ಮನದಾಳದಲ್ಲಿ ಹುದುಗಿದ ಆಸೆಗಳಲ್ಲಿ ಹುಡುಕಿದೆ
ಆಸ್ಥೆಯಿಂದ ಆಯ್ದು ಬೆಲೆಬಾಳುವುದನ್ನು ಹೊರತೆಗೆದೆ
ಅಕ್ಕಿ ಆರಿಸಿದಂತೆ ಹೆಕ್ಕಿ ತೆಗೆದ ಅಮೂಲ್ಯ ಆಸೆಯನ್ನು
ಕೊಕ್ಕಿನಲ್ಲಿ ಹಿಡಿದಂತೆ ಹಿಡಿದು ಆಕಾಶಕ್ಕೆ ಏರಿದೆ
ಆಕಾಶದೆತ್ತರದಿಂದ ನೋಟವ ಕೆಳ ಹರಿಸಿದಾಗ
ಭೂಮಿ ತುಂಬಾ ಹಸಿರು ಕಂಡೆ, ಸಂತೋಷಗೊಂಡೆ
ಪ್ರಾಣಿಗಳ ಮತ್ತು ಮನುಜನ ಪ್ರಪಂಚ ಬೇರೆಬೇರೆ
ಎಂಬುದನ್ನು ಬಹು ಸ್ಪಷ್ಟವಾಗಿ ನಾ ಕಂಡುಕೊಂಡೆ
ಪ್ರಕೃತಿಯ ಫಲಕದಲ್ಲಿ ಹರಿವ ಪವಿತ್ರ ಪನ್ನೀರು
ಖಗಮೃಗಗಳ ಬದುಕಿನಲ್ಲಿ ನೆಮ್ಮದಿಯ ಉಸಿರು
ಮನುಜನ ಮನಸು ಹೃದಯದಲ್ಲಿ ಸದಾ ಒಸರುವ,
ಕೂಡಿ ಬಾಳುವಂಥ ಸದ್ಬುದ್ಧಿ ಚಿಲುಮೆಯ ತೇರು
ಸಾಮರಸ್ಯವೇ ಸರ್ವಸ್ವವೆಂಬ ತಿಳಿವಿನ ಮಾತು
ಜೊತೆಗೂಡಿ ಬಾಳುವುದರ ಅರ್ಥವೇ ಒಳಿತು
ಇದನ್ನರಿತುಕೊಂಡಿದ್ದರದೇ ಸಕಲ ಸಂಪತ್ತು
ಕೈಬಿಟ್ಟಾಗ ಆಕಾಶದಲ್ಲಿರುವ ಆಸೆಗೆ ಬೆಂಕಿಯ ಕುತ್ತು
ಬೆಂಕಿ ಹಿಡಿದ ಆಸೆ ಹೊತ್ತು ಕೆಳಗಿಳಿಯುವ ಹೊತ್ತು
ಇಳಿಯುತ್ತಿದ್ದಂತೆಯೇ ಕಾಣುತ್ತಿತ್ತು ವಾಸ್ತವದ ಕೈತುತ್ತು
ಹಸಿರ ಕೇಶದ ನಡುನಡುವೆ ಬೋಳು ಭೂ-ತಲೆ
ಕಾಡಲ್ಲೆಲ್ಲಾ ಅಭಿವೃದ್ಧಿ ಭೂತದ ಅಬ್ಬರ ದಾಂಧಲೆ
ಪ್ರಾಣಿಪಕ್ಷಿಗಳ ಅಸಹಾಯಕ ಆತಂಕದೊಂದಿಗೆ,
ತನ್ನದೇ ಕಾಲಿಗೆ ಕೊಡಲಿಯಿಟ್ಟು, ಭವಿಷ್ಯವನ್ನು
ಪಣಕ್ಕಿಟ್ಟು, ಅರಚಿ-ಕಿರುಚಿ ಪರದಾಡುವ ಮನುಷ್ಯನ
ಬುದ್ಧಿಗೇಡಿತನದ ಪರಮಾವಧಿಯ ಪೆಟ್ಟು
ಗಿಡವಿಲ್ಲ ಮರವಿಲ್ಲ ಕಾಡೂ ಇಲ್ಲ ಹಸಿರಿಲ್ಲ
ಕುಡಿಯಲು ನೀರಿಲ್ಲ ಎಸರಿಡಲೂ ಗತಿಯಿಲ್ಲ
ಮುಂದಿನ ಪೀಳಿಗೆಗೆ ನೀಡಲು ಒಳ್ಳೆಯ ಹೆಸರಿಲ್ಲ
ಪಾಪಪ್ರಜ್ಞೆ ಬಿಟ್ಟು ಬೇರೇನೂ ಉಳಿಯುತ್ತಿಲ್ಲ
1 comment:
ಹುಲು ಮಾನವನ ಆಸೆ,ದುರಾಸೆಡೆ ಕುಡಿಕೆ ಮಡಕೆಗಳೆಲ್ಲಿ ಸಾಕು ಮಗುವೇ
ಪತ್ತಾಯ ಪೆಟ್ಟಗೆಯೂ ಸಾಲದಲ್ಲವೇ?
ಸ್ವಾರ್ಥವೆಂಬ ವಿನಾಶ ಕಾರೀ ಸ್ವತ್ತು ಮಣ್ಣಿನ ಗೆದ್ದಲ ಹುಳಂದಂತೆ ತಾನೇ ಒಳಗೊಳಗೇ ತಿಂದು ತೇಗಿ ನಮಗದರರಿವು ಮೂಡುವಾಗ ಸರ್ವಸ್ವವೂ ನಾಶ ,ವಿನಾಶ.
ಸದ್ಭುಧ್ಧಿ ಮೂಡಿ ಧನರಾಶಿಯೆಂಬ ಆಸ್ತಿಯನು ಜೀವನ ಮೌಲ್ಯಗಳನರಿತು ಬೆಳೆಯಬೇಕಾದ ಮುಂದಿನ ಪೀಳಿಗೆಗೆ ನೀಡುವೆಡೆ ಪ್ರಕೃತಿಯ ಅಗಾಧ ಸಂಪತ್ತು ನೀಡಿ ಅವರ ಮನದಲ್ಲಿ ಸದಾ ಬೇರೂರಿದರದೆಷ್ಟು ಸಖ?
Post a Comment