ಇನ್ನೊಬ್ಬರ ಯೋಜನೆಯನ್ನು ಹಾಳು ಮಾಡಿ
ಅವರ ಪಾಲಿನ ಸಂತೋಷವನ್ನು ಕಸಿದುಕೊಳ್ಳುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಮತ್ತೊಬ್ಬರ ಮನಸನ್ನು ಅರ್ಥ ಮಾಡಿಕೊಳ್ಳದೇ
ನಮಗಿಷ್ಟ ಬಂದಂತೆ ಮಾಡಿ ವಾದಿಸುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ನಂಬಿಕೆ ಇಟ್ಟು ಹಂಚಿಕೊಂಡ ವಿಷಯವನ್ನು
ಇನ್ನೊಬ್ಬರೊಡನೆ ಬಿಟ್ಟು ಕೊಡುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಎದುರು ವಿಶ್ವಾಸಾರ್ಹತೆ ತೋರಿಸಿ
ಹಿಂದಿನಿಂದ ಗೇಲಿ ಮಾಡಿ ನಗುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಕಷ್ಟಕ್ಕಾಗಾದೇ ಕೈಯನ್ನು ಹಿಡಿಯದೇ
ದುಃಖದ ಕಣ್ಣೀರು ಒರೆಸದೇ ಪ್ರಶ್ನಿಸುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಮುಳುಗುವಾಗ ಮುದದಿಂದ ನೋಡಿ
ಎದ್ದಾಗ ಮಾತ್ರ ಮುಂದೆ ಬರುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಚುಚ್ಚು ಮಾತಾಡಿ ನೋಯಿಸಿದ್ದನ್ನು ಮರೆತು
ಬಿಚ್ಚಿಟ್ಟರೆ ಬೆಟ್ಟು ಮಾಡಿ ಕೂಗಾಡುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ದುರಹಂಕಾರದಿಂದ ತಪ್ಪಾಗಿ ನಡೆದು ಕನ್ನಡಿ
ತೋರಿಸಿದಾಗ ಅವಮಾನದಿ ಸಿಟ್ಟಾಗುವ
ಹಕ್ಕನ್ನು ನಮಗೆ ಕೊಡುವವರು ಯಾರು ?
No comments:
Post a Comment