
ಚಿತ್ರ: ಗೂಗಲ್, ಸೆಲ್ಫ್
ಬದುಕಿನುದ್ದಕ್ಕೂ ಅದೇನನ್ನೋ ಹುಡುಕುತ್ತಿದ್ದೆ. ಏನೆಂಬುದು ತಿಳಿದಿರಲಿಲ್ಲ. ಏನೋ ಚಡಪಡಿಕೆ, ಸಂಕಟ, ತಿಳಿಯಲಾರದ ಅಸಮಾಧಾನ, ನೋವು. ಎಲ್ಲಾ ಇದ್ದರೂ, ಏನೂ ಇಲ್ಲವೆಂಬ ಶೂನ್ಯ ಭಾವ.
ಗೊಂದಲದಿಂದ ಸಾಗುತ್ತಿದ್ದಾಗ ಒಂದಿರುಳು ತಂಪು ಗಾಳಿ ಸುಳಿಯಿತು. ಸುತ್ತಮುತ್ತ ಮಧುರವಾದ ಪರಿಮಳ ಹರಡಿತು. ಕಣ್ಣ್ ಕುಕ್ಕದ, ಹಿತವಾದ ಬೆಳಕು ! ಆ ಕ್ಷಣದಿಂದ ಎಂಥಾ ನೆಮ್ಮದಿ ! ಜೀವನದುದ್ದಕ್ಕೂ ನಡೆಸುತ್ತಿದ್ದ ಹುಡುಕಾಟ ಗುರಿಮುಟ್ಟಿದ ಭಾವ. ತಳಮಳ ಅಸಹನೆ, ಸಿಟ್ಟು, ಶೂನ್ಯ ಭಾವ ಇನ್ನಿಲ್ಲವೆಂಬಂಥಾ ಶಾಂತಿ !!
ಸುತ್ತಮುತ್ತ, ಅಕ್ಕಪಕ್ಕ ತಿರುಗಿದೆ, ತಲೆ ಎತ್ತಿ ನೋಡಿದೆ, ಅದೋ ಅಲ್ಲಿ ! ಬಾನಂಗಳದಲ್ಲೊಂದು ಮುದ್ದಾದ ನಕ್ಷತ್ರ ಮಿನುಗುತ್ತಿತ್ತು. ವಜ್ರದಂತೆ ಹೊಳೆಯುತ್ತಿತ್ತು. ನನ್ನತ್ತ ನೋಡಿ ನಗುತ್ತಿತ್ತು. ಅದರ ಕಂಗಳಲ್ಲಿ ಸೂಸುತ್ತಿದ್ದ ಹೊಳಪು, ಪ್ರೀತಿಗೆ ಮೈಮರೆತೆ, ಜಗ ಮರೆತೆ. ಕನಸಲ್ಲೆಂಬಂತೆ ಅದರತ್ತ ನಡೆಯಲು ಹೊರಟೆ, ಅದು ನನ್ನ ಬಾಚಿ ತಬ್ಬಿಕೊಂಡ ಭಾವ. ಇನ್ನೇನೂ ಭಯವಿಲ್ಲವೆಂಬ ಸಾಂತ್ವನ. ಅಪೂರ್ವ, ಅಖಂಡ ಭರವಸೆ.
ಕಾಡುತ್ತಿದ್ದ ಗೊಂದಲ ಬಿಟ್ಟು ಹೋಯ್ತು, ಬಾಯಾರಿದ ಪ್ರೀತಿಯ ಕೊಡ ತುಂಬಿತು. ಧೈರ್ಯದಿಂದ ಮುನ್ನುಗ್ಗುವ ಉತ್ಸಾಹ ಮೊಳೆಯಿತು.
ಹೀಗೆ ಇಹ ಮರೆತ, ನೆಮ್ಮದಿಯ ಬದುಕು ಸಾಗುವಾಗ ಒಂದು ದಿನ ಕಾರ್ಮೋಡ ಕವಿಯಿತು, ಬಾನು ಗುಡುಗಿತು. ಭಯಗೊಂಡು ನಕ್ಷತ್ರದ ಅಭಯವರಸಿ ಹುಡುಕಿದೆ, ಆದರೆ ತಡವಾಗಿತ್ತು. ಮತ್ತೆ ಅನಾಥ ಪ್ರಜ್ಞೆ ! ಕಳಕೊಂಡ ನೋವು, ಸಂಕಟ ! ಸದ್ದಿಲ್ಲದೇ ದಟ್ಟವಾಗಿ ಪಸರಿಸಿದ ನಕ್ಷತ್ರದೆಡೆಗಿನ ಪ್ರೀತಿ ಸುಮ್ಮನಿರಲು ಬಿಡದೆ ನಾಯಿಪಾಡು ಮಾಡಿತು. ಹುಡುಕಾಟದ ದಿನಗಳು ಮತ್ತೆ ಪ್ರಾರಂಭವಾಗುವ ಸೂಚನೆ !
ಅಷ್ಟರಲ್ಲಿ, ಅರೆಕ್ಷಣ ಸರಿದ ಕಾರ್ಮೋಡದ ಮರೆಯಿಂದ ನಕ್ಷತ್ರ ಅದೇ ಹೊಳಪು, ಪ್ರೀತಿ ಕಣ್ಗಳಿಂದ ನೋಡಿ ಅರೆನಗು ನಗುತ್ತಾ ಹೇಳಿತು "ಜಗವನ್ನೇ ಪಡೆದೆ ಎಂದು ಬೀಗಬೇಡ, ಇಲ್ಲಿ ಯಾವುದೂ ಶಾಶ್ವತವಲ್ಲ, ನಿನ್ನಂತಯೇ ಪರರು, ನಿನ್ನಂತೆ ಗೊಂದಲಕ್ಕೀಡಾಗಿರುವವರ ಕಡೆಗೆ ನನ್ನ ಒಲವು, ಪಯಣ, ಇಷ್ಟುದಿನ ಪಡೆದುದಷ್ಟೇ ನಿನ್ನದು, ಅತಿಯಾಸೆ ಬೇಡ. ನೀಡಬೇಕಾದುದರ ಮಿತಿ ದಾಟಿರುವುದರಿಂದ ನಾನೀಗ ಹೋಗಲೇ ಬೇಕಿದೆ"
ಭಯದಿಂದ ಚೀರಲಾರಂಭಿಸಿದೆ. ಕೈ ಚಾಚಿ ಓಡಿದೆ, ಅಸಾಧ್ಯವೆಂಬರಿವಿದ್ದರೂ ಆಕಾಶದೆತ್ತರಕ್ಕೆ ನೆಗೆಯುವ ಯತ್ನ ಮಾಡಿದೆ. ದಿಕ್ಕೆಟ್ಟು ಅಂಗಲಾಚಿದೆ, ಹುಚ್ಚಿಯಂತೆ ಪ್ರಲಾಪಿಸಿದೆ. ನಕ್ಷತ್ರ ಮರುಕದಿಂದ ನೋಡುತ್ತಿತ್ತು. ಆ ಮರುಕವೂ ನನಗೆ ಪ್ರಿಯವಾಗೇ ಕಂಡಿತು, ಅದಾದರೂ ಸಿಗಲಿ ಎಂಬಾಸೆ. ನನ್ನ ಹುಚ್ಚಾಟ ನೋಡಿ ಬೇಸತ್ತು, ಮಸುಕಾಗುತ್ತಿರುವ ನಕ್ಷತ್ರ ಹೇಳಿತು "ಹುಚ್ಚೀ, ವಾಸ್ತವವನ್ನು ಒಪ್ಪಿಕೋ, ನಿನ್ನ ನೀನು ನಂಬಿಸಿಕೊಂಡು ಬದುಕುವ ಯತ್ನ ಬೇಡ "
ಹೇಗೆ ! ಹೇಗೆ ಸಾಧ್ಯ ಇದು ! ಎಂಬ ಸಂಕಟ. ಎದ್ದೆದ್ದು ಹೊಡೆಯುವ ಸತ್ಯ, ಕಹಿಯಾದ ಸತ್ಯ. ಕಣ್ಣೆದುರೇ ಇದ್ದರೂ, ದೂರ ಇರುವ, ದೂರವಾಗುತ್ತಿರುವ ಅರಿವು. ಕೊನೆಗೂ ಅದು ನಕ್ಷತ್ರವಾಗೇ ಉಳಿಯಿತು, ಕೈಗೆಟುಕಲಿಲ್ಲ. ಮತ್ತೆ ಅನಾಥವಾಗಿಸಿತು.
ಎದೆಯಲ್ಲಿ ಬತ್ತದ ಆಶಾಭಾವ. ಮತ್ತೆ ಆಗಸ ಶುಭ್ರವಾಗಬಹುದು, ನಕ್ಷತ್ರ ಇನ್ನೊಮ್ಮೆ ಆಗಸದಲ್ಲಿ ಹೊಳೆಯಬಹುದು, ಪ್ರೀತಿ ತುಂಬಿದ ಕಂಗಳಿಂದ ಹರಸಬಹುದು, ಎದೆಗವುಚಿಕೊಂಡು ಸಾಂತ್ವನ ಹೇಳಬಹುದು...