Tuesday, December 31, 2024

ಹೊಸ ದಿನದರ್ಶಿಕೆ 2025


ಇಪ್ಪತ್ತನಾಲ್ಕರ ಹರೆಯ ಕಳೆದು

ಇಪ್ಪತ್ತೈದಕ್ಕೆ ಕಾಲಿಟ್ಟು ಬೆಳೆವ

ಹೊಸ ದಿನದರ್ಶಿಕೆ ತರಲಿ ಸದಾ 

ಸುಖ ಶಾಂತಿ ನೆಮ್ಮದಿಯ.

ಶುಭಾಶಯಗಳೊಂದಿಗೆ,

- ಪೂ. 01-01-2025.


Saturday, November 09, 2024

ಉಫ್ ಎಂದು ಊದಿ ಬಿಡಿ

 

ಮನದ ಪೆಟ್ಟಿಗೆಯೊಳಗೆ

ಮುದುಡಿಟ್ಟ ನೋವುಗಳ

ಹೊರ ತೆಗೆದು ಗಾಳಿಗೆ

ಉಫ್ ಎಂದು ಊದಿ ಬಿಡಿ


ಕಷ್ಟಗಳ ಮೆಟ್ಟಿ ನಿಂತು 

ತಲೆಯೆತ್ತಿ ನಡೆಯುತ್ತ

ಸಾಧನೆಯ ಮೆಟ್ಟಿಲನು

ಏರಿ ಬಿಡಿ


ಹೃದಯದೊಳಗಿರುವ

ಪ್ರೀತಿಯನೆಲ್ಲ ಹನಿ ಹನಿಸಿ 

ಹರಡುತ್ತ ಜಗದ ತುಂಬೆಲ್ಲಾ 

ಪಸರಿಸಿ ಹರಿಸಿ ಬಿಡಿ


ಕಂಡಿರುವ ಕನಸುಗಳ

ನನಸಾಗಿಸುತ್ತ ನಗುತ

ಬದುಕಿನ ಪ್ರತೀ ಕ್ಷಣವನ್ನೂ 

ಉಲ್ಲಾಸದಿಂದ ಕಳೆದು ಬಿಡಿ

Thursday, October 31, 2024

ರಾಜ್ಯೋತ್ಸವದ ಶುಭಾಶಯ

 

ಭಾಷೆಯ ಕುಲುಮೆಯಿಂದ ಪುಟಿದೆದ್ದ ಕನ್ನಡ 

ಕಲಿತು ಅರಿತವರಿಗೆ ಹೆಮ್ಮೆಯೆನಿಸುವ ಕನ್ನಡ

ವೇಷಗಳ ಹುಡುಕಿ ಕಳಚುವ ಕಸ್ತೂರಿ ಕನ್ನಡ

ಕನ್ನಡಿಗರ ನರನಾಡಿಯಲ್ಲಿ ಕನ್ನಡ, ಕನ್ನಡ, ಕನ್ನಡ

ರಾಜ್ಯೋತ್ಸವದ ಶುಭಾಶಯಗಳು

ದೀಪಾವಳಿ 2024

 

ಮಳೆಯಲ್ಲಿ ತೋಯ್ದ ಇಳೆ 

ಸುತ್ತೆಲ್ಲಾ ತುಂಬಿದೆ ಹಸಿರು ಕಳೆ 

ಎಲ್ಲೆಲ್ಲೂ ಹಣತೆ ದೀಪಗಳೇ 

ಶುಭ ತರಲಿ ಈ ದೀಪಾವಳಿ




Sunday, October 27, 2024

ಅಂತಸ್ಥ

 

ಅವರಿವರ ಅರಿವಿನಲ್ಲಿ

ಅಳಿದುಳಿದ ಚೂರುಗಳಲಿ

ಅಡಗಿ ಕುಳಿತಿರುವ ಭಾವನೆಗಳಲಿ

ಬದ್ಧತೆಯ ಹುಡುಕಬಾರದು


ಅಂಗಲಾಚಿದರೂ ಎಟುಕದ

ಸಂಗಕೆಂದೂ ನಿಲುಕದ

ರಂಗು ಮೋಡಿ ಮನಸುಗಳಿಗೆ

ಸಿಲುಕಬಾರದು


ನೊಂದವರ ನೋಯಿಸುವ

ಬೆಂದವರ ಬೇಯಿಸುವ

ದುರುಳರ ಮಾತುಗಳಿಗೆ

ಬಲಿಯಾಗಬಾರದು


ಇಂದು ಇಂದಾಗಿರದ

ನಾಳೆ ನಾಳೆಯಾಗಿರದ

ಅಯೋಮಯ ಸ್ಥಿತಿಗೆ

ಬೀಳಬಾರದು


ಮೇಲು ಕೀಳೆಂಬ ಭ್ರಮೆಗೆ

ಮರುಳಾಗಿ ತಲೆ ಕೆಟ್ಟು

ನಮ್ಮನಮ್ಮ ಬೇರುಗಳ

ಮರೆಯಬಾರದು


ಎಷ್ಟೇ ಸಿರಿತನವಿರಲಿ

ಎಷ್ಟೇ ಬಡತನವಿರಲಿ

ಭಗವಂತನ ಧ್ಯಾನ ಬಿಟ್ಟು

ಮೆರೆಯಬಾರದು

Saturday, September 14, 2024

ವೃಕ್ಷ

 

ಇಹದ ಮಾತುಗಳ ಪರಕೆ ತಲುಪಿಸುವಂತೆ

ಮುಗಿಲ ಮೇಲಿನ ಬಯಲ ಅಣಕಿಸುವಂತೆ

ಸಾಟಿಯಿಲ್ಲದೆ ಬೆಳೆದು ಆಕಾಶದೊಳ ತೂರಿದಂತೆ

ವೃಕ್ಷವೊಂದಿಲ್ಲಿ, ಸ್ಫೂರ್ತಿ ತುಂಬುತ ನಿಂತಿದೆ


ಕೊಂಕು ಕೊಸರುಗಳ ಊದಿ ಗಾಳಿಗೆ ತೂರಿ

ಸಾಧನೆಯ ಮೆಟ್ಟಿಲುಗಳ ಒಂದೊಂದಾಗಿ ಏರಿ

ತನ್ನೊಳಗಿನ ಪರಿಮಳವ ಪರಿಸರಕೂ ಬೀರಿ

ನಂಜ ನುಂಗಿ ಅಂಜದಿರಲು, ಉದಾಹರಣೆಯಾಗಿದೆ


ಧೈರ್ಯದ ಛತ್ರಿ ಬಿಡಿಸಿ ಗಾಳಿಮಳೆಗಳ ಎದುರಿಸಿ

ಸಮಾಧಾನದ ದೋಣಿ ಬಳಸಿ ನೀರುನೆರೆ ನಿವಾರಿಸಿ

ತನ್ನೊಳಗೂ ಹೊರಗೂ ಮೇಲೂ ಕೆಳಗೂ ಸೇರಿಸಿ

ಆಶ್ರಯ ನೀಡಿ, ದಯಾಮಾಯಿಯಾಗಿ ಬದುಕಿದೆ


ಗಾಢ ಹಸಿರನು ಹರಡಿ ಪ್ರಾಣವಾಯುಗೆ ಜರಡಿ

ಹಿಡಿದು ಜೀವಗಳ ಉಳಿಸಿ ಬೆಳೆಸುವ ಗರಡಿ

ದಿನ ಮುಗಿದು ಮಲಗಿದರೆ ಆರಡಿ ಮೂರಡಿ

ಹೊತ್ತೊಯ್ಯುವ ಚಟ್ಟಕೂ, ಸಹಕಾರಿಯಾಗಿದೆ

Thursday, August 22, 2024

ಶೇರ್ ಮಾರ್ಕೆಟ್


ಆಸೆಯನ್ನು ಕೆದಕುತ್ತದೆ 

ಅತಿಯಾಸೆ ಮೊಳೆಯುತ್ತದೆ

ದುರಾಸೆಯದು ಹೆಚ್ಚಾದರೆ 

ನಿರಾಸೆ ಮನವನ್ನು ಸುಡುತ್ತದೆ


ಅರಿತರೆ ಅರಮನೆಯಾಗಿಸುತ್ತದೆ

ಅರಿಯದಿರೆ ಸೆರೆಮನೆಯಾಗಿಸುತ್ತದೆ

ಕಲಿಕೆಯನ್ನು ಅನಿವಾರ್ಯವಾಗಿಸುತ್ತದೆ

ಕಲಿಯದಿದ್ದರೆ ದಿಟವಾಗಿ ಕೈಸುಡುತ್ತದೆ 


ಅತ್ತರೆ ನಗಿಸುತ್ತದೆ 

ನಕ್ಕರೆ ರೊಚ್ಚಿಗೇಳುತ್ತದೆ 

ಕೊಟ್ಟರೆ ಏರುತ್ತದೆ 

ಕೊಂಡರೆ ಇಳಿಯುತ್ತದೆ


ಜಾಣ್ಮೆಯನ್ನು ಬೆಳೆಸಿ ಶ್ಲಾಘಿಸುತ್ತದೆ

ತಾಳ್ಮೆಯನ್ನು ಕಲಿಸಿ ಪರೀಕ್ಷಿಸುತ್ತದೆ

ಗಲಿಬಿಲಿಗೊಳಿಸಿ ತಲೆ ಕೆಡಿಸುತ್ತದೆ

ಭಯ ಹುಟ್ಟಿಸಿದರೂ ಜಯ ತರುತ್ತದೆ

Friday, August 16, 2024

ಜಗನ್ಮಾತೆ

 

ಬಿಸಿಲ ಕೋಲನು ಬಸಿದು 

ಪಾನೀಯ ಮಾಡಿ

ಕುಡಿಯುವಾಕೆ


ಆಕಾಶ ತೊಟ್ಟಿಲಿಗೆ

ಗಾಳಿ ಬಳ್ಳಿಯ ಕಟ್ಟಿ

ಜೋಕಾಲಿ ಆಡುವಾಕೆ 

 

ಪ್ರಾಣಿಪಕ್ಷಿಗಳೊಡನೆ 

ಸರಸದಿಂದ ಸಲ್ಲಾಪ

ನಡೆಸುವಾಕೆ


ಭೂಪಾತ್ರೆ ಹಿಡಿದಲ್ಲಾಡಿಸಿ 

ಮೂರ್ಖ ಮನುಜನ

ಸೊಲ್ಲಡಗಿಸುವಾಕೆ 


ನಂಬಿದವರ ನಖಕೂ 

ಕುತ್ತಾಗದಂತೆ ಸಲಹಿ

ಸಾಕುವಾಕೆ


ಶರಣು ಬಂದವರ

ಕೈ ಹಿಡಿದು ಸನ್ಮಾರ್ಗದಲ್ಲಿ 

ನಡೆಸುವಾಕೆ

Wednesday, August 14, 2024

ಹೊಳೆಯುತ್ತಿದ್ದಾನೆ

 

ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದಾನೆ

ದೇಶವನ್ನು ಬೆಳೆಸಿ ಬೆಳೆಯುತ್ತಿದ್ದಾನೆ

ಕಳೆಗಳ ಕಿತ್ತೆಸೆಯಲು ಶ್ರಮಿಸುತ್ತಿದ್ದಾನೆ

ಹೆಜ್ಜೆಯಿಟ್ಟಲ್ಲಿ ಹೊಸತನ ತರುತ್ತಿದ್ದಾನೆ


ಮಲಗಿದವರ ತಟ್ಟಿ ಎಬ್ಬಿಸುತ್ತಿದ್ದಾನೆ

ಜ್ಞಾನ ದೀಪವನ್ನೆಲ್ಲೆಡೆ ಉರಿಸುತ್ತಿದ್ದಾನೆ

ಕಾಲಿಗೆ ಬುದ್ಧಿ ಹೇಳಿದವರಿಗೆ ತಕ್ಕ

ಬುದ್ಧಿಯನ್ನು ಕಲಿಸುತ್ತಿದ್ದಾನೆ


ಎಲ್ಲವನ್ನೂ ಗಮನಿಸುತ್ತಿದ್ದಾನೆ

ಎಲ್ಲದರಲ್ಲಿಯೂ ಆಸಕ್ತಿ ವಹಿಸುತ್ತಿದ್ದಾನೆ

ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದಾನೆ

ಎಲ್ಲದಕ್ಕೂ ಹೆಗಲು ನೀಡುತ್ತಿದ್ದಾನೆ


ಖಡಾಖಂಡಿತ ಉತ್ತರ ನೀಡುತ್ತಿದ್ದಾನೆ

ಕೆಟ್ಟದ್ದನ್ನು ಮಟ್ಟ ಹಾಕುತ್ತಿದ್ದಾನೆ

ಒಳ್ಳೆಯದನ್ನು ಬೆಂಬಲಿಸುತ್ತಿದ್ದಾನೆ

ನಿಷ್ಕಳಂಕ ಪ್ರೀತಿ ಸೂಸುತ್ತಿದ್ದಾನೆ


ಪರರಿಗೆ ಮಾದರಿಯಾಗುತ್ತಿದ್ದಾನೆ

ದೇಶದುದ್ಧಾರಕ್ಕಾಗಿ ಜೀವ ಸವೆಸುತ್ತಿದ್ದಾನೆ

ದೇಶವಾಸಿಗಳೆಲ್ಲರೂ ತನ್ನವರೆನ್ನುತ್ತಾನೆ 

ತನ್ನದೆಲ್ಲವನ್ನೂ ಅವರಿಗೇ ಮೀಸಲಿಟ್ಟಿದ್ದಾನೆ

Tuesday, July 30, 2024

ಸುಧೀರ

 

ಮನಸಿನ ತಳಮಳ

ತಳಕಿಳಿಯದಂತೆ 

ಹೃದಯದ ಗಾಬರಿ

ನಲುಗಿಸದಂತೆ 


ಹೊರಚೆಲ್ಲಿ ಹಗುರಾಗಿ

ಹಸಿರ ಉಸಿರೆಳೆದು ನವಿರಾಗಿ

ಮೊರದಷ್ಟು ನಗು ಮೊಗೆದು

ಹೊಸ ಬೆಳಕ ಒಳಸೆಳೆದು


ಹೊಸತನವು ಆಗಮಿಸಿ

ಹೊಸತನ್ನು ಸ್ವಾಗತಿಸಿ

ಗರಿ ಬಿಚ್ಚಿ ನರ್ತನದಿ 

ಬಿರಿದ ಮಲ್ಲಿಗೆಯಾಗು

Thursday, July 25, 2024

ಅಂಕು ಡೊಂಕು


ಅಂಕುಡೊಂಕಿನ ಮರದಲ್ಲಿ 

ಬಿಂಕವಿಲ್ಲದೆ ಬೆಳೆದ ಪುಷ್ಪ

ಸಂಖ್ಯೆಯನ್ನು ಹೆಚ್ಚಿಸುತ್ತಾ

ಸಂತಸದ ಸುವಾಸನೆ ಬೀರುತ್ತದೆ


ಪರ್ಣಪಾತಿ ವೃಕ್ಷವೊಂದು

ಅಪರ್ಣವಾಗಿ ನಿಂದರೂ

ಸ್ವರ್ಣ ರವಿಯ ಬೆಳಕಿನಲ್ಲಿ

ವರ್ಣಮಯವಾಗುತ್ತದೆ 


ಅಗಳ ಬಳಿ ಬೆಳೆದು ನಿಂದು

ಖಗಗಳನ್ನು ಹೊತ್ತುಕೊಂಡು

ಜಗಳವಿಲ್ಲದ ಜಗದ ಕನಸನು

ಜಗಕೆಲ್ಲ ಹಂಚುತ್ತದೆ


ಬದುಕಿದ್ದಾಗಲೂ ಸತ್ತಾಗಲೂ

ಎಲ್ಲರಿಗೂ ನೆರವಾಗುತ್ತದೆ

ಮನುಜನಂತೆ ಕೊಂಕು ಹುಡುಕದೆ

ಜ್ಞಾನಿಯಂತೆ ನಿರ್ಗಮಿಸುತ್ತದೆ

Saturday, July 20, 2024

ಹರಿಯಬೇಕು

ಬಿಟ್ಟರೆ ಹರಿದು ಹೋಗುತ್ತದೆ

ತನ್ನ ದಾರಿಯ ಹುಡುಕಿಕೊಂಡು

ವಿಶಾಲ ಶರಧಿಯ ಸೇರುತ್ತದೆ


ನಿಂತರೆ ನಿಂತಲ್ಲೇ ಕೊಳೆಯುತ್ತದೆ

ಉಳಿದಲ್ಲೇ ಉಳಿದು ನಾರುತ್ತದೆ

ಕ್ರಿಮಿಕೀಟಗಳ ಸಲಹುತ್ತದೆ


ಹರಿಯಬೇಕು ಹರಿದು ಪೊರೆಯಬೇಕು

ಹೊರಳಬೇಕು ಪೊರೆ ಕಳಚಿ ಅರಳಬೇಕು

ನೆರಳೊಳಗೆ ನರಳದೇ ನಲಿಯಬೇಕು


ಹರಿಯಬೇಕು ಹರಿಯ ನೆನೆಯಬೇಕು

ಹರನ ಪಾದಕ್ಕೆ ಶರಣಾಗಬೇಕು

ಹೊರೆಯನೆಲ್ಲ ಬಿಟ್ಟು ತೆರಳಬೇಕು

Tuesday, July 02, 2024

ಇರುವೆಯಂತಿರಬೇಕು

 

ಇದ್ದರೆ ಇರುವೆಯಂತೆ ಇರಬೇಕು

ಬಿದ್ದರೂ ಮತ್ತೆ ಮತ್ತೆ ಎದ್ದು ಬರಬೇಕು

ಅಡ್ಡಿಗಳ ಸುತ್ತಿ ಹತ್ತಿ ಮೇಲೇರಬೇಕು


ಶರೀರ ಚಿಕ್ಕದಾದರೂ ಕಾರ್ಯ ದೊಡ್ಡದಿರಬೇಕು

ಕಣ ತೂಕವಾದರೂ ಮಣ ಕೆಲಸ ಮಾಡಬೇಕು

ಛಲ ಬಿಡದೆ ಸಾಧಿಸುವ ದೃಢ ಮನಸ್ಸಿರಬೇಕು


ಬಿಸಿಲಿನಲಿ ಬೆವರಿನಲಿ ಬೆದರದೇ ಓಡಾಡಬೇಕು

ದೂರವೋ ಸನಿಹವೋ ಗುರಿಯೆಡೆಗೆ ಸಾಗಬೇಕು

ಯಾರಿರಲೀ ಇಲ್ಲದಿರಲೀ ಕರ್ತವ್ಯದೆಡೆ ಲಕ್ಷ್ಯಬೇಕು


ಮುಖಾಮುಖಿಯಾಗಿ ವಿಷಯಗಳ ಚರ್ಚಿಸಬೇಕು

ಸಂಘ ಸಹವಾಸದಲಿ ಸ್ವರ್ಗವನು ಕಾಣಬೇಕು

ಶ್ರಮ ಪಟ್ಟು, ಕ್ರಮದಲ್ಲಿ ಬದುಕಿ ಜಯಿಸಬೇಕು

Sunday, June 30, 2024

ಉತ್ತಮ

 

ಮಾಡಿದರೂ ಒಂದೇ ಮಾಡದಿದ್ದರೂ ಒಂದೇ

ಮಾಡದೆಯೇ ಕೆಟ್ಟವರಾಗುವುದು ಉತ್ತಮ

ಅರಿತರೂ ಒಂದೇ ಅರಿಯದಿದ್ದರೂ ಒಂದೇ

ಅರಿಯದೆಯೇ ಬದುಕುವುದು ಉತ್ತಮ


ಕೇಳಿದರೂ ಒಂದೇ ಕೇಳದಿದ್ದರೂ ಒಂದೇ

ಕೇಳದೆಯೇ ಕೂರುವುದು ಉತ್ತಮ

ತಿಳಿದರೂ ಒಂದೇ ತಿಳಿಯದಿದ್ದರೂ ಒಂದೇ

ತಿಳಿಯದಿದ್ದರೆಯೇ ಉತ್ತಮ


ನೋಡಿದರೂ ಒಂದೇ ನೋಡದಿದ್ದರೂ ಒಂದೇ

ನೋಡದೆಯೇ ಇರುವುದು ಉತ್ತಮ

ನೀಡಿದರೂ ಒಂದೇ ನೀಡದಿದ್ದರೂ ಒಂದೇ

ನೀಡದೆಯೇ ಬಲಿಯಾಗುವುದುತ್ತಮ 


ಗಳಿಸಿದರೂ ಒಂದೇ ಕಳೆದುಕೊಂಡರೂ ಒಂದೇ

ಗಳಿಸದೆಯೇ ಉಳಿಯುವುದು ಉತ್ತಮ

ಬೆಳೆದರೂ ಒಂದೇ ಅಳಿದರೂ ಒಂದೇ

ಇದ್ದಲ್ಲಿಯೇ ಇರುವುದು ಉತ್ತಮ

Sunday, June 02, 2024

ಅಚ್ಚರಿಯ ತೊಟ್ಟಿಲು

ಅರೆ ಶತಕದ ಮೂರನೆಯ ಮೆಟ್ಟಿಲು

ಈ  ಜಗವಹುದು ಬಲು ಅಚ್ಚರಿಯ ತೊಟ್ಟಿಲು

ಸೋಲಿಲ್ಲ ಗೆಲುವಿಲ್ಲ ಇದ್ದರೂ ಇಲ್ಲಿ ಅದೆಲ್ಲ ಸಲ್ಲ

ಅರಿತರೆ ಸಿಹಿ-ಕಹಿ, ಜೀವನವಹುದು ಬೇವು ಬೆಲ್ಲ


ಬೆರೆತರೆ ಸ್ನೇಹ-ಸಂಬಂಧ, ತಕರಾರಿಲ್ಲ

ಇಲ್ಲವಾದಲ್ಲಿ ಕಿರಿಕಿರಿ ಎಂದಿಗೂ ತಪ್ಪಿದ್ದಲ್ಲ

ದಾರಿಯಲ್ಲಿ ಕಲ್ಲುಮುಳ್ಳು ಇರದಿರುವುದಿಲ್ಲ

ಎದುರಿಸಿ ನಿಲ್ಲದಿರೆ ಸುಲಭ ಪರಿಹಾರವಿಲ್ಲ


ಪ್ರಪಂಚದಲ್ಲಿ ಸಂಕಟ ಮುಗಿಯುವುದಿಲ್ಲ

ನಮಗೆ ನಾವೇ ನೆಮ್ಮದಿ ಪಡೆಯಬೇಕಲ್ಲ

ದುಃಖಿಸಿದರೆ ಎಂದಿಗೂ ಧೈರ್ಯ ಬರುವುದಿಲ್ಲ

ಧೈರ್ಯದಿಂದಿದ್ದರೆ ನೆಲ ಕುಸಿಯುವುದಿಲ್ಲ


ಬಯಕೆಯ ಬಳ್ಳಿಯ ಮಿತಿಯಲ್ಲಿ ಬಿಗಿದರೆ

ಬದುಕಲ್ಲಿ ಬೆಳೆಯುವುದು ಭರವಸೆಯ ಹಸಿರು

ಭಗವಂತನ ದಯೆಯ ಕೈ ತಲೆ ಮೇಲೆ ಇದ್ದರೆ

ಬಾಳ ಬಟ್ಟೆಯಲಿ ಸದಾ ನೆಮ್ಮದಿಯ ಉಸಿರು

Sunday, May 19, 2024

ಪರಮಾತ್ಮನ ಪಾದ

 

ಅಚ್ಚರಿಯ ಮೊದಲ ಹೆಜ್ಜೆ

ಚಚ್ಚರದಿ ಎರಡನೆಯ ಹೆಜ್ಜೆ

ಕಾಲಲ್ಲಿ ಕಟ್ಟಿರುವ ಗೆಜ್ಜೆ

ಸಾಧನೆಗೆ ಹೆಮ್ಮೆಯಿಂದ ಲಜ್ಜೆ


ಬೆರಳ ತುದಿ ಹಿಡಿದು ಎದ್ದು

ಸ್ವಪ್ರಯತ್ನದಿ ಮುನ್ನಡೆದೆ 

ಶ್ರಮದೊಂದಿಗೆ ಬಿರುನಡೆದೆ

ಛಲದೊಂದಿಗೆ ಗಮ್ಯ ಸೇರಿದೆ


ಅಂದಕ್ಕೆ ಅಂಧಳಾಗದೆ 

ಚಂದಕ್ಕೆ ಮರುಳಾಗದೆ

ಬಂದುದನ್ನು ಎದುರಿಸುತ್ತಾ

ಬದುಕನ್ನು ಸಾಗಿಸಿದೆ


ಗರಿಗೆದರಿ ಸಜ್ಜಾಗಿ

ಗರಿಬಿಚ್ಚಿ ಹಾರಿದೆ

ಗರಿಗಳಂದವ ತೋರಿದೆ

ಗುರಿಮುಟ್ಟಿ ವಿಶ್ರಮಿಸಿದೆ


ಜ್ಞಾನಕ್ಕೆ ಕೈಮುಗಿದು

ಧ್ಯಾನಕ್ಕೆ ಗಮನ ಕೊಟ್ಟು

ಪ್ರಾಣವನ್ನು ಪವಿತ್ರಗೊಳಿಸಿ 

ಪರಮಾತ್ಮನ ಪಾದ ಸೇರಿದೆ

Wednesday, April 24, 2024

ಅರ್ಥ - ಅಪಾರ್ಥ


ಸಂಬಂಧಗಳಲ್ಲಿ ಅರ್ಥವಿರಬೇಕಾದರೆ

ನಿಸ್ಸಂಕೋಚವಾಗಿ ಚರ್ಚಿಸಬೇಕು

ನಿಸ್ಸಂಕೋಚವಾಗಿ ಹೇಳುವುದನ್ನು

ವಿಪರೀತವಾಗಿ ತೆಗೆದುಕೊಂಡರೆ

ಅದು ಅಪಾರ್ಥವೆನಿಸಬಹುದು


ಆಗುತ್ತಿರುವ ತೊಂದರೆಯನ್ನು ಎದುರಿನವರು

ಹೇಳಿದಾಗ ಅರ್ಥ ಮಾಡಿಕೊಂಡು ಸುಗಮಗೊಳಿಸದೆ,

ತಪ್ಪೆಂದುಕೊಂಡು ನಮ್ಮ ಅಹಂ ಗೆ ಸವಾಲಾಗಿಸಿದರೆ, 

ಹೇಳುವುದನ್ನು ಅಪಾರ್ಥ ಮಾಡಿಕೊಂಡರೆ,

ಮುಕ್ತ ಮನಸು ಮುಚ್ಚಿ ಅಂತರ ಹೆಚ್ಚಬಹುದು

 

ತೊಂದರೆ, ತಪ್ಪು ನಮ್ಮಿಂದಲೂ ಆಗುತ್ತದೆ

ತಿಳಿದರೆ ತಿದ್ದಿಕೊಳ್ಳುತ್ತೇವೆ ಎಂಬ

ಭಾವವಿದ್ದರೆ ವ್ಯಕ್ತಿತ್ವ ಬೆಳೆಯುತ್ತದೆ

ಇಲ್ಲದಿದ್ದರೆ ಒಳಗಿರುವ ಅಹಂ

ಎದ್ದು ಅಪಾರ್ಥವನ್ನು ಬೆಳೆಸಬಹುದು


ಅಪಾರ್ಥ ಹೆಚ್ಚಿದರೆ ಮನಸು ಮೊಂಡಾಗಿ

ವಿವೇಚನೆ ಕಳಚುತ್ತದೆ, ಇನ್ನೊಬ್ಬರು ಹೀಗಂದರು 

ಅಂದುಕೊಳ್ಳುವ ಮೊದಲು ನಮ್ಮಲ್ಲೇನು

ಬೆಳೆಸಿಕೊಳ್ಳಬೇಕೆಂದು ಯೋಚಿಸಿದರೆ

ಎಲ್ಲರ ನೆಮ್ಮದಿಯೂ ಉಳಿಯಬಹುದು

Saturday, April 20, 2024

ಕಾಲ

 

ದೂರವಾಣಿ ದೂರವಾಗಿ

ಚರವಾಣಿ ಚುರುಕಾಗಿ

ಕರದಲ್ಲಿ ಕರೆ ಹಿಡಿದು ಬೆರಳ 

ಮೂಲಕ ಜಗವ ತೋರುವ ಕಾಲ


ಹಿರಿಯರು ಕಿರಿಯರತ್ತ

ಕಿರಿಯರು ಹಿರಿಯರತ್ತ

ಬೆಟ್ಟು ಮಾಡಿ ಟೀಕಿಸಿ

ಅಪಹಾಸ್ಯ ಮಾಡುವ ಕಾಲ


ಬಿಸಿಲು ಭಯಾನಕ ಭೂತವಾಗಿ

ಮಳೆಯು ಮನಬಂದಂತೆ ಸುರಿದು

ಚಳಿಯು ಛಲ ಬಿಡದೆ ಮರಗಟ್ಟಿಸುವ

ಋತುಗಳ ಅಯೋಮಯ ಕಾಲ


ಅವರಿವರ ಗೊಡವೆ ಬೇಡ

ಕೆಟ್ಟವರೆನಿಸಿಕೊಳ್ಳುವುದು ಬೇಡ

ಎಲ್ಲಿಯೂ ನಗೆಪಾಟಲಾಗುವುದು ಬೇಡ

ನಮಗ್ಯಾಕೆ ಉಸಾಬರಿ ಎನ್ನುವ ಕಾಲ


ಅವಿಭಕ್ತ ಕುಟುಂಬಗಳೊಡೆದು 

ಸಂಬಂಧಗಳು ಸುಟ್ಟು ಕರಕಲಾಗಿ

ಸರಿದಾರಿ ತಿಳಿಯದೇ ಕಳೆದು ಹೋಗಿ

ಪಶ್ಚಾತ್ತಾಪ ಪಡುವ ಕಾಲ


ಕಾದರೆ ಕಾಲವೇ ಮದ್ದು ಇಲ್ಲವಾದರೆ

ಕೈಲಾಸ ಒದ್ದು ಕಸವಾಗಿ ಕಂಗೆಟ್ಟು

ಪರಮಾತ್ಮನ ಪಾದವೇ ಗತಿಯೆಂದು

ಶರಣು ಬಿದ್ದು ತಪ್ಪೊಪ್ಪ ಬೇಕಾದ ಕಾಲ

Tuesday, April 09, 2024

ಯುಗಾದಿ

 

ಯುಗದ ಆದಿಯಿದು ಯುಗಾದಿ

ಹೊಸತನದ ಸಂಭ್ರಮದ ಹಾದಿ

ಉತ್ತಮವಾದ ಭವಿಷ್ಯಕ್ಕೆ ನಾಂದಿ

ಕುಟುಂಬ ಸಮೇತ ಸೇರುವರು ಮಂದಿ


ಯುಗಾದಿಯ ಬಟ್ಟೆಯಲ್ಲಿ

ಹೊಸ ವರುಷದ ವಿನ್ಯಾಸ

ಹಬ್ಬ ಹರಿಸುವ ಹರ್ಷೋಲ್ಲಾಸ

ತುಂಬಿ ತುಳುಕುವ ನವೋಲ್ಲಾಸ 


ವಸಂತಕಾಲದ ಆಗಮನವಿದು

ಜ್ಞಾನ ಬುದ್ಧಿಯ ದೀವಿಗೆಯಿದು

ಹೊಸವರ್ಷದ ಆರಂಭವಿದು

ಸರ್ವರಿಗೂ ಶುಭವಾಗುವುದು


ಇಂದು ನಮ್ಮದು ನಾಳೆ ನಿಲ್ಲದು

ಇರುವವರೆಗೆ ನಗುತಿರುವುದೇ ಒಳ್ಳೇದು 

ಸ್ವಲ್ಪ ಬೇವು ಸ್ವಲ್ಪ ಬೆಲ್ಲ ಸೇರಿಸಿ ತಿನ್ನುವುದು

ಜೀವನವನ್ನೂ ಹೀಗೇ ಎದುರಿಸುವುದು


ಯುಗಾದಿ ಹಬ್ಬದ ಶುಭಾಶಯ

- ಪೂ.

09-04-2024





Monday, April 08, 2024

ಒಳ್ಳೆಯದೇ


ಅರಳಿದರೆ ಒಳ್ಳೆಯದೇ

ಆದರೆ ಅತಿಯಾಗ ಬಾರದು

ಹೊರಳಿದರೆ ಒಳ್ಳೆಯದೇ

ಆದರೆ ಕೆಳಗೆ ಬೀಳಬಾರದು


ಕೆರಳಿದರೆ ಒಳ್ಳೆಯದೇ

ಆದರೆ ಕೆಡಬಾರದು

ನರಳಿದರೆ ಒಳ್ಳೆಯದೇ

ಆದರೆ ನರಕವಾಗಬಾರದು


ಮರಳಿದರೆ ಒಳ್ಳೆಯದೇ

ಆದರೆ ಮರೆಯಬಾರದು

ಉರುಳಿದರೆ ಒಳ್ಳೆಯದೇ

ಆದರೆ ಉರಿಯಬಾರದು


ಅರಿತರೆ ಒಳ್ಳೆಯದೇ

ಆದರೆ ಅಳಿಯಬಾರದು

ನುರಿತರೆ ಒಳ್ಳೆಯದೇ

ಆದರೆ ತುಳಿಯಬಾರದು


ಸ್ನೇಹವೆಂಬುದು ಒಳ್ಳೆಯದೇ

ಆದರೆ ಸೋಲಬಾರದು

ರಾಗವಿದ್ದರೆ ಒಳ್ಳೆಯದೇ

ಆದರೆ ರಗಳೆಯಾಗಬಾರದು


ಪ್ರೀತಿಯಿದ್ದರೆ ಒಳ್ಳೆಯದೇ

ಆದರೆ ಪೆಟ್ಟು ತಿನ್ನಬಾರದು

ಗರ್ವವಿದ್ದರೆ ಒಳ್ಳೆಯದೇ

ಆದರೆ ತಿಳಿಯಬಾರದು

Wednesday, March 27, 2024

ಯಾರು

 

ಪೊಡವಿಯ ಅಡವಿಯ ಅಡ ಇಟ್ಟವರು ಯಾರು

ಅಡವಿಟ್ಟ ಅಡವಿಯ ಕಡ ಕಟ್ಟುವವರು ಯಾರು 

ಬಗಲಲ್ಲೇ ಬಗೆಬಗೆ ಬಗೆದು ಬಗೆದವರು ಯಾರು

ಬಗೆದುದನ್ನು ಭರಿಸಲು ಹೆಗಲು ಕೊಟ್ಟವರು ಯಾರು


ಅರಿವಿಗೆ ಅರಿವೆ ಹೊದೆಸಿ ಮುಚ್ಚಿಟ್ಟವರು ಯಾರು

ಅರಿವಿನ ಅರಿಯ ಅರಿಕೆಯನ್ನು ಅರಿತವರು ಯಾರು

ನುಡಿದಂತೆ ನಡೆಯನ್ನು ನಡೆದವರು ಯಾರು

ನುಡಿಯದೇ ನುಡಿಯನ್ನು ನುಡಿಸಿದವರು ಯಾರು


ಬಿಸಿಲಲ್ಲಿ ಬಿಸಿ ಬಸಿದು ಬೀಸಿದವರು ಯಾರು

ಹಸಿದಲ್ಲಿ ಹಸಿಯ ಹಸಿ ಹಂಚಿದವರು ಯಾರು

ಕಾಲನನ್ನು ಮೆಟ್ಟಿ ಕಾಲ ಹೆಚ್ಚಿಸಿಕೊಂಡವರು ಯಾರು

ಸಾಲ ಸಾಲದೆಂದು ಸಾಲಲ್ಲಿ ನಿಂದವರು ಯಾರು


ಬರದ ಬರವನ್ನು ಬರೆದು ತಿಳಿಸಿದವರು ಯಾರು

ಬರೆದ ಬರಹವನ್ನು ಅರ್ಥೈಸಿ ತಿಳಿದವರು ಯಾರು

ಓದಿನ ಒದವಿಗೆ ಒದವು ಒದಗಿಸಿದವರು ಯಾರು

ಆಡಿದಂತೆ ಆಡನ್ನು ಅಡ್ಡಾಡಿಸಿ ಕೈ ಆಡಿಸಿದವರು ಯಾರು 


ಮಡಕೆಯೊಳಗೆ ಮಡಕೆಯನ್ನು ಬೇಯಿಸಿದವರು ಯಾರು

ಪಟ್ಟುಬಿಡದೆ ಪಟ್ಟು ಹಾಕಲು ಪ್ರಯತ್ನ ಪಟ್ಟವರು ಯಾರು

ಪಡಿಯ ಪಡಿಪಡೆದು ಪಡಿಹಾಕಿ ಪಡಿಯೇರಿ ಪಡಿ ಮೆಟ್ಟಿದವರಾರು

ಅಡಿ ಮೇಲೆ ಅಡಿ ಇಟ್ಟು ಅಡಿಯಲ್ಲಿ ಅಡಗಿದವರು ಯಾರು


ಹಲವೆಡೆ ಹಲವಿಟ್ಟು ಹಲವು ಸಲ ಉತ್ತವರು ಯಾರು

ಬೀಳು ಬೀಳದಂತೆ ಬೀಳುಗಳ ಬೆಳೆಸಿದವರು ಯಾರು

ಹರಿವ ಹರಿವನ್ನು ಹರಿದಂತೆ ಹರಿಸಿದವರು ಯಾರು

ಹರಿಯ ಹರವನ್ನು ಹರವಿಟ್ಟು ಹರಸಿದವರು ಯಾರು

Saturday, March 23, 2024

ಅಮ್ಮ ಜೀವ - ಅಪ್ಪ ಪ್ರಾಣ

 

ಅಮ್ಮ ಜೀವವನ್ನು 

ಹೊರುತ್ತಾಳೆ ಹೆರುತ್ತಾಳೆ

ಅಪ್ಪ ಅದನ್ನು ಹೊರುತ್ತಾನೆ 

ಪ್ರಾಣ ಒದಗಿಸುತ್ತಾನೆ


ಅಮ್ಮನೆಂಬ ಅಕ್ಕರೆ

ಅಪ್ಪನೆಂಬ ಅದ್ಭುತ

ಅಮ್ಮನ ಮಮತೆಯ ಮತ್ತು

ಅಪ್ಪನ ಮಾತುಗಳು ಮುತ್ತು


ಅಮ್ಮ ನುಡಿಸುತ್ತಾಳೆ

ಅಪ್ಪ ನಡೆಸುತ್ತಾನೆ

ಅಮ್ಮ ಮುದ್ದು ಮಾಡುತ್ತಾಳೆ

ಅಪ್ಪ ತಿದ್ದಿ ತೀಡುತ್ತಾನೆ


ಅಮ್ಮ ಓದಿಸಿ-ಬರೆಸಿ ಮಾಡುತ್ತಾಳೆ

ಅಪ್ಪ ಭವಿಷ್ಯವನ್ನು ಗಟ್ಟಿ ಮಾಡುತ್ತಾನೆ

ಅಮ್ಮ ಕೆಲವೊಮ್ಮೆ ಅಪ್ಪನಾಗುತ್ತಾಳೆ

ಅಪ್ಪ ಕೆಲವೊಮ್ಮೆ ಅಮ್ಮನಾಗುತ್ತಾನೆ

ವಿಪರ್ಯಾಸ

 

ಕೆಟ್ಟದ್ದನ್ನು ಮಾಡಿದವರು ಮರೆತು ಬಿಡುತ್ತಾರೆ

ಅನುಭವಿಸಿದವರಿಗೆ ಅದು ನೆನಪಿರುತ್ತದೆ

ಒಳ್ಳೆಯದನ್ನು ಮಾಡಿದವರಿಗೆ ನೆನಪಿರುತ್ತದೆ

ಅನುಭವಿಸಿದವರು ಅದನ್ನು ಮರೆತು ಬಿಡುತ್ತಾರೆ


ನಾನು ಏನೇ ಮಾಡಿದರೂ ಅದು ಸರಿ

ಬೇರೆಯವರು ಮಾಡಿದರೆ ಎಲ್ಲವೂ ತಪ್ಪು

ನಾನು ಮಾಡಿರುವುದಕ್ಕೆ ಕಾರಣವಿರುತ್ತದೆ

ಬೇರೆಯವರು ಅನಾವಶ್ಯಕವಾಗಿ ಮಾಡುತ್ತಾರೆ


ನಾನು ಮಾಡುವುದೆಲ್ಲಾ ಧನಾತ್ಮಕ

ಇನ್ನೊಬ್ಬರು ಮಾಡುವುದೆಲ್ಲಾ ಋಣಾತ್ಮಕ

ಆಗಬೇಕಾಗಿರುವುದು ನನ್ನ ಜವಾಬ್ದಾರಿಯಲ್ಲ

ಮಾಡದಿರುವುದು ಅವರ ಬೇಜವಾಬ್ದಾರಿ


ಬಿಸಿಲಿದ್ದರೆ ಮಳೆ ಬೇಕೆನಿಸುತ್ತದೆ

ಮಳೆ ಬಂದರೆ ಕಿರಿಕಿರಿಯಾಗುತ್ತದೆ

ಸೆಖೆಯಿದ್ದರೆ ಚಳಿಗಾಗಿ ಆಸೆ ಪಡುತ್ತೇವೆ

ಚಳಿಯಿದ್ದರೆ ಬಿಸಿಲಿಗಾಗಿ ಪರಿತಪಿಸುತ್ತೇವೆ


ಎಲ್ಲವೂ ಸರಿಯಾಗಿದ್ದರೆ ಗೊಣಗುತ್ತೇವೆ

ಸರಿಯಿಲ್ಲದಿರುವಾಗ ಹೆಣಗುತ್ತೇವೆ

ನೆಮ್ಮದಿ ಬಿಟ್ಟು ಚಿಂತೆಯಿಂದ ಕೊರಗುತ್ತೇವೆ

ಕೆಟ್ಟಾಗ ಮತ್ತೊಬ್ಬರನ್ನು ತೆಗಳಿ ಕೃತಾರ್ಥರಾಗುತ್ತೇವೆ 

ಆಸೆ - ವಾಸ್ತವ


ಮನದಾಳದಲ್ಲಿ ಹುದುಗಿದ ಆಸೆಗಳಲ್ಲಿ ಹುಡುಕಿದೆ

ಆಸ್ಥೆಯಿಂದ ಆಯ್ದು ಬೆಲೆಬಾಳುವುದನ್ನು ಹೊರತೆಗೆದೆ

ಅಕ್ಕಿ ಆರಿಸಿದಂತೆ ಹೆಕ್ಕಿ ತೆಗೆದ ಅಮೂಲ್ಯ ಆಸೆಯನ್ನು 

ಕೊಕ್ಕಿನಲ್ಲಿ ಹಿಡಿದಂತೆ ಹಿಡಿದು ಆಕಾಶಕ್ಕೆ ಏರಿದೆ


ಆಕಾಶದೆತ್ತರದಿಂದ ನೋಟವ ಕೆಳ ಹರಿಸಿದಾಗ

ಭೂಮಿ ತುಂಬಾ ಹಸಿರು ಕಂಡೆ, ಸಂತೋಷಗೊಂಡೆ

ಪ್ರಾಣಿಗಳ ಮತ್ತು ಮನುಜನ ಪ್ರಪಂಚ ಬೇರೆಬೇರೆ

ಎಂಬುದನ್ನು ಬಹು ಸ್ಪಷ್ಟವಾಗಿ ನಾ ಕಂಡುಕೊಂಡೆ


ಪ್ರಕೃತಿಯ ಫಲಕದಲ್ಲಿ ಹರಿವ ಪವಿತ್ರ ಪನ್ನೀರು 

ಖಗಮೃಗಗಳ ಬದುಕಿನಲ್ಲಿ ನೆಮ್ಮದಿಯ ಉಸಿರು 

ಮನುಜನ ಮನಸು ಹೃದಯದಲ್ಲಿ ಸದಾ ಒಸರುವ,

ಕೂಡಿ ಬಾಳುವಂಥ ಸದ್ಬುದ್ಧಿ ಚಿಲುಮೆಯ ತೇರು


ಸಾಮರಸ್ಯವೇ ಸರ್ವಸ್ವವೆಂಬ ತಿಳಿವಿನ ಮಾತು

ಜೊತೆಗೂಡಿ ಬಾಳುವುದರ ಅರ್ಥವೇ ಒಳಿತು

ಇದನ್ನರಿತುಕೊಂಡಿದ್ದರದೇ ಸಕಲ ಸಂಪತ್ತು

ಕೈಬಿಟ್ಟಾಗ ಆಕಾಶದಲ್ಲಿರುವ ಆಸೆಗೆ ಬೆಂಕಿಯ ಕುತ್ತು


ಬೆಂಕಿ ಹಿಡಿದ ಆಸೆ ಹೊತ್ತು ಕೆಳಗಿಳಿಯುವ ಹೊತ್ತು

ಇಳಿಯುತ್ತಿದ್ದಂತೆಯೇ ಕಾಣುತ್ತಿತ್ತು ವಾಸ್ತವದ ಕೈತುತ್ತು

ಹಸಿರ ಕೇಶದ ನಡುನಡುವೆ ಬೋಳು ಭೂ-ತಲೆ

ಕಾಡಲ್ಲೆಲ್ಲಾ ಅಭಿವೃದ್ಧಿ ಭೂತದ ಅಬ್ಬರ ದಾಂಧಲೆ


ಪ್ರಾಣಿಪಕ್ಷಿಗಳ ಅಸಹಾಯಕ ಆತಂಕದೊಂದಿಗೆ,

ತನ್ನದೇ ಕಾಲಿಗೆ ಕೊಡಲಿಯಿಟ್ಟು, ಭವಿಷ್ಯವನ್ನು

ಪಣಕ್ಕಿಟ್ಟು, ಅರಚಿ-ಕಿರುಚಿ ಪರದಾಡುವ ಮನುಷ್ಯನ  

ಬುದ್ಧಿಗೇಡಿತನದ ಪರಮಾವಧಿಯ ಪೆಟ್ಟು


ಗಿಡವಿಲ್ಲ ಮರವಿಲ್ಲ ಕಾಡೂ ಇಲ್ಲ ಹಸಿರಿಲ್ಲ 

ಕುಡಿಯಲು ನೀರಿಲ್ಲ ಎಸರಿಡಲೂ ಗತಿಯಿಲ್ಲ

ಮುಂದಿನ ಪೀಳಿಗೆಗೆ ನೀಡಲು ಒಳ್ಳೆಯ ಹೆಸರಿಲ್ಲ

ಪಾಪಪ್ರಜ್ಞೆ ಬಿಟ್ಟು ಬೇರೇನೂ ಉಳಿಯುತ್ತಿಲ್ಲ

Saturday, March 16, 2024

ದಾರಿಯುದ್ದಕ್ಕೂ

 

ಬೆಟ್ಟ ಬೆಟ್ಟಗಳ ಮೇಲೆ 

ಬಟ್ಟೆ ಹರಡಿದಂತೆ ನೀಲಾಕಾಶ

ಭೂಮಿ ತಾಯಿ ಹಸಿರುಟ್ಟಂತೆ 

ನಡುವೆ ಹೊಲಗಳ ವಿಶೇಷ 


ಇರುವೆಗಳ ಸಾಲಿನಂತೆ 

ವಾಹನಗಳ ಓಡಾಟ

ಬಿಸಿಯುಗುಳುವ ಚೆಂಡಿನಂತೆ

ಆ ಸೂರ್ಯನ ಆಟೋಟ


ತೆಂಗಿನ ಮರಗಳು, ಬಾಳೆಯ ಗಿಡಗಳು

ಕಾಫಿಯ ತೋಟದಿ ಅರಳಿದ ಹೂಗಳು

ಇಕ್ಕೆಲದಲ್ಲೂ ಪುಟ್ಟಪುಟ್ಟ ಮನೆಗಳು

ಅಲ್ಲಲ್ಲಿ ಕೆಲವೊಂದು ಅಂಗಡಿಗಳು


ಸೂರ್ಯಾಸ್ತದಲ್ಲಿ ತಂಪಾದ ಗಾಳಿ

ರಾತ್ರಿಯಲ್ಲಿ ಸುಳಿದ ತಂಗಾಳಿ

ನಿಶಾರಾಣಿ ಸುಂದರವಾಗಿ ಅರಳಿ

ಸುವಾಸನೆ ಸುತ್ತಿತು ಸುರುಳಿ ಸುರುಳಿ

Friday, March 15, 2024

ಎಚ್ಚರಿಕೆ

 

ಕೆಟ್ಟದೆಂಬುದರ ಕಟ್ಟಿಡದಿದ್ದರೆ

ಅದು ಒಳ್ಳೆಯದರ ಕತ್ತು ಹಿಸುಕಬಹುದು

ಕೆಟ್ಟದೆಂಬುದು ಒಳ್ಳೆಯದನ್ನು ಮೆಟ್ಟಿ ನಿಂದರೆ

ಒಳ್ಳೆಯದರ ಉಸಿರು ನಿಲ್ಲಬಹುದು


ಅಸತ್ಯವನ್ನು ಅರಳಲು ಬಿಟ್ಟರೆ

ಸತ್ಯವು ಅಲ್ಲಿಯೇ ಮುದುಡಬಹುದು

ಅಸತ್ಯವು ಸತ್ಯವನ್ನು ಕುಗ್ಗಿಸಿದರದು

ಸವಾಲಾಗಿ ಪರಿಣಮಿಸ ಬಹುದು


ಅಸುರರಿಗೆ ಅವಕಾಶ ಕೊಟ್ಟರೆ 

ಅಳತೆ ಮೀರಿ ಅಂಧಕಾರ ಮುಸುಕಬಹುದು

ಅಸುರರ ಅಟ್ಟಹಾಸ ತಾರಕಕ್ಕೇರಿದರೆ

ದೇವತೆಗಳ ಸ್ವರ ಕೇಳದಾಗಬಹುದು


ನಮ್ಮ ನಾವು ತಿದ್ದಿಕೊಳ್ಳದಿದ್ದರೆ

ಬೇರೆಯವರು ದೂರವಾಗ ಬಹುದು

ಬೇರೆಯವರ ಸ್ನೇಹವಿಲ್ಲದಿದ್ದರೆ

ಬದುಕು ಬರಡು ಎನಿಸ ಬಹುದು


ಅರ್ಥವಾಗಿ ಎಚ್ಚೆತ್ತುಕೊಳ್ಳದಿದ್ದರೆ

ಸಮಯ ಜಾರಿ ಹೋಗಬಹುದು

ಇರುವ ಸಮಯವ ಬಳಸದಿದ್ದರೆ 

ಬದುಕಿದ್ದೂ ವ್ಯರ್ಥವೆನಿಸಬಹುದು 

Tuesday, March 12, 2024

ಹನಿ ಹನಿ ಕೂಡಿದರೆ


ಒಂದು ಬೀಜ ಒಂದು ಮರ

ಒಂದು ಮರದಿಂದ ಹಲವು ಬೀಜ

ಹಲವು ಬೀಜಗಳು ಬೆಳೆದು ಹಲವು ಮರ

ಹಲವು ಮರಗಳಿಂದ ಕಾಡು


ಒಂದು ಪಾದ ಒಂದು ಹೆಜ್ಜೆ

ಒಂದೊಂದೇ ಹೆಜ್ಜೆ ಸೇರಿ ಹಲವು ಹೆಜ್ಜೆ

ಹಲವು ಹೆಜ್ಜೆಗಳು ಸೇರಿ ಕೆಲವು ಮೈಲು

ಕೆಲವು ಮೈಲುಗಳು ಸೇರಿ ಪಯಣ


ಒಂದು ನಲ್ಲಿ ಒಂದು ಹನಿ ನೀರು

ಒಂದೊಂದೇ ಹನಿ ಸೇರಿ ಒಂದು ಬೊಗಸೆ 

ಬೊಗಸೆ ಬೊಗಸೆ ಸೇರಿ ಹಲವು ತಂಬಿಗೆ

ಹಲವು ತಂಬಿಗೆಗಳಿಂದ ಬಾಲ್ಡಿ ನೀರು


ಒಂದು ನಾಣ್ಯ ಒಂದು ಪೈಸೆ

ಪೈಸೆ ಪೈಸೆಗಳು ಸೇರಿ ಒಂದು ರೂಪಾಯಿ

ಕೆಲವು ರೂಪಾಯಿಗಳು ಸೇರಿ ನೂರು ರೂಪಾಯಿ

ನೂರಾರು ರೂಪಾಯಿಗಳು ಸೇರಿ ಸಾವಿರಾರು

Monday, March 11, 2024

ಅನುಭವ ಸತ್ಯ

 

ಗೋಡೆ ಬದಿಯ ಮಣ್ಣಿಗೆ ನೀರೆರಚಿ ನೋಡಿ

ಮಣ್ಣು ಸಿಡಿದು ಗೋಡೆ ಕೆಸರಾಗುತ್ತದೆ

ಮನಸಿಗೆ ಒಂಥರಾ ಖುಷಿ ಎನಿಸುತ್ತದೆ


ಅದೇ ಗೋಡೆಗೆ ನೀರೇರಚಿ ನೋಡಿ

ಸಂಪೂರ್ಣ ತೊಳೆದು ಶುಭ್ರವಾಗುತ್ತದೆ

ಮೊದಲಿಗಿಂತ ಮಿಗಿಲಾದ ಖುಷಿ ಸಿಗುತ್ತದೆ


ತಿಳಿಗೊಳಕ್ಕೊಂದು ಕಲ್ಲೆಸೆದು ನೋಡಿ

ಅಲೆಅಲೆಯಾಗಿ ಉಂಗುರಗಳು ಏಳುತ್ತವೆ 

ಮನಸಿಗೆ ಮುದವೆನಿಸುತ್ತದೆ


ಅಲೆಯ ಉಂಗುರಗಳು ಅಳಿದು

ಕೊಳವು ತಿಳಿಯಾಗುವುದನ್ನು ನೋಡಿ

ಮನಸ್ಸು ತಲ್ಲಣ ರಹಿತ ಸುಖ ಪಡೆಯುತ್ತದೆ


ತೊಳೆದಾಗ, ತಿಳಿಗೊಂಡಾಗ ದೊರಕುವುದು

ಕಲಕಿ ಕದಡಿದಾಗ, ಕೆಸರೆರಚಿದಾಗ ಸಿಗುವುದಿಲ್ಲ 

ಎಂಬದು ಅನುಭವ ಸತ್ಯ, ಅದನು ಅರಿತು ನೋಡಿ

Friday, March 08, 2024

ನೆಮ್ಮದಿ


ಇಷ್ಟು ದಿನ ಎಲ್ಲಿದ್ದೆ ನೀನು

ಮೊದಲೇ ಯಾಕೆ ಕಾಣಲಿಲ್ಲ

ಎಲ್ಲಿಯೂ ಯಾಕೆ ಸಿಗಲಿಲ್ಲ


ಇಂದು ನೀನು ಎಲ್ಲಿಂದ ಬಂದೆ

ನನ್ನೊಡನೆಯೇ ಇರುವೆನೆಂದೆ

ಚಿಂತೆಗೆ ತರ್ಪಣ ಬಿಟ್ಟೆನೆಂದೆ


ಗುರಿಯ ದಾರಿ ತೋರುವೆ ಎಂದೆ 

ಅದರ ಕಡೆಗೆ ನಡೆಸುವೆ ಎಂದೆ

ಸದಾ ನನ್ನ ಹಿಂದೆ ಮುಂದೆ


ಸುತ್ತುತಿರುವೆ ಇನ್ನು ಮುಂದೆ

ನಾವಿನ್ನೆಂದಿಗೂ ಒಂದೇ ಎಂದೆ

ನೀನೇ ಆದಿ ಅಂತ್ಯವೆಂದೆ

ಅಮ್ಮ - ಮಗು

 

ಬಿಗಿಯಾದ ದಿರಿಸ ಧರಿಸಿ

ಕಷ್ಟ ಬರಿಸಿ ಅದನು ಭರಿಸಿ

ಬೆವರು ಸುರಿಸಿ ಮತ್ತೆ ಒರೆಸಿ

ದೂರ ಸರಿಸಿ ದುಃಖ ಮರೆಸಿ


ಅಪ್ಪನರಸಿ - ಅಮ್ಮ ನ ಅರಸಿ 

ಭಾರ ಹೊರಿಸಿ ಕಣ್ಣು ತೂಗಿಸಿ 

ಹಾಲು ತರಿಸಿ ಅದನು ಕುದಿಸಿ

ತಣಿಸಿ ಕುಡಿಸಿ ಸಮಾಧಾನಗೊಳಿಸಿ 


ದಿರಿಸ ತೆಗೆಸಿ ಒಗೆಸಿ ಒಣಗಿಸಿ

ಕಪಾಟಿಗೆ ಸೇರಿಸಿ ಬೀಗ ಜಡಿಸಿ

ಊಟ ಬಡಿಸಿ ತಿನ್ನಿಸಿ, ಬಾಯಿ ತೊಳೆಸಿ 

ಮಲಗಿಸಿ ಹೊದಿಕೆ ಹೊದೆಸಿ


ನೆತ್ತಿಗೊಂದು ಮುತ್ತನಿರಿಸಿ

ಜೋಗುಳ ಹಾಡಿ ನಿದ್ದೆಗೆಳೆಸಿ

ಸ್ವಪ್ನದಲ್ಲಿ ತೇಲಿಸಿ, ಮನಸಾರೆ ಹರಸಿ

ಬೆಳಗ್ಗೆ ಎಬ್ಬಿಸಿ ದಿರಿಸ ಧರಿಸಿ...

Thursday, March 07, 2024

ಕಾಲನ ಕೈವಾಡ

 

ಬೆರಳಲ್ಲಿ ಬೆಳೆ ಕಡಿತಗೊಂಡಿದೆ

ಮನದಲ್ಲಿ ಮರುಳು ಹೆಚ್ಚಾಗಿದೆ

ತನುವಲ್ಲಿ ಜಡ ತುಂಬಿಕೊಂಡಿದೆ


ಕಣ್ಣುಗಳಿಗೆ ಕಿಸುರು ತಡವಿದೆ 

ಕಾಲುಗಳ ಕೆರೆತ ಹೆಚ್ಚಾಗಿದೆ

ಕೈಗಳ ಕಸುವು ಕಡಿಮೆಯಾಗಿದೆ


ತಲೆಯಲ್ಲಿ ಚಿಂತೆ ವಿಪುಲವಾಗಿದೆ 

ಬಾಯಲ್ಲಿ ಬೈಗುಳ ಹೇರಳವಾಗಿದೆ

ಒಳ್ಳೆಯ ಮಾತು ಮರೆತೇ ಹೋಗಿದೆ


ಕೂದಲೂ ಹಲ್ಲೂ ಉದುರಿ ಹೋಗಿದೆ

ಕಾಲನ ಕೈವಾಡ ಎದ್ದು ಕಾಣುತ್ತಿದೆ

ಉಸಿರು ನಿತ್ಯ ದಿನಗಳ ಎಣಿಸುತ್ತಿದೆ 

ಇವಳು

 

ಉತ್ತಿ ಬಿತ್ತಿ ಬೆಳೆಯನೆತ್ತಿ

ಮಂದಿಗೆಲ್ಲ ಕಟ್ಟಿ ಬುತ್ತಿ

ಹೆಮ್ಮೆಯಿಂದ ತಲೆಯನೆತ್ತಿ

ನಡೆಯುವಳು ಗಟ್ಟಿಗಿತ್ತಿ


ಮುಂಜಾನೆದ್ದು ಮನೆಯ ಬಿಟ್ಟು

ವಾಹನದಲ್ಲಿ ಜೀವವಿಟ್ಟು 

ದುಡಿಮೆಗೆ ತಕ್ಕ ಸಮಯ ಕೊಟ್ಟು

ಗಳಿಸುವಳು ಹೊಟ್ಟೆಗೆ ಹಿಟ್ಟು


ದೇಶವನ್ನು ಆಳಿದವಳು

ವಿಮಾನವನ್ನು ಏರಿದವಳು

ಬಾಹ್ಯಾಕಾಶಕೆ ಹಾರಿದವಳು

ವಿಜ್ಞಾನದಲ್ಲಿ ಮುನ್ನಡೆದವಳು


ನಾಡಿ ಹಿಡಿದ ವೈದ್ಯೆಯಿವಳು

ವಿದ್ಯೆಯನ್ನು ಹಂಚಿದವಳು

ತಂತ್ರಜ್ಞಾನ ಪಡೆದವಳು

ಯಂತ್ರ ಚಾಲನೆಗೆ ನಿಂದವಳು


ಸಂಗೀತ ವಿದುಷಿಯಿವಳು

ನೃತ್ಯವನ್ನು ಮಾಡಿದವಳು

ಕ್ರೀಡೆಯಲ್ಲಿ ಭಾಗವಹಿಸಿ

ಚಿನ್ನವನ್ನು ಗೆದ್ದವಳು


ಮಂತ್ರವನ್ನು ಪಠಿಸುವಳು

ಪೂಜೆಯನ್ನು ಮಾಡುವಳು

ವಿವಿಧ ಖಾದ್ಯ ಕಜ್ಜಾಯಗಳ

ಅಡುಗೆ ಮಾಡಿ ಬಡಿಸುವಳು


ವ್ಯವಹಾರದಲ್ಲಿ ಎಂದಿಗೂ ಮುಂದು

ಸಂಸಾರದಲ್ಲಿ ಬೆನ್ನೆಲುಬಾಗಿ ನಿಂದು

ಮಮತೆಯ ಮಾತೆ ಅಂದೂ ಇಂದೂ

ಇವಳು ಎಲ್ಲರಿಗೂ ಪ್ರಿಯ ಬಂಧು

Wednesday, February 21, 2024

ನಾಲ್ಕು ದಿನಗಳ ಪಯಣ

 

ನಾಲ್ಕು ದಿನಗಳ ಈ ಪಯಣದಲ್ಲಿ

ನಾಲಗೆ ಹರಿಬಿಟ್ಟು ಜಗಳವೇಕೆ

ಇಹ ಮರೆತು ಹೊಡೆದಾಡುವುದೇಕೆ


ದಾರಿಯಲ್ಲಿ ಒಳ್ಳೆಯ ಮಾತಾಡುವುದಿಲ್ಲವೇಕೆ

ದಾಸನಾಗು ವಿಶೇಷನಾಗು ಎಂಬುದು

ಯಾರಿಗೂ ಹಿಡಿಸುವುದಿಲ್ಲವೇಕೆ 


ಎಲ್ಲಾ ಬೆರಳುಗಳೂ ಒಂದೇ ಅಳತೆಯವಲ್ಲ 

ಎಂಬುದನ್ನು ಅರಿಯುವುದಿಲ್ಲವೇಕೆ

ಹೊಂದಿಕೊಂಡು ಬದುಕುವುದಿಲ್ಲವೇಕೆ

 

ಅಂತ್ಯದಲ್ಲಿ ಆರಡಿ ಮೂರಡಿಯೆಂದು ತಿಳಿದಿದ್ದರೂ

ಮದವೇರಿ ಮಿತಿಮೀರಿ ಕಿತ್ತಾಡುವುದೇಕೆ 

ನಮ್ಮವರಿಂದಲೇ ನಾವು ದೂರವಾಗುವುದೇಕೆ

Sunday, February 18, 2024

ಯಾವುದು ಯಶಸ್ಸು ?

 

ಸಾವಿರಸಾವಿರ, ಕೋಟಿಕೋಟಿ ಗಳಿಸಿ

ಸ್ವಂತದವರಿಗೂ ನೀಡದೇ ಉಳಿಸಿ

ಸಹಾಯ ಕೇಳಿ ಬಂದರೂ ಕಡೆಗಣಿಸಿ, 

ಕೊನೆಯಲ್ಲಿ ನಿತ್ಯ ರೋಗಗಳಿಗೆ ಹಣವುಣಿಸಿ,

ನೆಮ್ಮದಿಯಿಲ್ಲದೇ ತೊಳಲುವುದೇ ?


ಒಡಹುಟ್ಟು, ರಕ್ತ ಸಂಬಂಧಿಗಳ ಕಷ್ಟಗಳಿಗೆ 

ಕಿವುಡು-ಕುರುಡಾಗಿ, ತಮ್ಮ ಕೈಕಾಲು-ಕತ್ತಿಗೆ 

ವಿವಿಧ ಆಭರಣಗಳ ಹೇರಿ, ಮಹಡಿ ಮೇಲೆ ಮಹಡಿ 

ಕಟ್ಟಿ, ಸಂಕಷ್ಟದಲ್ಲಿರುವರನ್ನು ಕರೆದು ಆಡಂಬರ

ಪ್ರದರ್ಶನ ಮಾಡುವ, ಹೀನ ಮನಸ್ಸಿನ ಹುಸಿತನವೇ ?


ಸೂರಿಲ್ಲದೇ, ಆಸರೆಯಿಲ್ಲದೇ ಹೊತ್ತಿನ ತುತ್ತಿಗಾಗಿ 

ಪರದಾಡುವವರಿಗೆ,  ಮೈಹಿಡಿಯಾಗಿ ಬೇಡುವವರಿಗೆ, 

ನಿಸ್ವಾರ್ಥದಿಂದ ನೆಲೆ-ಜಲ ನೀಡಿ ಕೈಹಿಡಿದು

ಅನಾಥ ಮಕ್ಕಳಿಗೆ ತಂದೆ-ತಾಯಿಯಾಗಿ ಪ್ರೀತಿ ನೀಡಿ

ಹಿರಿಜೀವಗಳಿಗೆ ಮಕ್ಕಳಾಗಿ ಸೇವೆ ಮಾಡುವುದೇ ?


ಸಾಕುವ ತೀಟೆ ತೀರಿದಾಗ, ಆರೋಗ್ಯ ತಪ್ಪಿದಾಗ,

ಕಂಡವರ ಮನೆ ಮುಂದೆ, ನಿಲ್ದಾಣಗಳಲ್ಲಿ,

ಬೀದಿಗಳಲ್ಲಿ ಬಿಟ್ಟು ಕೈತೊಳೆದುಕೊಳ್ಳುವ

ಪಾಪಿಗಳ ಅಸಡ್ಡೆಗೆ ಒಳಗಾದ, ಮೂಕ

ಪ್ರಾಣಿಗಳ ಹೊಟ್ಟೆ ತುಂಬಿಸಿ ಸಲಹುವುದೇ ?


ಬೆವರು ಹರಿಸಿ, ರಕ್ತ ಸುರಿಸಿ, ಕರ್ಮಯೋಗಿಗಳಾಗಿ

ದುಡಿದು, ತಮ್ಮಾಸೆಗಳಿಗೆ ಕಡಿವಾಣ ಬಿಗಿದು, 

ಒಂದೇ ಹೊತ್ತು ಉಂಡುಕೊಂಡು, ತಮ್ಮ

ಉದರಕ್ಕೆ ತಣ್ಣೀರ ಬಟ್ಟೆ ಬಿಗಿದುಕೊಂಡು,

ಕಷ್ಟದಲ್ಲಿರುವವರಿಗೆ ಸಹಾಯ ಮಾಡುವುದೇ ?


ಅಕ್ಷರ ಕಲಿಕೆಯ ವಿದ್ಯೆ ಇಲ್ಲದಿದ್ದರೂ

ತಮಗೆ ಬರುವ ಅಲ್ಪ ಕಾಸಿನಲ್ಲಿಯೂ ಪಾಲು 

ತೆಗೆದಿರಿಸಿ, ಎಲ್ಲಾ ಅಡ್ಡಿಗಳನ್ನೂ ಎದುರಿಸಿ,  

ಶುದ್ಧ ಮನೋಭಾವದೊಂದಿಗೆ ಆಸ್ಪತ್ರೆ ಕಟ್ಟಿಸಿ, 

ಸಾರ್ವಜನಿಕರಿಗೆ ಸಮರ್ಪಿಸುವುದೇ ?

ಆತ್ಮದ ಪಯಣ

 

ದಿನಾಂಕ ಬರೆದರೆ ದಿನದ 

ಮಹತ್ವ ನೆನಪಾಗುತ್ತದೆ

ದಿನದ ಮಹತ್ವ ನೆನಪಾದರೆ

ಸಂಬಂಧ ಉಳಿದು ಬೆಳೆಯುತ್ತದೆ


ಸಂಬಂಧ ಉಳಿದು ಬೆಳೆದರೆ

ಬದುಕು ಹಗುರವಾಗುತ್ತದೆ

ಬದುಕು ಹಗುರವಾದರೆ

ಬದುಕಿದ್ದೂ ಸಾರ್ಥಕವೆನಿಸುತ್ತದೆ


ಸಾರ್ಥಕವಾದ ಬದುಕು

ಮನಸಿಗೆ ನೆಮ್ಮದಿ ತರುತ್ತದೆ

ನೆಮ್ಮದಿಯ ಮನಸ್ಸು

ಆತ್ಮಕ್ಕೆ ತೃಪ್ತಿ ನೀಡುತ್ತದೆ


ತೃಪ್ತ ಆತ್ಮದ ಪಯಣ

ಸುಖಕರವಾಗುತ್ತದೆ

ಸುಖಕರ ಪಯಣವು 

ಮೋಕ್ಷವನ್ನು ಒದಗಿಸುತ್ತದೆ

Saturday, February 10, 2024

ಹಾರುವ ಕುದುರೆ

 

ಚಿತ್ರ: ಗೂಗ್‌ಲ್‌ನಿಂದ

ಹಾರುತ್ತದೆ ಹಾರುವ ಕುದುರೆ

ಏರುತ್ತದೆ ಏರಿಯ ಚದುರೆ

ಬೀರುತ್ತದೆ ನೋಟವ ಓರೆ

ವಯ್ಯಾರದಲಿ ತಿರುವುತ್ತ ಮೋರೆ


ಕೆಲವೊಮ್ಮೆ, ಹಿಡಿತ ಮೀರಿ ಹಾರುತ್ತದೆ

ಮಿಡಿತದೊಂದಿಗೆ ಓಡುತ್ತದೆ

ಹಿರಿಯರಿಗೆ ಸಡ್ಡು ಹೊಡೆಯುತ್ತದೆ

ಕಿರಿಯರಿಗೆ ಗುದ್ದು ನೀಡುತ್ತದೆ


ಮಿಗಿಲಿಲ್ಲವೆಂಬಂತೆ ಕುಣಿಯುತ್ತದೆ

ಬುದ್ಧಿ ಮಾತುಗಳಿಗೆ ಬೆನ್ನು ಹಾಕುತ್ತದೆ

ಜಗವನ್ನೇ ಗೆದ್ದೆನೆಂಬಂತೆ ಮೆರೆಯುತ್ತದೆ

ತಾನೊಂದು ಅಣು ಮಾತ್ರವೆಂಬುದರ ಮರೆಯುತ್ತದೆ

Thursday, February 08, 2024

ಹುಚ್ಚುತನ

 

ಕ್ಷಮಿಸಿ, ಈಗ ಹುಟ್ಟುತ್ತಿಲ್ಲ ಕವನ

ಶ್ರಮಿಸಿ ಶೋಧಿಸಿದರೂ ಸಿಗದೆಂಬ ನೆವನ

ಭ್ರಮಿಸಿ ಬರೆಯಲು ಬಿಡುತ್ತಿಲ್ಲ ಈ ಮನ


ಇಂಧನವಿಲ್ಲದೆ ಚಲಿಸದು ವಾಹನ

ಪದಗಳಿಲ್ಲದೆ ಕೂಡಿ ಬರದು ಕವನ

ಕಳಪೆಯಾದರೆಂದು ಒಳಗೊಳಗೇ ಕಂಪನ


ಬರೆಯಲೇ ಬೇಕೆಂಬ ಹುಚ್ಚುತನ 

ಒಟ್ಟಾರೆ ಬರೆದರೆ ನಗುತ್ತಾರೆ ಜನ

ನಕ್ಕರೇನಂತೆ, ಅದೇ ಅಲ್ಲವೇ ಜೀವನ

Wednesday, January 31, 2024

ನೀರ ಮೇಲಿನ ಗುಳ್ಳೆ

 

ಅಲ್ಲಿ ಚುಕ್ಕೆಯಿದೆ ಎಂದರೂ ಜಗಳ

ನೀರ ಗುಳ್ಳೆ ನಿಜವಲ್ಲವೆಂದರೂ ಜಗಳ

ಪ್ರತಿಯೊಬ್ಬರ ಅನುಭವ ಬೇರೆಬೇರೆ

ಎಂಬ ವ್ಯತ್ಯಾವಿಲ್ಲದೇ, ಕಚ್ಚಾಟ, ಕಳವಳ


ಮುಖವಾಡ ತೊಟ್ಟರೆ ಮುಖವನ್ನು 

ಮರೆಮಾಚಬಹುದು ಮನಸನ್ನಲ್ಲ

ಮನಸ್ಸಿಲ್ಲದೇ ಒಪ್ಪಿದರದು ನೈಜವಲ್ಲ

ನಿಜವಲ್ಲದ ವ್ಯವಹಾರದ ಅಗತ್ಯವಿಲ್ಲ


ಎದುರಿನವರು ಕನ್ನಡಿಯಲ್ಲ, ಬಿಂಬ ನಮ್ಮದಲ್ಲ 

ಈ ಸತ್ಯ ಮರೆತು, ತಿಳಿಸುವ ಯತ್ನ ಸರಿಯಲ್ಲ

ಸ್ವತಃ ಅರಿವಾದರೆ ಎಲ್ಲವೂ ಅರ್ಥವಾಗುತ್ತದೆ

ಒತ್ತಾಯದ ಬೂದಿ ಮುಚ್ಚಿಟ್ಟರೆ ಕೆಂಡ ಕುದಿಯುತ್ತದೆ 


ತಾಳ್ಮೆ ತಪ್ಪಿದಾಗ ಬೂದಿ ಹಾರಿ ಹೋಗುತ್ತದೆ

ಮುಚ್ಚಿಟ್ಟ ಕೆಂಡ ಮೇಲೆದ್ದು ಉರಿ ಉಗುಳುತ್ತದೆ

ಎಲ್ಲರನ್ನೂ ಎಲ್ಲವನ್ನೂ ಸಮಾನವಾಗಿ ಸುಡುತ್ತದೆ

ಒಳಗೂ ಹೊರಗೂ ಅಸಾಧ್ಯ ನೋವು ತುಂಬುತ್ತದೆ


ಪೊಳ್ಳು ಅಹಂಭಾವ ಬಿಟ್ಟು ನಮ್ಮನ್ನು 

ನಾವೇ ತಕ್ಕಡಿಯಲ್ಲಿ ತೂಗಿಕೊಂಡರೆ

ಇನ್ನೊಬ್ಬರ ಭಾವನೆ ಅರಿವಿಗೆ ಬರುತ್ತದೆ

ದಹನದ ಬದಲು ಸುಖ ಸಹನೆಯಿರುತ್ತದೆ


ಸ್ವಲ್ಪ ಎಚ್ಚರದಿಂದಿದ್ದು ಭಾವನೆಗೆ

ಅಂಕುಶವಿಟ್ಟಿದ್ದಿದ್ದರೆ ಎಂಬ ಪರಿತಾಪ

ಯಾಕಾಗಿ ಈ ಕೋಪ, ಅಸಹ್ಯ ರೂಪ,

ಆಮೇಲೆ ಸುಮ್ಮನೇ ಪಶ್ಚಾತ್ತಾಪ


Sunday, January 28, 2024

ಅಷ್ಟು-ಇಷ್ಟು


ಗತ್ತು ಗೈರತ್ತು ಹೇರೆತ್ತು ಹೊರುವಷ್ಟು

ಕಷ್ಟ ಕೈಯಲ್ಲಿ ದೃಷ್ಟಿಯೇ ಬಿರಿವಷ್ಟು

ನಷ್ಟ ನಲುವತ್ತು ಎಂದಿಗೂ ಮುಗಿಯದಷ್ಟು  

ದೊರೆಯುವುದೆಲ್ಲರಿಗು ಹಣೆಯಲ್ಲಿ ಬರೆದಷ್ಟು

ನೆಮ್ಮದಿಲಿ ಬದುಕಬೇಕು ಆಯುಸ್ಸು ದೊರೆತಷ್ಟು


ಪಡೆದುದರ ಕೊಡುತ್ತಿರು ಅಷ್ಟು-ಇಷ್ಟು

ಕೆಲಸಕಾರ್ಯಗಳ ಮಾಡು ಕಷ್ಟಪಟ್ಟು

ಸೇವೆಗಳಲ್ಲಿ ತೊಡಗಿಕೊ ಇಷ್ಟಪಟ್ಟು

ಅರಿತುದರ ಹಂಚಿಕೊ ಸಾಧ್ಯವಾದಷ್ಟು

ಸನ್ಮಾರ್ಗದಲ್ಲಿ ನಡೆಯಬೇಕು ಆದಷ್ಟು


ಪರರಿಗೆ ಕೇಡು ಬಗೆವವರು

ಇದ್ದರೆಷ್ಟು ಬಿಟ್ಟರೆಷ್ಟು 

ದಯೆ ದಾಕ್ಷಣ್ಯವಿದ್ದರೆ ಸಾಕಷ್ಟು

ಸಿಗುವುದೆಲ್ಲವೂ ಬೇಕಾದಷ್ಟು

ತಿಳಿದುಕೊಳ್ಳಬೇಕು ಇದನೆಲ್ಲ ಬಹಳಷ್ಟು

Friday, January 26, 2024

ಸ್ವಚ್ಛಂದ - ಹಸಿರು

 

ಚಿತ್ರ: ಪಿಂಟರೆಸ್ಟ್


ಬಾನಲ್ಲಿ ಹಾರುತಿಹ ಹಕ್ಕಿಗಳ ಪುಕ್ಕಗಳಲ್ಲಿ

ಸ್ವಾತಂತ್ರ್ಯದ ಸಂಭ್ರಮ, ಸಂತೋಷ,

ತುಂಬಿ ಹರಿವುದು ಅಗಾಧ ವಿಶ್ವಾಸ


ಗೂಡಲ್ಲಿ ಬಂಧಿಯಾದ ಹಕ್ಕಿಗಳ ತನುಮನದಲ್ಲಿ

ಜಡ ತುಂಬಿದ, ಭಯ, ಅವಿಶ್ವಾಸ,

ಹೊರ ಬೀಳುವುದು ನೋವು ನಿಟ್ಟುಸಿರ ನಿಶ್ವಾಸ


ಕಾಡಲ್ಲಿ ಓಡಾಡುವ ಮೃಗಗಳಿಗೆ

ಊಟಕ್ಕೆ ಉಂಟು ಆಹಾರದ ಸರಪಳಿ

ಮೃಗಾಲಯದಲ್ಲಿ ಬಂಧಿಯಾದ ಮೃಗಗಳಿಗೆ

ಕತ್ತು, ಕಾಲಿಗೆ ಬಿಗಿದ ಗಂಟು ಸರಪಳಿ


ಬಂಧನದಲ್ಲಿ ಯಾವುದೇ ಗಂಧವಿಲ್ಲ

ಗಂಧವಿಲ್ಲದಿರೆ ಅಂದ-ಚಂದವಿಲ್ಲ 

ಅವುಗಳ ಅಂದ ಚಂದಗಳ ಕಿತ್ತುಕೊಂಡರೆ 

ಯಾರಿಗೂ, ಎಂದಿಗೂ ಉಳಿಗಾಲವಿಲ್ಲ


ಬಂಧಿಸಿಡಬೇಡಿ ಸ್ವಚ್ಛಂದ ಜೀವಿಗಳ

ಚಿವುಟದಿರಿ ಅಸಹಾಯ ಪ್ರಾಣಗಳ

ಹಿಸುಕದಿರಿ ಅವುಗಳ ಉಸಿರನ್ನು

ಬೆಳೆಸೋಣ ನಮ್ಮೊಳಗಿನ ಹಸಿರನ್ನು

Saturday, January 20, 2024

ಅವಳಾಡಿದ ಮಾತುಗಳು

 

ಇದ್ದಕ್ಕಿದ್ದಂತೆ ಎದ್ದು ಬಂದು

ಎದುರು-ಬದುರಾಗಿ ನಿಂದು

ಕಣ್ಣಲ್ಲಿ ಕಣ್ಣಿಟ್ಟು ದೃಷ್ಟಿ ನೆಟ್ಟು

ಕಣ್ಣೀರ ಹರಿಯಲು ಬಿಟ್ಟು


ಅಸಹನೆಯ ಬದಿಗಿಟ್ಟು

ಭಾವನೆಗಳ ಕಟ್ಟಿಟ್ಟು

ಬಯಕೆಗಳ ಬಚ್ಚಿಟ್ಟು

ಕೈಗಳನು ನನ್ನ ಹೆಗಲ ಮೇಲಿಟ್ಟು


ಅಂದು ಅವಳಾಡಿದ ಮಾತುಗಳು

ಅನುರಣಿಸುತ್ತಿವೆ ಕಿವಿಯಲ್ಲಿ 

ತೊಳಲಾಡುತ್ತಿವೆ ಮನದಲ್ಲಿ

ಕೇಳುತ್ತಿವೆ ಹೃದಯದ ಬಡಿತದಲ್ಲಿ


ಕಾಣುತ್ತಿವೆ ಕನಸಿನಲ್ಲಿ, 

ಹೊಡೆಯುತ್ತಿವೆ ಗೊಂದಲದಲ್ಲಿ

ಜೊತೆಯಾಗಿವೆ ಪ್ರತೀ ಹೆಜ್ಜೆಯಲ್ಲಿ

ಅಚ್ಚಾಗಿದೆ ಅಸ್ಥಿ ಮಜ್ಜೆಯಲ್ಲಿ

Sunday, January 14, 2024

ಎಳ್ಳು - ಬೆಲ್ಲ


ಚಿತ್ರ: ಗೂಗ್‌ಲ್‌ನಿಂದ


ಪುಷ್ಯ ಮಾಸ ಶುಕ್ಲ ಪಕ್ಷ ಉತ್ತರಾಯಣ,

ಮಕರ ರಾಶಿಯಲ್ಲಿ ಸೂರ್ಯನ ಸಂಕ್ರಮಣ

ಋತುಗಳ ಬದಲಾವಣೆಯ ಆರಂಭವಿದು

ರೈತರಿಗೆ ಬಹು ದೊಡ್ಡ ಸಮಾರಂಭವಿದು


ಪೈರ ತೆಗೆಯುವ ಶುಭ ಮುಹೂರ್ತ,

ಮನೆಮನೆಯಲ್ಲೂ ಸಮೃದ್ಧಿಯ ಸಂಕೇತ

ಸಂತಸದಲ್ಲಿ ಸಂಕ್ರಾಂತಿಯ ಹಿಗ್ಗಿನ ಸುಗ್ಗಿ,

ಮನೆ-ಮನಗಳಲ್ಲಿ ಸಿಹಿ ಸವಿ ಹುಗ್ಗಿ


ಇಂದು ಸಂಕ್ರಾಂತಿ, ತೊಡೆವುದೆಲ್ಲಾ ಭ್ರಾಂತಿ

ಹೊಳೆಯುವುದು ಹೊಸ ಸೂರ್ಯ ಕಾಂತಿ

ಹೊಸತನ ಹೊಸಮನದೊಂದಿಗೆ ಶಾಂತಿ,

ತರುವುದು ದುಃಖ ದುಮ್ಮಾನಗಳಿಗೆ ವಿಶ್ರಾಂತಿ


ಬನ್ನಿ, ತಿನ್ನಿ, ಸಂಕ್ರಾಂತಿಯ ಎಳ್ಳು-ಬೆಲ್ಲ 

ಸಿಹಿ ತಿಂದ ಬಾಯಿಯಲ್ಲಿ ಕಹಿಯು ಸಲ್ಲ

ಮುಂದಿರುವುದು ನಮಗೆ ಒಳಿತೇ ಎಲ್ಲಾ 

ಕೆಡುಕಿಗಂತೂ ಇಲ್ಲಿ ಜಾಗವೇ ಇಲ್ಲ


ಎಲ್ಲರಿಗೂ ಸಂಕ್ರಾಂತಿ ಹಬ್ಬದ ಶುಭಾಶಯ

- ಪೂ.

೧೫-೦೧-೨೦೨೪

Monday, January 08, 2024

ಮನಸ್ತಾಪ

 

ದೊಡ್ಡವರು ದೊಡ್ಡವರಾಗದಿದ್ದರೆ

ಚಿಕ್ಕವರು ದೊಡ್ಡವರಾಗ ಬೇಕಾಗುತ್ತದೆ

ಆದರೆ ಚಿಕ್ಕವರು ದೊಡ್ಡವರಾದರೆ,

ದೊಡ್ಡವರ ಅಹಂಭಾವಕ್ಕೆ ಪೆಟ್ಟಾಗುತ್ತದೆ 


ಅಹಂ ಇದ್ದಲ್ಲಿ ಮನವು ಕುರುಡಾಗುತ್ತದೆ

ಮನವು ಕುರುಡಾದಾಗ ಬುದ್ಧಿ ಕೈಕೊಡುತ್ತದೆ

ಮಾತಿಗೆ ಮಾತು ಸೇರಿ ಎಲ್ಲವೂ ಕಹಿಯೆನಿಸುತ್ತದೆ

ಕಹಿಯೇರಿದಂತೇ, ಹೇಳುವುದೆಲ್ಲಾ ವಕ್ರ ಎನಿಸುತ್ತದೆ


ಹೇಳುವುದನೆಲ್ಲ ವಕ್ರವಾಗಿ ಸ್ವೀಕರಿಸಿದರೆ

ಮನಸಿಗೆ ನೋವಾಗುತ್ತದೆ, ನೋವಾದ

ಮನಸಿಗೆ ಮೌನವೇ ಪ್ರಿಯವೆನಿಸುತ್ತದೆ

ಮೌನಕ್ಕೆ ಶರಣಾದರೆ ಮನಗಳು ದೂರವಾಗುತ್ತವೆ


ನಮ್ಮನ್ನು ನಾವು ಒರೆಗಿಟ್ಟರೆ ನಮ್ಮ ತಪ್ಪು

ತಿಳಿಯುತ್ತದೆ, ತಿಳಿದ ಮೇಲೆ ತಿದ್ದಿಕೊಂಡರೆ 

ಜೀವನವು ಹೊಳೆಯುತ್ತದೆ, ಇದು ಅರ್ಥವಾಗದಿದ್ದರೆ, 

ಅವರವರ ಪಾಲಿನ ಮನಸ್ತಾಪ ಅಲ್ಲಲ್ಲೇ ಉಳಿಯುತ್ತದೆ

Tuesday, January 02, 2024

ನೀನ್ಯಾರೋ - ನಾನ್ಯಾರೋ


ನಾನು ಮಗುವಾಗಿದ್ದಾಗ, 

ನೀನು ಯಾರೆಂದೇ ತಿಳಿದಿರಲಿಲ್ಲ

ನೀನೂ ಕೈಕಾಲಾಡಿಸಿ ಕಿಲಕಿಲ

ನಗುತ್ತಿದ್ದೆ, ನಾನೂ ನಗುತ್ತಿದ್ದೆ


ಬಾಲ್ಯದಲ್ಲಿ ನಿನ್ನ ನೋಡಿ, 

ನಿನ್ನ  ಹೊಗಳುವುದ ಕೇಳಿ,

ನಾನು ಹೊಟ್ಟೆಕಿಚ್ಚು ಪಡುತ್ತಿದ್ದೆ

ಉರಿಯನ್ನು ಅಮ್ಮನಿಗೆ ಮುಟ್ಟಿಸುತ್ತಿದ್ದೆ


ತಾರುಣ್ಯದ ಹೊಸ್ತಿಲಲ್ಲಿ, ನಿನ್ನ ನೋಡಿ

ಕೀಳರಿಮೆ ಅನುಭವಿಸುತ್ತಿದ್ದೆ

ನೀನು ಹತ್ತಿರ ಬಂದರೂ ನಾನು

ದೂರವೇ ಉಳಿಯುತ್ತಿದ್ದೆ


ಯೌವನದಲ್ಲಿ, ನಿನ್ನ ನೋಡಿ

ನಾನು ಆಶ್ಚರ್ಯ ಪಡುತ್ತಿದ್ದೆ 

ನೀನು ನನ್ನಂತೆಯೇ ನಾನು 

ನಿನ್ನಂತೆಯೇ, ಅಂದುಕೊಳ್ಳುತ್ತಿದ್ದೆ


ಮಧ್ಯವಯಸ್ಸಿನಲ್ಲಿ, ನಿನ್ನ ನೋಡಿ

ನಿನ್ನ ಬಗ್ಗೆ ಕೇಳಿ, ಖುಷಿ ಪಡುತ್ತಿದ್ದೆ

ನಾನು ನಿನ್ನಿಂದ ಕಲಿತೆ ನೀನು

ನನ್ನಿಂದ ಕಲಿತೆ ಎಂದು ಹೆಮ್ಮೆ ಪಡುತ್ತಿದ್ದೆ


ವೃದ್ಧಾಪ್ಯದಲ್ಲಿ, ನಿನ್ನ ನೋಡಿ

ಎಷ್ಟು ಚಂದ ಈ ಸ್ನೇಹ

ಎಷ್ಟು ಸುಂದರ ಈ ಬದುಕು

ಎಂದು ಆನಂದದಿಂದ ಇರುತ್ತಿದ್ದೆ


ನಾಳೆ ಉಸಿರು ನಿಂತ ಮೇಲೆ

ನೀನ್ಯಾರೋ, ನಾನ್ಯಾರೋ 

ಹೊರುವವರು ಯಾರೋ

ಕಳುಹಿಸಿ ಕೊಡುವವರು ಯಾರೋ