Tuesday, August 05, 2025

ಸಂತಸದ ಉಲಿ

 

ತೊಳಲಾಡುವ ಮನಸೊಂದು 

ಒಳಗೊಳಗೇ ಉಳಿದು ಕೊಳೆತು

ಕೊರಗಿನ ಕೂಪದಲ್ಲಿ ಬೇಯುತ್ತಿತ್ತು 


ಬಾಯಿ ಬಾರದ ಪ್ರಾಣಿಯೊಂದು

ಬಾಗಿಲಲ್ಲಿ ಮುದುಡಿಕೊಂಡು

ಬಾಯಾರಿಕೆ ತಣಿಸಲೆಂದು ಕಾಯುತ್ತಿತ್ತು


ರಂಗುರಂಗಿನ ಹಕ್ಕಿಯೊಂದು

ಅಂಗುಲಿ ಮೇಲೆ ಕುಳಿತುಕೊಂಡು

ಭಂಗಿಯಲ್ಲಿ ಕತ್ತನ್ನು ಕೊಂಕಿಸುತ್ತಿತ್ತು 


ಹಸಿರು ತುಂಬಿದ ಮರವೊಂದು

ಬಸಿರು ಹೊತ್ತಂತೆ ಬಾಗಿ ನಿಂದು

ಬಿಸಿಯುಸಿರ ಚೆಲ್ಲಿ ನುಲಿಯುತ್ತಿತ್ತು


ಮೌನದಲ್ಲಿ ಮಲಗಿದ ದೇಹವೊಂದು

ಮುರಿದ ಕಟ್ಟಿಗೆಗಳಲಿ ಮುಳುಗಿಕೊಂಡು

ನಶ್ವರದ ಸಂಕೇತವನ್ನು ತೋರುತ್ತಿತ್ತು


ಹೊಸದಾಗಿ ಮೊಳೆತ ಗಿಡವೊಂದು

ಹಸಿಯಾದ ಚಿಗುರ ಬೆಳೆಸಿಕೊಂಡು

ಉಸಿರಿನ ಮಹತ್ವವನ್ನು ಸಾರುತ್ತಿತ್ತು


ಆಡುತ್ತಿರುವ ಮಗುವೊಂದು

ಮುಗ್ಧವಾಗಿ ಕುಣಿದು ಬಂದು

ಸಂತಸದ ಉಲಿಯನ್ನು ಉಲಿಯುತ್ತಿತ್ತು