Monday, February 24, 2025

ಹೋದೆಯಾ

 

ಅಡಿಗಡಿಗೆ ಎದುರಾದ ಅಡ್ಡಿ ಆತಂಕ ಅದುಮಿಟ್ಟು

ಆರ ಬಾಯಿಗೂ ಸಿಕ್ಕದಂತೆ ನೀ ಜಾರಿ ಹೋದೆಯಾ 

ಅಕ್ಕಿ ಚೆಲ್ಲಿದಂತೆ ಬೆಳ್ಳಕ್ಕಿ ಸಾಲನೆಬ್ಬಿಸಿ ಹಾರಿಸಿ

ಬೆರಗಿನ ಬೆಳಕು ತಂದು ನೀ ದೂರ ಹೋದೆಯಾ


ಅಕ್ಕರೆಯ ಅಪರಂಜಿ ಸಕ್ಕರೆಯ ಸವಿ ಸವಿದು

ನಕ್ಕರೆ ಮುತ್ತು ಸುರಿಸಿ ನೀ ಕರಗಿ ಹೋದೆಯಾ

ಬೆಟ್ಟ ಬೆಟ್ಟಗಳ ಹತ್ತಿ ಘಟ್ಟದ ಮಣ್ಣನ್ನು ಮೆಟ್ಟಿ

ಬೊಟ್ಟಿಟ್ಟುಕೊಂಡು ನೀ ಮೈಮರೆತು ಹೋದೆಯಾ


ಮೊಗ್ಗು ಬಿರಿದು ಹೂವಾಗಿ ಹೂ ಮುದುಡಿ ಮಿಡಿಯಾಗಿ

ಕಾಯಿ ಹಣ್ಣಾಗುವವರೆಗೆ ನೀ ಕಾಯದೇ ಹೋದೆಯಾ

ಕ್ರೋಧಕ್ಕೆ ಅಂಕುಶವಿಟ್ಟು ಕೋದಂಡವನ್ನು ಹಿಡಿದು

ಪ್ರೀತಿಯನ್ನು ಪಾವನವಾಗಿಸದೆ ನೀ ಎದ್ದು ಹೋದೆಯಾ


ಪದಗಳಲ್ಲಿ ಪದಗಳನ್ನು ಅರ್ಥದಲ್ಲಿ ಅರ್ಥ ಹುಡುಕುತ್ತಾ

ವ್ಯರ್ಥ ಸಮಯ ಸ್ವಾರ್ಥಕ್ಕೆ ನೀ ಬಲಿಯಾಗಿ ಹೋದೆಯಾ

ಬೆಳ್ಳಿ ಬೆಳಕಾಗಿ ಮಳ್ಳು ಮರೆಯಾಗಿ ಜೊಳ್ಳು ಕೊಡವಿ

ಪೊಳ್ಳ ತಿರಸ್ಕರಿಸಿದಂತೆ ನೀ ಒದ್ದು ಹೋದೆಯಾ


ಹಾದಿಗೆ ಹಾಸಿದ ಹುಲ್ಲಿನಂತೆ ಗಾಳಿಗೆ ತೇಲಿದ ಗರಿಯಂತೆ

ಮಂಜು ಮುಸುಕು ಬಾನಲ್ಲಿ ನೀ ಹಾರಿ ಹೋದೆಯಾ

ಕರೆದರೆ ಬರಲಾರದೆ ಬಂದರೆ ನಿಲಲಾರದೆ ಕೂಗುಗಳಿಗೆ

ಕಿವಿಗೊಡದೆ ನಿಶ್ಯಬ್ದ ನಿರ್ವಾಣಕ್ಕೆ ನೀ ಮೊರೆ ಹೋದೆಯಾ


ಅಗಲಿದವರಿಗೆ ಅರಿವಿಲ್ಲ ಇರುವವರಿಗೆ ನೆಮ್ಮದಿಯಿಲ್ಲ

ಇದ್ದಷ್ಟು ದಿನ ನೆನಪಿನಲ್ಲಿ ನೀ ಕಳೆದು ಹೋದೆಯಾ

ಎಲ್ಲೋ ಏನೋ ಆದಾಗ ಎಲ್ಲೆಯಿಲ್ಲದೇ ನೆರವು ನೀಡಿ

ಎಲ್ಲರ ಹೃದಯದಲ್ಲಿ ನೀ ಉಳಿದು ಹೋದೆಯಾ


ನಿರ್ದಿಷ್ಟ ಹಾದಿಯಲ್ಲಿ ನಿಶ್ಚಿತ ಸಮಯದಲ್ಲಿ

ಅದ್ಭುತ ರೀತಿಯಲ್ಲಿ ನೀ ಸಾಗಿ ಹೋದೆಯಾ

ಅರಳಿದ ಸುಮಗಳಲ್ಲಿ ಅಡರಿದ ಪರಿಮಳದಲ್ಲಿ 

ಸದ್ಗತಿಯರಸುತ್ತ ಅನಂತದಲ್ಲಿ ನೀ ಲೀನವಾದೆಯಾ

No comments: