Thursday, August 22, 2024

ಶೇರ್ ಮಾರ್ಕೆಟ್


ಆಸೆಯನ್ನು ಕೆದಕುತ್ತದೆ 

ಅತಿಯಾಸೆ ಮೊಳೆಯುತ್ತದೆ

ದುರಾಸೆಯದು ಹೆಚ್ಚಾದರೆ 

ನಿರಾಸೆ ಮನವನ್ನು ಸುಡುತ್ತದೆ


ಅರಿತರೆ ಅರಮನೆಯಾಗಿಸುತ್ತದೆ

ಅರಿಯದಿರೆ ಸೆರೆಮನೆಯಾಗಿಸುತ್ತದೆ

ಕಲಿಕೆಯನ್ನು ಅನಿವಾರ್ಯವಾಗಿಸುತ್ತದೆ

ಕಲಿಯದಿದ್ದರೆ ದಿಟವಾಗಿ ಕೈಸುಡುತ್ತದೆ 


ಅತ್ತರೆ ನಗಿಸುತ್ತದೆ 

ನಕ್ಕರೆ ರೊಚ್ಚಿಗೇಳುತ್ತದೆ 

ಕೊಟ್ಟರೆ ಏರುತ್ತದೆ 

ಕೊಂಡರೆ ಇಳಿಯುತ್ತದೆ


ಜಾಣ್ಮೆಯನ್ನು ಬೆಳೆಸಿ ಶ್ಲಾಘಿಸುತ್ತದೆ

ತಾಳ್ಮೆಯನ್ನು ಕಲಿಸಿ ಪರೀಕ್ಷಿಸುತ್ತದೆ

ಗಲಿಬಿಲಿಗೊಳಿಸಿ ತಲೆ ಕೆಡಿಸುತ್ತದೆ

ಭಯ ಹುಟ್ಟಿಸಿದರೂ ಜಯ ತರುತ್ತದೆ

Friday, August 16, 2024

ಜಗನ್ಮಾತೆ

 

ಬಿಸಿಲ ಕೋಲನು ಬಸಿದು 

ಪಾನೀಯ ಮಾಡಿ

ಕುಡಿಯುವಾಕೆ


ಆಕಾಶ ತೊಟ್ಟಿಲಿಗೆ

ಗಾಳಿ ಬಳ್ಳಿಯ ಕಟ್ಟಿ

ಜೋಕಾಲಿ ಆಡುವಾಕೆ 

 

ಪ್ರಾಣಿಪಕ್ಷಿಗಳೊಡನೆ 

ಸರಸದಿಂದ ಸಲ್ಲಾಪ

ನಡೆಸುವಾಕೆ


ಭೂಪಾತ್ರೆ ಹಿಡಿದಲ್ಲಾಡಿಸಿ 

ಮೂರ್ಖ ಮನುಜನ

ಸೊಲ್ಲಡಗಿಸುವಾಕೆ 


ನಂಬಿದವರ ನಖಕೂ 

ಕುತ್ತಾಗದಂತೆ ಸಲಹಿ

ಸಾಕುವಾಕೆ


ಶರಣು ಬಂದವರ

ಕೈ ಹಿಡಿದು ಸನ್ಮಾರ್ಗದಲ್ಲಿ 

ನಡೆಸುವಾಕೆ

Wednesday, August 14, 2024

ಹೊಳೆಯುತ್ತಿದ್ದಾನೆ

 

ಪುಟಕ್ಕಿಟ್ಟ ಚಿನ್ನದಂತೆ ಹೊಳೆಯುತ್ತಿದ್ದಾನೆ

ದೇಶವನ್ನು ಬೆಳೆಸಿ ಬೆಳೆಯುತ್ತಿದ್ದಾನೆ

ಕಳೆಗಳ ಕಿತ್ತೆಸೆಯಲು ಶ್ರಮಿಸುತ್ತಿದ್ದಾನೆ

ಹೆಜ್ಜೆಯಿಟ್ಟಲ್ಲಿ ಹೊಸತನ ತರುತ್ತಿದ್ದಾನೆ


ಮಲಗಿದವರ ತಟ್ಟಿ ಎಬ್ಬಿಸುತ್ತಿದ್ದಾನೆ

ಜ್ಞಾನ ದೀಪವನ್ನೆಲ್ಲೆಡೆ ಉರಿಸುತ್ತಿದ್ದಾನೆ

ಕಾಲಿಗೆ ಬುದ್ಧಿ ಹೇಳಿದವರಿಗೆ ತಕ್ಕ

ಬುದ್ಧಿಯನ್ನು ಕಲಿಸುತ್ತಿದ್ದಾನೆ


ಎಲ್ಲವನ್ನೂ ಗಮನಿಸುತ್ತಿದ್ದಾನೆ

ಎಲ್ಲದರಲ್ಲಿಯೂ ಆಸಕ್ತಿ ವಹಿಸುತ್ತಿದ್ದಾನೆ

ಎಲ್ಲರಿಗೂ ಸ್ಫೂರ್ತಿ ತುಂಬುತ್ತಿದ್ದಾನೆ

ಎಲ್ಲದಕ್ಕೂ ಹೆಗಲು ನೀಡುತ್ತಿದ್ದಾನೆ


ಖಡಾಖಂಡಿತ ಉತ್ತರ ನೀಡುತ್ತಿದ್ದಾನೆ

ಕೆಟ್ಟದ್ದನ್ನು ಮಟ್ಟ ಹಾಕುತ್ತಿದ್ದಾನೆ

ಒಳ್ಳೆಯದನ್ನು ಬೆಂಬಲಿಸುತ್ತಿದ್ದಾನೆ

ನಿಷ್ಕಳಂಕ ಪ್ರೀತಿ ಸೂಸುತ್ತಿದ್ದಾನೆ


ಪರರಿಗೆ ಮಾದರಿಯಾಗುತ್ತಿದ್ದಾನೆ

ದೇಶದುದ್ಧಾರಕ್ಕಾಗಿ ಜೀವ ಸವೆಸುತ್ತಿದ್ದಾನೆ

ದೇಶವಾಸಿಗಳೆಲ್ಲರೂ ತನ್ನವರೆನ್ನುತ್ತಾನೆ 

ತನ್ನದೆಲ್ಲವನ್ನೂ ಅವರಿಗೇ ಮೀಸಲಿಟ್ಟಿದ್ದಾನೆ

Tuesday, July 30, 2024

ಸುಧೀರ

 

ಮನಸಿನ ತಳಮಳ

ತಳಕಿಳಿಯದಂತೆ 

ಹೃದಯದ ಗಾಬರಿ

ನಲುಗಿಸದಂತೆ 


ಹೊರಚೆಲ್ಲಿ ಹಗುರಾಗಿ

ಹಸಿರ ಉಸಿರೆಳೆದು ನವಿರಾಗಿ

ಮೊರದಷ್ಟು ನಗು ಮೊಗೆದು

ಹೊಸ ಬೆಳಕ ಒಳಸೆಳೆದು


ಹೊಸತನವು ಆಗಮಿಸಿ

ಹೊಸತನ್ನು ಸ್ವಾಗತಿಸಿ

ಗರಿ ಬಿಚ್ಚಿ ನರ್ತನದಿ 

ಬಿರಿದ ಮಲ್ಲಿಗೆಯಾಗು

Thursday, July 25, 2024

ಅಂಕು ಡೊಂಕು


ಅಂಕುಡೊಂಕಿನ ಮರದಲ್ಲಿ 

ಬಿಂಕವಿಲ್ಲದೆ ಬೆಳೆದ ಪುಷ್ಪ

ಸಂಖ್ಯೆಯನ್ನು ಹೆಚ್ಚಿಸುತ್ತಾ

ಸಂತಸದ ಸುವಾಸನೆ ಬೀರುತ್ತದೆ


ಪರ್ಣಪಾತಿ ವೃಕ್ಷವೊಂದು

ಅಪರ್ಣವಾಗಿ ನಿಂದರೂ

ಸ್ವರ್ಣ ರವಿಯ ಬೆಳಕಿನಲ್ಲಿ

ವರ್ಣಮಯವಾಗುತ್ತದೆ 


ಅಗಳ ಬಳಿ ಬೆಳೆದು ನಿಂದು

ಖಗಗಳನ್ನು ಹೊತ್ತುಕೊಂಡು

ಜಗಳವಿಲ್ಲದ ಜಗದ ಕನಸನು

ಜಗಕೆಲ್ಲ ಹಂಚುತ್ತದೆ


ಬದುಕಿದ್ದಾಗಲೂ ಸತ್ತಾಗಲೂ

ಎಲ್ಲರಿಗೂ ನೆರವಾಗುತ್ತದೆ

ಮನುಜನಂತೆ ಕೊಂಕು ಹುಡುಕದೆ

ಜ್ಞಾನಿಯಂತೆ ನಿರ್ಗಮಿಸುತ್ತದೆ

Saturday, July 20, 2024

ಹರಿಯಬೇಕು

ಬಿಟ್ಟರೆ ಹರಿದು ಹೋಗುತ್ತದೆ

ತನ್ನ ದಾರಿಯ ಹುಡುಕಿಕೊಂಡು

ವಿಶಾಲ ಶರಧಿಯ ಸೇರುತ್ತದೆ


ನಿಂತರೆ ನಿಂತಲ್ಲೇ ಕೊಳೆಯುತ್ತದೆ

ಉಳಿದಲ್ಲೇ ಉಳಿದು ನಾರುತ್ತದೆ

ಕ್ರಿಮಿಕೀಟಗಳ ಸಲಹುತ್ತದೆ


ಹರಿಯಬೇಕು ಹರಿದು ಪೊರೆಯಬೇಕು

ಹೊರಳಬೇಕು ಪೊರೆ ಕಳಚಿ ಅರಳಬೇಕು

ನೆರಳೊಳಗೆ ನರಳದೇ ನಲಿಯಬೇಕು


ಹರಿಯಬೇಕು ಹರಿಯ ನೆನೆಯಬೇಕು

ಹರನ ಪಾದಕ್ಕೆ ಶರಣಾಗಬೇಕು

ಹೊರೆಯನೆಲ್ಲ ಬಿಟ್ಟು ತೆರಳಬೇಕು

Tuesday, July 02, 2024

ಇರುವೆಯಂತಿರಬೇಕು

 

ಇದ್ದರೆ ಇರುವೆಯಂತೆ ಇರಬೇಕು

ಬಿದ್ದರೂ ಮತ್ತೆ ಮತ್ತೆ ಎದ್ದು ಬರಬೇಕು

ಅಡ್ಡಿಗಳ ಸುತ್ತಿ ಹತ್ತಿ ಮೇಲೇರಬೇಕು


ಶರೀರ ಚಿಕ್ಕದಾದರೂ ಕಾರ್ಯ ದೊಡ್ಡದಿರಬೇಕು

ಕಣ ತೂಕವಾದರೂ ಮಣ ಕೆಲಸ ಮಾಡಬೇಕು

ಛಲ ಬಿಡದೆ ಸಾಧಿಸುವ ದೃಢ ಮನಸ್ಸಿರಬೇಕು


ಬಿಸಿಲಿನಲಿ ಬೆವರಿನಲಿ ಬೆದರದೇ ಓಡಾಡಬೇಕು

ದೂರವೋ ಸನಿಹವೋ ಗುರಿಯೆಡೆಗೆ ಸಾಗಬೇಕು

ಯಾರಿರಲೀ ಇಲ್ಲದಿರಲೀ ಕರ್ತವ್ಯದೆಡೆ ಲಕ್ಷ್ಯಬೇಕು


ಮುಖಾಮುಖಿಯಾಗಿ ವಿಷಯಗಳ ಚರ್ಚಿಸಬೇಕು

ಸಂಘ ಸಹವಾಸದಲಿ ಸ್ವರ್ಗವನು ಕಾಣಬೇಕು

ಶ್ರಮ ಪಟ್ಟು, ಕ್ರಮದಲ್ಲಿ ಬದುಕಿ ಜಯಿಸಬೇಕು

Sunday, June 30, 2024

ಉತ್ತಮ

 

ಮಾಡಿದರೂ ಒಂದೇ ಮಾಡದಿದ್ದರೂ ಒಂದೇ

ಮಾಡದೆಯೇ ಕೆಟ್ಟವರಾಗುವುದು ಉತ್ತಮ

ಅರಿತರೂ ಒಂದೇ ಅರಿಯದಿದ್ದರೂ ಒಂದೇ

ಅರಿಯದೆಯೇ ಬದುಕುವುದು ಉತ್ತಮ


ಕೇಳಿದರೂ ಒಂದೇ ಕೇಳದಿದ್ದರೂ ಒಂದೇ

ಕೇಳದೆಯೇ ಕೂರುವುದು ಉತ್ತಮ

ತಿಳಿದರೂ ಒಂದೇ ತಿಳಿಯದಿದ್ದರೂ ಒಂದೇ

ತಿಳಿಯದಿದ್ದರೆಯೇ ಉತ್ತಮ


ನೋಡಿದರೂ ಒಂದೇ ನೋಡದಿದ್ದರೂ ಒಂದೇ

ನೋಡದೆಯೇ ಇರುವುದು ಉತ್ತಮ

ನೀಡಿದರೂ ಒಂದೇ ನೀಡದಿದ್ದರೂ ಒಂದೇ

ನೀಡದೆಯೇ ಬಲಿಯಾಗುವುದುತ್ತಮ 


ಗಳಿಸಿದರೂ ಒಂದೇ ಕಳೆದುಕೊಂಡರೂ ಒಂದೇ

ಗಳಿಸದೆಯೇ ಉಳಿಯುವುದು ಉತ್ತಮ

ಬೆಳೆದರೂ ಒಂದೇ ಅಳಿದರೂ ಒಂದೇ

ಇದ್ದಲ್ಲಿಯೇ ಇರುವುದು ಉತ್ತಮ

Sunday, June 02, 2024

ಅಚ್ಚರಿಯ ತೊಟ್ಟಿಲು

ಅರೆ ಶತಕದ ಮೂರನೆಯ ಮೆಟ್ಟಿಲು

ಈ  ಜಗವಹುದು ಬಲು ಅಚ್ಚರಿಯ ತೊಟ್ಟಿಲು

ಸೋಲಿಲ್ಲ ಗೆಲುವಿಲ್ಲ ಇದ್ದರೂ ಇಲ್ಲಿ ಅದೆಲ್ಲ ಸಲ್ಲ

ಅರಿತರೆ ಸಿಹಿ-ಕಹಿ, ಜೀವನವಹುದು ಬೇವು ಬೆಲ್ಲ


ಬೆರೆತರೆ ಸ್ನೇಹ-ಸಂಬಂಧ, ತಕರಾರಿಲ್ಲ

ಇಲ್ಲವಾದಲ್ಲಿ ಕಿರಿಕಿರಿ ಎಂದಿಗೂ ತಪ್ಪಿದ್ದಲ್ಲ

ದಾರಿಯಲ್ಲಿ ಕಲ್ಲುಮುಳ್ಳು ಇರದಿರುವುದಿಲ್ಲ

ಎದುರಿಸಿ ನಿಲ್ಲದಿರೆ ಸುಲಭ ಪರಿಹಾರವಿಲ್ಲ


ಪ್ರಪಂಚದಲ್ಲಿ ಸಂಕಟ ಮುಗಿಯುವುದಿಲ್ಲ

ನಮಗೆ ನಾವೇ ನೆಮ್ಮದಿ ಪಡೆಯಬೇಕಲ್ಲ

ದುಃಖಿಸಿದರೆ ಎಂದಿಗೂ ಧೈರ್ಯ ಬರುವುದಿಲ್ಲ

ಧೈರ್ಯದಿಂದಿದ್ದರೆ ನೆಲ ಕುಸಿಯುವುದಿಲ್ಲ


ಬಯಕೆಯ ಬಳ್ಳಿಯ ಮಿತಿಯಲ್ಲಿ ಬಿಗಿದರೆ

ಬದುಕಲ್ಲಿ ಬೆಳೆಯುವುದು ಭರವಸೆಯ ಹಸಿರು

ಭಗವಂತನ ದಯೆಯ ಕೈ ತಲೆ ಮೇಲೆ ಇದ್ದರೆ

ಬಾಳ ಬಟ್ಟೆಯಲಿ ಸದಾ ನೆಮ್ಮದಿಯ ಉಸಿರು

Sunday, May 19, 2024

ಪರಮಾತ್ಮನ ಪಾದ

 

ಅಚ್ಚರಿಯ ಮೊದಲ ಹೆಜ್ಜೆ

ಚಚ್ಚರದಿ ಎರಡನೆಯ ಹೆಜ್ಜೆ

ಕಾಲಲ್ಲಿ ಕಟ್ಟಿರುವ ಗೆಜ್ಜೆ

ಸಾಧನೆಗೆ ಹೆಮ್ಮೆಯಿಂದ ಲಜ್ಜೆ


ಬೆರಳ ತುದಿ ಹಿಡಿದು ಎದ್ದು

ಸ್ವಪ್ರಯತ್ನದಿ ಮುನ್ನಡೆದೆ 

ಶ್ರಮದೊಂದಿಗೆ ಬಿರುನಡೆದೆ

ಛಲದೊಂದಿಗೆ ಗಮ್ಯ ಸೇರಿದೆ


ಅಂದಕ್ಕೆ ಅಂಧಳಾಗದೆ 

ಚಂದಕ್ಕೆ ಮರುಳಾಗದೆ

ಬಂದುದನ್ನು ಎದುರಿಸುತ್ತಾ

ಬದುಕನ್ನು ಸಾಗಿಸಿದೆ


ಗರಿಗೆದರಿ ಸಜ್ಜಾಗಿ

ಗರಿಬಿಚ್ಚಿ ಹಾರಿದೆ

ಗರಿಗಳಂದವ ತೋರಿದೆ

ಗುರಿಮುಟ್ಟಿ ವಿಶ್ರಮಿಸಿದೆ


ಜ್ಞಾನಕ್ಕೆ ಕೈಮುಗಿದು

ಧ್ಯಾನಕ್ಕೆ ಗಮನ ಕೊಟ್ಟು

ಪ್ರಾಣವನ್ನು ಪವಿತ್ರಗೊಳಿಸಿ 

ಪರಮಾತ್ಮನ ಪಾದ ಸೇರಿದೆ