Monday, October 20, 2025

ಸ್ಥಿತಿ

 

ವಾಹನ ದಟ್ಟಣೆಯಲ್ಲಿ ಸಿಲುಕಿದ ಆಂಬ್ಯುಲೆನ್ಸ್ 

ಅಮ್ಮನ ಕಾಣದೆ ಬಿಕ್ಕಿಬಿಕ್ಕಿ ಕಣ್ಣೀರಿಡುವ ಕಂದ 

ಬೇಟೆಗಾರನ ಬಲೆಯಲ್ಲಿ ಬಂಧಿಯಾದ ಪ್ರಾಣಿ

ದುಷ್ಟರ ಕಿರುಕುಳ ಸಹಿಸುತ್ತಿರುವ ಯುವತಿ

ತಪ್ಪೇ ಇಲ್ಲದಿದ್ದರೂ ಬೈಗುಳ ತಿನ್ನುವ ಕೆಲಸಗಾರ

ಅಸಡ್ಡೆಗೆ ಮೈಹಿಡಿಯಾಗಿ ಬೇಡುವ ಭಿಕ್ಷುಕ

ಸುಡು ಬಿಸಿಲಲ್ಲಿ ಬಾಡುತ್ತಿರುವ ಗಿಡಮರಗಳು

ನೀರು ತಪ್ಪಿ ಉಸಿರಿಗೆ ಚಡಪಡಿಸುತ್ತಿರುವ ಮೀನು


ಅಮ್ಮನ ಕರೆಗೆ ಕರು ಅಂಬಾ ಎಂದೋಡಿ ಬಂದ ಕ್ಷಣ 

ಮುಗ್ಧ ಮಗುವೊಂದು ಬಂದಪ್ಪಿ ಮುತ್ತಿಟ್ಟ ನಿಮಿಷ

ಹಿರಿಯರ ಸೇವೆ ಮಾಡಿ ಆಶೀರ್ವಾದ ಪಡೆದ ಹೊತ್ತು

ಕಳೆದು ಹೋದ ನೆಮ್ಮದಿಯ ಮರಳಿ ಪಡೆದ ದಿನ

ಮೋಡವಿಲ್ಲದ ಆಗಸದಲ್ಲಿ ಮಿನುಗುವ ನಕ್ಷತ್ರಗಳು

ನೆಟ್ಟು ಬೆಳೆಸಿದ ಗಿಡದಲ್ಲಿ ಅರಳಿದ ಹೂವುಗಳು

ಬಂಧುಗಳು ಒಂದೆಡೆ ಕಲೆತಾಗ ಪ್ರೀತಿಯ ಮಾತುಗಳು 

ಸಾಧನೆಯ ತುದಿಯೇರಿ ನಿಂದ ತೃಪ್ತಿಯ ನಗು 

ಹಾರಾಡುತ್ತಿರುವ ಹಕ್ಕಿಗಳ ಚಿಲಿಪಿಲಿ ಕಲರವ

ಅಂಗಳದಲ್ಲಿ ಓಡಾಡುತ್ತಿರುವ ನಾಯಿ ಮರಿಗಳು

ಮರಿಗಳೊಂದಿಗೆ ಆಟವಾಡುತ್ತಿರುವ ಮಕ್ಕಳು

Thursday, October 09, 2025

ಸಂತ

 

ಸಂತನೊಬ್ಬ ಸಂತನ ಭೇಟಿಯಾದಾಗ

ಸುತ್ತೆಲ್ಲ ಸಂತಸ ಹರಿಯುತ್ತದೆ

ಸಂತಸ ಹರಿದು ನದಿಯಾದಲ್ಲಿ 

ಆರೋಗ್ಯವು ತುಂಬಿ ತುಳುಕುತ್ತದೆ


ಆರೋಗ್ಯ ತುಂಬಿ ತುಳುಕಿದಲ್ಲಿ

ನಗು ನಕ್ಕು ನಲಿಯುತ್ತದೆ

ನಗು ನಕ್ಕು ನಲಿಯುವಲ್ಲಿ

ನೆಮ್ಮದಿ ಸದಾ ನೆಲೆಸುತ್ತದೆ


ನೆಮ್ಮದಿ ನೆಲೆಸಿದಲ್ಲಿ ಐಶ್ವರ್ಯ ಸಿದ್ಧಿಸುತ್ತದೆ

ಐಶ್ವರ್ಯ ಸಿದ್ಧಿಸಿದಲ್ಲಿ ದಾನಧರ್ಮ ಇಣುಕುತ್ತದೆ

ದಾನಧರ್ಮ ಇಣುಕಿದಲ್ಲಿ ದಯೆ ಮೂಡುತ್ತದೆ

ದಯೆ ಮೂಡಿದಲ್ಲಿ ದಾರಿ ಕಾಣುತ್ತದೆ


ದಾರಿ ಕಂಡಾಗ ಮನುಜ ಸಂತನಾಗುತ್ತಾನೆ

ಸಂತನೆಂದಿಗೂ ಸಕಲರಿಗೆ ಬೆಳಕಾಗುತ್ತಾನೆ

ಬೆಳಕಾದ ಸಂತನೊಬ್ಬ ಸಂತನ ಭೇಟಿಯಾದಾಗ

ಸುತ್ತೆಲ್ಲ ಸಂತಸ ಹರಿಯುತ್ತದೆ

Sunday, October 05, 2025

ಸಂಚಯ

 

ಪುಟ್ಟಕ್ಕನ ಪುರದಲ್ಲಿ ಪುಸ್ತಕದ ರಾಶಿ

ಎಲ್ಲವನ್ನಿನ್ನೂ  ಓದದಿದ್ದರೂ

ಇನ್ನಷ್ಟು ಖರೀದಿ ಒಟ್ರಾಶಿ 


ಪುಟ್ಟಕ್ಕನ ಸುತ್ತಮುತ್ತ ಧೂಳುಮಯ

ಕಾಲಾಡಿಸಲಿಕ್ಕೂ ಆಗದಂತೆ

ಸಾಮಾನುಗಳ ಸಂಚಯ


ಪುಟ್ಟಕ್ಕನ ಬೆಕ್ಕುಗಳ ಕೈತಪ್ಪಿದೆ ಆರೋಗ್ಯ

ಏನು ಮಾಡಿದರೂ ಸಿಗುತ್ತಿಲ್ಲ

ಗುಣವಾಗುವ ಭಾಗ್ಯ


ಪುಟ್ಟಕ್ಕನ ತೋಟದಲ್ಲಿ ಹೆಗ್ಗಣಗಳ ರಾಜ್ಯ

ಅಲ್ಲಿ ಇಲ್ಲಿ ಅಗೆದು ಬಗೆದು 

ಪುಟ್ಟಕ್ಕಗೂ ಹೆಗ್ಗಣಗಳಿಗೂ ವ್ಯಾಜ್ಯ


ಪುಟ್ಟಕ್ಕನ ಮನೆ ಮುಂದೆ ಚಾಲಕರಿಂದ ಅಡಚಣೆ

ಎಷ್ಟು ಹೇಳಿದರೂ ಕೇಳುವುದಿಲ್ಲವೆಂದಾಗ 

ಕೋಪ ಬಂದರೆ ಪುಟ್ಟಕ್ಕನಲ್ಲ ಹೊಣೆ


ಪುಟ್ಟಕ್ಕನ ತಾರಸಿಯಲ್ಲಿ ತೆಂಗಿನಕಾಯಿ ಚೆಂಡಾಟ

ಬಿದ್ದು ಬಿದ್ದು ಒಡೆದು ಹೋದರೂ

ಕೀಳಿಸಲಾರೆ ಎಂಬ ಮಂಗಾಟ


ಪುಟ್ಟಕ್ಕ ಪೇರಿಸಿಟ್ಟ ಕಟ್ಟಿಗೆಯ ಕಟ್ಟುಗಳು

ದಿನಾ ಬಿಸಿನೀರು ಕಾಸಿದರೂ ಮುಗಿಯದ

ಹಲವು ರೀತಿಯ ಸೆಟ್ಟುಗಳು