Saturday, November 25, 2023

ಬೆಕ್ಕಿನ ಬಿಡಾರ

ಅಕ್ಕ ನಿನ್ನ ಬೆಕ್ಕಿಗೊಂದು ಬೇರೆ ಬಿಡಾರ

ಪಕ್ಕದಲ್ಲಿ ಹಾಸಿಕೊಂಡು ನಿನ್ನ ಗುಡಾರ

ಸಿಕ್ಕದಂತೆ ಕುಳಿತೆ ಏಕೆ ಬಹು ದೂರ

ಲೆಕ್ಕಕಿಲ್ಲ ಆಟಕಿಲ್ಲ ಎಂಬ ವಿಚಾರ


ಅರಿತ ಮೇಲೂ ಕಲಿತ ನೀನು ಏಗುವಿಯೇಕೇ

ಸರಿತಪ್ಪು ಗೊತ್ತಿದ್ದೂ ಕುಗ್ಗುವಿಯೇಕೆ

ಪರಿಪರಿಯ ಬೇಡಿಕೆಗೆ ಬಗ್ಗುವಿಯೇಕೆ

ಬರಿದೇ ಅಳತೆಯನ್ನು ಮೀರಿ ತಗ್ಗುವಿಯೇಕೆ


ಏಗಿದರೆ ಬೀಗುವರು 

ಕುಗ್ಗಿದರೆ ಕಿಸಿಯುವರು

ಬಗ್ಗಿದರೆ ಗುದ್ದುವರು 

ತಗ್ಗಿದರೆ ತುಳಿಯುವರು 


ಅರಿತುಕೊಂಡು ಜಗದ ಪರಿಯ

ಬೆರೆತುಕೊಂಡು ಎಲ್ಲರೊಡನೆ

ಮರೆತು ಬಾಳು ಕಹಿಯನೆಲ್ಲ

ಅನುಭವಿಸು ಸಿಹಿಯನೆಲ್ಲ

No comments: