Thursday, January 21, 2010

" ನನ್ನ ಎರಡು ರೂಪಾಯಿ "


ಚಿತ್ರಕೃಪೆ: ಗೂಗಲ್



ನನಗಾಗ ಏಳು ವರ್ಷ. ಪೇಪರಲ್ಲಿ ಪದಬಂದದ ಸ್ಪರ್ಧೆ ಬಂದಿತ್ತು. ಅದನ್ನು ತುಂಬಿಸಿದ ಚಿಕ್ಕಪ್ಪ, ನನ್ನ ಹೆಸರು ಹಾಕಿ ಕಳಿಸಿದ್ರು. ಒಂದು ದಿನ, ನನ್ನನ್ನು ಹುಡುಕಿಕೊಂಡು ‘ಎರಡು ರೂಪಾಯಿ’ ಮನಿ ಆರ್ಡರ್ ಬಂದಾಗಲೇ ಗೊತ್ತಾಗಿದ್ದು, ನನಗೆ ಬಹುಮಾನ ಬಂದಿದೆ ಅಂತ. ಅದೆಲ್ಲಿತ್ತೋ, ಆ ಕ್ಷಣದಲ್ಲಿ ಚಿಕ್ಕಪ್ಪನ ಮೇಲೆ ಅತಿಯಾದ ಪ್ರೀತಿ, ಅಭಿಮಾನ ಉಕ್ಕಿ ಬಂತು, ಆಜನ್ಮ ಋಣಿಯಾಗಿರುವಂಥಾ ಕೃತಜ್ಞತಾ ಭಾವ.

ಆಹಾ ! ನನ್ನ ಹೆಸರಲ್ಲಿ, ಅದೂ ಎರಡು ರೂಪಾಯಿ ಅಂದ್ರೆ ಸಾಮಾನ್ಯವೇ!! ಎಂಥಾ ಹೆಮ್ಮೆ!! ನನಗಾಗ ಪೈಸೆ, ರೂಪಾಯಿಗಳ ಲೆಕ್ಕಾಚಾರ ಅರ್ಥವಾಗುತ್ತಿರಲ್ಲಿಲ್ಲವಾದ್ದರಿಂದ, ಏನೋ ಲಕ್ಷ ರೂಪಾಯಿ ಬಂದಂಥ ಸಂತಸ, ಹೆಮ್ಮೆ, ಅಹಂಕಾರ.

ಈ ದುಡ್ಡು ಜೋಪಾನ ಮಾಡುವ ಜವಾಬ್ದಾರಿ ಬಿತ್ತು ನಂಗೆ. ಅಮ್ಮನ ಕೈಲಿ ಕೊಟ್ಟು ಜಾಗ್ರತೆಯಾಗಿ ಇಡಲು ಹೇಳಿ, ಅಮ್ಮ ಎಲ್ಲಿಡುತ್ತಾರೆಂದು ನೋಡಿ, ಕಪಾಟಿನ ಬಾಗಿಲೆಲ್ಲಾ ಭದ್ರವಾಗಿದೆಯೋ ಇಲ್ವೋ ನೋಡ್ಸಿದೆ. ಇಲ್ಲಾಂದ್ರೆ ನನ್ನ ಆಸ್ತೀನ ಯಾರಾದ್ರೂ ತಗೊಂಡ್ರೆ ಅಂತ ಭಯ! ಜೊತೆಗೆ ಅದೊಂಥರಾ ಅದುವಿಡಲಾರದಂಥ ಭಾವನೆ.

ಮಧ್ಯಾಹ್ನ ಮತ್ತೆ, ದುಡ್ಡು ತೋರ್‍ಸು ಅಂತ ಕೇಳಿದೆ, ಏನೋ ಕೆಲಸದಲ್ಲಿ ವ್ಯಸ್ತವಾಗಿದ್ದ ಅಮ್ಮ, ಸಮಯ ಮಾಡಿಕೊಂಡು ಬರೋವರೆಗೂ ನಾನು ಬೆಕ್ಕಿನ ಹಾಗೆ ಕಪಾಟಿನ ಸುತ್ತಮುತ್ತವೇ ಸುತ್ತುತ್ತಾ ಇದ್ದೆ. ದುಡ್ಡು ಹೊರ ತೆಗೆಸಿ, ಮುಟ್ಟಿ, ಮೂಸಿ ನೋಡಿ, ಮುಖವನ್ನು ಉರಿಯುವ ಬಲ್ಬಿನಂತೆ ಮಾಡಿಕೊಂಡು, ಅಮ್ಮನ ಕೈಗೆ ಕೊಟ್ಟೆ. ಅದಾಗಲೇ ಅಮ್ಮಂಗೆ ಅನುಮಾನ ಬಂದಿತ್ತು, ಇನ್ನು ಇವ್ಳ ಕಾಟ ತಪ್ಪಿದ್ದಲ್ಲ ಅಂತ, ‘ಆಯ್ತಲ್ಲಾ ನೋಡಿ, ಇನ್ನು ಮತ್ತೆ ಮತ್ತೆ ಕೇಳೋ ಹಾಗಿಲ್ಲ, ನಂಗೆ ಕೆಲ್ಸ ಇದೆ’ ಅಂತ ಮುಂಜಾಗ್ರತೆಯಾಗಿ ಸೂಚಿಸಿ ಹೋದ್ರು.

ಶಾಲೆಯಲ್ಲಿ, ನನ್ನ ತರಗತಿಯಲ್ಲಿ ನನಗೆ ವಿಶೇಷ ಗೌರವ. ಉಳಿದ ಮಕ್ಕಳಿಗೆ, ‘ನಮಗೂ ದುಡ್ಡು ಬರಬಾರದಿತ್ತಾ’ ಅನ್ನೋ ಸಂಕಟ. ಆಟ ಆಡಲು ಹೋದಾಗಲೂ ನಂಗದೇನೋ ಹೆಮ್ಮೆ. ಮುಂದೆರಡು ಮೂರು ದಿನ, ನನ್ನದೇ ವಯಸ್ಸಿನ ಎಲ್ಲರಿಗೂ ನನ್ನ ನೋಟಿನ ಬಗ್ಗೆ ವಿವರಗಳನ್ನು ಕೊಡೋದೇ ಆಯ್ತು. ಜೊತೆಗೆ, ನಂಗೂ ಏನೋ ಒಂದು ಧೈರ್ಯ, ಬಹುಶಃ ‘ಕಾಪಿ’ ಬರೀದೇ ಇದ್ರೂ ಸರಸ್ವತಿ ಟೀಚರಿಗೆ ಕೋಪ ಬರಲಾರದು, ನಂಗೆ ಬಹುಮಾನ, ಅದೂ ದುಡ್ಡು ಬಂದಿದ್ಯಲ್ಲಾ !!

ಕೊನೆಗೊಂದು ದಿನ ಶಾಲೆಯ ವಾರ್ಷಿಕೋತ್ಸವ ಬಂತು. ರಾತ್ರೆ ನಮಗೆಲ್ಲಾ ಜೊತೆಯಾಗಿ ಅಜ್ಜಿಯೂ ಬಂದ್ರು. ಮಕ್ಕಳ ಕೈಯಲ್ಲಿ ದುಡ್ಡು ಕೊಟ್ಟರೆ ಎಲ್ಲಿ ಕಳೆದುಕೊಳ್ಳುತ್ತಾರೋ ಅಂತ ಅಜ್ಜಿಯೇ ನಮಗೆ ಖಜಾಂಚಿ. ಹೊರಡುವ ಸಮಯದಲ್ಲಿ ಮತ್ತೆ ಮತ್ತೆ ಕೇಳಿ ದೃಢ ಪಡಿಸಿಕೊಳ್ಳುತ್ತಿದ್ದೆ, "ಅಜ್ಜೀ, ಎನ್ನ ಎರಡು ರೂಪಾಯಿ ತೆಕ್ಕೊಂಡಿದಿರನ್ನೇ, ಮರೆಯೆಡಿ" (ಅಜ್ಜೀ ನನ್ನ ಎರಡು ರೂಪಾಯಿ ತಗೊಂಡಿದೀರಾ ತಾನೇ ! ಮರೀಬೇಡಿ!)

ಅದ್ಯಾಕೋ ಏನೋ, ನನ್ನ ಈ ಸಂಭ್ರಮವನ್ನು ಯಾರು ಎಷ್ಟು ತಮಾಷೆ ಮಾಡಿದ್ರೂ ನಂಗೇನೂ ಅನಿಸ್ತಿರ್‍ಲಿಲ್ಲ. ನನ್ನ ಬಗ್ಗೆ ನಂಗೇ ‘ಸೆಲೆಬ್ರಿಟಿ’ ಥರಾ ಅನಿಸ್ತಿತ್ತು. (ತರಗತಿಯ ಮಕ್ಕಳ ದೃಷ್ಟಿಯಲ್ಲಿ ನಾನಾಗಲೇ ‘ಸೆಲೆಬ್ರಿಟಿ’ ಆಗಿದ್ದೆ, ಯಾರಿಗೆ ಏನೇ ಬೇಕಾದರೂ ನನ್ನ ಕೇಳೇ ಮಾಡೋವರೆಗೆ ಬಂದಿತ್ತು.)

ಶಾಲೆಯ ಹತ್ತಿರ ಬಂದಾಗ ಮೈಕಾಸುರನ ಅಬ್ಬರ, ವಾರ್ಷಿಕೋತ್ಸವದ ಸಡಗರ. ಒಂದು ರೌಂಡ್ ಹೋಗಿ, ಏನೇನು ಅಂಗಡಿ ಹಾಕಿದಾರೆ, ಏನೇನೆಲ್ಲ ತಗೊಳ್ಬೋದು ಅಂತೆಲ್ಲಾ ಲೆಕ್ಕ ಹಾಕಿಕೊಂಡೆ. ಅಣ್ಣಂಗೂ; ಏನು ಬೇಕಾದ್ರೂ ತಗೋ ಅಂತ ಧಾರಾಳವಾಗಿ ಹೇಳಿದೆ. ಕಾರ್ಯಕ್ರಮ ಶುರುವಾಯ್ತು. ಅಷ್ಟರಲ್ಲಿ ಐಸ್ ಕ್ಯಾಂಡಿ ಗಾಡಿಯ ಘಂಟೆಯೂ ಕೇಳಿತು. ಕೂಡಲೇ ಗೆಳತಿಯರನ್ನೆಲ್ಲಾ ಕರೆದುಕೊಂಡು, ಅಜ್ಜಿಯ ಹತ್ತಿರ ದುಡ್ಡು ಕೇಳಿದೆ. ಯಾರೋ ಇನ್ನೊಬ್ಬ ಅಜ್ಜಿಯೊಡನೆ ರಸವತ್ತಾದ ಪಟ್ಟಾಂಗದಲ್ಲಿದ್ದ ಕಾರಣ, ನನ್ನ ಎರಡು ರೂಪಾಯಿ ನೋಟನ್ನು ಹುಡುಕಿ ತೆಗೆಯುವ ಬದಲು, ಕೈಗೊಂದಿಷ್ಟು ನಾಣ್ಯಗಳನ್ನು ಕೊಟ್ಟು ಸಾಗಹಾಕಿದ್ರು. (ಇದರಿಂದಾಗಿ ಮುಂದೆ ಬರುವ ಕಷ್ಟದ ಅರಿವಾಗಲಿಲ್ಲ ಅವರಿಗೆ).

ಸಾಹುಕಾರಳಂತೆ ಕೈಲಿ ನಾಣ್ಯಗಳನ್ನು ಹಿಡಿದು, ಯಾರಿಗೆಲ್ಲ ಬೇಕೋ ತಗೊಳ್ಳಿ ಅಂತ ಹೇಳಿ, ನಾನೂ ಕೆಂಪು ಬಣ್ಣದ ಐಸ್ ಕ್ಯಾಂಡಿ ಚೀಪುತ್ತಾ, ಬಂದು ಅಜ್ಜಿಯ ಹತ್ರ ಕುಳಿತೆ. ಸಭೆ ಮುಗಿದು ಬಹುಮಾನ ವಿತರಣೆ ಆದ ಕೂಡಲೆ, ಚುರುಮುರಿ ಗಾಡಿ ನೆನಪಿಗೆ ಬಂತು. ಮತ್ತೆ ಅಜ್ಜಿ ಹತ್ರ ದುಡ್ಡು ಕೇಳಿದೆ. ಪಾಪ, ಮತ್ತೆ ನನ್ನ ನೋಟು ಕೊಡೋ ಬದ್ಲು, ಒಂದಷ್ಟು ನಾಣ್ಯಗಳನ್ನೇ ಕೊಟ್ರು. ಹೀಗೇ ನಾನು ಕೇಳೋದೂ, ಅಜ್ಜಿ ನಾಣ್ಯಗಳನ್ನೇ ಕೊಡೋದೂ ನಡೀತಾ ಇತ್ತು.

ಹಾಡುಗಳು, ನಾಟ್ಯಗಳು ಶುರುವಾಯ್ತು. ಈಗ ಹೋಗಿ ಕಡ್ಲೆ ಮಿಠಾಯಿ ತಿನ್ನದೇ ಇದ್ರೆ ಹೇಗೆ ! ಸರಿ, ರಾಗ ಎಳೆದೆ, ‘ಅಜ್ಜೀ, ಪೈಸೇ.......' ಎಲ್ಲರ ಕೈತುಂಬ ಕಡ್ಲೆ ಮಿಠಾಯಿ, ಬಣ್ಣಬಣ್ಣದ ಮಿಠಾಯಿ, ನನ್ನ ತಲೆ ತುಂಬಾ ಅಹಂಕಾರ, ನಾನು ಎಲ್ಲರಿಗೂ ಮಿಠಾಯಿ ಕೊಡ್ಸಿದೆ ಅಂತ. ಮಿಠಾಯಿ ತಿನ್ನುತ್ತಾ ಡ್ಯಾನ್ಸ್ ನೋಡೋ ಮಜಾನೇ ಬೇರೆ.

ಇದೆಲ್ಲಾ ಮುಗಿದು ಮಕ್ಕಳ ನಾಟಕ ಸುರುವಾಗುವ ಹೊತ್ತಿಗೆ ಬನ್ಸ್ ತಿನ್ನೋ ಮೂಡ್ ಬಂದು, ಅಲ್ಲಿ ಕೂರೋದೇ ಕಷ್ಟ ಆಯ್ತು. ‘ಅಜ್ಜೀ, ಬನ್ಸಿಂಗೆ ಪೈಸೆ ಕೊಡಿ’ ಅಂತ ಹಕ್ಕಿನಿಂದ ಕೇಳಿದೆ. ಇಷ್ಟರಲ್ಲಾಗಲೇ ಅಜ್ಜಿಯಂದಿರ ಮಾತಿಗೆ ಸ್ವಲ್ಪ ವಿರಾಮ ಉಂಟಾದುದರಿಂದ, ಈಗಾಗಲೇ ಸುಮಾರು ನಾಣ್ಯಗಳು ಕೈತಪ್ಪಿ ಹೋಗಿರುವ ಅರಿವಾದ ಅಜ್ಜಿ, ‘ಸಾಕಿನ್ನು, ಕಾಟಂಕೋಟಿ ತಿಂದದು’ (ಸಾಕಿನ್ನು ಹಾಳೂಮೂಳೂ ತಿಂದಿದ್ದು) ಅಂತ ಹೇಳಿದ್ದೇ ದೊಡ್ಡ ತಪ್ಪಾಗಿ ಕಂಡಿತು ನಂಗೆ. ‘ನಿಂಗೊಗೆ ಕೊಡ್ಲೆಂತ, ಎನ್ನ ಎರಡು ರೂಪಾಯಿ ಇಲ್ಯಾ!? (ನಿಮ್ಗೆ ಕೋಡೋಕೇನು, ನನ್ನ ದುಡ್ಡೇ ಇಲ್ವಾ) ಅಂತ ಜೋರಿನಿಂದಲೇ ಕೇಳಿದೆ, ನನ್ನ ಎರಡು ರೂಪಾಯಿಯನ್ನು ಅಜ್ಜಿಯೇ ಲಪಟಾಯಿಸುತ್ತಿದ್ದಾರೇನೋ ಅನ್ನುವ ಅನುಮಾನ ನಂಗೆ.

ಮೊದಲೇ ಆ ಎರಡು ರೂಪಾಯಿಯ ನೋಟನ್ನೇ ಕೊಡದೇ ಇದ್ದ ‘ದೊಡ್ಡ’ ತಪ್ಪಿನ ಅರಿವಾಯ್ತು ಅಜ್ಜಿಗೆ. ಅಷ್ಟರಲ್ಲಾಗಲೇ ಸುಮಾರು ಹತ್ತು ರೂಪಾಯಿ ಅಜ್ಜಿಯ ಕೈಬಿಟ್ಟಿತ್ತು. ಅದನ್ನು ನನಗೆ ತಿಳಿಸಿ ಹೇಳಲು, ಪಾಪ ತುಂಬಾ ಪ್ರಯತ್ನ ಪಟ್ರು. ಉಹೂಂ, ನಾನೋ ಮಹಾಜ್ಞಾನಿ ! ನನ್ನ ನೋಟು ನನ್ನ ಕೈಗೆ ಬಂದಿಲ್ಲ ಹಾಗಾಗಿ ಅದು ಖರ್ಚೇ ಆಗಿಲ್ಲ, ಈಗ ಅದನ್ನು ಕೊಡಿ ನಂಗೀಗ ಬನ್ಸ್ ಬೇಕೇ ಬೇಕು, ನಾನೇನು ನಿಮ್ಮ ದುಡ್ಡು ಕೇಳ್ತಿದೀನಾ, ಅಂತ ನನ್ನ ತರ್ಕ. ಕೊನೆಗೆ ‘ನನ್ನ ದುಡ್ಡು’ ಇಟ್ಟುಕೊಂಡ ತಪ್ಪಿಗೆ, ಮೊದಲು ಅದನ್ನೇ ನನ್ನ ಕೈಗೆ ಕೊಡದ ತಪ್ಪಿಗೆ, ಅಜ್ಜಿ ಪಾಪ, ತನ್ನ ಹತ್ತು ರೂಪಾಯಿ ಜೊತೆಗೆ, ಇನ್ನೆರಡು ರೂಪಾಯಿ ಕೊಡಬೇಕಾಗಿ ಬಂತು. ನಂಗೆ ‘ನನ್ನ ದುಡ್ಡಲ್ಲೇ’ ಬನ್ಸೂ ಸಿಕ್ತು.

ಬನ್ಸ್ ತಿಂದು, ನಾಟಕ ಶುರುವಾಗುವ ಹೊತ್ತಿಗೆ, ಏನೋ ಸಾಧಿಸಿ ಬಂದಂಥ ನೆಮ್ಮದಿಯಿಂದ ಅಜ್ಜಿಯ ತೊಡೆ ಮೇಲೆ ತಲೆ ಇಟ್ಟುಕೊಂಡು ನಿದ್ದೆ ಮಾಡಿದೆ. ಬೆಳಗಿನ ಜಾವ ಯಕ್ಷಗಾನ ಮುಗಿದು ಮಂಗಳ ಹಾಡುವಾಗ ಎಚ್ಚರವಾಗಿ, ಎಲ್ಲರ ಜೊತೆ, ಕಾಲೆಳೆದುಕೊಂಡು ಮನೆಗೆ ಹೊರಟೆ. ಈಗ ಎರಡು ರೂಪಾಯಿ ಖಾಲಿಯಾದುದರಿಂದ, ನಾನೂ ಎಲ್ಲರಂತೆ ಸಾಧಾರಣ ಮನುಷ್ಯಳು ಅನ್ನುವುದು ನಿಧಾನವಾಗಿ ಅರಿವಿಗೆ ಬಂತು.

ಇದಾಗಿ ಕೆಲವೇ ದಿನಗಳಲ್ಲಿ ಅಜ್ಜನ ತಿಥಿಗೆ (ಶ್ರಾದ್ಢ) ಊರಿಗೆ ಬಂದ ಚಿಕ್ಕಪ್ಪ ನನ್ನನ್ನು ಕರೆದು ಗುಟ್ಟಿನಲ್ಲಿ "ಇನ್ನೂ ಐದು ರೂಪಾಯಿ ಬತ್ತು ನಿನಗೆ" ಅಂತ ಹೇಳಿದ್ದನ್ನು ನಾನಿನ್ನೂ ಮರೆತಿಲ್ಲ :D

5 comments:

ಸಾಗರದಾಚೆಯ ಇಂಚರ said...

ತುಂಬಾ ನವಿರಾಗಿದೆ ನಿರೂಪಣೆ,
ಹೊಸದಾದ ಎರಡು ರೂಪಾಯಿ ನೋಡದೆ ಅದೆಷ್ಟು ವರ್ಷ ಆಗಿತ್ತು
ಒಳ್ಳೆಯ ಬರಹ

ಶರಶ್ಚಂದ್ರ ಕಲ್ಮನೆ said...

ಶಾಲಾ ವಾರ್ಷಿಕೋತ್ಸವ, ಐಸ್ ಕ್ಯಾಂಡಿ, ಅಜ್ಜಿ, ಎರಡು ರೂಪಾಯಿ ನೋಟು, ಯಕ್ಷಗಾನ... ಇವೆಲ್ಲ ಹೇಳಿ ನಮ್ಮ ಬಾಲ್ಯವನ್ನು ಮತ್ತೆ ನೆನಪಿಸಿದ್ದಕ್ಕೆ ಧನ್ಯವಾದಗಳು.... ನಿಮ್ಮ ಬರಹ ಸಂತಸ ನೀಡಿತು :)

ಶರಶ್ಚಂದ್ರ ಕಲ್ಮನೆ

ದೀಪಸ್ಮಿತಾ said...

ಐದು ಪೈಸೆಗೆ ಐಸ್ ಕ್ಯಾಂಡಿ ತಿಂದಿದ್ದು ಈಗಲೂ ನೆನಪಿದೆ. ಎರಡು ರೂಪಾಯಿಗೆ ಮಸಾಲೆ ದೋಸೆ, ಸಿನೆಮಾ ಟಿಕೆಟ್, ಹೀಗ ಆ ದಿನಗಳ ನೆನಪು ಮತ್ತೆ ಬರುವಂತೆ ಮಾಡಿದ್ದೀರಿ

Annapoorna Daithota said...

@ ಸಾಗರದಾಚೆಯ ಇಂಚರ - ಧನ್ಯವಾದಗಳು :)
ಹೂಂ, ನಾನೂ ನೋಡಿರಲಿಲ್ಲ ಹೊಸಾ ಎರಡು ರೂಪಾಯಿ, ಎಲ್ಲಾ ಗೂಗಲ್ ಕೃಪೆ...

@ ಶರಶ್ಚಂದ್ರ - ಬಾಲ್ಯದಲ್ಲಿ ಅನುಭವಿಸಿದ್ದನ್ನು ಈಗಲೂ ಸಿನೆಮಾದಂತೆ ನೋಡಿದರೆ ಸಂತೋಷವಾಗುತ್ತೆ ಅಲ್ವಾ !ಪ್ರೋತ್ಸಾಹಕ್ಕೆ ಧನ್ಯವಾದಗಳು.

@ ದೀಪಸ್ಮಿತ - ಸ್ಪಂದನೆಗೆ ಧನ್ಯವಾದಗಳು.
ಹೌದು, ಅದೆಲ್ಲ ಒಂದು ಸುಂದರ ನೆನಪು ಈಗ :)

Manjunatha Kollegala said...

ಸೊಗಸಾದ ಬರಹ, ಆಪ್ತ ಚಿತ್ರಣ