Saturday, October 07, 2006

ಏನಿದೇನಿದೇನು

ಏನಿದೇನಿದೇನು! ಚಿತ್ತಾರ ಭೂಮಿ ಬಾನು!

೧೬.೦೭.೦೪ - ೧೯/೦೭/೦೪.
ಚಿಕ್ಕಮಗಳೂರು ಬಸ್ ಸ್ಟಾಂಡ್‍ನಲ್ಲಿ ಇಳಿದು ಅಲ್ಲೇ ಎಲ್ಲರೂ ಒಬ್ಬರಿಗೊಬ್ಬರು ಪರಿಚಯ ಮಾಡಿಕೊಂಡು, ನಂತರ ೬.೦೦ ಘಂಟೆಗೆ ದಾವಣಗೆರೆಗೆ ಹೋಗುವ ಪ್ರೈವೇಟ್ ಬಸ್ ಹತ್ತಿ ಕೈಮರ ಎಂಬಲ್ಲಿ ಇಳಿದೆವು. ನಂತರ ಸ್ವಲ್ಪ ಮುಂದೆ ಹೋಗಿ, ನಿರ್ವಾಣೇಶ್ವರ ಮಠಕ್ಕೆ ಹೋಗಿ, ಅಲ್ಲಿಯ ಸೌಕರ್ಯಗಳೊಂದಿಗೆ ನಿತ್ಯಕರ್ಮಗಳನ್ನು ಮುಗಿಸಿ, ತಿಂಡಿ ತಯಾರು (ಅವಲಕ್ಕಿ) ಮಾಡಿ, ತಿಂದು, ದೇವಸ್ಥಾನದೊಳ ಹೋಗಿ ಕೈ ಮುಗಿದು ಅಲ್ಲಿಂದ ೯.೦೦ ಘಂಟೆಗೆ ಹೊರಟೆವು. ಪುನಹ, ಕೈಮರ ನಿಲ್ದಾಣಕ್ಕೆ ಬಂದು ಕಾದು, ಬಸ್ ಬರುವುದು ಇನ್ನೂ ನಿಧಾನ ಎಂದು ನಡೆಯಲಾರಂಭಿಸಿ, ಸಾಮಾನ್ಯ ೨ ಕಿ.ಮೀ ನಡೆದು, ದಾರಿಯಲ್ಲಿ ಒಂದು ಲಾರಿಯವನಲ್ಲಿ ರಿಕ್ವೆಸ್ಟ್ ಮಾಡಿ, `ಸರ್ಪದಾರಿ' ಗೆ ಬಂದೆವು. ನಂತರ ನಿಜವಾದ ಚಾರಣ (ಬೆಟ್ಟಕ್ಕೆ) ಸುರು. ಕೆಲವರು ನಿಧಾನಕೆ (ನನ್ನನ್ನೂ ಸೇರಿ) ಕೆಲವರು ವೇಗವಾಗಿ ಹತ್ತಲಾರಂಭಿಸಿ, ಸುಮಾರು ೨ ರಿಂದ ೨.೩೦ ಘಂಟೆ ಸಮಯ ತೆಗೆದುಕೊಂಡು, ನಡುವೆ ಪ್ರಕೃತಿ ಸೌಂದರ್ಯ, ವೈಚಿತ್ರ್ಯ ಸವಿಯುತ್ತಾ, ದಾರಿಯಲ್ಲಿ ನನ್ನ ಬ್ಯಾಗ್ ಬೆಲ್ಟ್ ತುಂಡಾಗಿ, ಹೊಲಿದು, ಮುಳ್ಳಯ್ಯನ ಗಿರಿ ತಲುಪಿದೆವು. ಮಳೆ ಇಲ್ಲದಿದ್ದರೂ ವಾತಾವರಣ ತಂಪಾಗಿ, ಬಿಸಿಲು ಇರಲಿಲ್ಲವಾದುದರಿಂದ ನೀರಿನ ಆವಶ್ಯಕತೆ ಅಷ್ಟಾಗಿ ಬರಲಿಲ್ಲ.

ಬೆಟ್ಟಕ್ಕೆ ಹತ್ತುವಾಗ ದಾರಿಯಲ್ಲಿ ಒಂದು ಗುಹೆಯು `ಕಲಾಕೃತಿಯಲ್ಲಿ ನನ್ನ ಸಮಾನ ಯಾರೂ ಇಲ್ಲ, ನನ್ನನ್ನು ವೀಕ್ಷಿಸಿ' ಹೋಗಿ ಎಂದಿತು, ನಿಜಕ್ಕೂ ಪ್ರಕೃತಿಯ ಕುಂಚ ಅಲ್ಲಿ ಹೇಗೆ ಓಡಾಡಿ ಚಿತ್ತಾರ ಬಿಡಿಸಿದೆ ಎಂದರೆ ಕಣ್ಣಾರೆ ಕಂಡ ಹೊರತು ನಂಬಲಸಾಧ್ಯ ಮತ್ತು ವಿವರಿಸಲಸಾಧ್ಯ.

ಮೇಲ್ಗಡೆ ತಲುಪಿದಾಗ ಕೆಳಗೆಲ್ಲಾ ಮಂಜು ಮುಸುಕಿ ನಾವು ಬಂದಿದ್ದ ಹಾದಿಯೂ ಕಾಣುತ್ತಿರಲಿಲ್ಲ. ಮೇಲೆ ಮಣ್ಣಿನ ಒಂದು ಪುಟ್ಟ ಗುಡ್ಡ, ಗೋಪುರದಂತೆ ಇದೆ. ಒಂದು ಶಿವನ ದೇವಸ್ಥಾನ ಇದ್ದು, ಅಲ್ಲೇ ಪಕ್ಕದ ಕಟ್ಟಡದಲ್ಲಿ ವಾಸ ಇರುವವರು ಪೂಜೆ ಮಾಡುತ್ತಾರೆ. ಬೇಕಾದರೆ ಊಟದ ವ್ಯವಸ್ಠೆಯನ್ನೂ ಬೇಕಾದರೆ ಮಾಡುತ್ತೇವೆ ಎಂದು ಅವರು ಹೇಳಿದರು. ನಾವು ಕೊಂಡೊಯ್ದ ಕಾಯಿ ಹೋಳಿಗೆ, ಕೋಡುಬಳೆ, ಬಾಳೆಹಣ್ಣು, ಮಿಕ್ಸ್ಚರ್, ಬ್ರೆಡ್, ಬಿಸ್ಕಿಟ್ ಮುಂತಾದವು ಹೆಸರಿಲ್ಲದಂತೆ ಖಾಲಿಯಾದುವು. ಕರ್ನಾಟಕದ ಅತಿ ಎತ್ತರದ ಬೆಟ್ಟದ ಮೇಲಿದ್ದರೂ ಹಸಿವೆಂಬುದು ಇಂಗಿರಲಿಲ್ಲ.

ಅದ್ಭುತವಾದ ನೋಟ ಅದು. ಮುಳ್ಳಯ್ಯನ ಗಿರಿಯಿಂದ ಬಾಬಾಬುಡನ್‍ಗಿರಿ ಕೂಡಿದಂತೆ ಸುತ್ತಲೂ ಬೆಟ್ಟಗಳೂ, ಮೋಡ, ಮಂಜು ಮುಸುಕಿದ ಪರ್ವತಗಳು, ಆ ಎತ್ತರಕ್ಕೇರಿದುದನ್ನು ಸಾರ್ಥಕ ಎನ್ನುತ್ತಿದ್ದುವು.

ಅಲ್ಲೇ ಸ್ವಲ್ಪ ಹೊತ್ತು ಇದ್ದು ನಂತರ ಮನಸ್ಸಿಲ್ಲದ ಮನಸ್ಸಿನಿಂದ ಸೀತಾಳಯ್ಯನ ಗಿರಿಯತ್ತ ಇಳಿಯಲಾರಂಭಿಸಿದೆವು. ಸುಮಾರು ಇನ್ನೂರು - ಮುನ್ನೂರು ಮೆಟ್ಟಿಲಿಳಿದ (ಲೆಕ್ಕ ಮಾಡಿಲ್ಲ) ನಂತರ ನಾಗರಿಕ ಪ್ರಪಂಚವನ್ನು ಜ್ನಾಪಿಸುವಂತೆ ಕಡಿದ ಮಾರ್ಗ ಸಿಕ್ಕಿತು. ಮುಂದೆ ಸ್ವಲ್ಪ ದೂರ ಹೋಗಿ ಕಾಲುದಾರಿ ಇಳಿದು ಪುನಹ ಇನ್ನೊಂದು ಗುಡ್ಡ ಹತ್ತಿ ಇಳಿದು ಸೀತಾಳೇಶ್ವರ ಮಠ ತಲುಪಿದೆವು, ಮಾರ್ಗದಲ್ಲೇ ಹೋಗಿದ್ದರೂ ಈ ಜಾಗಕ್ಕೇ ತಲುಪುತ್ತಿದ್ದೆವು ಆದರೆ ಕಾಲುದಾರಿ ಕೊಡುವ ಮಜಾ ಮಾರ್ಗದಲ್ಲೆಲ್ಲಿ?

ಸುಸ್ತಾದವರು ಕಾಲು ಚಾಚಿ ಮಲಗಿದರೆ ಕುತೂಹಲಿಗಳು ಸುತ್ತ ಮುತ್ತ ಏನೇನಿದೆ ಎಂದು ನೋಡಲು ಹೊರಟೆವು. ಇಲ್ಲೂ ಒಂದು ಪುಟ್ಟ ಗುಹೆ ಇದೆ. ವೇಣು, ಡೀನ್, ಮೋಹನ್ (ಮಂಜು) ಮತ್ತು ನಾನು ಹಾಗೇ ಹೋಗುತ್ತಾ, ಪ್ರಕೃತಿಯ ವೈಶಿಷ್ಟ್ಯ ಮತ್ತು ಸೂರ್ಯ ಕಿರಣಗಳ ಆಟವನ್ನು ನೋಡುತ್ತಾ ಹತ್ತಿರದಲ್ಲೇಲ್ಲೋ ನೀರು ಬೀಳುವ ಶಬ್ದಕ್ಕೆ ಮರುಳಾಗಿ ಅದರ ಶೋಧಕ್ಕೆ ಹೊರಟೆವು. ಜಲಪಾತ ಕಾಣದೇ, ಜಿಗಣೆಗಳೊಂದಿಗೆ, ಪುನಹ ಮುಳ್ಳಯ್ಯನ ಗಿರಿ ಕಡೆ ಹೋಗುವ ಮಾರ್ಗವಾಗಿ ಮಠಕ್ಕೆ ಹಿಂದಿರುಗಿದೆವು. ಕಾಫಿ ಕುಡಿದು ಪುನಹ ಡೀನ್, ಮೋಹನ್, ನಾನು ಅಲ್ಲೇ ಸ್ವಲ್ಪ ದೂರದಲ್ಲಿ ಹುಲ್ಲು ಹಾಸಿನ ಮೇಲೆ ಕುಳಿತೆವು. ಘಂಟೆ ೭.೩೦ ಆಗಿದ್ದರೂ ಇನ್ನೂ ಕತ್ತಲಾಗದಿರುವುದನ್ನು ಕಂಡ ಮೋಹನ್‍ಗೆ ಆಶ್ಚರ್ಯ. ಅಂತೆಯೇ ಮುಸುಗಿದ ಮಂಜಿನ ನಡುವೆ ಕುಳಿತ ಅನುಭವವನ್ನು ಸವಿಯುವ ಆತುರ. ಸ್ವಲ್ಪ ಹೊತ್ತಿನ ನಂತರ ಅಂದರೆ ಸುಮಾರು ೮.೦೦ - ೮.೩೦ ಘಂಟೆಗೆ ಮಠದ ದೀಪಗಳೂ ಕಾಣದಂತೆ ಮುಸುಗಿದ ಮಂಜು ನೋಡಿ ನಮ್ಮ ಮಂಜುಗೆ ವಿಸ್ಮಯ. ಎಲ್ಲೋ ದೂರದಿಂದೆಂಬಂತೆ ಸಿಳ್ಳೆ ಮತ್ತು ತಟ್ಟೆಯ ಶಬ್ದಗಳಿಂದ ನಮಗೆ ಊಟದ ಕರೆ ಬಂತು. ಊಟದಲ್ಲಿ, ಸತ್ಯನಾರಾಯಣ ಮಾಡಿದ ಪಾಯಸ, ಶಾಂತಪ್ಪ ಹಾಗೂ ಪತ್ನಿ (ಮಠದಲ್ಲಿರುವವರು) ಮಾಡಿದ ಅನ್ನ ಮತ್ತು ಹುಳಿ ಅತಿಯಾಗಿ ತಿಂದ ನನಗೆ ಉಸಿರಾಡಲೂ ಕಷ್ಟವೆನಿಸಿತು. ನಂತರ ಎಲ್ಲರೂ ಶವಾಸನದಿಂದ ನಿದ್ರಾಸನಕ್ಕೆ ತಲುಪಿದೆವು.

ಮರು ಬೆಳಗ್ಗೆ ೫.೩೦ಕ್ಕೆ ಡೀನ್, ವೇಣು ಹಾಗೂ ನಾನು ಪುನಹ ನಮ್ಮದೇ ದಾರಿಯಲ್ಲಿ ಹೊರಟೆವು. ಆ ಅದ್ಭುತವಾದ ಜಾಗದಲ್ಲಿ ಬೆಳಗಿನ ಹೊತ್ತು ಹಕ್ಕಿಗಳ ಚಿಲಿಪಿಲಿ ಕೇಳುತ್ತಾ, ಕುಳಿತೆವು. ನಂತರ ಮೋಹನ್ ನಮ್ಮ ಜೊತೆಗೂಡಿದರು. ವೇಣು ಹೋಗಿ ಉಳಿದವರೆಲ್ಲರನ್ನೂ ಕರೆತಂದರು. ಅವರ್ಯಾರಿಗೂ ಕಾಲಿಗೆ ಚಪ್ಪಲಿ ಹಾಕಲು ವೇಣು ಬಿಟ್ಟಿರಲಿಲ್ಲ ಅದಕ್ಕಾಗಿ ನಮ್ಮ ಜೊತೆ ಪುನಹ ಸೀತಾಳಯ್ಯನ ಗಿರಿ ಹತ್ತಿ ಇಳಿಯಲು ಒಪ್ಪದೆ ಅವರೆಲ್ಲಾ ತಿರುಗಿ ಮಠಕ್ಕೆ ಹೋದ ನಂತರ ನಾವು ಮತ್ತೆ ಮುಳ್ಳಯ್ಯನ ಗಿರಿ ಕಡೆ ಹೋಗಿ ಬೆಳಗಿನ ಮೋಡ, ಮಂಜು ಕೆಳಗೆಲ್ಲಾ ಕವಿದು ಸುತ್ತಲೂ ಸಮುದ್ರದಂತಾಗಿರುವ ಜಾಗಗಳನ್ನೆಲ್ಲಾ ನೋಡುತ್ತಾ ಬಂದೆವು. ದಾರಿಯಲ್ಲಿ ಇದ್ದ ಗಿಡಗಳ ಮೇಲೆ ಕುಳಿತ ಮಂಜಿನ ಹನಿಯ ಸ್ನಾನವನ್ನು ಮಾಡುತ್ತಾ ಪುಟ್ಟ ಮಕ್ಕಳಂತೆ ನಲಿದು `ನನ್ನ ಗಿಡ ನನ್ನ ಗಿಡ' ಎಂದು ಹಕ್ಕು ಸ್ಥಾಪಿಸಿ, ಸೆಲ್ವಕುಮಾರ್ ಪ್ರಕಾರ `ನಿಜಕ್ಕೂ ಮರೆಯಲಾಗದ ಅನುಭವ'ವನ್ನು ಪಡೆದೆವು.

ಉಪ್ಪಿಟ್ಟು, ಚಿತ್ರಾನ್ನವನ್ನು ದೇವಳದ ಪ್ರಾಂಗಣದಲ್ಲಿ ತಿಂದು, ಮನೆಯವರಿಗೆ ಧನ್ಯವಾದಗಳನ್ನರ್ಪಿಸಿ ಬ್ಯಾಗ್‍ಗಳನ್ನು ಶಾಂತಪ್ಪ ಅವರ ಜೀಪಲ್ಲಿ ಹಾಕಿ ಶೇಖರ್ ಮತ್ತು ಕೃಷ್ಣಮೂರ್ತಿ ಜೊತೆ ಮಾಡಿ ಕಳುಹಿಸಿ, ನಾವು ಕಾಲುದಾರಿಯಲ್ಲಿ ಇಳಿದೆವು. ಪುನಹ ಬಾಬಾಬುಡನ್‍ಗಿರಿಗೆ ಹೋಗುವ ದಾರಿ - ಅಂದರೆ ನಾವು ಚಾರಣ ಸುರು ಮಾಡಿದ ಮಾರ್ಗಕ್ಕೆ ಬಂದು ಅಲ್ಲೂ ಒಂದು ಜಲಪಾತ ನೋಡಿದೆವು. ಬಸ್ ಬಂತು. ಕೆಲವು ಸೀಟ್ ಸಿಕ್ಕಿ ಕುಳಿತರೂ ಬಸ್‍ನ ಟಾಪ್ ಮೇಲೆ ಕೂರುವ ಆಸೆ ಹೆಚ್ಚಾಗಿ ಮೇಲೇರಿದೆವು. ನಿರ್ವಾಹಕನೂ ಉತ್ಸಾಹದಿಂದ ನಮ್ಮ ಜೊತೆ ಬಂದು ಕುಳಿತರು. ಬಾಬಾ ಬುಡನ್‍ಗಿರಿ ತಲುಪಿ, ಗಾಳಿಕೆರೆಯತ್ತ ಮಾರ್ಗದಲ್ಲಿ ನಡೆಯುತ್ತಾ ಸಾಗಿ ಅಲ್ಲಿ ಬುತ್ತಿ ತಿಂದೆವು. ವಾಪಾಸ್ ಬಾ.ಬಾ.ಬು ಗೆ ಬಂದು ಖಾಲಿ ಇದ್ದ ಬಸ್ ಹತ್ತಿ ಸೀಟಲ್ಲಿ ಕುಳಿತಾಗ ಮತ್ತೆ ಮೇಲೆ ಕೂರುವ ಇಚ್ಛೆ ಬಲವಾಗತೊಡಗಿತು. ಬೇರೆ ಬಸ್ಸಾದ್ದರಿಂದ ಬಾಯ್ಮುಚ್ಚಿ ಕೂತರೂ ತಡೆಯದೇ ಕೊನೆಗೆ ನಿರ್ವಾಹಕನನ್ನು ಕೇಳಿದಾಗ ಧಾರಾಳವಾಗಿ ಮೇಲೇರಿ ಎಂಬ ಪರವಾನಗಿ ಸಿಕ್ಕಿದ್ದೇ, ಕೋತಿಗಳಂತೆ ಮೇಲೇರಿದೆವು. ಇನ್ನೂ ಮೂರು ಜನ (ಬೆಂಗಳೂರಿನವರೆ) ನಮ್ಮ ಜೊತೆ ಮೇಲೇರಿದರು.

ಚಿಕ್ಕಮಗಳೂರು ತಲುಪಿದಾಗ ಅಯ್ಯೋ ಅನಿಸಿತು. ಪೆಟ್ರೋಲ್ ಬಂಕ್ ಬಳಿ ಮೇಲಿಂದ ಕೆಳಗಿಳಿದು ಮತ್ತೆ ಬಸ್ಸೊಳಗೆ ಬಂದಾಗ ಹವಾನಿಯಂತ್ರಣ ಕೋಣೆಯಿಂದ ಹೊರ ಬಂದಂಥಾ ಚಡಪಡಿಕೆ.

ಚಿಕ್ಕಮಗಳೂರಿನಲ್ಲಿ ಎಲ್ಲಿ ಒಬ್ಬರನ್ನೊಬ್ಬರು ಪರಿಚಯಿಸಿಕೊಂಡೆವೋ ಅಲ್ಲೇ ಕುಳಿತು ಮತ್ತೆ ಒಂದು ಸಭೆ ನಡೆಸಿ, ಊರು ಸುತ್ತಲು ಹೋದೆವು. ಅನುರಾಧ ಕಾಫಿ ಪುಡಿ, ಶೋಭ ಕೃಷ್ಣಮೂರ್ತಿ ಮಗಳಿಗೆ ಆಟಿಕೆ, ಹೀಗೆ ಖರೀದಿ ಮುಗಿಸಿ ಅಲ್ಲಿಂದ ಕಾಮತ್ ಹೋಟೇಲ್ ತಲುಪಿ ರಾತ್ರಿಯ ಊಟ ಮಾಡಿದೆವು. ತಿರುಗಿ ಬಸ್‍ಸ್ಟಾಂಡ್‍ಗೆ ಬಂದು ಹೋಟೇಲ್‍ನಲ್ಲಿಟ್ಟಿದ್ದ ಬ್ಯಾಗ್‍ಗಳನ್ನು ತೆಗೆದುಕೊಂಡು ಬಸ್ ಹತ್ತಿದೆವು. ಬಸ್ಸ್‍ನಲ್ಲಿ ಕಿರಿಚಾಡುತ್ತಾ, ನಗುತ್ತಾ, ನಿರ್ವಾಹಕನ ಬಳಿ ಬೈಸಿಕೊಂಡು, ಜಾಣಮಕ್ಕಳಂತೆ ನಿದ್ದೆ ಮಾಡಿ, ಬೆಳಗ್ಗೆ ಬೆಂಗಳೂರು ತಲುಪಿ, ಸುಂದರವಾದ ಕನಸು ಕಳೆಯಿತೆಂಬಂತೆ ಎದ್ದೆವು.

6 comments:

bhadra said...

ಓದುತ್ತಿದ್ದರೆ ಓದುತ್ತಲೇ ಇರಬೇಕೆನಿಸುತ್ತದೆ. ಇಷ್ಟು ಬೇಗ ಮುಗಿಸಿಬಿಟ್ಟಿರಾ? ಎರಡೇ ದಿನಗಳ ಚಾರಣಾನೇ? ನಿಸರ್ಗವನ್ನೂ ಅನಂದಿಸಿದ ಅನುಭವಗಳನ್ನು ಇನ್ನೂ ಸ್ವಲ್ಪ ವಿವರಿಸಿ. ಓದಬೇಕೆನ್ನುವ ಹಂಬಲ ಹೆಚ್ಚಾಗುತ್ತಿದೆ.

ಚಾರಣದ ಬಗ್ಗೆ ಮೂಗು ಮುರಿಯುವ ನನಗೆ ಹೋಗಬೇಕೆಂಬಾಸೆ.

ಒಳ್ಳೆಯ ಲೇಖನ.

Annapoorna Daithota said...

ತುಂಬಾ ತುಂಬಾ ಧನ್ಯವಾದಗಳು ಸರ್....

Susheel Sandeep said...

sooopar..navu muLLayyanagirige 2 vaaragala hiMde hOgiddu baMdevu..nimma lEKana nODi mattomme hOgi baMda anuBavavAytu :)

Annapoorna Daithota said...

ಧನ್ಯವಾದಗಳು ಸುಸಂಕೃತ....
ಹೌದು... ಮುಳ್ಳಯ್ಯನಗಿರಿಯ ಸೌಂದರ್ಯವೇ ಅಂತಿದೆ.... [:)]

Manjunatha Kollegala said...

ಅನ... ನಿಮ್ಮ ಶೈಲಿ ತುಂಬ ಸುಂದರವಾಗಿದೆ. ಚಾರಣದ ನಿರೂಪಣೆ ತುಂಬಾ ಖುಶಿ ಕೊಟ್ಟಿತು

Annapoorna Daithota said...

ಧನ್ಯವಾದಗಳು ಮಂಜು....