Wednesday, August 13, 2014

ಮೊಗ್ಗು, ಮುಳ್ಳು, ಗುಲಾಬಿಯ ಹಸಿರು ಮಗ್



ಯಾರೋ ಕೊಟ್ಟ ಒಂದು ಕಾಫಿ ಮಗ್, ಬಿಳಿಯ ಬಣ್ಣದ್ದು, ಸುಂದರವಾಗಿತ್ತು, ಇಷ್ಟವಾಯಿತು. ನೋಡುತ್ತಿದ್ದರೆ ಸಂತೋಷವೆನಿಸುತ್ತಿತ್ತು. ಆದರೆ ಮಗ್ ಇರುವುದು ಹಾಗೇ ಇಡುವುದಕ್ಕಲ್ಲವಲ್ಲ, ಒಂದು ದಿನ ಬಿಸಿ ಬಿಸಿ ಕಾಫಿ ಹಾಕಿದೆ, ಫಟ್ ಎಂದು ಬಿರುಕು ಬಿಟ್ಟಿತು. ಆಘಾತವೆನಿಸಿದರೂ ತಡೆದುಕೊಂಡು ತೊಳೆದಿಟ್ಟೆ. ಮತ್ತೆ ಉಪಯೋಗಿಸ ಹೊರಟಾಗೆಲ್ಲಾ ಬಿರುಕು ಹೆಚ್ಚಾಗುತ್ತಿತ್ತು, ಹಾಗೇ ಇಟ್ಟೆ, ಕೊನೆಗೊಂದು ದಿನ ಒಡೆದು ಹೋಯಿತು.

ಮತ್ತೊಂದು ಹಳದಿ ಮಗ್ ಕಾಣಿಸಿತು. ಇದೂ ಉಪಯೋಗಕ್ಕೆ ತಕ್ಕದಾದಂತಿತ್ತು. ಮೊದಲ ಮಗ್‌ನಂತೆ ದುರ್ಬಲವಿರಬಹುದೇ ಎಂಬ ಸಂಶಯ ಬಂದಾಗ ಜೊತೆಗಿರುವವರು ಕೊಟ್ಟ ಭರವಸೆ ಮೇಲೆ ಕೊಂಡು ತಂದೆ. ಕೆಲವು ದಿನ ಬಳಸುವ ಧೈರ್ಯವಿಲ್ಲದೇ ಇಟ್ಟೆ, ಕೊನೆಗೆ ಬಳಸಲು ಯೋಗ್ಯವಾದುದೆಂಬ ನಂಬಿಕೆ ಬಂದ ಮೇಲೆ ಬಿಸಿ ಬಿಸಿ ನೀರು ಹಾಕಿದೆ. ಫಟ್ ಎಂದರೂ ಬಿರುಕು ಬಂದಿರಲಿಲ್ಲ, ಕುಡಿದೆ, ತೊಳೆದಿಟ್ಟೆ. ನಂತರ ದಿನಾ ನೆಮ್ಮದಿಯಿಂದ ಅದರಲ್ಲೇ ಕಾಫಿ ಕುಡಿಯುತ್ತಿದ್ದೆ. ಕೆಲವೇ ದಿನಗಳಲ್ಲಿ ಬಿಸಿ ಕಾಫಿ ಮೈಮೇಲೆ ಬಿದ್ದಾಗ ತಿಳಿಯಿತು ಮಗ್ ತಳದಲ್ಲೇ ಬಿರುಕು ಬಿಟ್ಟಿದೆಯೆಂದು. ಆದರೂ ಮಗ್‌ನ ಉಪಯೋಗಕ್ಕೆ ಮರುಳಾಗಿ ಅಂಟು ಹಾಕಿ ಸರಿಮಾಡಿದೆ. ಆದರೆ ಒಳಗೇ ಅಧೈರ್ಯವಿತ್ತು, ಇದು ಬಳಕೆಗೆ ಯೋಗ್ಯವಲ್ಲ, ಯಾವಾಗ ಬೇಕಾದರೂ ಒಡೆದು ಹೋಗಬಹುದೆಂದು. ಹಾಗಾಗಿ, ಅದನ್ನು ಶೋಕೇಸ್‌ನಲ್ಲಿಟ್ಟೆ. ಮುಂದೊಂದು ದಿನ, ಯಾರದೋ ಕೈ ತಾಗಿ ಬಿದ್ದು ಒಡೆದೇ ಹೋಯಿತು.

ಇತ್ತೀಚೆಗೆ ಒಂದು ಮೊಗ್ಗು, ಮುಳ್ಳು, ಗುಲಾಬಿಯಿರುವ ಹಸಿರು ಮಗ್ ನೋಡಿದೆ, ಅದರ ಗಾಂಭೀರ‍್ಯಕ್ಕೆ, ಸೌಂದರ್ಯಕ್ಕೆ ಮನಸೋತೆ. ಆದರೆ ಕೊಳ್ಳುವ ಧೈರ್ಯ ಬರಲಿಲ್ಲ. ಕೈಯಲ್ಲೇ ಹಿಡಿದು ಗುಣಗಾನ ಮಾಡುತ್ತಾ, ಹಳೆಯ ಅನುಭವಗಳಿಂದ ಹೆದರಿ ಮತ್ತೆ ಕೆಳಗಿಡುತ್ತಾ, ಆಸೆಯಿಂದ ಕೈಗೆತ್ತಿಕೊಳ್ಳುತ್ತಾ, ಜೊತೆಗಿರುವವರೊಂದಿಗೆ ಸಮಾಲೋಚಿಸಿದೆ. ತಟ್ಟಿ, ಕುಟ್ಟಿ, ಶಬ್ದ ತುಲನೆ ಮಾಡಿ, ಇದು ಮೊದಲವುಗಳಂತಲ್ಲ ಎಂಬ ಅಭಿಪ್ರಾಯ, ಭರವಸೆ ಪಡೆದು, ಮತ್ತೆ ಮತ್ತೆ ಚಿಂತಿಸಿ, ಕೊನೆಗೆ ಕೊಂಡೇಬಿಟ್ಟೆ. ಮನೆಗೆ ಬಂದ ತಕ್ಷಣ ಸ್ವಚ್ಛವಾಗಿ ತೊಳೆದು ಜ್ಯೂಸ್ ಹಾಕಿ ಕುಡಿದೆ, ಉಪಯುಕ್ತವೆನಿಸಿತು. ಆದರೆ ಮಗ್ ಇರುವುದು ಅದಕ್ಕಲ್ಲವಲ್ಲ, ಮರುದಿನ ಬಿಸಿ ಬಿಸಿ ಟೀ ಹಾಕಿದೆ, ಶಿವ ಶಿವಾ! ಮೊದಲೆರಡು ಮಗ್‌ಗಳಿಗಿಂತಲೂ ಭೀಕರವಾಗಿ ಫಟ್ ಎಂದಿತು. ಟೀ ಪೂರ್ತಿ ಸೋರಿ ಹೋಯಿತು. ಈಗ ಅದಕ್ಕೆಂದೇ ಶೋಕೆಸ್‌ನಲ್ಲಿ ಜಾಗ ಹುಡುಕುತ್ತಿದ್ದೇನೆ, ಆದರೆ ಒಡೆದು ಹೋದ ಮಗ್ ಇನ್ನೆಷ್ಟು ದಿನ ಇರಬಹುದು? ಇರುವಷ್ಟು ದಿನ ಇರಲಿ ಒಡಲಿಗೆ ಬೆಂಕಿಯಾದರೂ ಕಡೇ ಪಕ್ಷ ಕಣ್ಣಿಗೆ ತಂಪಾಗಿರುತ್ತದೆ.

ಇನ್ನು ಮುಂದೆ ಮಗ್ ತರುವ ಬಯಕೆಯೂ ಇಲ್ಲ, ಅಗತ್ಯವೂ ಇಲ್ಲ. ಏಕೆಂದರೆ ಕಣ್ಣಿಗೆ ಸುಂದರವಾಗಿದ್ದರೂ, ಉಪಯುಕ್ತವೆನಿಸಿದರೂ, ಅದರ ಅಗತ್ಯವಿದ್ದಾಗ ಫಟ್ ಎನ್ನುವುದಾದರೆ, ಇದ್ದು ಪ್ರಯೋಜನವೇನು? ಅದಕ್ಕೇ, ಸ್ಟೀಲ್ ಲೋಟವೇ ಲೇಸಜ್ಞ ಎಂಬ ನಿಲುವು ತಳೆದಿದ್ದೇನೆ.

Saturday, February 18, 2012

Kodachadriya Karulu

Intestine of Kodachadri - Kodachadriya Karulu




HOW SAD !!

Tuesday, January 26, 2010

ಆಶಾಭಾವ
























ಚಿತ್ರ: ಗೂಗಲ್, ಸೆಲ್ಫ್


ಬದುಕಿನುದ್ದಕ್ಕೂ ಅದೇನನ್ನೋ ಹುಡುಕುತ್ತಿದ್ದೆ. ಏನೆಂಬುದು ತಿಳಿದಿರಲಿಲ್ಲ. ಏನೋ ಚಡಪಡಿಕೆ, ಸಂಕಟ, ತಿಳಿಯಲಾರದ ಅಸಮಾಧಾನ, ನೋವು. ಎಲ್ಲಾ ಇದ್ದರೂ, ಏನೂ ಇಲ್ಲವೆಂಬ ಶೂನ್ಯ ಭಾವ.

ಗೊಂದಲದಿಂದ ಸಾಗುತ್ತಿದ್ದಾಗ ಒಂದಿರುಳು ತಂಪು ಗಾಳಿ ಸುಳಿಯಿತು. ಸುತ್ತಮುತ್ತ ಮಧುರವಾದ ಪರಿಮಳ ಹರಡಿತು. ಕಣ್ಣ್ ಕುಕ್ಕದ, ಹಿತವಾದ ಬೆಳಕು ! ಆ ಕ್ಷಣದಿಂದ ಎಂಥಾ ನೆಮ್ಮದಿ ! ಜೀವನದುದ್ದಕ್ಕೂ ನಡೆಸುತ್ತಿದ್ದ ಹುಡುಕಾಟ ಗುರಿಮುಟ್ಟಿದ ಭಾವ. ತಳಮಳ ಅಸಹನೆ, ಸಿಟ್ಟು, ಶೂನ್ಯ ಭಾವ ಇನ್ನಿಲ್ಲವೆಂಬಂಥಾ ಶಾಂತಿ !!

ಸುತ್ತಮುತ್ತ, ಅಕ್ಕಪಕ್ಕ ತಿರುಗಿದೆ, ತಲೆ ಎತ್ತಿ ನೋಡಿದೆ, ಅದೋ ಅಲ್ಲಿ ! ಬಾನಂಗಳದಲ್ಲೊಂದು ಮುದ್ದಾದ ನಕ್ಷತ್ರ ಮಿನುಗುತ್ತಿತ್ತು. ವಜ್ರದಂತೆ ಹೊಳೆಯುತ್ತಿತ್ತು. ನನ್ನತ್ತ ನೋಡಿ ನಗುತ್ತಿತ್ತು. ಅದರ ಕಂಗಳಲ್ಲಿ ಸೂಸುತ್ತಿದ್ದ ಹೊಳಪು, ಪ್ರೀತಿಗೆ ಮೈಮರೆತೆ, ಜಗ ಮರೆತೆ. ಕನಸಲ್ಲೆಂಬಂತೆ ಅದರತ್ತ ನಡೆಯಲು ಹೊರಟೆ, ಅದು ನನ್ನ ಬಾಚಿ ತಬ್ಬಿಕೊಂಡ ಭಾವ. ಇನ್ನೇನೂ ಭಯವಿಲ್ಲವೆಂಬ ಸಾಂತ್ವನ. ಅಪೂರ್ವ, ಅಖಂಡ ಭರವಸೆ.

ಕಾಡುತ್ತಿದ್ದ ಗೊಂದಲ ಬಿಟ್ಟು ಹೋಯ್ತು, ಬಾಯಾರಿದ ಪ್ರೀತಿಯ ಕೊಡ ತುಂಬಿತು. ಧೈರ್ಯದಿಂದ ಮುನ್ನುಗ್ಗುವ ಉತ್ಸಾಹ ಮೊಳೆಯಿತು.

ಹೀಗೆ ಇಹ ಮರೆತ, ನೆಮ್ಮದಿಯ ಬದುಕು ಸಾಗುವಾಗ ಒಂದು ದಿನ ಕಾರ್ಮೋಡ ಕವಿಯಿತು, ಬಾನು ಗುಡುಗಿತು. ಭಯಗೊಂಡು ನಕ್ಷತ್ರದ ಅಭಯವರಸಿ ಹುಡುಕಿದೆ, ಆದರೆ ತಡವಾಗಿತ್ತು. ಮತ್ತೆ ಅನಾಥ ಪ್ರಜ್ಞೆ ! ಕಳಕೊಂಡ ನೋವು, ಸಂಕಟ ! ಸದ್ದಿಲ್ಲದೇ ದಟ್ಟವಾಗಿ ಪಸರಿಸಿದ ನಕ್ಷತ್ರದೆಡೆಗಿನ ಪ್ರೀತಿ ಸುಮ್ಮನಿರಲು ಬಿಡದೆ ನಾಯಿಪಾಡು ಮಾಡಿತು. ಹುಡುಕಾಟದ ದಿನಗಳು ಮತ್ತೆ ಪ್ರಾರಂಭವಾಗುವ ಸೂಚನೆ !

ಅಷ್ಟರಲ್ಲಿ, ಅರೆಕ್ಷಣ ಸರಿದ ಕಾರ್ಮೋಡದ ಮರೆಯಿಂದ ನಕ್ಷತ್ರ ಅದೇ ಹೊಳಪು, ಪ್ರೀತಿ ಕಣ್ಗಳಿಂದ ನೋಡಿ ಅರೆನಗು ನಗುತ್ತಾ ಹೇಳಿತು "ಜಗವನ್ನೇ ಪಡೆದೆ ಎಂದು ಬೀಗಬೇಡ, ಇಲ್ಲಿ ಯಾವುದೂ ಶಾಶ್ವತವಲ್ಲ, ನಿನ್ನಂತಯೇ ಪರರು, ನಿನ್ನಂತೆ ಗೊಂದಲಕ್ಕೀಡಾಗಿರುವವರ ಕಡೆಗೆ ನನ್ನ ಒಲವು, ಪಯಣ, ಇಷ್ಟುದಿನ ಪಡೆದುದಷ್ಟೇ ನಿನ್ನದು, ಅತಿಯಾಸೆ ಬೇಡ. ನೀಡಬೇಕಾದುದರ ಮಿತಿ ದಾಟಿರುವುದರಿಂದ ನಾನೀಗ ಹೋಗಲೇ ಬೇಕಿದೆ"

ಭಯದಿಂದ ಚೀರಲಾರಂಭಿಸಿದೆ. ಕೈ ಚಾಚಿ ಓಡಿದೆ, ಅಸಾಧ್ಯವೆಂಬರಿವಿದ್ದರೂ ಆಕಾಶದೆತ್ತರಕ್ಕೆ ನೆಗೆಯುವ ಯತ್ನ ಮಾಡಿದೆ. ದಿಕ್ಕೆಟ್ಟು ಅಂಗಲಾಚಿದೆ, ಹುಚ್ಚಿಯಂತೆ ಪ್ರಲಾಪಿಸಿದೆ. ನಕ್ಷತ್ರ ಮರುಕದಿಂದ ನೋಡುತ್ತಿತ್ತು. ಆ ಮರುಕವೂ ನನಗೆ ಪ್ರಿಯವಾಗೇ ಕಂಡಿತು, ಅದಾದರೂ ಸಿಗಲಿ ಎಂಬಾಸೆ. ನನ್ನ ಹುಚ್ಚಾಟ ನೋಡಿ ಬೇಸತ್ತು, ಮಸುಕಾಗುತ್ತಿರುವ ನಕ್ಷತ್ರ ಹೇಳಿತು "ಹುಚ್ಚೀ, ವಾಸ್ತವವನ್ನು ಒಪ್ಪಿಕೋ, ನಿನ್ನ ನೀನು ನಂಬಿಸಿಕೊಂಡು ಬದುಕುವ ಯತ್ನ ಬೇಡ "

ಹೇಗೆ ! ಹೇಗೆ ಸಾಧ್ಯ ಇದು ! ಎಂಬ ಸಂಕಟ. ಎದ್ದೆದ್ದು ಹೊಡೆಯುವ ಸತ್ಯ, ಕಹಿಯಾದ ಸತ್ಯ. ಕಣ್ಣೆದುರೇ ಇದ್ದರೂ, ದೂರ ಇರುವ, ದೂರವಾಗುತ್ತಿರುವ ಅರಿವು. ಕೊನೆಗೂ ಅದು ನಕ್ಷತ್ರವಾಗೇ ಉಳಿಯಿತು, ಕೈಗೆಟುಕಲಿಲ್ಲ. ಮತ್ತೆ ಅನಾಥವಾಗಿಸಿತು.

ಎದೆಯಲ್ಲಿ ಬತ್ತದ ಆಶಾಭಾವ. ಮತ್ತೆ ಆಗಸ ಶುಭ್ರವಾಗಬಹುದು, ನಕ್ಷತ್ರ ಇನ್ನೊಮ್ಮೆ ಆಗಸದಲ್ಲಿ ಹೊಳೆಯಬಹುದು, ಪ್ರೀತಿ ತುಂಬಿದ ಕಂಗಳಿಂದ ಹರಸಬಹುದು, ಎದೆಗವುಚಿಕೊಂಡು ಸಾಂತ್ವನ ಹೇಳಬಹುದು...

Thursday, January 21, 2010

" ನನ್ನ ಎರಡು ರೂಪಾಯಿ "


ಚಿತ್ರಕೃಪೆ: ಗೂಗಲ್



ನನಗಾಗ ಏಳು ವರ್ಷ. ಪೇಪರಲ್ಲಿ ಪದಬಂದದ ಸ್ಪರ್ಧೆ ಬಂದಿತ್ತು. ಅದನ್ನು ತುಂಬಿಸಿದ ಚಿಕ್ಕಪ್ಪ, ನನ್ನ ಹೆಸರು ಹಾಕಿ ಕಳಿಸಿದ್ರು. ಒಂದು ದಿನ, ನನ್ನನ್ನು ಹುಡುಕಿಕೊಂಡು ‘ಎರಡು ರೂಪಾಯಿ’ ಮನಿ ಆರ್ಡರ್ ಬಂದಾಗಲೇ ಗೊತ್ತಾಗಿದ್ದು, ನನಗೆ ಬಹುಮಾನ ಬಂದಿದೆ ಅಂತ. ಅದೆಲ್ಲಿತ್ತೋ, ಆ ಕ್ಷಣದಲ್ಲಿ ಚಿಕ್ಕಪ್ಪನ ಮೇಲೆ ಅತಿಯಾದ ಪ್ರೀತಿ, ಅಭಿಮಾನ ಉಕ್ಕಿ ಬಂತು, ಆಜನ್ಮ ಋಣಿಯಾಗಿರುವಂಥ ಕೃತಜ್ಞತಾ ಭಾವ.

ಆಹಾ ! ನನ್ನ ಹೆಸರಲ್ಲಿ, ಅದೂ ಎರಡು ರೂಪಾಯಿ ಅಂದ್ರೆ ಸಾಮಾನ್ಯವೇ!! ಎಂಥ ಹೆಮ್ಮೆ!! ನನಗಾಗ ಪೈಸೆ, ರೂಪಾಯಿಗಳ ಲೆಕ್ಕಾಚಾರ ಅರ್ಥವಾಗುತ್ತಿರಲ್ಲಿಲ್ಲವಾದ್ದರಿಂದ, ಏನೋ ಲಕ್ಷ ರೂಪಾಯಿ ಬಂದಂಥ ಸಂತಸ, ಹೆಮ್ಮೆ, ಅಹಂಕಾರ.

ಈ ದುಡ್ಡು ಜೋಪಾನ ಮಾಡುವ ಜವಾಬ್ದಾರಿ ಬಿತ್ತು ನಂಗೆ. ಅಮ್ಮನ ಕೈಲಿ ಕೊಟ್ಟು ಜಾಗ್ರತೆಯಾಗಿ ಇಡಲು ಹೇಳಿ, ಅಮ್ಮ ಎಲ್ಲಿಡುತ್ತಾರೆಂದು ನೋಡಿ, ಕಪಾಟಿನ ಬಾಗಿಲೆಲ್ಲಾ ಭದ್ರವಾಗಿದೆಯೋ ಇಲ್ವೋ ನೋಡ್ಸಿದೆ. ಇಲ್ಲಾಂದ್ರೆ ನನ್ನ ಆಸ್ತೀನ ಯಾರಾದ್ರೂ ತಗೊಂಡ್ರೆ ಅಂತ ಭಯ! ಜೊತೆಗೆ ಅದೊಂಥರಾ ಅದುವಿಡಲಾರದಂಥ ಭಾವನೆ.

ಮಧ್ಯಾಹ್ನ ಮತ್ತೆ, ದುಡ್ಡು ತೋರ್‍ಸು ಅಂತ ಕೇಳಿದೆ, ಏನೋ ಕೆಲಸದಲ್ಲಿ ವ್ಯಸ್ತವಾಗಿದ್ದ ಅಮ್ಮ, ಸಮಯ ಮಾಡಿಕೊಂಡು ಬರೋವರೆಗೂ ನಾನು ಬೆಕ್ಕಿನ ಹಾಗೆ ಕಪಾಟಿನ ಸುತ್ತಮುತ್ತವೇ ಸುತ್ತುತ್ತಾ ಇದ್ದೆ. ದುಡ್ಡು ಹೊರ ತೆಗೆಸಿ, ಮುಟ್ಟಿ, ಮೂಸಿ ನೋಡಿ, ಮುಖವನ್ನು ಉರಿಯುವ ಬಲ್ಬಿನಂತೆ ಮಾಡಿಕೊಂಡು, ಅಮ್ಮನ ಕೈಗೆ ಕೊಟ್ಟೆ. ಅದಾಗಲೇ ಅಮ್ಮಂಗೆ ಅನುಮಾನ ಬಂದಿತ್ತು, ಇನ್ನು ಇವ್ಳ ಕಾಟ ತಪ್ಪಿದ್ದಲ್ಲ ಅಂತ, ‘ಆಯ್ತಲ್ಲಾ ನೋಡಿ, ಇನ್ನು ಮತ್ತೆ ಮತ್ತೆ ಕೇಳೋ ಹಾಗಿಲ್ಲ, ನಂಗೆ ಕೆಲ್ಸ ಇದೆ’ ಅಂತ ಮುಂಜಾಗ್ರತೆಯಾಗಿ ಸೂಚಿಸಿ ಹೋದ್ರು.

ಶಾಲೆಯಲ್ಲಿ, ನನ್ನ ತರಗತಿಯಲ್ಲಿ ನನಗೆ ವಿಶೇಷ ಗೌರವ. ಉಳಿದ ಮಕ್ಕಳಿಗೆ, ‘ನಮಗೂ ದುಡ್ಡು ಬರಬಾರದಿತ್ತಾ’ ಅನ್ನೋ ಸಂಕಟ. ಆಟ ಆಡಲು ಹೋದಾಗಲೂ ನಂಗದೇನೋ ಹೆಮ್ಮೆ. ಮುಂದೆರಡು ಮೂರು ದಿನ, ನನ್ನದೇ ವಯಸ್ಸಿನ ಎಲ್ಲರಿಗೂ ನನ್ನ ನೋಟಿನ ಬಗ್ಗೆ ವಿವರಗಳನ್ನು ಕೊಡೋದೇ ಆಯ್ತು. ಜೊತೆಗೆ, ನಂಗೂ ಏನೋ ಒಂದು ಧೈರ್ಯ, ಬಹುಶಃ ‘ಕಾಪಿ’ ಬರೀದೇ ಇದ್ರೂ ಸರಸ್ವತಿ ಟೀಚರಿಗೆ ಕೋಪ ಬರಲಾರದು, ನಂಗೆ ಬಹುಮಾನ, ಅದೂ ದುಡ್ಡು ಬಂದಿದ್ಯಲ್ಲಾ !!

ಕೊನೆಗೊಂದು ದಿನ ಶಾಲೆಯ ವಾರ್ಷಿಕೋತ್ಸವ ಬಂತು. ರಾತ್ರೆ ನಮಗೆಲ್ಲಾ ಜೊತೆಯಾಗಿ ಅಜ್ಜಿಯೂ ಬಂದ್ರು. ಮಕ್ಕಳ ಕೈಯಲ್ಲಿ ದುಡ್ಡು ಕೊಟ್ಟರೆ ಎಲ್ಲಿ ಕಳೆದುಕೊಳ್ಳುತ್ತಾರೋ ಅಂತ ಅಜ್ಜಿಯೇ ನಮಗೆ ಖಜಾಂಚಿ. ಹೊರಡುವ ಸಮಯದಲ್ಲಿ ಮತ್ತೆ ಮತ್ತೆ ಕೇಳಿ ದೃಢ ಪಡಿಸಿಕೊಳ್ಳುತ್ತಿದ್ದೆ, "ಅಜ್ಜೀ, ಎನ್ನ ಎರಡು ರೂಪಾಯಿ ತೆಕ್ಕೊಂಡಿದಿರನ್ನೇ, ಮರೆಯೆಡಿ" (ಅಜ್ಜೀ ನನ್ನ ಎರಡು ರೂಪಾಯಿ ತಗೊಂಡಿದೀರಾ ತಾನೇ ! ಮರೀಬೇಡಿ!)

ಅದ್ಯಾಕೋ ಏನೋ, ನನ್ನ ಈ ಸಂಭ್ರಮವನ್ನು ಯಾರು ಎಷ್ಟು ತಮಾಷೆ ಮಾಡಿದ್ರೂ ನಂಗೇನೂ ಅನಿಸ್ತಿರ್‍ಲಿಲ್ಲ. ನನ್ನ ಬಗ್ಗೆ ನಂಗೇ ‘ಸೆಲೆಬ್ರಿಟಿ’ ಥರಾ ಅನಿಸ್ತಿತ್ತು. (ತರಗತಿಯ ಮಕ್ಕಳ ದೃಷ್ಟಿಯಲ್ಲಿ ನಾನಾಗಲೇ ‘ಸೆಲೆಬ್ರಿಟಿ’ ಆಗಿದ್ದೆ, ಯಾರಿಗೆ ಏನೇ ಬೇಕಾದರೂ ನನ್ನ ಕೇಳೇ ಮಾಡೋವರೆಗೆ ಬಂದಿತ್ತು.)

ಶಾಲೆಯ ಹತ್ತಿರ ಬಂದಾಗ ಮೈಕಾಸುರನ ಅಬ್ಬರ, ವಾರ್ಷಿಕೋತ್ಸವದ ಸಡಗರ. ಒಂದು ರೌಂಡ್ ಹೋಗಿ, ಏನೇನು ಅಂಗಡಿ ಹಾಕಿದಾರೆ, ಏನೇನೆಲ್ಲ ತಗೊಳ್ಬೋದು ಅಂತೆಲ್ಲಾ ಲೆಕ್ಕ ಹಾಕಿಕೊಂಡೆ. ಅಣ್ಣಂಗೂ; ಏನು ಬೇಕಾದ್ರೂ ತಗೋ ಅಂತ ಧಾರಾಳವಾಗಿ ಹೇಳಿದೆ. ಕಾರ್ಯಕ್ರಮ ಶುರುವಾಯ್ತು. ಅಷ್ಟರಲ್ಲಿ ಐಸ್ ಕ್ಯಾಂಡಿ ಗಾಡಿಯ ಘಂಟೆಯೂ ಕೇಳಿತು. ಕೂಡಲೇ ಗೆಳತಿಯರನ್ನೆಲ್ಲಾ ಕರೆದುಕೊಂಡು, ಅಜ್ಜಿಯ ಹತ್ತಿರ ದುಡ್ಡು ಕೇಳಿದೆ. ಯಾರೋ ಇನ್ನೊಬ್ಬ ಅಜ್ಜಿಯೊಡನೆ ರಸವತ್ತಾದ ಪಟ್ಟಾಂಗದಲ್ಲಿದ್ದ ಕಾರಣ, ನನ್ನ ಎರಡು ರೂಪಾಯಿ ನೋಟನ್ನು ಹುಡುಕಿ ತೆಗೆಯುವ ಬದಲು, ಕೈಗೊಂದಿಷ್ಟು ನಾಣ್ಯಗಳನ್ನು ಕೊಟ್ಟು ಸಾಗಹಾಕಿದ್ರು. (ಇದರಿಂದಾಗಿ ಮುಂದೆ ಬರುವ ಕಷ್ಟದ ಅರಿವಾಗಲಿಲ್ಲ ಅವರಿಗೆ).

ಸಾಹುಕಾರಳಂತೆ ಕೈಲಿ ನಾಣ್ಯಗಳನ್ನು ಹಿಡಿದು, ಯಾರಿಗೆಲ್ಲ ಬೇಕೋ ತಗೊಳ್ಳಿ ಅಂತ ಹೇಳಿ, ನಾನೂ ಕೆಂಪು ಬಣ್ಣದ ಐಸ್ ಕ್ಯಾಂಡಿ ಚೀಪುತ್ತಾ, ಬಂದು ಅಜ್ಜಿಯ ಹತ್ರ ಕುಳಿತೆ. ಸಭೆ ಮುಗಿದು ಬಹುಮಾನ ವಿತರಣೆ ಆದ ಕೂಡಲೆ, ಚುರುಮುರಿ ಗಾಡಿ ನೆನಪಿಗೆ ಬಂತು. ಮತ್ತೆ ಅಜ್ಜಿ ಹತ್ರ ದುಡ್ಡು ಕೇಳಿದೆ. ಪಾಪ, ಮತ್ತೆ ನನ್ನ ನೋಟು ಕೊಡೋ ಬದ್ಲು, ಒಂದಷ್ಟು ನಾಣ್ಯಗಳನ್ನೇ ಕೊಟ್ರು. ಹೀಗೇ ನಾನು ಕೇಳೋದೂ, ಅಜ್ಜಿ ನಾಣ್ಯಗಳನ್ನೇ ಕೊಡೋದೂ ನಡೀತಾ ಇತ್ತು.

ಹಾಡುಗಳು, ನಾಟ್ಯಗಳು ಶುರುವಾಯ್ತು. ಈಗ ಹೋಗಿ ಕಡ್ಲೆ ಮಿಠಾಯಿ ತಿನ್ನದೇ ಇದ್ರೆ ಹೇಗೆ ! ಸರಿ, ರಾಗ ಎಳೆದೆ, ‘ಅಜ್ಜೀ, ಪೈಸೇ.....' ಎಲ್ಲರ ಕೈತುಂಬ ಕಡ್ಲೆ ಮಿಠಾಯಿ, ಬಣ್ಣಬಣ್ಣದ ಮಿಠಾಯಿ, ನನ್ನ ತಲೆ ತುಂಬಾ ಅಹಂಕಾರ, ನಾನು ಎಲ್ಲರಿಗೂ ಮಿಠಾಯಿ ಕೊಡ್ಸಿದೆ ಅಂತ. ಮಿಠಾಯಿ ತಿನ್ನುತ್ತಾ ಡ್ಯಾನ್ಸ್ ನೋಡೋ ಮಜಾನೇ ಬೇರೆ.

ಇದೆಲ್ಲಾ ಮುಗಿದು ಮಕ್ಕಳ ನಾಟಕ ಶುರುವಾಗುವ ಹೊತ್ತಿಗೆ ಬನ್ಸ್ ತಿನ್ನೋ ಮೂಡ್ ಬಂದು, ಅಲ್ಲಿ ಕೂರೋದೇ ಕಷ್ಟ ಆಯ್ತು. ‘ಅಜ್ಜೀ, ಬನ್ಸಿಂಗೆ ಪೈಸೆ ಕೊಡಿ’ ಅಂತ ಹಕ್ಕಿನಿಂದ ಕೇಳಿದೆ. ಇಷ್ಟರಲ್ಲಾಗಲೇ ಅಜ್ಜಿಯಂದಿರ ಮಾತಿಗೆ ಸ್ವಲ್ಪ ವಿರಾಮ ಉಂಟಾದುದರಿಂದ, ಈಗಾಗಲೇ ಸುಮಾರು ನಾಣ್ಯಗಳು ಕೈತಪ್ಪಿ ಹೋಗಿರುವ ಅರಿವಾದ ಅಜ್ಜಿ, ‘ಸಾಕಿನ್ನು, ಕಾಟಂಕೋಟಿ ತಿಂದದು’ (ಸಾಕಿನ್ನು ಹಾಳೂಮೂಳೂ ತಿಂದಿದ್ದು) ಅಂತ ಹೇಳಿದ್ದೇ ದೊಡ್ಡ ತಪ್ಪಾಗಿ ಕಂಡಿತು ನಂಗೆ. ‘ನಿಂಗೊಗೆ ಕೊಡ್ಲೆಂತ, ಎನ್ನ ಎರಡು ರೂಪಾಯಿ ಇಲ್ಯಾ!? (ನಿಮ್ಗೆ ಕೋಡೋಕೇನು, ನನ್ನ ದುಡ್ಡೇ ಇಲ್ವಾ) ಅಂತ ಜೋರಿನಿಂದಲೇ ಕೇಳಿದೆ, ನನ್ನ ಎರಡು ರೂಪಾಯಿಯನ್ನು ಅಜ್ಜಿಯೇ ಲಪಟಾಯಿಸುತ್ತಿದ್ದಾರೇನೋ ಅನ್ನುವ ಅನುಮಾನ ನಂಗೆ.

ಮೊದಲೇ ಆ ಎರಡು ರೂಪಾಯಿಯ ನೋಟನ್ನೇ ಕೊಡದೇ ಇದ್ದ ‘ದೊಡ್ಡ’ ತಪ್ಪಿನ ಅರಿವಾಯ್ತು ಅಜ್ಜಿಗೆ. ಅಷ್ಟರಲ್ಲಾಗಲೇ ಸುಮಾರು ಹತ್ತು ರೂಪಾಯಿ ಅಜ್ಜಿಯ ಕೈಬಿಟ್ಟಿತ್ತು. ಅದನ್ನು ನನಗೆ ತಿಳಿಸಿ ಹೇಳಲು, ಪಾಪ ತುಂಬಾ ಪ್ರಯತ್ನ ಪಟ್ರು. ಉಹೂಂ, ನಾನೋ ಮಹಾಜ್ಞಾನಿ ! ನನ್ನ ನೋಟು ನನ್ನ ಕೈಗೆ ಬಂದಿಲ್ಲ ಹಾಗಾಗಿ ಅದು ಖರ್ಚೇ ಆಗಿಲ್ಲ, ಈಗ ಅದನ್ನು ಕೊಡಿ ನಂಗೀಗ ಬನ್ಸ್ ಬೇಕೇ ಬೇಕು, ನಾನೇನು ನಿಮ್ಮ ದುಡ್ಡು ಕೇಳ್ತಿದೀನಾ, ಅಂತ ನನ್ನ ತರ್ಕ. ಕೊನೆಗೆ ‘ನನ್ನ ದುಡ್ಡು’ ಇಟ್ಟುಕೊಂಡ ತಪ್ಪಿಗೆ, ಮೊದಲು ಅದನ್ನೇ ನನ್ನ ಕೈಗೆ ಕೊಡದ ತಪ್ಪಿಗೆ, ಅಜ್ಜಿ ಪಾಪ, ತನ್ನ ಹತ್ತು ರೂಪಾಯಿ ಜೊತೆಗೆ, ಇನ್ನೆರಡು ರೂಪಾಯಿ ಕೊಡಬೇಕಾಗಿ ಬಂತು. ನಂಗೆ ‘ನನ್ನ ದುಡ್ಡಲ್ಲೇ’ ಬನ್ಸೂ ಸಿಕ್ತು.

ಬನ್ಸ್ ತಿಂದು, ನಾಟಕ ಶುರುವಾಗುವ ಹೊತ್ತಿಗೆ, ಏನೋ ಸಾಧಿಸಿ ಬಂದಂಥ ನೆಮ್ಮದಿಯಿಂದ ಅಜ್ಜಿಯ ತೊಡೆ ಮೇಲೆ ತಲೆ ಇಟ್ಟುಕೊಂಡು ನಿದ್ದೆ ಮಾಡಿದೆ. ಬೆಳಗಿನ ಜಾವ ಯಕ್ಷಗಾನ ಮುಗಿದು ಮಂಗಳ ಹಾಡುವಾಗ ಎಚ್ಚರವಾಗಿ, ಎಲ್ಲರ ಜೊತೆ, ಕಾಲೆಳೆದುಕೊಂಡು ಮನೆಗೆ ಹೊರಟೆ. ಈಗ ಎರಡು ರೂಪಾಯಿ ಖಾಲಿಯಾದುದರಿಂದ, ನಾನೂ ಎಲ್ಲರಂತೆ ಸಾಧಾರಣ ಮನುಷ್ಯಳು ಅನ್ನುವುದು ನಿಧಾನವಾಗಿ ಅರಿವಿಗೆ ಬಂತು.

ಇದಾಗಿ ಕೆಲವೇ ದಿನಗಳಲ್ಲಿ ಅಜ್ಜನ ತಿಥಿಗೆ (ಶ್ರಾದ್ಢ) ಊರಿಗೆ ಬಂದ ಚಿಕ್ಕಪ್ಪ ನನ್ನನ್ನು ಕರೆದು ಗುಟ್ಟಿನಲ್ಲಿ "ಇನ್ನೂ ಐದು ರೂಪಾಯಿ ಬತ್ತು ನಿನಗೆ" ಅಂತ ಹೇಳಿದ್ದನ್ನು ನಾನಿನ್ನೂ ಮರೆತಿಲ್ಲ :D

Thursday, July 30, 2009

ಬದುಕು

ಒಂದು ಹಾವಿನ ಸ್ನೇಹ ಮಾಡಿದೆ,
ಸಮಯವಲ್ಲದ ಸಮಯದಲ್ಲಿ ನನಗದು ಕಚ್ಚಿತು
ಈಗ ಮತ್ತೆ ಮನೆಯ ಸುತ್ತಮುತ್ತ ಹರಿದಾಡುತ್ತಿದೆ.

ಒಂದು ಬೆಕ್ಕಿನ ಸ್ನೇಹ ಮಾಡಿದೆ,
ಬೇಸರ ಬಂದಾಗ ಎದ್ದು ಹೋಯಿತು
ಈಗ ಮತ್ತೆ ಮನೆಯ ಕಿಟಕಿಯಲ್ಲಿ ಮಿಯಾವ್ ಅನ್ನುತ್ತಿದೆ.

ಒಂದು ಹಸುವಿನ ಸ್ನೇಹ ಮಾಡಿದೆ
ಒಮ್ಮೆ ಪ್ರೀತಿಯಿಂದ ತಡವಿದಾಗ ತಿವಿಯಿತು
ಈಗ ಮತ್ತೆ ಮನೆಯ ಮುಂದೆ ಬಂದು ಅಂಬಾ ಎನ್ನುತ್ತಿದೆ

ಒಂದು ಗೋಸುಂಬೆಯ ಸ್ನೇಹ ಮಾಡಿದೆ
ಒಂದು ದಿನ, ಮಾತಾಡುತ್ತಿದ್ದಂತೆ ಬಣ್ಣ ಬದಲಿಸಿತು
ಈಗ ಮತ್ತೆ ಮನೆಯೆದುರಿನ ಮರದಲ್ಲಿ ಅದೇ ಬಣ್ಣದಲ್ಲಿ ಕಾಣಿಸಿಕೊಳ್ಳುತ್ತಿದೆ

ನಾನೂ ಮತ್ತೆ ಮಾತಾಡುತ್ತಿದ್ದೇನೆ, ಪ್ರೀತಿ ತೋರುತ್ತಿದ್ದೇನೆ
ಸ್ನೇಹ ಹಸ್ತ ತೆರೆದೇ ಇದ್ದೇನೆ, ಬದುಕುದ್ದಕ್ಕೂ ಹೀಗೇ ಇರುತ್ತೇನೆ,
ಯಾಕೆಂದರೆ ದ್ವೇಷ ನಿಮಿಷ, ಪ್ರೀತಿ ಹರುಷ, ಸ್ನೇಹ ವರುಷ

Sunday, March 22, 2009

ಅಣ್ಣ - ತಂಗಿ















ಪುಟ್ಟ ತಂಗಿ, ಒಬ್ಬ ಪುಟ್ಟ ಅಣ್ಣ

ಮನೆಯಲ್ಲಿ ಮರದ ಕೆಲಸ (ಕಾರ್ಪೆಂಟರಿ) ನಡೆಯುತ್ತಿದೆ.
ಆಟವಾಡುತ್ತಾ, ಆಡುತ್ತಾ, ಕೈಗೆತ್ತಿಕೊಂಡ ‘ಮರಳು ಕಾಗದ’ (ಸಾಂಡ್ ಪೇಪರ್) ನೋಡಿ, ಏನನ್ನಿಸಿತೋ,
ಬಗ್ಗಿ ಏನನ್ನೋ ಹೆಕ್ಕುತ್ತಿದ್ದ ಪುಟ್ಟ ತಂಗಿಯ ಬೆತ್ತಲೆ ಬೆನ್ನಿನ ಮೇಲೆ ಒರೆದ.
ತಂಗಿಯ ಅಳು ತಾರಕಕ್ಕೇರಿದಾಗ ಬಂದ ಅಪ್ಪ, ವಿಷಯ ತಿಳಿದು, ರಕ್ತ ಬರುತ್ತಿರುವ ಬೆನ್ನನ್ನು ನೋಡಿ,
ತಾನು ತಂಗಿಗೆ ಮಾಡಿರುವುದೇನೆಂದು ತಿಳಿಯಲು ಹುಡುಗನ ಪುಟ್ಟ ಕೈಗೆ ಮೆತ್ತಗೆ ‘ಮರಳು ಕಾಗದ’ ಉಜ್ಜಿ,
ಆ ತಪ್ಪಿಗೆ ಹಾಗೂ ಮಗನ ನೋವಿಗೆ, ಮನದಲ್ಲಿ ದುಗುಡ ತುಂಬಿಕೊಂಡು ತನ್ನ ಕೈಗೂ ಗಸಗಸ ತಿಕ್ಕಿಕೊಂಡ.
ಇಷ್ಟರಲ್ಲೇ ಅಲ್ಲಿಗೆ ಬಂದ ಅಮ್ಮ ಎಲ್ಲವನ್ನೂ ನೋಡಿ, ಕಣ್ಣಲ್ಲಿ ನೀರು ತುಂಬಿಕೊಂಡು, ಜೇನು ತಂದು ಮೂವರಿಗೂ ಹಚ್ಚುತ್ತಾಳೆ.

ಈಗ ಮತ್ತೆ ಪುಟ್ಟ ಹುಡುಗಿಯ ಕಣ್ಣಲ್ಲಿ ನೀರು, ಬಾಯಲ್ಲಿ ವಾಲಗ.

ಕೈಗೆ ಹಚ್ಚಿದ ಜೇನನ್ನು ಅಣ್ಣ ನೆಕ್ಕುತ್ತಿದ್ದಾನೆ, ನನಗೆ ಬೆನ್ನಿಗೆ ಹಚ್ಚಿದೀರಲ್ಲಾ, ನಾನು ಹೇಗೆ ನೆಕ್ಕಲಿ ?! ವಾss..... !

Sunday, March 30, 2008

ಬದುಕು ಸುಂದರವಾಗಿದೆ - I



೦೧.
ಮಳೆ ಬಂದು ರಸ್ತೆಯ ಒಂದು ಬದಿಯಲ್ಲಿ ನೀರು ನಿಂತಿದೆ.
ಇನ್ನೊಂದೆಡೆ ವಾಹನಗಳು ಭರದಿಂದ ಓಡಾಡುತ್ತಿವೆ.
ಮಧ್ಯವಯಸ್ಕ ಸೈಕಲ್ ಸವಾರನೊಬ್ಬ, ನಿಂತಿರುವ ನೀರಿನ ಮೇಲೆ ತಿರುತಿರುಗಿ ಸೈಕಲ್ ಓಡಿಸುತ್ತಾ, ನೀರು ಚಿಮ್ಮಿಸುತ್ತಾ ಸಂತೋಷ ಪಡುತ್ತಿದ್ದಾನೆ.

೦೨.
ನೂಕುನುಗ್ಗಲಿನ ನಡುವೆ, ಪುಟ್ಟ ಮಗುವನ್ನು ಸೊಂಟದ ಮೇಲೇರಿಸಿಕೊಂಡಿರುವ ಮಹಿಳೆ, ಪ್ರಯಾಸದಿಂದ ಬಸ್ ಹತ್ತಿ, ಯಾರೋ ಬಿಟ್ಟು ಕೊಟ್ಟ ಸ್ಥಳದಲ್ಲಿ ಕುಳಿತಳು. ಮಗುವಂತೂ ಕಳವಳ, ಆತಂಕದಿಂದ, ಬೆದರಿ, ಚಿಗರೆಯಾಗಿತ್ತು. ಬಸ್ ಹೊರಟಾಗ ಗಾಬರಿ, ಅಸಹಾಯದಿಂದ ಚೀರಿತು "ಅಪ್ಪಾ........!!"
ಕಂದನ ಕರೆ ಕೇಳಿಸಿಕೊಂಡ ಅಪ್ಪ, ಜನರ ಮಧ್ಯೆ ಜಾಗ ಮಾಡಿಕೊಂಡು ಮುಂದೆ ಬಂದು ಮಗುವಿಗೆ ತನ್ನ ಮುಖ ತೋರಿಸಿದ.
ಅಪ್ಪನ ಮುಖ ಕಂಡ ಕೂಡಲೇ ನೆಮ್ಮದಿ, ಸಂತೋಷದಿಂದ ಮಗು ಮತ್ತೆ ಚೀರಿತು, "ಅ.........ಪ್ಪಾ !!

Friday, March 07, 2008

ಭಾವಗತಿ

ಕನಸು ಕಾಣುವೆನೆಂದರೂ 
ಕಣ್ಣುಗಳು ಮುಚ್ಚುತ್ತಿಲ್ಲ

ಮಲಗಿ ಮರೆಯೋಣವೆಂದರೂ 
ಮನದ ಪುಟಗಳು ಬಿಡುತ್ತಿಲ್ಲ

ಯಾಕಿಂಥಾ ನಿರಾಸೆ, ಭ್ರಮನಿರಸನ ! 
ಇರದಿರುವುದರ ಬಯಸಿ ಇರುವುದರ ಅವಸಾನ !

ಬದುಕು ಬಣ್ಣದ ಚಿತ್ತಾರ ನಿಜ, 
ಕಪ್ಪು ಬಣ್ಣದೊತ್ತು ಹೆಚ್ಚಾದರೆ ಉಳಿದುದಕ್ಕೆಲ್ಲಾ ರಜ

ಉದಿಸಿದರೆ ಕತ್ತಲೆಯ ಕದದಲ್ಲೊಂದು ಪ್ರಣತಿ,
ತುಂಬುವುದು ಜೀವಕೊಂದು ಭಾವಗತಿ

kanasu kANuveneMdarU kaNNugaLu muccuttilla
malagi mareyONaveMdarU manada puTagaLu biDuttilla
yAkiMthA nirAse, Bramanirasana ! iradira bayasi iruvudara avasAna !

baduku baNNada cittAra nija, kappu baNNadottu heccAdare uLidudakkellA raja
udisidare kattaleya kadadalloMdu praNati, tuMbuvudu jIvakoMdu BAvagati

ಆಸೆ

ಹೆಚ್ಚು ಓದಿಲ್ಲವಾದರೂ ಬರೆಯುವಾಸೆ
ಹೊಟ್ಟೆಯೊಳಗಿನ ಬೆಂಕಿ ಹೊರಹಾಕುವಾಸೆ
ಲಂಚಕೋರರ ಸಂಚ ಬಯಲಿಗೆಳೆಯುವಾಸೆ
ಬಡಪಾಯಿಗಳ ಬೆನ್ನೆಲುಬಾಗುವಾಸೆ
ರಕ್ಷಕಳಾಗಿ ರಕ್ಷೆ ನೀಡುವಾಸೆ
ರಸ್ತೆಗಿಳಿದ ರಗಳೆಗಳ ಗುಡಿಸುವಾಸೆ
ದುಷ್ಟತನವ ಬಿಡಿಸಿ ತೊಳೆಯುವಾಸೆ
ದೃಷ್ಟಿಹೀನರಿಗೊಂದು ದೀಪವಾಗುವಾಸೆ
ಮಾತೆಯಿಲ್ಲದ ಮಗುವಿಗೊಂದು ಮಮತೆಯಾಗುವಾಸೆ
ಆ ಮಗುವಿನೊಂದಿಗೆ ನಾನೂ ಒಂದು ಮಗುವಾಗುವಾಸೆ


heccu OdillavAdarU bareyuvAse
hoTTeyoLagina beMki hora hAkuvAse
laMcakOrara saMca bayaligeLeyuvAse
baDapAyigaLa bennelubAguvAse
rakShakaLAgi rakShe nIDuvAse
rastegiLida ragaLegaLa guDisuvAse
duShTatanava biDisi toLeyuvAse
dRuShTihInarigoMdu dIpavAguvAse
mAteyallada maguvige mamateyAguvAse
A maguvinoDane nAnU oMdu maguvAguvAse.

ಪದ್ಯಗಳು

ಪದ್ಯಗಳು ಹುಟ್ಟುವುದೇ ಹೀಗೋ, 
ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

ನಡುರಾತ್ರೆಯಾದರೂ ನಿದ್ದೆಬಾರದೆ, 
ತಾರಸಿಯ ತೊಲೆಗಳನ್ನೆಣಿಸುತ್ತಿದ್ದಾಗ,
ಮಟಮಟ ಮಧ್ಯಾಹ್ನ 
ಮಧ್ಯರಸ್ತೆಯಲ್ಲಿ ಮೈಮರೆತು ನಿಂತಾಗ !

ಮುಗ್ಧ ಮಗುವೊಂದು 
ಭಯಗೊಂಡು ಬೆವೆತಾಗ,
ದುರುಳರ ದೃಷ್ಟಿಗೆ ಬಿದ್ದ ಯುವತಿ 
ಅಸಹಾಯಳಾದಾಗ

ಪದ್ಯಗಳು ಹುಟ್ಟುವುದೇ ಹೀಗೋ, 
ಅಥವಾ ಪದ್ಯಕ್ಕೆ ಪದಗಳು ದೊರೆಯುವುದು ಹೀಗೋ

padyagaLu huTTuvudE hIgO, padyakke padagaLu doreyuvudu hIgO
naDu rAtreyAdarU nidde bArade, tArasiya tolegaLaneNisuttiddAga,
maTamaTa madhyAhna madhyarasteyalli maimaretu niMtAga.
mugdha maguvoMdu BayagoMDu bevetAga,
duruLara dRuShTige biddayuvati asahAyaLAdAga.
padya huTTuvudE hIgO, athavA padyakke padagaLu doreyuvudu hIgO