಸಮಾನ ಯಾರೂ ಇಲ್ಲ, ನನ್ನನ್ನು ವೀಕ್ಷಿಸಿ' ಹೋಗಿ ಎಂದಿತು, ನಿಜಕ್ಕೂ ಪ್ರಕೃತಿಯ ಕುಂಚ ಅಲ್ಲಿ ಹೇಗೆ ಓಡಾಡಿ ಚಿತ್ತಾರ ಬಿಡಿಸಿದೆ ಎಂದರೆ ಕಣ್ಣಾರೆ ಕಂಡ ಹೊರತು ನಂಬಲಸಾಧ್ಯ ಮತ್ತು ವಿವರಿಸಲಸಾಧ್ಯ.

ಮೇಲ್ಗಡೆ ತಲುಪಿದಾಗ ಕೆಳಗೆಲ್ಲಾ ಮಂಜು ಮುಸುಕಿ ನಾವು ಬಂದಿದ್ದ ಹಾದಿಯೂ ಕಾಣುತ್ತಿರಲಿಲ್ಲ. ಮೇಲೆ ಮಣ್ಣಿನ ಒಂದು ಪುಟ್ಟ ಗುಡ್ಡ, ಗೋಪುರದಂತೆ ಇದೆ. ಒಂದು ಶಿವನ ದೇವಸ್ಥಾನ ಇದ್ದು, ಅಲ್ಲೇ ಪಕ್ಕದ ಕಟ್ಟಡದಲ್ಲಿ ವಾಸ ಇರುವವರು ಪೂಜೆ ಮಾಡುತ್ತಾರೆ. ಬೇಕಾದರೆ ಊಟದ ವ್ಯವಸ್ಠೆಯನ್ನೂ ಬೇಕಾದರೆ ಮಾಡುತ್ತೇವೆ ಎಂದು ಅವರು ಹೇಳಿದರು. ನಾವು ಕೊಂಡೊಯ್ದ ಕಾಯಿ ಹೋಳಿಗೆ, ಕೋಡುಬಳೆ, ಬಾಳೆಹಣ್ಣು, ಮಿಕ್ಸ್ಚರ್, ಬ್ರೆಡ್, ಬಿಸ್ಕಿಟ್ ಮುಂತಾದವು ಹೆಸರಿಲ್ಲದಂತೆ ಖಾಲಿಯಾದುವು. ಕರ್ನಾಟಕದ ಅತಿ ಎತ್ತರದ ಬೆಟ್ಟದ ಮೇಲಿದ್ದರೂ ಹಸಿವೆಂಬುದು ಇಂಗಿರಲಿಲ್ಲ.

ಅದ್ಭುತವಾದ ನೋಟ ಅದು. ಮುಳ್ಳಯ್ಯನ ಗಿರಿಯಿಂದ ಬಾಬಾಬುಡನ್‍ಗಿರಿ ಕೂಡಿದಂತೆ ಸುತ್ತಲೂ ಬೆಟ್ಟಗಳೂ, ಮೋಡ, ಮಂಜು ಮುಸುಕಿದ ಪರ್ವತಗಳು, ಆ ಎತ್ತರಕ್ಕೇರಿದುದನ್ನು ಸಾರ್ಥಕ ಎನ್ನುತ್ತಿದ್ದುವು.

ಅಲ್ಲೇ ಸ್ವಲ್ಪ ಹೊತ್ತು ಇದ್ದು ನಂತರ ಮನಸ್ಸಿಲ್ಲದ ಮನಸ್ಸಿನಿಂದ ಸೀತಾಳಯ್ಯನ ಗಿರಿಯತ್ತ ಇಳಿಯಲಾರಂಭಿಸಿದೆವು. ಸುಮಾರು ಇನ್ನೂರು - ಮುನ್ನೂರು ಮೆಟ್ಟಿಲಿಳಿದ (ಲೆಕ್ಕ ಮಾಡಿಲ್ಲ) ನಂತರ ನಾಗರಿಕ ಪ್ರಪಂಚವನ್ನು ಜ್ನಾಪಿಸುವಂತೆ ಕಡಿದ ಮಾರ್ಗ ಸಿಕ್ಕಿತು. ಮುಂದೆ ಸ್ವಲ್ಪ ದೂರ ಹೋಗಿ ಕಾಲುದಾರಿ ಇಳಿದು ಪುನಹ ಇನ್ನೊಂದು ಗುಡ್ಡ ಹತ್ತಿ ಇಳಿದು ಸೀತಾಳೇಶ್ವರ ಮಠ ತಲುಪಿದೆವು, ಮಾರ್ಗದಲ್ಲೇ ಹೋಗಿದ್ದರೂ ಈ ಜಾಗಕ್ಕೇ ತಲುಪುತ್ತಿದ್ದೆವು ಆದರೆ ಕಾಲುದಾರಿ ಕೊಡುವ ಮಜಾ ಮಾರ್ಗದಲ್ಲೆಲ್ಲಿ?

ಸುಸ್ತಾದವರು ಕಾಲು ಚಾಚಿ ಮಲಗಿದರೆ ಕುತೂಹಲಿಗಳು ಸುತ್ತ ಮುತ್ತ ಏನೇನಿದೆ ಎಂದು ನೋಡಲು ಹೊರಟೆವು. ಇಲ್ಲೂ ಒಂದು ಪುಟ್ಟ ಗುಹೆ ಇದೆ. ವೇಣು, ಡೀನ್, ಮೋಹನ್ (ಮಂಜು) ಮತ್ತು ನಾನು ಹಾಗೇ ಹೋಗುತ್ತಾ, ಪ್ರಕೃತಿಯ ವೈಶಿಷ್ಟ್ಯ ಮತ್ತು ಸೂರ್ಯ ಕಿರಣಗಳ ಆಟವನ್ನು ನೋಡುತ್ತಾ ಹತ್ತಿರದಲ್ಲೇಲ್ಲೋ ನೀರು ಬೀಳುವ ಶಬ್ದಕ್ಕೆ ಮರುಳಾಗಿ ಅದರ ಶೋಧಕ್ಕೆ ಹೊರಟೆವು. ಜಲಪಾತ ಕಾಣದೇ, ಜಿಗಣೆಗಳೊಂದಿಗೆ, ಪುನಹ ಮುಳ್ಳಯ್ಯನ ಗಿರಿ ಕಡೆ ಹೋಗುವ ಮಾರ್ಗವಾಗಿ ಮಠಕ್ಕೆ ಹಿಂದಿರುಗಿದೆವು. ಕಾಫಿ ಕುಡಿದು ಪುನಹ ಡೀನ್, ಮೋಹನ್, ನಾನು ಅಲ್ಲೇ ಸ್ವಲ್ಪ ದೂರದಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತೆವು. ಘಂಟೆ ೭.೩೦ ಆಗಿದ್ದರೂ ಇನ್ನೂ ಕತ್ತಲಾಗದಿರುವುದನ್ನು ಕಂಡ ಮೋಹನ್‍ಗೆ ಆಶ್ಚರ್ಯ. ಅಂತೆಯೇ ಮುಸುಗಿದ ಮಂಜಿನ ನಡುವೆ ಕುಳಿತ ಅನುಭವವನ್ನು ಸವಿಯುವ ಆತುರ. ಸ್ವಲ್ಪ ಹೊತ್ತಿನ ನಂತರ ಅಂದರೆ ಸುಮಾರು ೮.೦೦ - ೮.೩೦ ಘಂಟೆಗೆ ಮಠದ ದೀಪಗಳೂ ಕಾಣದಂತೆ ಮುಸುಗಿದ ಮಂಜು ನೋಡಿ ನಮ್ಮ ಮಂಜುಗೆ ವಿಸ್ಮಯ. ಎಲ್ಲೋ ದೂರದಿಂದೆಂಬಂತೆ ಸಿಳ್ಳೆ ಮತ್ತು ತಟ್ಟೆಯ ಶಬ್ದಗಳಿಂದ ನಮಗೆ ಊಟದ ಕರೆ ಬಂತು. ಊಟದಲ್ಲಿ, ಸತ್ಯನಾರಾಯಣ ಮಾಡಿದ ಪಾಯಸ, ಶಾಂತಪ್ಪ ಹಾಗೂ ಪತ್ನಿ (ಮಠದಲ್ಲಿರುವವರು) ಮಾಡಿದ ಅನ್ನ ಮತ್ತು ಹುಳಿ ಅತಿಯಾಗಿ ತಿಂದ ನನಗೆ ಉಸಿರಾಡಲೂ ಕಷ್ಟವೆನಿಸಿತು. ನಂತರ ಎಲ್ಲರೂ ಶವಾಸನದಿಂದ ನಿದ್ರಾಸನಕ್ಕೆ ತಲುಪಿದೆವು.

ಮರು ಬೆಳಗ್ಗೆ ೫.೩೦ಕ್ಕೆ ಡೀನ್, ವೇಣು ಹಾಗೂ ನಾನು ಪುನಹ ನಮ್ಮದೇ ದಾರಿಯಲ್ಲಿ ಹೊರಟೆವು. ಆ ಅದ್ಭುತವಾದ ಜಾಗದಲ್ಲಿ ಬೆಳಗಿನ ಹೊತ್ತು ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಕುಳಿತೆವು. ನಂತರ ಮೋಹನ್ ನಮ್ಮ ಜೊತೆಗೂಡಿದರು. ವೇಣು ಹೋಗಿ ಉಳಿದವರೆಲ್ಲರನ್ನೂ ಕರೆತಂದರು. ಅವರ್ಯಾರಿಗೂ ಕಾಲಿಗೆ ಚಪ್ಪಲಿ ಹಾಕಲು ವೇಣು ಬಿಟ್ಟಿರಲಿಲ್ಲ ಅದಕ್ಕಾಗಿ ನಮ್ಮ ಜೊತೆ ಪುನಹ ಸೀತಾಳಯ್ಯನ ಗಿರಿ ಹತ್ತಿ ಇಳಿಯಲು ಒಪ್ಪದೆ ಅವರೆಲ್ಲಾ ತಿರುಗಿ ಮಠಕ್ಕೆ ಹೋದ ನಂತರ ನಾವು ಮತ್ತೆ ಮುಳ್ಳಯ್ಯನ ಗಿರಿ ಕಡೆ ಹೋಗಿ ಬೆಳಗಿನ ಮೋಡ, ಮಂಜು ಕೆಳಗೆಲ್ಲಾ ಕವಿದು ಸುತ್ತಲೂ ಸಮುದ್ರದಂತಾಗಿರುವ ಜಾಗಗಳನ್ನೆಲ್ಲಾ ನೋಡುತ್ತಾ ಬಂದೆವು. ದಾರಿಯಲ್ಲಿ ಇದ್ದ ಗಿಡಗಳ ಮೇಲೆ ಕುಳಿತ ಮಂಜಿನ ಹನಿಯ ಸ್ನಾನವನ್ನು ಮಾಡುತ್ತಾ ಪುಟ್ಟ ಮಕ್ಕಳಂತೆ ನಲಿದು `ನನ್ನ ಗಿಡ ನನ್ನ ಗಿಡ' ಎಂದು ಹಕ್ಕು ಸ್ಥಾಪಿಸಿ, ಸೆಲ್ವಕುಮಾರ್ ಪ್ರಕಾರ `ನಿಜಕ್ಕೂ ಮರೆಯಲಾಗದ ಅನುಭವ'ವನ್ನು ಪಡೆದೆವು.

ಉಪ್ಪಿಟ್ಟು, ಚಿತ್ರಾನ್ನವನ್ನು ದೇವಳದ ಪ್ರಾಂಗಣದಲ್ಲಿ ತಿಂದು, ಮನೆಯವರಿಗೆ ಧನ್ಯವಾದಗಳನ್ನರ್ಪಿಸಿ ಬ್ಯಾಗ್‍ಗಳನ್ನು ಶಾಂತಪ್ಪ ಅವರ ಜೀಪಲ್ಲಿ ಹಾಕಿ ಶೇಖರ್ ಮತ್ತು ಕೃಷ್ಣಮೂರ್ತಿ ಜೊತೆ ಮಾಡಿ ಕಳುಹಿಸಿ, ನಾವು ಕಾಲುದಾರಿಯಲ್ಲಿ ಇಳಿದೆವು. ಪುನಹ ಬಾಬಾಬುಡನ್‍ಗಿರಿಗೆ ಹೋಗುವ ದಾರಿ - ಅಂದರೆ ನಾವು ಚಾರಣ ಸುರು ಮಾಡಿದ ಮಾರ್ಗಕ್ಕೆ ಬಂದು ಅಲ್ಲೂ ಒಂದು ಜಲಪಾತ ನೋಡಿದೆವು. ಬಸ್ ಬಂತು. ಕೆಲವು ಸೀಟ್ ಸಿಕ್ಕಿ ಕುಳಿತರೂ ಬಸ್‍ನ ಟಾಪ್ ಮೇಲೆ ಕೂರುವ ಆಸೆ ಹೆಚ್ಚಾಗಿ ಮೇಲೇರಿದೆವು. ನಿರ್ವಾಹಕನೂ ಉತ್ಸಾಹದಿಂದ ನಮ್ಮ ಜೊತೆ ಬಂದು ಕುಳಿತರು. ಬಾಬಾ ಬುಡನ್‍ಗಿರಿ ತಲುಪಿ, ಗಾಳಿಕೆರೆಯತ್ತ ಮಾರ್ಗದಲ್ಲಿ ನಡೆಯುತ್ತಾ ಸಾಗಿ ಅಲ್ಲಿ ಬುತ್ತಿ ತಿಂದೆವು. ವಾಪಾಸ್ ಬಾ.ಬಾ.ಬು ಗೆ ಬಂದು ಖಾಲಿ ಇದ್ದ ಬಸ್ ಹತ್ತಿ ಸೀಟಲ್ಲಿ ಕುಳಿತಾಗ ಮತ್ತೆ ಮೇಲೆ ಕೂರುವ ಇಚ್ಛೆ ಬಲವಾಗತೊಡಗಿತು. ಬೇರೆ ಬಸ್ಸಾದ್ದರಿಂದ ಬಾಯ್ಮುಚ್ಚಿ ಕೂತರೂ ತಡೆಯದೇ ಕೊನೆಗೆ ನಿರ್ವಾಹಕನನ್ನು ಕೇಳಿದಾಗ ಧಾರಾಳವಾಗಿ ಮೇಲೇರಿ ಎಂಬ ಪರವಾನಗಿ ಸಿಕ್ಕಿದ್ದೇ, ಕೋತಿಗಳಂತೆ ಮೇಲೇರಿದೆವು. ಇನ್ನೂ ಮೂರು ಜನ (ಬೆಂಗಳೂರಿನವರೆ) ನಮ್ಮ ಜೊತೆ ಮೇಲೇರಿದರು.

ಚಿಕ್ಕಮಗಳೂರು ತಲುಪಿದಾಗ ಅಯ್ಯೋ ಅನಿಸಿತು. ಪೆಟ್ರೋಲ್ ಬಂಕ್ ಬಳಿ ಮೇಲಿಂದ ಕೆಳಗಿಳಿದು ಮತ್ತೆ ಬಸ್ಸೊಳಗೆ ಬಂದಾಗ ಹವಾನಿಯಂತ್ರಣ ಕೋಣೆಯಿಂದ ಹೊರ ಬಂದಂಥಾ ಚಡಪಡಿಕೆ.

ಚಿಕ್ಕಮಗಳೂರಿನಲ್ಲಿ ಎಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡೆವೋ ಅಲ್ಲೇ ಕುಳಿತು ಮತ್ತೆ ಒಂದು ಸಭೆ ನಡೆಸಿ, ಊರು ಸುತ್ತಲು ಹೋದೆವು. ಅನುರಾಧ ಕಾಫಿ ಪುಡಿ, ಶೋಭ ಕೃಷ್ಣಮೂರ್ತಿ ಮಗಳಿಗೆ ಆಟಿಕೆ, ಹೀಗೆ ಖರೀದಿ ಮುಗಿಸಿ ಅಲ್ಲಿಂದ ಕಾಮತ್ ಹೋಟೇಲ್ ತಲುಪಿ ರಾತ್ರಿಯ ಊಟ ಮಾಡಿದೆವು. ತಿರುಗಿ ಬಸ್‍ಸ್ಟಾಂಡ್‍ಗೆ ಬಂದು ಹೋಟೇಲ್‍ನಲ್ಲಿಟ್ಟಿದ್ದ ಬ್ಯಾಗ್‍ಗಳನ್ನು ತೆಗೆದುಕೊಂಡು ಬಸ್ ಹತ್ತಿದೆವು. ಬಸ್ಸ್‍ನಲ್ಲಿ ಕಿರಿಚಾಡುತ್ತಾ, ನಗುತ್ತಾ, ನಿರ್ವಾಹಕನ ಬಳಿ ಬೈಸಿಕೊಂಡು, ಜಾಣಮಕ್ಕಳಂತೆ ನಿದ್ದೆ ಮಾಡಿ, ಬೆಳಗ್ಗೆ ಬೆಂಗಳೂರು ತಲುಪಿ, ಸುಂದರವಾದ ಕನಸು ಕಳೆಯಿತೆಂಬಂತೆ ಎದ್ದೆವು.

Monday, September 25, 2006

ಬೀಚ್ ಟ್ರೆಕ್

ತಾ: ೦೨/೦೨/೨೦೦೬ ರಿಂದ ೦೬/೦೨/೨೦೦೬

ರಾತ್ರೆ ೯ ಘಂಟೆಗೆ ಮೆಜೆಸ್ಟಿಕ್ ಬಸ್ ಸ್ಟಾಂಡ್‍ನಿಂದ ಒಟ್ಟು ಹದಿನಾರು ಜನ ಬಸ್ ಹತ್ತಿದೆವು.

ಬೆಳಗ್ಗೆ ೧೦.೨೦ಕ್ಕೆ ಗೋಕರ್ಣ ತಲುಪಿ, ಬಸ್‍ಸ್ಟಾಂಡ್‍ ಹೊಟೇಲಲ್ಲಿ ತಿಂಡಿ, ಊಟ ಮಾಡಿ, ಕೋಟಿತೀರ್ಥದ ಕಡೆಗೆ ನಡೆದು, ಅಲ್ಲಿ ಒಂದು ಸಣ್ಣ ಮೀಟಿಂಗ್ ನಡೆಸಿ, ಕುಡ್ಲೆ ಹಾಗೂ ಓಂ ಬೀಚ್‍ಗೆ ಹೋಗುವ ಹಾದಿಯಲ್ಲಿ ನಡೆದೆವು. ನಮ್ಮ ಜೊತೆ ಜೊತೆಯಲ್ಲೇ ಬೇರೆ ಯಾರೋ ಮೂರು ಮಂದಿ, ಪೆಟ್ಟಿಗೆಗಳನ್ನು ಹೊತ್ತುಕೊಂಡು ಬರುತ್ತಿದ್ದರು. ನೋಡಿದಾಗಲೇ ಗೊತ್ತಾಯ್ತು ಅವರೂ ಒಂ ಬೀಚ್‍ಗೇ ಹೋಗ್ತಾ ಇದಾರೆ ಅಂತ. ಅವರು ಮದ್ಯ, ತಂಪು ಪಾನೀಯಗಳನ್ನು ಹೊತ್ತೊಯ್ಯುತ್ತಿದ್ದರು. ಗೋಕರ್ಣ ಪೇಟೆಯಲ್ಲೂ ಅಷ್ಟೆ, ವಿದೇಶೀಯರು ಏನೇನು ಇಷ್ಟ ಪಡುತ್ತಾರೋ ಅದೆಲ್ಲವೂ ಇತ್ತು. ಅವರಿಗೆ ಇಷ್ಟವಾಗುವಂಥಾ ಉಡುಪುಗಳು, ಸರಗಳು ಇತ್ಯಾದಿ.

ಸುಮಾರು ೧ ಕಿ.ಮೀಯಷ್ಟು ಕಾಲುದಾರಿ ಹಾಗೂ ೧ ರಿಂದ ೨ ಕಿ.ಮೀಯಷ್ಟು ಕಚ್ಛಾ ರಸ್ತೆಯಲ್ಲಿ ನಡೆದು ಹೋದಾಗ ಒಂದು ರಿಸಾರ್ಟ್ ಕಾಣಿಸಿತು ಸಮುದ್ರದಂಡೆಯಲ್ಲಿ. ಬಳಸಿಕೊಂಡು ಬಂದು ಒಂದು ಚಿಕ್ಕ ಅಂಗಡಿಯಲ್ಲಿ ನಿಂಬೆಪಾನಕ ಕುಡಿದು ಕೆಳಗಿಳಿದು ಬೀಚ್‍ಗೆ ಹೋದೆವು. ಮುಂದೆ ಹೋದ ಬಾಲ್‍ರಾಜ್, ಸಂದೀಪ್ ಇಬ್ಬರೂ ನೀರಿಗಿಳಿದಿದ್ದರು. ಸ್ನೇಹಾ ಹಾಗೂ ಮಮತಾ ನೀರಲ್ಲಿ ಕಾಲಾಡಿಸುತ್ತಾ ಕುಳಿತಿದ್ದರು. ಈ ಕಡಲ ದಂಡೆ ಒಂದು ತುದಿಯಿಂದ ಇನ್ನೊಂದು ತುದಿಗೆ ಕಡಲೊಳಗೆ ಹೋದಂತೆ ಇದೆ, ಮಧ್ಯಭಾಗದಲ್ಲೂ ಸ್ವಲ್ಪ ದೂರ ಕಡಲೊಳಗಿದೆ, ಮೇಲಿಂದ ನೋಡಿದರೆ, ಯಾರೋ `ಓಂ' ಎಂದು ಬರೆದಂತೆ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿಗೆ ಓಂ ಬೀಚ್ ಎಂದು ಹೆಸರು.

ಅಲ್ಲಿ ಹೋದಾಗ ನಾವು ಯಾವ ದೇಶದಲ್ಲಿದ್ದೇವೆಂದು ಸಂಶಯ ಪಡುವಂತಾಯಿತು. ಎಲ್ಲೆಲ್ಲೂ ವಿದೇಶೀಯರೇ ತುಂಬಿದ್ದರು. ಓಂ ಬೀಚ್, ಕುಡ್ಲೆ ಬೀಚ್, ಅರ್ಧಚಂದ್ರ (ಹಾಫ್ ಮೂನ್) ಹಾಗೂ ಸ್ವರ್ಗ (ಪಾರಡೈಸ್) ಬೀಚ್‍ಗಳಲ್ಲಿ ವಿದೇಶೀಯರೇ ತುಂಬಿದ್ದಾರೆ. ದಾರಿಯಲ್ಲಿ ಸಿಕ್ಕಿದವರೆಲ್ಲಾ `ನಮಸ್ತೇ, ನಮಸ್ತೇ' ಎಂದು ಹೇಳುತ್ತಿದ್ದರು. ಅಲ್ಲಿ ಯಾವ ವಸ್ತು ಕೊಳ್ಳುವಂತಿದ್ದರೂ ಒಂದಕ್ಕೆರಡು ಕ್ರಯ ಕೊಟ್ಟು ಕೊಳ್ಳಬೇಕು. ದೇಶೀಯರಿಗೆ ಕಡಿಮೆ ಎಂದು ಹೇಳುತ್ತಾರೆ, ಆದರೂ ಕ್ರಯ ಸ್ವಲ್ಪ ಜಾಸ್ತಿಯೇ. `ಓಂ' ದಾಟಿ ಒಂದು ಬೆಟ್ಟ ಹತ್ತಿ ಆಚೆ ಇಳಿದರೆ, ಅರ್ಧಚಂದ್ರ ಬೀಚ್. ಅಲ್ಲಿ ಒಬ್ಬ ವಯಸ್ಸಾದ ಹೆಂಗಸು ಕಲ್ಲಂಗಡಿ ಹಣ್ಣು ತಂದಾಗ ಚಿಕ್ಕದೆನಿಸಿದರೂ, ೪೫ ರೂ ಕೊಟ್ಟು ತೆಗೆದುಕೊಂಡೆವು. ಆಕೆಯ ಜೊತೆ ಇದ್ದ ನಾಯಿಮರಿ ನಮ್ಮಗಳ ಜೊತೆ ಹೊಂದಿಕೊಂಡು ಆಟವಾಡುತ್ತಿತ್ತು. ಆಗ ಆಕೆ `ಅದನ್ನು ನಿಮ್ಮ ದೇಶಕ್ಕೆ ಕೊಂಡೊಯ್ಯಿರಿ' ಎಂದು ತಮಾಷೆ ಮಾಡಿದಾಗ, ನನಗೆ ನಗುವೂ ಬಂತು, ಸಂಕಟವೂ ಆಯಿತು. `ನಾವು ಇದೇ, ನೀನಿರುವ ದೇಶದವರೇ ಅಮ್ಮಾ' ಎಂದೆ. ಆಮೇಲೆ ಅನ್ನಿಸಿತು, ಆಕೆ ನಿಮ್ಮೂರಿಗೆ ಅನ್ನೋ ಬದಲು, ನಿಮ್ಮ ದೇಶ ಎಂದಿರಬಹುದು, ಅಥವಾ ವಿದೇಶೀಯರೊಂದಿಗೊಂದಾಗು ಮಂಕುತಿಮ್ಮಾ ಅಂದಿರಬಹುದು !

ಒಂದು ಮೋಟಾರ್ ಬೋಟಿನವರೊಂದಿಗೆ ಮಾತಾಡಿ, ಎಂಟೆಂಟು ಜನರಂತೆ, ಒಂದಷ್ಟು ದೂರ ಸಮುದ್ರ ಯಾನ ಮಾಡಿದೆವು. ಒಂದು ಸಲಕ್ಕೆ ನೂರ ಐವತ್ತು ರೂಪಾಯಿಗಳು, ಹೋಗಿರುವುದು ಸ್ವಲ್ಪವೇ ದೂರ. ವಿದೇಶೀಯರಿಗಾದರೆ ಇನ್ನೂರ ಐವತ್ತು ಎಂದು ತಿಳಿಯಿತು.

ಸರಿ ಅಲ್ಲಿಂದ ಮುಂದೆ ಹೊರಟು ಇನ್ನೊಂದು ಬೆಟ್ಟ ಹತ್ತಿ ಇಳಿದರೆ ಪಾರಡೈಸ್ ಬೀಚ್. ಬಹಳ ಸುಂದರವಾಗಿದೆ ಇದು. ಇಲ್ಲೂ ಅಷ್ಟೇ ವಿದೇಶೀಯರು. ನೀರಲ್ಲಿ ಆಟವಾಡುತ್ತಿದ್ದರು, ಸೂರ್ಯಸ್ನಾನ ಮಾಡುತ್ತಿದ್ದರು, ಕೂತು ಮದ್ಯ, ತಂಪು ಪಾನೀಯ ಸೇವಿಸುತ್ತಿದ್ದರು, ಓದುತ್ತಾ ಮಲಗಿದ್ದರು. ಈ ಬೀಚ್ ದಾಟಿಕೊಂಡು ಮುಂದೆ ಪುನಃ ಮತ್ತೊಂದು ಬೆಟ್ಟವನ್ನು ಹತ್ತಿ ಸ್ವಲ್ಪ ಮಟ್ಟಸವಾದ ಜಾಗಕ್ಕೆ ಬಂದಾಗ ಇದ್ದಕ್ಕಿದ್ದಂತೆ ಎಲ್ಲಾ ನಿಶ್ಶಬ್ಢವಾಯಿತು. ಆಗಾಗ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಬೇರೆ ಸದ್ದೇ ಇಲ್ಲ ! ಅತ್ತ ಹೋದರೆ, ಭೋರ್ಗರೆಯುವ ಸಮುದ್ರ, ಇತ್ತ ಬಂದರೆ ಮೌನವಾಗಿರುವ ಕುರುಚಲು ಕಾಡು....

ಇಷ್ಟು ಹೊತ್ತಿಗಾಗಲೇ ಸಂಜೆಯಾಗುತ್ತಾ ಬಂದಿತ್ತು. ನಾವು ಮುಂದೆ ತದಡಿ ಎಂಬಲ್ಲಿ `ಡಿಂಕಿ'ಯಲ್ಲಿ ಅಘನಾಶಿನಿ ನದಿ ದಾಟಿ ಹೋಗಬೇಕಿತ್ತು. ತದಡಿ ಬೀಚ್‍ಗೆ ಬಂದು ಎಳೆನೀರು ಕುಡಿದು, ಮುಂದೆ ರಸ್ತೆಯಲ್ಲಿ ನಡೆದು ಹೋದೆವು. ತದಡಿ ಪೇಟೆಯಲ್ಲಿ, ಕಾರಣಾಂತರಗಳಿಂದ ನಮ್ಮೊಡನೆ ಬರಲಾಗುವುದಿಲ್ಲವೆಂದ ಸಂದೀಪ್ ಹಾಗೂ ಸ್ನೇಹಾರನ್ನು ದುಃಖವಾದರೂ ಬೀಳ್ಕೊಟ್ಟು ನದಿ ದಡಕ್ಕೆ ಬಂದು `ಡಿಂಕಿ' ಗಾಗಿ ಕಾಯುತ್ತಾ ನಿಂತಿರುವಾಗ ಮೀನುಗಾರರು ಹಿಡಿದು ತಂದು ಹಾಕಿರುವ ರಾಶಿ ರಾಶಿ ಮೀನುಗಳನ್ನು ನೋಡುತ್ತಿದ್ದೆವು. ಆಗ ಆ ರಾಶಿಗಳಲ್ಲೊಂದರಲ್ಲಿ ನಮಗೆ ಒಂದು ಅಷ್ಟಪದಿಯ ಮರಿ ಕಾಣಸಿಕ್ಕಿತು. ಮುಟ್ಟಿ ನೋಡಿದೆವು. ಹಾಗೇ `ಈಲ್' ಎಂಬ ಎಲೆಕ್ಟ್ರಿಕ್ ಮೀನು ಕಾಣಸಿಕ್ಕಿತು. ದೋಣಿ ಬಂದಾಗ ಎಲ್ಲರೂ ಅದರೊಳಗಿಳಿದೆವು. ಬೇರೆ ಪ್ರಯಾಣಿಕರೂ ಇದ್ದರು. ಸುಮಾರು ಎಂಭತ್ತು ಜನರನ್ನು ಹೊತ್ತೊಯ್ಯಬಹುದಾದ ದೋಣಿ ಈ `ಡಿಂಕಿ'. ಅಘನಾಶಿನಿ ಹಾಗೂ ಸಮುದ್ರರಾಜನ ಮೌನ ಮಿಲನ ನೋಡುತ್ತಾ ಈ ದಂಡೆಯಿಂದ ಆ ದಂಡೆ ತಲುಪುವ ವೇಳೆಗೆ ಸೂರ್ಯ ಪೂರ್ತಿ ನಿಶೆಯ ತೆಕ್ಕೆಯೊಳಗಿದ್ದ. ಅಲ್ಲಿಂದ ಮುಂದೆ ನಡೆದು ಇನ್ನೊಂದು ಬೆಟ್ಟವನ್ನು ಹತ್ತಿ ಮತ್ತೊಂದು ದಂಡೆಗೆ ಹೋಗುವ ಸಾಧ್ಯತೆ ಕಡಿಮೆ ಇದ್ದುದರಿಂದ ಪುನಃ ಒಂದು ಯಾಂತ್ರಿಕ ದೋಣಿಯಲ್ಲಿ ನಾವು ಹದಿನಾಲ್ಕು ಜನ ಹಾಗೂ ಮತ್ತಿಬ್ಬರು ನಾವಿಕರು, `ಕಿರುಬೆಲೆ' ಕಡಲ ದಂಡೆಗೆ ಬಂದೆವು. ಚಂದಿರನ ಬೆಳಕಲ್ಲಿ, ನಾವು ತಂದ ಆಹಾರವನ್ನು ತಿಂದು, ಮಲಗಲು ಸಿದ್ಢತೆಗಳನ್ನು ಮಾಡಿಕೊಂಡೆವು. ಕೆಲವರಿಗೆ ಒಂದು ನಿದ್ದೆಯೂ ಆಯಿತು. ನಮ್ಮ `ಅರುಣ'ನ ಸವಿಗಾನವನ್ನು ಕೇಳುತ್ತಾ ಕೇಳುತ್ತಾ ನಿದ್ರಿಸಿದವರೂ ಎದ್ದು ಕುಳಿತರು (??). ಏಳದವರನ್ನು ಬಲವಂತವಾಗಿ ಎಬ್ಬಿಸಿ, ಅಂತ್ಯಾಕ್ಷರಿ ಸುರುಮಾಡಿದೆವು. ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ, ಸೀಮೇಎಣ್ಣೆ ಮುಗಿದು ಆರಲು ಸಿದ್ಢವಾದ ದೀಪದಂತಿದ್ದ ಚಂದ್ರ, ಹನ್ನೆರಡು ಘಂಟೆಯ ಹೊತ್ತಿಗೆ ಪೂರ್ತಿ ಮುಳುಗಿಯೇ ಹೋದ. ನಾವೆಲ್ಲರೂ ಜೀವನದಲ್ಲಿ ಮೊದಲ ಬಾರಿಗೆ ಚಂದ್ರಸ್ತ ನೋಡಿದೆವು. ನಮಗಿದು ಕೌತುಕದ ಸಂಗತಿ!

ಹನ್ನೆರಡು ಘಂಟೆಯ ಮೇಲೆ, ಅಂದರೆ ಫೆಬ್ರವರಿ ನಾಲ್ಕನೇ ತಾರೀಖಿಗೆ ನಮ್ಮ `ಡೀನ್' ಗೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಹೇಳಿದೆವು. ನಿಜಕ್ಕೂ ಅವನಿಗೆ ಇದು ಒಂದು ಮರೆಯಲಾರದ ಹುಟ್ಟುಹಬ್ಬ; ಸುಂದರವಾದ ಸಮುದ್ರ ದಡ, ನಕ್ಷತ್ರಗಳ ಬೆಳಕು, ಜೊತೆಯಲ್ಲಿ ಒಂದೇ ಮನಸ್ಸು ಇಷ್ಟಗಳ ಸ್ನೇಹಿತ ಸ್ನೇಹಿತೆಯರು.....

ಇನ್ನು ನಿದ್ರಿಸೋಣ ಎಂದು ನಿರ್ಧರಿಸಿದೆವು. ಮೇಲೆ ನಕ್ಷತ್ರ, ಪಕ್ಕದಲ್ಲಿ ಜೋಗುಳ ಹಾಡುತ್ತಿದ್ದ ಸಮುದ್ರ.... ಎಲ್ಲರಿಗೂ ಸುಖನಿದ್ರೆ !

ಬೆಳಗ್ಗೆ ಸುಮಾರು ೪.೩೦ ಹೊತ್ತಿಗೆ ತದಡಿ ಕಡೆಯಿಂದ ಮೀನುಗಾರರ ಬೋಟ್‍ಗಳು ದಿನದ ಕೆಲಸಕ್ಕೆಂದು ಒಂದೊಂದಾಗಿ ಸಮುದ್ರಕ್ಕಿಳಿಯಲಾರಂಭಿಸಿದವು. ಐದೂವರೆ, ಆರು ಘಂಟೆಯ ಅಂದಾಜಿಗೆ ನಾವೂ ಎದ್ದೆವು. ನಾವು ಹುಡುಗಿಯರು (ಹೆಂಗಸರು) ಅಲ್ಲೇ ಸ್ವಲ್ಪ ದೂರದಲ್ಲಿದ್ದ ಒಂದು ಮನೆಗೆ, ಮುಖ ತೊಳೆಯಲೆಂದು ಹೋದೆವು. ಆ ಮನೆಯವರ ಹೃದಯ ವಿಶಾಲವಾದುದು, ನಮಗೆಲ್ಲಾ ಅದರಲ್ಲಿ ಪೂರ್ವಾಪರ ವಿಚಾರಿಸದೆ ಸ್ಥಳ ನೀಡಿದರು. ಚಹಾ ಕುಡಿಯಿರೆಂದಾಗ ಬೇಡವೆಂದುದಕ್ಕೆ ಆ ಮನೆಯ ಹಿರಿಯಳಾದ ಒಬ್ಬಾಕೆ ಹೇಳಿದ ಮಾತುಗಳು, ಮನುಷ್ಯ ಸ್ನೇಹಜೀವಿ ಎಂಬ ಮಾತನ್ನು ದೃಢಪಡಿಸುವಂಥದ್ದು. `ನಾವು ಒಬ್ಬರಿಗೊಬ್ಬರು ಸಹಾಯ ಮಾಡಲೇ ಬೇಕು, ನಾಳೆ ನಮ್ಮ ಮನೆಯ ಮಕ್ಕಳು ಈ ಥರ ಹೊರಗೆ ಹೋದರೆ, ಬೇರೆಯವರೂ ಮಾಡಬೇಕಲ್ಲಾ, ನಾವು ಮಾಡುವುದಿಲ್ಲವೆಂದರೆ ಹೇಗೆ? ಇದೆಲ್ಲಾ ನಮಗೆ ಖಂಡಿತವಾಗಿಯೂ ತೊಂದರೆಯೇ ಅಲ್ಲ, ದಯವಿಟ್ಟು ಸಂಕೋಚ ಬೇಡ' ಎಂದರಾಕೆ. ಬಾವಿಯಿಂದ ನೀರು ಸೇದಿ, ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟರು. ಬೆಳಗಿನ ತಿಂಡಿಗೆಂದು ಅಕ್ಕಿರೊಟ್ಟಿ ಕೂಡಾ ಕಟ್ಟಿಕೊಟ್ಟರು. ನಾವೆಲ್ಲಾ ಒಂದು ಕ್ಷಣ ಮೂಕರಾಗಿ ಹೋದೆವು ಈ ಪ್ರೀತಿಯ ಮುಂದೆ.

ಪುನಃ ನಮ್ಮ ಚಾರಣ ಸುರು. ಸಮುದ್ರ ದಡದಲ್ಲಿ ಒಂದು ಬೆಟ್ಟವನ್ನು ಬಳಸಿಕೊಂಡು, ಬಂಡೆಗಳ ಮೇಲೆ ನಡೆಯುತ್ತಾ, ಮುಂದೆ `ಬರ್ಕಾ' ಬೀಚ್ ತಲುಪಿದೆವು. ಇದು ಒಂದು ಪುಟ್ಟ ಬೀಚ್. ಇಲ್ಲಿ ಸಮುದ್ರದ ಅಬ್ಬರ ಸ್ವಲ್ಪ ಜಾಸ್ತಿ.
ಇಲ್ಲಿರುವ ಒಂದು ಸಣ್ಣ ಹೊಟೇಲ್‍ನಲ್ಲಿ ಆಲೂ ಪರೋಟ, ಬ್ರೆಡ್ ಟೊಮ್ಯಾಟೋ, ಬ್ರೆಡ್ ಆಮ್ಲೆಟ್ ತೆಗೆದುಕೊಂಡೆವು.

ಅಲ್ಲಿಂದ ಮತ್ತೆ ಬೆಟ್ಟವೇರಿ, ಕೋಟೆಯೊಳಗೆ ನಡೆದು, ಪುನಃ ಇಳಿದರೆ `ಬಾಡಾ' ಬೀಚ್. (ಬಾಡಾ ಎಂಬುದು ಊರ ಹೆಸರೋ ಅಥವಾ ಹಿಂದಿ ಶಬ್ಧ `ಬಡಾ' ಎಂಬುದರಿಂದ ಈ ಹೆಸರು ಬಂತೋ ತಿಳಿಯಲಿಲ್ಲ) ಈ ಬೀಚ್ ಸುಮಾರು ಒಂಭತ್ತು ಕಿಲೋಮೀಟರ್ ಉದ್ದಕ್ಕೂ ಇದೆ. ಇದೇ ನಾವು ಹೋದುದರಲ್ಲೆಲ್ಲಾ ಅತಿ ದೊಡ್ಡ ಬೀಚ್. ಇದರ ದಂಡೆಯಲ್ಲೆಲ್ಲಾ ಮನುಷ್ಯರ ಗಲೀಜಿತ್ತು. ನಡೆದು ನಡೆದು, ಒಂದು ಕಡೆ ಊರೊಳಗೆ ಹೋಗಿ ಬನ್ಸ್, ಬಜ್ಜಿ ಹಾಗೂ ತಂಪಾದ ರಾಗಿ ನೀರು ಕುಡಿದು ರಾತ್ರಿಗೆ ಸ್ವಲ್ಪ ಊಟ ಕಟ್ಟಿಸಿಕೊಂಡು, ಪುನಃ ನಾಲ್ಕು ಕಿಲೋಮೀಟರ್ ನಡೆದು ಕಡಲೀ ಬೀಚ್ ತಲುಪಿದೆವು. (ಬಾಡಾ ಬೀಚ್‍ನ ಕೊನೆಯೇ ತುದಿಯೇ ಕಡಲೀ ಬೀಚ್). ಅಲ್ಲಿಂದ ಇನ್ನೂಂದು ಬೆಟ್ಟವನ್ನು ಬಳಸಿಕೊಂಡು ಮಂಗಳಗೋಡು ಬೀಚ್‍ಗೆ ಬಂದಾಗ ಸೂರ್ಯ ಮುಳುಗುತ್ತಿದ್ದ. ಇದು ಅತ್ಯಂತ ಸುಂದರವಾದ ಬೀಚ್ ಹಾಗೂ ಅತ್ಯದ್ಭುತವಾದ ಸೂರ್ಯಾಸ್ತ ! ಈ ಬೀಚ್ ಮೇಲೆ ಪ್ರೀತಿ ಉಕ್ಕಿ ಬಂದು ನಾವೇ ಅದಕ್ಕೊಂದು ಹೆಸರು ನೀಡುವ ಮನಸ್ಸು ಮಾಡಿ, ಆರ್.ಹೆಚ್.ಎಮ್. (ರಾಂಬ್ಲಿಂಗ್ ಹಾಲಿಡೇ ಮೇಕರ್‍ಸ್) ಎಂದು ಹೆಸರಿಟ್ಟೆವು. ಇಲ್ಲೇ ಉಳಿದುಕೊಳ್ಳೋಣ ಎಂಬ ಯೋಚನೆ ಬಂದರೂ ಮುಂದುವರಿದು, ಬೆಟ್ಟ ಹತ್ತಿ ಇಳಿದು ವನ್ನಳ್ಳಿ (ಹೊನ್ನಾಳಿ) ಬೀಚ್ ತಲುಪಿದೆವು.

ವನ್ನಳ್ಳಿ ಬೀಚ್‍ನಲ್ಲಿ ತುಂಬಾ ಜನ, ಊರು ಸಮುದ್ರ ದಂಡೆಯಲ್ಲೇ ಇದೆ. ಒಂದು ಮಸೀದಿಯೂ ಸಮುದ್ರದ ತಟದಲ್ಲೇ ಇದೆ. ಇಲ್ಲಿಂದ ಕುಮಟಾಗೆ ಸ್ವಲ್ಪವೇ ದೂರ. ಆದ್ದರಿಂದ ಎಲ್ಲರಿಗೂ ಸಾಕಾಗುವಷ್ಟು ಊಟ ತರಲೆಂದು ಅರುಣ್, ಶ್ಯಾಂ, ಡೀನ್, ಗೋವಿಂದ್‍ರಾಜ್ ಆಟೋದಲ್ಲಿ ಕುಮಟಾಗೆ ಹೋದರು. ವಾಪಾಸ್ಸಾದ ನಂತರ ಭರ್ಜರಿ ಊಟ ಮುಗಿಸಿ ದಂಡೆಯಲ್ಲೇ ಮಲಗುವ ಎಂದು ಯೋಚಿಸಿದರೂ, ಆಟೋ ಚಾಲಕನ ಸಲಹೆಯಂತೆ ಊರೊಳಗೆ ಬಂದು ಒಂದು ಶಾಲೆಯ ಹೊರಾಂಗಣದಲ್ಲಿ ಮಲಗಿದೆವು. ಇಲ್ಲಿ ಒಬ್ಬ ಶಿಕ್ಷಕ `ಶ್ರೀ ರಾವುತ್' ಹಾಗೂ ಅವರ ಕುಟುಂಬ, ನಮಗೆ ಕುಡಿಯಲು ನೀರು, ಸ್ನಾನ ಮಾಡಲು ಬಚ್ಚಲು ಮನೆ, ಬಟ್ಟೆ ಬದಲಿಸಿಕೊಳ್ಳಲು ಶಾಲೆಯ ಕೋಣೆ ಹೀಗೆ ಎಲ್ಲಾ ಸಹಾಯವನ್ನೂ ಮಾಡಿದರು.

ಮರುಬೆಳಗ್ಗೆ ಐದೂವರೆಗೆ ಎದ್ದು `ಧಾರೇಶ್ವರ'ದ ಕಡೆ ನಡೆದೆವು. ವನ್ನಳ್ಳಿಯ ಹತ್ತಿರವೇ ಇನ್ನೊಂದು ಬೀಚ್. ಇದೂ ಅಷ್ಟೇ ತುಂಬಾ ಸುಂದರವಾಗಿತ್ತು. ಆದರೆ ಊರವರು ಕೆಲವರು ಅಲ್ಲಿ `ಬೆಳಗಿನ ಕೆಲಸ'ಕ್ಕೆಂದು ಸಾಲಾಗಿ ಕುಳಿತಿದ್ದುದರಿಂದ ನಮಗೆಲ್ಲಾ ಕೊಂಚ ಮುಜುಗರವೆನಿಸಿತು. ಇಲ್ಲಿಂದ ಮುಂದೆ ಧಾರೇಶ್ವರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಡುವೆ ಒಂದು `ಕೊಲ್ಲಿ', ಎರಡು ದಂಡೆಯನ್ನು ಸುಮಾರು ಎಂಟರಿಂದ ಹತ್ತು ಮೀಟರಿನಷ್ಟು ಪ್ರತ್ಯೇಕಿಸಿತ್ತು. ನೀರು ತುಂಬಾ ಇದ್ದುದರಿಂದ ದಾಟಲಸಾಧ್ಯವಾಗಿತ್ತು. ಸುತ್ತು ಹೊಡೆದು ಸುಮಾರು ನಾಲ್ಕರಿಂದ ಆರು ಕಿಲೋಮೀಟರ್ ನಡೆದರೆ ಧಾರೇಶ್ವರಕ್ಕೆ ಹೋಗಬಹುದೆಂದು ಸ್ಥಳೀಯರು ಹೇಳಿದರೂ, ಸಮಯದ ಅಭಾವದಿಂದ ನಾವು ಆ ಊರೊಳಗೆ ಬರುವ ಬಸ್ಸಿನಲ್ಲಿ ಕುಮಟಾಗೆ ಹೋಗಲು ನಿರ್ಧರಿಸಿದೆವು.

ದೂರದ ಬೆಟ್ಟಗಳ ಹಿಂದಿಂದ ಸೂರ್ಯ ಚಿನ್ನಾಟವಾಡುತ್ತಾ ಬರುವ ಸುಂದರ ದೃಶ್ಯ ನೋಡುತ್ತಾ ಮುಂದುವರಿದೆವು. ಬಸ್ ಬಂತು. ಕುಮಟಾದಲ್ಲಿಳಿದು ಇನ್ನೊಂದು ಬಸ್ಸೇರಿ, ಹೊನ್ನಾವರದ ದಾರಿಯಲ್ಲಿ ಕರ್ಕಿ (ಮಟ) ಎಂಬಲ್ಲಿಳಿದೆವು. ಅಲ್ಲೇ ಒಂದು ಹೊಟೇಲಲ್ಲಿ ತಿಂಡಿ ತಿಂದು `ತೆರೆಬಾಗಿಲು' ಬೀಚ್‍ಗೆ ನಡೆದೆವು. ದಾರಿಯಲ್ಲಿ ಒಂದು ತೂಗುಸೇತುವೆಯ ಮೇಲೆ ಹೋಗಬೇಕು. ಇದೂ ಒಂದು ಮರೆಯಲಾರದ ಅನುಭವ. `ತೆರೆಬಾಗಿಲು' ಬೀಚ್ ಕೊಳಕಿಲ್ಲದ ಶುಭ್ರವಾದ ಬೀಚ್. ನೀರಿನೊಳಗೆ ಕೂಡ ಸುಮಾರು ಒಂದು ಕಿಲೋಮೀಟರ್ ದೂರ ಮಟ್ಟಸವಾಗಿರುವ ಬೀಚ್‍ನಲ್ಲಿ ನೀರಾಟವಾಡಲು ಮಜವಾಗಿತ್ತು. ಎರಡು ಘಂಟೆಗಳ ಕಾಲ ನೀರಲ್ಲಿದ್ದರೂ ಎರಡು ನಿಮಿಷವಷ್ಟೇ ಆದಂತಿತ್ತು. ಇಲ್ಲಿ ದಡದಿಂದ ಸುಮಾರು ೨ ಕಿಲೋಮೀಟರ್ ದೂರದಲ್ಲಿ ಒಂದು ಪುಟ್ಟ ಬೆಟ್ಟ ದ್ವೀಪದಂತೆ ಸಮುದ್ರದಲ್ಲಿದೆ. ಅಲ್ಲಿ ಒಂದು ಸಿಹಿ ನೀರಿನ ಭಾವಿ ಇದೆ, ಊರವರು ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆಂದು ತಿಳಿಯಿತು. ಸಮುದ್ರ ಸ್ನಾನ ಮುಗಿಸಿ, ದಡದಲ್ಲಿದ್ದ ಸಿಹಿ ನೀರ ಬಾವಿಯಿಂದ ನೀರು ಸೇದಿ ತಲೆ, ಮೈ ಮೇಲೆ ಹೊಯ್ದುಕೊಂಡೆವು. ಇಲ್ಲಿ ದಡದಲ್ಲಿದ್ದ ಮನೆಗಳು ಮಳೆಗಾಲದ ಅಬ್ಬರಕ್ಕೆ ಸಮುದ್ರದ ಪಾಲಾಗಿ, ಮುರಿದ ಗೋಡೆಗಳು ಸಾಕ್ಷಿಯಾಗಿತ್ತು. ಕಲ್ಲುಗಳನ್ನು ಕಟ್ಟಿ, ನೀರು ಊರೊಳಗೆ ಬರದಂತೆ ತಡೆಯುತ್ತೇವೆ ಎನ್ನುತ್ತಲೇ ಇದೆ ಸರಕಾರ ಆದರೆ ಏನೂ ಆಗಲಿಲ್ಲ ಎಂದು, ಮಳೆಗಾಲದಲ್ಲಿ ಮನೆ ಕಳೆದುಕೊಂಡ ಒಬ್ಬ ಹೆಂಗಸು ದುಃಖ ತೋಡಿಕೊಂಡರು. ನಾವೂ ಪೆಚ್ಚುಮೋರೆ ಹಾಕಿಕೊಂಡು ಸಹಾನುಭೂತಿ ತೋರಿಸುವ ಹೊರತು ಏನೂ ಮಾಡಲಾಗಲಿಲ್ಲ.

ಪುನಃ `ಮಟ'ಕ್ಕೆ ಬಂದು ಬಸ್ ಹಿಡಿದು ಹೊನ್ನಾವರ ತಲುಪಿ, ಹೊಟೇಲ್ ರೂಮ್ ಬುಕ್ ಮಾಡಿ, ಊಟ ಮಾಡಿ, ಸ್ನಾನಾದಿಗಳನ್ನು ಮುಗಿಸುವಷ್ಟರಲ್ಲಿ ಆರು ಘಂಟೆಯಾಯಿತು. ನಮ್ಮ ಬಸ್, ಕುಮಟಾದಿಂದ ಹೊನ್ನಾವರಕ್ಕೆ ಏಳು ಘಂಟೆಗೆ ಬಂತು. ಬಸ್ಸಲ್ಲೂ ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತ, ನಗುತ್ತಾ, ಸಾಗರ ದಾಟಿ ಮಾವಿನಗುಂಡಿಯಲ್ಲಿ ಒಂದು ಹೊಟೇಲಲ್ಲಿ ಚಪಾತಿ ಪಲ್ಯ ತಿಂದೆವು. ಅಲ್ಲಿಂದ ಹೊರಟ ಮೇಲೆ ಎಲ್ಲರೂ ನಿದ್ರಾದೇವಿಯ ತೆಕ್ಕೆಯೊಳ ಸೇರಿದ ಕಾರಣ ಮುಂದೆ ಬೆಂಗಳೂರು ತಲುಪಿ, ಒಬ್ಬರಿಗೊಬ್ಬರು ಟಾಟಾ ಬಾಯ್ ಬಾಯ್ ಹೇಳುವುದಷ್ಟೇ ಸಾಧ್ಯವಾಯಿತು ಬೆಳಗಾದಾಗ!