Sunday, June 02, 2024

ಅಚ್ಚರಿಯ ತೊಟ್ಟಿಲು

ಅರೆ ಶತಕದ ಮೂರನೆಯ ಮೆಟ್ಟಿಲು

ಈ  ಜಗವಹುದು ಬಲು ಅಚ್ಚರಿಯ ತೊಟ್ಟಿಲು

ಸೋಲಿಲ್ಲ ಗೆಲುವಿಲ್ಲ ಇದ್ದರೂ ಇಲ್ಲಿ ಅದೆಲ್ಲ ಸಲ್ಲ

ಅರಿತರೆ ಸಿಹಿ-ಕಹಿ, ಜೀವನವಹುದು ಬೇವು ಬೆಲ್ಲ


ಬೆರೆತರೆ ಸ್ನೇಹ-ಸಂಬಂಧ, ತಕರಾರಿಲ್ಲ

ಇಲ್ಲವಾದಲ್ಲಿ ಕಿರಿಕಿರಿ ಎಂದಿಗೂ ತಪ್ಪಿದ್ದಲ್ಲ

ದಾರಿಯಲ್ಲಿ ಕಲ್ಲುಮುಳ್ಳು ಇರದಿರುವುದಿಲ್ಲ

ಎದುರಿಸಿ ನಿಲ್ಲದಿರೆ ಸುಲಭ ಪರಿಹಾರವಿಲ್ಲ


ಪ್ರಪಂಚದಲ್ಲಿ ಸಂಕಟ ಮುಗಿಯುವುದಿಲ್ಲ

ನಮಗೆ ನಾವೇ ನೆಮ್ಮದಿ ಪಡೆಯಬೇಕಲ್ಲ

ದುಃಖಿಸಿದರೆ ಎಂದಿಗೂ ಧೈರ್ಯ ಬರುವುದಿಲ್ಲ

ಧೈರ್ಯದಿಂದಿದ್ದರೆ ನೆಲ ಕುಸಿಯುವುದಿಲ್ಲ


ಬಯಕೆಯ ಬಳ್ಳಿಯ ಮಿತಿಯಲ್ಲಿ ಬಿಗಿದರೆ

ಬದುಕಲ್ಲಿ ಬೆಳೆಯುವುದು ಭರವಸೆಯ ಹಸಿರು

ಭಗವಂತನ ದಯೆಯ ಕೈ ತಲೆ ಮೇಲೆ ಇದ್ದರೆ

ಬಾಳ ಬಟ್ಟೆಯಲಿ ಸದಾ ನೆಮ್ಮದಿಯ ಉಸಿರು

Sunday, May 19, 2024

ಪರಮಾತ್ಮನ ಪಾದ

 

ಅಚ್ಚರಿಯ ಮೊದಲ ಹೆಜ್ಜೆ

ಚಚ್ಚರದಿ ಎರಡನೆಯ ಹೆಜ್ಜೆ

ಕಾಲಲ್ಲಿ ಕಟ್ಟಿರುವ ಗೆಜ್ಜೆ

ಸಾಧನೆಗೆ ಹೆಮ್ಮೆಯಿಂದ ಲಜ್ಜೆ


ಬೆರಳ ತುದಿ ಹಿಡಿದು ಎದ್ದು

ಸ್ವಪ್ರಯತ್ನದಿ ಮುನ್ನಡೆದೆ 

ಶ್ರಮದೊಂದಿಗೆ ಬಿರುನಡೆದೆ

ಛಲದೊಂದಿಗೆ ಗಮ್ಯ ಸೇರಿದೆ


ಅಂದಕ್ಕೆ ಅಂಧಳಾಗದೆ 

ಚಂದಕ್ಕೆ ಮರುಳಾಗದೆ

ಬಂದುದನ್ನು ಎದುರಿಸುತ್ತಾ

ಬದುಕನ್ನು ಸಾಗಿಸಿದೆ


ಗರಿಗೆದರಿ ಸಜ್ಜಾಗಿ

ಗರಿಬಿಚ್ಚಿ ಹಾರಿದೆ

ಗರಿಗಳಂದವ ತೋರಿದೆ

ಗುರಿಮುಟ್ಟಿ ವಿಶ್ರಮಿಸಿದೆ


ಜ್ಞಾನಕ್ಕೆ ಕೈಮುಗಿದು

ಧ್ಯಾನಕ್ಕೆ ಗಮನ ಕೊಟ್ಟು

ಪ್ರಾಣವನ್ನು ಪವಿತ್ರಗೊಳಿಸಿ 

ಪರಮಾತ್ಮನ ಪಾದ ಸೇರಿದೆ

Wednesday, April 24, 2024

ಅರ್ಥ - ಅಪಾರ್ಥ


ಸಂಬಂಧಗಳಲ್ಲಿ ಅರ್ಥವಿರಬೇಕಾದರೆ

ನಿಸ್ಸಂಕೋಚವಾಗಿ ಚರ್ಚಿಸಬೇಕು

ನಿಸ್ಸಂಕೋಚವಾಗಿ ಹೇಳುವುದನ್ನು

ವಿಪರೀತವಾಗಿ ತೆಗೆದುಕೊಂಡರೆ

ಅದು ಅಪಾರ್ಥವೆನಿಸಬಹುದು


ಆಗುತ್ತಿರುವ ತೊಂದರೆಯನ್ನು ಎದುರಿನವರು

ಹೇಳಿದಾಗ ಅರ್ಥ ಮಾಡಿಕೊಂಡು ಸುಗಮಗೊಳಿಸದೆ,

ತಪ್ಪೆಂದುಕೊಂಡು ನಮ್ಮ ಅಹಂ ಗೆ ಸವಾಲಾಗಿಸಿದರೆ, 

ಹೇಳುವುದನ್ನು ಅಪಾರ್ಥ ಮಾಡಿಕೊಂಡರೆ,

ಮುಕ್ತ ಮನಸು ಮುಚ್ಚಿ ಅಂತರ ಹೆಚ್ಚಬಹುದು

 

ತೊಂದರೆ, ತಪ್ಪು ನಮ್ಮಿಂದಲೂ ಆಗುತ್ತದೆ

ತಿಳಿದರೆ ತಿದ್ದಿಕೊಳ್ಳುತ್ತೇವೆ ಎಂಬ

ಭಾವವಿದ್ದರೆ ವ್ಯಕ್ತಿತ್ವ ಬೆಳೆಯುತ್ತದೆ

ಇಲ್ಲದಿದ್ದರೆ ಒಳಗಿರುವ ಅಹಂ

ಎದ್ದು ಅಪಾರ್ಥವನ್ನು ಬೆಳೆಸಬಹುದು


ಅಪಾರ್ಥ ಹೆಚ್ಚಿದರೆ ಮನಸು ಮೊಂಡಾಗಿ

ವಿವೇಚನೆ ಕಳಚುತ್ತದೆ, ಇನ್ನೊಬ್ಬರು ಹೀಗಂದರು 

ಅಂದುಕೊಳ್ಳುವ ಮೊದಲು ನಮ್ಮಲ್ಲೇನು

ಬೆಳೆಸಿಕೊಳ್ಳಬೇಕೆಂದು ಯೋಚಿಸಿದರೆ

ಎಲ್ಲರ ನೆಮ್ಮದಿಯೂ ಉಳಿಯಬಹುದು

Saturday, April 20, 2024

ಕಾಲ

 

ದೂರವಾಣಿ ದೂರವಾಗಿ

ಚರವಾಣಿ ಚುರುಕಾಗಿ

ಕರದಲ್ಲಿ ಕರೆ ಹಿಡಿದು ಬೆರಳ 

ಮೂಲಕ ಜಗವ ತೋರುವ ಕಾಲ


ಹಿರಿಯರು ಕಿರಿಯರತ್ತ

ಕಿರಿಯರು ಹಿರಿಯರತ್ತ

ಬೆಟ್ಟು ಮಾಡಿ ಟೀಕಿಸಿ

ಅಪಹಾಸ್ಯ ಮಾಡುವ ಕಾಲ


ಬಿಸಿಲು ಭಯಾನಕ ಭೂತವಾಗಿ

ಮಳೆಯು ಮನಬಂದಂತೆ ಸುರಿದು

ಚಳಿಯು ಛಲ ಬಿಡದೆ ಮರಗಟ್ಟಿಸುವ

ಋತುಗಳ ಅಯೋಮಯ ಕಾಲ


ಅವರಿವರ ಗೊಡವೆ ಬೇಡ

ಕೆಟ್ಟವರೆನಿಸಿಕೊಳ್ಳುವುದು ಬೇಡ

ಎಲ್ಲಿಯೂ ನಗೆಪಾಟಲಾಗುವುದು ಬೇಡ

ನಮಗ್ಯಾಕೆ ಉಸಾಬರಿ ಎನ್ನುವ ಕಾಲ


ಅವಿಭಕ್ತ ಕುಟುಂಬಗಳೊಡೆದು 

ಸಂಬಂಧಗಳು ಸುಟ್ಟು ಕರಕಲಾಗಿ

ಸರಿದಾರಿ ತಿಳಿಯದೇ ಕಳೆದು ಹೋಗಿ

ಪಶ್ಚಾತ್ತಾಪ ಪಡುವ ಕಾಲ


ಕಾದರೆ ಕಾಲವೇ ಮದ್ದು ಇಲ್ಲವಾದರೆ

ಕೈಲಾಸ ಒದ್ದು ಕಸವಾಗಿ ಕಂಗೆಟ್ಟು

ಪರಮಾತ್ಮನ ಪಾದವೇ ಗತಿಯೆಂದು

ಶರಣು ಬಿದ್ದು ತಪ್ಪೊಪ್ಪ ಬೇಕಾದ ಕಾಲ

Tuesday, April 09, 2024

ಯುಗಾದಿ

 

ಯುಗದ ಆದಿಯಿದು ಯುಗಾದಿ

ಹೊಸತನದ ಸಂಭ್ರಮದ ಹಾದಿ

ಉತ್ತಮವಾದ ಭವಿಷ್ಯಕ್ಕೆ ನಾಂದಿ

ಕುಟುಂಬ ಸಮೇತ ಸೇರುವರು ಮಂದಿ


ಯುಗಾದಿಯ ಬಟ್ಟೆಯಲ್ಲಿ

ಹೊಸ ವರುಷದ ವಿನ್ಯಾಸ

ಹಬ್ಬ ಹರಿಸುವ ಹರ್ಷೋಲ್ಲಾಸ

ತುಂಬಿ ತುಳುಕುವ ನವೋಲ್ಲಾಸ 


ವಸಂತಕಾಲದ ಆಗಮನವಿದು

ಜ್ಞಾನ ಬುದ್ಧಿಯ ದೀವಿಗೆಯಿದು

ಹೊಸವರ್ಷದ ಆರಂಭವಿದು

ಸರ್ವರಿಗೂ ಶುಭವಾಗುವುದು


ಇಂದು ನಮ್ಮದು ನಾಳೆ ನಿಲ್ಲದು

ಇರುವವರೆಗೆ ನಗುತಿರುವುದೇ ಒಳ್ಳೇದು 

ಸ್ವಲ್ಪ ಬೇವು ಸ್ವಲ್ಪ ಬೆಲ್ಲ ಸೇರಿಸಿ ತಿನ್ನುವುದು

ಜೀವನವನ್ನೂ ಹೀಗೇ ಎದುರಿಸುವುದು


ಯುಗಾದಿ ಹಬ್ಬದ ಶುಭಾಶಯ

- ಪೂ.

09-04-2024





Monday, April 08, 2024

ಒಳ್ಳೆಯದೇ


ಅರಳಿದರೆ ಒಳ್ಳೆಯದೇ

ಆದರೆ ಅತಿಯಾಗ ಬಾರದು

ಹೊರಳಿದರೆ ಒಳ್ಳೆಯದೇ

ಆದರೆ ಕೆಳಗೆ ಬೀಳಬಾರದು


ಕೆರಳಿದರೆ ಒಳ್ಳೆಯದೇ

ಆದರೆ ಕೆಡಬಾರದು

ನರಳಿದರೆ ಒಳ್ಳೆಯದೇ

ಆದರೆ ನರಕವಾಗಬಾರದು


ಮರಳಿದರೆ ಒಳ್ಳೆಯದೇ

ಆದರೆ ಮರೆಯಬಾರದು

ಉರುಳಿದರೆ ಒಳ್ಳೆಯದೇ

ಆದರೆ ಉರಿಯಬಾರದು


ಅರಿತರೆ ಒಳ್ಳೆಯದೇ

ಆದರೆ ಅಳಿಯಬಾರದು

ನುರಿತರೆ ಒಳ್ಳೆಯದೇ

ಆದರೆ ತುಳಿಯಬಾರದು


ಸ್ನೇಹವೆಂಬುದು ಒಳ್ಳೆಯದೇ

ಆದರೆ ಸೋಲಬಾರದು

ರಾಗವಿದ್ದರೆ ಒಳ್ಳೆಯದೇ

ಆದರೆ ರಗಳೆಯಾಗಬಾರದು


ಪ್ರೀತಿಯಿದ್ದರೆ ಒಳ್ಳೆಯದೇ

ಆದರೆ ಪೆಟ್ಟು ತಿನ್ನಬಾರದು

ಗರ್ವವಿದ್ದರೆ ಒಳ್ಳೆಯದೇ

ಆದರೆ ತಿಳಿಯಬಾರದು

Wednesday, March 27, 2024

ಯಾರು

 

ಪೊಡವಿಯ ಅಡವಿಯ ಅಡ ಇಟ್ಟವರು ಯಾರು

ಅಡವಿಟ್ಟ ಅಡವಿಯ ಕಡ ಕಟ್ಟುವವರು ಯಾರು 

ಬಗಲಲ್ಲೇ ಬಗೆಬಗೆ ಬಗೆದು ಬಗೆದವರು ಯಾರು

ಬಗೆದುದನ್ನು ಭರಿಸಲು ಹೆಗಲು ಕೊಟ್ಟವರು ಯಾರು


ಅರಿವಿಗೆ ಅರಿವೆ ಹೊದೆಸಿ ಮುಚ್ಚಿಟ್ಟವರು ಯಾರು

ಅರಿವಿನ ಅರಿಯ ಅರಿಕೆಯನ್ನು ಅರಿತವರು ಯಾರು

ನುಡಿದಂತೆ ನಡೆಯನ್ನು ನಡೆದವರು ಯಾರು

ನುಡಿಯದೇ ನುಡಿಯನ್ನು ನುಡಿಸಿದವರು ಯಾರು


ಬಿಸಿಲಲ್ಲಿ ಬಿಸಿ ಬಸಿದು ಬೀಸಿದವರು ಯಾರು

ಹಸಿದಲ್ಲಿ ಹಸಿಯ ಹಸಿ ಹಂಚಿದವರು ಯಾರು

ಕಾಲನನ್ನು ಮೆಟ್ಟಿ ಕಾಲ ಹೆಚ್ಚಿಸಿಕೊಂಡವರು ಯಾರು

ಸಾಲ ಸಾಲದೆಂದು ಸಾಲಲ್ಲಿ ನಿಂದವರು ಯಾರು


ಬರದ ಬರವನ್ನು ಬರೆದು ತಿಳಿಸಿದವರು ಯಾರು

ಬರೆದ ಬರಹವನ್ನು ಅರ್ಥೈಸಿ ತಿಳಿದವರು ಯಾರು

ಓದಿನ ಒದವಿಗೆ ಒದವು ಒದಗಿಸಿದವರು ಯಾರು

ಆಡಿದಂತೆ ಆಡನ್ನು ಅಡ್ಡಾಡಿಸಿ ಕೈ ಆಡಿಸಿದವರು ಯಾರು 


ಮಡಕೆಯೊಳಗೆ ಮಡಕೆಯನ್ನು ಬೇಯಿಸಿದವರು ಯಾರು

ಪಟ್ಟುಬಿಡದೆ ಪಟ್ಟು ಹಾಕಲು ಪ್ರಯತ್ನ ಪಟ್ಟವರು ಯಾರು

ಪಡಿಯ ಪಡಿಪಡೆದು ಪಡಿಹಾಕಿ ಪಡಿಯೇರಿ ಪಡಿ ಮೆಟ್ಟಿದವರಾರು

ಅಡಿ ಮೇಲೆ ಅಡಿ ಇಟ್ಟು ಅಡಿಯಲ್ಲಿ ಅಡಗಿದವರು ಯಾರು


ಹಲವೆಡೆ ಹಲವಿಟ್ಟು ಹಲವು ಸಲ ಉತ್ತವರು ಯಾರು

ಬೀಳು ಬೀಳದಂತೆ ಬೀಳುಗಳ ಬೆಳೆಸಿದವರು ಯಾರು

ಹರಿವ ಹರಿವನ್ನು ಹರಿದಂತೆ ಹರಿಸಿದವರು ಯಾರು

ಹರಿಯ ಹರವನ್ನು ಹರವಿಟ್ಟು ಹರಸಿದವರು ಯಾರು

Saturday, March 23, 2024

ಅಮ್ಮ ಜೀವ - ಅಪ್ಪ ಪ್ರಾಣ

 

ಅಮ್ಮ ಜೀವವನ್ನು 

ಹೊರುತ್ತಾಳೆ ಹೆರುತ್ತಾಳೆ

ಅಪ್ಪ ಅದನ್ನು ಹೊರುತ್ತಾನೆ 

ಪ್ರಾಣ ಒದಗಿಸುತ್ತಾನೆ


ಅಮ್ಮನೆಂಬ ಅಕ್ಕರೆ

ಅಪ್ಪನೆಂಬ ಅದ್ಭುತ

ಅಮ್ಮನ ಮಮತೆಯ ಮತ್ತು

ಅಪ್ಪನ ಮಾತುಗಳು ಮುತ್ತು


ಅಮ್ಮ ನುಡಿಸುತ್ತಾಳೆ

ಅಪ್ಪ ನಡೆಸುತ್ತಾನೆ

ಅಮ್ಮ ಮುದ್ದು ಮಾಡುತ್ತಾಳೆ

ಅಪ್ಪ ತಿದ್ದಿ ತೀಡುತ್ತಾನೆ


ಅಮ್ಮ ಓದಿಸಿ-ಬರೆಸಿ ಮಾಡುತ್ತಾಳೆ

ಅಪ್ಪ ಭವಿಷ್ಯವನ್ನು ಗಟ್ಟಿ ಮಾಡುತ್ತಾನೆ

ಅಮ್ಮ ಕೆಲವೊಮ್ಮೆ ಅಪ್ಪನಾಗುತ್ತಾಳೆ

ಅಪ್ಪ ಕೆಲವೊಮ್ಮೆ ಅಮ್ಮನಾಗುತ್ತಾನೆ

ವಿಪರ್ಯಾಸ

 

ಕೆಟ್ಟದ್ದನ್ನು ಮಾಡಿದವರು ಮರೆತು ಬಿಡುತ್ತಾರೆ

ಅನುಭವಿಸಿದವರಿಗೆ ಅದು ನೆನಪಿರುತ್ತದೆ

ಒಳ್ಳೆಯದನ್ನು ಮಾಡಿದವರಿಗೆ ನೆನಪಿರುತ್ತದೆ

ಅನುಭವಿಸಿದವರು ಅದನ್ನು ಮರೆತು ಬಿಡುತ್ತಾರೆ


ನಾನು ಏನೇ ಮಾಡಿದರೂ ಅದು ಸರಿ

ಬೇರೆಯವರು ಮಾಡಿದರೆ ಎಲ್ಲವೂ ತಪ್ಪು

ನಾನು ಮಾಡಿರುವುದಕ್ಕೆ ಕಾರಣವಿರುತ್ತದೆ

ಬೇರೆಯವರು ಅನಾವಶ್ಯಕವಾಗಿ ಮಾಡುತ್ತಾರೆ


ನಾನು ಮಾಡುವುದೆಲ್ಲಾ ಧನಾತ್ಮಕ

ಇನ್ನೊಬ್ಬರು ಮಾಡುವುದೆಲ್ಲಾ ಋಣಾತ್ಮಕ

ಆಗಬೇಕಾಗಿರುವುದು ನನ್ನ ಜವಾಬ್ದಾರಿಯಲ್ಲ

ಮಾಡದಿರುವುದು ಅವರ ಬೇಜವಾಬ್ದಾರಿ


ಬಿಸಿಲಿದ್ದರೆ ಮಳೆ ಬೇಕೆನಿಸುತ್ತದೆ

ಮಳೆ ಬಂದರೆ ಕಿರಿಕಿರಿಯಾಗುತ್ತದೆ

ಸೆಖೆಯಿದ್ದರೆ ಚಳಿಗಾಗಿ ಆಸೆ ಪಡುತ್ತೇವೆ

ಚಳಿಯಿದ್ದರೆ ಬಿಸಿಲಿಗಾಗಿ ಪರಿತಪಿಸುತ್ತೇವೆ


ಎಲ್ಲವೂ ಸರಿಯಾಗಿದ್ದರೆ ಗೊಣಗುತ್ತೇವೆ

ಸರಿಯಿಲ್ಲದಿರುವಾಗ ಹೆಣಗುತ್ತೇವೆ

ನೆಮ್ಮದಿ ಬಿಟ್ಟು ಚಿಂತೆಯಿಂದ ಕೊರಗುತ್ತೇವೆ

ಕೆಟ್ಟಾಗ ಮತ್ತೊಬ್ಬರನ್ನು ತೆಗಳಿ ಕೃತಾರ್ಥರಾಗುತ್ತೇವೆ 

ಆಸೆ - ವಾಸ್ತವ


ಮನದಾಳದಲ್ಲಿ ಹುದುಗಿದ ಆಸೆಗಳಲ್ಲಿ ಹುಡುಕಿದೆ

ಆಸ್ಥೆಯಿಂದ ಆಯ್ದು ಬೆಲೆಬಾಳುವುದನ್ನು ಹೊರತೆಗೆದೆ

ಅಕ್ಕಿ ಆರಿಸಿದಂತೆ ಹೆಕ್ಕಿ ತೆಗೆದ ಅಮೂಲ್ಯ ಆಸೆಯನ್ನು 

ಕೊಕ್ಕಿನಲ್ಲಿ ಹಿಡಿದಂತೆ ಹಿಡಿದು ಆಕಾಶಕ್ಕೆ ಏರಿದೆ


ಆಕಾಶದೆತ್ತರದಿಂದ ನೋಟವ ಕೆಳ ಹರಿಸಿದಾಗ

ಭೂಮಿ ತುಂಬಾ ಹಸಿರು ಕಂಡೆ, ಸಂತೋಷಗೊಂಡೆ

ಪ್ರಾಣಿಗಳ ಮತ್ತು ಮನುಜನ ಪ್ರಪಂಚ ಬೇರೆಬೇರೆ

ಎಂಬುದನ್ನು ಬಹು ಸ್ಪಷ್ಟವಾಗಿ ನಾ ಕಂಡುಕೊಂಡೆ


ಪ್ರಕೃತಿಯ ಫಲಕದಲ್ಲಿ ಹರಿವ ಪವಿತ್ರ ಪನ್ನೀರು 

ಖಗಮೃಗಗಳ ಬದುಕಿನಲ್ಲಿ ನೆಮ್ಮದಿಯ ಉಸಿರು 

ಮನುಜನ ಮನಸು ಹೃದಯದಲ್ಲಿ ಸದಾ ಒಸರುವ,

ಕೂಡಿ ಬಾಳುವಂಥ ಸದ್ಬುದ್ಧಿ ಚಿಲುಮೆಯ ತೇರು


ಸಾಮರಸ್ಯವೇ ಸರ್ವಸ್ವವೆಂಬ ತಿಳಿವಿನ ಮಾತು

ಜೊತೆಗೂಡಿ ಬಾಳುವುದರ ಅರ್ಥವೇ ಒಳಿತು

ಇದನ್ನರಿತುಕೊಂಡಿದ್ದರದೇ ಸಕಲ ಸಂಪತ್ತು

ಕೈಬಿಟ್ಟಾಗ ಆಕಾಶದಲ್ಲಿರುವ ಆಸೆಗೆ ಬೆಂಕಿಯ ಕುತ್ತು


ಬೆಂಕಿ ಹಿಡಿದ ಆಸೆ ಹೊತ್ತು ಕೆಳಗಿಳಿಯುವ ಹೊತ್ತು

ಇಳಿಯುತ್ತಿದ್ದಂತೆಯೇ ಕಾಣುತ್ತಿತ್ತು ವಾಸ್ತವದ ಕೈತುತ್ತು

ಹಸಿರ ಕೇಶದ ನಡುನಡುವೆ ಬೋಳು ಭೂ-ತಲೆ

ಕಾಡಲ್ಲೆಲ್ಲಾ ಅಭಿವೃದ್ಧಿ ಭೂತದ ಅಬ್ಬರ ದಾಂಧಲೆ


ಪ್ರಾಣಿಪಕ್ಷಿಗಳ ಅಸಹಾಯಕ ಆತಂಕದೊಂದಿಗೆ,

ತನ್ನದೇ ಕಾಲಿಗೆ ಕೊಡಲಿಯಿಟ್ಟು, ಭವಿಷ್ಯವನ್ನು

ಪಣಕ್ಕಿಟ್ಟು, ಅರಚಿ-ಕಿರುಚಿ ಪರದಾಡುವ ಮನುಷ್ಯನ  

ಬುದ್ಧಿಗೇಡಿತನದ ಪರಮಾವಧಿಯ ಪೆಟ್ಟು


ಗಿಡವಿಲ್ಲ ಮರವಿಲ್ಲ ಕಾಡೂ ಇಲ್ಲ ಹಸಿರಿಲ್ಲ 

ಕುಡಿಯಲು ನೀರಿಲ್ಲ ಎಸರಿಡಲೂ ಗತಿಯಿಲ್ಲ

ಮುಂದಿನ ಪೀಳಿಗೆಗೆ ನೀಡಲು ಒಳ್ಳೆಯ ಹೆಸರಿಲ್ಲ

ಪಾಪಪ್ರಜ್ಞೆ ಬಿಟ್ಟು ಬೇರೇನೂ ಉಳಿಯುತ್ತಿಲ್ಲ