Monday, November 20, 2023

ಅಭಯ

ಬೆಳಕಿನಲ್ಲಿ  ಬವಳಿದಂತೆ ಕುಳಿತಿರುವ ಕಂದ

ಬೆದರ ಬೇಡ ಬೆನ್ನಿಗಿಹುದು ಅಭಯ ಕಬಂಧ

ಬೆಳಗು ನೀ ನಂದಾದೀಪ ಆನಂದದಿಂದ 

ಅಂಕೆಯಿಲ್ಲದ ಸಂಖ್ಯೆಯಲ್ಲಿ ಮಿರುಗುವ ಚಂದ


ಕಪ್ಪು ಕತ್ತಲ ತೊಳೆದಿರುವ ದೀಪಗಳ ಪ್ರಬಂಧ

ಘಮಘಮಿಸುವುದು ಸುತ್ತಲೆಲ್ಲ ಪವಿತ್ರ  ಶ್ರೀಗಂಧ

ಆಗಸದಲ್ಲಿ ಹರಡಿರುವ ಹುಣ್ಣಿಮೆಯ ಅಂದ

ಪಡೆದದನು ಬೆಳಗಲಿ ನಿನ್ನ ವದನಾರವಿಂದ


Saturday, November 18, 2023

ಜೀವನ


ತಿಂದ ಮೇಲೆ ಕೈಯನ್ನು ತೊಳೆಯಲೇ ಬೇಕು

ಉಂಡ ಮೇಲೆ ತಟ್ಟೆಯನ್ನು ಬೆಳಗಲೇ ಬೇಕು

ಹೊರಗಿಂದ ಬಂದು ಸ್ನಾನ ಮಾಡಲೇ ಬೇಕು

ಚಂದದಿಂದ ಮಾತುಗಳ ಆಡಲೇ ಬೇಕು


ಸಂಜೆ ಹೊತ್ತು ದೀಪವನ್ನು ಹಚ್ಚಲೇ ಬೇಕು

ಭಕುತಿಯಿಂದ ಕೈಮುಗಿದು ಬೇಡಲೇ ಬೇಕು

ಹಿರಿಯರ ಪಾದಸ್ಪರ್ಶ ಮಾಡಲೇ ಬೇಕು

ಕಿರಿಯರಿಗೆ ಮಮತೆಯನ್ನು ನೀಡಲೇ ಬೇಕು


ಇಷ್ಟವಿಲ್ಲದಿದ್ದರೂ ಕಷ್ಟವನ್ನು ಪಡಲೇ ಬೇಕು

ನಷ್ಟವಾದರೂ ಧಾರ್ಷ್ಟ್ಯವನ್ನು ತೋರಲೇ ಬೇಕು

ಪ್ರಾಮಾಣಿಕ ಬದುಕನ್ನು ಬದುಕಲೇ ಬೇಕು

ಅಂತಿಮ ನಿಲ್ದಾಣದವರೆಗೆ ನಡೆಯಲೇ ಬೇಕು

ಸಾರು-ನಾರು

ಇಂದು ಊಟಕ್ಕೆ ಸಾರು, ಇದನು ಕೇಳಿದವರು ಯಾರು

ತಿಂದು ಉಪ್ಪು ಕಮ್ಮಿ ಎಂದು ಹೇಳಿದವರು ಯಾರು

ಬಂದು ನಿಂದು ಬೆಂದು ಜೊತೆಗೂಡಿದವರು ಯಾರು

ಎಂದು ನೀ ಸಾರು,  ಬೇಕಾದರೆ ಬೇಗ ಬಳಿಸಾರು


ಊಟದಲ್ಲಿ ಖಚಿತ ಉಚಿತ ನಾರು

ಇಲ್ಲವೆಂದು ಗೊಣಗಿದವರು ಯಾರು

ಕಷ್ಟ ಗೊತ್ತಿಲ್ಲದಿರುವುದಕ್ಕೇ ಕೊಳಕು ನಾರು

ಬೇಡ ಬರೀ ಒಣ ಮಾತಿನ ದರ್ಬಾರು

ಭಾಗ್ಯ - ಯೋಗ್ಯ


ವರುಷದಾದಿಯಲಿ ಹೊಸ ಹಾದಿಯಲಿ 
ಸಿಕ್ಕಿರುವುದು ನಮಗೆ ಭಾಗ್ಯ
ಅಂಡು ಸುಟ್ಟರೂ ಮಂಡೆ ಕೆಟ್ಟರೂ
ನಮಗದೇ ಸೌ-ಭಾಗ್ಯ

ಮುಂದೊಂದು ದಿನ ನಾವೇ ಆಗುವೆವು ಭೋಗ್ಯ
ಆಗ ಪರಿತಪಿಸ ಬೇಕಾಗುವುದು ನಮ್ಮ ದೌರ್ಭಾಗ್ಯ
ಈಗಲೇ ಎಚ್ಚೆತ್ತರೆ ನಡೆಯುವುದೆಲ್ಲ ಯೋಗ್ಯ
ಆಗ ಮಾತ್ರ ಉಳಿಯುವುದು ಆಯುರಾರೋಗ್ಯ

ಧೀಮಂತ ದೊರೆತಾಗ ನೆಮ್ಮದಿಯು ಲಭ್ಯ
ಭಾಗ್ಯಗಳ ಅಳಿಸಿ ಬಲ ನೀಡುವ ಸಭ್ಯ
ಯೋಚಿಸಿ ಹೆಜ್ಜೆ ಇಟ್ಟರೆ ಸಿಗುವುದು ಸೌಲಭ್ಯ
ಕಿಸುರು ಕೊಸರುಗಳು ಅಲ್ಲಿ ಖಂಡಿತಾ ಅಲಭ್ಯ

ಸಾಧ್ಯ - ಅ - ಸಾಧ್ಯ

ಅಸಾಧ್ಯವನ್ನು ಸಾಧ್ಯವಾಗಿಸ ಬಹುದೇ

ನೀ ಮನಸು ಮಾಡಿದರದು ಸಾಧ್ಯ

ಸಾಧ್ಯವನ್ನು ಅಸಾಧ್ಯವಾಗಿಸ ಬಹುದೇ 

ಇಲ್ಲಸಲ್ಲದುದಕ್ಕೆ ಕಿವಿಗೊಟ್ಟರೆ ಅದೂ ಸಾಧ್ಯ


ಸಾಧ್ಯಕ್ಕೆ  ' ಅ ' ಸೇರಿದರಷ್ಟೇ ಅಸಾಧ್ಯ

' ಅ ' ವರಿವರ ಮಾತು ಕೇಳದಿರು ಸದ್ಯ 

ಅರಿತರಂತರಾತ್ಮದ  ಮಾತೇ ನೈವೇದ್ಯ

ಆಗಷ್ಟೇ  ಗೆಲುವಿನ ಮೆಟ್ಟಿಲೇರಲು ಸಾಧ್ಯ

Friday, November 17, 2023

ಮತ್ತೆ ಸಿಗದು


ಅಪ್ಪ ಇಲ್ಲ ಅಮ್ಮ ಇಲ್ಲ 

ಇದ್ದಾಗ ಬೆಲೆ ಕೊಡಲಿಲ್ಲ 

ಪ್ರೀತಿ ಮಮತೆ ಸಾಲಲಿಲ್ಲ 

ಈಗ ಪಡೆವ ಭಾಗ್ಯವಿಲ್ಲ


ಕೊಟ್ಟ ಕಿರುಕುಳ ಕಮ್ಮಿ ಇಲ್ಲ 

ಪಶ್ಚಾತ್ತಾಪ ಪಟ್ಟೇ ಇಲ್ಲ 

ನಿನಗದರ ಅರಿವೇ ಇಲ್ಲ 

ಅವರು ತಿಳಿಯಗೊಡಲಿಲ್ಲ


ಅವರ ಮನವ ಅರಿಯಲಿಲ್ಲ

ಜೊತೆಗೆ ಸಮಯ ಕಳೆಯಲಿಲ್ಲ

ಪ್ರೀತಿಯಂತೂ ತೋರಲಿಲ್ಲ

ಮಾತು ಕೂಡ ಆಡಲಿಲ್ಲ


ವಾಸ್ತವವ ಗ್ರಹಿಸಲಿಲ್ಲ

ತಕ್ಷಣ ಎಚ್ಚೆತ್ತುಕೊಳಲಿಲ್ಲ 

ಕಳಕೊಂಡ ಮೇಲೆ ಅವರೇ ಎಲ್ಲಾ

ಆದರೇನೂ ಫಲವಿಲ್ಲ

Monday, November 13, 2023

ಒಂದು ದಿನ


ದಿನದಲ್ಲಿ ದಯೆಯಿಂದ

ದಯೆಯಲ್ಲಿ ಪ್ರೀತಿಯಿಂದ

ಪ್ರೀತಿಯಲ್ಲಿ ಹೊಳಪಿಂದ

ಕಳೆಗೊಂಡ ಕಣ್ಮಣಿ ಬೆಳಗು


ದೀಪಾವಳಿಗೆ ದೀವಿಗೆ ಹೊತ್ತು

ಭಾರವಾಗಿ ಬೇಸತ್ತು

ಬಸವಳಿದ ಈ ಹೊತ್ತು

ಬೆಂದು ನಿಂದಿರುವ ಮಧ್ಯಾಹ್ನ


ಯೌವ್ವನದ ಎಸಳ ಸವಿ

ಜವ್ವನದ ಹೆಗಲೇರಿ

ಗವ್ವನೆಯ ನಿಶೆಗೆ ಬೆದರಿ

ಸುಮ್ಮನೇ ಕುಳಿತ ಸಂಜೆ

ಸಾಧನೆಯತ್ತ


ಬದಲಾವಣೆಯನ್ನು ಬರಲು ಬಿಡು 

ಕಾಡುವ ಅಹಮನ್ನು ಬದಿಗಿಡು

ಕೊಂಚ ಕಸಿವಿಸಿ ನುಂಗಿ ಬಿಡು

ಕಣ್ಣ ಪಟ್ಟಿಯ ಸರಿಸಿ ಬಿಡು


ಮನದ ಬಾಗಿಲನು ತೆರೆದು ಬಿಡು

ಹೃದಯ ಕವಾಟವ ಬಿಗಿದಿಡು 

ಟೀಕೆಟಿಪ್ಪಣಿಗೆ ಕಿವಿಗೊಡು 

ಆಲೋಚನಾ ಕ್ರಮವನ್ನು ಹರಿತ ಮಾಡು


ಪರಪ್ರಶಂಸೆಯ ಕಡಿಮೆ ಮಾಡು

ಸ್ವನಿಂದೆಯ ಬಿಟ್ಟುಬಿಡು

ನಿನ್ನೊಳಗಿನ ಧ್ವನಿಗೆ ಗಮನ ಕೊಡು

ಪ್ರಾಮಾಣಿಕವಾಗಿ ಪ್ರಯತ್ನ ಪಡು

ನಿಂತ ನೀರು


ಅರಿತವರಿಗೆ ಅರಿವಿಲ್ಲದೊಡೆ

ನುರಿತವರಿಗೆ ಛಲವಿಲ್ಲದೊಡೆ

ಬೆರೆತವರಿಗೆ ಬಲವಿಲ್ಲದೊಡೆ

ಕಾರ್ಯವನೆಸಗುವುದೆಂತು


ಕಣ್ಣಿದ್ದೂ ಕುರುಡಾದೊಡೆ

ಕಿವಿಯಿದ್ದೂ ಕಿವುಡಾದೊಡೆ

ಕಾಲಿದ್ದೂ ಕುಂಟಾದೊಡೆ

ಜೀವಾತ್ಮಕ್ಕೆ ತೃಪ್ತಿಯೆಂತು


ಅಲ್ಪಕ್ಕೆ ಉಬ್ಬಿದೊಡೆ

ಸ್ವಲ್ಪಕ್ಕೆ ಸೊಕ್ಕಿದೊಡೆ

ಸಮಚಿತ್ತ ಸರಿದೊಡೆ

ಆತ್ಮವಿಶ್ವಾಸಕ್ಕೆ ಜಯವೆಂತು

Friday, November 10, 2023

ದೀಪಾವಳಿ


ಬೆಳಕಿನ ಹಬ್ಬದ ಬೆಳಗಲಿ ಇಂದು 

ಕವಿದಿಹ ಕತ್ತಲೆ ಕರಗಲಿ

ಬಾನಲೂ ಬುವಿಯಲೂ ಎಲ್ಲೆಲ್ಲೂ

ಭರವಸೆ  ಬೆಳಕದು ಹರಡುತಲಿರಲಿ 


ಹಬ್ಬದ ಹರುಷವು ಹಸಿಯಾಗಿರಲಿ

ಹೃದಯದ ಭಾವನೆ ಬೆಚ್ಚಗೆ ಇರಲಿ

ಪ್ರೀತಿಯ ದೀಪವು ಬೆಳಗುತಲಿರಲಿ

ಸಂಬಂಧದ ಸಂಕೋಲೆ ಬಿಗಿಯಾಗಿರಲಿ


ಎಲ್ಲರಿಗೂ ಬೆಳಕಿನ ಹಬ್ಬದ ಶುಭಾಶಯಗಳು.