Wednesday, August 13, 2014

ಮೊಗ್ಗು, ಮುಳ್ಳು, ಗುಲಾಬಿಯ ಹಸಿರು ಮಗ್



ಯಾರೋ ಕೊಟ್ಟ ಒಂದು ಕಾಫಿ ಮಗ್, ಬಿಳಿಯ ಬಣ್ಣದ್ದು, ಸುಂದರವಾಗಿತ್ತು, ಇಷ್ಟವಾಯಿತು. ನೋಡುತ್ತಿದ್ದರೆ ಸಂತೋಷವೆನಿಸುತ್ತಿತ್ತು. ಆದರೆ ಮಗ್ ಇರುವುದು ಹಾಗೇ ಇಡುವುದಕ್ಕಲ್ಲವಲ್ಲ, ಒಂದು ದಿನ ಬಿಸಿ ಬಿಸಿ ಕಾಫಿ ಹಾಕಿದೆ, ಫಟ್ ಎಂದು ಬಿರುಕು ಬಿಟ್ಟಿತು. ಆಘಾತವೆನಿಸಿದರೂ ತಡೆದುಕೊಂಡು ತೊಳೆದಿಟ್ಟೆ. ಮತ್ತೆ ಉಪಯೋಗಿಸ ಹೊರಟಾಗೆಲ್ಲಾ ಬಿರುಕು ಹೆಚ್ಚಾಗುತ್ತಿತ್ತು, ಹಾಗೇ ಇಟ್ಟೆ, ಕೊನೆಗೊಂದು ದಿನ ಒಡೆದು ಹೋಯಿತು.

ಮತ್ತೊಂದು ಹಳದಿ ಮಗ್ ಕಾಣಿಸಿತು. ಇದೂ ಉಪಯೋಗಕ್ಕೆ ತಕ್ಕದಾದಂತಿತ್ತು. ಮೊದಲ ಮಗ್‌ನಂತೆ ದುರ್ಬಲವಿರಬಹುದೇ ಎಂಬ ಸಂಶಯ ಬಂದಾಗ ಜೊತೆಗಿರುವವರು ಕೊಟ್ಟ ಭರವಸೆ ಮೇಲೆ ಕೊಂಡು ತಂದೆ. ಕೆಲವು ದಿನ ಬಳಸುವ ಧೈರ್ಯವಿಲ್ಲದೇ ಇಟ್ಟೆ, ಕೊನೆಗೆ ಬಳಸಲು ಯೋಗ್ಯವಾದುದೆಂಬ ನಂಬಿಕೆ ಬಂದ ಮೇಲೆ ಬಿಸಿ ಬಿಸಿ ನೀರು ಹಾಕಿದೆ. ಫಟ್ ಎಂದರೂ ಬಿರುಕು ಬಂದಿರಲಿಲ್ಲ, ಕುಡಿದೆ, ತೊಳೆದಿಟ್ಟೆ. ನಂತರ ದಿನಾ ನೆಮ್ಮದಿಯಿಂದ ಅದರಲ್ಲೇ ಕಾಫಿ ಕುಡಿಯುತ್ತಿದ್ದೆ. ಕೆಲವೇ ದಿನಗಳಲ್ಲಿ ಬಿಸಿ ಕಾಫಿ ಮೈಮೇಲೆ ಬಿದ್ದಾಗ ತಿಳಿಯಿತು ಮಗ್ ತಳದಲ್ಲೇ ಬಿರುಕು ಬಿಟ್ಟಿದೆಯೆಂದು. ಆದರೂ ಮಗ್‌ನ ಉಪಯೋಗಕ್ಕೆ ಮರುಳಾಗಿ ಅಂಟು ಹಾಕಿ ಸರಿಮಾಡಿದೆ. ಆದರೆ ಒಳಗೇ ಅಧೈರ್ಯವಿತ್ತು, ಇದು ಬಳಕೆಗೆ ಯೋಗ್ಯವಲ್ಲ, ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು. ಹಾಗಾಗಿ, ಅದನ್ನು ಶೋಕೇಸ್‌ನಲ್ಲಿಟ್ಟೆ. ಮುಂದೊಂದು ದಿನ, ಯಾರದೋ ಕೈ ತಾಗಿ ಬಿದ್ದು ಒಡೆದೇ ಹೋಯಿತು.

ಇತ್ತೀಚೆಗೆ ಒಂದು ಮೊಗ್ಗು, ಮುಳ್ಳು, ಗುಲಾಬಿಯಿರುವ ಹಸಿರು ಮಗ್ ನೋಡಿದೆ, ಅದರ ಗಾಂಭೀರ‍್ಯಕ್ಕೆ, ಸೌಂದರ್ಯಕ್ಕೆ ಮನಸೋತೆ. ಆದರೆ ಕೊಳ್ಳುವ ಧೈರ್ಯ ಬರಲಿಲ್ಲ. ಕೈಯಲ್ಲೇ ಹಿಡಿದು ಗುಣಗಾನ ಮಾಡುತ್ತಾ, ಹಳೆಯ ಅನುಭವಗಳಿಂದ ಹೆದರಿ ಮತ್ತೆ ಕೆಳಗಿಡುತ್ತಾ, ಆಸೆಯಿಂದ ಕೈಗೆತ್ತಿಕೊಳ್ಳುತ್ತಾ, ಜೊತೆಗಿರುವವರೊಂದಿಗೆ ಸಮಾಲೋಚಿಸಿದೆ. ತಟ್ಟಿ, ಕುಟ್ಟಿ, ಶಬ್ದ ತುಲನೆ ಮಾಡಿ, ಇದು ಮೊದಲವುಗಳಂತಲ್ಲ ಎಂಬ ಅಭಿಪ್ರಾಯ, ಭರವಸೆ ಪಡೆದು, ಮತ್ತೆ ಮತ್ತೆ ಚಿಂತಿಸಿ, ಕೊನೆಗೆ ಕೊಂಡೇಬಿಟ್ಟೆ. ಮನೆಗೆ ಬಂದ ತಕ್ಷಣ ಸ್ವಚ್ಛವಾಗಿ ತೊಳೆದು ಜ್ಯೂಸ್ ಹಾಕಿ ಕುಡಿದೆ, ಉಪಯುಕ್ತವೆನಿಸಿತು. ಆದರೆ ಮಗ್ ಇರುವುದು ಅದಕ್ಕಲ್ಲವಲ್ಲ, ಮರುದಿನ ಬಿಸಿ ಬಿಸಿ ಟೀ ಹಾಕಿದೆ, ಶಿವ ಶಿವಾ! ಮೊದಲೆರಡು ಮಗ್‌ಗಳಿಗಿಂತಲೂ ಭೀಕರವಾಗಿ ಫಟ್ ಎಂದಿತು. ಟೀ ಪೂರ್ತಿ ಸೋರಿ ಹೋಯಿತು. ಈಗ ಅದಕ್ಕೆಂದೇ ಶೋಕೆಸ್‌ನಲ್ಲಿ ಜಾಗ ಹುಡುಕುತ್ತಿದ್ದೇನೆ, ಆದರೆ ಒಡೆದು ಹೋದ ಮಗ್ ಇನ್ನೆಷ್ಟು ದಿನ ಇರಬಹುದು? ಇರುವಷ್ಟು ದಿನ ಇರಲಿ ಒಡಲಿಗೆ ಬೆಂಕಿಯಾದರೂ ಕಡೇ ಪಕ್ಷ ಕಣ್ಣಿಗೆ ತಂಪಾಗಿರುತ್ತದೆ.

ಇನ್ನು ಮುಂದೆ ಮಗ್ ತರುವ ಬಯಕೆಯೂ ಇಲ್ಲ, ಅಗತ್ಯವೂ ಇಲ್ಲ. ಏಕೆಂದರೆ ಕಣ್ಣಿಗೆ ಸುಂದರವಾಗಿದ್ದರೂ, ಉಪಯುಕ್ತವೆನಿಸಿದರೂ, ಅದರ ಅಗತ್ಯವಿದ್ದಾಗ ಫಟ್ ಎನ್ನುವುದಾದರೆ, ಇದ್ದು ಪ್ರಯೋಜನವೇನು? ಅದಕ್ಕೇ, ಸ್ಟೀಲ್ ಲೋಟವೇ ಲೇಸಜ್ಞ ಎಂಬ ನಿಲುವು ತಳೆದಿದ್ದೇನೆ.

No comments: