ದಿನವದು ಮುಗಿಯಿತು ದಿನಪಟ್ಟಿ ಮಗುಚಿತು
2025 ಕಳೆಯಿತು 2026 ಉಳಿಯಿತು
ಕಳೆದದ್ದಕ್ಕೆ ಕಂಗೆಡದೇ ಉಳಿದುದನ್ನು ಉಳಿಸಿಕೊಂಡು
ಗಳಿಸಿ ಬೆಳೆಸಿ ಕುಣಿಸಿ ನಲಿಸಿ ನಕ್ಕು ನಲಿಯುವ
ಹೊಸ ದಿನಪಟ್ಟಿಯ ಶುಭಾಶಯ
ಪೂ-
01-01-2026
ದಿನವದು ಮುಗಿಯಿತು ದಿನಪಟ್ಟಿ ಮಗುಚಿತು
2025 ಕಳೆಯಿತು 2026 ಉಳಿಯಿತು
ಕಳೆದದ್ದಕ್ಕೆ ಕಂಗೆಡದೇ ಉಳಿದುದನ್ನು ಉಳಿಸಿಕೊಂಡು
ಗಳಿಸಿ ಬೆಳೆಸಿ ಕುಣಿಸಿ ನಲಿಸಿ ನಕ್ಕು ನಲಿಯುವ
ಹೊಸ ದಿನಪಟ್ಟಿಯ ಶುಭಾಶಯ
ಪೂ-
01-01-2026
ಭ್ರಮೆಯೆನಿಸಿದರೂ ಭ್ರಮೆಯಲ್ಲ
ಭ್ರಮೆಯ ಭ್ರಮೆಯನ್ನು ಭ್ರಮಿಸುವಂತೆ
ಭ್ರಮೆಗೊಳಿಸುವ ಭ್ರಮೆಯಂತಲ್ಲ
ಆಪ್ತವೆನಿಸಿದರೂ ಆಪ್ತವಲ್ಲ
ಆಪ್ತರಂತೆ ವರ್ತಿಸಿ ಆಪ್ತವಾದರೂ
ಆಪ್ತರ ಆಪ್ತತೆಯಂತಲ್ಲ
ಅದ್ಭುತವೆನಿಸಿದರೂ ಅದ್ಭುತವಲ್ಲ
ಅದ್ಭುತವನ್ನು ಅದ್ಭುತವಾಗಿ ತೋರಿಸಿದರೂ
ಅದ್ಭುತದಷ್ಟು ಅದ್ಭುತವಲ್ಲ
ನಮ್ಮ ನಿಮ್ಮಂತೆಯೂ ಅಲ್ಲ
ನಮ್ಮ ನಿಮ್ಮಂತೆ ಕೆಲಸ ಮಾಡಿದರೂ
ನಮ್ಮ ನಿಮ್ಮ ನಡುವಣ ಬಾಂಧವ್ಯವಿಲ್ಲ
ಮಂಜಿನಲಿ ಮೂಡಿದ ಸುಂದರ ಕವಿತೆ
ಹೊಸೆದು ಹಾಡಿದ ಹಸಿ ರಾಗ ಸಂಹಿತೆ
ಹೃದಯದಲಿ ಹೊತ್ತ ಅಮೂಲ್ಯ ಗೀತೆ
ಕಾಲ ಬರೆದರೂ ಓದದೇ ಉಳಿದ ಅಸ್ಮಿತೆ
ಗಾಳಿಯಲ್ಲಿ ತೇಲಿದ ನಾಳೆಯ ಗಂಧ
ಅವುಚಿಕೊಂಡು ಅದರ ಸುಗಂಧ
ದಾಟಿ ಬಂದ ಗೆರೆಗೆ ಚುಕ್ಕಿಯನಿಟ್ಟು
ಮುಂದುವರಿದುದು ಹೊಸ ಹೆಜ್ಜೆಗಳನಿಟ್ಟು
ನೋವ ಗಾಯದ ಮೇಲೆ ನಗುವಿನ ನೆನಪು
ನಗುವಿನ ಒಳಗೆ ಸಂತಸದ ಹೊಳಪು
ನೆನಪಿನ ಬಾವಿಯಲ್ಲಿ ಜಿನುಗುವ ಬಿಸುಪು
ಮನದ ತೋಟದಲ್ಲಿ ಮಲ್ಲಿಗೆಯ ಒನಪು
ಬದಲಾದ ಕಾಲದ ಬದಲಾದ ನುಡಿ
ಹಾದಿಯಲ್ಲಿ ಕರಗಿದ ಬೆಂಕಿಯ ಕಿಡಿ
ಹಳೆಯ ದಿನಗಳಲ್ಲಿದ್ದ ಗಡಿಬಿಡಿ
ಹರಡಿದೆ ಹೂವಿನ ಹಾಗೆ ಬಿಡಿಬಿಡಿ
ತಟ್ಟಿ ಕುಟ್ಟಿದ ಕಠಿಣ ಕರ್ಗಲ್ಲು
ಏರಿದ ಒಂದೊಂದೂ ಮೆಟ್ಟಿಲು
ಮುಟ್ಟಿದ ಪ್ರತಿಯೊಂದು ಮೈಲಿಗಲ್ಲು
ಕಳೆದಿದೆ ಕಾಳ ಕತ್ತಲೆಯ ಕವಲು
ಕನ್ನಡ ಕಲಿಯಲು ಕನ್ನಡಿ ಬೇಡ
ಕನ್ನಡ ನುಡಿಯಲು ನಾಚಿಕೆ ಬೇಡ
ಕನ್ನಡ ಕಂಪಲಿ ಸೊಗಸಿದೆ ನೋಡ
ಕನ್ನಡವಾರಿಗೂ ಬಯಸದು ಕೇಡ
ರಾಜ್ಯೋತ್ಸವದ ಶುಭಾಶಯ
01-11-2025
ವಾಹನ ದಟ್ಟಣೆಯಲ್ಲಿ ಸಿಲುಕಿದ ಆಂಬ್ಯುಲೆನ್ಸ್
ಅಮ್ಮನ ಕಾಣದೆ ಬಿಕ್ಕಿಬಿಕ್ಕಿ ಕಣ್ಣೀರಿಡುವ ಕಂದ
ಬೇಟೆಗಾರನ ಬಲೆಯಲ್ಲಿ ಬಂಧಿಯಾದ ಪ್ರಾಣಿ
ದುಷ್ಟರ ಕಿರುಕುಳ ಸಹಿಸುತ್ತಿರುವ ಯುವತಿ
ತಪ್ಪೇ ಇಲ್ಲದಿದ್ದರೂ ಬೈಗುಳ ತಿನ್ನುವ ಕೆಲಸಗಾರ
ಅಸಡ್ಡೆಗೆ ಮೈಹಿಡಿಯಾಗಿ ಬೇಡುವ ಭಿಕ್ಷುಕ
ಸುಡು ಬಿಸಿಲಲ್ಲಿ ಬಾಡುತ್ತಿರುವ ಗಿಡಮರಗಳು
ನೀರು ತಪ್ಪಿ ಉಸಿರಿಗೆ ಚಡಪಡಿಸುತ್ತಿರುವ ಮೀನು
ಅಮ್ಮನ ಕರೆಗೆ ಕರು ಅಂಬಾ ಎಂದೋಡಿ ಬಂದ ಕ್ಷಣ
ಮುಗ್ಧ ಮಗುವೊಂದು ಬಂದಪ್ಪಿ ಮುತ್ತಿಟ್ಟ ನಿಮಿಷ
ಹಿರಿಯರ ಸೇವೆ ಮಾಡಿ ಆಶೀರ್ವಾದ ಪಡೆದ ಹೊತ್ತು
ಕಳೆದು ಹೋದ ನೆಮ್ಮದಿಯ ಮರಳಿ ಪಡೆದ ದಿನ
ಮೋಡವಿಲ್ಲದ ಆಗಸದಲ್ಲಿ ಮಿನುಗುವ ನಕ್ಷತ್ರಗಳು
ನೆಟ್ಟು ಬೆಳೆಸಿದ ಗಿಡದಲ್ಲಿ ಅರಳಿದ ಹೂವುಗಳು
ಬಂಧುಗಳು ಒಂದೆಡೆ ಕಲೆತಾಗ ಪ್ರೀತಿಯ ಮಾತುಗಳು
ಸಾಧನೆಯ ತುದಿಯೇರಿ ನಿಂದ ತೃಪ್ತಿಯ ನಗು
ಹಾರಾಡುತ್ತಿರುವ ಹಕ್ಕಿಗಳ ಚಿಲಿಪಿಲಿ ಕಲರವ
ಅಂಗಳದಲ್ಲಿ ಓಡಾಡುತ್ತಿರುವ ನಾಯಿ ಮರಿಗಳು
ಮರಿಗಳೊಂದಿಗೆ ಆಟವಾಡುತ್ತಿರುವ ಮಕ್ಕಳು
ಸಂತನೊಬ್ಬ ಸಂತನ ಭೇಟಿಯಾದಾಗ
ಸುತ್ತೆಲ್ಲ ಸಂತಸ ಹರಿಯುತ್ತದೆ
ಸಂತಸ ಹರಿದು ನದಿಯಾದಲ್ಲಿ
ಆರೋಗ್ಯವು ತುಂಬಿ ತುಳುಕುತ್ತದೆ
ಆರೋಗ್ಯ ತುಂಬಿ ತುಳುಕಿದಲ್ಲಿ
ನಗು ನಕ್ಕು ನಲಿಯುತ್ತದೆ
ನಗು ನಕ್ಕು ನಲಿಯುವಲ್ಲಿ
ನೆಮ್ಮದಿ ಸದಾ ನೆಲೆಸುತ್ತದೆ
ನೆಮ್ಮದಿ ನೆಲೆಸಿದಲ್ಲಿ ಐಶ್ವರ್ಯ ಸಿದ್ಧಿಸುತ್ತದೆ
ಐಶ್ವರ್ಯ ಸಿದ್ಧಿಸಿದಲ್ಲಿ ದಾನಧರ್ಮ ಇಣುಕುತ್ತದೆ
ದಾನಧರ್ಮ ಇಣುಕಿದಲ್ಲಿ ದಯೆ ಮೂಡುತ್ತದೆ
ದಯೆ ಮೂಡಿದಲ್ಲಿ ದಾರಿ ಕಾಣುತ್ತದೆ
ದಾರಿ ಕಂಡಾಗ ಮನುಜ ಸಂತನಾಗುತ್ತಾನೆ
ಸಂತನೆಂದಿಗೂ ಸಕಲರಿಗೆ ಬೆಳಕಾಗುತ್ತಾನೆ
ಬೆಳಕಾದ ಸಂತನೊಬ್ಬ ಸಂತನ ಭೇಟಿಯಾದಾಗ
ಸುತ್ತೆಲ್ಲ ಸಂತಸ ಹರಿಯುತ್ತದೆ
ಪುಟ್ಟಕ್ಕನ ಪುರದಲ್ಲಿ ಪುಸ್ತಕದ ರಾಶಿ
ಎಲ್ಲವನ್ನಿನ್ನೂ ಓದದಿದ್ದರೂ
ಇನ್ನಷ್ಟು ಖರೀದಿ ಒಟ್ರಾಶಿ
ಪುಟ್ಟಕ್ಕನ ಸುತ್ತಮುತ್ತ ಧೂಳುಮಯ
ಕಾಲಾಡಿಸಲಿಕ್ಕೂ ಆಗದಂತೆ
ಸಾಮಾನುಗಳ ಸಂಚಯ
ಪುಟ್ಟಕ್ಕನ ಬೆಕ್ಕುಗಳ ಕೈತಪ್ಪಿದೆ ಆರೋಗ್ಯ
ಏನು ಮಾಡಿದರೂ ಸಿಗುತ್ತಿಲ್ಲ
ಗುಣವಾಗುವ ಭಾಗ್ಯ
ಪುಟ್ಟಕ್ಕನ ತೋಟದಲ್ಲಿ ಹೆಗ್ಗಣಗಳ ರಾಜ್ಯ
ಅಲ್ಲಿ ಇಲ್ಲಿ ಅಗೆದು ಬಗೆದು
ಪುಟ್ಟಕ್ಕಗೂ ಹೆಗ್ಗಣಗಳಿಗೂ ವ್ಯಾಜ್ಯ
ಪುಟ್ಟಕ್ಕನ ಮನೆ ಮುಂದೆ ಚಾಲಕರಿಂದ ಅಡಚಣೆ
ಎಷ್ಟು ಹೇಳಿದರೂ ಕೇಳುವುದಿಲ್ಲವೆಂದಾಗ
ಕೋಪ ಬಂದರೆ ಪುಟ್ಟಕ್ಕನಲ್ಲ ಹೊಣೆ
ಪುಟ್ಟಕ್ಕನ ತಾರಸಿಯಲ್ಲಿ ತೆಂಗಿನಕಾಯಿ ಚೆಂಡಾಟ
ಬಿದ್ದು ಬಿದ್ದು ಒಡೆದು ಹೋದರೂ
ಕೀಳಿಸಲಾರೆ ಎಂಬ ಮಂಗಾಟ
ಪುಟ್ಟಕ್ಕ ಪೇರಿಸಿಟ್ಟ ಕಟ್ಟಿಗೆಯ ಕಟ್ಟುಗಳು
ದಿನಾ ಬಿಸಿನೀರು ಕಾಸಿದರೂ ಮುಗಿಯದ
ಹಲವು ರೀತಿಯ ಸೆಟ್ಟುಗಳು
ನಿನ್ನ ಮನೆಯಲ್ಲಿ ಜಗಳವಿಲ್ಲ
ಸ್ನೇಹದ ಸಿಂಚನವೇ ಎಲ್ಲಾ
ಈರ್ಷ್ಯೆ ಕಡು ದ್ವೇಷವೇ ಇಲ್ಲ
ಪ್ರೀತಿ ಮಮತೆಯೇ ಎಲ್ಲಾ
ಅಲ್ಲಿ ಜಾತಿ ಮತವೆಂಬ ಬೇಧವಿಲ್ಲ
ಮೇಲು ಕೀಳೆಂಬ ತಾರತಮ್ಯವಿಲ್ಲ
ಹಿರಿಯರು ಕಿರಿಯರೆಂದಿಲ್ಲ
ಶೈಶವ ತಾರುಣ್ಯ ಮುದಿತನವಿಲ್ಲ
ಅಲ್ಲಿ ಸಾವು ನೋವುಗಳೇ ಇಲ್ಲ
ದುಗುಡ ದುಃಖ ದುಮ್ಮಾನವಿಲ್ಲ
ನಲಿವು ತುಂಬಿಹುದು ಅಲ್ಲೆಲ್ಲಾ
ಸದಾ ಸ್ವರ ಸರಿಗಮದ ಬೆಲ್ಲ
ಅಲ್ಲಿ ಇರುವುದೆಲ್ಲಾ ಸ್ವಚ್ಛ ಸುಂದರ
ನನಗಿಲ್ಲಿ ಅದೆಲ್ಲ ಇಲ್ಲದ ನಶ್ವರ
ನಾನೇಕೆ ಅಲ್ಲಿಲ್ಲವೆಂದು ತಿಳಿದಿಲ್ಲ
ನಾನೆಂದಲ್ಲಿಗೆ ಬರುವೆನೆಂಬರಿವೂ ಇಲ್ಲ
ಅಪ್ಪ ಅಮ್ಮ ಈಗಾಗಲೇ ಅಲ್ಲಿರುವರಲ್ಲ
ಅವರು ನನಗೇನೂ ಹೇಳಲೇ ಇಲ್ಲ
ನಾನೀಗ ಬಂದರಲ್ಲಿ ಬಹುಶಃ ಸ್ವಾಗತವಿಲ್ಲ
ಆಹ್ವಾನ ಬರದೇ ಹೋಗುವ ಮಾತೇ ಇಲ್ಲ
ನಿನಗಾವುದೇ ಆಮಿಷ ನೀಡಲು ಸಾಧ್ಯವಿಲ್ಲ
ಬಲವಂತದಿಂದ ಆಮಂತ್ರಣ ಸಿಗುವುದಿಲ್ಲ
ನಿನ್ನ ಧ್ಯಾನದಲ್ಲಿ ಕಳೆದರೆ ನಾ ಜೀವನವೆಲ್ಲ
ಕರೆಸಿಕೊಳ್ಳದೇ ನಿನಗೆ ಬೇರೆ ದಾರಿಯಿಲ್ಲ
ದೈತೋಟದ ಮನೆ-ಮನದಿ
ಮೊಳೆತ ಅಚಿಂತ್ಯ ಅಚ್ಚರಿಗೆ
ಇಂದು ಎರಡು ವರುಷಗಳು
ಮುದ್ದು ಕೂಸಿನ ಆಟಪಾಠದಲಿ
ಅದೃಷ್ಟದ ಅಮಿತ ನೋಟದಲಿ
ಸಂತಸದ ಸಂಗೀತ ಸುಧೆಯಿದೆ
ಜನ್ಮ ದಿನದ ಶುಭ ಹಾರೈಕೆಯಲ್ಲಿ
ಭವಿಷ್ಯದ ಭವ್ಯ ಮಿಲನದಲ್ಲಿ
ಪಿತನ ಪವಿತ್ರ ಕನಸು ಅಡಗಿದೆ
ರಕ್ತ ಸಂಬಂಧದ ವ್ಯಕ್ತ ಭಾವಕೆ
ಸುಪ್ತ ಮನಸಲಿ ಕೊಂಡಿಯಿದೆ
ಆಪ್ತ ವಾತ್ಸಲ್ಯದ ಗಿಂಡಿಯಿದೆ
ಬೆಳೆವ ಮನಸಲಿ ಬೆಸೆವ ಪ್ರೀತಿಗೆ
ಜನಕನ ಜತನದ ಅಭಯವಿದೆ
ಅಪ್ಪನ ಅಪರಿಮಿತ ಪ್ರೇಮವಿದೆ
ಜನ್ಮ ದಿನದ ಶುಭಾಶಯ - ಭೂಮಿ ಬೆಂಗಳೂರು
೨೮-೦೮-೨೦೨೫
ವಿದೇಶದಲ್ಲಂಕುರಿಸಿ ಸ್ವದೇಶದಲ್ಲಿ ಜನಿಸಿದವಳು
ಕಾಲಲಂದುಗೆ ತೊಟ್ಟು ಪುಟ್ಟ ಹೆಜ್ಜೆಯನಿಟ್ಟವಳು
ತೊದಲು ನುಡಿಗಳಿಂದ ಎಲ್ಲರ ಮನವ ಗೆದ್ದವಳು
ಅಪರ್ಣ ಸಂತೋಷರ ಮಗಳು ಭೂಮಿ ಬೆಂಗಳೂರು
ಅಪರ್ಣ ಸಂತೋಷ ದಿಂದ ಪುಟ್ಟ ಭೂಮಿಯ
ದೊಡ್ಡ ಭೂಮಿಗೆ ತಂದುದು ಇಪ್ಪತ್ತೆಂಟನೆಯ ಆಗಸ್ಟ್
ಏರಲಿವಳು ಮುಂದೆ ಯಶಸ್ಸಿನ ಎವರೆಸ್ಟ್
ಜನ್ಮ ದಿನದ ಶುಭಾಶಯ ನಿನಗೆ ಭೂಮಿ ಬೆಂಗಳೂರು
ಬುವಿಯ ಬುಟ್ಟಿಯಲರಳಿ ಪಸರಿಸಿದ ಹಸಿರು
ಅಪರ್ಣ ಸಂತೋಷರ ಜೀವನದ ಉಸಿರು
ಆನಂದದಿ ಸಾಗಲಿ ನಿನ್ನ ಜೀವನದ ತೇರು
ನೂರ್ಕಾಲ ಬಾಳು ನೀ ಭೂಮಿ ಬೆಂಗಳೂರು
ಎಂದೋ ಹುಟ್ಟಿರುವ ನಕ್ಷತ್ರಗಳು
ಇಂದಿಗೂ ಹೊಳೆಹೊಳೆದು ನಲಿಯುತ್ತವೆ
ಗುರಿಯಿಲ್ಲದ ಜೀವಗಳು ಗಲಿಬಿಲಿಯಲ್ಲಿ
ಎಂದೆಂದಿಗೂ ಎಲ್ಲೆಲ್ಲೋ ಅಲೆಯುತ್ತವೆ
ಉಳಿಸಿರುವ ಗರ್ವದ ನಡೆ ನಡೆದು
ಗಳಿಸಿರುವ ಗೌರವವ ನುಂಗುತ್ತದೆ
ಅಳಿಸಿದ ಪ್ರೀತಿಯ ಹಿಂದೋಡುವ ಜೀವ
ಆತ್ಮ ದಹನದಲ್ಲಿ ಸಿಲುಕಿ ನಲುಗುತ್ತದೆ
ಕಾಲಿಗೆ ಚುಚ್ಚುವ ಮುಳ್ಳುಗಳು
ಮೆದುಳನ್ನು ತಲುಪುತ್ತವೆ
ಹೃದಯ ತಟ್ಟುವ ನೆನಪುಗಳು
ಬಾಳನ್ನು ಹಸನಾಗಿಸುತ್ತವೆ
ಮನದಲ್ಲಿ ಅಶಾಂತಿಯ ಅಲೆಗಳೆದ್ದರೆ
ಮನೆಗಳನ್ನು ಮುಳುಗಿಸುತ್ತವೆ
ಅಂಗಳದಲ್ಲಿ ಅರಳಿದ ಹೂವುಗಳು
ಮಂಗಳದ ಕಹಳೆ ಮೊಳಗಿಸುತ್ತವೆ
ಜಾತಿ ಧರ್ಮದ ಜಗಳಗಳು
ಜಗಲಿಯಲ್ಲಿ ಏಳುತ್ತವೆ
ಜನರ ಬುದ್ಧಿ ಸ್ತಿಮಿತದಲ್ಲಿದ್ದರೆ
ಕಿಡಿ ಕಾರದೆ ಕರಗುತ್ತವೆ
ಉಡಿಯಲ್ಲಿ ಕಟ್ಟಿಕೊಂಡ ನೋವು
ಬಿಡದೆ ಇಡಿಯಾಗಿ ಸುಡುತ್ತದೆ
ಕಡೆಯಲ್ಲಿ ಕೈ ಹಿಡಿದು ನಡೆಸಲು ಜೀವ
ಜಗದೊಡೆಯನ ಮೊರೆ ಹೋಗುತ್ತದೆ
(ಶ್ರೀ.ಕನಕದಾಸರ ಮತ್ತು ಶ್ರೀ.ವಿದ್ಯಾಭೂಷಣರ ಕ್ಷಮೆ ಕೋರುತ್ತಾ, ನಮ್ಮಮ್ಮ ಶಾರದೆ ರಾಗದಲ್ಲಿ, 'ಕಲ್ಪನಾ' ದ ನಮ್ಮ ಚಿಕ್ಕಮ್ಮ 'ಶ್ರೀಮತಿ ಶಾರದಾ' ರ ಹುಟ್ಟುಹಬ್ಬಕ್ಕಾಗಿ - 26-08-2025).
ಚಿಕ್ಕಮ್ಮ ಶಾರದೆ, ಅಪ್ಪಚ್ಚಿಯ ಹೃದಯೇಶ್ವರಿ
ನಿಮಗಿವಳ ಗೊತ್ತೇನಮ್ಮಾ
ಕಲ್ಪನೆಯಲಿ ಮಿಂದು ಕವಿತೆಗಳ ಬರೆದಿಡುವ,
ಕಲ್ಪನೆಯ ಸೊಸೆಯಿವಳಮ್ಮಾ, ಅಮ್ಮಯ್ಯ.. !!ಚಿಕ್ಕಮ್ಮ ಶಾರದೆ!!
ಮೋರೆಲಿ ನಗು ಹೊತ್ತು ಮೂರು ಮಕ್ಕಳ ಹೆತ್ತ
ಮುದ್ದಿನ ತಾಯಿ ಇವಳಮ್ಮಾ
ಮೂರು ಮೊಮ್ಮಕ್ಕಳಜ್ಜಿ, ನಾದಿನಿಯರತ್ತಿಗೆ,
ಸಂಸಾರದ ಒಡತಿಯಮ್ಮಾ, ಅಮ್ಮಯ್ಯ.. !!ಚಿಕ್ಕಮ್ಮ ಶಾರದೆ!!
ಉಟ್ಟ ಸೀರೆಯ ನೆರಿಗೆ ಎತ್ತಿ ಕಟ್ಟಿಕೊಂಡು
ಬಾವಿ ನೀರನು ತರುವಳಮ್ಮಾ
ಪಕ್ಕದಲ್ಲಿರುವ ತುಳಸಿ ಕಟ್ಟೆಗೆ ದೀಪವ
ಇಟ್ಟೀಕೆ ನಮಿಸುವಳಮ್ಮಾ, ಕಣಮ್ಮಾ.. !!ಚಿಕ್ಕಮ್ಮ ಶಾರದೆ!!
ರಾಶಿ ವ್ಯರ್ಥವನೊಲ್ಲ ರುಚಿರುಚಿ ಅಡುಗೆ ಬಲ್ಲ
ಭಾವನಾ ಜೀವಿಯಮ್ಮಾ
ಬಿಡುವಿನ ಸಮಯದಿ ಕವಿತೆಗಳ ಬರೆಯುವ
ಪ್ರೀತಿಯ ಚಿಕ್ಕಮ್ಮನಮ್ಮಾ, ಅಮ್ಮಯ್ಯಾ.. !!ಚಿಕ್ಕಮ್ಮ ಶಾರದೆ!!
ಆಗಸ್ಟ್ ಇಪ್ಪತ್ತಾರು ಇಪ್ಪತ್ತು ಇಪ್ಪತ್ತೈದು
ಈಕೆಯ ಜನ್ಮ ದಿನವಮ್ಮಾ
ಪತಿ-ಪತ್ನಿ ನೂರ್ಕಾಲ ಹೀಗೆಯೇ ಖುಷಿಯಿಂದ
ಜೀವನ ಸಾಗಿಸಲಮ್ಮಾ, ಅಮ್ಮಯ್ಯಾ.. !!ಚಿಕ್ಕಮ್ಮ ಶಾರದೆ!!
ಇನ್ನೊಬ್ಬರ ಯೋಜನೆಯನ್ನು ಹಾಳು ಮಾಡಿ
ಅವರ ಪಾಲಿನ ಸಂತೋಷವನ್ನು ಕಸಿದುಕೊಳ್ಳುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಮತ್ತೊಬ್ಬರ ಮನಸನ್ನು ಅರ್ಥ ಮಾಡಿಕೊಳ್ಳದೇ
ನಮಗಿಷ್ಟ ಬಂದಂತೆ ಮಾಡಿ ವಾದಿಸುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ನಂಬಿಕೆ ಇಟ್ಟು ಹಂಚಿಕೊಂಡ ವಿಷಯವನ್ನು
ಇನ್ನೊಬ್ಬರೊಡನೆ ಬಿಟ್ಟು ಕೊಡುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಎದುರು ವಿಶ್ವಾಸಾರ್ಹತೆ ತೋರಿಸಿ
ಹಿಂದಿನಿಂದ ಗೇಲಿ ಮಾಡಿ ನಗುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಕಷ್ಟಕ್ಕಾಗಾದೇ ಕೈಯನ್ನು ಹಿಡಿಯದೇ
ದುಃಖದ ಕಣ್ಣೀರು ಒರೆಸದೇ ಪ್ರಶ್ನಿಸುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಮುಳುಗುವಾಗ ಮುದದಿಂದ ನೋಡಿ
ಎದ್ದಾಗ ಮಾತ್ರ ಮುಂದೆ ಬರುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ಚುಚ್ಚು ಮಾತಾಡಿ ನೋಯಿಸಿದ್ದನ್ನು ಮರೆತು
ಬಿಚ್ಚಿಟ್ಟರೆ ಬೆಟ್ಟು ಮಾಡಿ ಕೂಗಾಡುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ದುರಹಂಕಾರದಿಂದ ತಪ್ಪಾಗಿ ನಡೆದು ಕನ್ನಡಿ
ತೋರಿಸಿದಾಗ ಅವಮಾನದಿ ಸಿಟ್ಟಾಗುವ
ಹಕ್ಕನ್ನು ನಮಗೆ ಕೊಡುವವರು ಯಾರು ?
ತೊಳಲಾಡುವ ಮನಸೊಂದು
ಒಳಗೊಳಗೇ ಉಳಿದು ಕೊಳೆತು
ಕೊರಗಿನ ಕೂಪದಲ್ಲಿ ಬೇಯುತ್ತಿತ್ತು
ಬಾಯಿ ಬಾರದ ಪ್ರಾಣಿಯೊಂದು
ಬಾಗಿಲಲ್ಲಿ ಮುದುಡಿಕೊಂಡು
ಬಾಯಾರಿಕೆ ತಣಿಸಲೆಂದು ಕಾಯುತ್ತಿತ್ತು
ರಂಗುರಂಗಿನ ಹಕ್ಕಿಯೊಂದು
ಅಂಗುಲಿ ಮೇಲೆ ಕುಳಿತುಕೊಂಡು
ಭಂಗಿಯಲ್ಲಿ ಕತ್ತನ್ನು ಕೊಂಕಿಸುತ್ತಿತ್ತು
ಹಸಿರು ತುಂಬಿದ ಮರವೊಂದು
ಬಸಿರು ಹೊತ್ತಂತೆ ಬಾಗಿ ನಿಂದು
ಬಿಸಿಯುಸಿರ ಚೆಲ್ಲಿ ನುಲಿಯುತ್ತಿತ್ತು
ಮೌನದಲ್ಲಿ ಮಲಗಿದ ದೇಹವೊಂದು
ಮುರಿದ ಕಟ್ಟಿಗೆಗಳಲಿ ಮುಳುಗಿಕೊಂಡು
ನಶ್ವರದ ಸಂಕೇತವನ್ನು ತೋರುತ್ತಿತ್ತು
ಹೊಸದಾಗಿ ಮೊಳೆತ ಗಿಡವೊಂದು
ಹಸಿಯಾದ ಚಿಗುರ ಬೆಳೆಸಿಕೊಂಡು
ಉಸಿರಿನ ಮಹತ್ವವನ್ನು ಸಾರುತ್ತಿತ್ತು
ಆಡುತ್ತಿರುವ ಮಗುವೊಂದು
ಮುಗ್ಧವಾಗಿ ಕುಣಿದು ಬಂದು
ಸಂತಸದ ಉಲಿಯನ್ನು ಉಲಿಯುತ್ತಿತ್ತು
ಬೊಗಸೆ ನೀರಲಿ ಕಂಡ ಬಿಂಬದ ಸೊಗಸು
ಆಗಸದಲ್ಲಿ ಹರಡಿದೆ ಪ್ರತಿಯೊಂದು ಕನಸು
ಕೈಗೂಡುವಂತೆ ಸಮನಾಗಿ ಜೋಡಿಸು
ಜಟಿಲ ಜಾಲಗಳ ಸುಲಭವಾಗಿ ಬಗೆಹರಿಸು
ಕುಟಿಲ ಕರ್ಮಗಳ ಸಂಪೂರ್ಣ ಕರಗಿಸು
ನಿಟಿಲ ನೇತ್ರದ ಪಟಲ ಸರಿಸಿ ಹೊಳೆಸು
ಅರೆಬರೆ ಕೆಲಸಗಳ ಶೀಘ್ರ ಪೂರೈಸು
ಮರೆತು ಹೋದರೆ ಮತ್ತೆ ಅಭ್ಯಸಿಸು
ಮುಜುಗರವಿಲ್ಲದೆ ಎಲ್ಲ ಸರಿಪಡಿಸು
ಹೊಸತನದ ಸೊಬಗನ್ನು ಹೆಚ್ಚಿಸು
ಹಳೆಯದನ್ನೆಲ್ಲ ಅಲ್ಲಲ್ಲೇ ಉಳಿಸು
ಒಳಿತನ್ನು ಇನ್ನಷ್ಟು ಗಳಿಸು, ಬೆಳೆಸು.
ಕಾಯಬೇಕು ಅಷ್ಟೇ
ಕಷ್ಟಗಳಿಗೂ ಸಾವಿದೆ
ಮನಸ್ಸಿರಬೇಕು ಅಷ್ಟೇ
ಇಷ್ಟಗಳಿಗೂ ಬದುಕಿದೆ
ಆಸೆ ಇರಬೇಕು ಅಷ್ಟೇ
ಕನಸಿಗೂ ಅವಕಾಶವಿದೆ
ಧೈರ್ಯವಿರಬೇಕು ಅಷ್ಟೇ
ನನಸಿಗೂ ಭವಿಷ್ಯವಿದೆ
ತಾಳ್ಮೆ ಬೇಕು ಅಷ್ಟೇ
ಕೆಲಸದಲ್ಲಿ ಜಯವಿದೆ
ಅರಿವು ಬೇಕು ಅಷ್ಟೇ
ಬೆಳೆಸಿದಲ್ಲಿ ಬಲವಿದೆ
ಛಲವಿರಬೇಕು ಅಷ್ಟೇ
ಫಲದಲ್ಲಿ ಸಿಹಿಯಿದೆ
ಧೃಢವಾಗಿರಬೇಕು ಅಷ್ಟೇ
ಕಲೆಯಲ್ಲಿ ಗೆಲುವಿದೆ
ಇರುವುದು ನಮಗೆ ನಾಲ್ಕು ದಿನ
ಉರಿವುದು ತನು ಮನ ಧನ
ದ್ವೇಷ ಅಪನಂಬಿಕೆಗಳು ಹೀನ
ಆದರೂ ಕೊಡುವರುನ್ನತ ಸ್ಥಾನ
ಪ್ರೀತಿ ಒಲವು ತುಂಬಿದ ಜೀವನ
ದೊರೆವುದು ಎಷ್ಟೊಂದು ಕಠಿಣ
ಅಹಂ ಹೆಚ್ಚಿಸಿ ಬೀಗುವುದು ಮನ
ಇರುವುದನ್ನು ಕಳೆವುದು ಮೂರ್ಖತನ
ಅವರಿವರ ಕಡೆಗೆ ಅತೀವ ಗಮನ
ನಮ್ಮದನ್ನು ಹೇಳಿದರೆ ಅಸಮಾಧಾನ
ತಾಳಕ್ಕೆ ಕುಣಿದರೆ ಮಾತ್ರ ಸನ್ಮಾನ
ಅಂತಿರುವುದಷ್ಟೇ ನಮ್ಮ ಜಾಣತನ
ವರ್ಷಗಳು ಉರುಳುವುದು ದಿನ ಸಮಾನ
ಬುದ್ಧಿ ಬರುವುದಂತೂ ಬಲು ನಿಧಾನ
ಯಾಕೆ ಬೇಕು ಹುಳಿ ರಗಳೆಗಳ ಜ್ಞಾನ
ಭಗವತ್ಪಾದಕ್ಕೆ ಸಮರ್ಪಣೆ ಈ ಪ್ರಾಣ
ಜತನದಿಂದ ಹೊತ್ತೆ ಆದರೆ
ಪತನದತ್ತ ತಳ್ಳಿದೆ ಹೆತ್ತಮ್ಮ
ನೀನೆನ್ನ ಪೊರೆಯದೇ ತೊರೆದೆ
ಸೃಷ್ಟಿಕರ್ತ ನೀನು ಆದರೆ
ಒಲವ ಪಲ್ಲಕಿಯಲಿ ಹೊರದೆ
ಎನ್ನ ಹೊಲಸ ತೊಟ್ಟಿಗೆ ಎಸೆದೆ
ಒಡಹುಟ್ಟಿದವರಿಗೆನ್ನ ಸುಳಿವಿಲ್ಲ
ನಾನಿರುವೆನೆಂದೇ ಅರಿವಿಲ್ಲ
ನನ್ನ ಬಗ್ಗೆ ಒಂದಿನಿತೂ ತಿಳಿದಿಲ್ಲ
ಬಂಧುಗಳು ಯಾರೂ ಇಲ್ಲ
ಇದ್ದರೂ ಇಲ್ಲಿಲ್ಲ ಕ್ಷಣದಷ್ಟೂ
ಪ್ರೀತಿಯನು ನಾನೆಂದೂ ಪಡೆದಿಲ್ಲ
ಮುದ್ದಿನಲಿ ಮೀಯದೇ ತಿಪ್ಪೆ
ಮುದ್ದೆಯಲಿ ಮಲಗಿರುವೆ
ಮಳೆಯಲ್ಲಿ ತೋಯ್ದು ನಾ ಅಳುತಿರುವೆ
ಆಟಿಕೆಗಳ ಬದಲಿಗೆ ನೈಜ
ಇಲಿಗಳಿವೆ ಅಕ್ಕಪಕ್ಕದಲ್ಲಿ
ಹುಳಹುಪ್ಪಟೆಗಳು ನನ್ನ ಮೈಯಲ್ಲಿ
ನಾಯಿಬೆಕ್ಕುಗಳು ಮೂಸುತ್ತಿವೆ
ನನ್ನನ್ನು ನೆಕ್ಕುತ್ತಿವೆ ನನ್ನ
ಗಾಯಗಳ ರಕ್ತವನು
ಕಾರ್ಮೋಡ ಕತ್ತಲಲಿ ಜೀರುಂಡೆ
ಸದ್ದಿನಲಿ ಅಸಹಾಯ ಜೀವ
ನಾ ಮಾಡಬಹುದಾದರೂ ಏನು
ನಾನೇನು ಮಾಡಿರುವೆ ನನಗ್ಯಾಕೆ
ಈ ಸ್ಥಿತಿ ನನಗ್ಯಾರು ಗತಿ, ತೊಟ್ಟಿಲಿನ
ಬದಲಿಗೆ ತೊಟ್ಟಿಯಲಿರಬೇಕಾದ ದುರ್ಗತಿ
ಕನಸುಗಳ ಕಟ್ಟಿಡಬಾರದು
ಬಿಸಿಲಿಗೆ ಬಿಡಿಸಿಡಬೇಕು
ಬೆಳಕಿಗೆ ತೆರೆದಿಡಬೇಕು
ಮನಸಲಿ ಹರಡಿಡಬೇಕು
ಕನವರಿಸುತ್ತಾ ಕಾಯಬಾರದು
ಎದ್ದು ನಡೆಯಬೇಕು
ಬಿದ್ದರೆ ಮೇಲೇಳಬೇಕು
ಧೈರ್ಯದಿಂದ ಮುನ್ನುಗ್ಗಬೇಕು
ಮನದಲ್ಲೇ ಮಂಡಿಗೆ ತಿನ್ನಬಾರದು
ಮನಸ್ಸಿಟ್ಟು ಕಲಿಯಬೇಕು
ಕಲಿತಿರುವುದನ್ನು ಗಳಿಸಬೇಕು
ಗಳಿಸಿರುವುದನ್ನು ಉಳಿಸಬೇಕು
ರಾಶಿ ಚಕ್ರಗಳ ಬದಲಾವಣೆಯ ವಿಶೇಷ
ಮೀನದಿಂದ ಮೇಷಕ್ಕೆ ಸೂರ್ಯನ ಪ್ರವೇಶ
ಮನೆಮನೆಗಳಲ್ಲಿ ಕಣಿಯ ಸಮಾವೇಶ
ಜನಮನಗಳಲ್ಲಿ ಹೊಸವರ್ಷದ ಹರ್ಷೋಲ್ಲಾಸ
ವಿಷುವಿನ ಶುಭಾಶಯ.
-ಪೂ. ೧೪-೦೪-೨೦೨೫
ದಾರಿ ಖರ್ಚಿಗೆ ದ್ರಾಕ್ಷೆಯಿಟ್ಟು
ದಾಹವಾದಾಗ ತಿನ್ನ ಹೊರಟು
ಹುಳಿಯಾಯಿತೆಂದು ಗೊಣಗಿದೊಡೆಂತು
ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ
ಜುಟ್ಟಿಗೆ ಮಲ್ಲಿಗೆಯೇರಿಸಿ
ಕೈಖಾಲಿಯಾಯಿತೆಂದು ಪರಿತಪಿಸಿದರೆಂತು
ದುಡಿಯುವ ವಯಸ್ಸಿನಲ್ಲಿ
ಆಲಸಿಯಾಗಿ ಅಲೆದು
ವಯಸ್ಸಾದಾಗ ಭದ್ರತೆಗೆ ಹಪಹಪಿಸಿದರೆಂತು
ಇರುವ ಸಂಬಂಧಗಳ
ಉಳಿಸಿಕೊಳ್ಳದೆ ದೂರ ಮಾಡಿ
ಆಮೇಲೆ ಪಶ್ಚಾತ್ತಾಪ ಪಟ್ಟರೆಂತು
ವರ್ತಮಾನದಲ್ಲಿ ಗಮನಿಸದೆ
ಮದದಿಂದ ನಡೆದು
ಭವಿಷ್ಯದಲ್ಲಿ ಕಂಗಾಲಾದೊಡೆಂತು
ಸಂತೋಷದಲ್ಲಿ ಶಿವನ ನೆನೆಯದೆ
ದುಗುಡದಲ್ಲಿ ದೆಸೆಗೆಟ್ಟು
ದಯನೀಯವಾಗಿ ಬೇಡಿಕೊಂಡರೆಂತು
ಹೊಸ ವರ್ಷದ ಹೊಳಪಿನಲಿ
ಹಳೆಯ ಮಂಕು ಕಳೆಯಲಿ
ಹೊಸ ಬದುಕ
ಬೆಳಕಿನಲಿ
ಹಸಿರ ಹೊನಲು
ಹರಿಯಲಿ
ಯುಗಾದಿಯ ಶುಭಾಶಯಗಳು
ಮುದುಡಿದ ಹೃದಯದೊಳಗೆ ಹುದುಗಿದ
ನೋವಿನ ಹಂದರದಿ ಅಡಗಿದ ಬೀಜ ಬಿರಿದು
ಮೊಳೆಯಿತೆಲ್ಲೆಡೆ ಚಿಗುರು
ಉಳಿಯಿತೆಲ್ಲೆಡೆ ಉಸಿರು
ಕಮರಿದ ಮನದಲ್ಲಿ ಮುಚ್ಚಿಟ್ಟ ಬೂದಿ
ಕದಡಿ ಹೊರ ಚಿಮ್ಮಿದ ಕಮಟು ಸರಿದು
ಅರಳಿತೆಲ್ಲೆಡೆ ಸುಗಂಧ ಪುಷ್ಪ
ಹರಡಿತೆಲ್ಲೆಡೆ ಸುವಾಸನೆ
ಕಟ್ಟುಪಾಡುಗಳ ಕಠಿಣ ಕ್ರಮಗಳ ನಡುವೆ
ಬಿಟ್ಟು ಬಿಡಲಾರದ ಭಾವನೆಗಳು ಮೆರೆದು
ಧರ್ಮ ಒತ್ತಾಗಿ ಉಳಿದವು
ಮರ್ಮ ಒಟ್ಟಾಗಿ ಕಳಿತವು
ಆಕಾಶದಲ್ಲಿ ಹರಡಿದ ಕರಿ ಮೋಡ
ಗಾಳಿಯೊಂದಿಗೆ ಜೋಲಾಡಿ ನೆಗೆದು
ಚೆಲ್ಲಿತೆಲ್ಲೆಡೆ ನವ್ಯ ನಕ್ಷತ್ರ
ಪ್ರಕಾಶಿಸಿತೆಲ್ಲೆಡೆ ಭವ್ಯ ಬೆಳಕು
ಕಳೆದುಕೊಂಡ ಅಕ್ಕರೆಯ
ಅಕ್ಷರಗಳಲಿ ಕಂಡುಕೊಂಡು
ಹೊಸ ಪ್ರೀತಿ ಬೆಸುಗೆಗೊಂಡ
ಅವಿಸ್ಮರಣೀಯ ಘಟನೆಯದು
ಬರೆದುದನ್ನು ತಿದ್ದಿ ತೀಡಿ
ಮತ್ತೆ ಮತ್ತೆ ಓದಿ ನೋಡಿ
ಭಾವನೆಗಳ ತೋಡಿ ತೋಡಿ
ಪುಟವನ್ನು ತುಂಬಿಸಿದ ದಿನವದು
ಜ್ಞಾನವನ್ನು ಮಾನವಾಗಿಸಿ
ಮಾನವನ್ನು ಒತ್ತೆಯಿಟ್ಟು
ಮನದಲ್ಲಿ ಸ್ಫುರಿಸಿದುದನ್ನು
ಮಂದಿಗೆ ತಲುಪಿಸಿದ ಕ್ಷಣವದು
ಒಳ್ಳೆಯದೋ ಕೆಟ್ಟದ್ದೋ
ಉಳ್ಳದ್ದೋ ಉಳಿದುದೋ
ಬಂದಂತೇ ಒಪ್ಪಿ ಸ್ವೀಕರಿಸಿದರೆ
ಅದೇ ಸುಖ ಜೀವನವಹುದು
ಅಡಿಗಡಿಗೆ ಎದುರಾದ ಅಡ್ಡಿ ಆತಂಕ ಅದುಮಿಟ್ಟು
ಆರ ಬಾಯಿಗೂ ಸಿಕ್ಕದಂತೆ ನೀ ಜಾರಿ ಹೋದೆಯಾ
ಅಕ್ಕಿ ಚೆಲ್ಲಿದಂತೆ ಬೆಳ್ಳಕ್ಕಿ ಸಾಲನೆಬ್ಬಿಸಿ ಹಾರಿಸಿ
ಬೆರಗಿನ ಬೆಳಕು ತಂದು ನೀ ದೂರ ಹೋದೆಯಾ
ಅಕ್ಕರೆಯ ಅಪರಂಜಿ ಸಕ್ಕರೆಯ ಸವಿ ಸವಿದು
ನಕ್ಕರೆ ಮುತ್ತು ಸುರಿಸಿ ನೀ ಕರಗಿ ಹೋದೆಯಾ
ಬೆಟ್ಟ ಬೆಟ್ಟಗಳ ಹತ್ತಿ ಘಟ್ಟದ ಮಣ್ಣನ್ನು ಮೆಟ್ಟಿ
ಬೊಟ್ಟಿಟ್ಟುಕೊಂಡು ನೀ ಮೈಮರೆತು ಹೋದೆಯಾ
ಮೊಗ್ಗು ಬಿರಿದು ಹೂವಾಗಿ ಹೂ ಮುದುಡಿ ಮಿಡಿಯಾಗಿ
ಕಾಯಿ ಹಣ್ಣಾಗುವವರೆಗೆ ನೀ ಕಾಯದೇ ಹೋದೆಯಾ
ಕ್ರೋಧಕ್ಕೆ ಅಂಕುಶವಿಟ್ಟು ಕೋದಂಡವನ್ನು ಹಿಡಿದು
ಪ್ರೀತಿಯನ್ನು ಪಾವನವಾಗಿಸದೆ ನೀ ಎದ್ದು ಹೋದೆಯಾ
ಪದಗಳಲ್ಲಿ ಪದಗಳನ್ನು ಅರ್ಥದಲ್ಲಿ ಅರ್ಥ ಹುಡುಕುತ್ತಾ
ವ್ಯರ್ಥ ಸಮಯ ಸ್ವಾರ್ಥಕ್ಕೆ ನೀ ಬಲಿಯಾಗಿ ಹೋದೆಯಾ
ಬೆಳ್ಳಿ ಬೆಳಕಾಗಿ ಮಳ್ಳು ಮರೆಯಾಗಿ ಜೊಳ್ಳು ಕೊಡವಿ
ಪೊಳ್ಳ ತಿರಸ್ಕರಿಸಿದಂತೆ ನೀ ಒದ್ದು ಹೋದೆಯಾ
ಹಾದಿಗೆ ಹಾಸಿದ ಹುಲ್ಲಿನಂತೆ ಗಾಳಿಗೆ ತೇಲಿದ ಗರಿಯಂತೆ
ಮಂಜು ಮುಸುಕು ಬಾನಲ್ಲಿ ನೀ ಹಾರಿ ಹೋದೆಯಾ
ಕರೆದರೆ ಬರಲಾರದೆ ಬಂದರೆ ನಿಲಲಾರದೆ ಕೂಗುಗಳಿಗೆ
ಕಿವಿಗೊಡದೆ ನಿಶ್ಯಬ್ದ ನಿರ್ವಾಣಕ್ಕೆ ನೀ ಮೊರೆ ಹೋದೆಯಾ
ಅಗಲಿದವರಿಗೆ ಅರಿವಿಲ್ಲ ಇರುವವರಿಗೆ ನೆಮ್ಮದಿಯಿಲ್ಲ
ಇದ್ದಷ್ಟು ದಿನ ನೆನಪಿನಲ್ಲಿ ನೀ ಕಳೆದು ಹೋದೆಯಾ
ಎಲ್ಲೋ ಏನೋ ಆದಾಗ ಎಲ್ಲೆಯಿಲ್ಲದೇ ನೆರವು ನೀಡಿ
ಎಲ್ಲರ ಹೃದಯದಲ್ಲಿ ನೀ ಉಳಿದು ಹೋದೆಯಾ
ನಿರ್ದಿಷ್ಟ ಹಾದಿಯಲ್ಲಿ ನಿಶ್ಚಿತ ಸಮಯದಲ್ಲಿ
ಅದ್ಭುತ ರೀತಿಯಲ್ಲಿ ನೀ ಸಾಗಿ ಹೋದೆಯಾ
ಅರಳಿದ ಸುಮಗಳಲ್ಲಿ ಅಡರಿದ ಪರಿಮಳದಲ್ಲಿ
ಸದ್ಗತಿಯರಸುತ್ತ ಅನಂತದಲ್ಲಿ ನೀ ಲೀನವಾದೆಯಾ
ಎಳ್ಳು-ಬೆಲ್ಲ ಎಲ್ಲೆಡೆಯಲ್ಲಿ
ಒಳ್ಳೆಯ ಮಾತು ಬಾಯಿಯಲ್ಲಿ
ಸುಖ ಶಾಂತಿ ಜೀವನದಲ್ಲಿ.
ಸಂಕ್ರಾಂತಿಯ ಶುಭಾಶಯ.
- ಫೂ.
14-01-2025