ಹೊಸತು ಹೊಸದಿನ ಸಂಕ್ರಾಂತಿ
ತೊಡೆದು ನಮ್ಮೆಲ್ಲಾ ಭ್ರಾಂತಿ
ಹೊಸೆದು ನಗುವಿನ ಹೂ ಬತ್ತಿ
ಉರಿಸುವ ನವ ಚೈತನ್ಯ ಶಕ್ತಿ
ಮಕರ ಸಂಕ್ರಾಂತಿಯ ಶುಭಾಶಯ.
-ಪೂ.
15-01-2026
ಹೊಸತು ಹೊಸದಿನ ಸಂಕ್ರಾಂತಿ
ತೊಡೆದು ನಮ್ಮೆಲ್ಲಾ ಭ್ರಾಂತಿ
ಹೊಸೆದು ನಗುವಿನ ಹೂ ಬತ್ತಿ
ಉರಿಸುವ ನವ ಚೈತನ್ಯ ಶಕ್ತಿ
ಮಕರ ಸಂಕ್ರಾಂತಿಯ ಶುಭಾಶಯ.
-ಪೂ.
15-01-2026
ದಿನವದು ಮುಗಿಯಿತು ದಿನಪಟ್ಟಿ ಮಗುಚಿತು
2025 ಕಳೆಯಿತು 2026 ಉಳಿಯಿತು
ಕಳೆದದ್ದಕ್ಕೆ ಕಂಗೆಡದೇ ಉಳಿದುದನ್ನು ಉಳಿಸಿಕೊಂಡು
ಗಳಿಸಿ ಬೆಳೆಸಿ ಕುಣಿಸಿ ನಲಿಸಿ ನಕ್ಕು ನಲಿಯುವ
ಹೊಸ ದಿನಪಟ್ಟಿಯ ಶುಭಾಶಯ
ಪೂ-
01-01-2026
ಭ್ರಮೆಯೆನಿಸಿದರೂ ಭ್ರಮೆಯಲ್ಲ
ಭ್ರಮೆಯ ಭ್ರಮೆಯನ್ನು ಭ್ರಮಿಸುವಂತೆ
ಭ್ರಮೆಗೊಳಿಸುವ ಭ್ರಮೆಯಂತಲ್ಲ
ಆಪ್ತವೆನಿಸಿದರೂ ಆಪ್ತವಲ್ಲ
ಆಪ್ತರಂತೆ ವರ್ತಿಸಿ ಆಪ್ತವಾದರೂ
ಆಪ್ತರ ಆಪ್ತತೆಯಂತಲ್ಲ
ಅದ್ಭುತವೆನಿಸಿದರೂ ಅದ್ಭುತವಲ್ಲ
ಅದ್ಭುತವನ್ನು ಅದ್ಭುತವಾಗಿ ತೋರಿಸಿದರೂ
ಅದ್ಭುತದಷ್ಟು ಅದ್ಭುತವಲ್ಲ
ನಮ್ಮ ನಿಮ್ಮಂತೆಯೂ ಅಲ್ಲ
ನಮ್ಮ ನಿಮ್ಮಂತೆ ಕೆಲಸ ಮಾಡಿದರೂ
ನಮ್ಮ ನಿಮ್ಮ ನಡುವಣ ಬಾಂಧವ್ಯವಿಲ್ಲ
ಮಂಜಿನಲಿ ಮೂಡಿದ ಸುಂದರ ಕವಿತೆ
ಹೊಸೆದು ಹಾಡಿದ ಹಸಿ ರಾಗ ಸಂಹಿತೆ
ಹೃದಯದಲಿ ಹೊತ್ತ ಅಮೂಲ್ಯ ಗೀತೆ
ಕಾಲ ಬರೆದರೂ ಓದದೇ ಉಳಿದ ಅಸ್ಮಿತೆ
ಗಾಳಿಯಲ್ಲಿ ತೇಲಿದ ನಾಳೆಯ ಗಂಧ
ಅವುಚಿಕೊಂಡು ಅದರ ಸುಗಂಧ
ದಾಟಿ ಬಂದ ಗೆರೆಗೆ ಚುಕ್ಕಿಯನಿಟ್ಟು
ಮುಂದುವರಿದುದು ಹೊಸ ಹೆಜ್ಜೆಗಳನಿಟ್ಟು
ನೋವ ಗಾಯದ ಮೇಲೆ ನಗುವಿನ ನೆನಪು
ನಗುವಿನ ಒಳಗೆ ಸಂತಸದ ಹೊಳಪು
ನೆನಪಿನ ಬಾವಿಯಲ್ಲಿ ಜಿನುಗುವ ಬಿಸುಪು
ಮನದ ತೋಟದಲ್ಲಿ ಮಲ್ಲಿಗೆಯ ಒನಪು
ಬದಲಾದ ಕಾಲದ ಬದಲಾದ ನುಡಿ
ಹಾದಿಯಲ್ಲಿ ಕರಗಿದ ಬೆಂಕಿಯ ಕಿಡಿ
ಹಳೆಯ ದಿನಗಳಲ್ಲಿದ್ದ ಗಡಿಬಿಡಿ
ಹರಡಿದೆ ಹೂವಿನ ಹಾಗೆ ಬಿಡಿಬಿಡಿ
ತಟ್ಟಿ ಕುಟ್ಟಿದ ಕಠಿಣ ಕರ್ಗಲ್ಲು
ಏರಿದ ಒಂದೊಂದೂ ಮೆಟ್ಟಿಲು
ಮುಟ್ಟಿದ ಪ್ರತಿಯೊಂದು ಮೈಲಿಗಲ್ಲು
ಕಳೆದಿದೆ ಕಾಳ ಕತ್ತಲೆಯ ಕವಲು
ಕನ್ನಡ ಕಲಿಯಲು ಕನ್ನಡಿ ಬೇಡ
ಕನ್ನಡ ನುಡಿಯಲು ನಾಚಿಕೆ ಬೇಡ
ಕನ್ನಡ ಕಂಪಲಿ ಸೊಗಸಿದೆ ನೋಡ
ಕನ್ನಡವಾರಿಗೂ ಬಯಸದು ಕೇಡ
ರಾಜ್ಯೋತ್ಸವದ ಶುಭಾಶಯ
01-11-2025
ವಾಹನ ದಟ್ಟಣೆಯಲ್ಲಿ ಸಿಲುಕಿದ ಆಂಬ್ಯುಲೆನ್ಸ್
ಅಮ್ಮನ ಕಾಣದೆ ಬಿಕ್ಕಿಬಿಕ್ಕಿ ಕಣ್ಣೀರಿಡುವ ಕಂದ
ಬೇಟೆಗಾರನ ಬಲೆಯಲ್ಲಿ ಬಂಧಿಯಾದ ಪ್ರಾಣಿ
ದುಷ್ಟರ ಕಿರುಕುಳ ಸಹಿಸುತ್ತಿರುವ ಯುವತಿ
ತಪ್ಪೇ ಇಲ್ಲದಿದ್ದರೂ ಬೈಗುಳ ತಿನ್ನುವ ಕೆಲಸಗಾರ
ಅಸಡ್ಡೆಗೆ ಮೈಹಿಡಿಯಾಗಿ ಬೇಡುವ ಭಿಕ್ಷುಕ
ಸುಡು ಬಿಸಿಲಲ್ಲಿ ಬಾಡುತ್ತಿರುವ ಗಿಡಮರಗಳು
ನೀರು ತಪ್ಪಿ ಉಸಿರಿಗೆ ಚಡಪಡಿಸುತ್ತಿರುವ ಮೀನು
ಅಮ್ಮನ ಕರೆಗೆ ಕರು ಅಂಬಾ ಎಂದೋಡಿ ಬಂದ ಕ್ಷಣ
ಮುಗ್ಧ ಮಗುವೊಂದು ಬಂದಪ್ಪಿ ಮುತ್ತಿಟ್ಟ ನಿಮಿಷ
ಹಿರಿಯರ ಸೇವೆ ಮಾಡಿ ಆಶೀರ್ವಾದ ಪಡೆದ ಹೊತ್ತು
ಕಳೆದು ಹೋದ ನೆಮ್ಮದಿಯ ಮರಳಿ ಪಡೆದ ದಿನ
ಮೋಡವಿಲ್ಲದ ಆಗಸದಲ್ಲಿ ಮಿನುಗುವ ನಕ್ಷತ್ರಗಳು
ನೆಟ್ಟು ಬೆಳೆಸಿದ ಗಿಡದಲ್ಲಿ ಅರಳಿದ ಹೂವುಗಳು
ಬಂಧುಗಳು ಒಂದೆಡೆ ಕಲೆತಾಗ ಪ್ರೀತಿಯ ಮಾತುಗಳು
ಸಾಧನೆಯ ತುದಿಯೇರಿ ನಿಂದ ತೃಪ್ತಿಯ ನಗು
ಹಾರಾಡುತ್ತಿರುವ ಹಕ್ಕಿಗಳ ಚಿಲಿಪಿಲಿ ಕಲರವ
ಅಂಗಳದಲ್ಲಿ ಓಡಾಡುತ್ತಿರುವ ನಾಯಿ ಮರಿಗಳು
ಮರಿಗಳೊಂದಿಗೆ ಆಟವಾಡುತ್ತಿರುವ ಮಕ್ಕಳು
ಸಂತನೊಬ್ಬ ಸಂತನ ಭೇಟಿಯಾದಾಗ
ಸುತ್ತೆಲ್ಲ ಸಂತಸ ಹರಿಯುತ್ತದೆ
ಸಂತಸ ಹರಿದು ನದಿಯಾದಲ್ಲಿ
ಆರೋಗ್ಯವು ತುಂಬಿ ತುಳುಕುತ್ತದೆ
ಆರೋಗ್ಯ ತುಂಬಿ ತುಳುಕಿದಲ್ಲಿ
ನಗು ನಕ್ಕು ನಲಿಯುತ್ತದೆ
ನಗು ನಕ್ಕು ನಲಿಯುವಲ್ಲಿ
ನೆಮ್ಮದಿ ಸದಾ ನೆಲೆಸುತ್ತದೆ
ನೆಮ್ಮದಿ ನೆಲೆಸಿದಲ್ಲಿ ಐಶ್ವರ್ಯ ಸಿದ್ಧಿಸುತ್ತದೆ
ಐಶ್ವರ್ಯ ಸಿದ್ಧಿಸಿದಲ್ಲಿ ದಾನಧರ್ಮ ಇಣುಕುತ್ತದೆ
ದಾನಧರ್ಮ ಇಣುಕಿದಲ್ಲಿ ದಯೆ ಮೂಡುತ್ತದೆ
ದಯೆ ಮೂಡಿದಲ್ಲಿ ದಾರಿ ಕಾಣುತ್ತದೆ
ದಾರಿ ಕಂಡಾಗ ಮನುಜ ಸಂತನಾಗುತ್ತಾನೆ
ಸಂತನೆಂದಿಗೂ ಸಕಲರಿಗೆ ಬೆಳಕಾಗುತ್ತಾನೆ
ಬೆಳಕಾದ ಸಂತನೊಬ್ಬ ಸಂತನ ಭೇಟಿಯಾದಾಗ
ಸುತ್ತೆಲ್ಲ ಸಂತಸ ಹರಿಯುತ್ತದೆ
ಪುಟ್ಟಕ್ಕನ ಪುರದಲ್ಲಿ ಪುಸ್ತಕದ ರಾಶಿ
ಎಲ್ಲವನ್ನಿನ್ನೂ ಓದದಿದ್ದರೂ
ಇನ್ನಷ್ಟು ಖರೀದಿ ಒಟ್ರಾಶಿ
ಪುಟ್ಟಕ್ಕನ ಸುತ್ತಮುತ್ತ ಧೂಳುಮಯ
ಕಾಲಾಡಿಸಲಿಕ್ಕೂ ಆಗದಂತೆ
ಸಾಮಾನುಗಳ ಸಂಚಯ
ಪುಟ್ಟಕ್ಕನ ಬೆಕ್ಕುಗಳ ಕೈತಪ್ಪಿದೆ ಆರೋಗ್ಯ
ಏನು ಮಾಡಿದರೂ ಸಿಗುತ್ತಿಲ್ಲ
ಗುಣವಾಗುವ ಭಾಗ್ಯ
ಪುಟ್ಟಕ್ಕನ ತೋಟದಲ್ಲಿ ಹೆಗ್ಗಣಗಳ ರಾಜ್ಯ
ಅಲ್ಲಿ ಇಲ್ಲಿ ಅಗೆದು ಬಗೆದು
ಪುಟ್ಟಕ್ಕಗೂ ಹೆಗ್ಗಣಗಳಿಗೂ ವ್ಯಾಜ್ಯ
ಪುಟ್ಟಕ್ಕನ ಮನೆ ಮುಂದೆ ಚಾಲಕರಿಂದ ಅಡಚಣೆ
ಎಷ್ಟು ಹೇಳಿದರೂ ಕೇಳುವುದಿಲ್ಲವೆಂದಾಗ
ಕೋಪ ಬಂದರೆ ಪುಟ್ಟಕ್ಕನಲ್ಲ ಹೊಣೆ
ಪುಟ್ಟಕ್ಕನ ತಾರಸಿಯಲ್ಲಿ ತೆಂಗಿನಕಾಯಿ ಚೆಂಡಾಟ
ಬಿದ್ದು ಬಿದ್ದು ಒಡೆದು ಹೋದರೂ
ಕೀಳಿಸಲಾರೆ ಎಂಬ ಮಂಗಾಟ
ಪುಟ್ಟಕ್ಕ ಪೇರಿಸಿಟ್ಟ ಕಟ್ಟಿಗೆಯ ಕಟ್ಟುಗಳು
ದಿನಾ ಬಿಸಿನೀರು ಕಾಸಿದರೂ ಮುಗಿಯದ
ಹಲವು ರೀತಿಯ ಸೆಟ್ಟುಗಳು
ನಿನ್ನ ಮನೆಯಲ್ಲಿ ಜಗಳವಿಲ್ಲ
ಸ್ನೇಹದ ಸಿಂಚನವೇ ಎಲ್ಲಾ
ಈರ್ಷ್ಯೆ ಕಡು ದ್ವೇಷವೇ ಇಲ್ಲ
ಪ್ರೀತಿ ಮಮತೆಯೇ ಎಲ್ಲಾ
ಅಲ್ಲಿ ಜಾತಿ ಮತವೆಂಬ ಬೇಧವಿಲ್ಲ
ಮೇಲು ಕೀಳೆಂಬ ತಾರತಮ್ಯವಿಲ್ಲ
ಹಿರಿಯರು ಕಿರಿಯರೆಂದಿಲ್ಲ
ಶೈಶವ ತಾರುಣ್ಯ ಮುದಿತನವಿಲ್ಲ
ಅಲ್ಲಿ ಸಾವು ನೋವುಗಳೇ ಇಲ್ಲ
ದುಗುಡ ದುಃಖ ದುಮ್ಮಾನವಿಲ್ಲ
ನಲಿವು ತುಂಬಿಹುದು ಅಲ್ಲೆಲ್ಲಾ
ಸದಾ ಸ್ವರ ಸರಿಗಮದ ಬೆಲ್ಲ
ಅಲ್ಲಿ ಇರುವುದೆಲ್ಲಾ ಸ್ವಚ್ಛ ಸುಂದರ
ನನಗಿಲ್ಲಿ ಅದೆಲ್ಲ ಇಲ್ಲದ ನಶ್ವರ
ನಾನೇಕೆ ಅಲ್ಲಿಲ್ಲವೆಂದು ತಿಳಿದಿಲ್ಲ
ನಾನೆಂದಲ್ಲಿಗೆ ಬರುವೆನೆಂಬರಿವೂ ಇಲ್ಲ
ಅಪ್ಪ ಅಮ್ಮ ಈಗಾಗಲೇ ಅಲ್ಲಿರುವರಲ್ಲ
ಅವರು ನನಗೇನೂ ಹೇಳಲೇ ಇಲ್ಲ
ನಾನೀಗ ಬಂದರಲ್ಲಿ ಬಹುಶಃ ಸ್ವಾಗತವಿಲ್ಲ
ಆಹ್ವಾನ ಬರದೇ ಹೋಗುವ ಮಾತೇ ಇಲ್ಲ
ನಿನಗಾವುದೇ ಆಮಿಷ ನೀಡಲು ಸಾಧ್ಯವಿಲ್ಲ
ಬಲವಂತದಿಂದ ಆಮಂತ್ರಣ ಸಿಗುವುದಿಲ್ಲ
ನಿನ್ನ ಧ್ಯಾನದಲ್ಲಿ ಕಳೆದರೆ ನಾ ಜೀವನವೆಲ್ಲ
ಕರೆಸಿಕೊಳ್ಳದೇ ನಿನಗೆ ಬೇರೆ ದಾರಿಯಿಲ್ಲ