Sunday, December 03, 2023

ಜಿಜ್ಞಾಸೆ


ನಾ ಹೇಳಿದೆ,

ಬರೆಯುವುದು ನನಗಾಗಿ, 

ಬರೆದು ಮರೆಯಬೇಕು

ಆಕೆ ಅದಕೊಪ್ಪದೇ ಹೇಳಿದಳು,

ಬರೆಯಬೇಕು, 

ಬರೆದು ಎಲ್ಲರಿಗೂ ತೋರಿಸಬೇಕು


ನಾನೆಂದೆ,

ಬರೆಯುವುದು ಮಿಡಿತ, ನನ್ನೊಳಗಿನ ತುಡಿತ, 

ನನ್ನ ಹೃದಯದ ಬಡಿತ,  ಇದು ನನ್ನ ಇಂಗಿತ

ಆಕೆ ಅದಕೊಪ್ಪದೇ ಆಂದಳು,

ಬರೆದು ಎಲ್ಲರಿಗೂ ತೋರಿಸದಿದ್ದರೆ 

ನಮ್ಮ ತಪ್ಪುಗಳು ನಮಗೆ ತಿಳಿಯುತ್ತಾ?


ನಾನೆಂದೆ,

ಬಿಡು, ನಾ ಬಯಕೆಗಾಗಿ ಬರೆಯುವೇ, 

ನಿಂತಲ್ಲೇ ತಿರುಗುವೆ

ಆಕೆಯೆಂದಳು,

ಹಂಚಿಕೊಂಡರೆ ಆ ಹರಿವನೆಲ್ಲ,

ನೀನು ಇನ್ನಷ್ಟು ಬೆಳೆಯುವೇ 


ಆಕೆಯ ಅಭಿಪ್ರಾಯ ಸರಿ

ತಿದ್ದಿಕೊಳ್ಳುವುದರಲ್ಲಿ ತಪ್ಪಿಲ್ಲ, ಒಪ್ಪಿದೆ

ಆದರೂ ಮನಸು ಹೇಳುತಿದೆ

ನನ್ನ ಅಭಿಲಾಷೆಯೂ ಸರಿ

ಅದೇಕೋ ಏನೋ, 

ನನಗದರಲ್ಲೇ ಒಪ್ಪವಿದೆ

ಪ್ರವರ


ಬೆಕ್ಕಿನೂಟಕೆ ಆಗುವುದು

ತಿಂಗಳಿಗೆ ಆರು ಸಾವಿರ

ಅದು ಇಷ್ಟಪಟ್ಟುದೆಲ್ಲ ತಂದರೆ 

ಕೈ ತಪ್ಪುವುದು ಹನ್ನೆರಡು ಸಾವಿರ


ನನ್ನೂಟಕೆ ಆಗುವುದು

ತಿಂಗಳಿಗೆ ಮೂರು ಸಾವಿರ

ಒಂದೇ ಹೊತ್ತು ಉಂಡೆನೆಂದರೆ 

ಆಗುವುದು ಒಂದೇ ಸಾವಿರ


ವಿಚಿತ್ರವಾದರೂ ನಿಜ, 

ನಿಮಗ್ಯಾಕೆ ಇದರ ವಿವರ

ಕೇಳುತ್ತಿರುವಿರಲ್ಲಾ ನನ್ನ ಪ್ರವರ

ಬೇಕೇನು ನಿಮಗೂ ಬೆಕ್ಕಿನ ಆಹಾರ

ಬೆಲ್ಲ


ಕಬ್ಬನು ಜಜ್ಜಿ ರಸವನು ತೆಗೆದು 

ಆಲೆಮನೆಯಲ್ಲಿ ಉಸಿರನು ಬಿಗಿದು

ಕುದಿಸುತ ಕೊಂಚವೇ ಲವಣವ ಸುರಿದು

ಮಾಡುವರು ಎಲ್ಲಾ, ಪಡೆಯಲು ಸಿಹಿ ಬೆಲ್ಲ


ಬಾಯಾರಿ ಬಂದರೆ ನೀರೂ ಬೆಲ್ಲ

ಶರಬತ್ತು ಮಾಡಲು ಜೋನಿಬೆಲ್ಲ

ಇದನೆಂದೂ ಹೀಗಳೆವುದು ಸಲ್ಲ

ಮೊಸರಲಿ ತಿನ್ನದಿರೆ ಆರೋಗ್ಯವಿಲ್ಲ


ಬೆಲ್ಲದ ಸವಿಯ ಬಲ್ಲವ ಬಲ್ಲ

ತಪ್ಪದೇ ತಿಂದು ಆಸ್ವಾದಿಸಿರೆಲ್ಲ 

ಅಚ್ಚಿನ ಬೆಲ್ಲ ಕಚ್ಚದು ಗಲ್ಲ

ಕೊಚ್ಚೆಲಿ ಕುಳಿತರೆ ಅಚ್ಯುತನಿಲ್ಲ

Saturday, December 02, 2023

ಸವಿತಾ

ನೀನು ಸವಿತಾ, ಆ ಸೂರ್ಯನೂ ಸವಿತಾ

ಕಿಲಕಿಲ ನಗುತಾ, ನೀನಿರುವೆ ನಲಿಯುತಾ

ದಿನನಿತ್ಯ ಸವೀತಾ, ನೋವುಗಳ ಮರೀತಾ

ಮನೆಮಂದಿಗೂ, ಸ್ನೇಹ ವೃಂದಕೂ 

ಎಂದೆಂದಿಗೂ ನೀ ಸವಿ ತಾ


ಹುಡುಕುತಿರುವೆಯೇಕೆ ನೀ ಅಲ್ಲಿಇಲ್ಲಿ ನೋಡುತಾ

ಬೆನ್ನಿಗಿಹಳು ಬೆಚ್ಚಗೇ ನಿನ್ನ ತಂಗಿ ಶ್ಲೋಹಿತಾ

ಕಾಳಜಿಯನು ತೋರುತಾ ಪ್ರೀತಿ ಮಾತನಾಡುತಾ

ಮಂದಹಾಸ ಬೀರುತಾ ಇರಬೇಕು ನೀವು ಅನವರತ

ಹೀಗೊಬ್ಬಳು ವಿದ್ಯಾ

 

ಹೀಗೊಬ್ಬಳು ವಿದ್ಯಾ ಬರೆಯುವಳು ಪದ್ಯ

ಕೆಲವೊಮ್ಮೆ ಗದ್ಯ ನಡುನಡುವೆ ವೈವಿಧ್ಯ

ಪರಿಣತಳು ಈಕೆ ಮಾಡುವುದರಲ್ಲಿ ಖಾದ್ಯ

ಸದಾ ನೀಡುವಳು ತಂಗಿಗೆ ಮೃಷ್ಟಾನ್ನ ನೈವೇದ್ಯ


ತಿನ್ನುವಳು ಉರಿಖಾರ ಆಮೇಲೆ ತಲೆಭಾರ

ನಿದ್ರೆಯಂತೂ ಸಂಹಾರ ನೆಮ್ಮದಿಯೂ ಬಲುದೂರ

ಆದರೂ ಮುಂಜಾನೆಯೆದ್ದು ನಡೆಸುವಳು ವ್ಯವಹಾರ

ಕಳಚದಂತೆ ಕೊಂಡಿಯದು ಸಲಹುವಳು ಪರಿವಾರ 


ಮಾತಿನಲಿ ಬಲು ಜಾಣೆ ವಾದದಲಿ ಪ್ರವೀಣೆ

ಇಲ್ಲಸಲ್ಲದುದಕ್ಕೆಂದೂ ಹಾಕಳೀಕೆ ಮಣೆ 

ಸ್ವಚ್ಛಗೊಳಿಸಲೆಂದು ತಿರುಗುವಳು ಕೋಣೆಕೋಣೆ

ಸೋಲನಪ್ಪಳು ಇವಳು ಎಂದೂ ದೇವರಾಣೆ


ಸಖನೊಡನೆ ಸರಿದೂಗಿ ನಡೆಯುವಳು ಮುಂದೆ

ಕುಹಕ ಮಾಡಳೀಕೆ ಯಾರಿಗೂ ಬೆನ್ನ ಹಿಂದೆ

ನೋವ ನೀಡಳಾರಿಗೂ ಹಿಂದೆ - ಮುಂದೆ

ಆಪ್ತಳಾಗಿ ಹೇಳುವಳು ಎಲ್ಲರೂ ಒಂದೇ 

ಉಂಟು

ಕಷ್ಟವಾದರೆ ಕಾರುಂಟು

ಇಷ್ಟವಾದರೆ ಬೇರುಂಟು

ನಷ್ಟವಾದರೆ ನಾರುಂಟು

ನೀ ಮುನಿದರೆ ಬೇರೆ ಯಾರುಂಟು


ಕುಡಿಯಲು ನೀರುಂಟು

ಉಣ್ಣಲು ಸಾರುಂಟು

ಬೇಡವಾದರೆ ವಾರಂಟು 

ನೀ ತೋರಬೇಡ ಪಿಸುಂಟು


ಇರುವಷ್ಟು ದಿನ ನೀ ಆಗಿರು ಪ್ಲೆಸೆಂಟು

ಎಲ್ಲರಿಗೂ ಬೇಕಾಗುವ ಸಿಹಿಯಾದ ಕರದಂಟು

ಇಲ್ಲವಾದರೆ ನಿನಗೆ ಜಾಗ ಎಲ್ಲುಂಟು

ನೀನಾಗಬಾರದು ಇಲ್ಲಿ ಆರೋಗೆಂಟು 


ತಲೆಯ ಮೇಲೆ ಒಂದು ಗಂಟು

ಕೈಯಲ್ಲಿ ಒಂದು ದಂಟು

ಬಿಟ್ಟರಷ್ಟೇ ಮೋಹದ ಅಂಟು

ಮುಗಿವುದೀ ಭೂಮಿಯ ನಂಟು

ಕವಿಗೋಷ್ಠಿ

ಅಯ್ಯಯ್ಯೋ ಕವಿಗೋಷ್ಠಿ

ನನಗಿರುವುದೊಂದೇ ಹರಿದ ವೇಸ್ಟಿ 

ನೀ ಮಾಡಬ್ಯಾಡ ಚ್ಯಾಷ್ಟಿ

ಅದಕೆಲ್ಲ ನನಗಿಲ್ಲ ಸಾಕಷ್ಟು ಪುಷ್ಟಿ


ಹೇಳುತಿರುವೆ ನೀ

ಕವಿಗೇ ಸಾಧ್ಯ ಇಷ್ಟು ಬೇಗ ಸೃಷ್ಟಿ

ಇರಬಹುದೇನೋ, ಆದರೂ 

ನಾ ಬೀರುವೆನು ವಕ್ರದೃಷ್ಟಿ 


ಯಾಕೆಂದರೆ, ನನ್ನದು ಒಮ್ಮೊಮ್ಮೆ ಅತಿವೃಷ್ಟಿ 

ಕೆಲಮ್ಮೊಮ್ಮೆ ಅನಾವೃಷ್ಟಿ

ಮಗದೊಮ್ಮೆ ಒಣಕಾಷ್ಟ

ಹಾಗಾಗಿ, ಕವಿಗೋಷ್ಠಿ ಕಷ್ಟ, ಕಷ್ಟ

ಇರುವುದೆಲ್ಲವ ಬಿಟ್ಟು


ಇರುವುದೆಲ್ಲವ ಬಿಟ್ಟು ಇರದಿರುವುದರೆಡೆಗೇಕೆ ಒಲವು

ಸಂತೋಷದ ಕ್ಷಣಗಳು ದಕ್ಕುವುದೇ ಕೆಲವು

ಇರುವಷ್ಟು ದಿನ ಇರುವುದಷ್ಟೇ ಪ್ರೀತಿಯ ನಿಲುವು

ಗಳಿಸಿರುವುದರ ಉಳಿಸಿಕೊಳ್ಳುವುದಲ್ಲವೇ ಗೆಲುವು

ನೀನಿರುವುದೇ ಹೀಗೆ

ಅಕ್ಕ ನೀನು ಚೊಕ್ಕದಿಂದ ಕಾಡುಗಳ ಸುತ್ತುವೆ
ಅಮ್ಮನಿಗೆ ದಿನಾ ರಾತ್ರಿ ಕೆಟ್ಟಕನಸ ನೀಡುವೆ 
ಒಡಹುಟ್ಟಿದವರೊಡನೆ ಜಗಳವನ್ನು ಮಾಡುವೆ
ಬೆಕ್ಕುಗಳ ಪಕ್ಕ ಕೂತು ಆಟವನ್ನು ಆಡುವೆ

ಸಿಕ್ಕಸಿಕ್ಕ ಕಡೆಗಳಲ್ಲಿ ಊಟವನ್ನು ಮಾಡುವೆ
ಹೊಟ್ಟೆಕೆಟ್ಟರಾಗ ಮಾತ್ರ ಮನೆಯಲ್ಲೇ ಮಲಗುವೆ
ಗೆಳತಿ-ಗೆಳೆಯರೊಡನೆ ಸೇರಿ ನಾಟ್ಯವನ್ನು ಮಾಡುವೆ
ಹಗಲು ರಾತ್ರಿ ಬಿಡದೆ ನೀನು ಎಲ್ಲರನ್ನೂ ಕಾಡುವೆ

ಏನು ಬೇಕು ಏನು ಬೇಡ ತಿಳಿಯದಂತೆ ನೋಡುವೆ
ಗಲಿಬಿಲಿ ಹೆಚ್ಚಾದರಾಗ ದೂರದೂರ ಓಡುವೆ 
ಒಮ್ಮೊಮ್ಮೆ ಒರಟಾಗಿ ಜೋರಾಗಿ ಕಿರುಚುವೆ
ಮಗದೊಮ್ಮೆ ಸುಮ್ಮನಿದ್ದು ಜ್ಞಾನಿಯಂತೆ ಕೂರುವೆ 

ಬೇಡದಿದ್ದರೂ ಮೂಗು ತೂರಿಸಿ ಸಲಹೆಯನ್ನು ನೀಡುವೆ
ಪಾಪಪುಣ್ಯ ಹೆಚ್ಚಾದರೆ ಸಹಾಯವನ್ನು ಮಾಡುವೆ
ಅವಮಾನವಾದಲ್ಲಿ ಬಿಗುಮಾನ ತೋರುವೆ
ನೆಮ್ಮದಿ ಕೆಡುವೆ ಬೇಡ ಗೊಡವೆ ಎಂದು ನೀ ಸರಿವೆ

Friday, December 01, 2023

ಕಾಣುವುದು ಕೈವಲ್ಯ

ಕತ್ತಲ ಕೋಣೆಯೊಳಗೆ ಬದುಕುವುದರಲ್ಲೇನು ಸುಖ

ಸುತ್ತೆಲ್ಲ ಸುಂದರ ಬೆಳಕು ತುಂಬಿರುವಾಗ

ಅದಿಲ್ಲ ಇದಿಲ್ಲವೆಂದು ಗೊಣಗಿದರೇನು ಗುಣ

ಕಣ್ಣೆದುರೇ ಸಕಲವೂ ಬಿದ್ದಿರುವಾಗ


ಅವರಿವರ ಅದೃಷ್ಟ ಕಂಡು ಕರುಬಬೇಡ 

ಮುಸುಕಿನೊಳಗೇ ನಿನಗೆ ನೀ ಮುಳ್ಳಾಗಬೇಡ

ಹೊಸಕಿ ಆತ್ಮಸಾಕ್ಷಿಯ ನೀ ಸುಳ್ಳಾಗಬೇಡ

ಮಿಸುಕಿದ ಪಿಸುಮಾತಿಗೆಂದೂ ಕಲ್ಲಾಗಬೇಡ 


ಮನದ ಕದವ ತೆರೆದು ಹೊರಗೆ ಬಂದು ನೋಡು

ಮೈಮುರಿದು ಮನಬಿರಿದು ಬೆಂದು ನೋಡು 

ಸುದೀರ್ಘ ಸುಲಲಿತ ಸುಖದಲ್ಲಿ ಮಿಂದು ನೋಡು

ಕಾಣುವುದು ಕೈವಲ್ಯ ನೀನಲ್ಲಿ ನಿಂದು ನೋಡು