Monday, September 25, 2006

ತಾ: ೦೨/೦೨/೨೦೦೬ ರಿಂದ ೦೬/೦೨/೨೦೦೬

ರಾತ್ರೆ ೯ ಘಂಟೆಗೆ ಮೆಜೆಸ್ಟಿಕ್ ಬಸ್ ಸ್ಟಾಂಡ್‍ನಿಂದ ಒಟ್ಟು ಹದಿನಾರು ಜನ ಬಸ್ ಹತ್ತಿದೆವು.

ಬೆಳಗ್ಗೆ ೧೦.೨೦ಕ್ಕೆ ಗೋಕರ್ಣ ತಲುಪಿ, ಬಸ್‍ಸ್ಟಾಂಡ್‍ ಹೊಟೇಲಲ್ಲಿ ತಿಂಡಿ, ಊಟ ಮಾಡಿ, ಕೋಟಿತೀರ್ಥದ ಕಡೆಗೆ ನಡೆದು, ಅಲ್ಲಿ ಒಂದು ಸಣ್ಣ ಮೀಟಿಂಗ್ ನಡೆಸಿ, ಕುಡ್ಲೆ ಹಾಗೂ ಓಂ ಬೀಚ್‍ಗೆ ಹೋಗುವ ಹಾದಿಯಲ್ಲಿ ನಡೆದೆವು. ನಮ್ಮ ಜೊತೆ ಜೊತೆಯಲ್ಲೇ ಬೇರೆ ಯಾರೋ ಮೂರು ಮಂದಿ, ಪೆಟ್ಟಿಗೆಗಳನ್ನು ಹೊತ್ತುಕೊಂಡು ಬರುತ್ತಿದ್ದರು. ನೋಡಿದಾಗಲೇ ಗೊತ್ತಾಯ್ತು ಅವರೂ ಒಂ ಬೀಚ್‍ಗೇ ಹೋಗ್ತಾ ಇದಾರೆ ಅಂತ. ಅವರು ಮದ್ಯ, ತಂಪು ಪಾನೀಯಗಳನ್ನು ಹೊತ್ತೊಯ್ಯುತ್ತಿದ್ದರು. ಗೋಕರ್ಣ ಪೇಟೆಯಲ್ಲೂ ಅಷ್ಟೆ, ವಿದೇಶೀಯರು ಏನೇನು ಇಷ್ಟ ಪಡುತ್ತಾರೋ ಅದೆಲ್ಲವೂ ಇತ್ತು. ಅವರಿಗೆ ಇಷ್ಟವಾಗುವಂಥಾ ಉಡುಪುಗಳು, ಸರಗಳು ಇತ್ಯಾದಿ.

ಸುಮಾರು ೧ ಕಿ.ಮೀಯಷ್ಟು ಕಾಲುದಾರಿ ಹಾಗೂ ೧ ರಿಂದ ೨ ಕಿ.ಮೀಯಷ್ಟು ಕಚ್ಛಾ ರಸ್ತೆಯಲ್ಲಿ ನಡೆದು ಹೋದಾಗ ಒಂದು ರಿಸಾರ್ಟ್ ಕಾಣಿಸಿತು ಸಮುದ್ರದಂಡೆಯಲ್ಲಿ. ಬಳಸಿಕೊಂಡು ಬಂದು ಒಂದು ಚಿಕ್ಕ ಅಂಗಡಿಯಲ್ಲಿ ನಿಂಬೆಪಾನಕ ಕುಡಿದು ಕೆಳಗಿಳಿದು ಬೀಚ್‍ಗೆ ಹೋದೆವು. ಮುಂದೆ ಹೋದ ಬಾಲ್‍ರಾಜ್, ಸಂದೀಪ್ ಇಬ್ಬರೂ ನೀರಿಗಿಳಿದಿದ್ದರು. ಸ್ನೇಹಾ ಹಾಗೂ ಮಮತಾ ನೀರಲ್ಲಿ ಕಾಲಾಡಿಸುತ್ತಾ ಕುಳಿತಿದ್ದರು. ಈ ಕಡಲ ದಂಡೆ ಒಂದು ತುದಿಯಿಂದ ಇನ್ನೊಂದು ತುದಿಗೆ ಕಡಲೊಳಗೆ ಹೋದಂತೆ ಇದೆ, ಮಧ್ಯಭಾಗದಲ್ಲೂ ಸ್ವಲ್ಪ ದೂರ ಕಡಲೊಳಗಿದೆ, ಮೇಲಿಂದ ನೋಡಿದರೆ, ಯಾರೋ `ಓಂ' ಎಂದು ಬರೆದಂತೆ ಕಾಣಿಸುತ್ತದೆ. ಈ ಕಾರಣಕ್ಕಾಗಿಯೇ ಇಲ್ಲಿಗೆ ಓಂ ಬೀಚ್ ಎಂದು ಹೆಸರು.

ಅಲ್ಲಿ ಹೋದಾಗ ನಾವು ಯಾವ ದೇಶದಲ್ಲಿದ್ದೇವೆಂದು ಸಂಶಯ ಪಡುವಂತಾಯಿತು. ಎಲ್ಲೆಲ್ಲೂ ವಿದೇಶೀಯರೇ ತುಂಬಿದ್ದರು. ಓಂ ಬೀಚ್, ಕುಡ್ಲೆ ಬೀಚ್, ಅರ್ಧಚಂದ್ರ (ಹಾಫ್ ಮೂನ್) ಹಾಗೂ ಸ್ವರ್ಗ (ಪಾರಡೈಸ್) ಬೀಚ್‍ಗಳಲ್ಲಿ ವಿದೇಶೀಯರೇ ತುಂಬಿದ್ದಾರೆ. ದಾರಿಯಲ್ಲಿ ಸಿಕ್ಕಿದವರೆಲ್ಲಾ `ನಮಸ್ತೇ, ನಮಸ್ತೇ' ಎಂದು ಹೇಳುತ್ತಿದ್ದರು. ಅಲ್ಲಿ ಯಾವ ವಸ್ತು ಕೊಳ್ಳುವಂತಿದ್ದರೂ ಒಂದಕ್ಕೆರಡು ಕ್ರಯ ಕೊಟ್ಟು ಕೊಳ್ಳಬೇಕು. ದೇಶೀಯರಿಗೆ ಕಡಿಮೆ ಎಂದು ಹೇಳುತ್ತಾರೆ, ಆದರೂ ಕ್ರಯ ಸ್ವಲ್ಪ ಜಾಸ್ತಿಯೇ. `ಓಂ' ದಾಟಿ ಒಂದು ಬೆಟ್ಟ ಹತ್ತಿ ಆಚೆ ಇಳಿದರೆ, ಅರ್ಧಚಂದ್ರ ಬೀಚ್. ಅಲ್ಲಿ ಒಬ್ಬ ವಯಸ್ಸಾದ ಹೆಂಗಸು ಕಲ್ಲಂಗಡಿ ಹಣ್ಣು ತಂದಾಗ ಚಿಕ್ಕದೆನಿಸಿದರೂ, ೪೫ ರೂ ಕೊಟ್ಟು ತೆಗೆದುಕೊಂಡೆವು. ಆಕೆಯ ಜೊತೆ ಇದ್ದ ನಾಯಿಮರಿ ನಮ್ಮಗಳ ಜೊತೆ ಹೊಂದಿಕೊಂಡು ಆಟವಾಡುತ್ತಿತ್ತು. ಆಗ ಆಕೆ `ಅದನ್ನು ನಿಮ್ಮ ದೇಶಕ್ಕೆ ಕೊಂಡೊಯ್ಯಿರಿ' ಎಂದು ತಮಾಷೆ ಮಾಡಿದಾಗ, ನನಗೆ ನಗುವೂ ಬಂತು, ಸಂಕಟವೂ ಆಯಿತು. `ನಾವು ಇದೇ, ನೀನಿರುವ ದೇಶದವರೇ ಅಮ್ಮಾ' ಎಂದೆ. ಆಮೇಲೆ ಅನ್ನಿಸಿತು, ಆಕೆ ನಿಮ್ಮೂರಿಗೆ ಅನ್ನೋ ಬದಲು, ನಿಮ್ಮ ದೇಶ ಎಂದಿರಬಹುದು, ಅಥವಾ ವಿದೇಶೀಯರೊಂದಿಗೊಂದಾಗು ಮಂಕುತಿಮ್ಮಾ ಅಂದಿರಬಹುದು !

ಒಂದು ಮೋಟಾರ್ ಬೋಟಿನವರೊಂದಿಗೆ ಮಾತಾಡಿ, ಎಂಟೆಂಟು ಜನರಂತೆ, ಒಂದಷ್ಟು ದೂರ ಸಮುದ್ರ ಯಾನ ಮಾಡಿದೆವು. ಒಂದು ಸಲಕ್ಕೆ ನೂರ ಐವತ್ತು ರೂಪಾಯಿಗಳು, ಹೋಗಿರುವುದು ಸ್ವಲ್ಪವೇ ದೂರ. ವಿದೇಶೀಯರಿಗಾದರೆ ಇನ್ನೂರ ಐವತ್ತು ಎಂದು ತಿಳಿಯಿತು.

ಸರಿ ಅಲ್ಲಿಂದ ಮುಂದೆ ಹೊರಟು ಇನ್ನೊಂದು ಬೆಟ್ಟ ಹತ್ತಿ ಇಳಿದರೆ ಪಾರಡೈಸ್ ಬೀಚ್. ಬಹಳ ಸುಂದರವಾಗಿದೆ ಇದು. ಇಲ್ಲೂ ಅಷ್ಟೇ ವಿದೇಶೀಯರು. ನೀರಲ್ಲಿ ಆಟವಾಡುತ್ತಿದ್ದರು, ಸೂರ್ಯಸ್ನಾನ ಮಾಡುತ್ತಿದ್ದರು, ಕೂತು ಮದ್ಯ, ತಂಪು ಪಾನೀಯ ಸೇವಿಸುತ್ತಿದ್ದರು, ಓದುತ್ತಾ ಮಲಗಿದ್ದರು. ಈ ಬೀಚ್ ದಾಟಿಕೊಂಡು ಮುಂದೆ ಪುನಃ ಮತ್ತೊಂದು ಬೆಟ್ಟವನ್ನು ಹತ್ತಿ ಸ್ವಲ್ಪ ಮಟ್ಟಸವಾದ ಜಾಗಕ್ಕೆ ಬಂದಾಗ ಇದ್ದಕ್ಕಿದ್ದಂತೆ ಎಲ್ಲಾ ನಿಶ್ಶಬ್ಢವಾಯಿತು. ಆಗಾಗ ಹಕ್ಕಿಗಳ ಚಿಲಿಪಿಲಿ ಬಿಟ್ಟರೆ ಬೇರೆ ಸದ್ದೇ ಇಲ್ಲ ! ಅತ್ತ ಹೋದರೆ, ಭೋರ್ಗರೆಯುವ ಸಮುದ್ರ, ಇತ್ತ ಬಂದರೆ ಮೌನವಾಗಿರುವ ಕುರುಚಲು ಕಾಡು....

ಇಷ್ಟು ಹೊತ್ತಿಗಾಗಲೇ ಸಂಜೆಯಾಗುತ್ತಾ ಬಂದಿತ್ತು. ನಾವು ಮುಂದೆ ತದಡಿ ಎಂಬಲ್ಲಿ `ಡಿಂಕಿ'ಯಲ್ಲಿ ಅಘನಾಶಿನಿ ನದಿ ದಾಟಿ ಹೋಗಬೇಕಿತ್ತು. ತದಡಿ ಬೀಚ್‍ಗೆ ಬಂದು ಎಳೆನೀರು ಕುಡಿದು, ಮುಂದೆ ರಸ್ತೆಯಲ್ಲಿ ನಡೆದು ಹೋದೆವು. ತದಡಿ ಪೇಟೆಯಲ್ಲಿ, ಕಾರಣಾಂತರಗಳಿಂದ ನಮ್ಮೊಡನೆ ಬರಲಾಗುವುದಿಲ್ಲವೆಂದ ಸಂದೀಪ್ ಹಾಗೂ ಸ್ನೇಹಾರನ್ನು ದುಃಖವಾದರೂ ಬೀಳ್ಕೊಟ್ಟು ನದಿ ದಡಕ್ಕೆ ಬಂದು `ಡಿಂಕಿ' ಗಾಗಿ ಕಾಯುತ್ತಾ ನಿಂತಿರುವಾಗ ಮೀನುಗಾರರು ಹಿಡಿದು ತಂದು ಹಾಕಿರುವ ರಾಶಿ ರಾಶಿ ಮೀನುಗಳನ್ನು ನೋಡುತ್ತಿದ್ದೆವು. ಆಗ ಆ ರಾಶಿಗಳಲ್ಲೊಂದರಲ್ಲಿ ನಮಗೆ ಒಂದು ಅಷ್ಟಪದಿಯ ಮರಿ ಕಾಣಸಿಕ್ಕಿತು. ಮುಟ್ಟಿ ನೋಡಿದೆವು. ಹಾಗೇ `ಈಲ್' ಎಂಬ ಎಲೆಕ್ಟ್ರಿಕ್ ಮೀನು ಕಾಣಸಿಕ್ಕಿತು. ದೋಣಿ ಬಂದಾಗ ಎಲ್ಲರೂ ಅದರೊಳಗಿಳಿದೆವು. ಬೇರೆ ಪ್ರಯಾಣಿಕರೂ ಇದ್ದರು. ಸುಮಾರು ಎಂಭತ್ತು ಜನರನ್ನು ಹೊತ್ತೊಯ್ಯಬಹುದಾದ ದೋಣಿ ಈ `ಡಿಂಕಿ'. ಅಘನಾಶಿನಿ ಹಾಗೂ ಸಮುದ್ರರಾಜನ ಮೌನ ಮಿಲನ ನೋಡುತ್ತಾ ಈ ದಂಡೆಯಿಂದ ಆ ದಂಡೆ ತಲುಪುವ ವೇಳೆಗೆ ಸೂರ್ಯ ಪೂರ್ತಿ ನಿಶೆಯ ತೆಕ್ಕೆಯೊಳಗಿದ್ದ. ಅಲ್ಲಿಂದ ಮುಂದೆ ನಡೆದು ಇನ್ನೊಂದು ಬೆಟ್ಟವನ್ನು ಹತ್ತಿ ಮತ್ತೊಂದು ದಂಡೆಗೆ ಹೋಗುವ ಸಾಧ್ಯತೆ ಕಡಿಮೆ ಇದ್ದುದರಿಂದ ಪುನಃ ಒಂದು ಯಾಂತ್ರಿಕ ದೋಣಿಯಲ್ಲಿ ನಾವು ಹದಿನಾಲ್ಕು ಜನ ಹಾಗೂ ಮತ್ತಿಬ್ಬರು ನಾವಿಕರು, `ಕಿರುಬೆಲೆ' ಕಡಲ ದಂಡೆಗೆ ಬಂದೆವು. ಚಂದಿರನ ಬೆಳಕಲ್ಲಿ, ನಾವು ತಂದ ಆಹಾರವನ್ನು ತಿಂದು, ಮಲಗಲು ಸಿದ್ಢತೆಗಳನ್ನು ಮಾಡಿಕೊಂಡೆವು. ಕೆಲವರಿಗೆ ಒಂದು ನಿದ್ದೆಯೂ ಆಯಿತು. ನಮ್ಮ `ಅರುಣ'ನ ಸವಿಗಾನವನ್ನು ಕೇಳುತ್ತಾ ಕೇಳುತ್ತಾ ನಿದ್ರಿಸಿದವರೂ ಎದ್ದು ಕುಳಿತರು (??). ಏಳದವರನ್ನು ಬಲವಂತವಾಗಿ ಎಬ್ಬಿಸಿ, ಅಂತ್ಯಾಕ್ಷರಿ ಸುರುಮಾಡಿದೆವು. ಸುಮಾರು ಹನ್ನೊಂದು ಘಂಟೆಯ ಹೊತ್ತಿಗೆ, ಸೀಮೇಎಣ್ಣೆ ಮುಗಿದು ಆರಲು ಸಿದ್ಢವಾದ ದೀಪದಂತಿದ್ದ ಚಂದ್ರ, ಹನ್ನೆರಡು ಘಂಟೆಯ ಹೊತ್ತಿಗೆ ಪೂರ್ತಿ ಮುಳುಗಿಯೇ ಹೋದ. ನಾವೆಲ್ಲರೂ ಜೀವನದಲ್ಲಿ ಮೊದಲ ಬಾರಿಗೆ ಚಂದ್ರಸ್ತ ನೋಡಿದೆವು. ನಮಗಿದು ಕೌತುಕದ ಸಂಗತಿ!

ಹನ್ನೆರಡು ಘಂಟೆಯ ಮೇಲೆ, ಅಂದರೆ ಫೆಬ್ರವರಿ ನಾಲ್ಕನೇ ತಾರೀಖಿಗೆ ನಮ್ಮ `ಡೀನ್' ಗೆ ಹುಟ್ಟಿದ ಹಬ್ಬದ ಶುಭಾಶಯಗಳನ್ನು ಹೇಳಿದೆವು. ನಿಜಕ್ಕೂ ಅವನಿಗೆ ಇದು ಒಂದು ಮರೆಯಲಾರದ ಹುಟ್ಟುಹಬ್ಬ; ಸುಂದರವಾದ ಸಮುದ್ರ ದಡ, ನಕ್ಷತ್ರಗಳ ಬೆಳಕು, ಜೊತೆಯಲ್ಲಿ ಒಂದೇ ಮನಸ್ಸು ಇಷ್ಟಗಳ ಸ್ನೇಹಿತ ಸ್ನೇಹಿತೆಯರು.....

ಇನ್ನು ನಿದ್ರಿಸೋಣ ಎಂದು ನಿರ್ಧರಿಸಿದೆವು. ಮೇಲೆ ನಕ್ಷತ್ರ, ಪಕ್ಕದಲ್ಲಿ ಜೋಗುಳ ಹಾಡುತ್ತಿದ್ದ ಸಮುದ್ರ.... ಎಲ್ಲರಿಗೂ ಸುಖನಿದ್ರೆ !

ಬೆಳಗ್ಗೆ ಸುಮಾರು ೪.೩೦ ಹೊತ್ತಿಗೆ ತದಡಿ ಕಡೆಯಿಂದ ಮೀನುಗಾರರ ಬೋಟ್‍ಗಳು ದಿನದ ಕೆಲಸಕ್ಕೆಂದು ಒಂದೊಂದಾಗಿ ಸಮುದ್ರಕ್ಕಿಳಿಯಲಾರಂಭಿಸಿದವು. ಐದೂವರೆ, ಆರು ಘಂಟೆಯ ಅಂದಾಜಿಗೆ ನಾವೂ ಎದ್ದೆವು. ನಾವು ಹುಡುಗಿಯರು (ಹೆಂಗಸರು) ಅಲ್ಲೇ ಸ್ವಲ್ಪ ದೂರದಲ್ಲಿದ್ದ ಒಂದು ಮನೆಗೆ, ಮುಖ ತೊಳೆಯಲೆಂದು ಹೋದೆವು. ಆ ಮನೆಯವರ ಹೃದಯ ವಿಶಾಲವಾದುದು, ನಮಗೆಲ್ಲಾ ಅದರಲ್ಲಿ ಪೂರ್ವಾಪರ ವಿಚಾರಿಸದೆ ಸ್ಥಳ ನೀಡಿದರು. ಚಹಾ ಕುಡಿಯಿರೆಂದಾಗ ಬೇಡವೆಂದುದಕ್ಕೆ ಆ ಮನೆಯ ಹಿರಿಯಳಾದ ಒಬ್ಬಾಕೆ ಹೇಳಿದ ಮಾತುಗಳು, ಮನುಷ್ಯ ಸ್ನೇಹಜೀವಿ ಎಂಬ ಮಾತನ್ನು ದೃಢಪಡಿಸುವಂಥದ್ದು. `ನಾವು ಒಬ್ಬರಿಗೊಬ್ಬರು ಸಹಾಯ ಮಾಡಲೇ ಬೇಕು, ನಾಳೆ ನಮ್ಮ ಮನೆಯ ಮಕ್ಕಳು ಈ ಥರ ಹೊರಗೆ ಹೋದರೆ, ಬೇರೆಯವರೂ ಮಾಡಬೇಕಲ್ಲಾ, ನಾವು ಮಾಡುವುದಿಲ್ಲವೆಂದರೆ ಹೇಗೆ? ಇದೆಲ್ಲಾ ನಮಗೆ ಖಂಡಿತವಾಗಿಯೂ ತೊಂದರೆಯೇ ಅಲ್ಲ, ದಯವಿಟ್ಟು ಸಂಕೋಚ ಬೇಡ' ಎಂದರಾಕೆ. ಬಾವಿಯಿಂದ ನೀರು ಸೇದಿ, ಸ್ನಾನ ಮಾಡಲು ಅವಕಾಶ ಮಾಡಿಕೊಟ್ಟರು. ಬೆಳಗಿನ ತಿಂಡಿಗೆಂದು ಅಕ್ಕಿರೊಟ್ಟಿ ಕೂಡಾ ಕಟ್ಟಿಕೊಟ್ಟರು. ನಾವೆಲ್ಲಾ ಒಂದು ಕ್ಷಣ ಮೂಕರಾಗಿ ಹೋದೆವು ಈ ಪ್ರೀತಿಯ ಮುಂದೆ.

ಪುನಃ ನಮ್ಮ ಚಾರಣ ಸುರು. ಸಮುದ್ರ ದಡದಲ್ಲಿ ಒಂದು ಬೆಟ್ಟವನ್ನು ಬಳಸಿಕೊಂಡು, ಬಂಡೆಗಳ ಮೇಲೆ ನಡೆಯುತ್ತಾ, ಮುಂದೆ `ಬರ್ಕಾ' ಬೀಚ್ ತಲುಪಿದೆವು. ಇದು ಒಂದು ಪುಟ್ಟ ಬೀಚ್. ಇಲ್ಲಿ ಸಮುದ್ರದ ಅಬ್ಬರ ಸ್ವಲ್ಪ ಜಾಸ್ತಿ.
ಇಲ್ಲಿರುವ ಒಂದು ಸಣ್ಣ ಹೊಟೇಲ್‍ನಲ್ಲಿ ಆಲೂ ಪರೋಟ, ಬ್ರೆಡ್ ಟೊಮ್ಯಾಟೋ, ಬ್ರೆಡ್ ಆಮ್ಲೆಟ್ ತೆಗೆದುಕೊಂಡೆವು.

ಅಲ್ಲಿಂದ ಮತ್ತೆ ಬೆಟ್ಟವೇರಿ, ಕೋಟೆಯೊಳಗೆ ನಡೆದು, ಪುನಃ ಇಳಿದರೆ `ಬಾಡಾ' ಬೀಚ್. (ಬಾಡಾ ಎಂಬುದು ಊರ ಹೆಸರೋ ಅಥವಾ ಹಿಂದಿ ಶಬ್ಧ `ಬಡಾ' ಎಂಬುದರಿಂದ ಈ ಹೆಸರು ಬಂತೋ ತಿಳಿಯಲಿಲ್ಲ) ಈ ಬೀಚ್ ಸುಮಾರು ಒಂಭತ್ತು ಕಿಲೋಮೀಟರ್ ಉದ್ದಕ್ಕೂ ಇದೆ. ಇದೇ ನಾವು ಹೋದುದರಲ್ಲೆಲ್ಲಾ ಅತಿ ದೊಡ್ಡ ಬೀಚ್. ಇದರ ದಂಡೆಯಲ್ಲೆಲ್ಲಾ ಮನುಷ್ಯರ ಗಲೀಜಿತ್ತು. ನಡೆದು ನಡೆದು, ಒಂದು ಕಡೆ ಊರೊಳಗೆ ಹೋಗಿ ಬನ್ಸ್, ಬಜ್ಜಿ ಹಾಗೂ ತಂಪಾದ ರಾಗಿ ನೀರು ಕುಡಿದು ರಾತ್ರಿಗೆ ಸ್ವಲ್ಪ ಊಟ ಕಟ್ಟಿಸಿಕೊಂಡು, ಪುನಃ ನಾಲ್ಕು ಕಿಲೋಮೀಟರ್ ನಡೆದು ಕಡಲೀ ಬೀಚ್ ತಲುಪಿದೆವು. (ಬಾಡಾ ಬೀಚ್‍ನ ಕೊನೆಯೇ ತುದಿಯೇ ಕಡಲೀ ಬೀಚ್). ಅಲ್ಲಿಂದ ಇನ್ನೂಂದು ಬೆಟ್ಟವನ್ನು ಬಳಸಿಕೊಂಡು ಮಂಗಳಗೋಡು ಬೀಚ್‍ಗೆ ಬಂದಾಗ ಸೂರ್ಯ ಮುಳುಗುತ್ತಿದ್ದ. ಇದು ಅತ್ಯಂತ ಸುಂದರವಾದ ಬೀಚ್ ಹಾಗೂ ಅತ್ಯದ್ಭುತವಾದ ಸೂರ್ಯಾಸ್ತ ! ಈ ಬೀಚ್ ಮೇಲೆ ಪ್ರೀತಿ ಉಕ್ಕಿ ಬಂದು ನಾವೇ ಅದಕ್ಕೊಂದು ಹೆಸರು ನೀಡುವ ಮನಸ್ಸು ಮಾಡಿ, ಆರ್.ಹೆಚ್.ಎಮ್. (ರಾಂಬ್ಲಿಂಗ್ ಹಾಲಿಡೇ ಮೇಕರ್‍ಸ್) ಎಂದು ಹೆಸರಿಟ್ಟೆವು. ಇಲ್ಲೇ ಉಳಿದುಕೊಳ್ಳೋಣ ಎಂಬ ಯೋಚನೆ ಬಂದರೂ ಮುಂದುವರಿದು, ಬೆಟ್ಟ ಹತ್ತಿ ಇಳಿದು ವನ್ನಳ್ಳಿ (ಹೊನ್ನಾಳಿ) ಬೀಚ್ ತಲುಪಿದೆವು.

ವನ್ನಳ್ಳಿ ಬೀಚ್‍ನಲ್ಲಿ ತುಂಬಾ ಜನ, ಊರು ಸಮುದ್ರ ದಂಡೆಯಲ್ಲೇ ಇದೆ. ಒಂದು ಮಸೀದಿಯೂ ಸಮುದ್ರದ ತಟದಲ್ಲೇ ಇದೆ. ಇಲ್ಲಿಂದ ಕುಮಟಾಗೆ ಸ್ವಲ್ಪವೇ ದೂರ. ಆದ್ದರಿಂದ ಎಲ್ಲರಿಗೂ ಸಾಕಾಗುವಷ್ಟು ಊಟ ತರಲೆಂದು ಅರುಣ್, ಶ್ಯಾಂ, ಡೀನ್, ಗೋವಿಂದ್‍ರಾಜ್ ಆಟೋದಲ್ಲಿ ಕುಮಟಾಗೆ ಹೋದರು. ವಾಪಾಸ್ಸಾದ ನಂತರ ಭರ್ಜರಿ ಊಟ ಮುಗಿಸಿ ದಂಡೆಯಲ್ಲೇ ಮಲಗುವ ಎಂದು ಯೋಚಿಸಿದರೂ, ಆಟೋ ಚಾಲಕನ ಸಲಹೆಯಂತೆ ಊರೊಳಗೆ ಬಂದು ಒಂದು ಶಾಲೆಯ ಹೊರಾಂಗಣದಲ್ಲಿ ಮಲಗಿದೆವು. ಇಲ್ಲಿ ಒಬ್ಬ ಶಿಕ್ಷಕ `ಶ್ರೀ ರಾವುತ್' ಹಾಗೂ ಅವರ ಕುಟುಂಬ, ನಮಗೆ ಕುಡಿಯಲು ನೀರು, ಸ್ನಾನ ಮಾಡಲು ಬಚ್ಚಲು ಮನೆ, ಬಟ್ಟೆ ಬದಲಿಸಿಕೊಳ್ಳಲು ಶಾಲೆಯ ಕೋಣೆ ಹೀಗೆ ಎಲ್ಲಾ ಸಹಾಯವನ್ನೂ ಮಾಡಿದರು.

ಮರುಬೆಳಗ್ಗೆ ಐದೂವರೆಗೆ ಎದ್ದು `ಧಾರೇಶ್ವರ'ದ ಕಡೆ ನಡೆದೆವು. ವನ್ನಳ್ಳಿಯ ಹತ್ತಿರವೇ ಇನ್ನೊಂದು ಬೀಚ್. ಇದೂ ಅಷ್ಟೇ ತುಂಬಾ ಸುಂದರವಾಗಿತ್ತು. ಆದರೆ ಊರವರು ಕೆಲವರು ಅಲ್ಲಿ `ಬೆಳಗಿನ ಕೆಲಸ'ಕ್ಕೆಂದು ಸಾಲಾಗಿ ಕುಳಿತಿದ್ದುದರಿಂದ ನಮಗೆಲ್ಲಾ ಕೊಂಚ ಮುಜುಗರವೆನಿಸಿತು. ಇಲ್ಲಿಂದ ಮುಂದೆ ಧಾರೇಶ್ವರಕ್ಕೆ ಹೋಗಲು ಸಾಧ್ಯವಾಗಲಿಲ್ಲ. ನಡುವೆ ಒಂದು `ಕೊಲ್ಲಿ', ಎರಡು ದಂಡೆಯನ್ನು ಸುಮಾರು ಎಂಟರಿಂದ ಹತ್ತು ಮೀಟರಿನಷ್ಟು ಪ್ರತ್ಯೇಕಿಸಿತ್ತು. ನೀರು ತುಂಬಾ ಇದ್ದುದರಿಂದ ದಾಟಲಸಾಧ್ಯವಾಗಿತ್ತು. ಸುತ್ತು ಹೊಡೆದು ಸುಮಾರು ನಾಲ್ಕರಿಂದ ಆರು ಕಿಲೋಮೀಟರ್ ನಡೆದರೆ ಧಾರೇಶ್ವರಕ್ಕೆ ಹೋಗಬಹುದೆಂದು ಸ್ಥಳೀಯರು ಹೇಳಿದರೂ, ಸಮಯದ ಅಭಾವದಿಂದ ನಾವು ಆ ಊರೊಳಗೆ ಬರುವ ಬಸ್ಸಿನಲ್ಲಿ ಕುಮಟಾಗೆ ಹೋಗಲು ನಿರ್ಧರಿಸಿದೆವು.

ದೂರದ ಬೆಟ್ಟಗಳ ಹಿಂದಿಂದ ಸೂರ್ಯ ಚಿನ್ನಾಟವಾಡುತ್ತಾ ಬರುವ ಸುಂದರ ದೃಶ್ಯ ನೋಡುತ್ತಾ ಮುಂದುವರಿದೆವು. ಬಸ್ ಬಂತು. ಕುಮಟಾದಲ್ಲಿಳಿದು ಇನ್ನೊಂದು ಬಸ್ಸೇರಿ, ಹೊನ್ನಾವರದ ದಾರಿಯಲ್ಲಿ ಕರ್ಕಿ (ಮಟ) ಎಂಬಲ್ಲಿಳಿದೆವು. ಅಲ್ಲೇ ಒಂದು ಹೊಟೇಲಲ್ಲಿ ತಿಂಡಿ ತಿಂದು `ತೆರೆಬಾಗಿಲು' ಬೀಚ್‍ಗೆ ನಡೆದೆವು. ದಾರಿಯಲ್ಲಿ ಒಂದು ತೂಗುಸೇತುವೆಯ ಮೇಲೆ ಹೋಗಬೇಕು. ಇದೂ ಒಂದು ಮರೆಯಲಾರದ ಅನುಭವ. `ತೆರೆಬಾಗಿಲು' ಬೀಚ್ ಕೊಳಕಿಲ್ಲದ ಶುಭ್ರವಾದ ಬೀಚ್. ನೀರಿನೊಳಗೆ ಕೂಡ ಸುಮಾರು ಒಂದು ಕಿಲೋಮೀಟರ್ ದೂರ ಮಟ್ಟಸವಾಗಿರುವ ಬೀಚ್‍ನಲ್ಲಿ ನೀರಾಟವಾಡಲು ಮಜವಾಗಿತ್ತು. ಎರಡು ಘಂಟೆಗಳ ಕಾಲ ನೀರಲ್ಲಿದ್ದರೂ ಎರಡು ನಿಮಿಷವಷ್ಟೇ ಆದಂತಿತ್ತು. ಇಲ್ಲಿ ದಡದಿಂದ ಸುಮಾರು ೨ ಕಿಲೋಮೀಟರ್ ದೂರದಲ್ಲಿ ಒಂದು ಪುಟ್ಟ ಬೆಟ್ಟ ದ್ವೀಪದಂತೆ ಸಮುದ್ರದಲ್ಲಿದೆ. ಅಲ್ಲಿ ಒಂದು ಸಿಹಿ ನೀರಿನ ಭಾವಿ ಇದೆ, ಊರವರು ಅಲ್ಲಿಗೆ ವರ್ಷಕ್ಕೊಮ್ಮೆ ಹೋಗಿ ಪೂಜೆ ಸಲ್ಲಿಸಿ ಬರುತ್ತಾರೆಂದು ತಿಳಿಯಿತು. ಸಮುದ್ರ ಸ್ನಾನ ಮುಗಿಸಿ, ದಡದಲ್ಲಿದ್ದ ಸಿಹಿ ನೀರ ಬಾವಿಯಿಂದ ನೀರು ಸೇದಿ ತಲೆ, ಮೈ ಮೇಲೆ ಹೊಯ್ದುಕೊಂಡೆವು. ಇಲ್ಲಿ ದಡದಲ್ಲಿದ್ದ ಮನೆಗಳು ಮಳೆಗಾಲದ ಅಬ್ಬರಕ್ಕೆ ಸಮುದ್ರದ ಪಾಲಾಗಿ, ಮುರಿದ ಗೋಡೆಗಳು ಸಾಕ್ಷಿಯಾಗಿತ್ತು. ಕಲ್ಲುಗಳನ್ನು ಕಟ್ಟಿ, ನೀರು ಊರೊಳಗೆ ಬರದಂತೆ ತಡೆಯುತ್ತೇವೆ ಎನ್ನುತ್ತಲೇ ಇದೆ ಸರಕಾರ ಆದರೆ ಏನೂ ಆಗಲಿಲ್ಲ ಎಂದು, ಮಳೆಗಾಲದಲ್ಲಿ ಮನೆ ಕಳೆದುಕೊಂಡ ಒಬ್ಬ ಹೆಂಗಸು ದುಃಖ ತೋಡಿಕೊಂಡರು. ನಾವೂ ಪೆಚ್ಚುಮೋರೆ ಹಾಕಿಕೊಂಡು ಸಹಾನುಭೂತಿ ತೋರಿಸುವ ಹೊರತು ಏನೂ ಮಾಡಲಾಗಲಿಲ್ಲ.

ಪುನಃ `ಮಟ'ಕ್ಕೆ ಬಂದು ಬಸ್ ಹಿಡಿದು ಹೊನ್ನಾವರ ತಲುಪಿ, ಹೊಟೇಲ್ ರೂಮ್ ಬುಕ್ ಮಾಡಿ, ಊಟ ಮಾಡಿ, ಸ್ನಾನಾದಿಗಳನ್ನು ಮುಗಿಸುವಷ್ಟರಲ್ಲಿ ಆರು ಘಂಟೆಯಾಯಿತು. ನಮ್ಮ ಬಸ್, ಕುಮಟಾದಿಂದ ಹೊನ್ನಾವರಕ್ಕೆ ಏಳು ಘಂಟೆಗೆ ಬಂತು. ಬಸ್ಸಲ್ಲೂ ಒಬ್ಬರನ್ನೊಬ್ಬರು ಕೀಟಲೆ ಮಾಡುತ್ತ, ನಗುತ್ತಾ, ಸಾಗರ ದಾಟಿ ಮಾವಿನಗುಂಡಿಯಲ್ಲಿ ಒಂದು ಹೊಟೇಲಲ್ಲಿ ಚಪಾತಿ ಪಲ್ಯ ತಿಂದೆವು. ಅಲ್ಲಿಂದ ಹೊರಟ ಮೇಲೆ ಎಲ್ಲರೂ ನಿದ್ರಾದೇವಿಯ ತೆಕ್ಕೆಯೊಳ ಸೇರಿದ ಕಾರಣ ಮುಂದೆ ಬೆಂಗಳೂರು ತಲುಪಿ, ಒಬ್ಬರಿಗೊಬ್ಬರು ಟಾಟಾ ಬಾಯ್ ಬಾಯ್ ಹೇಳುವುದಷ್ಟೇ ಸಾಧ್ಯವಾಯಿತು ಬೆಳಗಾದಾಗ!

4 comments:

mavinayanasa said...

ಚಾರಣದ ಅನುಭವವನ್ನು ಬಹಳ ಸುಂದರವಾಗಿ ನಿರೂಪಿಸಿದ್ದೀರಿ. ೪-೫ ಕಂತುಗಳಲ್ಲಿ ಬರಬಹುದಿದ್ದ ಲೇಖನ ಒಂದೇ ಉಸಿರಿನಲ್ಲಿ ಬಂದಿದ್ದರೂ ಸ್ವಲ್ಪ ಆಚೀಚೆಗೆ ನೋಡದಂತೆ ತನ್ಮಯತೆಯಿಂದ ಓದಿಸಿಕೊಂಡು ಹೋಯಿತು. ಹಾಗೆಯೇ ನನಗೆ ಸ್ವಲ್ಪ ಈರ್ಷೆಯೂ ಆಗುತ್ತಿದೆ. ನಾನು ಮಾತ್ರ ನಿಮ್ಮಂತೆ ಎಂಜಾಯ್ ಮಾಡುತ್ತಿಲ್ಲ. ಏನಂದ್ರಿ ಅದಕ್ಕೆಲ್ಲಾ ಕೇಳಿ ಪಡೆದುಕೊಂಡು ಬಂದಿರಬೇಕು ಅಂದ್ರಾ?
ಹೌದು ಎಲ್ಲರಿಗೂ ಎಲ್ಲ ಸೌಭಾಗ್ಯಗಳೂ ಬಂದೊದಗುವುದಿಲ್ಲ.

ಈ ಲೇಖನದಲ್ಲಿ ಕಂಡ ಮಾನವೀಯ ಹೃದಯಗಳು ನನ್ನನ್ನು ತಟ್ಟಿ ಎಬ್ಬಿಸಿದವು. ಇಂತಹ ಜೀವಗಳು ಇನ್ನೂ ಇರುವುದರಿಂದಲೇ ಮಾನವೀಯತೆ ಮನುಷ್ಯನಲ್ಲಿ ಉಳಿದಿರುವುದು.

ಇದುವರೆವಿಗೆ ನೀವು ಅನುಭವಿಸಿರುವ ಎಲ್ಲ ಚಾರಣಗಳ ಬಗ್ಗೆಯೂ ಲೇಖನವನ್ನು ಬರೆದು ನನ್ನ ಮನ ತಣಿಸಿರಿ.

ಖಜಾನೆ ಎಂದು ಬರಿದಾಗದು. ನಿಮ್ಮ ಖಜಾನಿಯಿಂದ ಓದುಗರ ಖಜಾನೆಗೆ ಜ್ಞಾನದ ರವಾನೆಯಾದರೂ ನಿಮ್ಮ ಖಜಾನೆ ಇನ್ನೂ ತುಂಬಿ ತುಳುಕುತ್ತಿದೆ. ಈ ಖಜಾನೆ ಅಕ್ಷಯ ಪಾತ್ರೆಯಂತೆ ಎಂದೂ ಬರಿದಾಗದಂತೆ ನೋಡಿಕೊಳ್ಳುವ ಜವಾಬ್ದಾರಿ ಓದುಗರದು.

ಒಳ್ಳೆಯದಾಗಲಿ.

ಗುರುದೇವ ದಯಾ ಕರೊ ದೀನ ಜನೆ

Anonymous said...

ನಿಮ್ಮಲ್ಲಿರುವ ಪ್ರತಿಭೆಯನ್ನು ಸುಮ್ಮನೆ ಮುಚ್ಚಿಟ್ಟು ಹಾಳು ಮಾಡ್ತ ಇದ್ದೀರಲ್ಲ ಇಷ್ಟು ದಿನ...ದಯವಿಟ್ಟು ಇನ್ನಷ್ಟು ವಿವರಗಳನ್ನ ಕೊಟ್ಟು ಅಂದರೆ ..ಯಾವ ಯಾವ ಬಸ್ಸು..ನಕ್ಷೆ...ಸ್ತಿರಚಿತ್ರಗಳನ್ನು ಹಾಕಿ ಸುಧಾ,ತರಂಗ ಹೀಗೆ ಯಾವುದಾದರು ಪತ್ರಿಕೆಗೆ ಕಳುಹಿಸಿ..ಹೆಚ್ಚೆಚ್ಚು ಜನರನ್ನ ಮುಟ್ಟಲಿ ಈ ಪ್ರವಾಸ ಕಥನ...ತುಂಬು ಹೃದಯದಿಂದ ಆಶಿಸುತ್ತೇನೆ..ಇನ್ನು ಹೆಚ್ಚೆಚ್ಚು ಬರೆಯಿರಿ...ಪ್ರವಾಸ ಸಾಹಿತ್ಯ ಬರಡಾಗ್ತ ಇದೆ..ಅದಕ್ಕೊಂದು ಹೊಸ ಆಯಾಮ ನೀಡುವ ಪ್ರಯತ್ನ ಮಾಡಿ..ಹೆದರಬೇಡಿ...ನಿಮ್ಮ ಮೇಲೆ ಇದೇನು ದೊಡ್ಡ ಜವಾಬ್ದಾರಿಯಾಗುದು...ಹೀಗೆ ಬರೆಯುತ್ತ ಸಾಕಷ್ಟೆ...ಪ್ರವಾಸ(ಚಾರಣ) ಬರೀ ನೆಪವಷ್ಟೆ ....ನೀವು ಹೇಳಿರುವುದರಲ್ಲಿ ಹೆಚ್ಚು.... ಮಾನವೀಯ ಮೌಲ್ಯಗಳ ಬಗ್ಗೆ ಒತ್ತು ನೀಡಿವೆ..

Annapoorna Daithota said...

ತವಿಶ್ರೀ, ಜಯಂತ್ ಇಬ್ಬರಿಗೂ ಧನ್ಯವಾದಗಳು....
ಜಯಂತ್, ಪ್ರವಾಸ ಕಥನವನ್ನು ಅರ್ಪಿಸಬಹುದೆಂದಾದರೆ, ಅದು ನಿಮಗೇ ಸಲ್ಲಬೇಕು..... ನೀವು ಒತ್ತಾಯ ಮಾಡದಿದ್ದಿದ್ದರೆ ನಾನು ಈ ಬ್ಲಾಗ್ ಮಾಡುತ್ತಿರಲಿಲ್ಲ......

ಕುಮಾರ ಸ್ವಾಮಿ ಕಡಾಕೊಳ್ಳ said...

ನಿಮ್ಮ ಪ್ರವಾಸ ಕಥನ ತುಂಬಾ ಚೆನ್ನಾಗಿ ಮೂಡಿಬಮದಿದೆ.
ಓದಿದ ಮನಕ್ಕೆ ತುಂಬಾ ಖುಶಿ ಆಯಿತು.

ಧನ್ಯವಾದಗಳೊಂದಿಗೆ
** ಕುಕೂ...
ಪುಣೆ
10/04/08