Wednesday, April 30, 2025

ಕಟ್ಟಿಡಬಾರದು

 

ಕನಸುಗಳ ಕಟ್ಟಿಡಬಾರದು

ಬಿಸಿಲಿಗೆ ಬಿಡಿಸಿಡಬೇಕು

ಬೆಳಕಿಗೆ ತೆರೆದಿಡಬೇಕು

ಮನಸಲಿ ಹರಡಿಡಬೇಕು


ಕನವರಿಸುತ್ತಾ ಕಾಯಬಾರದು

ಎದ್ದು ನಡೆಯಬೇಕು

ಬಿದ್ದರೆ ಮೇಲೇಳಬೇಕು

ಧೈರ್ಯದಿಂದ ಮುನ್ನುಗ್ಗಬೇಕು


ಮನದಲ್ಲೇ ಮಂಡಿಗೆ ತಿನ್ನಬಾರದು

ಮನಸ್ಸಿಟ್ಟು ಕಲಿಯಬೇಕು

ಕಲಿತಿರುವುದನ್ನು ಗಳಿಸಬೇಕು

ಗಳಿಸಿರುವುದನ್ನು ಉಳಿಸಬೇಕು

ವಿಷು

ರಾಶಿ ಚಕ್ರಗಳ ಬದಲಾವಣೆಯ ವಿಶೇಷ 

ಮೀನದಿಂದ ಮೇಷಕ್ಕೆ ಸೂರ್ಯನ ಪ್ರವೇಶ

ಮನೆಮನೆಗಳಲ್ಲಿ ಕಣಿಯ ಸಮಾವೇಶ 

ಜನಮನಗಳಲ್ಲಿ ಹೊಸವರ್ಷದ ಹರ್ಷೋಲ್ಲಾಸ

ವಿಷುವಿನ ಶುಭಾಶಯ.

-ಪೂ. ೧೪-೦೪-೨೦೨೫





Wednesday, April 16, 2025

ಎಂತು

ದಾರಿ ಖರ್ಚಿಗೆ ದ್ರಾಕ್ಷೆಯಿಟ್ಟು 

ದಾಹವಾದಾಗ ತಿನ್ನ ಹೊರಟು 

ಹುಳಿಯಾಯಿತೆಂದು ಗೊಣಗಿದೊಡೆಂತು 


ಹೊಟ್ಟೆಗೆ ಹಿಟ್ಟಿಲ್ಲದಿದ್ದರೂ

ಜುಟ್ಟಿಗೆ ಮಲ್ಲಿಗೆಯೇರಿಸಿ 

ಕೈಖಾಲಿಯಾಯಿತೆಂದು ಪರಿತಪಿಸಿದರೆಂತು


ದುಡಿಯುವ ವಯಸ್ಸಿನಲ್ಲಿ

ಆಲಸಿಯಾಗಿ ಅಲೆದು

ವಯಸ್ಸಾದಾಗ ಭದ್ರತೆಗೆ ಹಪಹಪಿಸಿದರೆಂತು 


ಇರುವ ಸಂಬಂಧಗಳ 

ಉಳಿಸಿಕೊಳ್ಳದೆ ದೂರ ಮಾಡಿ

ಆಮೇಲೆ ಪಶ್ಚಾತ್ತಾಪ ಪಟ್ಟರೆಂತು 


ವರ್ತಮಾನದಲ್ಲಿ ಗಮನಿಸದೆ

ಮದದಿಂದ ನಡೆದು 

ಭವಿಷ್ಯದಲ್ಲಿ ಕಂಗಾಲಾದೊಡೆಂತು


ಸಂತೋಷದಲ್ಲಿ ಶಿವನ ನೆನೆಯದೆ 

ದುಗುಡದಲ್ಲಿ ದೆಸೆಗೆಟ್ಟು 

ದಯನೀಯವಾಗಿ ಬೇಡಿಕೊಂಡರೆಂತು

Tuesday, April 01, 2025

ಯುಗಾದಿಯ ಶುಭಾಶಯ

ಹೊಸ ವರ್ಷದ ಹೊಳಪಿನಲಿ

ಹಳೆ ಮಂಕು ಕಳೆಯಲಿ

ಹೊಸ ಬದುಕ ಬೆಳಕಿನಲಿ

ಹಸಿರ ಹೊನಲು ಹರಿಯಲಿ

ಯುಗಾದಿಯ ಶುಭಾಶಯಗಳು

-ಪೂ. ೩೦-೦೩-೨೦೨೫

Saturday, March 22, 2025

ಭವ್ಯ ಬೆಳಕು

 

ಮುದುಡಿದ ಹೃದಯದೊಳಗೆ ಹುದುಗಿದ

ನೋವಿನ ಹಂದರದಿ ಅಡಗಿದ ಬೀಜ ಬಿರಿದು

ಮೊಳೆಯಿತೆಲ್ಲೆಡೆ ಚಿಗುರು 

ಉಳಿಯಿತೆಲ್ಲೆಡೆ ಉಸಿರು


ಕಮರಿದ ಮನದಲ್ಲಿ ಮುಚ್ಚಿಟ್ಟ ಬೂದಿ 

ಕದಡಿ ಹೊರ ಚಿಮ್ಮಿದ ಕಮಟು ಸರಿದು

ಅರಳಿತೆಲ್ಲೆಡೆ ಸುಗಂಧ ಪುಷ್ಪ

ಹರಡಿತೆಲ್ಲೆಡೆ ಸುವಾಸನೆ


ಕಟ್ಟುಪಾಡುಗಳ ಕಠಿಣ ಕ್ರಮಗಳ ನಡುವೆ

ಬಿಟ್ಟು ಬಿಡಲಾರದ ಭಾವನೆಗಳು ಮೆರೆದು

ಧರ್ಮ ಒತ್ತಾಗಿ ಉಳಿದವು

ಮರ್ಮ ಒಟ್ಟಾಗಿ ಕಳಿತವು


ಆಕಾಶದಲ್ಲಿ ಹರಡಿದ ಕರಿ ಮೋಡ 

ಗಾಳಿಯೊಂದಿಗೆ ಜೋಲಾಡಿ ನೆಗೆದು

ಚೆಲ್ಲಿತೆಲ್ಲೆಡೆ ನವ್ಯ ನಕ್ಷತ್ರ

ಪ್ರಕಾಶಿಸಿತೆಲ್ಲೆಡೆ ಭವ್ಯ ಬೆಳಕು

Saturday, March 08, 2025

ಹೊಸ ಪ್ರೀತಿ

 

ಕಳೆದುಕೊಂಡ ಅಕ್ಕರೆಯ

ಅಕ್ಷರಗಳಲಿ ಕಂಡುಕೊಂಡು

ಹೊಸ ಪ್ರೀತಿ ಬೆಸುಗೆಗೊಂಡ 

ಅವಿಸ್ಮರಣೀಯ ಘಟನೆಯದು


ಬರೆದುದನ್ನು ತಿದ್ದಿ ತೀಡಿ

ಮತ್ತೆ ಮತ್ತೆ ಓದಿ ನೋಡಿ

ಭಾವನೆಗಳ ತೋಡಿ ತೋಡಿ

ಪುಟವನ್ನು ತುಂಬಿಸಿದ ದಿನವದು


ಜ್ಞಾನವನ್ನು ಮಾನವಾಗಿಸಿ

ಮಾನವನ್ನು ಒತ್ತೆಯಿಟ್ಟು

ಮನದಲ್ಲಿ ಸ್ಫುರಿಸಿದುದನ್ನು

ಮಂದಿಗೆ ತಲುಪಿಸಿದ ಕ್ಷಣವದು


ಒಳ್ಳೆಯದೋ ಕೆಟ್ಟದ್ದೋ

ಉಳ್ಳದ್ದೋ ಉಳಿದುದೋ

ಬಂದಂತೇ ಒಪ್ಪಿ ಸ್ವೀಕರಿಸಿದರೆ 

ಅದೇ ಸುಖ ಜೀವನವಹುದು

Monday, February 24, 2025

ಹೋದೆಯಾ

 

ಅಡಿಗಡಿಗೆ ಎದುರಾದ ಅಡ್ಡಿ ಆತಂಕ ಅದುಮಿಟ್ಟು

ಆರ ಬಾಯಿಗೂ ಸಿಕ್ಕದಂತೆ ನೀ ಜಾರಿ ಹೋದೆಯಾ 

ಅಕ್ಕಿ ಚೆಲ್ಲಿದಂತೆ ಬೆಳ್ಳಕ್ಕಿ ಸಾಲನೆಬ್ಬಿಸಿ ಹಾರಿಸಿ

ಬೆರಗಿನ ಬೆಳಕು ತಂದು ನೀ ದೂರ ಹೋದೆಯಾ


ಅಕ್ಕರೆಯ ಅಪರಂಜಿ ಸಕ್ಕರೆಯ ಸವಿ ಸವಿದು

ನಕ್ಕರೆ ಮುತ್ತು ಸುರಿಸಿ ನೀ ಕರಗಿ ಹೋದೆಯಾ

ಬೆಟ್ಟ ಬೆಟ್ಟಗಳ ಹತ್ತಿ ಘಟ್ಟದ ಮಣ್ಣನ್ನು ಮೆಟ್ಟಿ

ಬೊಟ್ಟಿಟ್ಟುಕೊಂಡು ನೀ ಮೈಮರೆತು ಹೋದೆಯಾ


ಮೊಗ್ಗು ಬಿರಿದು ಹೂವಾಗಿ ಹೂ ಮುದುಡಿ ಮಿಡಿಯಾಗಿ

ಕಾಯಿ ಹಣ್ಣಾಗುವವರೆಗೆ ನೀ ಕಾಯದೇ ಹೋದೆಯಾ

ಕ್ರೋಧಕ್ಕೆ ಅಂಕುಶವಿಟ್ಟು ಕೋದಂಡವನ್ನು ಹಿಡಿದು

ಪ್ರೀತಿಯನ್ನು ಪಾವನವಾಗಿಸದೆ ನೀ ಎದ್ದು ಹೋದೆಯಾ


ಪದಗಳಲ್ಲಿ ಪದಗಳನ್ನು ಅರ್ಥದಲ್ಲಿ ಅರ್ಥ ಹುಡುಕುತ್ತಾ

ವ್ಯರ್ಥ ಸಮಯ ಸ್ವಾರ್ಥಕ್ಕೆ ನೀ ಬಲಿಯಾಗಿ ಹೋದೆಯಾ

ಬೆಳ್ಳಿ ಬೆಳಕಾಗಿ ಮಳ್ಳು ಮರೆಯಾಗಿ ಜೊಳ್ಳು ಕೊಡವಿ

ಪೊಳ್ಳ ತಿರಸ್ಕರಿಸಿದಂತೆ ನೀ ಒದ್ದು ಹೋದೆಯಾ


ಹಾದಿಗೆ ಹಾಸಿದ ಹುಲ್ಲಿನಂತೆ ಗಾಳಿಗೆ ತೇಲಿದ ಗರಿಯಂತೆ

ಮಂಜು ಮುಸುಕು ಬಾನಲ್ಲಿ ನೀ ಹಾರಿ ಹೋದೆಯಾ

ಕರೆದರೆ ಬರಲಾರದೆ ಬಂದರೆ ನಿಲಲಾರದೆ ಕೂಗುಗಳಿಗೆ

ಕಿವಿಗೊಡದೆ ನಿಶ್ಯಬ್ದ ನಿರ್ವಾಣಕ್ಕೆ ನೀ ಮೊರೆ ಹೋದೆಯಾ


ಅಗಲಿದವರಿಗೆ ಅರಿವಿಲ್ಲ ಇರುವವರಿಗೆ ನೆಮ್ಮದಿಯಿಲ್ಲ

ಇದ್ದಷ್ಟು ದಿನ ನೆನಪಿನಲ್ಲಿ ನೀ ಕಳೆದು ಹೋದೆಯಾ

ಎಲ್ಲೋ ಏನೋ ಆದಾಗ ಎಲ್ಲೆಯಿಲ್ಲದೇ ನೆರವು ನೀಡಿ

ಎಲ್ಲರ ಹೃದಯದಲ್ಲಿ ನೀ ಉಳಿದು ಹೋದೆಯಾ


ನಿರ್ದಿಷ್ಟ ಹಾದಿಯಲ್ಲಿ ನಿಶ್ಚಿತ ಸಮಯದಲ್ಲಿ

ಅದ್ಭುತ ರೀತಿಯಲ್ಲಿ ನೀ ಸಾಗಿ ಹೋದೆಯಾ

ಅರಳಿದ ಸುಮಗಳಲ್ಲಿ ಅಡರಿದ ಪರಿಮಳದಲ್ಲಿ 

ಸದ್ಗತಿಯರಸುತ್ತ ಅನಂತದಲ್ಲಿ ನೀ ಲೀನವಾದೆಯಾ

Monday, January 13, 2025

ಸಂಕ್ರಾಂತಿಯ ಶುಭಾಶಯ

ಎಳ್ಳು-ಬೆಲ್ಲ ಎಲ್ಲೆಡೆಯಲ್ಲಿ

ಒಳ್ಳೆಯ ಮಾತು ಬಾಯಿಯಲ್ಲಿ

ಸುಖ ಶಾಂತಿ ಜೀವನದಲ್ಲಿ.

ಸಂಕ್ರಾಂತಿಯ ಶುಭಾಶಯ.

- ಫೂ. 

14-01-2025