Sunday, December 31, 2023

ಕಸದ ರಾಶಿ

 


ಎಲ್ಲೋ ಹುಟ್ಟಿ ಎಲ್ಲೋ ಬೆಳೆದೆ

ಯಾರೋ ಬಂದು ಎಸೆದ ಊಟ

ಉಂಡು ನೀನು ಏಕಾಏಕಿ ಉಬ್ಬಿದೆ


ಹೆತ್ತವರಿಲ್ಲ ಹೊತ್ತವರಿಲ್ಲ

ಬಂಧು ಬಳಗ ಸಾಧ್ಯವಿಲ್ಲ

ಆದರೂ ನೀನು ಬಹಳ ಕೊಬ್ಬಿದೆ


ಅನಿವಾರ್ಯದಲ್ಲಿ ಬಳಿಗೆ ಬಂದ ತಪ್ಪಿಗೆ 

ಮೂಗು ಹಿಡಿಸಿದೆ, ಅಯ್ಯೋ ಪಾಪ 

ಎಂದವರಿಗೆ ಮೂರೂ ಲೋಕ ತೋರಿಸಿದೆ


ಒಟ್ಟು ಮಾಡಿ ಕೊಟ್ಟುದೆಲ್ಲ ಹೊಟ್ಟೆಗೆ ಹಾಕಿದೆ

ಬೆಟ್ಟು ಮಾಡಿ ತೋರಿದರೆ ಸಿಟ್ಟು ಮಾಡದೇ 

ಇನ್ನಷ್ಟು ಬೆಳೆದೆ, ಬೆಳೆಯುತ್ತಲೇ ಹೋದೆ


ನೀನ್ಯಾರ ಪಾಪ, ನಿನಗಿಹುದೇ ಶಾಪ

ನಿನ್ನ ಪೋಷಿಸುವರು ಹಲವರು ಆದರೆ 

ಮೂಸಿ ನೋಡರು, ಅದಕೇ ನಿನಗಿಲ್ಲ ಯಾರೂ


ಕಳೆದುಕೋ ನಿನ್ನ ಬೆಳೆವಣಿಗೆಯ ಶಕ್ತಿ 

ಬೇಗ ಕಣ್ಮರೆಯಾಗಿ ಅಲ್ಲಿಂದ, 

ನೀಡು ಎಮಗೆ ನಿನ್ನಿಂದ ಮುಕ್ತಿ

ಹನಿ

 

ಪ್ರಕೃತಿಯ ಪರಿಧಿಯಲ್ಲಿ 

ಬೆಚ್ಚಗಿನ ಸಂಜೆಯಲ್ಲಿ ಸುಳಿದ ಗಾಳಿ,

ತಣ್ಣನೆಯ ಎಲೆಯನ್ನು ತಡವಿ

ರೋಮಾಂಚನದೊಂದಿಗೆ ಸ್ಖಲಿಸಿದ 

ಹನಿಯೇ ಮುಂಜಾವಿನ ಇಬ್ಬನಿ


ಮಾನವನ ಪರಿಮಿತಿ ಮೀರಿ

ದಾನವನ ಹುಟ್ಟಿನಲಿ 

ದುಷ್ಟತನ ಹೊಣಕಿದಾಗ

ಅಸಹ್ಯದೊಂದಿಗೆ ಹೊರ ಬೀಳುವ 

ಹನಿಯೇ ಬೆಲೆಕಟ್ಟಲಾರದ ಕಂಬನಿ


ಹಗಲಿನಲಿ ಇರುಳಿನಲಿ

ಬಿಸಿಲಿನಲಿ ನೆರಳಿನಲಿ

ಹಸಿಯಾದ ಅನುಭವಗಳಲಿ

ಬಿಸಿಯಾದ ನೆನಪಿನಲಿ ರೂಪುಗೊಳ್ಳುವ

ಹನಿಯೇ ಅವರವರ ಒಳ ಧ್ವನಿ


ಬಾನಲಿ ಬುವಿಯಲಿ ಗಿಡದಲಿ ಮರದಲಿ

ಮನದಲಿ ಮನೆಯಲಿ ಅಂಗಳದಲ್ಲಿ 

ಗುದ್ದಲಿ ಪೆಟ್ಟಲಿ, ಇದ್ದಲ ಹೊಟ್ಟಲಿ 

ಎಲ್ಲೆಲ್ಲೂ ಇದ್ದು ಮಾಡದಂತೆ ಸದ್ದು 

ಬೆನ್ನಿಗಿರುವೆಯಲ್ಲಾ, ಹೇರಂಬ ನೀ 

ಹುಟ್ಟುಹಬ್ಬದ ಶುಭಾಶಯ


ಮೋಜು ಪಾರ್ಟಿ ಇಲ್ಲದೇ ಮುಂದೆ 

ಹೋಗದು ನಿಂತ ಕ್ಯಾಲೆಂಡರು

ಇಡೀ ವರ್ಷ ಏನೇನ್ ಮಾಡಿದೆಯೆಂದು 

ಕೇಳುತ್ತಾರೆ ನಮ್ಮ ಟೀಚರು


ಇಂದಿನ ದಿನಾಂಕದಂದು 

ಹುಟ್ಟಿದವರಿಗೆಲ್ಲ ದೊಡ್ಡ ಬಂಪರು

ಉಡುಗೊರೆಗಳು ಜಗದಲೆಲ್ಲ, ಜೊತೆಗೇ 

ಜಗಮಗಿಪ ಬದುಕಿನ ರೋಲರ್ ಕೋಸ್ಟರು


ಹುಟ್ಟಿದ ದಿನದಂದು ಮುಗಿವುದು

ಹಳೆ ವರ್ಷದ ಎಲ್ಲಾ ತಕರಾರು

ಆರಂಭವಾಗಲಿದೆ ಹೊಸ 

ದಿನಪಟ್ಟಿಯ ಹೊಸ ಕಾರ್ಬಾರು

ಹೊಸ ದಿನದರ್ಶಿಕೆ


ದಿನಪಟ್ಟಿ ಬದಲಾಗುತ್ತಿದೆ

ದಿನದಿಕ್ಸೂಚಿ 2024 ರೆಡೆಗೆ ತಿರುಗುತ್ತಿದೆ

ಇನ್ನೇನು, ಸಂಕ್ರಾಂತಿ ಸಮೀಪಿಸುತ್ತಿದೆ

ಎಲ್ಲೆಲ್ಲೂ ಸಂಭ್ರಮ ಮೈಗೂಡುತ್ತಿದೆ

 

ಯಾರೇನೇ ಮಾಡಿದರೂ, ಆಗಲೇಬೇಕು

ಎಂಬಂಥದ್ದನ್ನು ತಪ್ಪಿಸಲಾಗುವುದಿಲ್ಲ

ತಿಪ್ಪರಲಾಗ ಹಾಕಿದರೂ, ಆಗಬಾರದು

ಎಂಬಂಥದ್ದನ್ನು ಆಗಿಸಲು ಸಾಧ್ಯವಿಲ್ಲ


ಸಮಯವು ಅದರಷ್ಟಕ್ಕೆ ಸರಿಯುತ್ತಲಿರಲಿ

ಕಾಲನ ಕೈವಾಡ ಒತ್ತಟ್ಟಿಗಿರಲಿ

ಕರ್ತವ್ಯ, ಜವಾಬ್ದಾರಿಗಳಿಗೆ ಹೆಗಲಿರಲಿ

ಬಂದುದನೆದುರಿಸುವೆನೆಂಬ ಕೆಚ್ಚಿರಲಿ


ಹೊಸ ದಿನದರ್ಶಿಕೆಯಲ್ಲಿ ಹೊಸತನವ ಕಾಣಿ

ಹೊಸತನದಲ್ಲಿ ಹೊಸ ವಿಷಯಗಳ ಸರಣಿ

ಹೊಸ ವಿಷಯಗಳಲ್ಲಿ ಹೊಂಬಿಸಿಲ ಚಾವಣಿ

ಹೊಂಬಿಸಿಲ ಚಾವಣಿಯಲ್ಲಿ ಜೀವನದ ಸವಿ ಫೇಣಿ

ಗೊತ್ತಿತ್ತು

 

ಗೊತ್ತಿತ್ತು ನನಗೆ, ನಾ ಬರೆಯೆನೆಂದು

ನಿತ್ಯ ಬರೆವೆನೆಂದು ಅಂದುಕೊಂಡರೂ

ನಾನದನು ಖಂಡಿತವಾಗಿಯೂ ಮರೆವೆನೆಂದು


ಆದರೂ ಒಮ್ಮೊಮ್ಮೆ ಇಲ್ಲಿ ಬಂದು

ಒಂದೂ ದಾರಿ ಕಾಣದೇ ತಿರುಗಿ ನಿಂದು

ಮನದುಸುಕಿನೊಳಗೆ ಮುಳುಗಿ ಕೊಳೆವೆನೆಂದು


ಬಹಳಷ್ಟು ಯೋಚಿಸಿದೆ ನಾನು ಅಂದು

ಕೊಂಚ ಪ್ರಯತ್ನಿಸಿದರೆ ಹೇಗೆ ಎಂದು

ತುಳುಕಿದವು ಅಲ್ಲಿಇಲ್ಲಿ  ಒಂದೆರಡು ಬಿಂದು


ಮತ್ತೆ ಕುಸಿದು ಕುಳಿತು ಹಿಡಿದು ಸಂದು

ಯೋಚಿಸುತ್ತಿದ್ದೆ ನಾ ಬಹಳವೇ ನೊಂದು 

ಸಹವಾಸವೇ ಬೇಡ ಇದರದು ಇನ್ನೆಂದೂ


ಅಂತಸ್ಥ ಅಂತಸ್ಸಾಕ್ಷಿ ಎದ್ದು ಬಂದು

ಹೇಳಿದ ಮಾತದು ಒಂದೇ ಒಂದು

ನೀ ಮರಳಿ ಯತ್ನಿಸಿ ನೋಡಬಾರದೇ ಎಂದು

Saturday, December 23, 2023

ನಂಬಿಕೆ

 

ಬೆಕ್ಕು,  ಮಿಯಾಂವ್ ಎಂದು ಕರೆದು

ಊಟದ ತಟ್ಟೆಯ ಬಳಿ ಕುಳಿತು, 

ಮೈಮುರಿದು, ತಲೆಯೆತ್ತಿ ನೋಡುತ್ತಾ, 

ಮತ್ತೆ ತಟ್ಟೆಯನ್ನು ನೋಡುತ್ತಾ, 

ಒಂದಿನಿತೂ ಸದ್ದಿಲ್ಲದೇ ಕಾಯುವಾಗಿನ ಭಾವ


ನಾಯಿ, ಗಮನಿಸದಿದ್ದರೂ, ದೂರ ತಳ್ಳಿದರೂ, 

ಕೈಯಲ್ಲಿ ಕೋಲನ್ನು ಹಿಡಿದರೂ, 

ಹಿಂದೆಯೇ ಸುಳಿಯುತ್ತಾ, ಕಾಲ ಬಳಿ ಬಂದು, 

ನಮ್ಮ ಕಣ್ಣನ್ನೇ ನೋಡುತ್ತಾ,

ಬಾಲ ಅಲ್ಲಾಡಿಸುತ್ತಿರುವಾಗಿನ ಭಾವ


ಮಗುವನ್ನು ಎತ್ತಿ ಮೇಲೆ ಎಸೆದಾಗ, 

ಬೊಚ್ಚು ಬಾಯಿ ಬಿಟ್ಟು, ಕಿಲಕಿಲ ನಗುತ್ತಾ,  

ಅಪ್ಪನ ಮುಖವನ್ನೇ ನೋಡುತ್ತಾ,

ಕೈಯಗಲಿಸಿಕೊಂಡು, ಕೆಳಗೆ ಬರುವಾಗ 

ಸಂತೋಷ ಪಡುವಾಗಿನ ಭಾವ


ಸಂಕಟ, ಸಂದಿಗ್ಧವಿದ್ದಾಗ, ಪಕ್ಕದಲ್ಲಿ ನಿಂತು, 

ಮಾತಿಲ್ಲದೇ ಕಣ್ಣಲ್ಲಿ ಕಣ್ಣಿಟ್ಟು,  

ಮೆತ್ತಗೆ ಕೈ ಅದುಮಿ, ನಸುನಕ್ಕು,

ಧೈರ್ಯದಿಂದಿರು ನಿನ್ನೊಡನಿದ್ದೇನೆ

ಎಂದು ತೋರುವಾಗಿನ ಭಾವ


ಹೊಯ್ದಾಡುವ ದೋಣಿಯಲ್ಲಿ ಕುಳಿತು, 

ಏರಿಳಿಯುತ್ತಿರುವ ನೀರನ್ನೇ ನೋಡುತ್ತಿರುವಾಗ

ಇನ್ನು ಸ್ವಲ್ಪವೇ ದೂರ, ದಡ ತಲುಪುತ್ತೇವೆ  

ಗಾಬರಿಯಾಗಬೇಡಿ, ನಾನಿದ್ದೇನೆ ಎನ್ನುವ

ಅಂಬಿಗನ ಮೇಲೆ ಇಡುವ ಭರವಸೆಯ ಭಾವ


ದೇವರ ಕೋಣೆಯಲ್ಲಿ ದೀಪ ಹಚ್ಚಿ, 

ಕಣ್ಣು ಮುಚ್ಚಿ, ಕೈ ಮುಗಿದು 

ಭಗವಂತಾ ನೀನು ಇಟ್ಟ ಹಾಗೆ, ಕೊಟ್ಟ ಹಾಗೆ, 

ನೀನು ಮಾಡುವುದೆಲ್ಲಾ ಒಳ್ಳೆಯದಕ್ಕೇ

ಎಂದುಕೊಳ್ಳುವ ಭಕ್ತಿಯ ಭಾವ

Friday, December 22, 2023

ಕಟ್ಟು ಬಿಚ್ಚುವುದಿಲ್ಲ

 

ಒಮ್ಮೊಮ್ಮೆ ವಿಚಾರಗಳು ಒಳಗೊಳಗೇ

ತಕಧಿಮಿ ಎನ್ನುತ್ತವೆ

ಆದರೂ ಕೂಡಿ ಬರುವುದಿಲ್ಲ


ಹೊರಹಾಕುವ ಬಯಕೆ 

ಕತ್ತು ಹಿಡಿಯುತ್ತದೆ

ಆದರೂ ಹೇಗೆಂದು ತಿಳಿಯುವುದಿಲ್ಲ


ಬಲವಂತದಿಂದಾದರೂ ಬಳಿಯುವ

ಇಚ್ಛೆ ಮೊಳೆಯುತ್ತದೆ

ಆದರೂ ಧೈರ್ಯ ಬರುವುದಿಲ್ಲ


ಮನಸು ಊಳಿಡುತ್ತದೆ

ಹೃದಯ ಗೋಳಾಡುತ್ತದೆ

ಆದರೂ ತೊಳಲಾಟ ನಿಲ್ಲುವುದಿಲ್ಲ


ಆತಂಕ, ಆಕಾಂಕ್ಷೆಯ ಮುಸುಕಿ ಬಿಡುತ್ತದೆ

ಉದ್ವೇಗ ಕನಸನ್ನು ಹೊಸಕಿ ಬಿಡುತ್ತದೆ

ಆದರೂ ಕಟ್ಟು ಬಿಚ್ಚುವುದಿಲ್ಲ

ಶಾಮುವಿನ ನವಿಲುಗರಿ

 

ಶಾಮುವಿನ ನವಿಲುಗರಿ, ನಲ್ಮೆ ನವಿರಿನ ಕುಸುರಿ

ಪದಗಳ ಪರಮಾಣು, ಶಾರದೆಯ ಮನದಲ್ಲಿ ಚಿಗುರಿ

ಭಕ್ತಿಭಾವ ತುಂಬಿಸಿ, ಪ್ರೀತಿ ಮಮತೆ ಮೆರೆಸಿ

ಶಾಂತಿಯಿಂದ, ಪುಟದಲ್ಲಿ ಬಿಂಬಿಸಿದ ಗರಿ


ಪದ ಬುಟ್ಟಿಯ ಅಲ್ಲಿಂದಿಲ್ಲಿಗೆ, ಇಲ್ಲಿಂದಲ್ಲಿಗೆ ಸರಿಸಿ

ಅನುಭವವ ಗಳಿಸಿ,  ಜ್ಞಾನ ದೀವಿಗೆ ಬೆಳಗಿಸಿ

ಹದಗೊಳಿಸಿ, ಹೊಸತನವ ಮೂಡಿಸಿ 

ಪದಗಳೊಡನೆ ಆಟವಾಡಿದ ಸರಸಿ


ಮನದಲ್ಲಿ ಮೂಡಿದ ಪದಗಳ ಬೆರಳಿಗಿಳಿಸಿ 

ಆಸ್ಥೆಯಿಂದ ಒಂದೊಂದೇ ಎಸಳುಗಳ ಬಿಡಿಸಿ

ಹೆಕ್ಕಿ, ಎಣಿಸಿ, ಉತ್ಸಾಹದಿಂದ ಜೋಡಿಸಿ

ತಟ್ಟೆಯಲ್ಲಿಟ್ಟು ತನ್ನ ಗುರುವಿಗೆ ಕೊಟ್ಟ ಸಾಹಸಿ

Wednesday, December 20, 2023

ದೊಡ್ಡ ಜೀವಿ

ದೊಡ್ಡ ಕಿವಿ ದೊಡ್ಡ ಜೀವಿ
ಅಂದಚೆಂದ ಇದರ ಠೀವಿ
ದೊಡ್ಡ ಕಾಲು, ಕಪ್ಪು ಬಾಲ
ನೋಡಲೆರಡು ಕಣ್ಣು ಸಾಲ

ಅಗಾಧವಿದು ದೇಹದಲ್ಲಿ
ಜಾಣ್ಮೆಯಲ್ಲಿ ಕೃತಿಯಲ್ಲಿ
ಕರುಣೆಯಲ್ಲಿ ಪ್ರೀತಿಯಲ್ಲಿ
ಸ್ನೇಹದಲ್ಲಿ ಸೌಂದರ್ಯದಲ್ಲಿ

ಬುದ್ಧಿವಂತ ಪ್ರಾಣಿಯಿದು
ಭಾವನೆಗಳ ಭಾಂಡಾರವಿದು
ದೀರ್ಘ ಬಸಿರು ಇದರದು
ಹಸಿರನರಸಿ ನಡೆವುದು

ಇದು ನಡೆದದ್ದೇ ದಾರಿ
ಇದರದು ಎಂದಿಗೂ ಒಂದೇ ದಾರಿ
ಸಾಗುವುದು ಕಾಡುದಿಣ್ಣೆಗಳನೇರಿ 
ಜೊತೆಜೊತೆಗೇ ಇರುವುದದರ ಮರಿ

ಪುರಾಣದಲ್ಲಿ ಗಣಪಗೆ
ತಲೆಯನ್ನು ನೀಡಿತು
ವರ್ತಮಾನದಲ್ಲಿ ಮನುಜನ 
ದುರಾಸೆಗೆ ಬಲಿಯಾಯಿತು

ನಿಷ್ಕಲ್ಮಶ, ಸ್ವಚ್ಛಂದ ಗುಣ 
ಹೊಂದಿರುವುದೇ ಮುಳ್ಳಾಯಿತು 
ತನ್ನದಲ್ಲದ ತಪ್ಪಿಗೆ ಪಾಪ, 
ಮನುಜನ ಆಳಾಯಿತು
 
ಮನುಜನನ್ನು ಹೊರುವುದು
ಮನುಜನಿಗಾಗಿ ಸವೆಯುವುದು
ಮನುಜನಿಂದಾಗಿ ಸಾಯುವುದು
ವಿಧಿಯೇ, ಯಾಕೆ ಹೀಗಾಗುವುದು!

Monday, December 18, 2023

ಕಾಡು - ನಾಡು


ಕಾಡಿನಲ್ಲಿ, ದೊಡ್ಡ ಪ್ರಾಣಿಗಳಿಂದ ದೊರಕುವುದು

ಸಣ್ಣ ಪ್ರಾಣಿಗಳಿಗೆ ಆಹಾರ

ನಾಡಿನಲ್ಲಿ, 'ದೊಡ್ಡವರು' ಕಿತ್ತುಕೊಳ್ಳುವರು 

'ಸಣ್ಣವರ' ಆಹಾರ


ಕಾಡಿನಲ್ಲಿ,  ಹಸಿವಿಲ್ಲದಿದ್ದರೆ ಯಾವುದೇ 

ಪ್ರಾಣಿಯೂ ಬೇಟೆಯಾಡದು

ನಾಡಿನಲ್ಲಿ, ಹಸಿವಿಲ್ಲದಿದ್ದರೂ 

ಬೇರೆಯವರದರ ಕಿತ್ತು ತಿನ್ನುವರು


ಕಾಡಿನಲ್ಲಿ ಬೆಂಕಿ ಬಿದ್ದರೆ, ಪ್ರತಿಯೊಂದು ಪ್ರಾಣಿಯೂ 

ಎಚ್ಚರಿಕೆಯ ಗಂಟೆ ಬಾರಿಸುವುದು

ನಾಡಿನಲ್ಲಿ ಬೆಂಕಿ ಬಿದ್ದರೆ, ನಮ್ಮ ಮನೆಗಲ್ಲವಲ್ಲ

ಎಂದು ಬಾಗಿಲು ಮುಚ್ಚಿ ಕೂರುವರು


ಕಾಡಿನಲ್ಲಿ ಎಲ್ಲ ಪ್ರಾಣಿಗಳೂ, ತಮ್ಮ ಜಾಗ

ತಮ್ಮ ಆಹಾರ ಎಂದು ಇರುವವು

ನಾಡಿನಲ್ಲಿ, ಬೇರೆಯವರಿಗ್ಯಾಕೆ ಜಾಗ, ಆಹಾರ

ಎಂದು ಎಲ್ಲವನ್ನೂ ದೋಚುವರು


ಕಾಡಿನಲ್ಲಿ, ಪ್ರಾಣಿಗಳು ಮಾತು ಬಾರದಿದ್ದರೂ

ಮೂತಿ ತಿಕ್ಕಿ ಪ್ರೀತಿ ತೋರುವವು

ನಾಡಿನಲ್ಲಿ, ಮಾತು ಬಂದರೂ 

ಮೂತಿ ತಿರುವಿ ದೂರ ಹೋಗುವರು


ಕಾಡಿನಲ್ಲಿ, ಇರುವುದೂ ಒಂದು ಕಾನೂನು,

ಪಾಲಿಸುವುದೂ ಒಂದೇ ಕಾನೂನು

ನಾಡಿನಲ್ಲಿ, ಇರುವುದು ಸಾವಿರ ಕಾನೂನು

ಆದರೆ ಪಾಲಿಸರು ಒಂದನ್ನೂ


ಕಾಡಿನಲ್ಲಿ 'ನಾನು' ಎಂದಿಲ್ಲ, 

'ನನ್ನದು' ಎಂದಿಲ್ಲ

ನಾಡಿನಲ್ಲಿ, 'ನಾನೇ' ಎಲ್ಲಾ

'ನನ್ನದೇ' ಎಲ್ಲಾ