Wednesday, March 27, 2024

ಯಾರು

 

ಪೊಡವಿಯ ಅಡವಿಯ ಅಡ ಇಟ್ಟವರು ಯಾರು

ಅಡವಿಟ್ಟ ಅಡವಿಯ ಕಡ ಕಟ್ಟುವವರು ಯಾರು 

ಬಗಲಲ್ಲೇ ಬಗೆಬಗೆ ಬಗೆದು ಬಗೆದವರು ಯಾರು

ಬಗೆದುದನ್ನು ಭರಿಸಲು ಹೆಗಲು ಕೊಟ್ಟವರು ಯಾರು


ಅರಿವಿಗೆ ಅರಿವೆ ಹೊದೆಸಿ ಮುಚ್ಚಿಟ್ಟವರು ಯಾರು

ಅರಿವಿನ ಅರಿಯ ಅರಿಕೆಯನ್ನು ಅರಿತವರು ಯಾರು

ನುಡಿದಂತೆ ನಡೆಯನ್ನು ನಡೆದವರು ಯಾರು

ನುಡಿಯದೇ ನುಡಿಯನ್ನು ನುಡಿಸಿದವರು ಯಾರು


ಬಿಸಿಲಲ್ಲಿ ಬಿಸಿ ಬಸಿದು ಬೀಸಿದವರು ಯಾರು

ಹಸಿದಲ್ಲಿ ಹಸಿಯ ಹಸಿ ಹಂಚಿದವರು ಯಾರು

ಕಾಲನನ್ನು ಮೆಟ್ಟಿ ಕಾಲ ಹೆಚ್ಚಿಸಿಕೊಂಡವರು ಯಾರು

ಸಾಲ ಸಾಲದೆಂದು ಸಾಲಲ್ಲಿ ನಿಂದವರು ಯಾರು


ಬರದ ಬರವನ್ನು ಬರೆದು ತಿಳಿಸಿದವರು ಯಾರು

ಬರೆದ ಬರಹವನ್ನು ಅರ್ಥೈಸಿ ತಿಳಿದವರು ಯಾರು

ಓದಿನ ಒದವಿಗೆ ಒದವು ಒದಗಿಸಿದವರು ಯಾರು

ಆಡಿದಂತೆ ಆಡನ್ನು ಅಡ್ಡಾಡಿಸಿ ಕೈ ಆಡಿಸಿದವರು ಯಾರು 


ಮಡಕೆಯೊಳಗೆ ಮಡಕೆಯನ್ನು ಬೇಯಿಸಿದವರು ಯಾರು

ಪಟ್ಟುಬಿಡದೆ ಪಟ್ಟು ಹಾಕಲು ಪ್ರಯತ್ನ ಪಟ್ಟವರು ಯಾರು

ಪಡಿಯ ಪಡಿಪಡೆದು ಪಡಿಹಾಕಿ ಪಡಿಯೇರಿ ಪಡಿ ಮೆಟ್ಟಿದವರಾರು

ಅಡಿ ಮೇಲೆ ಅಡಿ ಇಟ್ಟು ಅಡಿಯಲ್ಲಿ ಅಡಗಿದವರು ಯಾರು


ಹಲವೆಡೆ ಹಲವಿಟ್ಟು ಹಲವು ಸಲ ಉತ್ತವರು ಯಾರು

ಬೀಳು ಬೀಳದಂತೆ ಬೀಳುಗಳ ಬೆಳೆಸಿದವರು ಯಾರು

ಹರಿವ ಹರಿವನ್ನು ಹರಿದಂತೆ ಹರಿಸಿದವರು ಯಾರು

ಹರಿಯ ಹರವನ್ನು ಹರವಿಟ್ಟು ಹರಸಿದವರು ಯಾರು

Saturday, March 23, 2024

ಅಮ್ಮ ಜೀವ - ಅಪ್ಪ ಪ್ರಾಣ

 

ಅಮ್ಮ ಜೀವವನ್ನು 

ಹೊರುತ್ತಾಳೆ ಹೆರುತ್ತಾಳೆ

ಅಪ್ಪ ಅದನ್ನು ಹೊರುತ್ತಾನೆ 

ಪ್ರಾಣ ಒದಗಿಸುತ್ತಾನೆ


ಅಮ್ಮನೆಂಬ ಅಕ್ಕರೆ

ಅಪ್ಪನೆಂಬ ಅದ್ಭುತ

ಅಮ್ಮನ ಮಮತೆಯ ಮತ್ತು

ಅಪ್ಪನ ಮಾತುಗಳು ಮುತ್ತು


ಅಮ್ಮ ನುಡಿಸುತ್ತಾಳೆ

ಅಪ್ಪ ನಡೆಸುತ್ತಾನೆ

ಅಮ್ಮ ಮುದ್ದು ಮಾಡುತ್ತಾಳೆ

ಅಪ್ಪ ತಿದ್ದಿ ತೀಡುತ್ತಾನೆ


ಅಮ್ಮ ಓದಿಸಿ-ಬರೆಸಿ ಮಾಡುತ್ತಾಳೆ

ಅಪ್ಪ ಭವಿಷ್ಯವನ್ನು ಗಟ್ಟಿ ಮಾಡುತ್ತಾನೆ

ಅಮ್ಮ ಕೆಲವೊಮ್ಮೆ ಅಪ್ಪನಾಗುತ್ತಾಳೆ

ಅಪ್ಪ ಕೆಲವೊಮ್ಮೆ ಅಮ್ಮನಾಗುತ್ತಾನೆ

ವಿಪರ್ಯಾಸ

 

ಕೆಟ್ಟದ್ದನ್ನು ಮಾಡಿದವರು ಮರೆತು ಬಿಡುತ್ತಾರೆ

ಅನುಭವಿಸಿದವರಿಗೆ ಅದು ನೆನಪಿರುತ್ತದೆ

ಒಳ್ಳೆಯದನ್ನು ಮಾಡಿದವರಿಗೆ ನೆನಪಿರುತ್ತದೆ

ಅನುಭವಿಸಿದವರು ಅದನ್ನು ಮರೆತು ಬಿಡುತ್ತಾರೆ


ನಾನು ಏನೇ ಮಾಡಿದರೂ ಅದು ಸರಿ

ಬೇರೆಯವರು ಮಾಡಿದರೆ ಎಲ್ಲವೂ ತಪ್ಪು

ನಾನು ಮಾಡಿರುವುದಕ್ಕೆ ಕಾರಣವಿರುತ್ತದೆ

ಬೇರೆಯವರು ಅನಾವಶ್ಯಕವಾಗಿ ಮಾಡುತ್ತಾರೆ


ನಾನು ಮಾಡುವುದೆಲ್ಲಾ ಧನಾತ್ಮಕ

ಇನ್ನೊಬ್ಬರು ಮಾಡುವುದೆಲ್ಲಾ ಋಣಾತ್ಮಕ

ಆಗಬೇಕಾಗಿರುವುದು ನನ್ನ ಜವಾಬ್ದಾರಿಯಲ್ಲ

ಮಾಡದಿರುವುದು ಅವರ ಬೇಜವಾಬ್ದಾರಿ


ಬಿಸಿಲಿದ್ದರೆ ಮಳೆ ಬೇಕೆನಿಸುತ್ತದೆ

ಮಳೆ ಬಂದರೆ ಕಿರಿಕಿರಿಯಾಗುತ್ತದೆ

ಸೆಖೆಯಿದ್ದರೆ ಚಳಿಗಾಗಿ ಆಸೆ ಪಡುತ್ತೇವೆ

ಚಳಿಯಿದ್ದರೆ ಬಿಸಿಲಿಗಾಗಿ ಪರಿತಪಿಸುತ್ತೇವೆ


ಎಲ್ಲವೂ ಸರಿಯಾಗಿದ್ದರೆ ಗೊಣಗುತ್ತೇವೆ

ಸರಿಯಿಲ್ಲದಿರುವಾಗ ಹೆಣಗುತ್ತೇವೆ

ನೆಮ್ಮದಿ ಬಿಟ್ಟು ಚಿಂತೆಯಿಂದ ಕೊರಗುತ್ತೇವೆ

ಕೆಟ್ಟಾಗ ಮತ್ತೊಬ್ಬರನ್ನು ತೆಗಳಿ ಕೃತಾರ್ಥರಾಗುತ್ತೇವೆ 

ಆಸೆ - ವಾಸ್ತವ


ಮನದಾಳದಲ್ಲಿ ಹುದುಗಿದ ಆಸೆಗಳಲ್ಲಿ ಹುಡುಕಿದೆ

ಆಸ್ಥೆಯಿಂದ ಆಯ್ದು ಬೆಲೆಬಾಳುವುದನ್ನು ಹೊರತೆಗೆದೆ

ಅಕ್ಕಿ ಆರಿಸಿದಂತೆ ಹೆಕ್ಕಿ ತೆಗೆದ ಅಮೂಲ್ಯ ಆಸೆಯನ್ನು 

ಕೊಕ್ಕಿನಲ್ಲಿ ಹಿಡಿದಂತೆ ಹಿಡಿದು ಆಕಾಶಕ್ಕೆ ಏರಿದೆ


ಆಕಾಶದೆತ್ತರದಿಂದ ನೋಟವ ಕೆಳ ಹರಿಸಿದಾಗ

ಭೂಮಿ ತುಂಬಾ ಹಸಿರು ಕಂಡೆ, ಸಂತೋಷಗೊಂಡೆ

ಪ್ರಾಣಿಗಳ ಮತ್ತು ಮನುಜನ ಪ್ರಪಂಚ ಬೇರೆಬೇರೆ

ಎಂಬುದನ್ನು ಬಹು ಸ್ಪಷ್ಟವಾಗಿ ನಾ ಕಂಡುಕೊಂಡೆ


ಪ್ರಕೃತಿಯ ಫಲಕದಲ್ಲಿ ಹರಿವ ಪವಿತ್ರ ಪನ್ನೀರು 

ಖಗಮೃಗಗಳ ಬದುಕಿನಲ್ಲಿ ನೆಮ್ಮದಿಯ ಉಸಿರು 

ಮನುಜನ ಮನಸು ಹೃದಯದಲ್ಲಿ ಸದಾ ಒಸರುವ,

ಕೂಡಿ ಬಾಳುವಂಥ ಸದ್ಬುದ್ಧಿ ಚಿಲುಮೆಯ ತೇರು


ಸಾಮರಸ್ಯವೇ ಸರ್ವಸ್ವವೆಂಬ ತಿಳಿವಿನ ಮಾತು

ಜೊತೆಗೂಡಿ ಬಾಳುವುದರ ಅರ್ಥವೇ ಒಳಿತು

ಇದನ್ನರಿತುಕೊಂಡಿದ್ದರದೇ ಸಕಲ ಸಂಪತ್ತು

ಕೈಬಿಟ್ಟಾಗ ಆಕಾಶದಲ್ಲಿರುವ ಆಸೆಗೆ ಬೆಂಕಿಯ ಕುತ್ತು


ಬೆಂಕಿ ಹಿಡಿದ ಆಸೆ ಹೊತ್ತು ಕೆಳಗಿಳಿಯುವ ಹೊತ್ತು

ಇಳಿಯುತ್ತಿದ್ದಂತೆಯೇ ಕಾಣುತ್ತಿತ್ತು ವಾಸ್ತವದ ಕೈತುತ್ತು

ಹಸಿರ ಕೇಶದ ನಡುನಡುವೆ ಬೋಳು ಭೂ-ತಲೆ

ಕಾಡಲ್ಲೆಲ್ಲಾ ಅಭಿವೃದ್ಧಿ ಭೂತದ ಅಬ್ಬರ ದಾಂಧಲೆ


ಪ್ರಾಣಿಪಕ್ಷಿಗಳ ಅಸಹಾಯಕ ಆತಂಕದೊಂದಿಗೆ,

ತನ್ನದೇ ಕಾಲಿಗೆ ಕೊಡಲಿಯಿಟ್ಟು, ಭವಿಷ್ಯವನ್ನು

ಪಣಕ್ಕಿಟ್ಟು, ಅರಚಿ-ಕಿರುಚಿ ಪರದಾಡುವ ಮನುಷ್ಯನ  

ಬುದ್ಧಿಗೇಡಿತನದ ಪರಮಾವಧಿಯ ಪೆಟ್ಟು


ಗಿಡವಿಲ್ಲ ಮರವಿಲ್ಲ ಕಾಡೂ ಇಲ್ಲ ಹಸಿರಿಲ್ಲ 

ಕುಡಿಯಲು ನೀರಿಲ್ಲ ಎಸರಿಡಲೂ ಗತಿಯಿಲ್ಲ

ಮುಂದಿನ ಪೀಳಿಗೆಗೆ ನೀಡಲು ಒಳ್ಳೆಯ ಹೆಸರಿಲ್ಲ

ಪಾಪಪ್ರಜ್ಞೆ ಬಿಟ್ಟು ಬೇರೇನೂ ಉಳಿಯುತ್ತಿಲ್ಲ

Saturday, March 16, 2024

ದಾರಿಯುದ್ದಕ್ಕೂ

 

ಬೆಟ್ಟ ಬೆಟ್ಟಗಳ ಮೇಲೆ 

ಬಟ್ಟೆ ಹರಡಿದಂತೆ ನೀಲಾಕಾಶ

ಭೂಮಿ ತಾಯಿ ಹಸಿರುಟ್ಟಂತೆ 

ನಡುವೆ ಹೊಲಗಳ ವಿಶೇಷ 


ಇರುವೆಗಳ ಸಾಲಿನಂತೆ 

ವಾಹನಗಳ ಓಡಾಟ

ಬಿಸಿಯುಗುಳುವ ಚೆಂಡಿನಂತೆ

ಆ ಸೂರ್ಯನ ಆಟೋಟ


ತೆಂಗಿನ ಮರಗಳು, ಬಾಳೆಯ ಗಿಡಗಳು

ಕಾಫಿಯ ತೋಟದಿ ಅರಳಿದ ಹೂಗಳು

ಇಕ್ಕೆಲದಲ್ಲೂ ಪುಟ್ಟಪುಟ್ಟ ಮನೆಗಳು

ಅಲ್ಲಲ್ಲಿ ಕೆಲವೊಂದು ಅಂಗಡಿಗಳು


ಸೂರ್ಯಾಸ್ತದಲ್ಲಿ ತಂಪಾದ ಗಾಳಿ

ರಾತ್ರಿಯಲ್ಲಿ ಸುಳಿದ ತಂಗಾಳಿ

ನಿಶಾರಾಣಿ ಸುಂದರವಾಗಿ ಅರಳಿ

ಸುವಾಸನೆ ಸುತ್ತಿತು ಸುರುಳಿ ಸುರುಳಿ

Friday, March 15, 2024

ಎಚ್ಚರಿಕೆ

 

ಕೆಟ್ಟದೆಂಬುದರ ಕಟ್ಟಿಡದಿದ್ದರೆ

ಅದು ಒಳ್ಳೆಯದರ ಕತ್ತು ಹಿಸುಕಬಹುದು

ಕೆಟ್ಟದೆಂಬುದು ಒಳ್ಳೆಯದನ್ನು ಮೆಟ್ಟಿ ನಿಂದರೆ

ಒಳ್ಳೆಯದರ ಉಸಿರು ನಿಲ್ಲಬಹುದು


ಅಸತ್ಯವನ್ನು ಅರಳಲು ಬಿಟ್ಟರೆ

ಸತ್ಯವು ಅಲ್ಲಿಯೇ ಮುದುಡಬಹುದು

ಅಸತ್ಯವು ಸತ್ಯವನ್ನು ಕುಗ್ಗಿಸಿದರದು

ಸವಾಲಾಗಿ ಪರಿಣಮಿಸ ಬಹುದು


ಅಸುರರಿಗೆ ಅವಕಾಶ ಕೊಟ್ಟರೆ 

ಅಳತೆ ಮೀರಿ ಅಂಧಕಾರ ಮುಸುಕಬಹುದು

ಅಸುರರ ಅಟ್ಟಹಾಸ ತಾರಕಕ್ಕೇರಿದರೆ

ದೇವತೆಗಳ ಸ್ವರ ಕೇಳದಾಗಬಹುದು


ನಮ್ಮ ನಾವು ತಿದ್ದಿಕೊಳ್ಳದಿದ್ದರೆ

ಬೇರೆಯವರು ದೂರವಾಗ ಬಹುದು

ಬೇರೆಯವರ ಸ್ನೇಹವಿಲ್ಲದಿದ್ದರೆ

ಬದುಕು ಬರಡು ಎನಿಸ ಬಹುದು


ಅರ್ಥವಾಗಿ ಎಚ್ಚೆತ್ತುಕೊಳ್ಳದಿದ್ದರೆ

ಸಮಯ ಜಾರಿ ಹೋಗಬಹುದು

ಇರುವ ಸಮಯವ ಬಳಸದಿದ್ದರೆ 

ಬದುಕಿದ್ದೂ ವ್ಯರ್ಥವೆನಿಸಬಹುದು 

Tuesday, March 12, 2024

ಹನಿ ಹನಿ ಕೂಡಿದರೆ


ಒಂದು ಬೀಜ ಒಂದು ಮರ

ಒಂದು ಮರದಿಂದ ಹಲವು ಬೀಜ

ಹಲವು ಬೀಜಗಳು ಬೆಳೆದು ಹಲವು ಮರ

ಹಲವು ಮರಗಳಿಂದ ಕಾಡು


ಒಂದು ಪಾದ ಒಂದು ಹೆಜ್ಜೆ

ಒಂದೊಂದೇ ಹೆಜ್ಜೆ ಸೇರಿ ಹಲವು ಹೆಜ್ಜೆ

ಹಲವು ಹೆಜ್ಜೆಗಳು ಸೇರಿ ಕೆಲವು ಮೈಲು

ಕೆಲವು ಮೈಲುಗಳು ಸೇರಿ ಪಯಣ


ಒಂದು ನಲ್ಲಿ ಒಂದು ಹನಿ ನೀರು

ಒಂದೊಂದೇ ಹನಿ ಸೇರಿ ಒಂದು ಬೊಗಸೆ 

ಬೊಗಸೆ ಬೊಗಸೆ ಸೇರಿ ಹಲವು ತಂಬಿಗೆ

ಹಲವು ತಂಬಿಗೆಗಳಿಂದ ಬಾಲ್ಡಿ ನೀರು


ಒಂದು ನಾಣ್ಯ ಒಂದು ಪೈಸೆ

ಪೈಸೆ ಪೈಸೆಗಳು ಸೇರಿ ಒಂದು ರೂಪಾಯಿ

ಕೆಲವು ರೂಪಾಯಿಗಳು ಸೇರಿ ನೂರು ರೂಪಾಯಿ

ನೂರಾರು ರೂಪಾಯಿಗಳು ಸೇರಿ ಸಾವಿರಾರು

Monday, March 11, 2024

ಅನುಭವ ಸತ್ಯ

 

ಗೋಡೆ ಬದಿಯ ಮಣ್ಣಿಗೆ ನೀರೆರಚಿ ನೋಡಿ

ಮಣ್ಣು ಸಿಡಿದು ಗೋಡೆ ಕೆಸರಾಗುತ್ತದೆ

ಮನಸಿಗೆ ಒಂಥರಾ ಖುಷಿ ಎನಿಸುತ್ತದೆ


ಅದೇ ಗೋಡೆಗೆ ನೀರೇರಚಿ ನೋಡಿ

ಸಂಪೂರ್ಣ ತೊಳೆದು ಶುಭ್ರವಾಗುತ್ತದೆ

ಮೊದಲಿಗಿಂತ ಮಿಗಿಲಾದ ಖುಷಿ ಸಿಗುತ್ತದೆ


ತಿಳಿಗೊಳಕ್ಕೊಂದು ಕಲ್ಲೆಸೆದು ನೋಡಿ

ಅಲೆಅಲೆಯಾಗಿ ಉಂಗುರಗಳು ಏಳುತ್ತವೆ 

ಮನಸಿಗೆ ಮುದವೆನಿಸುತ್ತದೆ


ಅಲೆಯ ಉಂಗುರಗಳು ಅಳಿದು

ಕೊಳವು ತಿಳಿಯಾಗುವುದನ್ನು ನೋಡಿ

ಮನಸ್ಸು ತಲ್ಲಣ ರಹಿತ ಸುಖ ಪಡೆಯುತ್ತದೆ


ತೊಳೆದಾಗ, ತಿಳಿಗೊಂಡಾಗ ದೊರಕುವುದು

ಕಲಕಿ ಕದಡಿದಾಗ, ಕೆಸರೆರಚಿದಾಗ ಸಿಗುವುದಿಲ್ಲ 

ಎಂಬದು ಅನುಭವ ಸತ್ಯ, ಅದನು ಅರಿತು ನೋಡಿ

Friday, March 08, 2024

ನೆಮ್ಮದಿ


ಇಷ್ಟು ದಿನ ಎಲ್ಲಿದ್ದೆ ನೀನು

ಮೊದಲೇ ಯಾಕೆ ಕಾಣಲಿಲ್ಲ

ಎಲ್ಲಿಯೂ ಯಾಕೆ ಸಿಗಲಿಲ್ಲ


ಇಂದು ನೀನು ಎಲ್ಲಿಂದ ಬಂದೆ

ನನ್ನೊಡನೆಯೇ ಇರುವೆನೆಂದೆ

ಚಿಂತೆಗೆ ತರ್ಪಣ ಬಿಟ್ಟೆನೆಂದೆ


ಗುರಿಯ ದಾರಿ ತೋರುವೆ ಎಂದೆ 

ಅದರ ಕಡೆಗೆ ನಡೆಸುವೆ ಎಂದೆ

ಸದಾ ನನ್ನ ಹಿಂದೆ ಮುಂದೆ


ಸುತ್ತುತಿರುವೆ ಇನ್ನು ಮುಂದೆ

ನಾವಿನ್ನೆಂದಿಗೂ ಒಂದೇ ಎಂದೆ

ನೀನೇ ಆದಿ ಅಂತ್ಯವೆಂದೆ

ಅಮ್ಮ - ಮಗು

 

ಬಿಗಿಯಾದ ದಿರಿಸ ಧರಿಸಿ

ಕಷ್ಟ ಬರಿಸಿ ಅದನು ಭರಿಸಿ

ಬೆವರು ಸುರಿಸಿ ಮತ್ತೆ ಒರೆಸಿ

ದೂರ ಸರಿಸಿ ದುಃಖ ಮರೆಸಿ


ಅಪ್ಪನರಸಿ - ಅಮ್ಮ ನ ಅರಸಿ 

ಭಾರ ಹೊರಿಸಿ ಕಣ್ಣು ತೂಗಿಸಿ 

ಹಾಲು ತರಿಸಿ ಅದನು ಕುದಿಸಿ

ತಣಿಸಿ ಕುಡಿಸಿ ಸಮಾಧಾನಗೊಳಿಸಿ 


ದಿರಿಸ ತೆಗೆಸಿ ಒಗೆಸಿ ಒಣಗಿಸಿ

ಕಪಾಟಿಗೆ ಸೇರಿಸಿ ಬೀಗ ಜಡಿಸಿ

ಊಟ ಬಡಿಸಿ ತಿನ್ನಿಸಿ, ಬಾಯಿ ತೊಳೆಸಿ 

ಮಲಗಿಸಿ ಹೊದಿಕೆ ಹೊದೆಸಿ


ನೆತ್ತಿಗೊಂದು ಮುತ್ತನಿರಿಸಿ

ಜೋಗುಳ ಹಾಡಿ ನಿದ್ದೆಗೆಳೆಸಿ

ಸ್ವಪ್ನದಲ್ಲಿ ತೇಲಿಸಿ, ಮನಸಾರೆ ಹರಸಿ

ಬೆಳಗ್ಗೆ ಎಬ್ಬಿಸಿ ದಿರಿಸ ಧರಿಸಿ...

Thursday, March 07, 2024

ಕಾಲನ ಕೈವಾಡ

 

ಬೆರಳಲ್ಲಿ ಬೆಳೆ ಕಡಿತಗೊಂಡಿದೆ

ಮನದಲ್ಲಿ ಮರುಳು ಹೆಚ್ಚಾಗಿದೆ

ತನುವಲ್ಲಿ ಜಡ ತುಂಬಿಕೊಂಡಿದೆ


ಕಣ್ಣುಗಳಿಗೆ ಕಿಸುರು ತಡವಿದೆ 

ಕಾಲುಗಳ ಕೆರೆತ ಹೆಚ್ಚಾಗಿದೆ

ಕೈಗಳ ಕಸುವು ಕಡಿಮೆಯಾಗಿದೆ


ತಲೆಯಲ್ಲಿ ಚಿಂತೆ ವಿಪುಲವಾಗಿದೆ 

ಬಾಯಲ್ಲಿ ಬೈಗುಳ ಹೇರಳವಾಗಿದೆ

ಒಳ್ಳೆಯ ಮಾತು ಮರೆತೇ ಹೋಗಿದೆ


ಕೂದಲೂ ಹಲ್ಲೂ ಉದುರಿ ಹೋಗಿದೆ

ಕಾಲನ ಕೈವಾಡ ಎದ್ದು ಕಾಣುತ್ತಿದೆ

ಉಸಿರು ನಿತ್ಯ ದಿನಗಳ ಎಣಿಸುತ್ತಿದೆ 

ಇವಳು

 

ಉತ್ತಿ ಬಿತ್ತಿ ಬೆಳೆಯನೆತ್ತಿ

ಮಂದಿಗೆಲ್ಲ ಕಟ್ಟಿ ಬುತ್ತಿ

ಹೆಮ್ಮೆಯಿಂದ ತಲೆಯನೆತ್ತಿ

ನಡೆಯುವಳು ಗಟ್ಟಿಗಿತ್ತಿ


ಮುಂಜಾನೆದ್ದು ಮನೆಯ ಬಿಟ್ಟು

ವಾಹನದಲ್ಲಿ ಜೀವವಿಟ್ಟು 

ದುಡಿಮೆಗೆ ತಕ್ಕ ಸಮಯ ಕೊಟ್ಟು

ಗಳಿಸುವಳು ಹೊಟ್ಟೆಗೆ ಹಿಟ್ಟು


ದೇಶವನ್ನು ಆಳಿದವಳು

ವಿಮಾನವನ್ನು ಏರಿದವಳು

ಬಾಹ್ಯಾಕಾಶಕೆ ಹಾರಿದವಳು

ವಿಜ್ಞಾನದಲ್ಲಿ ಮುನ್ನಡೆದವಳು


ನಾಡಿ ಹಿಡಿದ ವೈದ್ಯೆಯಿವಳು

ವಿದ್ಯೆಯನ್ನು ಹಂಚಿದವಳು

ತಂತ್ರಜ್ಞಾನ ಪಡೆದವಳು

ಯಂತ್ರ ಚಾಲನೆಗೆ ನಿಂದವಳು


ಸಂಗೀತ ವಿದುಷಿಯಿವಳು

ನೃತ್ಯವನ್ನು ಮಾಡಿದವಳು

ಕ್ರೀಡೆಯಲ್ಲಿ ಭಾಗವಹಿಸಿ

ಚಿನ್ನವನ್ನು ಗೆದ್ದವಳು


ಮಂತ್ರವನ್ನು ಪಠಿಸುವಳು

ಪೂಜೆಯನ್ನು ಮಾಡುವಳು

ವಿವಿಧ ಖಾದ್ಯ ಕಜ್ಜಾಯಗಳ

ಅಡುಗೆ ಮಾಡಿ ಬಡಿಸುವಳು


ವ್ಯವಹಾರದಲ್ಲಿ ಎಂದಿಗೂ ಮುಂದು

ಸಂಸಾರದಲ್ಲಿ ಬೆನ್ನೆಲುಬಾಗಿ ನಿಂದು

ಮಮತೆಯ ಮಾತೆ ಅಂದೂ ಇಂದೂ

ಇವಳು ಎಲ್ಲರಿಗೂ ಪ್ರಿಯ ಬಂಧು