ಮಂಜಿನಲಿ ಮೂಡಿದ ಸುಂದರ ಕವಿತೆ
ಹೊಸೆದು ಹಾಡಿದ ಹಸಿ ರಾಗ ಸಂಹಿತೆ
ಹೃದಯದಲಿ ಹೊತ್ತ ಅಮೂಲ್ಯ ಗೀತೆ
ಕಾಲ ಬರೆದರೂ ಓದದೇ ಉಳಿದ ಅಸ್ಮಿತೆ
ಗಾಳಿಯಲ್ಲಿ ತೇಲಿದ ನಾಳೆಯ ಗಂಧ
ಅವುಚಿಕೊಂಡು ಅದರ ಸುಗಂಧ
ದಾಟಿ ಬಂದ ಗೆರೆಗೆ ಚುಕ್ಕಿಯನಿಟ್ಟು
ಮುಂದುವರಿದುದು ಹೊಸ ಹೆಜ್ಜೆಗಳನಿಟ್ಟು
ನೋವ ಗಾಯದ ಮೇಲೆ ನಗುವಿನ ನೆನಪು
ನಗುವಿನ ಒಳಗೆ ಸಂತಸದ ಹೊಳಪು
ನೆನಪಿನ ಬಾವಿಯಲ್ಲಿ ಜಿನುಗುವ ಬಿಸುಪು
ಮನದ ತೋಟದಲ್ಲಿ ಮಲ್ಲಿಗೆಯ ಒನಪು
ಬದಲಾದ ಕಾಲದ ಬದಲಾದ ನುಡಿ
ಹಾದಿಯಲ್ಲಿ ಕರಗಿದ ಬೆಂಕಿಯ ಕಿಡಿ
ಹಳೆಯ ದಿನಗಳಲ್ಲಿದ್ದ ಗಡಿಬಿಡಿ
ಹರಡಿದೆ ಹೂವಿನ ಹಾಗೆ ಬಿಡಿಬಿಡಿ
ತಟ್ಟಿ ಕುಟ್ಟಿದ ಕಠಿಣ ಕರ್ಗಲ್ಲು
ಏರಿದ ಒಂದೊಂದೂ ಮೆಟ್ಟಿಲು
ಮುಟ್ಟಿದ ಪ್ರತಿಯೊಂದು ಮೈಲಿಗಲ್ಲು
ಕಳೆದಿದೆ ಕಾಳ ಕತ್ತಲೆಯ ಕವಲು

No comments:
Post a Comment