Friday, December 15, 2023

ಮಧುರ ಕಂಪಿನ ಧಾರೆ

 

ಎಲ್ಲದಕ್ಕೂ 'ತೆ' ಸೇರಿಸಿ ತೆಗಳುವಿರೇಕೆ

ಸರಿಯಾದ ಪದಗಳ ಬದಿಗೊತ್ತಿ ಮರೆಸುವಿರೇಕೆ 

ಮನಸಿಗೆ ಬಂದ ಪದಗಳನ್ನು ಉಗುಳುವಿರೇಕೆ

ಬಾಯಿಗೆ ಬಂದ ಪದ ಜೋಡಿಸಿ ಬೊಗಳುವಿರೇಕೆ


ಕನ್ನಡದ ಕತ್ತು ಹಿಸುಕಿ ಬೇರೆ ಪದ ಕೊಳ್ಳ ಬೇಡಿ

ಅನಾವಶ್ಯ ಪರಭಾಷೆ ಸೇರಿಸಿ ಕನ್ನಡವ ಕೊಲ್ಲಬೇಡಿ

ಕನ್ನಡವ ಅಸಡ್ಡೆ ಮಾಡಿದರೆಂದಿಗೂ ಸಹಿಸಬೇಡಿ

ಹೇಳಿಬಿಡಿ, ಸುಮ್ಮನೆ ಒಳಗೊಳಗೇ ದಹಿಸಬೇಡಿ


ಕನ್ನಡವ ನವಂಬರಕ್ಕೆ ಸೀಮಿತವಾಗಿಸಬೇಡಿ

ಕಾಸು ಸಿಕ್ಕರೆ ಮಾತ್ರ ಕನ್ನಡವೆಂಬ ದುರಾಸೆ ಬಿಡಿ

ಕರ್ನಾಟಕ ನಿವಾಸಿಗರೊಡನೆ ಕನ್ನಡವೇ ಮಾತಾಡಿ

ಪರರು ಕನ್ನಡ ಕಲಿತು ಮಾತಾಡಿದಾಗ ಹೆಮ್ಮೆ ಪಡಿ


ಕನ್ನಡವ ಕಸದಂತೆ ಕಾಣುವುದನ್ನು ನಿಲ್ಲಿಸಿ

ಕನ್ನಡದ ಮೌಲ್ಯ- ಮಹತ್ವವ ಮಕ್ಕಳಿಗೆ ವಿವರಿಸಿ

ಕನ್ನಡ ಕಲಿಯಲು ಅವರಲ್ಲಿ ಆಸಕ್ತಿ ಮೂಡಿಸಿ

ಕನ್ನಡವನ್ನು ಕುರಿತು ಅಭಿಮಾನ ಹೊಂದಿ, ಬೆಳೆಸಿ


ದಿನದಲ್ಲಿ ಕೊಡಿ ಸ್ವಲ್ಪ ಸಮಯ ಕನ್ನಡಕ್ಕೆ 

ನಮ್ಮತನವನ್ನು ಕಾಪಾಡಿ ಉಳಿಸುವುದಕ್ಕೆ

ಉಳಿಸಿ, ಇನ್ನಷ್ಟು ಬೆಳೆಸುವುದಕ್ಕೆ

ತಾಯಿ ಭುವನೇಶ್ವರಿ ನಮ್ಮ ಹರಸುವುದಕ್ಕೆ


ಪದ ಬಳಕೆಯ ಬಗ್ಗೆ ಗೊಂದಲವಿದ್ದರೆ,

ತಿಳಿದವರೊಡನೆ ಕೇಳಿ ಬಳಸಿದರೆ,

ಅದರಿಂದಾಗುವ ಸಂತೋಷವೇ ಬೇರೆ,

ನಿಜಕ್ಕೂ ಕನ್ನಡವಹುದು ಮಧುರ ಕಂಪಿನ ಧಾರೆ


ಇದನೆಲ್ಲರೂ ಅರಿತರೆ, 

ಎಲ್ಲರಿಗೂ ಅರಿವು ಮೂಡಿಸಿದರೆ,

ಕನ್ನಡವೆನಿಸದು ಯಾರಿಗೂ ಹೊರೆ 

ಸವಿಯೆನಿಸುವುದು ನಮ್ಮ ಕನ್ನಡ ಕಲ್ಲುಸಕ್ಕರೆ

No comments: