Monday, November 13, 2006

ಬೆಂಗಳೂರಿನಿಂದ ಬಂಡೀಪುರಕ್ಕೆ



ರಾತ್ರೆ ೮ ಘಂಟೆಗೆ ತ್ರಿಶೂರ್ ಬಸ್ಸಲ್ಲಿ ಕೂತ ಅದಿತ್, ಡೀನ್, ರಾಜೇಶ್ ಹಾಗೂ ನಾನು ನಿರ್ವಾಹಕನ ಬೈಗುಳ ತಿನ್ನುತ್ತಾ, ಇನ್ನೂ ತಲುಪದ ಹಿಮಾನಿಗಾಗಿ ಕಾಯುತ್ತಾ........

೮.೧೫...... ಸರಿ, ಹಿಮಾನಿ ಬಂದ್ಲು, ಬಸ್ ಹೊರಡ್ತು, ವಾವ್!!!!

ಮೈಸೂರು - ನಂಜನಗೂಡು - ಗುಂಡ್ಲುಪೇಟೆ. (೨೦೦ ಕಿ.ಮೀ.), ರಾತ್ರೆ ೧೨.೧೫, ಬಸ್ಸಿಳಿದು, ಕ್ಯಾಪ್ ಬಸ್ಸಲ್ಲೇ ಮರೆತ ರಾಜೇಶ್‍ನ ಪ್ರಲಾಪ ಕೇಳುತ್ತಾ, ಗುಂಡ್ಲುಪೇಟೆಯಿಂದ ಟ್ರಕ್ ಅಥವಾ ಬಸ್ಸು ಹತ್ತಿ ಬಂಡಿಪುರಕ್ಕೆ ಹೋಗೋಣ ಎಂದು ಮುಂದೆ ಸರ್ಕಲ್ ಹತ್ರ ಬಂದೆವು. ಅಲ್ಲಿ ಕೆಲವರು ಈ ರಾತ್ರಿಯಲ್ಲಿ ಟ್ರಕ್‍ನಲ್ಲಿ ಹೋಗುವುದು ಅಪಾಯ, ಬಸ್ಸೂ ಈಗ ಇಲ್ಲ, ಎರಡು ಘಂಟೆ ಮೇಲೆ ಎಂದಾಗ ಪುನಹ ತಿರುಗಿ ವಸತಿ ಹುಡುಕುತ್ತಾ ಬಂದು `ತ್ರಿಶೂಲ್ ಲಾಡ್ಜ್' ನಲ್ಲಿ ರೂಮ್ ಮಾಡಿ ಮಲಗಿದ್ದಾಯ್ತು. ಬೆಳಗ್ಗೆ ೫ ಘಂಟೆಗೆ ಎದ್ದು ನಿತ್ಯ ಕರ್ಮಗಳನ್ನು ಮುಗಿಸಿ, ರೂಮ್ ಬಾಡಿಗೆ ಚುಕ್ತಾ ಮಾಡಿ ಗುಂಡ್ಲುಪೇಟೆ ಸರ್ಕಲ್ - ಅಂದ್ರೆ ಊಟಿ, ಕ್ಯಾಲಿಕಟ್ ಜಂಕ್ಷನ್‍ಗೆ ಬಂದು ಬಸ್ಸಿಗಾಗಿ ಕಾದು, ೬.೩೦ ಗೆ ತಮಿಳುನಾಡು ಬಸ್ಸು ಬಂತು. `ಹಂಗಳ' ದಾಟಿದ ಮೇಲೆ ಒಂದು ಕಮಾನು ಕಂಡಿತು, ಅದೇ ಹಿಮವದ್‍ಗೋಪಾಲ ಸ್ವಾಮಿ ಬೆಟ್ಟಕ್ಕೆ ದಾರಿ.

ಬಂಡಿಪುರ ತಲುಪಿ ಅಲ್ಲಿ ವೈಲ್ಡ್ ಲೈಫ್ ಸಾಂಕ್ಚುರಿ ರಿಸೆಪ್ಯನ್‍ನಲ್ಲಿ ರಾಜೇಶ್ ಏನೋ ಮಾತಾಡಿದ್ರು. ನಂತರ ಸೆಬಾಸ್ಟಿಯನ್ ಕ್ಯಾಂಟೀನ್‍ಗೆ ಬಂದು, ಉಪ್ಪಿಟ್ಟು ತಯಾರು ಮಾಡಿಸಿ ತಿಂದು, ೯.೦೦ ಘಂಟೆಗೆ ಟ್ರೆಕ್ ಮಾಡಲು ಪರವಾನಿಗೆ ಪಡೆದು, ದುಡ್ಡು ಕಟ್ಟಿ (ಎರಡು ದಿನ ಟ್ರೆಕ್, ಗೈಡ್ ಚಾರ್ಜ್, ಆನ್ಟಿ ಪೋಚರ್ ಕ್ಯಾಂಪ್ ಸ್ಟೇ ಮುಂತಾದುವಕ್ಕೆ). ೯.೩೦ ಕ್ಕೆ ನಮ್ಮ ಚಾರಣ ಸುರು. ಕಾಡು ದಾರಿಯಲ್ಲಿ, ಮಂಜುನಾಥ್ (ಗೈಡ್) ನೇತೃತ್ವದಲ್ಲಿ ನಡೆಯಲಾರಂಭಿಸಿದೆವು. ಜಿಂಕೆಗಳು ನಮ್ಮನ್ನು ಕಂಡು ನಾಗಲೋಟದಲ್ಲಿ ಓಡುತ್ತಿದ್ದುವು, ಕೆರೆ ಪಕ್ಕದಲ್ಲಿ ಹುಲಿಯ ಹೆಜ್ಜೆಗಳನ್ನು ನೋಡಿ ಉದ್ವೇಗಗೊಂಡೆವು. ಹಾಗೇ ಮುಂದೆ ನಡೆಯುತ್ತಾ, ೩.೫೦ ಕಿ.ಮೀ ಆದ ಮೇಲೆ ಮೂಲಾಪುರ ಬೆಟ್ಟ.

ಹೇ!!!!!! ಕಾಡು ಕೋಣ!!! ಅಬ್ಬಾ ಅದೇನು ಗಾತ್ರ ಅದರದು, ಅದೇನು ಗಾಂಭೀರ್ಯ, ನಾವು ಬಂದುದು ಕಿರಿಕಿರಿಯಾದಂತೆನಿಸಿ, ತನ್ನ ಆರಾಮದ ಮೆಲುಕನ್ನು ಬಿಟ್ಟೆದ್ದು, ನಮ್ಮತ್ತ ತಿರು ತಿರುಗಿ ನೋಡುತ್ತಾ ಸಂಶಯದ ದೃಷ್ಟಿ ಬೀರುತ್ತ ಮುಂದುವರಿದ ಮೇಲೆ, ನಾವು ಮುಂದುವರಿದೆವು. ಬೆಟ್ಟ ಇಳಿದು, `ಮೋಯರ್ ಗೊರ್ಜ್ ವ್ಯೂ' ತಲುಪಿದೆವು ಮಧ್ಯಾ‍ಹ್ನ ಎರಡು ಘಂಟೆಗೆ (೮.೪೦ ಕಿಮೀ.). ನಮ್ಮ ಕಾರ್ಯಕ್ರಮ ಪಟ್ಟಿಯಲ್ಲಿ ಮೋಯರ್ ನದಿಗಿಳಿದು ಪುನಹ ಮೇಲೆ ಹತ್ತುವುದಿತ್ತು ಆದರೆ ಸಮಯದ ಅಭಾವದಿಂದ, ಬರೀ ವ್ಯೂ ಪಾಯಿಂಟ್‍ನಲ್ಲಿ ನಿಂತು ನೋಡಿದೆವು. ಸುಂದರವಾಗಿತ್ತು ಆ ನೋಟ. ಸೆಬಾಸ್ಟಿಯನ್ ಕಟ್ಟಿ ಕೊಟ್ಟ ಊಟ ಮಾಡಿ ಸ್ವಲ್ಪ ಹೊತ್ತು ಮಲಗಿ, ಕೂತು, ಆಯಾಸ ಪರಿಹರಿಸಿಕೊಂಡು (೩.೧೫) ಪುನಹ ನಡೆಯಲಾರಂಭಿಸಿ, ಮುಂದುವರಿದಂತೆ, ಕ್ಯಾಂಪ್ ಹತ್ತಿರ ನಾಲ್ಕು ಆನೆಗಳನ್ನು ನೋಡಿದೆವು. ಬಂಧನದಲ್ಲಿರುವ ಪ್ರಾಣಿಗಳನ್ನು ನೋಡುವುದಕ್ಕೂ, ಸ್ವಚ್ಛಂದವಾಗಿರುವ ಪ್ರಾಣಿಗಳನ್ನು ನೋಡುವುದಕ್ಕೂ ಬಹಳ ವ್ಯತ್ಯಾಸವಿದೆ.

೪.೩೦ ಕ್ಕೆ `ವಳಕಲ್ಲರೆ' ಆನ್ಟಿ ಪೋಚರ್ ಕ್ಯಾಂಪ್. (ಒಂದು ಶೆಡ್ಡ್ ಇದ್ದು, ಸುತ್ತ ಸುಂದರವಾದ ಹೂದೋಟ, ಪಪಾಯ ಗಿಡಗಳು, ಒಂದು ಬೋರ್‍ವೆಲ್, ಸುತ್ತಲೂ ಆನೆ ಬರದಂತೆ ಟ್ರೆಂಚ್. ಸ್ವಲ್ಪ ದೂರದಲ್ಲಿ ಒಂದು ನೀರಿನ ಹೊಂಡವಿದೆ). ಅರಣ್ಯ ಇಲಾಖೆಯಿಂದ ಯಾರಾದರೂ ವಾರವಿಡೀ ಇಲ್ಲಿರುತ್ತಾರೆ, ಪ್ರಾಣಿಗಳ ಸಂರಕ್ಷಣೆಗೆ.

ನಮ್ಮಂತೆಯೇ ಚಾರಣ ಬಂದ, ಆದರೆ ಒಂಭತ್ತನೇ ಸಲ ಬರುತ್ತಿರುವ ಶ್ರೀ ಪ್ರಾಣೇಶ್ ರಾವ್, ಬೆಂಗಳೂರು ಮತ್ತು ಶ್ರೀ ನರಸಿಂಹ, ಮೈಸೂರು ಇವರನ್ನು ಇಲ್ಲಿ ಭೇಟಿ ಮಾಡಿದೆವು. ನಮ್ಮಂತೆಯೇ ಪ್ರಾಣಿಗಳ ಬಗ್ಗೆ, ಕಾಡಿನ ಬಗ್ಗೆ ತುಂಬಾ ಕುತೂಹಲ, ಅಭಿರುಚಿ ಇರುವವರು. ಒಂದು ರಾತ್ರೆ ಎಲ್ಲರೂ ನಕ್ಷತ್ರ ವೀಕ್ಷಣೆ, ಪ್ರಾಣಿ ವೀಕ್ಷಣೆ ಮಾಡುತ್ತಾ (೧೦.೩೦ ರವರೆಗೆ), ನಂತರ ನಿದ್ರಾದೇವಿ ಜೊತೆ ಗುದ್ದಾಟ.... ಮರುದಿನ ಬೆಳಗ್ಗೆ ೬.೦೦ ಘಂಟೆಗೆ ಎದ್ದು, ಯಾವುದಾದರೂ ಪ್ರಾಣಿ ಕಾಣಿಸುತ್ತಿದೆಯೇ (ಭಯ, ಕುತೂಹಲದಿಂದ) ಎಂದು ನೋಡುತ್ತಾ ನಿತ್ಯ ಕರ್ಮಗಳನ್ನು ಮುಗಿಸಿಕೊಂಡೆವು. ಬೇಗನೆ ಹೊರಟ ಪ್ರಾಣೇಶ್ ಮತ್ತು ಸಿಂಹ ಅವರಿಗೆ ವಿದಾಯ ಹೇಳಿ, ತಿಂಡಿ ತಿಂದು, ನೀರಿಲ್ಲದೆ ಒಣಗಿದ್ದ `ರೋಲಿಂಗ್ ರಾಕ್' ಜಲಪಾತದ ಜಾಗ ನೋಡಿಕೊಂಡು (೩.೩೦ ಕಿ.ಮೀ), ಲಂಗೂರ್ ಗಳಿಗೆ ಟಾಟಾ ಮಾಡಿಕೊಂಡು, ಮನಸ್ಸಿಲ್ಲದ ಮನಸ್ಸಿನಿಂದ ನಾಗರಿಕತೆಯತ್ತ ಕಾಲೆಳೆದೆವು.

ಅದೋ ಟಾರ್ ರೋಡ್! ನಗರದಲ್ಲಿ ಕಾಣಸಿಗುವ ಕೋತಿಗಳೂ ಕಾಣತೊಡಗಿದುವು. ಛೇ ನಾವು ಮಾರ್ಗ ತಲುಪೇ ಬಿಟ್ಟೆವೇ ಎನ್ನುವ ಕಳವಳ, ನೋವು. ಸರಿ, ಅಲ್ಲೂ ಸ್ವಲ್ಪ ಹೊತ್ತು ಕೂತು, ನಂತರ ಕೆಕ್ಕನಹಳ್ಳ ಚೆಕ್ ಪೋಸ್ಟ್ (ಕರ್ನಾಟಕ - ತಮಿಳುನಾಡು ಗಡಿ) ಹತ್ತಿರ ಬಂದೆವು. ಇನ್ನೇನು, ತಮಿಳುನಾಡಿನೊಳಗೆ ಕಾಲಿಟ್ಟು ವಾಪಾಸಾಗೋಣ ಎಂದು ಹೊರಟಾಗ, ಟ್ರಕ್ ಬಂತು, ಅದರೊಳಗೇರಿ ಮತ್ತೆ ಬಂಡಿಪುರ (೭ - ೮ .೦೦ ಕಿಮೀ) `ರಿಸೆಪ್ಯನ್' ಗೆ ಬಂದು, ಸೆಬಾಸ್ಟಿಯನ್ ಕೈಯ ಅಧ್ಭುತವಾದ ಊಟ ಮುಗಿಸಿ, ಇನ್ನೊಂದು ಚಾರಣದ ಗುಂಪಿಗಾಗಿ ಕಾಯಲಿರುವ ರಾಜೇಶ್‌ನ ಅಲ್ಲೇ ಬಿಟ್ಟು, ತಮಿಳುನಾಡು ಬಸ್ಸೇರಿ, ಮೈಸೂರು.... ನಂತರ ರಾಜಹಂಸವೇರಿ ತಿರುಗಿ ಬೆಂಗಳೂರು.

ಇಲ್ಲಿಗೀ ಕಥೆ ಮುಗಿಯಿತು.......

5 comments:

Anonymous said...

ಮುಕ್ತವಾಗಿ ಪ್ರತಿಕ್ರಿಯಿಸುತ್ತಿರುವೆ. ತಪ್ಪು ತಿಳಿಯಬೇಡಿ. ಅದಕ್ಕಾಗಿ ಮೊದಲೇ ಕ್ಷಮೆ ಯಾಚಿಸುವೆ.

ಬರಹದಲ್ಲಿ ಸ್ವಲ್ಪ ಆತುರತೆ ಇರುವಂತಿದೆ. ಇನ್ನೂ ಮೂರು ಪಟ್ಟು ಹಿಗ್ಗಿಸಬಹುದಂತಹ ವಸ್ತುವಿದು. ನಿಮ್ಮ ರೋಚಕ ಅನುಭವಗಳನ್ನೇ ಪ್ರತ್ಯೇಕವಾಗಿ ಬರೆಯಿರಿ.

ಬಂಡೀಪುರ ಅರಣ್ಯ ಕಾಡೆಮ್ಮೆಗೆ ಪ್ರಸಿದ್ಧವಲ್ಲವೇ?

ಹಿಮವದ್‍ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗಿದ್ದಿರಾ? ಅದೂ ಚಾರಣಕ್ಕೆ ಒಳ್ಳೆಯ ಜಾಗ. ಆ ದೇಗುಲದಲ್ಲಿರುವ ವಿಶೇಷತೆ ಗೊತ್ತಾ? ಒಮ್ಮೆ ನಾನು ಹೋಗಿದ್ದೆ.

ಲೇಖನವನ್ನು ಬಹಳ ಚೆನ್ನಾಗಿ ಬರೆಯುತ್ತಿರುವಿರಿ. ನಿಮಗೆ ಅನುಭವ ಆಗಿರಬಹುದು, ಈಗೀಗ ಹೆಚ್ಚಿನ ಪ್ರಬುದ್ಧತೆ ಕಾಣುತ್ತಿದೆ. ಲೇಖನವನ್ನು ಮತ್ತೊಮ್ಮೆ ಹಿಗ್ಗಿಸಬಹುದಾ ನೋಡಿ? ಇನ್ನೂ ಹೆಚ್ಚಿನ ವಿಷಯ ತಿಳಿಯಲು ನಾನು ಉತ್ಸುಕನಾಗಿರುವೆ.

Annapoorna Daithota said...

ಧನ್ಯವಾದಗಳು ತವಿಶ್ರೀ.....

ಖಂಡಿತಾ ತಪ್ಪು ತಿಳಿಯುವುದಿಲ್ಲ.... ಒರೆ ಹಚ್ಚಿದರೇ ತಾನೆ ಹೊಳಪು ಬರುವುದು.....


ಇನ್ನೂ ಹಿಗ್ಗಿಸಬಹುದೇನೋ..... ಆದರೆ ನನಗೆ ಆ ಸಾಮರ್ಥ್ಯ ಇದೆಯೇ ಎಂದು ಸಂಶಯ....
ನಾನು ಬರೆದಿರುವುದನ್ನು ಮೊದಲು ಓದಿರುವವರೆಲ್ಲಾ, ವಿವರಗಳು ಜಾಸ್ತಿಯಾಯ್ತು, ತುಂಬಾ ಉದ್ದವಾದ ಲೇಖನ ಎಂದೆಲ್ಲಾ ಅಭಿಪ್ರಾಯ ಕೊಟ್ಟಿದ್ದಾರೆ.....

ಹೌದು, ಬಂಡಿಪುರದಲ್ಲಿ ಕಾಡೆಮ್ಮೆ / ಕಾಡುಕೋಣ ತುಂಬಾ ಇವೆಯಂತೆ, ನಮಗೆ ನೋಡ ಸಿಕ್ಕಿದ್ದು ಒಂದೇ ಒಂದು.....

ಹಿಮವದ್‍ಗೋಪಾಲ ಸ್ವಾಮಿ ಬೆಟ್ಟಕ್ಕೆ ಹೋಗಿಲ್ಲ, ಹೋಗಬೇಕೆಂಬ ಆಸೆ ಇದೆ.... ಅಲ್ಲಿಯ ವೈಶಿಷ್ಟ್ಯವೇನು?

ನಿಮ್ಮ ನಿಷ್ಕಲ್ಮಷ ಅಭಿಪ್ರಾಯಗಳಿಗೆ ಬಹಳ ಧನ್ಯವಾದಗಳು....

bhadra said...

ಹಿಮವದ್‍ಗೋಪಾಲ ಸ್ವಾಮಿ ದೇವಸ್ಥಾನದ ಗರ್ಭಗುಡಿಯೊಳಗೆ ಎಂದಿಗೂ ಮಂಜು ಇರುವುದು. ಹವಾನಿಯಂತ್ರಿತ ಕೊಠಡಿಯಂತಿರುವುದು. ಹೊರಗಡೆ ಧಗೆ ಇದ್ದರೂ ಒಳಗೆ ತಂಪು. ಇದೊಂದು ವೈಶಿಷ್ಟ್ಯ. ಅರುಣ ಅವರ ಸ್ನೇಹಿತರಾದ ಶ್ರೀನಿವಾಸ ತೆರಕಣಾಂಬಿಯವರ ಊರಿಗೆ ಇಲ್ಲಿಗೆ ಹತ್ತಿರವಾದದ್ದು. ಅವರಿಗೆ ಇದರ ಬಗ್ಗೆ ಇನ್ನೂ ಹೆಚ್ಚಿನ ಮಾಹಿತಿ ಗೊತ್ತಿದೆ.

ನನ್ನ ಮುಕ್ತ ಪ್ರತಿಕ್ರಿಯೆ ಸ್ವೀಕರಿಸಿದ್ದಕ್ಕೆ ಧನ್ಯವಾದಗಳು. ಯಾರೇನೇ ಹೇಳಲಿ, ಸಂಪೂರ್ಣವಾಗಿ ಲೇಖನವನ್ನು ಬರೆಯಿರಿ. ನಿಮಗೆ ಬರೆಯುವ ಶಕ್ತಿ ಇದೆಯೆಂದು ನನ್ನಲ್ಲಿ ಅಚಲ ನಂಬಿಕೆ. ಹಾಗಾಗಿ ಹೇಳುತ್ತಿರುವುದು. ಮುಂದುವರೆಸಿ.

obbamanushya said...

nimma baravanige sarala sundaravagide. saralateyondige vaicharikate beretiruvadu barahakke mattastu rangu tandidu. bariyuva kaige danavagadirali. baraha yatre munduvareyali

Annapoorna Daithota said...

`Obbamanushya'ge dhanyavadagalu....:)