ಮಳೆಯ ಹೆಜ್ಜೆಗಳು ಮೂಡಿದಾಗ
ಮುದದಿ ಮನವು ಹಾಡಿದೆ ರಾಗ
ರಾಚಿದಂಥ ನೀರಿನಲ್ಲಿ ಉಕ್ಕಿ ಹರಿದ
ಹರುಷದಲೆಗೆ ಸಿಕ್ಕಿಕೊಂಡೆ ನಾನು ಈಗ
ಗುಡುಗು ಗುಡುಗಿ ಮಿಂಚು ಬೆಳಗಿ
ಯುಗಳ ಗೀತೆಯ ಮುಗುಳಿನಲ್ಲಿ
ಬಿರಿದು ಜಗದಲರಳಿದ ತಂಪು ಸುರುಳಿ
ತಂದಿತೆಲ್ಲೆಡೆ ಶಾಂತಿ ಮರಳಿ ಹೊರಳಿ
ಗಿಡಗಳಲ್ಲಿ ಮುತ್ತಿನಂತೆ ನಿಂತ ಹನಿಗಳು
ತೊರೆ ಬದಿ ಟೊರಟೊರ ಕಪ್ಪೆ ದನಿಗಳು
ಕೆರೆಯ ಒಳಗಿನ ಮೀನುಗಳ ಗುಂಪು
ಧರೆಯ ಹುಲ್ಲುಗಳ ಒನಪಿನ ಸೊಂಪು
ಗಾಳಿಯಲ್ಲಿ ಗರಿಗೆದರಿದ ಗಾಯನ
ದಾರಿಯಲ್ಲಿ ಹನಿ ಮುತ್ತಿನ ಶಯನ
ಹೃದಯದಲ್ಲಿ ಹಚ್ಚ ಹಸಿರಿನ ನರ್ತನ
ಪಸರಿಸಿದೆ ಮೃದು ಮಧುರ ಸಂವೇದನ

No comments:
Post a Comment