ಕಾಡಿನಲ್ಲಿ, ದೊಡ್ಡ ಪ್ರಾಣಿಗಳಿಂದ ದೊರಕುವುದು
ಸಣ್ಣ ಪ್ರಾಣಿಗಳಿಗೆ ಆಹಾರ
ನಾಡಿನಲ್ಲಿ, 'ದೊಡ್ಡವರು' ಕಿತ್ತುಕೊಳ್ಳುವರು
'ಸಣ್ಣವರ' ಆಹಾರ
ಕಾಡಿನಲ್ಲಿ, ಹಸಿವಿಲ್ಲದಿದ್ದರೆ ಯಾವುದೇ
ಪ್ರಾಣಿಯೂ ಬೇಟೆಯಾಡದು
ನಾಡಿನಲ್ಲಿ, ಹಸಿವಿಲ್ಲದಿದ್ದರೂ
ಬೇರೆಯವರದರ ಕಿತ್ತು ತಿನ್ನುವರು
ಕಾಡಿನಲ್ಲಿ ಬೆಂಕಿ ಬಿದ್ದರೆ, ಪ್ರತಿಯೊಂದು ಪ್ರಾಣಿಯೂ
ಎಚ್ಚರಿಕೆಯ ಗಂಟೆ ಬಾರಿಸುವುದು
ನಾಡಿನಲ್ಲಿ ಬೆಂಕಿ ಬಿದ್ದರೆ, ನಮ್ಮ ಮನೆಗಲ್ಲವಲ್ಲ
ಎಂದು ಬಾಗಿಲು ಮುಚ್ಚಿ ಕೂರುವರು
ಕಾಡಿನಲ್ಲಿ ಎಲ್ಲ ಪ್ರಾಣಿಗಳೂ, ತಮ್ಮ ಜಾಗ
ತಮ್ಮ ಆಹಾರ ಎಂದು ಇರುವವು
ನಾಡಿನಲ್ಲಿ, ಬೇರೆಯವರಿಗ್ಯಾಕೆ ಜಾಗ, ಆಹಾರ
ಎಂದು ಎಲ್ಲವನ್ನೂ ದೋಚುವರು
ಕಾಡಿನಲ್ಲಿ, ಪ್ರಾಣಿಗಳು ಮಾತು ಬಾರದಿದ್ದರೂ
ಮೂತಿ ತಿಕ್ಕಿ ಪ್ರೀತಿ ತೋರುವವು
ನಾಡಿನಲ್ಲಿ, ಮಾತು ಬಂದರೂ
ಮೂತಿ ತಿರುವಿ ದೂರ ಹೋಗುವರು
ಕಾಡಿನಲ್ಲಿ, ಇರುವುದೂ ಒಂದು ಕಾನೂನು,
ಪಾಲಿಸುವುದೂ ಒಂದೇ ಕಾನೂನು
ನಾಡಿನಲ್ಲಿ, ಇರುವುದು ಸಾವಿರ ಕಾನೂನು
ಆದರೆ ಪಾಲಿಸರು ಒಂದನ್ನೂ
ಕಾಡಿನಲ್ಲಿ 'ನಾನು' ಎಂದಿಲ್ಲ,
'ನನ್ನದು' ಎಂದಿಲ್ಲ
ನಾಡಿನಲ್ಲಿ, 'ನಾನೇ' ಎಲ್ಲಾ
'ನನ್ನದೇ' ಎಲ್ಲಾ
1 comment:
ಕವನಗಳು ಶುದ್ಧ ವಾಗಿ ಚೊಕ್ಕವಾಗಿ ಇದೆ .ಓದಿಸಿಕೊಂಡು ಹೋಗುವಂತಹ ಕವನಗಳು .
Post a Comment