Tuesday, May 08, 2007

ಪ್ರಕೃತಿ ಚಿಕಿತ್ಸೆ

ಎರಡು ತಿಂಗಳು ! ಹೇಗೆ ಕಳೆದೆ ಅಂತ ನೆನ್‍ಸ್ಕೊಂಡ್ರೆ...., ಅಬ್ಬಾ ನಿಮಾನ್ಸ್‍ಗೆ ಅಡ್ಮಿಟ್ ಆಗಿದ್ದಿದ್ರೂ ನಂಗೆ ಹೀಗನ್ನಿಸ್ತಿರ್‍ಲಿಲ್ಲ ಅನ್ಸುತ್ತೆ. ಫೆಬ್ರವರಿಯಲ್ಲಿ ದೇವಕಾರಿಗೆ ಹೋಗಿದ್ದೇ ಕೊನೆ, ಮತ್ತೆಲ್ಲಿಗೂ ಹೋಗಿರಲಿಲ್ಲ. ಎರಡು ತಿಂಗಳು ಅಬ್ಬಾ!!!! ತಮಾಷೇನಾ....!!!

ಹೇಗಿದ್ರೂ ಮೇ ೫ ಕ್ಕೆ ರಜಾ ಹಾಕಿದೀನಿ, ರಜಾ ಹಾಕಿದ ಮೂಲ ಕಾರಣ ಬೇರೆ ಆದ್ರೂ ಆ ಕೆಲಸವಾಗುವ ಸಾಧ್ಯತೆ ಇಲ್ಲವಾದ್ರಿಂದ ಮನಸ್ಸು ಮಂಡಿಗೆ ತಿನ್ನಲು ಸುರು ಮಾಡಿದ ಸಮಯಕ್ಕೇ ಡೀನ್ ಫೋನ್ ಮಾಡಿ, `ನಾಡಿದ್ದು ಕೋಟೆಬೆಟ್ಟಕ್ಕೆ ಹೋಗೋಣ್ವಾ, ಶ್ರೀಕಾಂತ್ ಕೂಡಾ ಕೇಳ್ದ' ಅಂದಾಗ, ಗರಿಗೆದರಿದ ಆಸೆ ಕೂಡಲೇ ಅರುಣಂಗೆ ಫೋನ್ ಮಾಡಿಸ್ತು. `ರೈಟ್ ಹೋಗೋಣ, ಭಾಳಾ ದಿನ ಆಯ್ತಲ್ವಾ ಎಲ್ಲೂ ಹೋಗ್ದೇ....ಅರುಣನ ಉತ್ತರ...!' (ಹಿಂದಿನ ವಾರವಷ್ಟೇ ಅವ್ರೆಲ್ಲಾ ಎಲ್ಲೋ ಹೋಗಿದ್ರೂ...). ಆಹಾ, ಅದಕ್ಕೇ ಹೇಳೋದು ನಾನು ಮನುಷ್ಯ ಯಾವಾಗ್ಲೂ ಪಾಸಿಟಿವ್ ಆಗಿ ಯೋಚ್ನೆ ಮಾಡ್ಬೇಕು ಅಂತ. ಎರಡ್ಮೂರು ದಿವ್ಸ ಆದ್ಮೇಲೆ ಗೋವಿಂದರಾಜ್ ಬರೋದು ಕೂಡ ಕನ್‍ಫ‍ರ್ಮ್ಡ್!!! ಒಂದು ಸಣ್ಣ ನೋವು - ಶ್ರೀನಿಧಿ ಹಾಗೂ ಸುಬ್ಬಿಯ ಗೈರು ಹಾಜರಿ.

ಇಲ್ಲಿಂದ ಮಡಿಕೇರಿಗೆ ಹೋಗಿ, ಅಲ್ಲಿಂದ ಹೊರಟು ಹಟ್ಟಿನಹೊಳೆಯಲ್ಲಿಳಿದು ಚಾರಣ ಸುರು. ಎರಡು ತಿಂಗಳ `ಜನವಾಸ'ದಿಂದ ಇಷ್ಟವಾದ `ವನವಾಸ'ಕ್ಕೆ ನಾಂದಿಯಾಗಿ ಕೋಟೆಬೆಟ್ಟದತ್ತ ನಡೆಯಲಾರಂಭ. ಬಹಳ ದೂರದವರೆಗೆ, ದಾರಿಯುದ್ದಕ್ಕೂ ಜೊತೆ ನೀಡುವ ಹೆಸರಿಲ್ಲದ ಹೊಳೆ, ಮೈ ಉರಿವ ಬಿಸಿಲಿದ್ದರೂ ಕಣ್ಣಿಗೆ ತಂಪು ನೀಡುತ್ತಿತ್ತು. ಒಂದೆಡೆ, ನದಿ ದಾಟಲು ಊರವರು ನಿರ್ಮಿಸಿಕೊಂಡ ತೂಗು ಸೇತುವೆಯ ಮೇಲೆ ತೂಗಾಡಿ, ನಡೆದಾಡಿ, ಓಡಾಡಿ ಮತ್ತೆ ರಸ್ತೆಗೆ ಬಂದು ಮುಂದೆ ಹೋದ್ವಿ. ಉದ್ದಕ್ಕೂ ಏರುವ ರಸ್ತೆ, ಅಕ್ಕ ಪಕ್ಕ ಕಾಫೀ ತೋಟ, ದೊಡ್ಡ ದೊಡ್ಡ ಮರಗಳು, ಸುಂದರವಾದ ಹೂವುಗಳು, ಅಲ್ಲಲ್ಲಿ ಯೋಗಕ್ಷೇಮ ವಿಚಾರಿಸಲು ಹಸುಗಳು, ನಾಯಿಗಳು, ಎಲ್ಲೋ ಒಂದೊಂದು ಮನೆಗಳು.

`ನಂದ' ಅನ್ನೋ ಒಬ್ಬ ವ್ಯಕ್ತಿ ಸಿಕ್ಕಿದಾಗ ಗೋವಿಂದರಾಜ್ ತಡೆಯಲಾರ್‍ದೆ `ಹಲಸಿನ ಹಣ್ಣು ಸಿಗುತ್ತೇನಪ್ಪಾ' ಅಂದ್ರು. ಇಲ್ಲವೆಂದ ಆತ ಮತ್ತೆ, ನಿಮ್ಗೆ ತುಂಬಾ ಇಷ್ಟಾನ ಅಂತ ಕೇಳಿ, ಇದೆ ಬನ್ನಿ ಅಂತ ಕರೆದಾಗ ಅದೆಲ್ಲಿತ್ತೋ ಶಕ್ತಿ, ನಮ್ಮನ್ನೆಲ್ಲಾ ನಾಚಿಸುವಂತೆ, ಅತ್ಯುತ್ಸಾಹದ ಬುಗ್ಗೆಯಾದ ಗೋವಿಂದರಾಜ್ ಕೂಡಲೇ `ಬನ್ನಿ ಬನ್ನಿ' ಅಂತ ಡೀನ್, ಶ್ರೀಕಾಂತ್‍ ಜೊತೆ `ನಂದ'ನ ಹಿಂದೆ ಒಂದೇ ಓಟ. ಹಲಸಿನ ಕಾಯಿಯೊಂದಿಗೆ ಪುನಃ ಏರು ರಸ್ತೆ ಹತ್ತಿ ನಮ್ಮ ಬಳಿ ಬಂದು, ಡೀನ್ ಸಹಾಯದೊಂದಿಗೆ ಮಚ್ಚಿನಲ್ಲಿ ಹಲಸಿನಕಾಯಿಯನ್ನು ಕೊಚ್ಚಿ ನೋಡಿದಾಗ ಅದು ಹಲಸಿನಕಾಯಿಯೇ ಆಗಿತ್ತು, ಹಣ್ಣಾಗಿರಲಿಲ್ಲ. `ಗೋವಿ'ಗೆ ಸ್ವಲ್ಪ ನಿರಾಸೆಯಾದರೂ ಸಮಾಧಾನಪಟ್ಕೊಂಡ್ರು.

ಏರಿ, ಏರಿ, ಮೇಲೇರಿ ಹೋಗಿ ಒಂದು ತಿರುವಿನಿಂದ ನೋಡಿದಾಗ ದೂರದಲ್ಲಿ ಕಾಣಿಸಿತ್ತು ಕೋಟೆಬೆಟ್ಟ. `ದಕ್ಷಿಣದ ಕೈಲಾಸಪರ್ವತ'ದಂತೆ, ನಾವು ಹತ್ತಿಬಂದ ದಾರಿ ಸಾರ್ಥಕವೆನಿಸುವಂತೆ ನಿಂತಿತ್ತು. ಮತ್ತೊಂದು ಕಿಲೋಮೀಟರ್ ಮುಂದುವರಿದು ರಸ್ತೆ ಕೊನೆಗೊಂಡು, ಇನ್ನೇನು ಕಲ್ಲುಮುಳ್ಳುಗಳ ನಡುವೆ ಬೆಟ್ಟ ಏರ್‍ಬೇಕು...... ಅಷ್ಟರಲ್ಲಿ `ಕಾಳಮೇಘಗಳು ಬಾನಂಗಳದಲ್ಲಿ ಮೇಳೈಸಿ ಘರ್ಜಿಸಲಾರಂಭಿಸಿದ್ವು'.

ನಿಜ, ಆಗುವುದೆಲ್ಲಾ ಒಳ್ಳೆಯದಕ್ಕೇ ಅಂತ ತಿಳ್ಕೊಂಡ್ರೆ, ಆ ದೃಷ್ಟಿ ಇಟ್ಕೊಂಡ್ರೆ ಎಲ್ಲವೂ ಸುಗಮ. ಎರಡು ಬಂಡೆಕಲ್ಲುಗಳು ಎಷ್ಟು ಅನುಕೂಲವಾಗಿ ಅಕ್ಕಪಕ್ಕ ಇತ್ತಂದ್ರೆ, ನಮ್ಮಲ್ಲಿದ್ದ ದೊಡ್ಡ ಪ್ಲಾಸ್ಟಿಕ್ ಕವರನ್ನು ಅವುಗಳ ಮಧ್ಯೆ ಹಾಕಿ ನಮ್ಮ ರಕ್‍ಸ್ಯಾಕ್‍ಗಳನ್ನು ಅಲ್ಲಿ ತುಂಬಿಸಿ, ಮತ್ತೊಂದು ಕವರ್ ಮುಚ್ಚಿ, ನಾವೆಲ್ಲಾ ಸುತ್ತ ಕೂತಾಗ ಈ ಮಳೆ ಏನು, ಕುಂಭವರ್ಷವೇ ಆದರೂ ಏನೂ ಆಗಲಾರದಷ್ಟು ಸೇಫ್ ಆಗಿತ್ತು ಬ್ಯಾಗ್‍ಗಳು. ಮಳೆ ಸುಮಾರು ಅರ್ಧಘಂಟೆ ಸುರಿದು ನಿಂತ ಮೇಲೆ ಹೊಸ ಹುರುಪಿನೊಂದಿಗೆ ನಮ್ಮ ಪಯಣ ಮತ್ತೆ ಸುರು. ಪೂರ್ತಿ ಒದ್ದೆಯಾಗಿದ್ದರೂ, ಛಳಿಗಾಳಿ, ಮಂಜು ಮುತ್ತಿಕ್ಕಿ ಕಚಗುಳಿಯಿಟ್ಟರೂ ನಾವು ದಿಕ್ಕೆಡದ ಸಿಪಾಯಿಗಳಂತೆ ಮುಂದಡಿಯಿಟ್ವಿ.

ಎರಡು ಬಾರಿ ದಟ್ಟ ಮಂಜು ಮುಸುಕಿ ಮುಂದೆ ದಾರಿ ಕಾಣಿಸದೇ ನಿಲ್ಲಬೇಕಾಯಿತು. `ಮನಕೆ ಮುಸುಕಿದ ಮಂಜು ಸರಿದಾಗ ಸುತ್ತಲಿರುವ ಎಲ್ಲವೂ ಸುಂದರವಾಗಿರುವಂತೆ', ಪ್ರಕೃತಿಯ ಸೆರಗಿನ ಮಂಜು ಸರಿದಾಗ ಕಾಣಿಸಿದ ದೃಶ್ಯ ರಮಣೀಯ ಹಾಗೂ ಸ್ಮರಣೀಯವಾಗಿತ್ತು. ಕತ್ತಲಾಗುವ ಮೊದಲೇ ಬೆಟ್ಟದ ನೆತ್ತಿಯೇರಿದ ನಾವು, ಅಲ್ಲಿರುವ ಪುಟ್ಟ ಗುಡಿಯ (ಶಿವನ ಗುಡಿ) ಆವರಣದಲ್ಲಿ, ನಮ್ಮ ಡೇರೆ ಹಾಕಿ ಬೆನ್ನು ನೆಟ್ಟಗೆ ಮಾಡುವಷ್ಟರಲ್ಲಿ ಪೂರ್ತಿ ಕತ್ತಲಾಗಿ ಕೆಳಗೆ ಪಟ್ಟಣಗಳ ದೀಪಗಳೊಂದಿಗೆ ಮಂಜು ಕಣ್ಣಮುಚ್ಚಾಲೆಯಾಡುವಾಗ ತಂಗಾಳಿ ಬೀಸುತ್ತಿತ್ತು, ಲಘುವಾಗಿ ಮಳೆ ಹನಿಯುತ್ತಿತ್ತು.

ಗಿಡಗಳ ಮೇಲೆ ಮಿಂಚುಹುಳಗಳ ಮಂಚ ನೋಡುತ್ತಾ, ಬಾನಲ್ಲಿ ಮಿಂಚು ಗುಡುಗು ಸಿಡಿಲಿನ ಆರ್ಭಟ ಕೇಳುತ್ತಾ ಕೊನೆಗೆ ಒಂಭತ್ತು ಘಂಟೆಗೆ ಮಲ್ಕೊಂಡ್ವಿ. ದೇವರ ದಯೆಯೋ, ನಮ್ಮ ದುರಾದೃಷ್ಟವೋ ಮತ್ತೆ ಮಳೆ ಬರ್‍‍ಲಿಲ್ಲ. ಬೆಳಗಾಗುತ್ತಿದ್ದಂತೆ ಒಂದು ಹಕ್ಕಿ ನಮ್ಮ ಡೇರ್‍ಎ ಪಕ್ಕದಲ್ಲೇ ಕೂತ್ಕೊಂಡು `ಮುಗೀತಾ....' ನಿದ್ದೆ ಮುಗೀತಾ.....' ಅಂತ ಕೇಳ್ತಾ ಇತ್ತು. ಹೊರಗಡೆ ಬಂದು ನೋಡಿದ್ರೆ, ಸುತ್ತೆಲ್ಲಾ ಆ ಹಕ್ಕಿಗಳದೇ ಕಾರುಬಾರು. ಸೂರ್ಯನೂ ಮಂಕಾಗುವಂತೆ ಮುಸುಕಿದ ಮಂಜು, ಆ ಮಂಜಿನೊಡನೆ ಗುದ್ದಾಡುತ್ತಾ ಸೂರ್ಯ ಮೇಲೆ ಬಂದಂತೆ ಸುತ್ತೆಲ್ಲಾ ಅಗಾಧವಾದ ಕಡಲಂತೆ ಕಾಣುವ ನೋಟ. ಮತ್ತೆಮತ್ತೆ ನೋಡಿ ಕಣ್ಣ್‍ಮನ ತುಂಬಿಕೊಳ್ಳುತ್ತಾ ಪುನಃ `ಜನವಾಸ'ದಲ್ಲಿ ಬದುಕುವ ಶಕ್ತಿ ತುಂಬಿಕೊಂಡೆ ನಾನು.

ಹಿಂತಿರುಗಿ ಬರುವಾಗ, ಹೊಳೆಯಲ್ಲಿಳಿದು ನೀರಾಟವಾಡಿ, ಹಟ್ಟಿನಹೊಳೆಯ ಒಂದು ಹೊಟೇಲಲ್ಲಿ ಕಾಫೀ, ಟೀ, ಬನ್ ಮುಗಿಸುವಷ್ಟರಲ್ಲಿ ಬಸ್ ಬಂತು. ಮಡಿಕೇರಿಗೆ ಬಂದು ಊಟ ಮಾಡಿ ವಿಶ್ರಾಂತಿ ತಗೋತಾ ಇರೋವಾಗ ಮತ್ತೆ ಮಳೆ. `ಬೆನಕ'ನ ಜೊತೆ ಮಳೆಯಲ್ಲಿ ನೆನೆದು, ಆಟವಾಡಿ ಬಿಸಿನೀರಲ್ಲಿ ಸ್ನಾನ. ಅರುಣ ನಮ್ಮನ್ನು ಬಿಟ್ಟು ಮೈಸೂರಿಗೆ ಹೋದ ಕೂಡಲೇ ಕತ್ತಲಾಯ್ತು (ಸಂಜೆಯಾಯ್ತು). ನಂತರ ರಾಜಾಸೀಟ್‍ಗೆ ಹೋಗಿ ಮತ್ತೆ ಕೋಟೆಬೆಟ್ಟವನ್ನು ನೋಡುತ್ತಾ, ಆ ಅವಿಸ್ಮರಣೀಯ ಅನುಭವವನ್ನು ಮೆಲುಕು ಹಾಕಿ, `ಶಾಮಕ್ಕ' ಪ್ರೀತಿಯಿಂದುಣಿಸಿದ ಊಟ ಉಂಡು, ಎಲ್ಲರಿಗೂ ಟಾಟಾ... ಬಾಯ್ ಬಾಯ್ ಹೇಳಿ ಬೆಂಗಳೂರು ಬಸ್ ಹತ್ತಿದ್ವಿ.

ಆ! ಏನಂದ್ರೀ..... ಮತ್ತೆ ನಿಮ್ಹಾನ್ಸ್‍ಗೆ ಸೇರೋ ಐಡಿಯಾ ಇದ್ಯಾ ಅಂದ್ರಾ..... !! ಛೇ.. ಛೇ..... ನಿಮ್ಗ್ ಹಾಗನ್ಸುತ್ತಾ...!!! ಇಲ್ಲ ಅಲ್ವಾ..... ಯಾಕೇಂದ್ರೆ ನಾನು ಹೋಗಿದ್ದು `ಪ್ರಕೃತಿಚಿಕಿತ್ಸೆ'ಗೆ... ಬೇಕಿದ್ರೆ ನೀವೂ ಆಗಾಗ ಹೋಗ್ತಾ ಇರಿ......

18 comments:

ರಾಜೇಶ್ ನಾಯ್ಕ said...

ನೀವೆಲ್ಲೂ ಚಿತ್ರಗಳನ್ನು ಪ್ರಕಟಿಸುವುದಿಲ್ಲವಲ್ಲ? ಒಂದಾದರೂ ಚಿತ್ರವಿದ್ದರೆ ನಾವೂ ಕೋಟೆಬೆಟ್ಟದ ಸೌಂದರ್ಯವನ್ನು ಸವಿಯಬಹುದಲ್ಲವೆ?

ಶ್ರೀನಿಧಿ.ಡಿ.ಎಸ್ said...

ahaaaaaa! akkaa, sooper!!! nanoo hogbekoooooooooo:(

Parisarapremi said...

--> `ಜನವಾಸ'ದಿಂದ ಇಷ್ಟವಾದ `ವನವಾಸ'ಕ್ಕೆ - ಸಖತ್!!

--> ಪ್ಲಾಸ್ಟಿಕ್ ಮೇಲೆ ಬ್ಯಾಗಿಟ್ಟು, "ಕುಂಭವರ್ಷ"ದಲ್ಲಿ ನಾನು ನೆಂದಿದ್ದು ನೆನಪಾಯಿತು... ಮತ್ತೆ ನೆನೆಯಬೇಕೆನಿಸುತ್ತಿದೆ... :-)

[ರಾಜೇಶ್ ನಾಯ್ಕ] ಚಿತ್ರಗಳನ್ನು ಪದಗಳಲ್ಲೇ ಬರೆಯುವ ಕಾರ್ಯ ಮಾಡಿದ್ದಾರೆ ಅನ್ನಪೂರ್ಣ - ನನ್ನ ಅನಿಸಿಕೆ..

[ಶ್ರೀನಿಧಿ] ಕರ್‍ಕೊಂಡ್ ಹೋಗ್ತೀವಿ ಶ್ರೀನಿಧಿ.. ನಿಜ ಹೇಳಬೇಕೆಂದರೆ, we all missed you a lot ಕಣೋ.. "ಶ್ರೀನಿಧಿ ಇದ್ದಿದ್ರೆ!!" ಅಂತಾ ಅದೆಷ್ಟು ಸಲ ಅಂದುಕೊಂಡ್ವಿ ಗೊತ್ತಾ...

ಸಿಂಧು sindhu said...

ಅನ್ನಪೂರ್ಣ,
ಈ ಮೊದಲು ನಿಮ್ಮ ಬರಹಗಳನ್ನು ಓದಿದ್ದರೂ ಸ್ಪಂದಿಸಲು ಸಮಯವಾಗದೆ ಹೋಗಿತ್ತು.

ಎರಡು ತಿಂಗಳು ಹೇಗೆ ಕಳೆದೆ... ನನಗನ್ನಿಸುವ ಭಾವನೆಗಳೇ ನಿಮ್ಮ ಪದಗಳಲ್ಲಿ ಮೂಡಿ ಬಂದಂತಿವೆ. ನಿಮ್ಮ ಪ್ರವಾಸಾನುಭವ ತುಂಬ ಇಷ್ಟವಾಯಿತು.. ಬೆವರಿಳಿಯದೆ ಕೋಟೆಬೆಟ್ಟ ಹತ್ತಿದ ಅನುಭವ.

ನಿಮ್ಮ ಮುಂದಿನ ವನವಾಸದ ಬಗ್ಗೆ ನನಗೂ ತಿಳಿಸಿ.

ಪ್ರೀತಿಯಿರಲಿ,
ಸಿಂಧು

ಜಯಂತ ಬಾಬು said...

ನಮಸ್ಕಾರ ಗುರುಗಳೇ..

ತುಂಬಾ ಚೆನ್ನಾಗಿದೆ ಈ ಲೇಖನ..ಡಿಫ಼ರೆಂಟ್ ಆಗಿದೆ .. ಇಷ್ಟ ಆಯ್ತು

Manjunatha Kollegala said...

ಆಗಾಗ ನಿಮ್ಮ ಬ್ಲಾಗ್ ಓದಿ ಹೊಟ್ಟಿಕಿಚ್ಚು ಪಟ್ಟುಕೊಂಡು ವಾಪಸ್ ಹೋಗುವುದೂ ಒಂದು "ಪ್ರಕೃತಿ"ಚಿಕಿತ್ಸೆಯೇ ಅನ್ನಿ.

ಸೊಗಸಾಗಿದೆ ನಿಮ್ಮ ಲೇಖನ, ಹಾಗೇ ನಿಮ್ಮ ಚಾರಣ ಕೂಡ.

Susheel Sandeep said...

ತುಂಬಾ ತಡವಾಗಿ ನಿಮ್ಮ ಬ್ಲಾಗಿನೆಡೆಗೆ ನನ್ನ ಚಾರಣ...ಮೊದಲಿಗೆ ಶ್ರೀನಿಧಿಯ ತುಂತುರು ಹನಿಗಳ ನಡುವೆ 'ವಾಂತಿ'ಪುರಾಣ ನೋಡಿಕೊಂಡು ಇತ್ತ ಕಡೆಗೆ ಪಯಣ.

ನಿಮ್ಮ ಅನುಭವಗಳನ್ನು ನೋಡಿ ನಿಜಕ್ಕೂ ಹೊಟ್ಟೆ ಉರಿಯಿತು.ಅರುಣ್ ಜೊತೆ ಚಾರಣ ಮಾಡಿರುವ ಅನುಭವ ನನ್ಗೂ ಇದೆ ಅನ್ನೋದಕ್ಕೆ ಹೆಮ್ಮೆ ಅನ್ನಿಸತ್ತೆ!:)

Th Editor said...

Fontu problem Madam.

Ramesh S Perla

dinesh said...

ಖಜಾನೆಯ-ಪ್ರಕೃತಿ ಚಿಕಿತ್ಸೆ ಲೇಖನ ತುಂಬಾ ಚೆನ್ನಾಗಿದೆ.ಚಿಕಿತ್ಸೆ ಪಡೆಯೋ ಮನಸಾಗ್ತಿದೆ.

Anusha Vikas said...

you really think we don't spend our time very well. In our holidays. you give me the impression that there is no need to enjoy the holidays at all? ! :?

oh..kk Just joking!
-----------------------------------
The first website to do English-kannada transliteration with Engish words options. No caps worries.
Really cool!
http://quillpad.in/kannada/

Vidya Daithota said...

thelu bhavukatheya poreyolage haradi holeyuthide baraha...

click4nothing said...

http://www.baanuli.com/topheading.php?catid=4&id=1291

ಪುಸ್ತಕ ಬಿಡುಗಡೆಯಾಗಿದ್ದಕ್ಕೆ ಅಭಿನಂದನೆಗಳು....

sunaath said...

ಜನವಾಸಕ್ಕಿಂತ ವನವಾಸವೆ ಮೇಲು?

Annapoorna Daithota said...

ellarigoo dhanyavadalu :)

ಕುಕೂಊ.. said...

ಅನ್ನಪೂರ್ಣ,
ತುಂಬಾ ಸೊಗಸಾಗಿದೆ ನಿಮ್ಮ ಪ್ರವಾಸನುಭವ ಲೇಖನ.
ನನ್ನ ಮನಸ್ಸಿಗೆ ಕಾವ್ಯಚಿಕಿತ್ಸೆಯಂತು ಆಯ್ತಪ್ಪ.
ಸೊಲ್ಪ ಹೊಟ್ಟೆಕಿಚ್ಚಂತು ಬಂತು.

ಅಕ್ಕರೆಯಿಂದ
** ಕುಕೂ..
ಪುಣೆ
08/04/08

Annapoorna Daithota said...

Kumara Swamy....
hottekicchu aaythaa... nimgoo agathya ide ansutthe prakruthi chikitse :)

shivu.k said...

ಅನ್ನಪೂರ್ಣ ಮೇಡಮ್,
ನಿಮ್ಮ ಚಾರಣದ ಪ್ರಕೃತಿ ಚಿಕಿತ್ಸೆ ಚೆನ್ನಾಗಿದೆ. ಒಂದಾದರೂ ಕೋಟೆಬೆಟ್ಟದ ಫೋಟೊ ನೋಡಬಹುದಿತ್ತು. ಹೀಗೆ ಬರೆಯುತ್ತಿರಿ.

Annapoorna Daithota said...

ಧನ್ಯವಾದಗಳು ಶಿವೂ...