ನಿನ್ನ ಮನೆಯಲ್ಲಿ ಜಗಳವಿಲ್ಲ
ಸ್ನೇಹದ ಸಿಂಚನವೇ ಎಲ್ಲಾ
ಈರ್ಷ್ಯೆ ಕಡು ದ್ವೇಷವೇ ಇಲ್ಲ
ಪ್ರೀತಿ ಮಮತೆಯೇ ಎಲ್ಲಾ
ಅಲ್ಲಿ ಜಾತಿ ಮತವೆಂಬ ಬೇಧವಿಲ್ಲ
ಮೇಲು ಕೀಳೆಂಬ ತಾರತಮ್ಯವಿಲ್ಲ
ಹಿರಿಯರು ಕಿರಿಯರೆಂದಿಲ್ಲ
ಶೈಶವ ತಾರುಣ್ಯ ಮುದಿತನವಿಲ್ಲ
ಅಲ್ಲಿ ಸಾವು ನೋವುಗಳೇ ಇಲ್ಲ
ದುಗುಡ ದುಃಖ ದುಮ್ಮಾನವಿಲ್ಲ
ನಲಿವು ತುಂಬಿಹುದು ಅಲ್ಲೆಲ್ಲಾ
ಸದಾ ಸ್ವರ ಸರಿಗಮದ ಬೆಲ್ಲ
ಅಲ್ಲಿ ಇರುವುದೆಲ್ಲಾ ಸ್ವಚ್ಛ ಸುಂದರ
ನನಗಿಲ್ಲಿ ಅದೆಲ್ಲ ಇಲ್ಲದ ನಶ್ವರ
ನಾನೇಕೆ ಅಲ್ಲಿಲ್ಲವೆಂದು ತಿಳಿದಿಲ್ಲ
ನಾನೆಂದಲ್ಲಿಗೆ ಬರೆವೆನೆಂಬರಿವೂ ಇಲ್ಲ
ಅಪ್ಪ ಅಮ್ಮ ಈಗಾಗಲೇ ಅಲ್ಲಿರುವರಲ್ಲ
ಅವರು ನನಗೇನೂ ಹೇಳಲೇ ಇಲ್ಲ
ನಾನೀಗ ಬಂದರಲ್ಲಿ ಬಹುಶಃ ಸ್ವಾಗತವಿಲ್ಲ
ಆಹ್ವಾನ ಬರದೇ ಹೋಗುವ ಮಾತೇ ಇಲ್ಲ
No comments:
Post a Comment