Friday, September 05, 2025

ಎಂದೋ ಹುಟ್ಟಿರುವ ನಕ್ಷತ್ರಗಳು

 

ಎಂದೋ ಹುಟ್ಟಿರುವ ನಕ್ಷತ್ರಗಳು

ಇಂದಿಗೂ ಹೊಳೆಹೊಳೆದು ನಲಿಯುತ್ತವೆ

ಗುರಿಯಿಲ್ಲದ ಜೀವಗಳು ಗಲಿಬಿಲಿಯಲ್ಲಿ

ಎಂದೆಂದಿಗೂ ಎಲ್ಲೆಲ್ಲೋ ಅಲೆಯುತ್ತವೆ 


ಉಳಿಸಿರುವ ಗರ್ವದ ನಡೆ ನಡೆದು

ಗಳಿಸಿರುವ ಗೌರವವ ನುಂಗುತ್ತದೆ

ಅಳಿಸಿದ ಪ್ರೀತಿಯ ಹಿಂದೋಡುವ ಜೀವ

ಆತ್ಮ ದಹನದಲ್ಲಿ ಸಿಲುಕಿ ನಲುಗುತ್ತದೆ 


ಕಾಲಿಗೆ ಚುಚ್ಚುವ ಮುಳ್ಳುಗಳು

ಮೆದುಳನ್ನು ತಲುಪುತ್ತವೆ

ಹೃದಯ ತಟ್ಟುವ ನೆನಪುಗಳು

ಬಾಳನ್ನು ಹಸನಾಗಿಸುತ್ತವೆ


ಮನದಲ್ಲಿ ಅಶಾಂತಿಯ ಅಲೆಗಳೆದ್ದರೆ 

ಮನೆಗಳನ್ನು ಮುಳುಗಿಸುತ್ತವೆ

ಅಂಗಳದಲ್ಲಿ ಅರಳಿದ ಹೂವುಗಳು

ಮಂಗಳದ ಕಹಳೆ ಮೊಳಗಿಸುತ್ತವೆ


ಜಾತಿ ಧರ್ಮದ ಜಗಳಗಳು

ಜಗಲಿಯಲ್ಲಿ ಏಳುತ್ತವೆ

ಜನರ ಬುದ್ಧಿ ಸ್ತಿಮಿತದಲ್ಲಿದ್ದರೆ 

ಕಿಡಿ ಕಾರದೆ ಕರಗುತ್ತವೆ 


ಉಡಿಯಲ್ಲಿ ಕಟ್ಟಿಕೊಂಡ ನೋವು

ಬಿಡದೆ ಇಡಿಯಾಗಿ ಸುಡುತ್ತದೆ

ಕಡೆಯಲ್ಲಿ ಕೈ ಹಿಡಿದು ನಡೆಸಲು ಜೀವ

ಜಗದೊಡೆಯನ ಮೊರೆ ಹೋಗುತ್ತದೆ