ಭಾರತ ಮಾತೆಯ ಸುರಕ್ಷೆಗಾಗಿ ಪಣ ತೊಟ್ಟ ರಾಜ
ಅಮಿತ ಶಾಸನದೊಡನೆ ಯೋಗಿ ಪಟ್ಟ ಪಡೆದ ಮಹಾರಾಜ
ನರರಇಂದ್ರ, ಕರ್ತವ್ಯ ದಾಮವ ಉದರಕೆ ಕಟ್ಟಿ, ಸಹಜ
ಮೋಹಗಳಿಗೆ ಅತೀತನಾಗಿರುವ ದಿಗ್ಗಜ
ನಯ-ವಿನಯವಿರುವವನು, ನುಡಿದಂತೆ ನಡೆವವನು
ಕೆಲವು ಶಿಸ್ತುಗಳನ್ನು ಅಳವಡಿಸಿಕೊಂಡವನು
ಪರರ ಪ್ರಗತಿಯ ಕಂಡು ಮನಸಾರೆ ಮೆಚ್ಚುವನು
ಗುರಿಯೆಡೆಗೆ ಧಾವಿಸುತ್ತಾ ಸ್ಫೂರ್ತಿಯನು ತುಂಬುವನು
ಕಾರ್ಯಕಾರ್ಯದಲ್ಲೂ ತನ್ನ ಛಾಪು ಮೂಡಿಸಿದವ
ಆ ಮೂಲಕವೇ ಧೈರ್ಯದಿಂದ ಮುನ್ನುಗ್ಗಲು ಕಲಿಸಿದವ
ಅಸಾಮಾನ್ಯ ಬುದ್ಧಿ, ಜ್ಞಾನ ಹೊಂದಿ, ಹಂಚುವವ
ಹಲವು ಅಸಂಭವಗಳ ಸಂಭವವಾಗಿಸಿದವ
ಕಳ್ಳ ಹೆಜ್ಜೆಗಳಿಗೆ ಗೆಜ್ಜೆ ಕಟ್ಟಿ ಎಲ್ಲರಿಗೂ ತಿಳಿಸಿದವ
ಸ್ವಾವಲಂಬನೆ ರುಚಿಯ ಹಿಡಿಸಿ ಸ್ವಂತಿಕೆಗೆ ಬೆಲೆ ನೀಡಿದವ
ಸಡಿಲ ಗಂಟುಗಳ ಬಿಗಿಸಿ ಜಟಿಲ ನೀತಿಗಳ ಸುಗಮವಾಗಿಸಿದವ
ಕುಟಿಲಕ್ಕೆ ಕೊಡಲಿಯಿಟ್ಟು ಮುಖವಾಡ ಕಳಚಿದವ
ಸ್ತ್ರೀಯರನ್ನು ಶಕ್ತಿಯೆಂದು ಗೌರವಿಸಿ ನಮಿಸಿದವ
ಮೂಲೆಮೂಲೆ ಹುಡುಕಿ, ಸಾಧಕರ ಗುರುತಿಸಿದವ
ಪೌರ ಕಾರ್ಮಿಕರ ಪಾದ ತೊಳೆದು ಸನ್ಮಾನಿಸಿದವ
ಸಂತ್ರಸ್ತರೊಡನೆ ಸದಾ ಇದ್ದೇನೆಂದು ನಿರೂಪಿಸಿದವ
ಇಡೀ ದೇಶವೇ ತನ್ನ ಕುಟುಂಬ ಎಂದವ,
ಕೆಲವರಿಗೆ ಅಣ್ಣನಾದರೆ, ಕೆಲವರಿಗೆ ತಮ್ಮನೀತ
ಹಲವರಿಗೆ ಮಗನೆನಿಸಿದರೆ ಹಲವರಿಗೆ ತಂದೆ ಸಮಾನವೀತ,
ಹೃದಯ ಶ್ರೀಮಂತಿಕೆಯಿಂದ ಭಾವುಕವಾಗಿಸುತ್ತಾನೆ ಈತ
ಸೈನಿಕರ ನಿಸ್ವಾರ್ಥ ಸೇವೆಯನ್ನು, ನಿಸ್ವಾರ್ಥಿಯಾಗಿ ಹೊಗಳಿದ
ಹಬ್ಬಗಳಲ್ಲಿ ಅವರೊಡನಿದ್ದು, ಮನೆಯವನಂತೇ ಸಂಭ್ರಮಿಸಿದ
ಗಡಿಗಳಲ್ಲಿ ಕ್ಷಿಪ್ರ ಸಹಾಯ ಒದಗಲು, ರಸ್ತೆಗಳನ್ನು ಸರಿಪಡಿಸಿದ
ಅವರ ಅಗತ್ಯಗಳ ಪೂರೈಸಿ ಧನ್ಯವಾದವನರ್ಪಿಸಿದ
ಭಾರತ ಮಾತೆಗೆ ಜಗದ್ವ್ಯಾಪಿ ಮೆರುಗು ಮೂಡಿಸಿದ ಚಿನಿವಾರ
ಏಳಿಗೆಯೆಂದರೇನೆಂದು ಎಲ್ಲರಿಗೂ ಅರಿವು ಮೂಡಿಸಿದ ಹರಿಕಾರ
ಸ್ವಲ್ಪವೂ ತಪ್ಪುವುದಿಲ್ಲ ಈತನ ಸ್ಫುಟ ಲೆಕ್ಕಾಚಾರ
ತಿಳಿಸುವನು ಎಲ್ಲರಿಗೂ ಎಲ್ಲವನೂ ಸವಿವರ
ದೇಶದ ಜನರಿಗೀತ ಸ್ವಯಂಘೋಷಿತ ಕಾವಲುಗಾರ
ಒಳ್ಳೆಯದನ್ನೇ ಮಾಡಿದರೂ, ಸದಾ ಕೆಂಗಣ್ಣುಗಳಿಗೆ ಆಹಾರ
ದೇಶದುನ್ನತಿಗಾಗಿ, ಊಟ-ನೀರು-ನಿದ್ರೆ ಲೆಕ್ಕಿಸದ ಸರದಾರ
ಆಳಾಗಲೀ ಅರಸನಾಗಲೀ ಒಂದೇ ಮಣೆ ಎನ್ನುವ ಧೀರ
ಹೆದ್ದಾರಿಗಳ ನಿರ್ಮಿಸಿ ಮನಗೆದ್ದ ಮುತ್ಸದ್ದಿ
ಧಾವಂತದಿಂದ ಕೆಲಸಗಳ ಪೂರೈಸುವ ಸದ್ಬುದ್ಧಿ
ಅನ್ಯ ದೇಶದೆದುರು ದೇಶದ ಗೌರವವ ಎತ್ತಿ ಹಿಡಿದ
ಭಾರತದ ಬಾವುಟವ ಉತ್ತುಂಗಕ್ಕೇರಿಸಿದ
ಮುಂದಿರುವ ಅಗ್ನಿಪರೀಕ್ಷೆಯಲ್ಲಿ ಪುಟಕ್ಕಿಟ್ಟ ಚಿನ್ನದಂತೆ
ಹೊಳೆದು ಬರುವನಂತೆ, ಸತ್ಯಕೆಂದೂ ಜಯವಿರುವಂತೆ
ದೇಶದ ಚುಕ್ಕಾಣಿ ಇವನ ಕೈಲಿದ್ದರೆ ನಮಗಿಲ್ಲ ಚಿಂತೆ,
ನಮ್ಮ ಭಾರತಾಂಬೆಯಾಗುವಳು ಇನ್ನಷ್ಟು ಶ್ರೀಮಂತೆ
No comments:
Post a Comment