ದಿ. ಶ್ರೀಮತಿ ಸಾವಿತ್ರಿ ಪಿ. ಎಸ್.
ಸ್ನೇಹಮಯಿ, ಸಹೃದಯಿ, ಸುಮನಸಿನ ಸುಂದರಿ. ಆತ್ಮಾಭಿಮಾನಿ, ಶ್ರಮಜೀವಿ.
ಉಬರಡ್ಕ ದಿ.ಶ್ರೀ.ರಾಮಚಂದ್ರ ಭಟ್ ಹಾಗೂ ದಿ.ಶ್ರೀಮತಿ ಲಕ್ಷ್ಮೀ ಯವರ ಹಿರಿಯ ಪುತ್ರಿ. ಖ್ಯಾತ ಪರಿಸರವಾದಿ, ದಿ.ಶ್ರೀ.ಶಂ.ಪಾ. ದೈತೋಟರವರ ಧರ್ಮಪತ್ನಿ.
ಅಪ್ಪನ ಮುದ್ದಿನ, ಅಮ್ಮನ ಕೊಂಡಾಟದ ಮಗಳು. ತಂಗಿ, ತಮ್ಮಂದಿರ ಮಮತೆಯ ಅಕ್ಕಯ್ಯ, ಬಂಧುಗಳ ಪ್ರೀತಿಯ ಸಾವಿತ್ರಕ್ಕಯ್ಯ. ನಾಲ್ಕು ಮಗಳಂದಿರು ಹಾಗೂ ಒಬ್ಬ ಮಗನ ಅಮ್ಮ. ಇಬ್ಬರು ಅಳಿಯಂದಿರು ಮತ್ತು ಒಬ್ಬಳು ಸೊಸೆಯ ಅತ್ತೆ. ಒಬ್ಬ ಮೊಮ್ಮಗ ಹಾಗೂ ಒಬ್ಬಳು ಮೊಮ್ಮಗಳ, ಪ್ರೀತಿಯ ಅಜ್ಜಿ.
ಮದುವೆಯಾಗಿ ಜೀವನ ನಡೆಸಿದ್ದು ದೈತೋಟದ, ತುಂಬು ಕುಟುಂಬದಲ್ಲಿ, ಹಿರಿಯ ಮಗನ ಮಡದಿಯಾಗಿ, ಮನೆಗೆ ಹಿರಿಯ ಸೊಸೆಯಾಗಿ, ಮೈದುನ, ಮೈದಿನಿಯರಿಗೆ ಪ್ರೀತಿಯ ಅತ್ತಿಗೆಯಾಗಿ, ಓರಗಿತ್ತಿಯರಿಗೆ ಅಕ್ಕನಾಗಿ, ಮನೆ ಮಕ್ಕಳಿಗೆ ದೊಡ್ಡಮ್ಮನಾಗಿ, ಅತ್ತೆಯಾಗಿ.
ಮುದ್ದಿನಲ್ಲಿ ಬೆಳೆದಿದ್ದ ಸಾವಿತ್ರಿಗೆ, ಚಿಕ್ಕ ವಯಸ್ಸಿನಲ್ಲೇ ಮದುವೆಯಾದ ಕಾರಣ ಓದನ್ನು ಮುಂದುವರಿಸಲು ಆಗಲಿಲ್ಲ. ಗಂಡನ ಮನೆಯೇ ಬದುಕಿನ ಶಾಲೆ, ಕಾಲೇಜು, ವಿಶ್ವವಿದ್ಯಾನಿಲಯವಾಗಿತ್ತು. ಹುಟ್ಟಿರುವ ಮಕ್ಕಳೇ ಪ್ರಶಸ್ತಿಗಳು ಎಂದುಕೊಂಡಿದ್ದರು. ಮನೆಯ ಪ್ರತಿಯೊಬ್ಬ ಹಿರಿಯರೂ ಶಿಕ್ಷಕರಾಗಿ, ಮಾರ್ಗದರ್ಶಕರಾಗಿ, ಬಂಧುಗಳಾಗಿ ಬದುಕಿನ ಪಾಠ ಕಲಿಸುವುದರೊಂದಿಗೆ, ಜೀವನದ ಮೆಟ್ಟಿಲುಗಳನ್ನು ಹತ್ತಿ ಪ್ರತೀ ಮಜಲು ತಲುಪಲು ಸಹಾಯ ಮಾಡುತ್ತಿದ್ದರು.
ಈಕೆಯದು ಸೌಮ್ಯ ಸ್ವಭಾವ. ತಾನಾಯಿತು, ತನ್ನ ಕೆಲಸವಾಯಿತು ಎಂಬ, ಕಪಟವರಿಯದ ಮೃದು ಮನಸು. ಸುಶ್ರಾವ್ಯ ಕಂಠ, ಪಾದದವರೆಗೂ ಇದ್ದ ನೀಳವೇಣಿ. ರುಚಿಯಾದ ಕೈಯಡುಗೆ. ಮುದ್ದು ಮುಖದ ಮೋಹನಾಂಗಿ. ಮನೆಯ ಇತರ ಮಕ್ಕಳೂ ತನ್ನ ಮಕ್ಕಳೂ ಒಂದೇ ಎನ್ನುತ್ತಿದ್ದ ಜೀವ. ಮಕ್ಕಳಲ್ಲಾಗಲೀ, ತಮ್ಮಂದಿರು, ಮೈದುನಂದಿರಲ್ಲಾಗಲಿ ಬೇಧಭಾವ ತೋರಿದವರಲ್ಲ. ಕೆಡುಕನ್ನು ಮಾಡುವ ಯೋಚನೆಯೂ ಬರುತ್ತಿರಲಿಲ್ಲ. ಎಲ್ಲರಿಗೂ ಒಳ್ಳೆಯದನ್ನೇ ಬಯಸಿದವರು, ಆದ ಅವಮಾನ, ನೋವುಗಳನ್ನು ನುಂಗಿ ಕುಳಿತವರು. ಮಗುವಿನಂಥ ಮುಗ್ಧೆ.
ವಿಷಮ ಪರಿಸ್ಥಿತಿಗಳಲ್ಲಿ ಹೆದರಿದಂತಿದ್ದರೂ, ಚಿಂತೆಯ ಗಂಟನ್ನೇ ತಲೆ ಮೇಲೆ ಹೊತ್ತಿದ್ದರೂ, ಸಮಯ ಬಂದಾಗ ದಿಟ್ಟತನದಿಂದ ನಿಭಾಯಿಸಿದವರು. ಬಂದುದನ್ನೆಲ್ಲಾ ಬಗಲಿಗೆ ಹಾಕಿಕೊಂಡು, ತನ್ನ ಹಣೆಬರಹವನ್ನು ಹಳಿದುಕೊಳ್ಳುತ್ತಿದ್ದರು ಆದರೆ ಜೀವನದಲ್ಲಿ ಕೋಪಗೊಂಡವರಲ್ಲ. ಜವಾಬ್ದಾರಿಯಿಂದ ನುಣುಚಿಕೊಂಡವರಲ್ಲ. ಶಿಸ್ತಿನಿಂದ ಬದುಕಿದವರು. ಒಣಪ್ರತಿಷ್ಠೆಯಿರಲಿಲ್ಲ, ಅಂತಸ್ತಿನ ಕಡೆ ಗಮನವನ್ನೂ ನೀಡುತ್ತಿರಲಿಲ್ಲ.
ಬಿಡುವಿದ್ದಾಗಲೆಲ್ಲಾ ಕಥೆ ಪುಸ್ತಕಗಳನ್ನು ಓದುತ್ತಿದ್ದರು. ತಮ್ಮ ಪುಸ್ತಕಗಳ ಸಂಗ್ರಹವನ್ನು ಆಸ್ತಿಯೆಂದೇ ಪರಿಗಣಿಸಿದ್ದರು. ತನ್ನ ಬಳಿಯಿದ್ದ ಪುಟ್ಟ ರೇಡಿಯೋದಲ್ಲಿ ಮಧ್ಯಾಹ್ನ ಒಂದಷ್ಟು ಹೊತ್ತು ಚಿತ್ರಗೀತೆಗಳನ್ನು ಕೇಳುತ್ತಿದ್ದರು. ಅವುಗಳನ್ನು ಒಂದು ಪುಸ್ತಕದಲ್ಲಿ ಬರೆದಿಡುತ್ತಿದ್ದರು. ಆಗಾಗ ಅವುಗಳನ್ನು ಹಾಡುತ್ತಿದ್ದರು.
ಯಾರು ಯಾವುದೇ ಸಹಾಯ ಕೇಳಿದರೂ ಇಲ್ಲವೆನ್ನುತ್ತಿರಲಿಲ್ಲ, ಎಷ್ಟು ಕೆಲಸಗಳಿದ್ದರೂ ಗೊಣಗುತ್ತಿರಲಿಲ್ಲ. ತನ್ನ ಸಾಮರ್ಥ್ಯದ ಬಗ್ಗೆ ಆಕೆಗೆ ಅರಿವೇ ಇರಲಿಲ್ಲ. ತಾನು ಪೆದ್ದಿ, ಯಾವುದೇ ಪ್ರಯೋಜನಕ್ಕೂ ಬಾರದಂಥವಳು ಎಂದು ಸದಾ ಹೇಳಿಕೊಳ್ಳುತ್ತಿದ್ದವರು.
ಇವರ ಮುಗ್ಧತೆ, ಆಲೋಚನಾ ವೈಖರಿ, ದುಡಿಯುವ ಶಕ್ತಿ, ಪ್ರೀತಿ ತುಂಬಿದ ಮನಸ್ಸು, ಹೃದಯ, ಕೋಟಿ ಕೊಟ್ಟರೂ ಸಿಗಲಾರದು.
❤️
