Thursday, November 30, 2023

ಋಣಮುಕ್ತ

ಋಣಮುಕ್ತನಾದ ಕ್ಷಣದಲ್ಲಿ 

ಹರುಷ ತುಂಬಿದ ಮನದಲ್ಲಿ

ವರುಷ ಉರುಳಿದ ದಿನದಲ್ಲಿ 

ಅರುವತ್ಮೂರರ ಹಾದಿಯಲ್ಲಿ


ಸಹಚಾರಿಣಿಯ ಒಲವಲ್ಲಿ

ಸಂತೋಷದ ಹೊನಲಲ್ಲಿ

ಪ್ರೀತಿಯ ಬಲದಲ್ಲಿ 

ಎದೆಗುಂದದೆ ಛಲದಲ್ಲಿ


ಧೈರ್ಯದ ನಡೆಯಲ್ಲಿ

ಸಾಧನೆಯ ಹಾದಿಯಲ್ಲಿ

ಯಶಸ್ಸಿನ ಹೊಸ್ತಿಲಲ್ಲಿ

ನಿಂತಿರುವ ನಿನಗೆ ಸಾಟಿಯೆಲ್ಲಿ

Monday, November 27, 2023

ಆತ್ಮವಂಚನೆ


ಅಂಖನಿಯ ಬರಹ ನೀ ಅಳಿಸಬಹುದು

ಲೇಖನಿಯ ಬರಹವನು ಅಳಿಸಬಹುದೇ

ಪರರ ಕ್ಷಮೆಯಾದರೂ ಬೇಡಿ ಪಡೆಯಬಹುದು

ನಿನ್ನ ಕ್ಷಮೆಯ ನೀ ಪಡೆಯಬಹುದೇ


ಸಂಕವನೂ ಸುಂಕವನೂ ಕಟ್ಟಬಹುದು

ಮಂಕಾಗಿರುವ ನಂಬಿಕೆಯ ನೀ ಗಳಿಸಬಹುದೇ

ಅಂಕೆಯಿಲ್ಲದೆ ಬಿಂಕವನು ತೋರಬಹುದು 

ಕಳೆದ ಗೌರವವ ನೀ ಮರಳಿ ಪಡೆಯಬಹುದೇ


ಅಕ್ಕಿ ಆರಿಸಬಹುದು ಹೆಕ್ಕಿ ಜಾಳಿಸಬಹುದು

ಸೊಕ್ಕಿನಲಿ ಸಿಕ್ಕ ನಿನ್ನ ನೀ ಉಳಿಸಬಹುದೇ

ಉಕ್ಕಿ ಹಸಿರಾಗಬಹುದು ಬಿಕ್ಕಿ ಹಗುರಾಗಬಹುದು

ಹಳಸಿರುವ ಸ್ನೇಹವನು ನೀ ಮತ್ತೆ ಬೆಳೆಸಬಹುದೇ

ವಿದ್ಯಕೋಮಲೇ


ರವಿಗೆ ರಂಗೋಲಿ ಬಿಡಿಸಿ

ನೆರಳ ಜೊತೆ ಪೈಪೋಟಿ ನಡೆಸಿ

ದಶದಿಕ್ಕುಗಳಿಗೆಸಳುಗಳ ಹಾಸಿ

ನೋವುಗಳ ಗುಡಿಸಿ ಹಾರೈಸಿ 

ನಲಿವಿನಿಂದ ನಗುತಿರುವ ವಿದ್ಯಕೋಮಲೇ 


ತಾರಸಿಯ ತರುಣಿಯಿವಳು

ವಾರಸಿಯ ಹೆಮ್ಮೆಯಿವಳು

ಕೈತೋಟಕೆಲ್ಲ ಅರಸಿಯಿವಳು

ಬಾರಿಸುವಳು ಜಯದ ಭೇರಿ

ಹರುಷದಿಂದ ಬಾರಿಬಾರಿ ವಿದ್ಯಶ್ಯಾಮಲೇ 


ಕುಂಡದಲಿ ಜನುಮ ತಳೆದು

ಗುಂಡಿಗೆಯ ಅದುಮಿ ಹಿಡಿದು

ಸಂಡಿಗೆಯ ಸಪ್ಪಳಕೆ ಮಂಡಿಯೂರಿ

ಮುಂದೆ ಸರಿದು ಕಂಡಿಯಿಂದ ಇಣುಕಿ ನೋಡಿ

ಚೆಂಡೆಯನು ಬಾರಿಸುವಳು ವಿದ್ಯಕಮಲೇ 

ಅಗುಳು ಅನ್ನ


ನೆನಪಿನ ಶಕ್ತಿ ಉಳಿಯುವುದಕ್ಕೆ
ಆಡಬೇಕು ಸುಡೊಕು
ಬೆಂಕಿಕಡ್ಡಿ ಖರೀದಿಸ ಬೇಕು 
ಬೀಡಿ ಸಿಗರೇಟು ಸುಡೋಕು

ಘಳಿಗೆ ಲೆಕ್ಕ ಹಾಕಬೇಕು 
ಮುಹೂರ್ತವನ್ನು ಇಡೋಕು 
ಸ್ವಪ್ರಯತ್ನವಂತು ಬೇಕೇಬೇಕು 
ಯಾವುದೇ ಚಟ ಬಿಡೋಕು

ನೈಪುಣ್ಯದ ಅಗತ್ಯವಿದೆ 
ಅಡುಗೆಯನ್ನು ಮಾಡೋಕು
ಹಣೆಯಲ್ಲಿ ಬರೆದಿರಬೇಕು 
ಅಗುಳು ಅನ್ನ ತಿನ್ನೋಕು

Sunday, November 26, 2023

ಒಳಗಿನ ಕೂಗು


ಒಳಗಿಂದ ಒದ್ದೊದ್ದು ಬರುವುದದು ಕೂಗು

ಮನಸು ಹೃದಯ ಒಟ್ಟಾಗಿ ಅದಕೆ ತಲೆ ಬಾಗು

ಕೂಗಿನ ಆಳ ಅರ್ಥವ ತಿಳಿದು ತಲೆದೂಗು

ನಿರ್ಧಾರ ತೆಗೆದುಕೊಳ್ಳುವಷ್ಟಾದರೂ ನೀ ಮಾಗು


ಹುದುಗದಂತೆ ನೋಡಿಕೋ ಕಾಲ ಕೆಳಗೆ ಜೌಗು

ಸರಿಯುವಂತೆ ನೋಡಿಕೋ ಒಳ್ಳೆತನದ ಸೋಗು

ಕರಗಬೇಕು ಪೂರ್ತಿಯಾಗಿ ದರ್ಪದ ಅರಗು

ಅರಗಬೇಕು ಸಂಪೂರ್ಣವಾಗಿ ನಿನ್ನ ತುಡುಗು 


ಅರಿತುಕೊಂಡರೆ ನೀ ಸನ್ಮಾರ್ಗದ ಸೊಬಗು

ಎಲ್ಲೆಡೆಯಲ್ಲೂ ಪಸರಿಸುವುದು ಅದರ ಮೆರುಗು

ಹಿಡಿದು ನಡೆದರೆ ನಿತ್ಯವೂ ನೀ ಸತ್ಯದ ಅಲಗು

ಸುಲಭವಾಗಿ ಕಳೆವುದದು ನಿನ್ನ ಸಕಲ ಪಿಡುಗು

Saturday, November 25, 2023

ಸಜೆ


ರಜೆಯಿಂದು ಸಜೆಯಾಗಿಹುದು

ಪಕ್ಕದಮನೆ ಪೆಯಿಂಟ್ ವಾಸನೆಯಿಂದ

ತಲೆಕೆಟ್ಟು ಕರಡಾಗಿಹುದು

ಹಿಂದಿನ ಮನೆ ಜಾಯಿಂಟ್ ಜಗಳದಿಂದ


ಮುದುಡಿಹುದು ಪೆಯಿಂಟರ್ ನ 

ವದನಾರವಿಂದ

ನೋಡಿದರೆ ಹೃದಯ ಕರಗುವುದಾತನ

ಅಸಹಾಯಕತೆಯಿಂದ

ಮುಕ್ತಿ ಮಾರ್ಗ

ಜಡಿಮಳೆಯಲೊಂದು ಹಿಡಿ

ಅಶನ ದೊರೆತರೆ ಸಾಕೆಂಬ ಕಿಡಿ

ಜನನ ಮರಣದೊಂದು ಗಡಿ

ಹಿಡಿದಿಡುವುದು ನಮ್ಮ ನಾಡಿ


ಬಾಳಬಟ್ಟೆಲಿ ಭಗವಂತನ ನೆನೆದುಬಿಡಿ 

ಸತ್ಸಂಗದಲ್ಲಿ ಸದಾ ಮುಳುಗಿಬಿಡಿ

ಕಷ್ಟ ಕಿರಿಕಿರಿಗಳ ಮರೆತುಬಿಡಿ

ವಿಠಲ ನಾಮವನೊಮ್ಮೆ ಜಪಿಸಿಬಿಡಿ 


ಇರುವಷ್ಟು ದಿನ ಅಲ್ಲಿಲ್ಲಿ ಕಾಡಿಬೇಡಿ

ಪಡೆಯಲು ಯಾಕಿಹುದು ಈ ಗಡಿಬಿಡಿ

ಭವಬಂಧನಗಳ ಕೊಂಡಿ ಕಳಚಿಬಿಡಿ 

ಮುಕ್ತಿ ಮಾರ್ಗದೆಡೆಗೆ ಹೊರಟುಬಿಡಿ

ಪ್ರಯತ್ನ


ಅಕ್ಕ ನಿನ್ನ ಸೊಕ್ಕಿನಿಂದ 

ಬೆಕ್ಕಿಗಿಂದು ಹಾಲಿಲ್ಲ

ಬೇರೆಡೆ ಹೋಗಿ ತಿನ್ನುವುದಕ್ಕೆ

ಪಾಪ ಅದಕೆ ಕಾಲಿಲ್ಲ.


ಕೇವಲ ಬಾಯಿ ಮಾತಿನಿಂದ

ಹಸಿವೆಯೆಂದೂ ನೀಗುವುದಿಲ್ಲ

ಅನುಸರಿಸುವ ಸಲಹೆಯಿಂದ

ಅರಮನೆ ಹಾಳಾಗುವುದಿಲ್ಲ.


ಅಳವಡಿಸುವ ಕ್ರಮಗಳಿಂದ

ಅಶಾಂತಿಯೆಂದೂ ಮೂಡುವುದಿಲ್ಲ

ಕಷ್ಟಪಟ್ಟು ಪ್ರಯತ್ನಿಸಿದರೆ ಮಾತ್ರ

ಬೆಕ್ಕಿನ ಜೀವ ಹೋಗುವುದಿಲ್ಲ.

ವಾಟ್ಸ್ಆ್ಯಪ್ ಗ್ರೂಪ್

ಜನಸಂಖ್ಯೆ ಹೆಚ್ಚಾದರೆ ವ್ಯವಸ್ಥೆ ಕೆಡುವಂತೆ

ಪದಸಂಖ್ಯೆ ಹೆಚ್ಚಾದರೆ ಪದ್ಯ ಕೆಡುತ್ತದೆ

ಅಂಕಿಸಂಖ್ಯೆ ಹೆಚ್ಚಾದರೆ ಲೆಕ್ಕ ಕೆಡುವಂತೆ

ಗಣಸಂಖ್ಯೆ ಹೆಚ್ಚಾದರೆ ಗುಣ-ಮನ ಎರಡೂ ಕೆಡುತ್ತದೆ

ಗಿಡ - ಮರ - ವರ


ಖಾಲಿ ಜಾಗಗಳಲಿ ಗಿಡ ನೆಡದಿದ್ದರೆ ಇಂದೇ

ಅಳುವೆ ನೀ ಮುಂದೆ ನೆಡಬೇಕಿತ್ತು ಅಂದೇ 

ನೆಟ್ಟ ಗಿಡ ಬೆಳೆದು ಮರವಾಗಲೇನು ತಡ

ನೆಮ್ಮದಿಯ ಕ್ಷಣಗಣನೆ ಮನೆಮಂದಿ ಸಂಗಡ


ಮರದಿಂದ ಬೀಜ ಬಿದ್ದು ಹುಟ್ಟುವುದು ಗಿಡ

ಗಿಡದಿಂದ ಮರವಾಗಿ ತೀರುವುದು ನಿನ್ನ ಕಡ

ಮರಗಳು ಬೆಳೆದಂತೆ ಕಾಣಬಹುದು ಕಾಡ

ಗಿಡಬಳ್ಳಿ ಖಗಮೃಗಗಳ ಅಪೂರ್ವ ನಾಡ 


ಹಸಿರ ಉಳಿಸಿದರೆ ಭವದ ಉಸಿರು ಸಾಯ

ಹಸಿರ ಉಳಿಸಿ ಬೆಳೆಸಲು ಹೊಂದು ದೃಢ ಧ್ಯೇಯ

ಮಕ್ಕಳಿಗೂ ಮರಿಗಳಿಗೂ ಮಾಡು ಸಹಾಯ

ಮರವುಳಿಸಿ ಬೆಳೆಸುವುದೇ ಉಳಿದಿರುವ ಉಪಾಯ

ಬೆಕ್ಕಿನ ಬಿಡಾರ

ಅಕ್ಕ ನಿನ್ನ ಬೆಕ್ಕಿಗೊಂದು ಬೇರೆ ಬಿಡಾರ

ಪಕ್ಕದಲ್ಲಿ ಹಾಸಿಕೊಂಡು ನಿನ್ನ ಗುಡಾರ

ಸಿಕ್ಕದಂತೆ ಕುಳಿತೆ ಏಕೆ ಬಹು ದೂರ

ಲೆಕ್ಕಕಿಲ್ಲ ಆಟಕಿಲ್ಲ ಎಂಬ ವಿಚಾರ


ಅರಿತ ಮೇಲೂ ಕಲಿತ ನೀನು ಏಗುವಿಯೇಕೇ

ಸರಿತಪ್ಪು ಗೊತ್ತಿದ್ದೂ ಕುಗ್ಗುವಿಯೇಕೆ

ಪರಿಪರಿಯ ಬೇಡಿಕೆಗೆ ಬಗ್ಗುವಿಯೇಕೆ

ಬರಿದೇ ಅಳತೆಯನ್ನು ಮೀರಿ ತಗ್ಗುವಿಯೇಕೆ


ಏಗಿದರೆ ಬೀಗುವರು 

ಕುಗ್ಗಿದರೆ ಕಿಸಿಯುವರು

ಬಗ್ಗಿದರೆ ಗುದ್ದುವರು 

ತಗ್ಗಿದರೆ ತುಳಿಯುವರು 


ಅರಿತುಕೊಂಡು ಜಗದ ಪರಿಯ

ಬೆರೆತುಕೊಂಡು ಎಲ್ಲರೊಡನೆ

ಮರೆತು ಬಾಳು ಕಹಿಯನೆಲ್ಲ

ಅನುಭವಿಸು ಸಿಹಿಯನೆಲ್ಲ

Friday, November 24, 2023

ಬರವಣಿಗೆ

ಬರೆಯುವುದು ಬಯಕೆಯಲ್ಲ

ಬಯಕೆಯಲ್ಲಿ ಅರ್ಥವಿಲ್ಲ

ಅರ್ಥ ಹುಡುಕಿದರೆ ವ್ಯರ್ಥವೆಲ್ಲ

ವ್ಯರ್ಥವೆಂದು ಬಿಡುವುದಿಲ್ಲ

ಬಿಟ್ಟರೆಂದೂ ಬರೆಯುವುದಿಲ್ಲ


ಬರೆವಣಿಗೆಯ  ಎರವಣಿಯಲ್ಲಿ

ಎರವಣಿಯ  ಪುರವಣಿಯೊಂದಿಗೆ 

ಉರವಣೆಯ ಮೆರವಣಿಗೆಯಲ್ಲಿ 

ಮೆರವಣಿಗೆಯ ಬರವಣಿಗೆ ಮುಂದುವರಿವುದು


ಬರೆಯುವುದಕ್ಕೆ ಬರವೇನು

ಬರದಿದ್ದರೂ ಬರೆದೇನು

ಬರೆದರೇನು ಬರೆಯದಿದ್ದರೇನು

ಯಾವುದನ್ನೂ ಲೆಕ್ಕಿಸದೇ ಬರೆಯುವೆನು 

Thursday, November 23, 2023

ಮಂಗನ ಸಂಗ

ಈಗೇನು ಮಾಡಲೆಂದು ನೊಂದು ಕುಳಿತಿರುವಾಗ

ಮಂಗನೊಂದು ಎದುರು ಬಂದು ಬಂಗಿ ಸೇದುತಿತ್ತು 

ಅದರ ಸಂಗ ಮಾಡಲೆಂದು ನಿಂದು ನೋಡುವಾಗ

ಮಾಣಿಕ್ಯವ ಕೆಳಗೆ ಚೆಲ್ಲಿ ಗುಂಡು ನಲಿಯುತಿತ್ತು


ಮಂಗನ ಸಂಗವಾದರೆ ಪೆಂಗನಾಗ ಬೇಕು

ಬಂಗಿ ಸೇದೋ ಚಟದ ಫಲ ಅನುಭವಿಸ ಬೇಕು

ಅಂಗನೆಯ ರಂಗುಭಂಗಿ ಬದಲಾಗ ಬೇಕು

ಬಾಳ ಬತ್ತಿ ಹೊಸಕದಂತೆ ಬಿಗಿಯಾಗ ಬೇಕು


ಮರ್ಕಟದ ಮತ್ತಿನಾಟಕೆ ಕಿಚ್ಚೊಡ್ಡ ಬೇಕು

ಚಾಂಚಲ್ಯದ ಶಕಟಕ್ಕೊಂದು ಕಡಿವಾಣ ಬೇಕು

ಅಕಟಕಟ ಅನುಕಂಪ ಚಟಪಟಿಸ ಬೇಕು

ಗಟ್ಟಿ ಹೆಜ್ಜೆ ಇಟ್ಟು ನಡೆದು ಗುರಿ ಮುಟ್ಟ ಬೇಕು

ಪರಿಹಾರ

ನೀನೊಂದು ತೀರ ಅವಳೊಂದು ತೀರ

ನಡುವೆ ಬಿದ್ದಿರುವುದು ಮಣ ಭಾರ

ಇರುವುದೊಂದೇ  ಸೇರಿಸುವ ತೆಳುದಾರ 

ತುಂಡಾದರೆ ಆಗುವುದು ಮನ ಭಾರ


ಸುತ್ತಮುತ್ತಲ ಸಂತೆಕಂತೆಯದು ಹೆಣಭಾರ

ಕಿವಿಗೊಟ್ಟು ಕೆಡಿಸದಿರಿ ನಿಮ್ಮ ವ್ಯವಹಾರ

ಬದುಕನೇ ಮಾಡದಿರಿ ಒಂದು ವ್ಯಾಪಾರ

ನಿಮಗೆ ನೀವೇ ಕಂಡುಕೊಳ್ಳಿ ಉತ್ತಮ ಪರಿಹಾರ


ಮಂಗರವಳ್ಳಿ

ಬಳುಕಿದ ಬಳ್ಳಿಯಲ್ಲೊಂದು ಊಸರವಳ್ಳಿ

ಬಣ್ಣ ಬದಲಾದರೂ ಕಣ್ಣು ಕುರುಡಾದರೂ

ಕಡಿಮೆಯಾಗದ ತುರಿಕೆಯ ಮಂಗರವಳ್ಳಿ 


ಹುಣಿಸೆ ನೀರಲಿ ತೊಳೆದುಕೊಳ್ಳಿ

ಮೆಣಸು ಹಾಕಿ ಅರೆದುಕೊಳ್ಳಿ

ಗೊಜ್ಜು ಮಾಡಿ ತಿಂದುಕೊಳ್ಳಿ

ಸೌರಭ


ಅನುವಿನ ತನುವಿನ ಅಂಶವು ಜನಿಸಿದೆ

ಗೌರವ ಪ್ರೀತಿಯು ಎಲ್ಲೆಡೆ ಹರಡಿದೆ

ತತ್ಸಮ ಸಂತಸ ತುಂಬುತ ಹರಿದಿದೆ

ಮನಸಿನ ಮಲ್ಲಿಗೆ ಸೌರಭ ಸೂಸಿದೆ


ದೈವದ ಕೃಪೆಯು ಎಲ್ಲರ ಮೇಲಿದೆ 

ತೋರಿಕೆಯಿಲ್ಲದೆ ಸರಳವೇ ಆದರೂ 

ಟಂಕನ ಝಣಝಣ ಕಿವಿಯಲಿ ತುಂಬಿದೆ 

ಮನೆಯಲೂ ಮನದಲೂ ನೆಮ್ಮದಿ ಮೂಡಿದೆ 

Wednesday, November 22, 2023

ತುಣುಕುಗಳು


೦೧.

ಪದಗಳಿಗೆ  ಬಸಿರಾಗಿ, 

ಸಮಯಕ್ಕೆ ಸರಿಯಾಗಿ

ಉಸಿರು ಹಿಡಿದು ಬಲವಾಗಿ

ತಿಣುಕಿದರಷ್ಟೇ ಪದ್ಯ ಹುಟ್ಟುವುದು


೦೨.

ಹಬ್ಬಗಳ ಸಂಗಮ

ಸಂಸ್ಕೃತಿಗಳ ಸಮಾಗಮ

ಹರಡುವುದು ಘಮಘಮ

ಹಿರಿ-ಕಿರಿಯರೆಲ್ಲರಿಗೂ ಸಮಸಮ


೦೩.

ಹಗಲು ರಾತ್ರಿಯಲ್ಲ ರಾತ್ರಿ ಹಗಲಲ್ಲ

ನೀನು ನಾನಲ್ಲ ನಾನು ನೀನಲ್ಲ

ಎಂದಿಗೂ ಹೋಲಿಕೆ ಸರಿಯಲ್ಲ

ಇದನರಿತರೆ ಸಾಕಲ್ಲ, ಕೀಳರಿಮೆ ಬೇಕಿಲ್ಲ


೦೪.

ಭಾವನೆಗಳ ಏರುಪೇರು ಬರಲಿ ಬಿಡು

ಜೀವನದ ಸಾರವನ್ನು ಅನುಭವಿಸಿ ಬಿಡು

ಭವಂತಿ ಭಾರವನ್ನು ಭಗವಂತನಿಗೆ ಕೊಡು

ಆಗುವುದು ಬದುಕು ನೋಡು ಸುಖದ ಗೂಡು



ನೀರುಹಾಲು

ಉಂಡ ಮೇಲೆ ಕುಡಿಯಿರಿ ಬಿಸಿಬಿಸಿ ನೀರು ಹಾಲು

ಹೊಟ್ಟೆಯುಬ್ಬರ ಶಮನದಲ್ಲಿ ಇದಕೆ ಸಿಂಹಪಾಲು 

ಚಿಟಿಕೆ ಓಮ ಸೇರಿಸಿದರೆ ನಿವಾರಿಸುವುದು ಸವಾಲು

ಆಗಲು ಬಿಡದು ನಿಮ್ಮನ್ನು ಎಂದಿಗೂ  ಕಂಗಾಲು


ಸುಖ ನಿದ್ರೆ ನಿಮ್ಮದೇ ನಿತ್ಯ ಇರುಳು

ಸಂತೋಷದ ಕ್ಷಣಗಳು ನಿಮಗೆ ಸಾಲುಸಾಲು

ಶುಚಿಯಾಗಿ ಇಟ್ಟುಕೊಳ್ಳಿ ನಿಮ್ಮ ಕೈ-ಕಾಲು

ಆರೋಗ್ಯ ಉಳಿಸುವಲ್ಲಿ ಇದರದು ಸಮಪಾಲು 

Monday, November 20, 2023

ಅಭಯ

ಬೆಳಕಿನಲ್ಲಿ  ಬವಳಿದಂತೆ ಕುಳಿತಿರುವ ಕಂದ

ಬೆದರ ಬೇಡ ಬೆನ್ನಿಗಿಹುದು ಅಭಯ ಕಬಂಧ

ಬೆಳಗು ನೀ ನಂದಾದೀಪ ಆನಂದದಿಂದ 

ಅಂಕೆಯಿಲ್ಲದ ಸಂಖ್ಯೆಯಲ್ಲಿ ಮಿರುಗುವ ಚಂದ


ಕಪ್ಪು ಕತ್ತಲ ತೊಳೆದಿರುವ ದೀಪಗಳ ಪ್ರಬಂಧ

ಘಮಘಮಿಸುವುದು ಸುತ್ತಲೆಲ್ಲ ಪವಿತ್ರ  ಶ್ರೀಗಂಧ

ಆಗಸದಲ್ಲಿ ಹರಡಿರುವ ಹುಣ್ಣಿಮೆಯ ಅಂದ

ಪಡೆದದನು ಬೆಳಗಲಿ ನಿನ್ನ ವದನಾರವಿಂದ


Saturday, November 18, 2023

ಜೀವನ


ತಿಂದ ಮೇಲೆ ಕೈಯನ್ನು ತೊಳೆಯಲೇ ಬೇಕು

ಉಂಡ ಮೇಲೆ ತಟ್ಟೆಯನ್ನು ಬೆಳಗಲೇ ಬೇಕು

ಹೊರಗಿಂದ ಬಂದು ಸ್ನಾನ ಮಾಡಲೇ ಬೇಕು

ಚಂದದಿಂದ ಮಾತುಗಳ ಆಡಲೇ ಬೇಕು


ಸಂಜೆ ಹೊತ್ತು ದೀಪವನ್ನು ಹಚ್ಚಲೇ ಬೇಕು

ಭಕುತಿಯಿಂದ ಕೈಮುಗಿದು ಬೇಡಲೇ ಬೇಕು

ಹಿರಿಯರ ಪಾದಸ್ಪರ್ಶ ಮಾಡಲೇ ಬೇಕು

ಕಿರಿಯರಿಗೆ ಮಮತೆಯನ್ನು ನೀಡಲೇ ಬೇಕು


ಇಷ್ಟವಿಲ್ಲದಿದ್ದರೂ ಕಷ್ಟವನ್ನು ಪಡಲೇ ಬೇಕು

ನಷ್ಟವಾದರೂ ಧಾರ್ಷ್ಟ್ಯವನ್ನು ತೋರಲೇ ಬೇಕು

ಪ್ರಾಮಾಣಿಕ ಬದುಕನ್ನು ಬದುಕಲೇ ಬೇಕು

ಅಂತಿಮ ನಿಲ್ದಾಣದವರೆಗೆ ನಡೆಯಲೇ ಬೇಕು

ಸಾರು-ನಾರು

ಇಂದು ಊಟಕ್ಕೆ ಸಾರು, ಇದನು ಕೇಳಿದವರು ಯಾರು

ತಿಂದು ಉಪ್ಪು ಕಮ್ಮಿ ಎಂದು ಹೇಳಿದವರು ಯಾರು

ಬಂದು ನಿಂದು ಬೆಂದು ಜೊತೆಗೂಡಿದವರು ಯಾರು

ಎಂದು ನೀ ಸಾರು,  ಬೇಕಾದರೆ ಬೇಗ ಬಳಿಸಾರು


ಊಟದಲ್ಲಿ ಖಚಿತ ಉಚಿತ ನಾರು

ಇಲ್ಲವೆಂದು ಗೊಣಗಿದವರು ಯಾರು

ಕಷ್ಟ ಗೊತ್ತಿಲ್ಲದಿರುವುದಕ್ಕೇ ಕೊಳಕು ನಾರು

ಬೇಡ ಬರೀ ಒಣ ಮಾತಿನ ದರ್ಬಾರು

ಭಾಗ್ಯ - ಯೋಗ್ಯ


ವರುಷದಾದಿಯಲಿ ಹೊಸಹಾದಿಯಲಿ 
ಸಿಕ್ಕಿರುವುದು ನಮಗೆ ಭಾಗ್ಯ
ಅಂಡು ಸುಟ್ಟರೂ ಮಂಡೆ ಕೆಟ್ಟರೂ
ನಮಗದೇ ಸೌ-ಭಾಗ್ಯ

ಮುಂದೊಂದು ದಿನ ನಾವೇ ಆಗುವೆವು ಭೋಗ್ಯ
ಆಗ ಪರಿತಪಿಸ ಬೇಕಾಗುವುದು ನಮ್ಮ ದೌರ್ಭಾಗ್ಯ
ಈಗಲೇ ಎಚ್ಚೆತ್ತರೆ ನಡೆಯುವುದೆಲ್ಲ ಯೋಗ್ಯ
ಆಗ ಮಾತ್ರ ಉಳಿಯುವುದು ಆಯುರಾರೋಗ್ಯ

ಧೀಮಂತ ದೊರೆತಾಗ ನೆಮ್ಮದಿಯು ಲಭ್ಯ
ಭಾಗ್ಯಗಳ ಅಳಿಸಿ ಬಲ ನೀಡುವ ಸಭ್ಯ
ಯೋಚಿಸಿ ಹೆಜ್ಜೆ ಇಟ್ಟರೆ ಸಿಗುವುದು ಸೌಲಭ್ಯ
ಕಿಸುರು ಕೊಸರುಗಳು ಅಲ್ಲಿ ಖಂಡಿತಾ ಅಲಭ್ಯ

ಸಾಧ್ಯ - ಅ - ಸಾಧ್ಯ

ಅಸಾಧ್ಯವನ್ನು ಸಾಧ್ಯವಾಗಿಸ ಬಹುದೇ

ನೀ ಮನಸು ಮಾಡಿದರದು ಸಾಧ್ಯ

ಸಾಧ್ಯವನ್ನು ಅಸಾಧ್ಯವಾಗಿಸ ಬಹುದೇ 

ಇಲ್ಲಸಲ್ಲದುದಕ್ಕೆ ಕಿವಿಗೊಟ್ಟರೆ ಅದೂ ಸಾಧ್ಯ


ಸಾಧ್ಯಕ್ಕೆ  ' ಅ ' ಸೇರಿದರಷ್ಟೇ ಅಸಾಧ್ಯ

' ಅ ' ವರಿವರ ಮಾತು ಕೇಳದಿರು ಸದ್ಯ 

ಅರಿತರಂತರಾತ್ಮದ  ಮಾತೇ ನೈವೇದ್ಯ

ಆಗಷ್ಟೇ  ಗೆಲುವಿನ ಮೆಟ್ಟಿಲೇರಲು ಸಾಧ್ಯ

Friday, November 17, 2023

ಮತ್ತೆ ಸಿಗದು


ಅಪ್ಪ ಇಲ್ಲ ಅಮ್ಮ ಇಲ್ಲ 

ಇದ್ದಾಗ ಬೆಲೆ ಕೊಡಲಿಲ್ಲ 

ಪ್ರೀತಿ ಮಮತೆ ಸಾಲಲಿಲ್ಲ 

ಈಗ ಪಡೆವ ಭಾಗ್ಯವಿಲ್ಲ


ಕೊಟ್ಟ ಕಿರುಕುಳ ಕಮ್ಮಿ ಇಲ್ಲ 

ಪಶ್ಚಾತ್ತಾಪ ಪಟ್ಟೇ ಇಲ್ಲ 

ನಿನಗದರ ಅರಿವೇ ಇಲ್ಲ 

ಅವರು ತಿಳಿಯಗೊಡಲಿಲ್ಲ


ಅವರ ಮನವ ಅರಿಯಲಿಲ್ಲ

ಜೊತೆಗೆ ಸಮಯ ಕಳೆಯಲಿಲ್ಲ

ಪ್ರೀತಿಯಂತೂ ತೋರಲಿಲ್ಲ

ಮಾತು ಕೂಡ ಆಡಲಿಲ್ಲ


ವಾಸ್ತವವ ಗ್ರಹಿಸಲಿಲ್ಲ

ತಕ್ಷಣ ಎಚ್ಚೆತ್ತುಕೊಳಲಿಲ್ಲ 

ಕಳಕೊಂಡ ಮೇಲೆ ಅವರೇ ಎಲ್ಲಾ

ಆದರೇನೂ ಫಲವಿಲ್ಲ

Monday, November 13, 2023

ಒಂದು ದಿನ


ದಿನದಲ್ಲಿ ದಯೆಯಿಂದ

ದಯೆಯಲ್ಲಿ ಪ್ರೀತಿಯಿಂದ

ಪ್ರೀತಿಯಲ್ಲಿ ಹೊಳಪಿಂದ

ಕಳೆಗೊಂಡ ಕಣ್ಮಣಿ ಬೆಳಗು


ದೀಪಾವಳಿಗೆ ದೀವಿಗೆ ಹೊತ್ತು

ಭಾರವಾಗಿ ಬೇಸತ್ತು

ಬಸವಳಿದ ಈ ಹೊತ್ತು

ಬೆಂದು ನಿಂದಿರುವ ಮಧ್ಯಾಹ್ನ


ಯೌವ್ವನದ ಎಸಳ ಸವಿ

ಜವ್ವನದ ಹೆಗಲೇರಿ

ಗವ್ವನೆಯ ನಿಶೆಗೆ ಬೆದರಿ

ಸುಮ್ಮನೇ ಕುಳಿತ ಸಂಜೆ

ಸಾಧನೆಯತ್ತ


ಬದಲಾವಣೆಯನ್ನು ಬರಲು ಬಿಡು 

ಕಾಡುವ ಅಹಮನ್ನು ಬದಿಗಿಡು

ಕೊಂಚ ಕಸಿವಿಸಿ ನುಂಗಿ ಬಿಡು

ಕಣ್ಣ ಪಟ್ಟಿಯ ಸರಿಸಿ ಬಿಡು


ಮನದ ಬಾಗಿಲನು ತೆರೆದು ಬಿಡು

ಹೃದಯ ಕವಾಟವ ಬಿಗಿದಿಡು 

ಟೀಕೆಟಿಪ್ಪಣಿಗೆ ಕಿವಿಗೊಡು 

ಆಲೋಚನಾ ಕ್ರಮವನ್ನು ಹರಿತ ಮಾಡು


ಪರಪ್ರಶಂಸೆಯ ಕಡಿಮೆ ಮಾಡು

ಸ್ವನಿಂದೆಯ ಬಿಟ್ಟುಬಿಡು

ನಿನ್ನೊಳಗಿನ ಧ್ವನಿಗೆ ಗಮನ ಕೊಡು

ಪ್ರಾಮಾಣಿಕವಾಗಿ ಪ್ರಯತ್ನ ಪಡು

ನಿಂತ ನೀರು


ಅರಿತವರಿಗೆ ಅರಿವಿಲ್ಲದೊಡೆ

ನುರಿತವರಿಗೆ ಛಲವಿಲ್ಲದೊಡೆ

ಬೆರೆತವರಿಗೆ ಬಲವಿಲ್ಲದೊಡೆ

ಕಾರ್ಯವನೆಸಗುವುದೆಂತು


ಕಣ್ಣಿದ್ದೂ ಕುರುಡಾದೊಡೆ

ಕಿವಿಯಿದ್ದೂ ಕಿವುಡಾದೊಡೆ

ಕಾಲಿದ್ದೂ ಕುಂಟಾದೊಡೆ

ಜೀವಾತ್ಮಕ್ಕೆ ತೃಪ್ತಿಯೆಂತು


ಅಲ್ಪಕ್ಕೆ ಉಬ್ಬಿದೊಡೆ

ಸ್ವಲ್ಪಕ್ಕೆ ಸೊಕ್ಕಿದೊಡೆ

ಸಮಚಿತ್ತ ಸರಿದೊಡೆ

ಆತ್ಮವಿಶ್ವಾಸಕ್ಕೆ ಜಯವೆಂತು

Friday, November 10, 2023

ದೀಪಾವಳಿ


ಬೆಳಕಿನ ಹಬ್ಬದ ಬೆಳಗಲಿ ಇಂದು 

ಕವಿದಿಹ ಕತ್ತಲೆ ಕರಗಲಿ

ಬಾನಲೂ ಬುವಿಯಲೂ ಎಲ್ಲೆಲ್ಲೂ

ಭರವಸೆ  ಬೆಳಕದು ಹರಡುತಲಿರಲಿ 


ಹಬ್ಬದ ಹರುಷವು ಹಸಿಯಾಗಿರಲಿ

ಹೃದಯದ ಭಾವನೆ ಬೆಚ್ಚಗೆ ಇರಲಿ

ಪ್ರೀತಿಯ ದೀಪವು ಬೆಳಗುತಲಿರಲಿ

ಸಂಬಂಧದ ಸಂಕೋಲೆ ಬಿಗಿಯಾಗಿರಲಿ


ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.