Monday, October 09, 2006

ಹೀಗೊಂದು ಭಾನುವಾರ


೦೧/೦೮/೦೪.

ಬೆಳಗ್ಗೆ ೭.೦೦ ಘಂಟೆಗೆ, ಡೀನ್, ಮಯೂರ್, ಬಾಲ್‍ರಾಜ್ ಶಾಂತಲಾ ಸಿಲ್ಕ್ ಹೌಸ್ ಹತ್ತಿರ ಭೇಟಿಯಾಗಿ, ಶಿವೂಗೆ ಕಾಯುತ್ತಾ, ೭.೨೦ಕ್ಕೆ ಬಂದ ಲೇಟ್ ಲತೀಫ್ ಜೊತೆ ಹೊರಟು, ಮೈಸೂರ್ ರಸ್ತೆಯಲ್ಲಿ ಕಾಯುತ್ತಿದ್ದ ನನ್ನನ್ನೂ ಕಾರಲ್ಲಿ ತುಂಬಿಕೊಂಡು - ರಾಮನಗರದ ಕಡೆ ಧಾವಿಸಿದೆವು.

ಕಾಮತ್ ಲೋಕರುಚಿಯಲ್ಲಿ ರುಚಿಯಾದ ಕೊಟ್ಟೆ ಇಡ್ಲಿ, ಮಸಾಲೆದೋಸೆ, ಖಾಲಿ ದೋಸೆ - ಖಾಲಿ ಮಾಡಿ, ಕಾಫಿ ಕುಡಿದು, ಮತ್ತೆ ರಾಮನಗರದತ್ತ ಅರ್ಧ ಕಿಲೋಮೀಟರ್ ಬಂದು ಕನಕಪುರ ಕಡೆಯ ರಸ್ತೆಯಲ್ಲಿ ಬಲಕ್ಕೆ ತಿರುಗಿದೆವು. ಮೊದಲು ಕೆ.ಪಿ.ದೊಡ್ಡಿ, ನಂತರ ಕೈಲಾಂಚ. ಅಲ್ಲಿಂದ ಹೊಳೆ ದಾಟಿ ಹೋಗುವ ಮಾರ್ಗದಲ್ಲಿ ಕಾರು ಹೋಗುವುದು ಕಷ್ಟ ಎಂದು ಸುಮಾರು ೩ ಕಿ.ಮೀ. ಸುತ್ತು ಹಾಕಿ ಬೆಟ್ಟದ ತಳದಲ್ಲಿರುವ ಊರು ತಲುಪಿದೆವು. ಬೆಟ್ಟಕ್ಕೆ ಮಾರ್ಗವಿದೆ, ಆದರೆ ಭೂ ಕುಸಿತದಿಂದ ಬಂಡೆಗಳು ಬಿದ್ದು ಅಡಚಣೆ ಉಂಟಾಗಿದೆ. ಸ್ವಲ್ಪ ದೂರ ಕಾರ್ ಕೊಂಡೊಯ್ದ ಮಯೂರ್ ಒಂದು ಕಡೆ ನಿಲ್ಲಿಸಿ ನಂತರ ಎಲ್ಲರೂ ಜೊತೆಗೆ ಬೆಟ್ಟ ಏರಿಲಾರಂಭಿಸಿದೆವು. ನಂದಿಯ ಒಂದು ಬೃಹತ್ ವಿಗ್ರಹದ ಪಕ್ಕ ನಿಂತುಕೊಂಡು ಫೋಟೋ ಹೊಡೆದು, ಪ್ರಕೃತಿ ಸೌಂದರ್ಯ ನೋಡುತ್ತಾ ಕುಳಿತು ಪುನಹ ಏರಲಾರಂಭಿಸಿದೆವು. ನಿಜಕ್ಕೂ ಚಮತ್ಕಾರವೆನಿಸುವಂತೆ ಬಂಡೆಗಳ ನಡುವೆ ಗುಹೆಯಂಥಾ ಜಾಗದಲ್ಲಿ ನುಸುಳಿ ಕತ್ತಲಲ್ಲಿ ತಡಕಾಡುತ್ತಾ, ಮುಂದೆ ಕಾಣುವ ಸೂರ್ಯನ ಕಿರಣಗಳನ್ನು ನೋಡಿ ದಾರಿಯ ಗುರುತು ಹಿಡಿದು (ಬಹಳ ಕಷ್ಟವೇನಿಲ್ಲ) ಹೊರ ಬಂದು, ಪುನಹ ಕಡಿದಾದ ಜಾಗದಲ್ಲಿ ಹೌದೋ ಅಲ್ಲವೋ ಎಂಬಂತಿರುವ ಮೆಟ್ಟಲೇರಿ, ಆಂಜನೇಯನ ಗುಡಿ ಬಳಸಿ ಮತ್ತೂ ಮೇಲೇರಿದೆವು. ಮೇಲ್ಗಡೆ ಒಂದು ಮಂಟಪ ಮತ್ತು ದೇವರಿಲ್ಲದ ಗುಡಿ (ಇನ್ನೂ ಅಭಿವೃದ್ಧಿಯಲ್ಲಿದೆ). ಅಲ್ಲೊಂದು ಪುಟ್ಟ ಕೆರೆ ಇದೆ, ಗಾಳಿಗೆ ಪಾಚಿಯೆಲ್ಲಾ ಒಂದೇ ಕಡೆ ಸೇರಿ ನೋಡಲು ಬಹಳ ಸುಂದರವಾಗಿತ್ತು.

ಬಾಲ್‍ರಾಜ್ ಬೆಳಗಿನಿಂದ ಬೆದರಿಸುತ್ತಿದ್ದ ಕ್ಷಣ ಬಂದೇ ಬಿಟ್ಟಿತು. ರಾಪ್ಲಿಂಗ್ ಮಾಡುವುದು ಮೊದಲಲ್ಲದಿದ್ದರೂ, `ಸ್ಟಾಮಕ್ ರಾಪ್ಲಿಂಗ್' ಮೊದಲನೆ ಅನುಭವ. ಮಾಮೂಲು ರಾಪ್ಲಿಂಗ್‍ನಲ್ಲಿ ಭೂಮಿಗೆ ಬೆನ್ನು ಮಾಡಿಕೊಂಡು ಬಂಡೆ ಇಳಿದರೆ, ಸ್ಟಾಮಕ್ ರಾಪ್ಲಿಂಗ್‍ನಲ್ಲಿ ಭೂಮಿಗೆ ಮುಖ ಮಾಡಿ, ಅಂದರೆ, ಹೊಟ್ಟೆಗೆ ಹಗ್ಗ ಕಟ್ಟಿಕೊಂಡು, ನೆಲದ ಮೇಲೆ ನಡೆಯುವಂತೆ ಬಂಡೆ ಇಳಿಯಬೇಕು. ನನ್ನಿಂದ ಸಾಧ್ಯವೇ ಎನಿಸುತ್ತಿದ್ದುದು ಮಾಡುತ್ತಿರುವಾಗ ಇಷ್ಟೇನಾ ಎನ್ನಿಸಿತು. ಎಲ್ಲರೂ ರಾಪ್ಲಿಂಗ್ ಮಾಡಿದ ನಂತರ ಅಲ್ಲಿಂದ ಹೊರಟು ಇಳಿದು ಕಾರಿಗೆ ಬಂದು, ಹಳ್ಳಿಯಲ್ಲಿ ರೇಷ್ಮೆ ಗೂಡು ನೋಡಿ, ಪುನಹ ಕಾಮತ್ ಲೋಕರುಚಿಗೆ ಬಂದೆವು. ಅಲ್ಲಿ ಜೋಳದ ರೊಟ್ಟಿ, ಎಣ್ಣೆಗಾಯಿ ತಿಂದಿದ್ದೇ ತಿಂದಿದ್ದು. ಅನ್ನ ಸಾಂಬಾರ್ ಉಂಡಿದ್ದೇ ಉಂಡಿದ್ದು !!

ಗಣೇಶಾ ನಿನ್ನ ಮಹಿಮೆ ಅಪಾರ, ನಿನ್ನ ಮೂರ್ತಿಗಳದು ವಿಚಿತ್ರ ವ್ಯಾಪಾರ. ಒಬ್ಬ ಇಪ್ಪತ್ತೈದು ಹೇಳಿದರೆ ಇನ್ನೊಬ್ಬ ಹದಿನೈದು ಹೇಳಿ ಹತ್ತಕ್ಕೆ ಕೊಡುವ ವ್ಯವಹಾರ!! ಜಾನಪದ ಲೋಕ, ಲೋಕರುಚಿ ದ್ವಾರದಲ್ಲಿ ಮಾರುತ್ತಿದ್ದ ಮಣ್ಣಿನ ದೊಡ್ಡ / ಪುಟ್ಟ ಮೂರ್ತಿಗಳು (ಸಂಗೀತ ಕಛೇರಿ ಮಾಡುವ ಗಣೇಶ, ಡ್ಯಾನ್ಸ್ ಮಾಡುವ ಗಣೇಶ, ಇಲಿ ಮೇಲೇರಿ ಟ್ರೆಕ್ಕಿಂಗ್ ಹೊರಟಿರುವ ಗಣೇಶ ಮುಂತಾದುವು) ತುಂಬಾ ಮುದ್ದೆನಿಸಿದುವು. ಅಂತೆಯೇ ಬೇಕಾದುದನ್ನು ಖರೀದಿಸಿ, ಹೊರಟು ರಾಮಗಿರಿ ಬೆಟ್ಟದ ತಪ್ಪಲಿಗೆ ಬಂದೆವು.

ಅಹಹಾ! ಮಕ್ಕಳಂತೆ ಬಂಡೆ ಮೇಲೆ ಜುರ್‍ರ್‍ ಎಂದು ಜಾರುತ್ತಾ ಜಾರುಬಂಡೆ ಆಟ ಆಡಿದೆವು.

ಬಾಲ್‍ರಾಜ್ ನಮ್ಮನ್ನು ಒಂದು ರೀತಿ `ಮಡಿ' ಮಾಡಲೇ ಬೇಕು ಎಂದು ನಿರ್ಧರಿಸಿದ ಕಾರಣ ಯಾರೂ `ಟ್ರಸ್ಟ್ ಫಾಲ್' ನ ಅನುಭವದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗಲಿಲ್ಲ. `ನಾಲ್ಕು ಜನ, ಇಬ್ಬರಾದ ಮೇಲೆ ಇಬ್ಬರಂತೆ, ಕೈ ಕೈ ಗಟ್ಟಿಯಾಗಿ ಹಿಡಿದುಕೊಂಡು ನಿಂತರೆ, ಆ ಎತ್ತರದಿಂದ ಸ್ವಲ್ಪ ಮೇಲೆ ಇನ್ನೊಬ್ಬ ನೇರವಾಗಿ ನಿಂತುಕೊಂಡು ಕಾಲುಗಳನ್ನು ಮಡಚದೆ, ಹಿಂದಕ್ಕೆ ಬೀಳಬೇಕು, ಇದು `ಫಾಲ್'. ಕೆಳಗೆ ನಿಂತಿರುವ ನಾಲ್ವರು ಆತನನ್ನು ಕೈಗಳ ಉಯ್ಯಲೆಯಲ್ಲಿ ಹಿಡಿದು ನೆಲಕ್ಕೆ ಬೀಳದಂತೆ ನೋಡಿಕೊಳ್ಳುತ್ತಾರೆ. ಇದೇ `ಟ್ರಸ್ಟ್'. ನಮ್ಮ ಜೊತೆಗಿರುವವರ ಮೇಲಿರುವ ನಂಬಿಕೆಯೇ ನಮಗೆ ಹಿಂದೆ ಬೀಳಲು ಕೊಡುವ ಧೈರ್ಯ'. (ಒಮ್ಮೆ ಸ್ವಲ್ಪ ಎತ್ತರದಲ್ಲಿ ನಿಂತುಕೊಂಡು, ನೆಲದಲ್ಲಿ ಹಾಸಿಗೆ ಹಾಸಿ, ನೇರವಾಗಿ ನಿಂತು ಹಿಂದೆ ಬೀಳಲು ಪ್ರಯತ್ನಿಸಿ, ಅಷ್ಟು ಸುಲಭವಿಲ್ಲ; ನಮ್ಮ ಅರಿವು ಅಷ್ಟು ಸುಲಭವಾಗಿ ನಮ್ಮನ್ನು ಬೀಳಲು ಬಿಡುವುದಿಲ್ಲ...)

ಸುಮಾರು ೨೫೦ - ೩೦೦ ಮೆಟ್ಟಿಲುಗಳನ್ನೇರಿ ಪಟ್ಟಾಭಿರಾಮ ದೇವರ ದೇವಸ್ಥಾನಕ್ಕೆ ಬಂದೆವು. ಪಕ್ಕದಲ್ಲಿ ಒಂದು ಸುಂದರವಾದ ಕೊಳ ಇದೆ. ಅದು ಒಂದು ನದಿಯ ಉಗಮ ಸ್ಥಾನ ಎಂದೂ ಹೇಳುತ್ತಾರೆ.

ಓ! ಬಾಲ್‍ರಾಜ್ ನಮ್ಮನ್ನು ಬಿಡುವಂತೆ ಕಾಣುತ್ತಿಲ್ಲ. ಮರಕ್ಕೆ ಹಗ್ಗ ಸುತ್ತಿ ಒಂದು ತುದಿಯನ್ನು ತನ್ನ ಕೈಲಿ ಹಿಡಿದು ಇನ್ನೊಂದು ತುದಿಯನ್ನು ನಮ್ಮ ಸೊಂಟಕ್ಕೆ ಕಟ್ಟಿ ಸುಮಾರು ೮ / ೧೦ ಅಡಿ ಮೇಲೇರಿಸಿ, ಕೆಳ ಹಾರು ಎಂದರು. ಜೊತೆಗೆ ಹಗ್ಗವನ್ನು ಕೈಯಲ್ಲಿ ಹಿಡಿಯಬಾರದೆನ್ನುವ ಬೆದರಿಕೆ ಬೇರೆ! ಮೇಲಿಂದ ಕೆಳ ಹಾರಿದಾಗ ಅದು ಹೇಗೋ ಕೈಗಳು ಹಗ್ಗವನ್ನು ಹಿಡಿದರೂ, ಆಗುವ ಅನುಭವ ನಿಜಕ್ಕೂ ಅದ್ಭುತ! ರೋಮಾಂಚಕ!

ಸರಿ, ಕತ್ತಲಾಯಿತು ಇನ್ನೇನು, ಪುನಹ ಮೆಟ್ಟಿಲುಗಳನ್ನಿಳಿದು ಕಾರು ನಿಲ್ಲಿಸಿದ್ದಕ್ಕೆ `ಪಾರ್ಕಿಂಗ್ ಫೀಸ್' ಕೊಟ್ಟು ಮತ್ತೆ ಬೆಂಗಳೂರಿಗೆ ಹೊರಟೆವು......

4 comments:

ಶ್ರೀನಿಧಿ.ಡಿ.ಎಸ್ said...

hosadu enaadroo bareeri madam!

Annapoorna Daithota said...

ಇನ್ನೂ ಕೆಲವು ಹಳೆಯ ನೆನಪುಗಳನ್ನು ಇಲ್ಲಿ ತುಂಬಿಸಿದ ನಂತರ ಹೊಸದನ್ನು ಹಾಕುತ್ತೇನೆ...

Anonymous said...

ಸೊಗಸಾಗಿ ಚಿತ್ರಿಸಿದ್ದಿರಿ ನಿಮ್ಮ ಚಾರಣವನ್ನು..ಇಷ್ಟು ಹತ್ತಿರದಲ್ಲಿ ಇಷ್ಟೆಲ್ಲ ಜಾಗಗಳಿವೆ ಅಂತ ಗೊತ್ತಿರಲಿಲ್ಲ ... ಒಮ್ಮೆ ನೋಡಬೇಕೆನಿಸುತ್ತಿದೆ ಈಗ...

bhadra said...

ಹಗ್ಗ ಕಟ್ಟಿಕೊಂಡು ಬೀಳುವುದರ ಬಗ್ಗೆ ತಿಳಿದಿರಲಿಲ್ಲ. ಅನುಭವ ಲೇಖನ ಬಹಳ ಸೊಗಸಾಗಿದೆ. ನಿಮ್ಮ ಖಜಾನೆಯಲ್ಲಿ ಇನ್ನೂ ಏನೇನಿದೆಯೋ ನೋಡುವ ಕುತೂಹಲ.