Thursday, February 08, 2007
ದೇವಕಾರ
ಹನಿಹನಿಯಾಗಿ ಹನಿಯುತ್ತಿತ್ತು ದೇವಕಾರ
ಪ್ರಕೃತಿಯೇ ಬರೆದಿದೆ ಇಲ್ಲಿ ಸುಂದರ ಚಿತ್ತಾರ
ಬಳುಕುತ್ತ ಬಳ್ಳಿಯಾಗಿ,
ಸುತ್ತುತ್ತ ಸುಳಿಯಾಗಿ ಹರಿಯುತ್ತಿತ್ತು
ಬಂಡೆಗಳ ಕೆಣಕುತ್ತ,
ಜೊತೆಗೂಡಿ ಸೆಣೆಸುತ್ತ ಮೊರೆಯುತ್ತಿತ್ತು
ಗುಪ್ತಗಾಮಿನಿಯಾಗಿ, ಸಪ್ತಕಾಮಿನಿಯಂತೆ
ಸುಪ್ತಕಾಮನೆಗಳ ಕೆರಳಿಸಿ ನಗುತ್ತಿತ್ತು
ಸಸ್ಯಶಾಮಲೆಯರೊಡನೆ ನಲಿಯುತ್ತಿತ್ತು
ನಿಂತೆಡೆ ನೀಲಿಯಾಗಿ, ಹರಿದೆಡೆ ಹೊಳೆಯುತ್ತ
ಪಾಚಿಯೊಡನೆ ಹಸಿರಾಗಿ ಜಾರುತ್ತಿತ್ತು
ರುದ್ರರಮಣಿಯಂತೆ ರೌದ್ರವಿತ್ತು
ಛಲದಲ್ಲಿ ಚಂಡಿಯಾಗಿ ಚಡಪಡಿಸುತ್ತಿತ್ತು
ಒಮ್ಮೊಮ್ಮೆ ಮಗುವಿನಂತೆ ಮುಗ್ಧವಾಗುತ್ತಿತ್ತು
ಮತ್ತೊಮ್ಮೆ ತಾಯಿಯಂತೆ ಮಮತೆ ತೋರುತ್ತಿತ್ತು
ಕೆಲವೊಮ್ಮೆ ಸ್ನೇಹ ಸೌರಭ ಸೂಸುತ್ತಿತ್ತು
ಇನ್ನೊಮ್ಮೆ ಪ್ರಿಯತಮನ ಅಪ್ಪುಗೆಯಂತೆ ಬೆಚ್ಚಗಿತ್ತು.
(ದೇವಕಾರ ಜಲಪಾತ ನೋಡಿದಾಗ ಮನಸಿಗೆ ಅನಿಸಿದುದನ್ನು ಗೀಚಿದೆ.)
Subscribe to:
Comments (Atom)
