Thursday, March 26, 2026

ಶಾಶ್ವತವಲ್ಲ

 

ಉರುಳುವ ಚಕ್ರ ಉರುಳುತ್ತದೆ

ಭಾರ ಬಿದ್ದಲ್ಲಿ ಕುಗ್ಗುತ್ತದೆ 

ಪುನಃ ತಿರುಗಿದಾಗ ಹಿಗ್ಗುತ್ತದೆ 


ಮರದಲ್ಲಿ ಹಣ್ಣು ತುಂಬಿ ತುಳುಕುತ್ತದೆ 

ಅತಿಯಾದಾಗ ಬಾಗುತ್ತದೆ 

ತೂಕ ಕಳೆದಾಗ ತಲೆ ಎತ್ತುತ್ತದೆ 


ಮಳೆಗೆ ಹೊಳೆ ಉಕ್ಕಿ ಹರಿಯುತ್ತದೆ 

ಇಳೆಯ ಬೆಳೆಯನ್ನು ಕೊಚ್ಚಿ ಸೆಳೆಯುತ್ತದೆ 

ಅಬ್ಬರ ನಿಂತಾಗ ಪ್ರಶಾಂತವಾಗುತ್ತದೆ 


ಬದುಕು ಕಷ್ಟಗಳನ್ನು ಕೊಡುತ್ತದೆ 

ತಡೆಯಲಾರದಂತೆ ಕಂಗೆಡಿಸುತ್ತದೆ 

ಸಮಯ ಕಳೆದಾಗ ಸುಖ ನೀಡುತ್ತದೆ 

Wednesday, March 04, 2026

ವೈರುಧ್ಯ

 

ಕೊಟ್ಟಾಗ ಕೈಲಾಸಕ್ಕೇರುತ್ತೆ

ಕೊಡದಿದ್ದಾಗ ಪಾತಾಳಕ್ಕಿಳಿಯುತ್ತೆ

ಬೇಡಿದಾಗ ಬೆಟ್ಟ ಹತ್ತುತ್ತೆ

ಅಸಡ್ಡೆ ಮಾಡಿದಾಗ ಪಟ್ಟ ನೀಡುತ್ತೆ


ಪ್ರಯತ್ನ ಪಟ್ಟಾಗ ದೂರ ಸರಿಯುತ್ತೆ

ನಿರ್ಲಕ್ಷಿಸಿದಾಗ ಹತ್ತಿರ ಬರುತ್ತೆ

ಕಾದಾಗ ಬಾರದೇ ಇರುತ್ತೆ 

ಕಾಯದಿದ್ದರೆ ಕಾಲ ಬಳಿ ಬೀಳುತ್ತೆ


ಹಿಂಬಾಲಿಸಿ ಹೋದರೆ ತಪ್ಪಿ ಹೋಗುತ್ತೆ

ಗಮನ ಕೊಡದಿದ್ದರೆ ತಾನಾಗೇ ಸಿಗುತ್ತೆ

ಆಸೆ ಪಟ್ಟರೆ ನಿರಾಸೆ ಆಗುತ್ತೆ

ನಿರೀಕ್ಷೆ ಮಾಡದಿದ್ದರೆ ಕೈಗೆಟಕುತ್ತೆ

Thursday, February 26, 2026

ಅಮ್ಮ

 

ನೀನು ಹೋದ ಮೇಲೆ ಮತ್ತೆ 

ಬಂದು ನನ್ನ ಗಂಟಲಲ್ಲೇ ಕುಳಿತಿದ್ದೆ

ಮಾತಾಡಲು ಬಾಯಿ ತೆರೆದರೆ 

ಕಣ್ಣೀರು ತರಿಸುತ್ತಿದ್ದೆ 


ಅಡುಗೆಮನೆಯಲ್ಲಿ ಪಾತ್ರೆ ಲೋಟಗಳಲ್ಲಿ 

ಎಲ್ಲೆಲ್ಲೂ ಸದಾ ಕಾಣಿಸಿಕೊಳ್ಳುತ್ತಿದ್ದೆ 

ಏನಾದರೂ ತಿನ್ನ ಹೊರಟರೆ ಗಂಟಲುಬ್ಬಿಸಿ 

ಅಗುಳಗುಳಿಗೂ ನೀರು ಕುಡಿಸುತ್ತಿದ್ದೆ 


ಕಛೇರಿಯಲ್ಲಿದ್ದಾಗ ಆಗಾಗ ಕೈಯಲ್ಲಿ  

ಫೋನ್ ಹಿಡಿಯುವಂತೆ ಮಾಡುತ್ತಿದ್ದೆ 

ವಾಸ್ತವ ನೆನಪಾಗಿ ಫೋನ್ ಬದಿಗಿಟ್ಟು 

ಬಿಕ್ಕಿಬಿಕ್ಕಿ ಅಳುವಂತೆ ಮಾಡುತ್ತಿದ್ದೆ 


ದಾರಿಯಲ್ಲಿ ಸಿಗುತ್ತಿದ್ದ ಆಂಬುಲೆನ್ಸ್ ಗಳ 

ಒಳಗೆ ಕುಳಿತು ಗಾಬರಿ ಹುಟ್ಟಿಸುತ್ತಿದ್ದೆ 

ಒಂದೇ ಉಸಿರಲ್ಲಿ ವಾಹನ ಚಾಲನೆ 

ಮಾಡುವಂತೆ ಮಾಡುತ್ತಿದ್ದೆ 


ಕೆಲ ವರ್ಷಗಳು ಕಳೆದ ಮೇಲೆ 

ಗಂಟಲಿಂದ ಮೆದುಳಿಗೇರಿದೆ 

ಹುಟ್ಟು ಸಾವು ನೋವುಗಳನ್ನು 

ವಿಶ್ಲೇಷಿಸಿ ತಿಳಿಯುವಂತೆ ಮಾಡಿದೆ 


ಅದಾದ ಮೇಲೆ ಕೆಳಗಿಳಿದು ನೀನು 

ನನ್ನ ಹೃದಯದೊಳಗೆ ಕುಳಿತೆ 

ಹೆಜ್ಜೆಹೆಜ್ಜೆಗೂ ಜೊತೆಗೆ ನಡೆಯುತ್ತಾ 

ದಾರಿ ತೋರಿಸುತ್ತಾ ಉಳಿದೆ

Saturday, February 14, 2026

ತುಂತುರು

 

ತುಂತುರಿನ ತೇರಿನಲ್ಲಿ

ಕಂಪನದ ಭೇರಿಯಲ್ಲಿ

ಮಂಪರನು ತೊಡೆದು 

ಸೊಂಪಾಗಿ ನಲಿಯಿತು


ಚುಮುಚುಮು ಚಳಿಯಲ್ಲಿ

ಜುಮುಜುಮು ಮುದದಲ್ಲಿ

ಘಮಘಮ ಮಿಂದು ಮಿನುಗಿ

ಫಳಫಳ ಹೊಳೆಯಿತು


ಸ್ವಾತಂತ್ರ್ಯದ ಕೆಚ್ಚಿನಲಿ

ಅಭ್ಯುದಯದ ಹುಚ್ಚಿನಲಿ 

ಬಾಂಧವ್ಯದ ಅಚ್ಚಿನಲಿ 

ನೆಚ್ಚಿ ಮೆಚ್ಚಿ ಕುಣಿಯಿತು


ಮೌನದ ಮರೆಯಲ್ಲಿ

ಸತ್ಯದ ಒರೆಯಲ್ಲಿ

ನಾಚಿಕೆಯ ಕಣ್ಣಿನಲ್ಲಿ 

ಪ್ರೀತಿ ಹೃದಯದಲ್ಲಿ ಮೆರೆಯಿತು

Saturday, February 07, 2026

ಶ್ರೀಮಾತೆ

 

ಮಾತೆಯ ಮೈ ಮೇಲೆ ಮಣಭಾರ ಚಿನ್ನ 

ಕೇಳುತಿರುವಳು, ಯಾಕೆ ಎಳೆಯುವಿರಿ 

ಮೋಹ ಜಾಲಕ್ಕೆ ಎನ್ನ 


ಇವೆಲ್ಲಾ ಕೇವಲ ನಿಮಗೇ ಚೆನ್ನ 

ನಾನಿದಕೆಲ್ಲ ಅತೀತಳಲ್ಲವೇ

ಅರ್ಥ ಮಾಡಿಕೊಳ್ಳಿ ನನ್ನ 


ನನಗೆ ಬೇಡ ಈ ಸ್ವರ್ಣ, ಅದರ ಬಣ್ಣ 

ನೀವೆನ್ನ ಮಕ್ಕಳು ಇದನಿಟ್ಟುಕೊಳ್ಳಿ

ನಾನೆಡುವೆ ನಿಮ್ಮ ಕಡೆಗೆ ನನ್ನ ಕಣ್ಣ 


ನಡೆದರೆ ಸನ್ಮಾರ್ಗದಲ್ಲಿ ಸಂಪನ್ನ

ತೊಡೆಯುವೆ ಕಷ್ಟ ಕಂಟಕಗಳನ್ನ

ನೀಡುವೆ ಸದಾ ಸೌಭಾಗ್ಯವನ್ನ


ಭಕ್ತಿಯ ಎಣ್ಣೆಯಿಂದ ಉರಿಸಿ

ಅಧ್ಯಾತ್ಮ ಜ್ಞಾನ ದೀಪವನ್ನ 

ಹರಸಿ ಕಾಯುವೆ ನಾ ಸರ್ವರನ್ನ

Wednesday, January 14, 2026

ಮಕರ ಸಂಕ್ರಾಂತಿ


ಹೊಸತು ಹೊಸದಿನ ಸಂಕ್ರಾಂತಿ 

ತೊಡೆದು ನಮ್ಮೆಲ್ಲಾ ಭ್ರಾಂತಿ

ಹೊಸೆದು ನಗುವಿನ ಹೂ ಬತ್ತಿ

ಉರಿಸುವ ನವ ಚೈತನ್ಯ ಶಕ್ತಿ 


ಮಕರ ಸಂಕ್ರಾಂತಿಯ ಶುಭಾಶಯ.

-ಪೂ.

15-01-2026

Sunday, January 11, 2026

ಕೊಂಡಿ

ಮಳೆಗೆ ಒದ್ದೆಯಾದ ಮೈ
ಮುದ್ದೆಯಾದ ಬಟ್ಟೆ
ಗಾಳಿಗೆ ಒಣಗಿದ ಬಟ್ಟೆ
ಬಿಸಿಲಿಗೆ ಬಿಸಿಯಾದ ಮೈ

ಕಾಫಿಯಲ್ಲಿ ಕರಗಿದ ಸಕ್ಕರೆ
ಮನದಲ್ಲಿ ಮೂಡಿದ ಅಕ್ಕರೆ
ಹರಡಿ ಹಂಚಿದಾಗ ಅಕ್ಕರೆ
ಪಾಲಿಗೆ ದೊರಕಿದ್ದು ಸಕ್ಕರೆ 

ಕೊಳದಲ್ಲಿ ಈಜುವ ಮೀನು
ನಿಂತು ಕಾಯುವ ಕೊಕ್ಕರೆ
ಮೀನು ಹಿಡಿಯುವ ಕೊಕ್ಕರೆ
ಸಂತಾನ ಬೆಳೆಸುವ ಮೀನು

ನಮ್ಮೊಂದಿಗೆ ಇರುವುದು ಉಸಿರು 
ಉಸಿರಿದ್ದರೆ ಎಲ್ಲವೂ ಹಸಿರು 
ಉಸಿರಿದ್ದರಷ್ಟೇ ಉಳಿವುದು ಹಸಿರು
ಹಸಿರುಳಿದರಷ್ಟೇ ಉಳಿವುದು ಉಸಿರು