Wednesday, December 06, 2023

ಓಹ್!


ಓಹ್! ಇದೆಂಥ ಹಸಿವೆ

ಹೊಟ್ಟೆ ತುಂಬಾ ಉಣ್ಣುವೆ

ತಿಂಡಿಯನ್ನೂ ತಿನ್ನುವೆ

ಆದರೂ ಇನ್ನಷ್ಟು ಬೇಕೆನ್ನುವೆ


ಓಹ್! ಇದೆಂಥ ನಿದ್ದೆ

ಮಂಚದಿಂದ ಕೆಳಗೆ ಬಿದ್ದೆ

ಎದ್ದೆ, ಪಕ್ಕದವರ ಹೊದಿಕೆ ಕದ್ದೆ

ಮತ್ತೆ ಮಂಚದ ಮೇಲೆ ಬಿದ್ದೆ


ಓಹ್! ಇದೆಂಥ ಜಡ

ಎನಿಸುವುದು ಯಾವುದೂ ಬೇಡ

ಸುಮ್ಮನೇ ನೋಡುತಿರುವೆ ಮಾಡ 

ದಿಟ್ಟಿಸುತಿರುವುದು ನನ್ನನೇ ಅಲ್ಲಿರುವ ಜೇಡ 


ಓಹ್ ! ಇದೆಂಥ ಸೆಖೆ

ಬೈತಲೆಯಿಂದಲೇ ಒಡೆದೆರಡು ಶಾಖೆ

ಹೆಣೆದು ಎತ್ತಿ ಕಟ್ಟಿದರೂ ಶಿಖೆ

ಎಣಿಸುವಂತಾಗುತಿದೆ ನಖದ ಸಂಖ್ಯೆ


ಓಹ್! ಇದೆಂಥ ಚಳಿ

ಬೀಸುತಿದೆ ಕುಳಿರ್ಗಾಳಿ

ಸುತ್ತಿ ಹೊದ್ದರೂ ಬೆಚ್ಚಗಿನ ಕಂಬಳಿ

ಸಹಿಸಲಾಗುತಿಲ್ಲ ಅದರ ದಾಳಿ


ಓಹ್! ಇದೆಂಥ ಮಳೆ

ಕೊಚ್ಚಿ ಹೋಗಿಹುದೆಲ್ಲ ಬೆಳೆ

ಬುಡ ಮೇಲಾಗಿಹುದು ತೆಂಗು - ಬಾಳೆ

ಉಳಿದಿರುವುದು ನಾಲ್ಕೇನಾಲ್ಕು ಅಡಿಕೆ ಹಾಳೆ 


ಓಹ್! ಇದೆಂಥ ಶಬ್ದ

ಎಲ್ಲರೂ ಕಟ್ಟಡಗಳ ಕಟ್ಟಿಯೇ ಸಿದ್ಧ

ಪರರ ತೊಂದರೆಗಿಲ್ಲ ಯಾರೂ ಬದ್ಧ

ಬಾಯ್ಮುಚ್ಚಿ ಅನುಭವಿಸಬೇಕು, ನಮ್ಮ ಪ್ರಾರಬ್ಧ

No comments: