Sunday, December 31, 2023

ಕಸದ ರಾಶಿ

 


ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ

ಯಾರೋ ಬಂದು ಎಸೆದ ಊಟ

ಉಂಡು ನೀನು ಏಕಾಏಕಿ ಉಬ್ಬಿದೆ


ಹೆತ್ತವರಿಲ್ಲ ಹೊತ್ತವರಿಲ್ಲ

ಬಂಧು ಬಳಗ ಸಾಧ್ಯವಿಲ್ಲ

ಆದರೂ ನೀನು ಬಹಳ ಕೊಬ್ಬಿದೆ


ಅನಿವಾರ್ಯದಲ್ಲಿ ಬಳಿಗೆ ಬಂದ ತಪ್ಪಿಗೆ 

ಮೂಗು ಹಿಡಿಸಿದೆ, ಅಯ್ಯೋ ಪಾಪ 

ಎಂದವರಿಗೆ ಮೂರೂ ಲೋಕ ತೋರಿಸಿದೆ


ಒಟ್ಟು ಮಾಡಿ ಕೊಟ್ಟುದೆಲ್ಲ ಹೊಟ್ಟೆಗೆ ಹಾಕಿದೆ

ಬೆಟ್ಟು ಮಾಡಿ ತೋರಿದರೆ ಸಿಟ್ಟು ಮಾಡದೇ 

ಇನ್ನಷ್ಟು ಬೆಳೆದೆ, ಬೆಳೆಯುತ್ತಲೇ ಹೋದೆ


ನೀನ್ಯಾರ ಪಾಪ, ನಿನಗಿಹುದೇ ಶಾಪ

ನಿನ್ನ ಪೋಷಿಸುವರು ಹಲವರು ಆದರೆ 

ಮೂಸಿ ನೋಡರು, ಅದಕೇ ನಿನಗಿಲ್ಲ ಯಾರೂ


ಕಳೆದುಕೋ ನಿನ್ನ ಬೆಳೆವಣಿಗೆಯ ಶಕ್ತಿ 

ಬೇಗ ಕಣ್ಮರೆಯಾಗಿ ಅಲ್ಲಿಂದ, 

ನೀಡು ಎಮಗೆ ನಿನ್ನಿಂದ ಮುಕ್ತಿ

ಹನಿ

 

ಪ್ರಕೃತಿಯ ಪರಿಧಿಯಲ್ಲಿ 

ಬೆಚ್ಚಗಿನ ಸಂಜೆಯಲ್ಲಿ ಸುಳಿದ ಗಾಳಿ,

ತಣ್ಣನೆಯ ಎಲೆಯನ್ನು ತಡವಿ

ರೋಮಾಂಚನದೊಂದಿಗೆ ಸ್ಖಲಿಸಿದ 

ಹನಿಯೇ ಮುಂಜಾವಿನ ಇಬ್ಬನಿ


ಮಾನವನ ಪರಿಮಿತಿ ಮೀರಿ

ದಾನವನ ಹುಟ್ಟಿನಲಿ 

ದುಷ್ಟತನ ಹೊಣಕಿದಾಗ

ಅಸಹ್ಯದೊಂದಿಗೆ ಹೊರ ಬೀಳುವ 

ಹನಿಯೇ ಬೆಲೆಕಟ್ಟಲಾರದ ಕಂಬನಿ


ಹಗಲಿನಲಿ ಇರುಳಿನಲಿ

ಬಿಸಿಲಿನಲಿ ನೆರಳಿನಲಿ

ಹಸಿಯಾದ ಅನುಭವಗಳಲಿ

ಬಿಸಿಯಾದ ನೆನಪಿನಲಿ ರೂಪುಗೊಳ್ಳುವ

ಹನಿಯೇ ಅವರವರ ಒಳ ಧ್ವನಿ


ಬಾನಲಿ ಬುವಿಯಲಿ ಗಿಡದಲಿ ಮರದಲಿ

ಮನದಲಿ ಮನೆಯಲಿ ಅಂಗಳದಲ್ಲಿ 

ಗುದ್ದಲಿ ಪೆಟ್ಟಲಿ, ಇದ್ದಲ ಹೊಟ್ಟಲಿ 

ಎಲ್ಲೆಲ್ಲೂ ಇದ್ದು ಮಾಡದಂತೆ ಸದ್ದು 

ಬೆನ್ನಿಗಿರುವೆಯಲ್ಲಾ, ಹೇರಂಬ ನೀ 

ಹುಟ್ಟುಹಬ್ಬದ ಶುಭಾಶಯ


ಮೋಜು ಪಾರ್ಟಿ ಇಲ್ಲದೇ ಮುಂದೆ 

ಹೋಗದು ನಿಂತ ಕ್ಯಾಲೆಂಡರು

ಇಡೀ ವರ್ಷ ಏನೇನ್ ಮಾಡಿದೆಯೆಂದು 

ಕೇಳುತ್ತಾರೆ ನಮ್ಮ ಟೀಚರು


ಇಂದಿನ ದಿನಾಂಕದಂದು 

ಹುಟ್ಟಿದವರಿಗೆಲ್ಲ ದೊಡ್ಡ ಬಂಪರು

ಉಡುಗೊರೆಗಳು ಜಗದಲೆಲ್ಲ, ಜೊತೆಗೇ 

ಜಗಮಗಿಪ ಬದುಕಿನ ರೋಲರ್ ಕೋಸ್ಟರು


ಹುಟ್ಟಿದ ದಿನದಂದು ಮುಗಿವುದು

ಹಳೆ ವರ್ಷದ ಎಲ್ಲಾ ತಕರಾರು

ಆರಂಭವಾಗಲಿದೆ ಹೊಸ 

ದಿನಪಟ್ಟಿಯ ಹೊಸ ಕಾರ್ಬಾರು

ಹೊಸ ದಿನದರ್ಶಿಕೆ


ದಿನಪಟ್ಟಿ ಬದಲಾಗುತ್ತಿದೆ

ದಿನದಿಕ್ಸೂಚಿ 2024 ರೆಡೆಗೆ ತಿರುಗುತ್ತಿದೆ

ಇನ್ನೇನು, ಸಂಕ್ರಾಂತಿ ಸಮೀಪಿಸುತ್ತಿದೆ

ಎಲ್ಲೆಲ್ಲೂ ಸಂಭ್ರಮ ಮೈಗೂಡುತ್ತಿದೆ

 

ಯಾರೇನೇ ಮಾಡಿದರೂ, ಆಗಲೇಬೇಕು

ಎಂಬಂಥದ್ದನ್ನು ತಪ್ಪಿಸಲಾಗುವುದಿಲ್ಲ

ತಿಪ್ಪರಲಾಗ ಹಾಕಿದರೂ, ಆಗಬಾರದು

ಎಂಬಂಥದ್ದನ್ನು ಆಗಿಸಲು ಸಾಧ್ಯವಿಲ್ಲ


ಸಮಯವು ಅದರಷ್ಟಕ್ಕೆ ಸರಿಯುತ್ತಲಿರಲಿ

ಕಾಲನ ಕೈವಾಡ ಒತ್ತಟ್ಟಿಗಿರಲಿ

ಕರ್ತವ್ಯ, ಜವಾಬ್ದಾರಿಗಳಿಗೆ ಹೆಗಲಿರಲಿ

ಬಂದುದನೆದುರಿಸುವೆನೆಂಬ ಕೆಚ್ಚಿರಲಿ


ಹೊಸ ದಿನದರ್ಶಿಕೆಯಲ್ಲಿ ಹೊಸತನವ ಕಾಣಿ

ಹೊಸತನದಲ್ಲಿ ಹೊಸ ವಿಷಯಗಳ ಸರಣಿ

ಹೊಸ ವಿಷಯಗಳಲ್ಲಿ ಹೊಂಬಿಸಿಲ ಚಾವಣಿ

ಹೊಂಬಿಸಿಲ ಚಾವಣಿಯಲ್ಲಿ ಜೀವನದ ಸವಿ ಫೇಣಿ

ಗೊತ್ತಿತ್ತು

 

ಗೊತ್ತಿತ್ತು ನನಗೆ, ನಾ ಬರೆಯೆನೆಂದು

ನಿತ್ಯ ಬರೆವೆನೆಂದು ಅಂದುಕೊಂಡರೂ

ನಾನದನು ಖಂಡಿತವಾಗಿಯೂ ಮರೆವೆನೆಂದು


ಆದರೂ ಒಮ್ಮೊಮ್ಮೆ ಇಲ್ಲಿ ಬಂದು

ಒಂದೂ ದಾರಿ ಕಾಣದೇ ತಿರುಗಿ ನಿಂದು

ಮನದುಸುಕಿನೊಳಗೆ ಮುಳುಗಿ ಕೊಳೆವೆನೆಂದು


ಬಹಳಷ್ಟು ಯೋಚಿಸಿದೆ ನಾನು ಅಂದು

ಕೊಂಚ ಪ್ರಯತ್ನಿಸಿದರೆ ಹೇಗೆ ಎಂದು

ತುಳುಕಿದವು ಅಲ್ಲಿಇಲ್ಲಿ  ಒಂದೆರಡು ಬಿಂದು


ಮತ್ತೆ ಕುಸಿದು ಕುಳಿತು ಹಿಡಿದು ಸಂದು

ಯೋಚಿಸುತ್ತಿದ್ದೆ ನಾ ಬಹಳವೇ ನೊಂದು 

ಸಹವಾಸವೇ ಬೇಡ ಇದರದು ಇನ್ನೆಂದೂ


ಅಂತಸ್ಥ ಅಂತಸ್ಸಾಕ್ಷಿ ಎದ್ದು ಬಂದು

ಹೇಳಿದ ಮಾತದು ಒಂದೇ ಒಂದು

ನೀ ಮರಳಿ ಯತ್ನಿಸಿ ನೋಡಬಾರದೇ ಎಂದು

Saturday, December 23, 2023

ನಂಬಿಕೆ

 

ಬೆಕ್ಕು,  ಮಿಯಾಂವ್ ಎಂದು ಕರೆದು

ಊಟದ ತಟ್ಟೆಯ ಬಳಿ ಕುಳಿತು, 

ಮೈಮುರಿದು, ತಲೆಯೆತ್ತಿ ನೋಡುತ್ತಾ, 

ಮತ್ತೆ ತಟ್ಟೆಯನ್ನು ನೋಡುತ್ತಾ, 

ಒಂದಿನಿತೂ ಸದ್ದಿಲ್ಲದೇ ಕಾಯುವಾಗಿನ ಭಾವ


ನಾಯಿ, ಗಮನಿಸದಿದ್ದರೂ, ದೂರ ತಳ್ಳಿದರೂ, 

ಕೈಯಲ್ಲಿ ಕೋಲನ್ನು ಹಿಡಿದರೂ, 

ಹಿಂದೆಯೇ ಸುಳಿಯುತ್ತಾ, ಕಾಲ ಬಳಿ ಬಂದು, 

ನಮ್ಮ ಕಣ್ಣನ್ನೇ ನೋಡುತ್ತಾ,

ಬಾಲ ಅಲ್ಲಾಡಿಸುತ್ತಿರುವಾಗಿನ ಭಾವ


ಮಗುವನ್ನು ಎತ್ತಿ ಮೇಲೆ ಎಸೆದಾಗ, 

ಬೊಚ್ಚು ಬಾಯಿ ಬಿಟ್ಟು, ಕಿಲಕಿಲ ನಗುತ್ತಾ,  

ಅಪ್ಪನ ಮುಖವನ್ನೇ ನೋಡುತ್ತಾ,

ಕೈಯಗಲಿಸಿಕೊಂಡು, ಕೆಳಗೆ ಬರುವಾಗ 

ಸಂತೋಷ ಪಡುವಾಗಿನ ಭಾವ


ಸಂಕಟ, ಸಂದಿಗ್ಧವಿದ್ದಾಗ, ಪಕ್ಕದಲ್ಲಿ ನಿಂತು, 

ಮಾತಿಲ್ಲದೇ ಕಣ್ಣಲ್ಲಿ ಕಣ್ಣಿಟ್ಟು,  

ಮೆತ್ತಗೆ ಕೈ ಅದುಮಿ, ನಸುನಕ್ಕು,

ಧೈರ್ಯದಿಂದಿರು ನಿನ್ನೊಡನಿದ್ದೇನೆ

ಎಂದು ತೋರುವಾಗಿನ ಭಾವ


ಹೊಯ್ದಾಡುವ ದೋಣಿಯಲ್ಲಿ ಕುಳಿತು, 

ಏರಿಳಿಯುತ್ತಿರುವ ನೀರನ್ನೇ ನೋಡುತ್ತಿರುವಾಗ

ಇನ್ನು ಸ್ವಲ್ಪವೇ ದೂರ, ದಡ ತಲುಪುತ್ತೇವೆ  

ಗಾಬರಿಯಾಗಬೇಡಿ, ನಾನಿದ್ದೇನೆ ಎನ್ನುವ

ಅಂಬಿಗನ ಮೇಲೆ ಇಡುವ ಭರವಸೆಯ ಭಾವ


ದೇವರ ಕೋಣೆಯಲ್ಲಿ ದೀಪ ಹಚ್ಚಿ, 

ಕಣ್ಣು ಮುಚ್ಚಿ, ಕೈ ಮುಗಿದು 

ಭಗವಂತಾ ನೀನು ಇಟ್ಟ ಹಾಗೆ, ಕೊಟ್ಟ ಹಾಗೆ, 

ನೀನು ಮಾಡುವುದೆಲ್ಲಾ ಒಳ್ಳೆಯದಕ್ಕೇ

ಎಂದುಕೊಳ್ಳುವ ಭಕ್ತಿಯ ಭಾವ

Friday, December 22, 2023

ಕಟ್ಟು ಬಿಚ್ಚುವುದಿಲ್ಲ

 

ಒಮ್ಮೊಮ್ಮೆ ವಿಚಾರಗಳು ಒಳಗೊಳಗೇ

ತಕಧಿಮಿ ಎನ್ನುತ್ತವೆ

ಆದರೂ ಕೂಡಿ ಬರುವುದಿಲ್ಲ


ಹೊರಹಾಕುವ ಬಯಕೆ 

ಕತ್ತು ಹಿಡಿಯುತ್ತದೆ

ಆದರೂ ಹೇಗೆಂದು ತಿಳಿಯುವುದಿಲ್ಲ


ಬಲವಂತದಿಂದಾದರೂ ಬಳಿಯುವ

ಇಚ್ಛೆ ಮೊಳೆಯುತ್ತದೆ

ಆದರೂ ಧೈರ್ಯ ಬರುವುದಿಲ್ಲ


ಮನಸು ಊಳಿಡುತ್ತದೆ

ಹೃದಯ ಗೋಳಾಡುತ್ತದೆ

ಆದರೂ ತೊಳಲಾಟ ನಿಲ್ಲುವುದಿಲ್ಲ


ಆತಂಕ, ಆಕಾಂಕ್ಷೆಯ ಮುಸುಕಿ ಬಿಡುತ್ತದೆ

ಉದ್ವೇಗ ಕನಸನ್ನು ಹೊಸಕಿ ಬಿಡುತ್ತದೆ

ಆದರೂ ಕಟ್ಟು ಬಿಚ್ಚುವುದಿಲ್ಲ

ಶಾಮುವಿನ ನವಿಲುಗರಿ

 

ಶಾಮುವಿನ ನವಿಲುಗರಿ, ನಲ್ಮೆ ನವಿರಿನ ಕುಸುರಿ

ಪದಗಳ ಪರಮಾಣು, ಶಾರದೆಯ ಮನದಲ್ಲಿ ಚಿಗುರಿ

ಭಕ್ತಿಭಾವ ತುಂಬಿಸಿ, ಪ್ರೀತಿ ಮಮತೆ ಮೆರೆಸಿ

ಶಾಂತಿಯಿಂದ, ಪುಟದಲ್ಲಿ ಬಿಂಬಿಸಿದ ಗರಿ


ಪದ ಬುಟ್ಟಿಯ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಿಸಿ

ಅನುಭವವ ಗಳಿಸಿ,  ಜ್ಞಾನ ದೀವಿಗೆ ಬೆಳಗಿಸಿ

ಹದಗೊಳಿಸಿ, ಹೊಸತನವ ಮೂಡಿಸಿ 

ಪದಗಳೊಡನೆ ಆಟವಾಡಿದ ಸರಸಿ


ಮನದಲ್ಲಿ ಮೂಡಿದ ಪದಗಳ ಬೆರಳಿಗಿಳಿಸಿ 

ಆಸ್ಥೆಯಿಂದ ಒಂದೊಂದೇ ಎಸಳುಗಳ ಬಿಡಿಸಿ

ಹೆಕ್ಕಿ, ಎಣಿಸಿ, ಉತ್ಸಾಹದಿಂದ ಜೋಡಿಸಿ

ತಟ್ಟೆಯಲ್ಲಿಟ್ಟು ತನ್ನ ಗುರುವಿಗೆ ಕೊಟ್ಟ ಸಾಹಸಿ

Wednesday, December 20, 2023

ದೊಡ್ಡ ಜೀವಿ

ದೊಡ್ಡ ಕಿವಿ ದೊಡ್ಡ ಜೀವಿ
ಅಂದಚೆಂದ ಇದರ ಠೀವಿ
ದೊಡ್ಡ ಕಾಲು, ಕಪ್ಪು ಬಾಲ
ನೋಡಲೆರಡು ಕಣ್ಣು ಸಾಲ

ಅಗಾಧವಿದು ದೇಹದಲ್ಲಿ
ಜಾಣ್ಮೆಯಲ್ಲಿ ಕೃತಿಯಲ್ಲಿ
ಕರುಣೆಯಲ್ಲಿ ಪ್ರೀತಿಯಲ್ಲಿ
ಸ್ನೇಹದಲ್ಲಿ ಸೌಂದರ್ಯದಲ್ಲಿ

ಬುದ್ಧಿವಂತ ಪ್ರಾಣಿಯಿದು
ಭಾವನೆಗಳ ಭಾಂಡಾರವಿದು
ದೀರ್ಘ ಬಸಿರು ಇದರದು
ಹಸಿರನರಸಿ ನಡೆವುದು

ಇದು ನಡೆದದ್ದೇ ದಾರಿ
ಇದರದು ಎಂದಿಗೂ ಒಂದೇ ದಾರಿ
ಸಾಗುವುದು ಕಾಡುದಿಣ್ಣೆಗಳನೇರಿ 
ಜೊತೆಜೊತೆಗೇ ಇರುವುದದರ ಮರಿ

ಪುರಾಣದಲ್ಲಿ ಗಣಪಗೆ
ತಲೆಯನ್ನು ನೀಡಿತು
ವರ್ತಮಾನದಲ್ಲಿ ಮನುಜನ 
ದುರಾಸೆಗೆ ಬಲಿಯಾಯಿತು

ನಿಷ್ಕಲ್ಮಶ, ಸ್ವಚ್ಛಂದ ಗುಣ 
ಹೊಂದಿರುವುದೇ ಮುಳ್ಳಾಯಿತು 
ತನ್ನದಲ್ಲದ ತಪ್ಪಿಗೆ ಪಾಪ, 
ಮನುಜನ ಆಳಾಯಿತು
 
ಮನುಜನನ್ನು ಹೊರುವುದು
ಮನುಜನಿಗಾಗಿ ಸವೆಯುವುದು
ಮನುಜನಿಂದಾಗಿ ಸಾಯುವುದು
ವಿಧಿಯೇ, ಯಾಕೆ ಹೀಗಾಗುವುದು!

Monday, December 18, 2023

ಕಾಡು - ನಾಡು


ಕಾಡಿನಲ್ಲಿ, ದೊಡ್ಡ ಪ್ರಾಣಿಗಳಿಂದ ದೊರಕುವುದು

ಸಣ್ಣ ಪ್ರಾಣಿಗಳಿಗೆ ಆಹಾರ

ನಾಡಿನಲ್ಲಿ, 'ದೊಡ್ಡವರು' ಕಿತ್ತುಕೊಳ್ಳುವರು 

'ಸಣ್ಣವರ' ಆಹಾರ


ಕಾಡಿನಲ್ಲಿ,  ಹಸಿವಿಲ್ಲದಿದ್ದರೆ ಯಾವುದೇ 

ಪ್ರಾಣಿಯೂ ಬೇಟೆಯಾಡದು

ನಾಡಿನಲ್ಲಿ, ಹಸಿವಿಲ್ಲದಿದ್ದರೂ 

ಬೇರೆಯವರದರ ಕಿತ್ತು ತಿನ್ನುವರು


ಕಾಡಿನಲ್ಲಿ ಬೆಂಕಿ ಬಿದ್ದರೆ, ಪ್ರತಿಯೊಂದು ಪ್ರಾಣಿಯೂ 

ಎಚ್ಚರಿಕೆಯ ಗಂಟೆ ಬಾರಿಸುವುದು

ನಾಡಿನಲ್ಲಿ ಬೆಂಕಿ ಬಿದ್ದರೆ, ನಮ್ಮ ಮನೆಗಲ್ಲವಲ್ಲ

ಎಂದು ಬಾಗಿಲು ಮುಚ್ಚಿ ಕೂರುವರು


ಕಾಡಿನಲ್ಲಿ ಎಲ್ಲ ಪ್ರಾಣಿಗಳೂ, ತಮ್ಮ ಜಾಗ

ತಮ್ಮ ಆಹಾರ ಎಂದು ಇರುವವು

ನಾಡಿನಲ್ಲಿ, ಬೇರೆಯವರಿಗ್ಯಾಕೆ ಜಾಗ, ಆಹಾರ

ಎಂದು ಎಲ್ಲವನ್ನೂ ದೋಚುವರು


ಕಾಡಿನಲ್ಲಿ, ಪ್ರಾಣಿಗಳು ಮಾತು ಬಾರದಿದ್ದರೂ

ಮೂತಿ ತಿಕ್ಕಿ ಪ್ರೀತಿ ತೋರುವವು

ನಾಡಿನಲ್ಲಿ, ಮಾತು ಬಂದರೂ 

ಮೂತಿ ತಿರುವಿ ದೂರ ಹೋಗುವರು


ಕಾಡಿನಲ್ಲಿ, ಇರುವುದೂ ಒಂದು ಕಾನೂನು,

ಪಾಲಿಸುವುದೂ ಒಂದೇ ಕಾನೂನು

ನಾಡಿನಲ್ಲಿ, ಇರುವುದು ಸಾವಿರ ಕಾನೂನು

ಆದರೆ ಪಾಲಿಸರು ಒಂದನ್ನೂ


ಕಾಡಿನಲ್ಲಿ 'ನಾನು' ಎಂದಿಲ್ಲ, 

'ನನ್ನದು' ಎಂದಿಲ್ಲ

ನಾಡಿನಲ್ಲಿ, 'ನಾನೇ' ಎಲ್ಲಾ

'ನನ್ನದೇ' ಎಲ್ಲಾ 

Friday, December 15, 2023

ಮಧುರ ಕಂಪಿನ ಧಾರೆ

 

ಎಲ್ಲದಕ್ಕೂ 'ತೆ' ಸೇರಿಸಿ ತೆಗಳುವಿರೇಕೆ

ಸರಿಯಾದ ಪದಗಳ ಬದಿಗೊತ್ತಿ ಮರೆಸುವಿರೇಕೆ 

ಮನಸಿಗೆ ಬಂದ ಪದಗಳನ್ನು ಉಗುಳುವಿರೇಕೆ

ಬಾಯಿಗೆ ಬಂದ ಪದ ಜೋಡಿಸಿ ಬೊಗಳುವಿರೇಕೆ


ಕನ್ನಡದ ಕತ್ತು ಹಿಸುಕಿ ಬೇರೆ ಪದ ಕೊಳ್ಳ ಬೇಡಿ

ಅನಾವಶ್ಯ ಪರಭಾಷೆ ಸೇರಿಸಿ ಕನ್ನಡವ ಕೊಲ್ಲಬೇಡಿ

ಕನ್ನಡವ ಅಸಡ್ಡೆ ಮಾಡಿದರೆಂದಿಗೂ ಸಹಿಸಬೇಡಿ

ಹೇಳಿಬಿಡಿ, ಸುಮ್ಮನೆ ಒಳಗೊಳಗೇ ದಹಿಸಬೇಡಿ


ಕನ್ನಡವ ನವಂಬರಕ್ಕೆ ಸೀಮಿತವಾಗಿಸಬೇಡಿ

ಕಾಸು ಸಿಕ್ಕರೆ ಮಾತ್ರ ಕನ್ನಡವೆಂಬ ದುರಾಸೆ ಬಿಡಿ

ಕರ್ನಾಟಕ ನಿವಾಸಿಗರೊಡನೆ ಕನ್ನಡವೇ ಮಾತಾಡಿ

ಪರರು ಕನ್ನಡ ಕಲಿತು ಮಾತಾಡಿದಾಗ ಹೆಮ್ಮೆ ಪಡಿ


ಕನ್ನಡವ ಕಸದಂತೆ ಕಾಣುವುದನ್ನು ನಿಲ್ಲಿಸಿ

ಕನ್ನಡದ ಮೌಲ್ಯ- ಮಹತ್ವವ ಮಕ್ಕಳಿಗೆ ವಿವರಿಸಿ

ಕನ್ನಡ ಕಲಿಯಲು ಅವರಲ್ಲಿ ಆಸಕ್ತಿ ಮೂಡಿಸಿ

ಕನ್ನಡವನ್ನು ಕುರಿತು ಅಭಿಮಾನ ಹೊಂದಿ, ಬೆಳೆಸಿ


ದಿನದಲ್ಲಿ ಕೊಡಿ ಸ್ವಲ್ಪ ಸಮಯ ಕನ್ನಡಕ್ಕೆ 

ನಮ್ಮತನವನ್ನು ಕಾಪಾಡಿ ಉಳಿಸುವುದಕ್ಕೆ

ಉಳಿಸಿ, ಇನ್ನಷ್ಟು ಬೆಳೆಸುವುದಕ್ಕೆ

ತಾಯಿ ಭುವನೇಶ್ವರಿ ನಮ್ಮ ಹರಸುವುದಕ್ಕೆ


ಪದ ಬಳಕೆಯ ಬಗ್ಗೆ ಗೊಂದಲವಿದ್ದರೆ,

ತಿಳಿದವರೊಡನೆ ಕೇಳಿ ಬಳಸಿದರೆ,

ಅದರಿಂದಾಗುವ ಸಂತೋಷವೇ ಬೇರೆ,

ನಿಜಕ್ಕೂ ಕನ್ನಡವಹುದು ಮಧುರ ಕಂಪಿನ ಧಾರೆ


ಇದನೆಲ್ಲರೂ ಅರಿತರೆ, 

ಎಲ್ಲರಿಗೂ ಅರಿವು ಮೂಡಿಸಿದರೆ,

ಕನ್ನಡವೆನಿಸದು ಯಾರಿಗೂ ಹೊರೆ 

ಸವಿಯೆನಿಸುವುದು ನಮ್ಮ ಕನ್ನಡ ಕಲ್ಲುಸಕ್ಕರೆ

Wednesday, December 13, 2023

ಚರ್ವಿತಚರ್ವಣ

 

ಇಲ್ಲಿಗೇ ಮುಗಿಯಿತೇ ನನ್ನ ಪದ ಭಾಂಡಾರ

ಹುಟ್ಟುತ್ತಿಲ್ಲ ಮನದೊಳಗೆ ಪದಗಳ ಸಾರ

ಸಿಕ್ಕುತಿಲ್ಲ ಸರಿಯಾದ ಸಾಲುಗಳ ದಾರ

ಹೀಗಾದರೆ ಖಂಡಿತ ನಾನಾಗಲಾರೆ ಉದ್ಧಾರ


ಹೊಸತನದ ಹಾದಿಯಲಿ ಉತ್ಸಾಹದ ಪೂರ

ಇಷ್ಟು ದಿನ ಹರಿಯುತ್ತಿತ್ತು ಬಳಸಿ ಸಕಲ ದ್ವಾರ

ಸುರಿಯುತಿತ್ತು ಎಲ್ಲೆಡೆಯಲ್ಲೂ ಸವಿಸ್ತಾರ

ಬೆರೆತು ಹೃದಯದಿ ಸೂಚಿಸುತ್ತಿತ್ತು ಪರಿಹಾರ


ಇದಕ್ಕೇ ಹೇಳುವುದು, ಬರೆಯಬೇಕು, 

ಬರೆಯುವುದರೊಂದಿಗೆ ಕಲಿಯಬೇಕು, ಕಲಿಯದೇ

ಬರೆಯುತಿದ್ದರೆ ಆಗುವುದು ಚರ್ವಿತಚರ್ವಣ,

ಓದುಗ ವೃಂದ ಬಿಡುವುದು ನಮಗೆ ತರ್ಪಣ

Tuesday, December 12, 2023

ಭ್ರಮರಾಂಬೆ


ಜಗಮಗಿಪ ದೀಪಗಳು,

ನಗನಾಣ್ಯ ಧರಿಸಿಹಳು

ಜತನದಿಂದ ಜಗವ ಕಾಯುತ 

ನಿಂದಿಹಳು ನಮ್ಮಮ್ಮ ಜಗದಂಬೆ


ಮಂಗಳೂರು ಮಲ್ಲಿಗೆ

ಸೂಜಿಸುಳಿಯ ಸಂಪಿಗೆ

ತಾವರೆಯ ಮಾಲೆಯೊಡನೆ

ತುಳಸಿ ಧರಿಸಿಹ ದುರ್ಗಾಂಬೆ 


ಮುತ್ತಿನಂಥ ಮೂರುತಿ

ಮೂಗಿನಲಿ ಮೂಗುತಿ

ನೀಗುವಳು ಕಷ್ಟಗಳ

ನಮ್ಮಮ್ಮ ಭ್ರಮರಾಂಬೆ

Monday, December 11, 2023

ನಮಗಿಲ್ಲ ಚಿಂತೆ


ಭಾರತ ಮಾತೆಯ ಸುರಕ್ಷೆಗಾಗಿ ಪಣ ತೊಟ್ಟ ರಾಜ 

ಅಮಿತ ಶಾಸನದೊಡನೆ ಯೋಗಿ ಪಟ್ಟ ಪಡೆದ ಮಹಾರಾಜ

ನರರಇಂದ್ರ, ಕರ್ತವ್ಯ ದಾಮವ ಉದರಕೆ ಕಟ್ಟಿ, ಸಹಜ

ಮೋಹಗಳಿಗೆ ಅತೀತನಾಗಿರುವ ದಿಗ್ಗಜ


ನಯ-ವಿನಯವಿರುವವನು, ನುಡಿದಂತೆ ನಡೆವವನು 

ಕೆಲವು ಶಿಸ್ತುಗಳನ್ನು ಅಳವಡಿಸಿಕೊಂಡವನು 

ಪರರ ಪ್ರಗತಿಯ ಕಂಡು ಮನಸಾರೆ ಮೆಚ್ಚುವನು

ಗುರಿಯೆಡೆಗೆ ಧಾವಿಸುತ್ತಾ ಸ್ಫೂರ್ತಿಯನು ತುಂಬುವನು


ಕಾರ್ಯಕಾರ್ಯದಲ್ಲೂ ತನ್ನ ಛಾಪು ಮೂಡಿಸಿದವ

ಆ ಮೂಲಕವೇ ಧೈರ್ಯದಿಂದ ಮುನ್ನುಗ್ಗಲು ಕಲಿಸಿದವ

ಅಸಾಮಾನ್ಯ ಬುದ್ಧಿ, ಜ್ಞಾನ ಹೊಂದಿ, ಹಂಚುವವ

ಹಲವು ಅಸಂಭವಗಳ ಸಂಭವವಾಗಿಸಿದವ


ಕಳ್ಳ ಹೆಜ್ಜೆಗಳಿಗೆ ಗೆಜ್ಜೆ ಕಟ್ಟಿ ಎಲ್ಲರಿಗೂ ತಿಳಿಸಿದವ 

ಸ್ವಾವಲಂಬನೆ ರುಚಿಯ ಹಿಡಿಸಿ ಸ್ವಂತಿಕೆಗೆ ಬೆಲೆ ನೀಡಿದವ

ಸಡಿಲ ಗಂಟುಗಳ ಬಿಗಿಸಿ ಜಟಿಲ ನೀತಿಗಳ ಸುಗಮವಾಗಿಸಿದವ

ಕುಟಿಲಕ್ಕೆ ಕೊಡಲಿಯಿಟ್ಟು ಮುಖವಾಡ ಕಳಚಿದವ 


ಸ್ತ್ರೀಯರನ್ನು ಶಕ್ತಿಯೆಂದು ಗೌರವಿಸಿ ನಮಿಸಿದವ

ಮೂಲೆಮೂಲೆ ಹುಡುಕಿ, ಸಾಧಕರ ಗುರುತಿಸಿದವ

ಪೌರ ಕಾರ್ಮಿಕರ ಪಾದ ತೊಳೆದು ಸನ್ಮಾನಿಸಿದವ

ಸಂತ್ರಸ್ತರೊಡನೆ ಸದಾ ಇದ್ದೇನೆಂದು ನಿರೂಪಿಸಿದವ

 

ಇಡೀ ದೇಶವೇ ತನ್ನ ಕುಟುಂಬ ಎಂದವ, 

ಕೆಲವರಿಗೆ ಅಣ್ಣನಾದರೆ, ಕೆಲವರಿಗೆ ತಮ್ಮನೀತ

ಹಲವರಿಗೆ ಮಗನೆನಿಸಿದರೆ ಹಲವರಿಗೆ ತಂದೆ ಸಮಾನವೀತ,

ಹೃದಯ ಶ್ರೀಮಂತಿಕೆಯಿಂದ ಭಾವುಕವಾಗಿಸುತ್ತಾನೆ ಈತ


ಸೈನಿಕರ ನಿಸ್ವಾರ್ಥ ಸೇವೆಯನ್ನು, ನಿಸ್ವಾರ್ಥಿಯಾಗಿ ಹೊಗಳಿದ

ಹಬ್ಬಗಳಲ್ಲಿ ಅವರೊಡನಿದ್ದು, ಮನೆಯವನಂತೇ ಸಂಭ್ರಮಿಸಿದ

ಗಡಿಗಳಲ್ಲಿ ಕ್ಷಿಪ್ರ ಸಹಾಯ ಒದಗಲು, ರಸ್ತೆಗಳನ್ನು ಸರಿಪಡಿಸಿದ

ಅವರ ಅಗತ್ಯಗಳ ಪೂರೈಸಿ ಧನ್ಯವಾದವನರ್ಪಿಸಿದ


ಭಾರತ ಮಾತೆಗೆ ಜಗದ್ವ್ಯಾಪಿ ಮೆರುಗು ಮೂಡಿಸಿದ ಚಿನಿವಾರ

ಏಳಿಗೆಯೆಂದರೇನೆಂದು ಎಲ್ಲರಿಗೂ ಅರಿವು ಮೂಡಿಸಿದ ಹರಿಕಾರ 

ಸ್ವಲ್ಪವೂ ತಪ್ಪುವುದಿಲ್ಲ ಈತನ ಸ್ಫುಟ ಲೆಕ್ಕಾಚಾರ

ತಿಳಿಸುವನು ಎಲ್ಲರಿಗೂ ಎಲ್ಲವನೂ ಸವಿವರ


ದೇಶದ ಜನರಿಗೀತ ಸ್ವಯಂಘೋಷಿತ ಕಾವಲುಗಾರ

ಒಳ್ಳೆಯದನ್ನೇ ಮಾಡಿದರೂ, ಸದಾ ಕೆಂಗಣ್ಣುಗಳಿಗೆ ಆಹಾರ

ದೇಶದುನ್ನತಿಗಾಗಿ, ಊಟ-ನೀರು-ನಿದ್ರೆ ಲೆಕ್ಕಿಸದ ಸರದಾರ

ಆಳಾಗಲೀ ಅರಸನಾಗಲೀ ಒಂದೇ ಮಣೆ ಎನ್ನುವ ಧೀರ


ಹೆದ್ದಾರಿಗಳ ನಿರ್ಮಿಸಿ ಮನಗೆದ್ದ ಮುತ್ಸದ್ದಿ 

ಧಾವಂತದಿಂದ ಕೆಲಸಗಳ ಪೂರೈಸುವ ಸದ್ಬುದ್ಧಿ

ಅನ್ಯ ದೇಶದೆದುರು ದೇಶದ ಗೌರವವ ಎತ್ತಿ ಹಿಡಿದ

ಭಾರತದ ಬಾವುಟವ ಉತ್ತುಂಗಕ್ಕೇರಿಸಿದ


ಮುಂದಿರುವ ಅಗ್ನಿಪರೀಕ್ಷೆಯಲ್ಲಿ ಪುಟಕ್ಕಿಟ್ಟ ಚಿನ್ನದಂತೆ

ಹೊಳೆದು ಬರುವನಂತೆ, ಸತ್ಯಕೆಂದೂ ಜಯವಿರುವಂತೆ

ದೇಶದ ಚುಕ್ಕಾಣಿ ಇವನ ಕೈಲಿದ್ದರೆ ನಮಗಿಲ್ಲ ಚಿಂತೆ,

ನಮ್ಮ ಭಾರತಾಂಬೆಯಾಗುವಳು ಇನ್ನಷ್ಟು ಶ್ರೀಮಂತೆ

Saturday, December 09, 2023

ಇಂದು ಭಾನುವಾರ

 

ಮನ ಹೇಳುವುದು, ಕೆಲಸ ಮಾಡು ಬಾರ

ದೇಹ ಹೇಳುವುದು, ನೀ ಸುಮ್ಮನೇ ಬಿದ್ದಿರ

ಬುದ್ಧಿ ಹೇಳುವುದು, ವ್ಯಾಯಾಮದಿಂದಾಗುವೆ ನೀ ಸಪೂರ

ಹೇಳುವುದು ಮನ ಮತ್ತು ದೇಹದ ಸಮ್ಮಿಶ್ರ ಸರಕಾರ

ಎಲವೋ ಬುದ್ಧಿ, ನೀ ಬಾಯಿ ಮುಚ್ಚಿ ಕೂರ

ಯಾರು ಮಾಡಬೇಕು?


ಛೇ! ಎಷ್ಟು ಕಸ ತುಂಬಿದೆ ಇಲ್ಲಿ-ಅಲ್ಲಿ. ಯಾಕೆ ಯಾರೂ ಗಮನಿಸುತ್ತಿಲ್ಲ ! ಯಾಕೆ ಯಾರೂ ಸಂಬಂಧ ಪಟ್ಟವರಿಗೆ ತಿಳಿಸಿ, ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳುವಂತೆ ಮಾಡುತ್ತಿಲ್ಲ !

ರಸ್ತೆ ಹದಗೆಟ್ಟು ಹೈರಾಣವಾಗಿದೆ, ಯಾರಿಗೂ ಕಾಣಿಸುತ್ತಿಲ್ಲವೇ! ಯಾಕೆ ಯಾರೂ ಸಂಬಂಧ ಪಟ್ಟವರಿಗೆ ತಿಳಿಸಿ, ಇದನ್ನು  ಸರಿಯಾಗುವಂತೆ ಮಾಡುತ್ತಿಲ್ಲ ! 

ನೀರು ಸರಿಯಾಗಿ ಬರುತ್ತಿಲ್ಲ,  ಅದು ಸರಿಯಾಗುವಂತೆ ಮಾಡಲು  ಯಾರೂ ಮುಂದೆ ಬರುತ್ತಿಲ್ಲ. ಯಾರಾದರೂ ಅದನ್ನು ಸರಿ ಮಾಡಿಸಬಾರದೇ !

ಇನ್ನೂ ಎಷ್ಟೊಂದು ತಾಪತ್ರಯಗಳು ! ಯಾರಿಗೂ ಕಾಣಿಸುತ್ತಿಲ್ಲವೇ, ಯಾರಾದರೂ ಇದು ಮಾಡಿದ್ದಿದ್ದರೆ ಎಷ್ಟು ಒಳ್ಳೆಯದಿತ್ತು! ಅದು ಮಾಡಿದ್ದಿದ್ದರೆ ಎಷ್ಟು ಅನುಕೂಲವಿತ್ತು!

                                   ***

ವಿಪರ್ಯಾಸ: 'ಯಾರೂ' ಎಂದರೆ ಬೇರೆಯವರು, ನಾನಲ್ಲ. ಆದರೆ ಆ ಬೇರೆಯವರ ದೃಷ್ಟಿಯಲ್ಲಿ ನಾನು ಕೂಡಾ 'ಯಾರೂ' ಎಂಬುದು ನನಗೆ ಅರಿವಿಲ್ಲ.  ಅರಿವಿದ್ದಿದ್ದರೆ ನಾನು 'ಯಾರೂ', 'ಯಾರಿಗೂ', 'ಯಾರಾದರೂ' ಎನ್ನುತ್ತಿರಲಿಲ್ಲ.  ಸಮಸ್ಯೆಗಳು ಬಿದ್ದಿರುವಲ್ಲೇ ಕೊಳೆಯುತ್ತಿರಲಿಲ್ಲ.

ಯಾರು ಹಾಕಬಾರದು ?


ಒಂದು ದಿನ ಲಾಲ್ ಬಾಗ್ ಪಶ್ಚಿಮ ದ್ವಾರದ ಬಳಿಯಲ್ಲಿ, ಒಂದು ಬೋರ್ಡ್ ನೋಡಿದೆ. ಅದರಲ್ಲಿ ಬರೆದಿತ್ತು:

ಇಲ್ಲಿ ಯಾರು ಕಸವನ್ನು ಹಾಕಬಾರದು. 

ಮೇಲಿನ ಸಾಲಿಗೆ ಉತ್ತರವಾಗಿ, ಯಾರೋ ಪ್ರಾಮಾಣಿಕವಾಗಿ ಬರೆದಿದ್ದರು:

ಕೇಳಿರುವುದಕ್ಕೆ ಧನ್ಯವಾದ. 

ನಾವೂ ಹಾಕಬಾರದು,  ನೀವೂ ಹಾಕಬಾರದು.


ಮರುದಿನ ಅಲ್ಲಿ ಹೊಸ ಬೋರ್ಡ್ ಬಂದಿತ್ತು, ಅದರಲ್ಲಿ ಬರೆದಿತ್ತು:

ಇಲ್ಲಿ ಯಾರೂ ಕಸವನ್ನು ಹಾಕಬಾರದು.

ನಿನಗಲ್ಲ - ನಿನ್ನದಲ್ಲ


ಕೆಲಸ ಮಾಡುವಲ್ಲಿ ಮೇಲಿನವರು

ಬಾಯಿಗೆ ಬಂದಂತೆ ಕಿರುಚಾಡಿದರು,

ನೀನ್ಯಾಕೆ ಬೆದರಬೇಕು, 

ತಪ್ಪು ಮಾಡಿಲ್ಲದಿದ್ದರೂ


ಹಾದಿಯಲ್ಲಿ ಎದುರಾದವರು

ಏನೇನೋ ಹೇಳಿದರು,

ನೀನ್ಯಾಕೆ ಹೆದರಬೇಕು, 

ನಿನ್ನ ತಪ್ಪಿಲ್ಲದಿದ್ದರೂ


ಮನೆಮುಂದೆ ಹೋಗುವವರು

ಮನ ಬಂದಂತೆ ಕೂಗಾಡಿದರು,

ನೀನ್ಯಾಕೆ ಮುದುಡಬೇಕು, 

ಅದು ಬೇರೆಯವರಿಗಾದರೂ 


ಸ್ನೇಹಿತರು - ಸಂಬಂಧಿಕರು 

ಇಲ್ಲದ ಕಥೆ ಕಟ್ಟಿದರು,

ನೀನ್ಯಾಕೆ ಸೊರಗಬೇಕು,  

ನಿನಗೆ ಸಂಬಂಧಿಸಿಲ್ಲದಿದ್ದರೂ


ಕಾರ್ಯಕ್ರಮವೊಂದರಲ್ಲಿ ಜನರು

ಕೆಟ್ಟ-ಸೊಟ್ಟ ಮಾತಾಡಿದರು,

ನೀನ್ಯಾಕೆ ಕೊರಗಬೇಕು,

ಅದು ನಿನಗಲ್ಲದಿದ್ದರೂ


ದಾರಿಯಲ್ಲಿ  ಹೋಗುವವರು

ದುಷ್ಟತನ  ತೋರಿದರು,

ನೀನ್ಯಾಕೆ ದಣಿಯಬೇಕು, 

ನಿನಗೆ ಶಕ್ತಿಯಿದ್ದರೂ


ಯಾರೋ ತಪ್ಪು ಮಾಡಿ

ನಿನ್ನ ತಲೆಗೆ ಕಟ್ಟಿದರು,

ನೀನ್ಯಾಕೆ ಒಪ್ಪಬೇಕು, 

ಅದು ನಿನ್ನದಲ್ಲದಿದ್ದರೂ

Friday, December 08, 2023

ಸ್ವಚ್ಛ ಭಾಷೆ ಕಲಿಕೆ

 
ಶ್ರೀವತ್ಸ ಜೋಶಿಯವರ ಸ್ವಚ್ಛ ಭಾಷೆ ಕಲಿಕೆ
ಇದು ಕನ್ನಡಕ್ಕೊಂದು ಸ್ವಚ್ಛ ಕೈಪಿಡಿ
ಮಾಡಿಲ್ಲವಾದರೆ ಒಡನೆಯೇ ಖರೀದಿ ಮಾಡಿ
ಕನ್ನಡಿಗರಿಗಿದನು ಉಡುಗೊರೆಯಾಗಿ ನೀಡಿ

ಸದಾ ಸ್ವಚ್ಛ ಕನ್ನಡದಲ್ಲಿಯೇ ಮಾತನಾಡಿ
ಅಗತ್ಯವಿದ್ದಾಗಲೆಲ್ಲಾ ಇದರ ಬಳಕೆ ಮಾಡಿ
ಇದರೊಳಗೆ ನೀವೂ ಮುಳುಗಿ, ಅಡ್ಡಾಡಿ 
ಮರುಳು ಮಾಡುವುದು ಇದರ ಮೋಡಿ

ಒಮ್ಮೊಮ್ಮೆ ಸೂಚನೆಗಳೊಂದಿಗಿನ ಚೆನ್ನುಡಿ
ಕೆಲವೊಮ್ಮೆ ನಗಿಸುವುದು ನಮ್ಮ ಜೊತೆಗೂಡಿ
ತಪ್ಪು ಪದಗಳಿಗೆ ಹಾಕುವುದು ಸರಿಯಾದ ಬೇಡಿ
ಖರೀದಿಸಲಾಗದಿದ್ದರೂ ಓದಿ, ಯಾರನಾದರೂ ಕಾಡಿಬೇಡಿ

ನನಗಂತೂ ಇದು ಉತ್ತಮ ಒಡನಾಡಿ
ಬೆಳೆಸುವುದು ನನ್ನ, ತಪ್ಪು ಪದಗಳ ತಿದ್ದಿ-ತೀಡಿ
ಸಂಶಯ ಪರಿಹರಿಸಿಕೊಳುವೆ ಅವರೊಡನೆ ಮಾತಾಡಿ
ಇದು ನಿಮಗೂ ಉಪಯುಕ್ತ, ಒಮ್ಮೆ ಬಳಸಿ ನೋಡಿ 

Thursday, December 07, 2023

ದುರ್ಗಾಪರಮೇಶ್ವರಿ

ಇಂದ್ಯಾಕೋ ಅಮ್ಮನ ಮುಖ ಊದಿದೆ
ದಿನವೂ ನಗುವ ಮೋರೆಯಲಿಂದು
ಅಸಮಾಧಾನ ಮೂಡಿದೆ
ಆದರೂ ತುಟಿಯಲ್ಲಿ ತೆಳು ಮಂದಹಾಸವಿದೆ

ಕಾರುಣ್ಯ ಮೂರುತಿಯಿಂದು 
ಇಂಗಳ ಕಾರುತಿದೆ, ಆದರೂ
ಮನುಜನ ಮೌಢ್ಯಕ್ಕವಳ 
ಕರುಳು ಮರುಗುತಿದೆ

ಆಕೆ ತಾಯಿ, ಮಮತಾಮಯಿ 
ಕ್ಷಮೆ ನೀಡುವ ದಯಾಮಯಿ
ಕೈ ಹಿಡಿದು ನಡೆಸುವ ಕರುಣಾಮಯಿ
ಪ್ರೀತಿಯಿಂದ ಸಲಹುವ ಮಹಾಮಾಯಿ


ತಲೆಪೂಸಿ ಹರಸುವ ತಾಯಿ ಗೌರಿ
ಅಭಯ ನೀಡುವ ಅಭಯಂಕರಿ
ಕಟಿಮೇಲೆ ಕೈಯಿಟ್ಟು ಕಾಯುವ
ನಮ್ಮಮ್ಮ, ಕಟೀಲು ದುರ್ಗಾಪರಮೇಶ್ವರಿ 

Wednesday, December 06, 2023

ನಮೋ ಕಪ್ಪು ಬೆಕ್ಕುಗಳೇ

ಎಂಟೆದೆಯ ಬಂಟರಿವರು

ಶುಂಠರನ್ನು ಬಿಡರು

ಗಂಟು ಮೋರೆ ಹಾಕಿದರೆ

ಬಾಯಿಯೇ ಬಿಡರು 


ಪಕ್ಕದಲ್ಲೇ ನಿಲ್ಲುವರು

ಚಣವೂ ಮೈಮರೆಯರು

ಸುತ್ತಮುತ್ತ ಗಮನಿಸುತ್ತಾ 

ಮೈಯೇ ಕಣ್ಣಾಗಿಹರು


ಕಪ್ಪು ದಿರಿಸು ಧರಿಸಿಹರು

ಸುತ್ತುವರಿದು ಕಾಯುವರು

ನಾಯಕನು ನಲುಗದಂತೆ

ದುಷ್ಟರನ್ನು ಸುಡುವರು 


ಧೀಮಂತನ ರಕ್ಷಣೆಗೆ

ಪಣ ತೊಟ್ಟು ನಡೆವರು

ಅಪಾಯವನು ತಡೆದಟ್ಟಲು

ಜೀವವನೇ ಅರ್ಪಿಸುವರು

ಓಹ್!


ಓಹ್! ಇದೆಂಥ ಹಸಿವೆ

ಹೊಟ್ಟೆ ತುಂಬಾ ಉಣ್ಣುವೆ

ತಿಂಡಿಯನ್ನೂ ತಿನ್ನುವೆ

ಆದರೂ ಇನ್ನಷ್ಟು ಬೇಕೆನ್ನುವೆ


ಓಹ್! ಇದೆಂಥ ನಿದ್ದೆ

ಮಂಚದಿಂದ ಕೆಳಗೆ ಬಿದ್ದೆ

ಎದ್ದೆ, ಪಕ್ಕದವರ ಹೊದಿಕೆ ಕದ್ದೆ

ಮತ್ತೆ ಮಂಚದ ಮೇಲೆ ಬಿದ್ದೆ


ಓಹ್! ಇದೆಂಥ ಜಡ

ಎನಿಸುವುದು ಯಾವುದೂ ಬೇಡ

ಸುಮ್ಮನೇ ನೋಡುತಿರುವೆ ಮಾಡ 

ದಿಟ್ಟಿಸುತಿರುವುದು ನನ್ನನೇ ಅಲ್ಲಿರುವ ಜೇಡ 


ಓಹ್ ! ಇದೆಂಥ ಸೆಖೆ

ಬೈತಲೆಯಿಂದಲೇ ಒಡೆದೆರಡು ಶಾಖೆ

ಹೆಣೆದು ಎತ್ತಿ ಕಟ್ಟಿದರೂ ಶಿಖೆ

ಎಣಿಸುವಂತಾಗುತಿದೆ ನಖದ ಸಂಖ್ಯೆ


ಓಹ್! ಇದೆಂಥ ಚಳಿ

ಬೀಸುತಿದೆ ಕುಳಿರ್ಗಾಳಿ

ಸುತ್ತಿ ಹೊದ್ದರೂ ಬೆಚ್ಚಗಿನ ಕಂಬಳಿ

ಸಹಿಸಲಾಗುತಿಲ್ಲ ಅದರ ದಾಳಿ


ಓಹ್! ಇದೆಂಥ ಮಳೆ

ಕೊಚ್ಚಿ ಹೋಗಿಹುದೆಲ್ಲ ಬೆಳೆ

ಬುಡ ಮೇಲಾಗಿಹುದು ತೆಂಗು - ಬಾಳೆ

ಉಳಿದಿರುವುದು ನಾಲ್ಕೇನಾಲ್ಕು ಅಡಿಕೆ ಹಾಳೆ 


ಓಹ್! ಇದೆಂಥ ಶಬ್ದ

ಎಲ್ಲರೂ ಕಟ್ಟಡಗಳ ಕಟ್ಟಿಯೇ ಸಿದ್ಧ

ಪರರ ತೊಂದರೆಗಿಲ್ಲ ಯಾರೂ ಬದ್ಧ

ಬಾಯ್ಮುಚ್ಚಿ ಅನುಭವಿಸಬೇಕು, ನಮ್ಮ ಪ್ರಾರಬ್ಧ

Monday, December 04, 2023

ಊದುಬತ್ತಿಯ ಹೊಗೆ

ಅಲೆಯಲ್ಲಿ ಸಾಗರದಂತೆ

ನೆಲೆಯಲ್ಲಿ ವೃಕ್ಷದಂತೆ

ಕಲೆಯಲ್ಲಿ ಕಲಾವಿದನಂತೆ 

ಬಲೆ ನೇಯ್ದ ಜೇಡನಂತೆ

ಸುಳಿಸುಳಿ ಸುರುಳಿಯಂತೆ

ಅರಳಿದ ಹೂವಿನಂತೆ

ಕೆರಳಿದ ಸರ್ಪದಂತೆ 


ಸುಗಂಧದಲ್ಲಿ ಸುರಸಂಪಿಗೆಯಂತೆ

ಕಿಡಿಯು ಕೆಂಪು ಹವಳದಂತೆ 

ಹರಡಿಟ್ಟ ಹಲಗೆಯಂತೆ

ಬಿಡಿಬಿಡಿಯಾಗಿ ಮುತ್ತಿನಂತೆ

ನಡೆದಾಡುವ ನವಿಲಿನಂತೆ 

ಅಡಿಯಲಿಟ್ಟ ಹಿಡಿಕೆಯಂತೆ 

ಗುಡಿಯೊಳಗಿನ ದೇವರಂತೆ

Sunday, December 03, 2023

ಸ್ವಂತಿಕೆಯ ಮೌಲ್ಯ


ಕೊಟ್ಟರೂ ಕೊಡಬಹುದು

ಬಿಟ್ಟರೂ ಬಿಡಬಹುದು

ಕೊಟ್ಟರದನು ನಾ ಕಳೆದು ಉಣುವೆ

ಬಿಟ್ಟರೆ ನಾನೇ, ಬೆಳೆದು ತಿನುವೆ


ಕೈ ಹಿಡಿದರೂ ಹಿಡಿಬಹುದು

ಹಿಡಿಯದೇ ಬಿಡಬಹುದು

ಹಿಡಿದರೆ ನಾ ಇಷ್ಟಪಟ್ಟು ನಡೆವೆ

ಹಿಡಿಯದಿದ್ದರೆ ನಾ ಕಷ್ಟಪಟ್ಟು ಬೆಳೆವೆ


ದಾರಿ ತೋರಿದರೂ ತೋರಬಹುದು

ತೋರದೆಯೂ ಇರಬಹುದು

ತೋರಿದರೆ ನಾ ಅಲ್ಲೇ ಇರುವೆ

ತೋರದಿದ್ದರೆ ಹುಡುಕಿ ನಾ ಎದ್ದು ಬರುವೆ

ಜಿಜ್ಞಾಸೆ


ನಾ ಹೇಳಿದೆ,

ಬರೆಯುವುದು ನನಗಾಗಿ, 

ಬರೆದು ಮರೆಯಬೇಕು

ಆಕೆ ಅದಕೊಪ್ಪದೇ ಹೇಳಿದಳು,

ಬರೆಯಬೇಕು, 

ಬರೆದು ಎಲ್ಲರಿಗೂ ತೋರಿಸಬೇಕು


ನಾನೆಂದೆ,

ಬರೆಯುವುದು ಮಿಡಿತ, ನನ್ನೊಳಗಿನ ತುಡಿತ, 

ನನ್ನ ಹೃದಯದ ಬಡಿತ,  ಇದು ನನ್ನ ಇಂಗಿತ

ಆಕೆ ಅದಕೊಪ್ಪದೇ ಆಂದಳು,

ಬರೆದು ಎಲ್ಲರಿಗೂ ತೋರಿಸದಿದ್ದರೆ 

ನಮ್ಮ ತಪ್ಪುಗಳು ನಮಗೆ ತಿಳಿಯುತ್ತಾ?


ನಾನೆಂದೆ,

ಬಿಡು, ನಾ ಬಯಕೆಗಾಗಿ ಬರೆಯುವೇ, 

ನಿಂತಲ್ಲೇ ತಿರುಗುವೆ

ಆಕೆಯೆಂದಳು,

ಹಂಚಿಕೊಂಡರೆ ಆ ಹರಿವನೆಲ್ಲ,

ನೀನು ಇನ್ನಷ್ಟು ಬೆಳೆಯುವೇ 


ಆಕೆಯ ಅಭಿಪ್ರಾಯ ಸರಿ

ತಿದ್ದಿಕೊಳ್ಳುವುದರಲ್ಲಿ ತಪ್ಪಿಲ್ಲ, ಒಪ್ಪಿದೆ

ಆದರೂ ಮನಸು ಹೇಳುತಿದೆ

ನನ್ನ ಅಭಿಲಾಷೆಯೂ ಸರಿ

ಅದೇಕೋ ಏನೋ, 

ನನಗದರಲ್ಲೇ ಒಪ್ಪವಿದೆ

ಪ್ರವರ


ಬೆಕ್ಕಿನೂಟಕೆ ಆಗುವುದು

ತಿಂಗಳಿಗೆ ಆರು ಸಾವಿರ

ಅದು ಇಷ್ಟಪಟ್ಟುದೆಲ್ಲ ತಂದರೆ 

ಕೈ ತಪ್ಪುವುದು ಹನ್ನೆರಡು ಸಾವಿರ


ನನ್ನೂಟಕೆ ಆಗುವುದು

ತಿಂಗಳಿಗೆ ಮೂರು ಸಾವಿರ

ಒಂದೇ ಹೊತ್ತು ಉಂಡೆನೆಂದರೆ 

ಆಗುವುದು ಒಂದೇ ಸಾವಿರ


ವಿಚಿತ್ರವಾದರೂ ನಿಜ, 

ನಿಮಗ್ಯಾಕೆ ಇದರ ವಿವರ

ಕೇಳುತ್ತಿರುವಿರಲ್ಲಾ ನನ್ನ ಪ್ರವರ

ಬೇಕೇನು ನಿಮಗೂ ಬೆಕ್ಕಿನ ಆಹಾರ

ಬೆಲ್ಲ


ಕಬ್ಬನು ಜಜ್ಜಿ ರಸವನು ತೆಗೆದು 

ಆಲೆಮನೆಯಲ್ಲಿ ಉಸಿರನು ಬಿಗಿದು

ಕುದಿಸುತ ಕೊಂಚವೇ ಲವಣವ ಸುರಿದು

ಮಾಡುವರು ಎಲ್ಲಾ, ಪಡೆಯಲು ಸಿಹಿ ಬೆಲ್ಲ


ಬಾಯಾರಿ ಬಂದರೆ ನೀರೂ ಬೆಲ್ಲ

ಶರಬತ್ತು ಮಾಡಲು ಜೋನಿಬೆಲ್ಲ

ಇದನೆಂದೂ ಹೀಗಳೆವುದು ಸಲ್ಲ

ಮೊಸರಲಿ ತಿನ್ನದಿರೆ ಆರೋಗ್ಯವಿಲ್ಲ


ಬೆಲ್ಲದ ಸವಿಯ ಬಲ್ಲವ ಬಲ್ಲ

ತಪ್ಪದೇ ತಿಂದು ಆಸ್ವಾದಿಸಿರೆಲ್ಲ 

ಅಚ್ಚಿನ ಬೆಲ್ಲ ಕಚ್ಚದು ಗಲ್ಲ

ಕೊಚ್ಚೆಲಿ ಕುಳಿತರೆ ಅಚ್ಯುತನಿಲ್ಲ

Saturday, December 02, 2023

ಸವಿತಾ

ನೀನು ಸವಿತಾ, ಆ ಸೂರ್ಯನೂ ಸವಿತಾ

ಕಿಲಕಿಲ ನಗುತಾ, ನೀನಿರುವೆ ನಲಿಯುತಾ

ದಿನನಿತ್ಯ ಸವೀತಾ, ನೋವುಗಳ ಮರೀತಾ

ಮನೆಮಂದಿಗೂ, ಸ್ನೇಹ ವೃಂದಕೂ 

ಎಂದೆಂದಿಗೂ ನೀ ಸವಿ ತಾ


ಹುಡುಕುತಿರುವೆಯೇಕೆ ನೀ ಅಲ್ಲಿಇಲ್ಲಿ ನೋಡುತಾ

ಬೆನ್ನಿಗಿಹಳು ಬೆಚ್ಚಗೇ ನಿನ್ನ ತಂಗಿ ಶ್ಲೋಹಿತಾ

ಕಾಳಜಿಯನು ತೋರುತಾ ಪ್ರೀತಿ ಮಾತನಾಡುತಾ

ಮಂದಹಾಸ ಬೀರುತಾ ಇರಬೇಕು ನೀವು ಅನವರತ

ಹೀಗೊಬ್ಬಳು ವಿದ್ಯಾ

 

ಹೀಗೊಬ್ಬಳು ವಿದ್ಯಾ ಬರೆಯುವಳು ಪದ್ಯ

ಕೆಲವೊಮ್ಮೆ ಗದ್ಯ ನಡುನಡುವೆ ವೈವಿಧ್ಯ

ಪರಿಣತಳು ಈಕೆ ಮಾಡುವುದರಲ್ಲಿ ಖಾದ್ಯ

ಸದಾ ನೀಡುವಳು ತಂಗಿಗೆ ಮೃಷ್ಟಾನ್ನ ನೈವೇದ್ಯ


ತಿನ್ನುವಳು ಉರಿಖಾರ ಆಮೇಲೆ ತಲೆಭಾರ

ನಿದ್ರೆಯಂತೂ ಸಂಹಾರ ನೆಮ್ಮದಿಯೂ ಬಲುದೂರ

ಆದರೂ ಮುಂಜಾನೆಯೆದ್ದು ನಡೆಸುವಳು ವ್ಯವಹಾರ

ಕಳಚದಂತೆ ಕೊಂಡಿಯದು ಸಲಹುವಳು ಪರಿವಾರ 


ಮಾತಿನಲಿ ಬಲು ಜಾಣೆ ವಾದದಲಿ ಪ್ರವೀಣೆ

ಇಲ್ಲಸಲ್ಲದುದಕ್ಕೆಂದೂ ಹಾಕಳೀಕೆ ಮಣೆ 

ಸ್ವಚ್ಛಗೊಳಿಸಲೆಂದು ತಿರುಗುವಳು ಕೋಣೆಕೋಣೆ

ಸೋಲನಪ್ಪಳು ಇವಳು ಎಂದೂ ದೇವರಾಣೆ


ಸಖನೊಡನೆ ಸರಿದೂಗಿ ನಡೆಯುವಳು ಮುಂದೆ

ಕುಹಕ ಮಾಡಳೀಕೆ ಯಾರಿಗೂ ಬೆನ್ನ ಹಿಂದೆ

ನೋವ ನೀಡಳಾರಿಗೂ ಹಿಂದೆ - ಮುಂದೆ

ಆಪ್ತಳಾಗಿ ಹೇಳುವಳು ಎಲ್ಲರೂ ಒಂದೇ 

ಉಂಟು

ಕಷ್ಟವಾದರೆ ಕಾರುಂಟು

ಇಷ್ಟವಾದರೆ ಬೇರುಂಟು

ನಷ್ಟವಾದರೆ ನಾರುಂಟು

ನೀ ಮುನಿದರೆ ಬೇರೆ ಯಾರುಂಟು


ಕುಡಿಯಲು ನೀರುಂಟು

ಉಣ್ಣಲು ಸಾರುಂಟು

ಬೇಡವಾದರೆ ವಾರಂಟು 

ನೀ ತೋರಬೇಡ ಪಿಸುಂಟು


ಇರುವಷ್ಟು ದಿನ ನೀ ಆಗಿರು ಪ್ಲೆಸೆಂಟು

ಎಲ್ಲರಿಗೂ ಬೇಕಾಗುವ ಸಿಹಿಯಾದ ಕರದಂಟು

ಇಲ್ಲವಾದರೆ ನಿನಗೆ ಜಾಗ ಎಲ್ಲುಂಟು

ನೀನಾಗಬಾರದು ಇಲ್ಲಿ ಆರೋಗೆಂಟು 


ತಲೆಯ ಮೇಲೆ ಒಂದು ಗಂಟು

ಕೈಯಲ್ಲಿ ಒಂದು ದಂಟು

ಬಿಟ್ಟರಷ್ಟೇ ಮೋಹದ ಅಂಟು

ಮುಗಿವುದೀ ಭೂಮಿಯ ನಂಟು

ಕವಿಗೋಷ್ಠಿ

ಅಯ್ಯಯ್ಯೋ ಕವಿಗೋಷ್ಠಿ

ನನಗಿರುವುದೊಂದೇ ಹರಿದ ವೇಸ್ಟಿ 

ನೀ ಮಾಡಬ್ಯಾಡ ಚ್ಯಾಷ್ಟಿ

ಅದಕೆಲ್ಲ ನನಗಿಲ್ಲ ಸಾಕಷ್ಟು ಪುಷ್ಟಿ


ಹೇಳುತಿರುವೆ ನೀ

ಕವಿಗೇ ಸಾಧ್ಯ ಇಷ್ಟು ಬೇಗ ಸೃಷ್ಟಿ

ಇರಬಹುದೇನೋ, ಆದರೂ 

ನಾ ಬೀರುವೆನು ವಕ್ರದೃಷ್ಟಿ 


ಯಾಕೆಂದರೆ, ನನ್ನದು ಒಮ್ಮೊಮ್ಮೆ ಅತಿವೃಷ್ಟಿ 

ಕೆಲಮ್ಮೊಮ್ಮೆ ಅನಾವೃಷ್ಟಿ

ಮಗದೊಮ್ಮೆ ಒಣಕಾಷ್ಟ

ಹಾಗಾಗಿ, ಕವಿಗೋಷ್ಠಿ ಕಷ್ಟ, ಕಷ್ಟ


ಇರುವುದೆಲ್ಲವ ಬಿಟ್ಟು


ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೇಕೆ ಒಲವು

ಸಂತೋಷದ ಕ್ಷಣಗಳು ದಕ್ಕುವುದೇ ಕೆಲವು

ಇರುವಷ್ಟು ದಿನ ಇರುವುದಷ್ಟೇ ಪ್ರೀತಿಯ ನಿಲುವು

ಗಳಿಸಿರುವುದರ ಉಳಿಸಿಕೊಳ್ಳುವುದಲ್ಲವೇ ಗೆಲುವು

ನೀನಿರುವುದೇ ಹೀಗೆ

ಅಕ್ಕ ನೀನು ಚೊಕ್ಕದಿಂದ ಕಾಡುಗಳ ಸುತ್ತುವೆ
ಅಮ್ಮನಿಗೆ ದಿನಾ ರಾತ್ರಿ ಕೆಟ್ಟಕನಸ ನೀಡುವೆ 
ಒಡಹುಟ್ಟಿದವರೊಡನೆ ಜಗಳವನ್ನು ಮಾಡುವೆ
ಬೆಕ್ಕುಗಳ ಪಕ್ಕ ಕೂತು ಆಟವನ್ನು ಆಡುವೆ

ಸಿಕ್ಕಸಿಕ್ಕ ಕಡೆಗಳಲ್ಲಿ ಊಟವನ್ನು ಮಾಡುವೆ
ಹೊಟ್ಟೆಕೆಟ್ಟರಾಗ ಮಾತ್ರ ಮನೆಯಲ್ಲೇ ಮಲಗುವೆ
ಗೆಳತಿ-ಗೆಳೆಯರೊಡನೆ ಸೇರಿ ನಾಟ್ಯವನ್ನು ಮಾಡುವೆ
ಹಗಲು ರಾತ್ರಿ ಬಿಡದೆ ನೀನು ಎಲ್ಲರನ್ನೂ ಕಾಡುವೆ

ಏನು ಬೇಕು ಏನು ಬೇಡ ತಿಳಿಯದಂತೆ ನೋಡುವೆ
ಗಲಿಬಿಲಿ ಹೆಚ್ಚಾದರಾಗ ದೂರದೂರ ಓಡುವೆ 
ಒಮ್ಮೊಮ್ಮೆ ಒರಟಾಗಿ ಜೋರಾಗಿ ಕಿರುಚುವೆ
ಮಗದೊಮ್ಮೆ ಸುಮ್ಮನಿದ್ದು ಜ್ಞಾನಿಯಂತೆ ಕೂರುವೆ 

ಬೇಡದಿದ್ದರೂ ಮೂಗು ತೂರಿಸಿ ಸಲಹೆಯನ್ನು ನೀಡುವೆ
ಪಾಪಪುಣ್ಯ ಹೆಚ್ಚಾದರೆ ಸಹಾಯವನ್ನು ಮಾಡುವೆ
ಅವಮಾನವಾದಲ್ಲಿ ಬಿಗುಮಾನ ತೋರುವೆ
ನೆಮ್ಮದಿ ಕೆಡುವೆ ಬೇಡ ಗೊಡವೆ ಎಂದು ನೀ ಸರಿವೆ

Friday, December 01, 2023

ಕಾಣುವುದು ಕೈವಲ್ಯ

ಕತ್ತಲ ಕೋಣೆಯೊಳಗೆ ಬದುಕುವುದರಲ್ಲೇನು ಸುಖ

ಸುತ್ತೆಲ್ಲ ಸುಂದರ ಬೆಳಕು ತುಂಬಿರುವಾಗ

ಅದಿಲ್ಲ ಇದಿಲ್ಲವೆಂದು ಗೊಣಗಿದರೇನು ಗುಣ

ಕಣ್ಣೆದುರೇ ಸಕಲವೂ ಬಿದ್ದಿರುವಾಗ


ಅವರಿವರ ಅದೃಷ್ಟ ಕಂಡು ಕರುಬಬೇಡ 

ಮುಸುಕಿನೊಳಗೇ ನಿನಗೆ ನೀ ಮುಳ್ಳಾಗಬೇಡ

ಹೊಸಕಿ ಆತ್ಮಸಾಕ್ಷಿಯ ನೀ ಸುಳ್ಳಾಗಬೇಡ

ಮಿಸುಕಿದ ಪಿಸುಮಾತಿಗೆಂದೂ ಕಲ್ಲಾಗಬೇಡ 


ಮನದ ಕದವ ತೆರೆದು ಹೊರಗೆ ಬಂದು ನೋಡು

ಮೈಮುರಿದು ಮನಬಿರಿದು ಬೆಂದು ನೋಡು 

ಸುದೀರ್ಘ ಸುಲಲಿತ ಸುಖದಲ್ಲಿ ಮಿಂದು ನೋಡು

ಕಾಣುವುದು ಕೈವಲ್ಯ ನೀನಲ್ಲಿ ನಿಂದು ನೋಡು