Saturday, December 09, 2023

ನಿನಗಲ್ಲ - ನಿನ್ನದಲ್ಲ


ಕೆಲಸ ಮಾಡುವಲ್ಲಿ ಮೇಲಿನವರು

ಬಾಯಿಗೆ ಬಂದಂತೆ ಕಿರುಚಾಡಿದರು,

ನೀನ್ಯಾಕೆ ಬೆದರಬೇಕು, 

ತಪ್ಪು ಮಾಡಿಲ್ಲದಿದ್ದರೂ


ಹಾದಿಯಲ್ಲಿ ಎದುರಾದವರು

ಏನೇನೋ ಹೇಳಿದರು,

ನೀನ್ಯಾಕೆ ಹೆದರಬೇಕು, 

ನಿನ್ನ ತಪ್ಪಿಲ್ಲದಿದ್ದರೂ


ಮನೆಮುಂದೆ ಹೋಗುವವರು

ಮನ ಬಂದಂತೆ ಕೂಗಾಡಿದರು,

ನೀನ್ಯಾಕೆ ಮುದುಡಬೇಕು, 

ಅದು ಬೇರೆಯವರಿಗಾದರೂ 


ಸ್ನೇಹಿತರು - ಸಂಬಂಧಿಕರು 

ಇಲ್ಲದ ಕಥೆ ಕಟ್ಟಿದರು,

ನೀನ್ಯಾಕೆ ಸೊರಗಬೇಕು,  

ನಿನಗೆ ಸಂಬಂಧಿಸಿಲ್ಲದಿದ್ದರೂ


ಕಾರ್ಯಕ್ರಮವೊಂದರಲ್ಲಿ ಜನರು

ಕೆಟ್ಟ-ಸೊಟ್ಟ ಮಾತಾಡಿದರು,

ನೀನ್ಯಾಕೆ ಕೊರಗಬೇಕು,

ಅದು ನಿನಗಲ್ಲದಿದ್ದರೂ


ದಾರಿಯಲ್ಲಿ  ಹೋಗುವವರು

ದುಷ್ಟತನ  ತೋರಿದರು,

ನೀನ್ಯಾಕೆ ದಣಿಯಬೇಕು, 

ನಿನಗೆ ಶಕ್ತಿಯಿದ್ದರೂ


ಯಾರೋ ತಪ್ಪು ಮಾಡಿ

ನಿನ್ನ ತಲೆಗೆ ಕಟ್ಟಿದರು,

ನೀನ್ಯಾಕೆ ಒಪ್ಪಬೇಕು, 

ಅದು ನಿನ್ನದಲ್ಲದಿದ್ದರೂ

No comments: